ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚಲ್ಲ, ಅರಿವಿನ ಆಸ್ಫೋಟ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಹೆಣ್ಣಿಗೂ ಹುಚ್ಚಿಗೂ ಇರುವ ಮತ್ತು ಕಟ್ಟಲಾಗಿರುವ ಸಂಬಂಧಗಳ ಅಧ್ಯಯನವೇ ಒಂದು ರೋಮಾಂಚಕಾರಿ ಅನುಭವ. ಪಿತೃ ಸಂಸ್ಕೃತಿಯೆನ್ನುವುದು ಅದೆಷ್ಟು ಮಹತ್ವಾಕಾಂಕ್ಷೆಯಲ್ಲಿ ಮತ್ತು ಕೊನೆಯಿಲ್ಲದ ಮಹತ್ವಾಕಾಂಕ್ಷೆ ಹಾಗೂ ಅಧಿಕಾರ ಲಾಲಸೆಗೆ ಮಾತ್ರ ಸಾಧ್ಯವಾಗಬಹುದಾದ ಕ್ರೌರ್ಯದಲ್ಲಿ ಕಟ್ಟಿದ ವ್ಯವಸ್ಥೆ ಎನ್ನುವುದು ನಮ್ಮ ಅರಿವಿಗೆ ದಕ್ಕಬೇಕೆಂದರೆ ಹುಚ್ಚು ಮತ್ತು ಹೆಣ್ಣಿನ ನಡುವಿರುವ ಅನಾದಿಯೋ ಎನಿಸುವಷ್ಟು ಸತತವಾಗಿರುವ ಸಖ್ಯವನ್ನು ನೋಡಬೇಕು.

ತರಗತಿಯಲ್ಲೊಮ್ಮೆ, ನಮ್ಮ ಮನೆಯಲ್ಲೋ ಅಕ್ಕಪಕ್ಕದ ಮನೆಯಲ್ಲೊ ಒಬ್ಬ ಹುಡುಗಿ ‘ನಾನು ದೇವರನ್ನು ಮದುವೆಯಾಗಿದ್ದೇನೆ, ಅವನೇ ಇಹದಲ್ಲೂ ಪರದಲ್ಲೂ ನನ್ನ ಗಂಡ’ ಎಂದರೆ ನಮ್ಮೆಲ್ಲರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೇಳಿದೆ. ಒಂದು ಘಳಿಗೆಯೂ ತಡ ಮಾಡದೆ ಎಲ್ಲರೂ ಒಮ್ಮೆಲೇ ‘ಹುಚ್ಚಿ’ ಅಂತೀವಿ ಎಂದು ಕೂಗಿದರು. ಭಕ್ತ ಕುಂಬಾರ ತನ್ನ  ಮಗುವನ್ನು ಮಣ್ಣಿನೊಂದಿಗೆ ಹಾಕಿ ತುಳಿಯುವುದನ್ನು ಏನೆಂದು ಕರೆಯುವುದು ಅಂತ ಕೇಳಿದೆ, ಮತ್ತೆ ಒಕ್ಕೊರಲಿನ ಉತ್ತರ ‘ಭಕ್ತಿ’. (ಕಾರಣವೇ ಇಲ್ಲದೆ ಘಟನೆಯೊಂದು ನೆನಪಾಗುತ್ತಿದೆ. ಪರೀಕ್ಷೆಯಲ್ಲಿ ಅಕ್ಕಮಹಾದೇವಿಯನ್ನು ಕುರಿತ ಪ್ರಶ್ನೆಯೊಂದಕ್ಕೆ ವಿದ್ಯಾರ್ಥಿನಿಯೊಬ್ಬಳು, ಅಕ್ಕನಿಗೆ ಬಸವಣ್ಣನನ್ನು ಮದುವೆಯಾಗುವ ಆಸೆಯಿತ್ತು. ಅದಕ್ಕೇ ಕೌಶಿಕನನ್ನು ಬಿಟ್ಟು ಬಂದಳು ಎಂದು ಉತ್ತರಿಸಿದ್ದಳು!).

ಮಧ್ಯಯುಗೀನ ಭಕ್ತಿ ಸಾಹಿತ್ಯ ಇದಕ್ಕೊಂದು ಘನವಾದ ಆಕರ. ಆ ಕಾಲದ ಅನೇಕ ಮಹಿಳಾ ಅನುಭಾವಿಗಳು ನಮ್ಮ ಶ್ರೇಷ್ಠ ಕವಿಗಳೂ ಹೌದು. ಅವರನ್ನು ನಮ್ಮ ವಿದ್ವತ್ ಲೋಕ ಅಧ್ಯಯನ ಮಾಡಿರುವ ಕ್ರಮವೇ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಆ ಕಾಲದಲ್ಲಿ ಆ ಹೆಣ್ಣುಮಕ್ಕಳನ್ನು ಹುಚ್ಚರೆಂದು ಕರೆದದ್ದನ್ನು ಮತ್ತೆ ಮತ್ತೆ ಹೇಳುತ್ತಲೇ ಅವರನ್ನು ಕವಿಯಾಗಿ ಒಪ್ಪಿಕೊಳ್ಳಬಹುದಾದ ಸಾಧ್ಯತೆಯನ್ನು ಈ ಅಧ್ಯಯನಗಳು ಪ್ರಸ್ತುತಪಡಿಸುತ್ತವೆ. ಆದರೆ ಆ ಹೆಣ್ಣುಮಕ್ಕಳು ಅನುಭವಿಸಿರಬಹುದಾದ ಪರಮಹಿಂಸೆಯನ್ನು ಈ ಅಧ್ಯಯನಗಳು ಅಲಕ್ಷಿಸುತ್ತವೆ. ಅವರೆಲ್ಲರನ್ನೂ ಆ ಕಾಲದಲ್ಲಿ ಏಕಕಾಲಕ್ಕೆ ಹುಚ್ಚರೆಂದೂ ಭಕ್ತರೆಂದೂ ಗುರುತಿಸಲಾಗಿತ್ತು. ಅಕ್ಕ, ಆಂಡಾಳ್ ಮೊದಲಾದವರು ಲೈಂಗಿಕತೆಯ ಅಭಿವ್ಯಕ್ತಿಯನ್ನು ಶಕ್ತ ಪ್ರತಿರೋಧದ ಮಾದರಿಯಾಗಿ ಕಟ್ಟಿ ಬೆಳೆಸುವುದರ ಮೂಲಕವೇ  ಹೆಣ್ಣಿನ ಹೋರಾಟದ ಮಹತ್ವದ ಆಯಾಮವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಯಶಸ್ವಿಯೂ ಆದವರು.

ಹೀಗೆ ಮಹಿಳಾ ಅನುಭಾವಿಗಳನ್ನು ಹುಚ್ಚರ ಗುಂಪಿಗೆ ಸೇರಿಸುವ ಮೂಲಕವೇ ಅವರ ಪ್ರತಿರೋಧದ ಶಕ್ತಿಯನ್ನು, ಆಯಾಮವನ್ನು ದುರ್ಬಲಗೊಳಿಸುವ, ಪ್ರಯತ್ನವು ಭಕ್ತಿಯ ಚೀಲದಲ್ಲಿ ಹಾಕಿಬಿಡುವುದರಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯುವುದು ಸಾಧ್ಯವಾಗಿಬಿಡುತ್ತದೆ. ಈ ಪ್ರಯತ್ನಕ್ಕೆ ಸಾರ್ವತ್ರಿಕವೆನ್ನಬಹುದಾದ ನೆಲೆಯೇ ಇದೆ ಎನ್ನುವುದು ನಮಗೆ ಆಶ್ಚರ್ಯವನ್ನೇನೂ ಹುಟ್ಟಿಸುವುದಿಲ್ಲ. ಬ್ರಿಟನ್ ಮತ್ತು ಫ್ರಾನ್ಸ್‌ನಲ್ಲಿನ ಮಹಿಳಾ ಅನುಭಾವಿಗಳನ್ನು ಹೀಗೆ ಚರ್ಚಿಸುವ ಮಾದರಿಯ ಹಲವು ಮಹತ್ವದ ಅಧ್ಯಯನಗಳು ಇವೆ. ಹೆಣ್ಣಿನ ಮಟ್ಟಿಗೆ ಭಕ್ತಿಗೂ ಹುಚ್ಚಿಗೂ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವ ನಿಲುವು ನಮ್ಮ ಅಧ್ಯಯನಗಳಲ್ಲೂ ವ್ಯಾಪಕವಾಗಿದೆ.

ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ಹುಚ್ಚು ಎನ್ನುವುದು ಹೆಣ್ಣನ್ನು ಕುರಿತಂತೆ ಪಿತೃ ಸಂಸ್ಕೃತಿಯ ಒಂದು ಕಾರ್ಯ ಮಾದರಿಯೂ ಹೌದು ಎನ್ನುವುದನ್ನು ಗುರುತಿಸಿಕೊಳ್ಳುವುದಕ್ಕೆ. ಆದರೆ ಒಳದಾರಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವೇ ಆಗಿರುವ ಹೆಣ್ಣು ಹುಚ್ಚಿನ ಮಾದರಿಯನ್ನೇ ಪ್ರತಿರೋಧದ ದಾರಿಯಾಗಿ ಮಾತ್ರವಲ್ಲ ಅಡಗುತಾಣವಾಗಿಯೂ ಬಳಸಿಕೊಳ್ಳುತ್ತಾಳೆ. ಇದು ಪಿತೃಸಂಸ್ಕೃತಿಯೊಂದಿಗಿನ ಹೆಣ್ಣಿನ ನಿರಂತರ ಸಂಘರ್ಷಕ್ಕೊಂದು ಉದಾಹರಣೆ. ಹೆಣ್ಣು ಮತ್ತು ಪಿತೃಸಂಸ್ಕೃತಿ ಎರಡೂ ಪ್ರಯೋಗಿಸುತ್ತಲೇ ಬಂದಿರುವ ಕೆಲವು ಕಾರ್ಯಮಾದರಿಗಳಲ್ಲಿ ಹುಚ್ಚೂ ಒಂದು!

ಈ ಬಾರಿಯ ನಮ್ಮ ಹೆಮ್ಮೆಯ ನಾಯಕಿ ವೈದೇಹಿಯವರ ಬಹು ಚರ್ಚಿತ ಕಥೆ ‘ಅಕ್ಕು’ವಿನ ಅಕ್ಕು. ಈ ಕಥೆಯ ವಿಶೇಷವೆಂದರೆ, ವ್ಯವಸ್ಥೆ ಮತ್ತು ಹೆಣ್ಣು ಇಬ್ಬರೂ ಯಥಾಶಕ್ತಿ ತಮ್ಮ ಪ್ರಯತ್ನಗಳನ್ನು ಜಾರಿಗೊಳಿಸುವ ಪರಿ. ಒಂದು ರೀತಿಯಲ್ಲಿ ಜೂಟಾಟದಂತೆ ಒಬ್ಬರು ಇನ್ನೊಬ್ಬರನ್ನು ಬೆನ್ನಟ್ಟಿ ದಣಿಯುತ್ತಾರೆ. ಹೆಮ್ಮೆಯ ಅಂತ ಯಾಕೆ ಅಂದರೆ, ಅಕ್ಕು ತನ್ನ ಬದುಕಿನಲ್ಲಿ ಕಳೆದುಕೊಂಡದ್ದರ ವಿರುದ್ಧ, ಅದಕ್ಕೆ ನೇರವಾಗಿಯೂ ಪರೋಕ್ಷವಾಗಿಯೂ ಕಾರಣಕರ್ತರಾದ ಕುಟುಂಬ ಮತ್ತು ವ್ಯವಸ್ಥೆಯ ವಿರುದ್ಧ ಅಸೀಮ ಚೈತನ್ಯದಲ್ಲಿ ಹೋರಾಡು ವವಳಂತೆ ಕಾಣಿಸುತ್ತಾಳೆ. ಹುಚ್ಚಿಯ ಪಟ್ಟ ಹೊತ್ತುಕೊಂಡೇ ಅಪ್ರಿಯ ಸತ್ಯಗಳನ್ನು ಮುಖಕ್ಕೆ ರಾಚುವಂತೆ ಪ್ರಕಟ ಪಡಿಸುತ್ತಾ, ವ್ಯವಸ್ಥೆಯ ಲಂಗುಲಗಾಮಿಲ್ಲದ ಆರ್ಭಟಕ್ಕೆ ತಾತ್ಕಾಲಿಕವಾದ ತಡೆಯನ್ನು ಒಡ್ಡುತ್ತಾಳೆ. ಇದು ಒಂದು ಮಟ್ಟದ ಎಚ್ಚರಕ್ಕೂ ಕಾರಣವಾಗುತ್ತದೆ ಎನ್ನುವುದೇ ಇಲ್ಲಿನ ಮುಖ್ಯ ಸಂಗತಿ.

ಒಂದು ಬದಿ ಮುಖ ನೆಗ್ಗಾದಂತೆ ಕಾಣಿಸುವ, ನಾಲ್ಕೂ ಮುಕ್ಕಾಲು ಅಡಿಯ ಅಕ್ಕುವಿನ ಗಂಡ ಅವಳನ್ನು ಬಿಟ್ಟುಹೋಗಿದ್ದಾನೆ. ದಾಂಪತ್ಯದ ಶುರುವಿಗೇ ಆದ ಈ ಆಘಾತದಿಂದ ಅಕ್ಕು ಮನಸಿನ ಮೇಲಿನ ಹಿಡಿತ ಕಳೆದುಕೊಂಡು ಹುಚ್ಚಿಯೇ ಆಗಿದ್ದಾಳೋ, ಆಗುವ ದಾರಿಯಲ್ಲಿದ್ದಾಳೋ... ಒಟ್ಟಿನಲ್ಲಿ ಅವಳು ಸಹಜ ಹೆಣ್ಣಲ್ಲ. ಕೂಡು ಕುಟುಂಬದ ತವರು ಮನೆಯಲ್ಲಿ ಅವಳು ಎಲ್ಲರಿಗೂ ಸಸಾರದ ವಸ್ತುವೇ ಆಗಿದ್ದಾಳೆ. ದಾಂಪತ್ಯವು ಕೊಡಬಹುದಾದ ಎಲ್ಲದರಿಂದಲೂ ವಂಚಿತಳಾದ ಅಕ್ಕು ಬಸುರಿಯರ ಬಯಕೆಯ ಊಟ ಮತ್ತು ನಾಮಕರಣಗಳನ್ನು ಯಾವ ಕಾರಣಕ್ಕೂ ತಪ್ಪಿಸುವುದಿಲ್ಲ. ಸದಾ ತಿರುಗುವ, ಮಂದಕಾಂತಿಯ ಕಣ್ಣುಗಳ ಅಕ್ಕು ತನ್ನ ಪ್ರತಿರೋಧದ ಸಂಕೇತವೋ ಎನ್ನುವಂತೆ ಕರವಸ್ತ್ರದ ಟುವಾಲನ್ನು ಹಾರಿಸುತ್ತಾ ಊರಿಡೀ ತಿರುಗುತ್ತಾಳೆ. ಇದು ಬಿಟ್ಟರೆ ಅವಳು ಮಾಡುವ ಘನ ಕಾರ್ಯಗಳೆಂದರೆ, ತನ್ನ ಟುವಾಲನ್ನು ಎಲ್ಲಿಯೋ ಇಡುವುದು ಮತ್ತು ಹುಡುಕುವುದು. ಮನೆಯವರಿಗೆ ಇವಳೊಂದು ಮನರಂಜನೆಯ ಸಾಧನ.

ಕೆಲವು ಬಾರಿ  ಬಸುರಿಯೂ ಮತ್ತೆ ಕೆಲವು ಬಾರಿ ಬಾಣಂತಿಯೂ, ತಾಯಿಯೂ ಆಗುವ ರಿವಾಜೂ ಇವಳಿಗಿದೆ. ಮನೆಯ ಕೊನೆಯಲ್ಲಿರುವ ಬಾಣಂತಿ ಕೋಣೆಯಲ್ಲಿ ಇವಳು ಹಡೆಯುವುದು, ಮನೆಯವರಿಗೆಲ್ಲ ಮಗು ಮಲಗುತ್ತಿದೆ, ಗಲಾಟೆ ಮಾಡಬೇಡಿ ಎಂದು ಹೇಳುವುದೂ ಇದೆ. ಅವಳ ಈ ಕೊನೆಯಿಲ್ಲದ ಬಸುರು ಮತ್ತು ಬಾಣಂತನದ ಅಭಿನಯವೂ ಮನೆಯವರಿಗೆ ಬದುಕಿನ ಏಕತಾನತೆಯಿಂದ ಹೊರಬರಲು ಇರುವ ತಮಾಷೆಯ ಘಳಿಗೆಗಳು. ಸ್ವತಃ ನೊಂದ ಹೆಣ್ಣಾದ ದೊಡ್ಡತ್ತೆಯೂ ಒಮ್ಮೊಮ್ಮೆ ಅಕ್ಕುವಿನ ಬಾಣಂತನದ ಪರಿಗೆ, ‘ಹಾಲು ಮಸ್ತಿತ್ತಾ ಕೇಳ್ ವಾಸು’ ಎಂದು ಕ್ರೌರ್ಯದ ತುದಿಯಲ್ಲಿ ಕೇಳುವ ಮಟ್ಟಿಗೆ ಇವಳು ಹಾಸ್ಯದ ಸರಕು. ಹೀಗೆ ಎಲ್ಲರ ನಗೆಸಾರದ ವಸ್ತುವಾದ ಅಕ್ಕು ಈ ನಗೆಸಾರದ ಛಾಪಿನಲ್ಲಿಯೇ ಎತ್ತುವ ಪ್ರಶ್ನೆಗಳು, ಪ್ರತಿರೋಧದ ಸ್ಪಷ್ಟ ನಡೆಗಳ ಹಾಗೆ ಕಾಣಿಸುತ್ತವೆ ಎನ್ನುವ ಕಾರಣಕ್ಕೇ ಇವಳು ನಮ್ಮ ನಾಯಕಿ. ಅಕ್ಕು ಎತ್ತುವ ಪ್ರಶ್ನೆಗಳನ್ನು ಮತ್ತು ಸಂದರ್ಭಗಳನ್ನು ಸಾಲಾಗಿ ಜೋಡಿಸಿಕೊಂಡರೆ ತೀವ್ರಗಾಮಿ ಸ್ತ್ರೀವಾದಿಯ ಹಾಗೆ ಅಕ್ಕು ನಮ್ಮೆದುರಿಗೆ ನಿಲ್ಲುತ್ತಾಳೆ. ಹುಚ್ಚಿನ ಸ್ವರೂಪ, ವ್ಯಾಖ್ಯಾನ ಎಲ್ಲವೂ ಅದಲು ಬದಲು ಕಂಚಿ ಬದಲಾಗತೊಡಗುತ್ತವೆ.

ಕಥೆಯ ಬಹು ಮುಖ್ಯ ಘಟನೆಯನ್ನು ಮೊದಲಿಗೆ ನೋಡೋಣ. ಬೇಜವಾಬ್ದಾರಿ ಗಂಡಸರದೊಂದು ರಕ್ತಬೀಜಾಸುರ ವಂಶ. ಅಕ್ಕುವಿನ ಗಂಡ ಈ ವಂಶದ ಕುಡಿ. ತನ್ನ ಲೋಕಸಂಚಾರವನ್ನೆಲ್ಲ ಮುಗಿಸಿ ಅಕ್ಕುವಿನ ಪತಿಮಹಾಶಯ ವಾಪಾಸು ಬಂದಿದ್ದಾನೆ. ಭೆಟ್ಟಿಯಾದ ಒಬ್ಬ ತುಂಟ ಹುಡುಗ ಅಕ್ಕು ಬಸುರಿ ಎಂದದ್ದೇ ಈತನಿಗೆ ಎದೆ ಹಾರಿ ಮರಳಿ ಹೊರಡುವ ಹೊತ್ತಿಗೆ ಅಕ್ಕುವಿಗೆ ‘ನಾಲ್ಕು ಸುತ್ತು’ ಬಿದ್ದು ಹೋಗಿದೆ ಎನ್ನುವ ಸತ್ಯ ಗೊತ್ತಾಗಿ ಅವಳ ತವರು ಮನೆಗೆ ಬರುತ್ತಾನೆ. ಇವನು ಬಂದದ್ದನ್ನು ಗಮನಿಸಿ ಮನೆ ಬಿಟ್ಟು ಹೋದವಳನ್ನು ಕರೆ ತರಲು ಹೋದರೆ. ‘ಅವನಿಗೆ ಬಸ್ ಛಾರ್ಜ್ ಕೊಟ್ಟು ಕಳಿಸಿ’ ಎಂದವಳನ್ನು ಕಷ್ಟಪಟ್ಟು ಮನೆಗೆ ಕರೆತರುತ್ತಾರೆ. ದೊಡ್ಡತ್ತೆ ಇವಳ ಗಂಡನಿಗೆ ‘ಊರ್ ಮೇಲಿನ ಹೆಣ್ಮಕ್ಳೆಲ್ಲ ಖರ್ಚಾದ್ವ?’ ಎಂದು ಕೇಳಿದರೆ, ಗಂಡ ಬಾಯಿ ತೆರೆಯುವುದಕ್ಕೆ ಮುಂಚೆಯೇ ಅಕ್ಕುವಿನ ಉತ್ತರ ಎಲ್ಲರ ಮೇಲೂ ಅಪ್ಪಳಿಸುತ್ತದೆ. ‘ನಾನೇನ್ ಬಿಟ್ಟಿದ್ನ? ಈ ಊರೊಳ್ಗೆ ಯಾವ ಗಂಡ್ಸನ್ನ ನಾನ್ ಬಿಟ್ಟಿದ್ದೆ ಅಂಬ್ರ್! ಹೇಳೂ ಗಂಡ್ಸ್ ಯೆದ್ರ್ ಬರ್ಲಿ ಕಾಂಬ! ಇಂಥಾ ಕಳ್ಳನನ್ನ ಕಟ್ಟಿಕೊಂಡ್ರೆ ಹೌದಾ ಮತ್ತೆ?’.

ಈ ಮಾತುಗಳನ್ನು ಮಾನಸಿಕ ಅಸ್ವಸ್ಥಳ ಅಸಂಬದ್ಧ ಅತಾರ್ಕಿಕ ಮಾತುಗಳೆಂದು ನೋಡಲು ಸಾಧ್ಯವಿಲ್ಲ ಎನ್ನುವುದು ಒತ್ತಟ್ಟಿಗಿರಲಿ, ಆ ನಿರ್ದಿಷ್ಟ ಸನ್ನಿವೇಶದ ತಾತ್ಕಾಲಿಕ ತುರ್ತನ್ನು ಮೀರಿದ ಆಯಾಮದಲ್ಲಿ ಈ ಮಾತುಗಳು ನಮ್ಮನ್ನು ಆವರಿಸುತ್ತವೆ.

ಕಲ್ಪಾಂತರಗಳಿಂದಲೂ ಹೆಣ್ಣು ತನ್ನೊಳಗೆ ಕೇಳಿಕೊಳ್ಳುತ್ತಿರುವ ಪ್ರಶ್ನೆಯ ಭಾಷಿಕ ಅಭಿವ್ಯಕ್ತಿಯಾಗಿ ಈ ಮಾತುಗಳು ಕೇಳಿಸತೊಡಗುತ್ತವೆ. ಹೆಣ್ಣಿನ ಜೈವಿಕ ಅಗತ್ಯ, ಅದಕ್ಕೆ ಬೇಕಾದ ಅವಕಾಶ ಈ ಪ್ರಶ್ನೆಗಳನ್ನು ಒಳಗೊಳ್ಳುತ್ತಲೇ ಅಕ್ಕುವಿನ ಈ ಮಾತುಗಳು ಹೆಣ್ಣಿನ ನೋವನ್ನು ಇಡಿಯಾಗಿ ಧ್ವನಿಸುತ್ತವೆ. ಈ ಲೋಕದ ಬದುಕಿನಲ್ಲಿ ವ್ಯವಸ್ಥೆಯಲ್ಲಿ ಗಂಡಿಗೆ ತೆರೆದ ದಾರಿಯಾಗಿರುವುದು ಹೆಣ್ಣಿಗೆ ಯಾಕೆ ಮುಚ್ಚಿದ ದಾರಿ ಎನ್ನುವ ಪ್ರಶ್ನೆಯನ್ನು ಅಕ್ಕು ತನಗೆ ತಾನೇ ಹಾಕಿಕೊಳ್ಳುತ್ತಲೇ ಇದರ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಕುತ್ತಿದ್ದಾಳೆ. ಪ್ರಶ್ನೆ ಕೇವಲ ಲೈಂಗಿಕತೆಗೆ ಸಂಬಂಧ ಪಟ್ಟಿದ್ದಲ್ಲವೇ ಅಲ್ಲ.

ಕರಾರು ನಿರ್ಬಂಧಗಳ ಚೌಕಟ್ಟಿನೊಳಗೆ ಹೆಣ್ಣನ್ನು ಮೌಲ್ಯಗಳ ಅಂಟು ಹಾಕಿ ಆಚೀಚೆ ಸರಿಯದಂತೆ ಅಂಟಿಸಿಬಿಡುವ ಅಧಿಕಾರವನ್ನು, ಅದರ ಅಧಿಕೃತತೆಯನ್ನು, ಅದನ್ನು ಒಪ್ಪಿಕೊಂಡು ಬದುಕುತ್ತಿರುವ ಹೆಣ್ಣಿನ ಅಸಹಾಯಕತೆಯ ಮೂಲವನ್ನು ಅಕ್ಕು ಪ್ರಶ್ನಿಸುತ್ತಿದ್ದಾಳೆ. ಎಂದರೆ ಅಕ್ಕುವಿನ ಮೂಲಕ ಎಲ್ಲ ಹೆಣ್ಣುಗಳೂ ಪ್ರಶ್ನಿಸುತ್ತಿರುವುದು ತಮ್ಮ ಸಹಜ ಬದುಕಿನ ಹಕ್ಕನ್ನು, ಗಂಡಿಗಿರುವ, ಹೆಣ್ಣಿಗಿಲ್ಲದಿರುವ ಹಕ್ಕು ಮತ್ತು ಅವಕಾಶಗಳನ್ನು. ತಾನು ಮಾಡಬೇಕೆಂದು ಬಯಸುವ, ಮಾಡಿದರೆ ತಪ್ಪಾಗದ ಲೈಂಗಿಕ ಸಾಹಸಗಳನ್ನು ಮಾಡಿ ಮುಗಿಸಿದ ಭರಾಟೆಯಲ್ಲಿ ಅಕ್ಕು ಯಾಕೆ ಹೇಳುತ್ತಾಳೆಂದರೆ, ಆ ಭಾಷೆ ಮತ್ತು ಧಾಟಿ ಮಾತ್ರ ಎದುರಿಗಿರುವವರಿಗೆ ತನ್ನ ಆಕ್ರೋಶ ಮತ್ತು ನೋವನ್ನು ಹಕ್ಕೊತ್ತಾಯದ ಬಲದಲ್ಲಿ ತಲುಪಿಸುತ್ತದೆ ಎನ್ನುವ ಕಾರಣಕ್ಕೆ. ಯಾವುದು ಗಂಡಿನ ಮಟ್ಟಿಗೆ ಈ ಸಮುದಾಯದಲ್ಲಿ ಒಪ್ಪಿದ, ತೆರೆದ ದಾರಿಯಾಗಿದೆಯೋ ಅದು ಹೆಣ್ಣಿನ ಮಟ್ಟಿಗೆ ಒಳದಾರಿಯಾಗಿ ಇರಲು ಸಾಧ್ಯ ಎನ್ನುವುದನ್ನು ಅಕ್ಕು ಇಲ್ಲಿ ಸೂಚಿಸುತ್ತಿದ್ದಾಳೆ.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿಯೆಂದರೆ, ಅಕ್ಕು ಇಂಥ ನಿರ್ಭಿಡೆಯಲ್ಲಿ, ನಿಸ್ಸಂಕೋಚದಲ್ಲಿ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿರುವುದು ಹುಚ್ಚಿನ ಕವಚದಲ್ಲಿ. ಹಾಗೆಯೇ ಪಿತೃಸಂಸ್ಕೃತಿಯೂ ಅಕ್ಕು ಎತ್ತುವ ಆತ್ಯಂತಿಕ ಮೂಲಭೂತ ಪ್ರಶ್ನೆಗಳನ್ನು ಅದೇ ಹುಚ್ಚಿನ ನೆವದಲ್ಲಿ ತಳ್ಳಿಹಾಕಲು  ಪ್ರಯತ್ನಿಸುತ್ತದೆ. ಆದ್ದರಿಂದಲೇ ಒಂದು ಘಟ್ಟದಲ್ಲಿ ಇದೊಂದು ಸೋಲು ಗೆಲುವುಗಳನ್ನು ಮೀರಿದ ಸಂಕೀರ್ಣ ಸಂಘರ್ಷ ಎನಿಸಿಬಿಡುತ್ತದೆ.

ಇನ್ನೊಂದು ಘಟನೆಯನ್ನು ನೋಡೋಣ. ಅಕ್ಕುವಿನ ಗಂಡ ಸಂಕಪ್ಪಯ್ಯ ಇವಳನ್ನು ಒಲಿಸಿಕೊಂಡು ಮತ್ತೆ ದಾಂಪತ್ಯ ಆರಂಭಿಸುವ ಪ್ರಯತ್ನವನ್ನು ನಡೆಸುತ್ತಾನೆ. ಹುಚ್ಚಿಯಾದ ಇವಳನ್ನು ವಶಪಡಿಸಿಕೊಳ್ಳುವುದು ಸುಲಭ ಎನ್ನುವುದು ಆತನ ನಂಬಿಕೆಯಿರಬೇಕು. ಅಕ್ಕುವಿನ ವಿರೋಧದ ನಡುವೆಯೂ ಅವಳ ಮೇಲೆ ಆಕ್ರಮಣ   ಮಾಡಲು ಮುಂದಾಗುವ ಅವನನ್ನು ಮೊದಲು ನಿವಾರಿಸಿಕೊಳ್ಳಲು ಯತ್ನಿಸುವದು ‘ಥೂ ನಾಯಿ ಜಾತಿಯವ್ನೆ, ತೆವಡ್ಕೋ ಆಚೆ, ನನ್ನ ಮುಟ್ಟಬೇಡ, ನಾ ಬಸ್ರಿ’ ಎನ್ನುವ ಸುಳ್ಳಿನ ಮೂಲಕ. ಅದಕ್ಕೂ ಅವನು ಬಗ್ಗದಿದ್ದಾಗ ಅಕ್ಕು ತೊಟ್ಟಿಲಿನ ಸರಪಣಿಯಿಂದ ಬೀಸಿ ಹೊಡೆದು ತಪ್ಪಿಸಿಕೊಳ್ಳುತ್ತಾಳೆ.

ಮರುದಿನ ದೊಡ್ಡತ್ತೆಯ ಬಳಿ ಈ ಪ್ರಸಂಗವನ್ನು ಅಕ್ಕು ತಾನು ಗೆದ್ದದ್ದು, ತನ್ನ ಬದುಕಿನ ನಿರ್ಣಾಯಕ ಕದನ ಎನ್ನುವ ಭರದಲ್ಲಿ ಬಣ್ಣಿಸುತ್ತಾಳೆ. ಅದು ನಿಜವೂ ಹೌದು. ಯಾಕೆಂದರೆ, ಕೊನೆಗೂ ಇಲ್ಲಿ ಅಕ್ಕು ಸಾಬೀತುಪಡಿಸುತ್ತಿರುವುದು ಹೆಣ್ಣಿಗೆ ತನ್ನ ದೇಹದ ಮೇಲಿರುವ ಮೂಲಭೂತ ಹಕ್ಕನ್ನು. ಮದುವೆ ಎನ್ನುವ ಸಂಸ್ಥೆಯು ಗಂಡಿಗೆ ಕೊಡಮಾಡಿರುವ ಹಕ್ಕು ಮತ್ತು ಸವಲತ್ತು ಎರಡನ್ನೂ ಅಕ್ಕು ಧಿಕ್ಕರಿಸುತ್ತಿದ್ದಾಳೆ, ಆ ಮೂಲಕ ತನ್ನ ಹಕ್ಕನ್ನು ತಾನೇ ಕಟ್ಟಿಕೊಳ್ಳುತ್ತಲೂ ಇದ್ದಾಳೆ. ಮತ್ತೆ ಮತ್ತೆ ನಾವು ಹೇಳುವ ಹೆಣ್ಣಿನ ವ್ಯಕ್ತಿತ್ವದ ರಚನೆಯ ಕ್ರಿಯೆ ಮತ್ತು ಪ್ರಕ್ರಿಯೆಯಲ್ಲಿ ಅಕ್ಕು ತೊಡಗಿಕೊಂಡಿದ್ದಾಳೆ. ಇದನ್ನು ಹುಚ್ಚೆನ್ನೋಣವೆ? ಅರಿವಿನ ಆಸ್ಫೋಟ ಎನ್ನೋಣವೆ?

ಅಕ್ಕುವಿನ ಈ ಕ್ರಿಯೆ ಅವಳ ಸಹಜ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದಲ್ಲ. ಆದರೆ ಅವಳ ಸುತ್ತಲೂ ಇರುವ, ಹೇರಲಾಗಿರುವ ಅಥವಾ ಅಕ್ಕು ತನಗೆ ತಾನೇ ಹೇರಿಕೊಂಡಿರುವ ಈ ಸ್ಥಿತಿಯು ಅವಳಿಗೆ ಬೇಕಾದ ಆವರಣವನ್ನು ಸಲೀಸಾಗಿ ಸೃಷ್ಟಿಸಿಬಿಟ್ಟಿದೆ. ಅಕ್ಕುವನ್ನು ಅಸ್ವಸ್ಥ ಎಂದು ಹೇಳಿ ನಿವಾರಿಸಿಕೊಳ್ಳಲು ಯತ್ನಿಸುವ ಸಮಾಜದ ಅಸ್ವಸ್ಥತೆಯನ್ನು ಅಕ್ಕು ಪದರಗಳ ಸೂಕ್ಷ್ಮತೆಯಲ್ಲಿಯೂ ಆಕೃತಿಯ ಬಂಧದಲ್ಲಿಯೂ ತೋರಿಸಿಕೊಡುತ್ತಾಳೆ.

ಮೂರನೆಯ ಘಟನೆ, ಇವಳನ್ನು ನಿಯಂತ್ರಿಸಲು ಸದಾ ಸನ್ನದ್ಧನಾಗಿರುತ್ತಿದ್ದ ವಾಸು ಚಿಕ್ಕಪ್ಪಯ್ಯನನ್ನು ಇವಳು ಅವನ ನಿಜದಲ್ಲಿ ತೋರಿಸುವುದು. ತಮ್ಮಣ್ಣಯ್ಯನ ಹೆಂಡತಿಯೊಂದಿಗೆ ವಾಸುವಿಗಿರುವ ಸಂಬಂಧವನ್ನು ಬಯಲು ಮಾಡುವ ಮೂಲಕ ವ್ಯವಸ್ಥೆಯ ಇನ್ನೊಂದು ಮಗ್ಗುಲನ್ನೂ ಕಾಣಿಸುತ್ತಾಳೆ. ಗಂಡಿಗೆ ಬೇಕಾಗಿ ಮಾತ್ರ ಹೆಣ್ಣಿಗೆ ಅವಕಾಶಗಳು ತೆರೆಯುವುದನ್ನೂ, ಅಲ್ಲಿಯೂ ಅವನ ಅಧಿಕಾರವೇ ಅಂತಿಮವಾಗುವುದನ್ನೂ ಅಕ್ಕು ಸೂಚಿಸುತ್ತಾಳೆ.

ಇಡೀ ಕಥೆ ಎರಡು ಮಜಲುಗಳಲ್ಲಿ ಕೆಲಸ ಮಾಡುತ್ತದೆ. ಹೆಣ್ಣಿನ ಜಗತ್ತು ಒಂದು ಕಡೆಗಾದರೆ, ಮದುವೆ ಮತ್ತು ದಾಂಪತ್ಯ ಸಂಸ್ಥೆಗಳನ್ನು ತೀವ್ರವಾದ ಪರೀಕ್ಷೆಗೆ ಒಳಗು ಮಾಡುವುದು ಇನ್ನೊಂದು. ಸಿರಿಯತ್ತೆಯ ಮದುವೆಯ ಸಂದರ್ಭದಲ್ಲಿ ಅಕ್ಕು ನಡೆದುಕೊಳ್ಳುವ ರೀತಿ ಇದಕ್ಕೊಂದು ಒಳ್ಳೆಯ ಉದಾಹರಣೆ. ಸಿರಿಯತ್ತೆಯ ಅಲಂಕಾರವನ್ನೆಲ್ಲ ಕಿತ್ತು ಹಾಕಿ ಅಕ್ಕು, ಎಂತಕ್ಕೆ ಇಷ್ಟೆಲ್ಲ ಸಂಭ್ರಮ ಎಂದು ಬೊಬ್ಬಿಡುವುದು, ಮದುವೆ ಎನ್ನುವ ಸಂಸ್ಥೆ ಅನೇಕ ಬಾರಿ ಹೆಣ್ಣುಮಕ್ಕಳಿಗೆ ನೇಣುಗಂಬವಾಗುವ ದುರಂತವನ್ನು ಧ್ವನಿಸುತ್ತದೆ. ಆ ಸಂಸ್ಥೆಯಲ್ಲಿ ಹೆಣ್ಣಿಗೆ ಇರುವ ಅಧೀನ ಸ್ಥಾನವೇ ಅದನ್ನು ಅವಳ ಮಟ್ಟಿಗೆ ಮುಚ್ಚಿದ ಕೋಣೆಯಾಗಿಸಿಬಿಡುತ್ತದೆ. ಒಂದು ಸಣ್ಣಕಥೆಯಲ್ಲಿ ಇಷ್ಟನ್ನೆಲ್ಲ ಹೇಳಲು ಸಾಧ್ಯವಾಗಿದೆ ಎನ್ನುವುದು ವೈದೇಹಿಯವರ ಬರವಣಿಗೆಯ ಶಕ್ತಿ ಮತ್ತು ಸಾಧ್ಯತೆ ಎರಡನ್ನೂ ಸಾಬೀತು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT