ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀವಾದ ಎನ್ನುವ ಲೋಕಮೀಮಾಂಸೆ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಈ ಅಂಕಣವನ್ನು ಆರಂಭಿಸಿದಾಗಿನಿಂದ ಅನೇಕರು ‘ಸ್ತ್ರೀವಾದಿ ತಾತ್ವಿಕತೆ’ಯ ಬಗ್ಗೆ ಟಿಪ್ಪಣಿಯೊಂದನ್ನು ಸತತವಾಗಿ ಕೇಳುತ್ತಲೇ ಇದ್ದರು. ಈ ವಾರ ಅಂಥ ಟಿಪ್ಪಣಿಯನ್ನು ನಿರೂಪಿಸುವ ಪ್ರಯತ್ನ ಮಾಡುತ್ತೇನೆ.

ನಾಗರಿಕತೆಯು ಸೃಷ್ಟಿಸಿರುವ ಯಾವುದೇ ತಾತ್ವಿಕತೆಯೂ ಅಂತಿಮವಾಗಿ ಉದ್ದೇಶಿಸಿರುವುದು ಆತ್ಮಗೌರವ, ಸಮಾನಪಾತಳಿ ಮತ್ತು ವಿಕೇಂದ್ರಿಕರಣವನ್ನು ಎಂದು ಸ್ಥೂಲಚೌಕಟ್ಟಿನಲ್ಲಿ ಗುರುತಿಸಲು ಸಾಧ್ಯವಿದೆಯಷ್ಟೆ. ಸ್ತ್ರೀವಾದವು ಈ ಸಂಗತಿಗಳನ್ನು ಮತ್ತ್ಯಾವ ಸೈದ್ಧಾಂತಿಕತೆಗೂ ತಲುಪಲು ಸಾಧ್ಯವಾಗದ ನೆಲೆಗಳಲ್ಲಿ ಮತ್ತು ಸೂಕ್ಷ್ಮಗಳಲ್ಲಿ ಸಾಧಿಸುತ್ತದೆ. ‘ಮಾನವೀಯ ಆರ್ದ್ರತೆ’ ಮತ್ತು  ‘ಒಳಗೊಳ್ಳುವಿಕೆ’ (inclusive) ಎನ್ನುವ ಎರಡು ಅಪೂರ್ವ ಶಕ್ತಿಗಳು ಮತ್ತು ಸಾಧ್ಯತೆಗಳು ಸ್ತ್ರೀವಾದವನ್ನು ಅನನ್ಯಗೊಳಿಸಿವೆ.

ನಮ್ಮ ಸಮಕಾಲೀನ ಸಂದರ್ಭಗಳು ಮೇಲ್ನೋಟಕ್ಕೆ ಅರಾಜಕವೇನೋ ಎನಿಸುವ ಭಾವವನ್ನು ನಮ್ಮಲ್ಲಿ ಸಕಾರಣವಾಗಿ ಹುಟ್ಟಿಸುತ್ತಿವೆ. ಏಕ ತಾತ್ವಿಕತೆಯು ನಾಗರಿಕ ಸಮುದಾಯಗಳನ್ನು ಪ್ರಭಾವಿಸುವ, ನಿರ್ದೇಶಿಸುವ– ಆ ಮೂಲಕ ಸಮುದಾಯದ ಸವಾಲುಗಳು, ಬಿಕ್ಕಟ್ಟುಗಳು ಮತ್ತು ಆಶೋತ್ತರಗಳನ್ನು ಪ್ರತಿನಿಧಿಸಬಲ್ಲ ತಾತ್ವಿಕತೆಗಾಗಿ ಈ ನಮ್ಮ ಕಾಲವು ಉತ್ಕಟವಾಗಿ ನಿರೀಕ್ಷಿಸುತ್ತಿದೆ. ವಿಘಟನೆಗಳೇ ನಮ್ಮ ಕಾಲದ ಪರಮ ವಾಸ್ತವವಾಗಿ ನಮ್ಮನ್ನು ಕಂಗೆಡಿಸುತ್ತಿರುವ ಕಾಲದಲ್ಲಿ ಎಲಿಯೆಟ್ ದಾರ್ಶನಿಕನಂತೆ ತಾನೂ ಕಾಣಲು ಬಯಸುತ್ತಾ, ತಾನೂ ಕಾಣುವ, ಕೇಳುವ ನಮಗೂ ಕೇಳಿಸಲು, ತೋರಿಸಲು ಬಯಸುವ, ಜಗತ್ತಿನ ಮರುಭೂಮಿಯನ್ನು ಫಲವತ್ತಾಗಿಸುವ ಮಳೆಯ ಮುನ್ಸೂಚನೆಯಂತ ಕಾಣಿಸಬಹುದಾದ ಸೈದ್ಧಾಂತಿಕ ನಿಲುವೆಂದರೆ ಸ್ತ್ರೀವಾದ.

ಸ್ತ್ರೀವಾದವನ್ನು ಸೈದ್ಧಾಂತಿಕತೆ ಎಂದು ಕರೆಯುವುದರಲ್ಲಿಯೇ ಅನೇಕ ಸವಾಲುಗಳಿವೆ. ಯಾಕೆಂದರೆ, ಮೂಲತಃ ಸ್ತ್ರೀವಾದವು ಗಂಡು ಮತ್ತು ಹೆಣ್ಣು ಇಬ್ಬರೂ ಸೇರಿ ಕಟ್ಟಬೇಕಾಗಿರುವ ಒಂದು ‘ಬದುಕಿನ ಕ್ರಮ’ವಾಗಿದೆ. ಈ ಬದುಕಿನ ಕ್ರಮವು, ಪ್ರಚಲಿತ ಮೌಲ್ಯ ವ್ಯವಸ್ಥೆಯ ವಿರುದ್ಧ ಸಾರಿರುವ ಯುದ್ಧವಲ್ಲ, ಇದು ಮುಖಾಮುಖಿಯಲ್ಲಿ ನಂಬಿಕೆಯಿಟ್ಟದ್ದಲ್ಲ. ಇದರ ಆತ್ಯಂತಿಕ ನಂಬಿಕೆಯಿರುವುದು ‘ಪರಿವರ್ತನೆ’ಯಲ್ಲಿ. ಸಮಕಾಲೀನ ಜಗತ್ತಿನ ಎದುರಿಗಿರುವ ಅತ್ಯಂತ ವಿಶ್ವಾಸಾರ್ಹವಾದ ಆಯ್ಕೆಯಾಗಿ ಸ್ತ್ರೀವಾದವನ್ನು ಮುಂದೆ ಮಾಡುವಲ್ಲಿ ನಮಗಿರುವ ಬಹುದೊಡ್ಡ ಆಧಾರವೆಂದರೆ ಈ ಸಂಗತಿಗಳೇ. ಮಾನವೀಯ ಆರ್ದ್ರತೆಯನ್ನೇ ತನ್ನ ಧಾತುವಾಗಿ ಪಡೆದ ಸ್ತ್ರೀವಾದವು ವ್ಯಕ್ತಿ ಮತ್ತು ವ್ಯವಸ್ಥೆ ಎರಡನ್ನೂ ದ್ವೇಷ, ಯುದ್ಧ, ಸೋಲು, ಮುಂತಾದ ಅಮಾನವೀಯವಾದ ಪರಿಕಲ್ಪನೆಗಳಲ್ಲಿ ಗ್ರಹಿಸುವುದನ್ನೇ ವಿರೋಧಿಸುತ್ತದೆ.

ಇಲ್ಲಿ ಮಾನವೀಯ ಆರ್ದ್ರತೆಯು ‘ಹೆಣ್ತನ’ ಎಂದು ಕರೆಯಲಾಗುವ ಪರಿಕಲ್ಪನೆಯ ಅಂಶಗಳನ್ನು ಮಾತ್ರ ಪ್ರತಿನಿಧಿಸುತ್ತಿದೆ ಎಂದು ತಿಳಿಯಬಾರದು. ಇದನ್ನು ಸ್ತ್ರೀವಾದದ ಮೂಲ ಚೈತನ್ಯ ಎಂದೇ ಗುರುತಿಸಬೇಕು. ಇದನ್ನು ಹೆಣ್ಣಿನ ದೌರ್ಬಲ್ಯ ಎಂದಾಗಲೀ, ಅವಳಿಗೆ ಮಾತ್ರ ಸಾಧ್ಯ ಎಂದಾಗಲೀ ನೋಡಲಾಗದು. ‘ಅಂತಃಕರಣ’ ಎನ್ನುವ ಪರಿಕಲ್ಪನೆ ಇದನ್ನು ಇನ್ನೂ ಸಮರ್ಥವಾಗಿ ಮನದಟ್ಟು ಮಾಡಿಸಬಲ್ಲದು. ಮಾನವಿಯ ಆರ್ದ್ರತೆ ಅಥವಾ ಅಂತಃಕರಣ ಎನ್ನುವ ಪದ–ಪರಿಕಲ್ಪನೆಗಳು ಅಂತಿಮವಾಗಿ ಧ್ವನಿಸುವುದು ಸೋಲು ಗೆಲುವಿನ ಮೇಲಾಟಗಳಲ್ಲಿ ನಂಬಿಕೆಯಿಲ್ಲದ, ಅಧಿಕಾರ ಕೇಂದ್ರಗಳನ್ನು ವಿಸರ್ಜಿಸುತ್ತಾ, ‘ಭಿನ್ನವಿದ್ದೂ ಬೆರೆಯಬಹುದು’ ಎನ್ನುವ ಪ್ರಕೃತಿ ಮೀಮಾಂಸೆಯನ್ನು. ಜಗತ್ತಿನ ಅತ್ಯುತ್ತಮ ತಾತ್ವಿಕತೆಗಳು ಕಟ್ಟ ಹೊರಟದ್ದು ಇದೇ ಬದುಕಿನ ವಿನ್ಯಾಸವನ್ನು. ಆದರೆ ಅವುಗಳಿಗೆ ಒಳಗೊಳ್ಳಲು ಸಾಧ್ಯವಾಗದ ಹೆಣ್ತನವನ್ನು ಸ್ತ್ರೀವಾದವು ಒಳಗೊಂಡಿದೆ ಎನ್ನುವ ಕಾರಣಕ್ಕೇ ಇದು ಜಗತ್ತಿನ ಭವಿಷ್ಯದ ಅತ್ಯುತ್ತಮ ಆಯ್ಕೆ.

ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ಚಿಂತನೆಗಳುದ್ದಕ್ಕೂ ಹೆಣ್ಣನ್ನು ಕುರಿತ ಚಿಂತನೆಯಲ್ಲಿ, ದೃಷ್ಟಿಕೋನದಲ್ಲಿ ನಿಧಾನವಾಗಿ ಹೆಣ್ಣನ್ನು ಮುನ್ನೆಲೆಗೆ ತಂದದ್ದನ್ನು ಗಮನಿಸಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. ಗಾಂಧಿ ತಾನು ಅರ್ಧ ಹೆಣ್ಣು ಎನ್ನುವ ನೆಲೆಯನ್ನು ತಲುಪಿದ್ದರ ಹಿಂದೆ ಸುದೀರ್ಘವಾದ ಪ್ರಯಾಣವಿದೆ. ಈ ಸುದೀರ್ಘ ಪ್ರಯಾಣದಲ್ಲಿ ಗಾಂಧಿ ತಲುಪಿದ ಮತ್ತು ಪಡೆದ ತೀರ್ಮಾನಗಳು ಮತ್ತು ಫಲಿತಗಳಿಗೆ ಜಾಗತಿಕ ಮಹತ್ವ ಮತ್ತು ಪ್ರಸ್ತುತತೆ ಎರಡೂ ಇವೆ.

ಅಭಿವೃದ್ಧಿ ಮಾದರಿಯ ಬೆನ್ನತ್ತಿದ ಆಧುನಿಕ ನಾಗರಿಕತೆಯು ಮೈದಾಸನ ಹಾಗೆ, ಭಸ್ಮಾಸುರನ ಹಾಗೆ ದಾರಿಯ ಕೊನೆಗೆ ಬಂದು ನಿಂತಿರುವ ಹೊತ್ತು ಇದು. ಗಾಂಧಿ ಪ್ರಣೀತ ಸ್ವಾವಲಂಬಿ, ಸರಳ ಮತ್ತು ಅಪರಿಗ್ರಹ ಸಮಾಜದ ಕಡೆಗೆ ಇಂದು ಇಡೀ ಜಗತ್ತು ಹೊರಳಿ ನೋಡುತ್ತಿದೆ. ಈ ಹೊರಳು ನೋಟವು ಅನಿವಾರ್ಯವಾಗಿ ಸ್ತ್ರೀವಾದದ ಕಡೆಗಿನ ಹೊರಳು ನೋಟವೂ ಆಗಿದೆ. ಏಕೆಂದರೆ ಗಾಂಧಿಯವರ ಸ್ವಾವಲಂಬನೆಯ ಪರಿಕಲ್ಪನೆಯ ಹಿಂದಿನ ಆಧಾರವೇ ಹೆಣ್ಣು. ಈ ಕಾರಣಕ್ಕಾಗಿಯೇ ಸ್ತ್ರೀವಾದವೆನ್ನುವುದು ಕೇವಲ ಜ್ಞಾನ ಮೀಮಾಂಸೆಯಲ್ಲ, ಅದೊಂದು ಲೋಕಮೀಮಾಂಸೆ.

ಸ್ತ್ರೀವಾದದ ಈ ನಿಧಾನಗತಿಯ ಆದರೆ ಸ್ಥಿರನಡೆಯ ಪ್ರಯಾಣದ ಬಗ್ಗೆ ಯೋಚಿಸುವಾಗಲೆಲ್ಲ ಪ್ರಸಿದ್ಧವಾದ ‘ಮೊಲ ಮತ್ತು ಆಮೆಯ ಕಥೆ’ಯೂ ನೆನಪಿಗೆ ಬಂದೇ ಬರುತ್ತದೆ. ವಿಪರ್ಯಾಸವೆಂದರೆ, ಮೊಲದ ಸೋಲಿಗೆ ಸಿಗುತ್ತಿರುವ ಅಧಿಕೃತತೆ, ಆಮೆಯ ಗೆಲುವಿನ ನಡೆಗೆ ಸಿಗುತ್ತಿಲ್ಲ ಎನ್ನುವುದು. ಸ್ತ್ರೀವಾದದ ಈ ನಿಡುಪಯಣವನ್ನು ಹಲವು ಪ್ರಮೇಯಗಳಲ್ಲಿ ಗುರುತಿಸಲು ಸಾಧ್ಯವಿದೆ. ‘ಬಹಿಷ್ಕಾರದಿಂದ ಸ್ವೀಕಾರದ ಕಡೆಗಿನ’, ‘ಅನಧಿಕೃತತೆಯಿಂದ ಅಧಿಕೃತತೆಯ ಕಡೆಗಿನ’, ‘ಸ್ವಗತದಿಂದ ಸಂವಾದದ ಕಡೆಗಿನ’ ಪ್ರಯಾಣವೆಂದೂ ಇದನ್ನು ಗುರುತಿಸಬಹುದು.

ಸ್ತ್ರೀವಾದವು ತನ್ನ ವಿಶ್ವಾಸಾರ್ಹತೆಯನ್ನು ಪಡೆಯಲು ನಡೆಸಿದ, ನಡೆಸುತ್ತಿರುವ ಹೋರಾಟ ನಮ್ಮಲ್ಲಿ ರೋಮಾಂಚನವನ್ನೂ ಹೆಮ್ಮೆಯನ್ನೂ ಕೆಲವೊಮ್ಮೆ ವಿಷಾದವನ್ನೂ ಹುಟ್ಟಿಸುತ್ತದೆ.

ನಮ್ಮ ಗೌರವ, ಕೃತಜ್ಞತೆಗೆ ಸಕಾರಣವಾಗಿ ಪಾತ್ರನಾದ ಅರಿಸ್ಟಾಟಲ್ ಹೆಣ್ಣನ್ನು ವ್ಯಾಖ್ಯಾನಿಸುವುದು ಹೀಗೆ– ‘The female is a female by virtue of a certain lack of qualities. we should regard the female nature as afflicted with a natural defectiveness’.
ಅರಿಸ್ಟಾಟಲ್ ಹೇಳಿಕೆಯನ್ನು ಉಲ್ಲೇಖಿಸಿದ್ದು, ಹೆಣ್ಣಿನ ಹೋರಾಟದ ಇತಿಹಾಸ, ಗಾಂಭೀರ್ಯ, ತೀವ್ರತೆಗಳನ್ನು ಗುರುತಿಸುವುದಕ್ಕಾಗಿ ಮಾತ್ರವಲ್ಲ, ಅವಳು ಎಂತೆಂಥ ಘನ ವ್ಯಕ್ತಿತ್ವಗಳನ್ನು, ಅವರುಗಳ ಪೂರ್ವಗ್ರಹಗಳನ್ನು ಹಾದು ಬರಬೇಕಾಗುತ್ತದೆ ಎನ್ನುವುದನ್ನು ಸೂಚಿಸುವುದಕ್ಕಾಗಿ.  ತಾನು ಬದುಕುತ್ತಿರುವ, ತನ್ನನ್ನು ಗ್ರಹಿಸುವ ವ್ಯವಸ್ಥೆಯನ್ನು ಮೊದಲು ತಾನು ಸರಿಯಾಗಿ ಗ್ರಹಿಸಬೇಕಾದ್ದೇ ಹೆಣ್ಣಿನ ಮೊದಲ ಸವಾಲು. ಯಾವುದನ್ನು ಸೂರ್ಯ–ಚಂದ್ರರಷ್ಟೇ ಪ್ರಾಚೀನ ಎಂದು ಹೇಳಲಾಗುತ್ತಿತ್ತೋ ಅದನ್ನು ಮೊದಲು ಸರಿಸಿಕೊಳ್ಳಬೇಕಾದ ತೆರೆ, ಸೆರೆ ಎಂದು ಕಂಡುಕೊಂಡದ್ದೇ ಹೆಣ್ಣಿನ ಮೊದಲ ಗೆಲುವು.

‘Representation of the world, like the world itself, is the work of men; they describe it from their own point of view, which they confuse with absolute truth’ ಎನ್ನುವ ಸಿಮೊನ್ ಬುವಾಳ ಮಾತು ಸ್ತ್ರೀವಾದದ ಉದ್ಘಾಟನಾ ಮಾತುಗಳ ಹಾಗೆ ಕೇಳಿಸುತ್ತವೆ ನಿಜ. ಆದರೆ, ತಾತ್ವಿಕ ಪರಿಭಾಷೆಯಲ್ಲೇ ಹೇಳುವುದಾದರೆ, ಪಿತೃಸಂಸ್ಕೃತಿಯ ಹುಟ್ಟಿನಲ್ಲೇ ಸ್ತ್ರೀವಾದದ ಹುಟ್ಟೂ ಇದೆ.
ಸ್ತ್ರೀವಾದವು ಅಂತಿಮವಾಗಿ ಪ್ರತಿಪಾದಿಸ ಹೊರಟಿರುವುದು, ರಚಿಸಲು ಹೊರಟಿರುವುದು ಏನನ್ನು? ಹೆಣ್ಣು ಎನ್ನುವ ‘ಸಾಮಾಜಿಕ’, ‘ರಾಜಕೀಯ’, ‘ಸಾಂಸ್ಕೃತಿಕ’, ‘ಧಾರ್ಮಿಕ’ ರಚನೆಯ ನಾಶ. ಇದನ್ನು ಅನುಭಾವಿ ಪರಿಕಲ್ಪನೆಯೊಂದರ ಮೂಲಕ ಹೇಳುವುದಾದರೆ, ಸ್ಥಾಪಿತ ಹೆಣ್ಣಿನ ರಚನೆಯನ್ನು ವಿಸರ್ಜಿಸುವುದು. ಇದರರ್ಥ, ‘ಗಂಡು’ ಎನ್ನುವ ಸ್ಥಾಪಿತ ರಚನೆಯನ್ನು ವಿಸರ್ಜಿಸುವುದು. ರ್‍ಯಾಡಿಕಲ್ ಸ್ತ್ರೀವಾದ ಪ್ರಬಲವಾಗಿ ಪ್ರತಿಪಾದಿಸಿದ ಈ ನಿಲುವನ್ನೇ ದಾಸಿಮಯ್ಯ ಕಾವ್ಯದ ಅಪೂರ್ವ ಭಾಷೆಯಲ್ಲಿ ಹೇಳಿದ್ದು–

ಗಡ್ಡ ಮೀಸೆ ಬಂದರೆ ಗಂಡೆಂಬರು
ಮೊಲೆ ಮುಡಿ ಬಂದರೆ ಹೆಣ್ಣೆಂಬರು
ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ
ಗಂಡೂ ಅಲ್ಲ ಕಾಣಾ ರಾಮನಾಥ


ಸ್ತ್ರೀವಾದ ಎದುರಿಸಿದ ಬಹುದೊಡ್ಡ ತೊಡಕು, ಅದನ್ನು ಕುರಿತ ಅಪವ್ಯಾಖ್ಯಾನದ್ದು. ಅದು ಹೆಣ್ಣೆನ್ನುವ ವರ್ಗಕ್ಕೆ ಮಾತ್ರ ಸಂಬಂಧ ಪಟ್ಟದ್ದು ಎನ್ನುವ ವ್ಯವ್ಯಸ್ಥಿತ ಅಪವ್ಯಾಖ್ಯಾನವನ್ನು ಒಡೆದು ಅದು ಹೆಣ್ಣಿನಷ್ಟೇ ಗಂಡಿಗೂ ಸಂಬಂಧಪಟ್ಟದ್ದು ಎನ್ನುವ ಮೂಲಾಶಯವನ್ನು ಮನದಟ್ಟು ಮಾಡಿಸುವ ಸವಾಲು ಇದು.

ಹೆಣ್ಣು ಮತ್ತು ಗಂಡು ಇಬ್ಬರಿಗೂ ಅವರದೇ ಆದ ವಿಶಿಷ್ಟತೆಗಳಿವೆ, ಅವು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎನ್ನುವ ಸತ್ಯವನ್ನು ಅರ್ಥ ಮಾಡಿಕೊಂಡ ಮತ್ತು ಈ ಸತ್ಯವನ್ನು ಅಧಿಕಾರ ಕೇಂದ್ರದ ರಚನೆಯ ಭಾಗವಾಗಿಸಿದ್ದೇ ಪಿತೃಸಂಸ್ಕೃತಿಯ ಅಕಾರಣ ಅಧಿಕಾರ ಕೇಂದ್ರದ ರಚನೆಗೆ ಮೂಲವಾಯಿತು. ಹೆಣ್ಣೆನ್ನುವ ದುರ್ಬಲ ಮತ್ತು ಗಂಡೆನ್ನುವ ಪ್ರಬಲ ಮಿಥ್‌ಗಳು ಆರಂಭವಾದದ್ದೇ ಇಲ್ಲಿಂದ. ಹೆಣ್ಣನ್ನಂತೂ ಅದೆಂಥ ಜೈವಿಕ ಮಿಥ್‌ನಲ್ಲಿ ಕಟ್ಟಲಾಗಿದೆಯೆಂದರೆ, ಮಿಥ್‌ನ ಅರ್ಥ ಸಾಧ್ಯತೆಗಳೆಲ್ಲವೂ ಹೆಣ್ಣಿನ ವ್ಯಕ್ತಿತ್ವಕ್ಕೆ ಅನ್ವಯಿಸುವಷ್ಟು ಮತ್ತಾರಿಗೂ ಮತ್ತಾವುದಕ್ಕೂ ಅನ್ವಯಿಸಲಾರದು ಎನ್ನುವಷ್ಟು. ಹೆಣ್ಣನ್ನು ಅವಳ ತಾಯ್ತನದ ಏಕಪಕ್ಷೀಯ ಹೊಣೆಗಾರಿಕೆಯ, ಅನುಕೂಲ ಸತಿಯ, ಗೃಹದೇವತೆಯ ಕಾರಣಗಳನ್ನು ಒಡ್ಡಿ, ಅವಳ ಪಾತ್ರಗಳನ್ನು ಸ್ಥಾಪಿತ ಮಾತ್ರವಲ್ಲ ಅನಿವಾರ್ಯ ಪಾತ್ರದ ಪಾತಳಿಯಲ್ಲಿ ನಿಲ್ಲಿಸಿ ಬಿಡುತ್ತವೆ. ಹೀಗಾಗಿ ‘ಹೆಣ್ಣು’ ಎನ್ನುವ ಮಿಥ್‌ನಿಂದ ಹೊರಬರುವುದೆಂದರೆ ಏಕಕಾಲಕ್ಕೆ ‘ದೇವಿ’ ಎನ್ನುವ ಆಧ್ಯಾತ್ಮೀಕರಿಸಿದ ಹೆಣ್ತನದ ‘ಸ್ವರ್ಗ’ದಿಂದಲೂ, ಅವಳನ್ನು ತನ್ನ ಅಧೀನದಲ್ಲಿರುವ ‘ಪ್ರಾಣಿ’ಯಂತೆ ನೋಡುವ ಪ್ರಾಣಿತ್ವದ ‘ನರಕ’ದಿಂದಲೂ ಏಕಕಾಲಕ್ಕೆ ಹೊರ ಬರುವುದು ಎಂದೇ ಅರ್ಥ.

ಈ ಘಟ್ಟದಲ್ಲಿ ಚರ್ಚಿಸಬೇಕಾದ ಇನ್ನೊಂದು ಮುಖ್ಯ ಅಂಶವಿದೆ. ವೈರುಧ್ಯದ ಸಂಗತಿಯ ಹಾಗೆ ಕಂಡರೂ ಇದು ಸತ್ಯ. ಕಳೆದ ಶತಮಾನದ ಎಲ್ಲ ಪ್ರಮುಖ ಸೈದ್ಧಾಂತಿಕ ಆಕೃತಿಗಳೂ ಶೈಕ್ಷಣಿಕವಾಗಿ ಹೆಣ್ಣಿನ ವಿಷಯಗಳನ್ನು ಬೇಕಾಗಿ, ಬೇಡವಾಗಿ ಚರ್ಚಿಸಿವೆ. ಹೆಣ್ಣಿನ ವಿಷಯದಲ್ಲಿ ಇವು ಕಾಳಜಿಯನ್ನೂ ಆಸಕ್ತಿಯನ್ನೂ ತೋರಿಸುತ್ತವೆ. ಗಂಭೀರವಾಗಿಯೇ ಹೆಣ್ಣಿನ ಸವಾಲುಗಳನ್ನು ಇವು ಚರ್ಚಿಸುತ್ತಿರುವಂತೆ ಕಂಡರೂ, ಹೆಣ್ಣಿನ ಹೋರಾಟಕ್ಕೆ ನೈತಿಕ ಬೆಂಬಲವನ್ನು ಇವು ಸೂಚಿಸುತ್ತಿರುವಂತೆ ಕಂಡರೂ, ಆ ಹೋರಾಟದ ಜೀವನ್ಮರಣದ ತೀವ್ರತೆಗೆ ಸ್ಪಂದಿಸುವಲ್ಲಿ ಈ ಎಲ್ಲ ಸೈದ್ಧಾಂತಿಕತೆಗಳಿಗೂ ಒಂದಲ್ಲ ಒಂದು ತೊಡಕು ಇದೆ. ಮಾರ್ಕ್ಸ್‌ನಿಂದ ಹಿಡಿದು ಫುಕೋನ ತನಕವೂ ಇದು ನಿಜ.

ಪರಂಪರೆ, ಯಾಜಮಾನ್ಯ ಮತ್ತು ಸಂಸ್ಕೃತಿಗಳ ಅನನ್ಯತೆಯ ಬಗ್ಗೆ ಅಪರೂಪವೆನಿಸುವ ಒಳನೋಟಗಳು ಮತ್ತು ಸ್ಪಷ್ಟತೆಯ ಕಾರಣಕ್ಕಾಗಿ ನಮಗೆ ಆಪ್ಯಾಯಮಾನವಾಗುವ ಓರಿಯೆಂಟಲಿಸಂಗೆ ಈ ಎಲ್ಲ ಪ್ರಕ್ರಿಯೆಯಲ್ಲಿ ಉದ್ದಕ್ಕೂ ಹೆಣ್ಣು ಬಲಿಪಶುವಾಗಿರುವ, ‘ದಾಳ’ವಾಗಿರುವ ದುರಂತದ ಬಗ್ಗೆ ಚರ್ಚಿಸಲು ಯಾಕೆ ಸಾಧ್ಯವಾಗುವುದಿಲ್ಲ? ಭೌತಿಕವಾದದ ಕೊನೆಯ ಅವತಾರದಂತೆ ಕಾಣಿಸುವ ಮಾರ್ಕಿಸಂ ಕೂಡ ಹೆಣ್ಣಿನ ವೇದಿಕೆಯಾಗುವಲ್ಲಿ ಏಕೆ ಸೋಲುತ್ತದೆ? ದಮನಿತ ವರ್ಗದ ‘ವಸ್ತು’ ಎನ್ನುವುದಕ್ಕಿಂತ ಹೆಚ್ಚಿನದೇನನ್ನೂ ಹೆಣ್ಣು ಎನ್ನುವ ವಸ್ತುವಿಗೆ ಇದು ಕೊಡುವುದಿಲ್ಲ.

ಹಾಗೆ ನೋಡಿದರೆ, ಸಮಾಜವಾದವೇ ಸ್ತ್ರೀವಾದಕ್ಕೆ ಬಹಳ ಹತ್ತಿರವಾದುದು ಎನ್ನಬಹುದು. ಮಿಕ್ಕೆಲ್ಲ ತಾತ್ವಿಕತೆಗಳಿಗಿಂತ ಸಮಾಜವಾದಕ್ಕಿರುವ ‘ಒಳಗೊಳ್ಳುವಿಕೆ’ಯ ಶಕ್ತಿ ಮತ್ತು ಸಂಸ್ಕೃತಿಯನ್ನು ತನ್ನ ನಿಲುವಿನ ಒಂದು ಭಾಗವಾಗಿ ಪ್ರತಿಪಾದಿಸುವುದರಲ್ಲಿ ಸಮಾಜವಾದಕ್ಕಿರುವ ನಂಬಿಕೆ ಇದಕ್ಕೆ ಕಾರಣ. ಸಮುದಾಯವೊಂದನ್ನು ವ್ಯಷ್ಟಿ ಮತ್ತು ಸಮಷ್ಟಿಯ ನೆಲೆಗಳೆರಡಲ್ಲೂ ಗ್ರಹಿಸುವುದರಿಂದಲೇ ಸಮಾಜವಾದವು ಇತರ ತಾತ್ವಿಕತೆಗಳಿಗಿಂತ ಹೆಚ್ಚು ಮಾನವೀಯ ಆವರಣವನ್ನು ಪಡೆದಿದೆ. ಅಮೂರ್ತವಾದ ಸಾಂಸ್ಕೃತಿಕ ನೆಲೆಗಳನ್ನು ಒಪ್ಪಿ ಮುನ್ನಡೆಯುವ ಸಮಾಜವಾದದ ನಡೆ ಸಹಜವಾಗಿಯೇ ಹೆಚ್ಚು ಸಮೀಪದ್ದು.

ಆದರೆ ಇವೆಲ್ಲ, ಇಷ್ಟೆಲ್ಲ ಇದ್ದೂ ಸ್ತ್ರೀವಾದ ತನ್ನನ್ನು ಈ ಯಾವುದರ ಜೊತೆಗೂ ಸಮೀಕರಿಸಿಕೊಳ್ಳಲಾಗಲೀ ಲಯಗೊಳಿಸಿಕೊಳ್ಳಲಾಗಲೀ ಸಾಧ್ಯವಿಲ್ಲ. ಹೆಣ್ಣನ್ನು ತಮ್ಮ ‘ಕೇಂದ್ರ ಕಾಳಜಿ’ ಎಂದು ಒಪ್ಪಿಕೊಳ್ಳುವಲ್ಲಿ ಇವುಗಳಿಗಿರುವ ಹಿಂಜರಿಕೆ ಮತ್ತು ಅನಾಸಕ್ತಿಯೇ ಇದಕ್ಕೆ ಕಾರಣ. ಮಾನವೀಯ ಆರ್ದ್ರತೆಯನ್ನು ಸ್ತ್ರೀವಾದದಷ್ಟು ಸಾಂದ್ರತೆಯಲ್ಲಿ ಮತ್ತು ಅಖಂಡತೆಯಲ್ಲಿ ಇವು ಪಡೆಯಲಾಗಿಲ್ಲ ಎನ್ನುವುದು ಇನ್ನೊಂದು ಕಾರಣ.

‘ಹೆಣ್ಣಿನ ವಿಶೇಷ’ ಎಂದು ಗುರುತಿಸಲಾಗುವ ‘ಪ್ರಕೃತಿ’ಯ ಅಂಶಗಳು ಸ್ತ್ರೀವಾದದಲ್ಲಿಯೂ ಢಾಳಾಗಿವೆ. ಮಾತ್ರವಲ್ಲ, ಅದನ್ನು ವಿಶಿಷ್ಟ ತಾತ್ವಿಕತೆಯಾಗಿಸುವಲ್ಲಿ, ಶುದ್ಧ ಬೌದ್ಧಿಕ ಚಹರೆ ಮಾತ್ರವಾಗಿಸದೇ ಅದನ್ನು ಬದುಕಿನ ಕ್ರಮವಾಗಿ ಪ್ರತಿಪಾದಿಸುವಲ್ಲಿ ಈ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ವ್ಯವಸ್ಥೆ ಅಥವಾ ಪ್ರಭುತ್ವದ ಸ್ವರೂಪದ ಬದಲಾವಣೆಗಾಗಿ ಹಂಬಲಿಸುವ ಯಾವುದೇ ತಾತ್ವಿಕತೆಯೂ ಅಧಿಕಾರ ಕೇಂದ್ರದ ಪಲ್ಲಟಕ್ಕಾಗಿ ನಡೆಸುವ ಹೋರಾಟವೂ ಆಗಿಬಿಡುವುದರಿಂದಲೇ ಅನಿವಾರ್ಯವಾದ ಕೆಲವು ಮಿತಿಗಳೊಳಗೆ ಸಿಕ್ಕಿಬೀಳುತ್ತದೆ. ಆದರೆ ಸ್ತ್ರೀವಾದವು ವಿಕೇಂದ್ರೀಕರಣವನ್ನು ಅದರ ದೇಹಾತ್ಮಗಳೆರಡರಲ್ಲಿಯೂ ಪ್ರತಿಪಾದಿ ಸುತ್ತದೆ. ತನ್ನಷ್ಟಕ್ಕೆ ತಾನೆ ಸ್ವಯಂಚಾಲಿತವೆನ್ನುವಂತೆ ಕಾಣಿಸುವ, ಸಮಾನ ಪಾತಳಿಯದ್ದೂ ಆಗಿರುವ, ಜಗತ್ತು ಪ್ರಶ್ನಿಸಲಾಗದ ‘ಪ್ರಾಕೃತಿಕ ನ್ಯಾಯ’ದ ವಕ್ತಾರ ನೆಲೆಯಲ್ಲಿ ಸ್ತ್ರೀವಾದವಿದೆ.

ಆದ್ದರಿದಲೇ ಸ್ತ್ರೀವಾದವನ್ನು ‘ಆದಿಮ ಪ್ರಾಕೃತಿಕ ಮೀಮಾಂಸೆ’ಯೆಂದು ಕರೆಯುವ ಆಸೆಯಾಗುತ್ತದೆ. ಸಾಹಿತ್ಯದ ಭಾಷೆಯಲ್ಲಿ ಸ್ತ್ರೀವಾದವು ನಿರಚನವಾದದ ಕಡೆಗಿನ ಮಹಾ ಪ್ರಯಾಣ. ಅಧಿಕಾರದ ತಾತ್ಕಾಲಿಕತೆಯಿಂದ ಮಾತೃತ್ವದ ಪೊರೆಯುವ ಮತ್ತು ಒಳಗೊಳ್ಳುವ ಶಾಶ್ವತವೂ ಪ್ರಾಕೃತಿಕವೂ ಆದ ಸಹಜ ದಾರಿಯ ಬಗೆಗಿನ ನಂಬಿಕೆ ಇದು.

ಇತಿಹಾಸವನ್ನು ಸ್ತ್ರೀವಾದವು ಗ್ರಹಿಸುವ ಪರಿಯೇ ಇದನ್ನು ಆತ್ಯಂತಿಕವಾಗಿ ಭಿನ್ನವಾಗಿಸುತ್ತದೆ. ಇದು ಇತಿಹಾಸವನ್ನು ಖಾಲಿಜಾಗಗಳನ್ನು ತುಂಬುವ ಪ್ರಯತ್ನವೆಂದು ನೋಡುವುದಿಲ್ಲ. ಇತಿಹಾಸವನ್ನು ನೋಡುವ ಹೊಸ ನೋಟವೊಂದನ್ನು ರೂಢಿಸಲು ಇದು ಬಯಸುತ್ತಿದೆ. ಯಾವುದನ್ನು ಪುರುಷವಾಚಕ ಏಕವಚನದಲ್ಲಿಯೇ ಈ ತನಕ ನೋಡಲಾಗುತ್ತಿತ್ತೋ ಅದನ್ನು ಬಹುವಚನಗಳಲ್ಲಿ ನೋಡುವ ಉದ್ದೇಶ ಇಲ್ಲಿದೆ. ಈ ಇಂಥ ಪ್ರಯತ್ನ ಮಾತ್ರ ನಮ್ಮ ಇತಿಹಾಸವನ್ನೂ ವರ್ತಮಾನವನ್ನೂ ಕೊನೆಗೆ ಭವಿಷ್ಯವನ್ನೂ ಬದಲಿಸಬಲ್ಲದು. ತಿರುವುಮುರುವಾದ ಇತಿಹಾಸದ ಪಥ ಇದು. ಪಟ್ಟಭದ್ರರನ್ನು ಕೆಳಗಿಳಿಸಿ ತಾವು ಪಟ್ಟಕ್ಕೇರುವ ಹಾವುಏಣಿಯಾಟದ ಕಸರತ್ತಲ್ಲ.

ಪ್ರಾಕೃತಿಕ ನ್ಯಾಯವನ್ನು ಹಕ್ಕೊತ್ತಾಯದಿಂದ ಪಡೆಯುವ ಅಸಾಧಾರಣ ಚಲನೆ ಇದು. ಸ್ತ್ರೀವಾದಕ್ಕೆ ತಾತ್ವಿಕತೆಗಿಂತ ತನ್ನ ನಿಲುವುಗಳನ್ನು ಕಥಿಸುವುದರಲ್ಲಿ ಮತ್ತು ನಿರೂಪಿಸುವುದರಲ್ಲಿ ಅಪಾರ ಆಸಕ್ತಿಯಿದೆ. ಈ ಮೆಥಡಾಲಜಿಯಿಂದ ಮಿಕ್ಕಾವ ತಾತ್ವಿಕತೆಗೂ ಇರದ ಅನುಕೂಲವೊಂದು ಸ್ತ್ರೀವಾದಕ್ಕೆ ಅದ್ಭುತವಾಗಿ ದಕ್ಕಿದೆ. ಇದು ಯಾಜಮಾನ್ಯದ ಇತಿಹಾಸಗಳನ್ನು ವಸ್ತುನಿಷ್ಠ ಸತ್ಯದಿಂದಲ್ಲ, ಹೆಣ್ಣಿನ ದೃಷ್ಟಿ ಮತ್ತು ಅನುಭವದಿಂದ ಹೊರಬಂದ ಕಥನಗಳ ಮೂಲಕ ಅನುಸಂಧಾನಿಸುತ್ತವೆ. ಇದರ ಮಹಾಶಕ್ತಿಯೆಂದರೆ, ಯಾವ ವಸ್ತುನಿಷ್ಠ ಇತಿಹಾಸ ಕ್ರಮಕ್ಕೆ ಅಮೂರ್ತ ವಿವರಗಳನ್ನು ಒಳಗೊಳ್ಳಲು ಸಾಧ್ಯವಾಗುವುದಿಲ್ಲವೋ ಅವುಗಳಿಗೂ ನಿರೂಪಣೆ ಮತ್ತು ಕಥನಗಳಲ್ಲಿ ಅವಕಾಶ ಒದಗಿಸಿಕೊಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು.

ಸಮಕಾಲಿನ ಸ್ತ್ರೀವಾದಿ ಅಧ್ಯಯನಗಳ ಎರಡು ಮುಖ್ಯ ಚಲನೆಗಳೆಂದರೆ ಸಾಂಸ್ಕೃತಿಕ ಸ್ತ್ರೀವಾದ ಮತ್ತು ನೇಯ್ಗೆ. ಸಾಂಸ್ಕೃತಿಕ ಸ್ತ್ರೀವಾದವು ಹೆಣ್ಣಿನ ಶಕ್ತಿಮೂಲಗಳ ಮರು ವ್ಯಾಖ್ಯಾನದ ಮೂಲಕ ಹೆಣ್ಣಿನ ಚಹರೆಗಳನ್ನು ಅಧಿಕೃತಗೊಳಿಸಲು ಪ್ರಯತ್ನಿಸುತ್ತಿದೆ. ಹೆಣ್ಣಿನ ದೌರ್ಬಲ್ಯಗಳೆಂದು, ಅವಳ ಕಡ್ಡಾಯ, ಕರಾರಿನ ಗುಣಗಳೆಂದು ತಿಳಿಯಲಾಗುತ್ತಿದ್ದವನ್ನು ‘ಸ್ತ್ರೀ ವಿಶಿಷ್ಟ’ ಆಯಾಮಗಳೆಂದು ಸ್ಥಾಪಿಸಲು ಹವಣಿಸುತ್ತಿದೆ. ‘ನೇಯ್ಗೆ’ಯು ಇತಿಹಾಸ, ಪುರಾಣಗಳೂ ಸೇರಿದಂತೆ, ವಿವಿಧ ಸೈದ್ಧಾಂತಿಕ ಅಂಶಗಳಿಂದ, ವಿವಿಧ ಕಲಾಪ್ರಕಾರಗಳಲ್ಲಿನ ಹೆಣ್ಣಿನ ಅಭಿವ್ಯಕ್ತಿ ಮತ್ತು ಅವುಗಳನ್ನು ಹೆಣ್ಣಿನ ಓದಿನ ಕ್ರಮಕ್ಕೆ ಒಳಗು ಮಾಡುತ್ತಲೇ ಸ್ತ್ರೀವಾದಿ ಅಧ್ಯಯನ ಮತ್ತು ಕಾವ್ಯಮೀಮಾಂಸೆಯನ್ನು ಕಟ್ಟುವುದರಲ್ಲಿ ಆಸಕ್ತವಾಗಿದೆ.

ಮಹಿಳೆಯ ಅರಿವಿನಷ್ಟೇ, ಪುರುಷನಲ್ಲಿ ಹೆಣ್ಣನ್ನು ಕುರಿತಂತೆ ಮೂಡಬೇಕಾದ ಅರಿವೂ ಮುಖ್ಯ ಎನ್ನುವುದನ್ನು, ಮೇಲಾಟಗಳ ಭ್ರಮೆಯಿಲ್ಲದ, ಸ್ಪರ್ಧೆಯಿಲ್ಲದ, ಬದುಕು ಕೊಡಬಹುದಾದದ್ದನ್ನು ಗಂಡು ಹೆಣ್ಣಿಬ್ಬರ ಪ್ರಾಕೃತಿಕ ಹಕ್ಕೆನ್ನುವುದನ್ನು ಒಪ್ಪುವುದರ ಮೂಲಕ ‘ಆಗೋಣ ಈ ಜಗದ ತಾಯಿ-ತಂದೆ’ ಎನ್ನುವುದನ್ನು ಜೈವಿಕ, ಬೌದ್ಧಿಕ ಮತ್ತು ಮನೋವಿನ್ಯಾಸದ ಮಜಲುಗಳಲ್ಲಿ ಸಾಧಿಸಿಕೊಳ್ಳಲು ಹಂಬಲಿಸುತ್ತಿರುವುದೇ ಸ್ತ್ರೀವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT