ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ನೈತಿಕತೆ ಎಲ್ಲಿ?

Last Updated 16 ಜೂನ್ 2018, 9:09 IST
ಅಕ್ಷರ ಗಾತ್ರ

ಭ್ರಷ್ಟಾಚಾರ ಕುರಿತಾದ ಚರ್ಚೆ ಕಳೆದ ಕೆಲವು ವಾರಗಳಿಂದ ಮತ್ತೆ ತೀವ್ರತೆಯನ್ನು ಗಳಿಸಿಕೊಂಡಿದೆ. ಇದಕ್ಕೆ ಕಾರಣ ಬಿಜೆಪಿಯ  ಮೂವರು ಪ್ರಭಾವಿ ನಾಯಕರು ಗಂಭೀರ ಆರೋಪಗಳನ್ನು ಎದುರಿಸಬೇಕಾಗಿ ಬಂದಿರುವುದು. ಮಧ್ಯಪ್ರದೇಶದ ‘ವ್ಯಾಪಂ’ ಹಗರಣದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ರಾಜಕಾರಣಿಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಜೈಲಿಗೆ ಹೋಗಿದ್ದಾರೆ. ಜೊತೆಗೆ ಇದರಲ್ಲಿ ಭಾಗಿಯಾಗಿರುವ ಕನಿಷ್ಠ 45  ಮಂದಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಬಿಜೆಪಿಯಲ್ಲಿ ನರೇಂದ್ರ ಮೋದಿಯವರ ಬಹುಮುಖ್ಯ ಪ್ರತಿಸ್ಪರ್ಧಿ ಎಂದೇ ಗುರುತಿಸಲಾಗುತ್ತಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣರ ವಿರುದ್ಧವೂ ನೇರವಾಗಿ ಆರೋಪಗಳು ಕೇಳಿಬರುತ್ತಿವೆ. ಇದಲ್ಲದೆ ಲಲಿತ್ ಮೋದಿ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವಿರುದ್ಧ ಎತ್ತಲಾಗಿರುವ ಪ್ರಶ್ನೆಗಳನ್ನು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ‘ನಾವೂ ತಿನ್ನುವುದಿಲ್ಲ, ಇತರರು ತಿನ್ನಲೂ ಬಿಡುವುದಿಲ್ಲ’ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿಯವರಿಗೆ ಇದು ಮೊದಲ ಗಂಭೀರ ರಾಜಕೀಯ ಸವಾಲು.

ವ್ಯಾಪಂ ಹಗರಣ ಕುರಿತಾಗಿ ಸಿಬಿಐ ತನಿಖೆ ತಡವಾಗಿಯಾದರೂ ಸರಿ ಪ್ರಾರಂಭವಾಗಿದೆ. ಕಳೆದ ದಶಕದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಸರಣಿಯಾಗಿ ಎದುರಿಸುತ್ತ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಕ್ರಮಣಕ್ಕಿಳಿಯಲು ಇದು ಮೊದಲ ಅವಕಾಶ. ಹಾಗಾಗಿಯೇ ಸ್ವರಾಜ್ ಮತ್ತು ರಾಜೇ ಇಬ್ಬರೂ ರಾಜೀನಾಮೆ ನೀಡುವ ತನಕ ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಬಿಡೆವು ಎಂದು ಪಣ ತೊಟ್ಟಿದೆ.

ತಮ್ಮ ಪಕ್ಷದ ಹಿರಿಯ ನಾಯಕರ ಮೇಲಿನ ಆರೋಪಗಳ ಕುರಿತಾಗಿ ಪ್ರಧಾನಿಯವರು ಸಾರ್ವಜನಿಕವಾಗಿ ಮಾತನಾಡಿಲ್ಲ. ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಹಾಗೆಂದ ಮಾತ್ರಕ್ಕೆ ಬಿಜೆಪಿಯ ವಕ್ತಾರರು ಮೌನವಾಗೇನೂ ಕುಳಿತಿಲ್ಲ. ತಮ್ಮ ನಾಯಕರ ಮೇಲಿನ ಭ್ರಷ್ಟಾಚಾರದ ಆರೋಪಗಳ ಮೇಲಿನ ಅವರ ಪ್ರತಿಕ್ರಿಯೆ ನಮ್ಮ ಕಾಲದ ಸಾರ್ವಜನಿಕ ನೈತಿಕತೆಗೆ ಕನ್ನಡಿ ಹಿಡಿದಂತಿದೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳೂ ಸೇರಿದಂತೆ ಎಲ್ಲ ವಿರೋಧಪಕ್ಷಗಳ ವಕ್ತಾರರು ಎತ್ತುವ ಪ್ರಶ್ನೆಗಳನ್ನು ಬಿಜೆಪಿ ಸುಲಭವಾಗಿ, ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕುತ್ತಿದೆ. ಅದರ ನಿಲುವು ಸರಳವಾಗಿ ಹೇಳುವುದಾದರೆ ಹೀಗಿದೆ: ಈಗ ಆರೋಪಗಳನ್ನು ಮಾಡುತ್ತಿರುವ ವಿರೋಧಪಕ್ಷದವರು ಶುದ್ಧಚಾರಿತ್ರರಲ್ಲ. ಕಾಂಗ್ರೆಸ್ಸಿಗರಂತೂ ಲಕ್ಷಾಂತರ ಕೋಟಿಗಳ ಹಲವಾರು ಹಗರಣಗಳ ಆರೋಪ ಎದುರಿಸುತ್ತಿರುವವರು ಮತ್ತು ತನಿಖೆಗೊಳಗಾಗಿರುವವರು. ಇಂತಹವರಿಗೆ ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ನೈತಿಕ ಹಕ್ಕಿಲ್ಲ.

ಆದುದರಿಂದಲೇ, ಯಾವುದೇ ಭಾಷೆಯಲ್ಲಿರಲಿ, ಸುದ್ದಿವಾಹಿನಿಗಳಲ್ಲಿನ ಭ್ರಷ್ಟಾಚಾರ ಕುರಿತಾದ ಚರ್ಚೆಗಳು ನಮ್ಮಲ್ಲಿ ಖಿನ್ನತೆಯನ್ನು ಮೂಡಿಸುವಂತೆಯೇ ನಡೆಯುತ್ತಿವೆ. ತಪ್ಪುಗಳನ್ನು ಮಾಡದವರು ಮಾತ್ರ ಇತರರ ತಪ್ಪುಗಳ ಬಗ್ಗೆ ಮಾತನಾಡಬಹುದು ಎಂದರೆ ಎಲ್ಲರೂ ಮೌನವಾಗಿಯೇ ಇರಬೇಕಾಗುತ್ತದೇನೋ! ಈಗ ಭ್ರಷ್ಟಾಚಾರ ಚರ್ಚೆಯ ಸಂದರ್ಭದಲ್ಲಿ ಎಲ್ಲ ಮಾತುಕತೆಗಳನ್ನು ನಿಲ್ಲಿಸಬೇಕಾಗುವ ರೀತಿಯ ನಿಲುವನ್ನು ಬಿಜೆಪಿಯ ವಕ್ತಾರರು ತಳೆಯುತ್ತಿದ್ದಾರೆ. ಈ ಬಗೆಯ ನಿರ್ಲಜ್ಜತೆಯ ಮೇಲೆ ಕೇವಲ ಬಿಜೆಪಿ ಮಾತ್ರ ಏಕಸ್ವಾಮ್ಯ ಹೊಂದಿಲ್ಲ. ಯುಪಿಎ ಸರ್ಕಾರದ ಸಮಯದಲ್ಲಿ ಕಾಂಗ್ರೆಸ್ಸಿಗರು ಈ ಕೆಲಸ ಮಾಡಿದ್ದರು. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ಸಿಗರು ಆಗಾಗ ಈ ವಾದವನ್ನು ಬಿಜೆಪಿ ಮತ್ತು ಜನತಾದಳದ ನಾಯಕರ ಆರೋಪಗಳಿಗೆ ಉತ್ತರವಾಗಿ ನೀಡುವುದನ್ನು ನಾವು ಮೇಲಿಂದ ಮೇಲೆ ನೋಡುತ್ತೇವೆ.

ಆದರೆ, ಈ ‘ಸಾಕು ಸುಮ್ಮನಿರಿ, ನೀವು ಮಾಡಿಲ್ಲದೇ ಇರುವ ಕೆಲಸವನ್ನೇನೂ ನಾವು ಮಾಡುತ್ತಿಲ್ಲ’  ಎಂಬ ವಾದವು ನಾಗರಿಕ ಸಮಾಜ ಪ್ರಶ್ನೆ ಎತ್ತಿದಾಗ ಉತ್ತರವಾಗುವುದು ಸಾಧ್ಯವಿಲ್ಲ.  ಹಾಗಾಗಿಯೇ ಇಂತಹ ಸಂದರ್ಭಗಳಲ್ಲಿ ಎರಡು ಬಗೆಯ ಪ್ರತಿಕ್ರಿಯೆಗಳನ್ನು ನಾವು ಗಮನಿಸಬಹುದು. ಒಂದೆಡೆ ಕಾರ್ಯವಿಧಾನಗಳ ಕುರಿತಾದ ತಾಂತ್ರಿಕ ಚರ್ಚೆಯನ್ನು ಮಾಡುತ್ತ, ಯಾವ ನಿಯಮಗಳೂ ಉಲ್ಲಂಘನೆಯಾಗಿಲ್ಲ ಎಂದು ಸ್ಥಾಪಿಸಲು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವವರು ಹೆಣಗುತ್ತಾರೆ.

ಇದರ ಜೊತೆಗೆ ‘ನಾವೇನೂ ತಪ್ಪೇ ಮಾಡಿಲ್ಲ’ ಎಂಬ ಭಂಡತನದ ಉತ್ತರವನ್ನು ಇತರರಿಗೆ ಮಾತನಾಡಲೂ ಬಿಡದೆ ಕೂಗಿ ಸಾರುತ್ತಾರೆ. ಈ ಬಗೆಯ ಪ್ರತಿಕ್ರಿಯೆಗಳನ್ನು ಸ್ವರಾಜ್, ಚೌಹಾಣ್ ಮತ್ತು ರಾಜೇ ಅವರ ಪರವಾಗಿ ಬಿಜೆಪಿಯ ವಕ್ತಾರರು ಮುಂದಿಡುತ್ತಿದ್ದಾರೆ. ಇದು ಸಹ ಸಾಲದು ಎಂದೆನಿಸಿದಾಗ ಮತ್ತೊಂದು ತಂತ್ರವಾಗಿ ಮಾಧ್ಯಮದ ಪ್ರತಿನಿಧಿಗಳ ಮತ್ತು ಸಾಮಾಜಿಕ ಕಾರ್ಯಕರ್ತರ ಪ್ರಾಮಾಣಿಕತೆ ಹಾಗೂ ಪ್ರೇರಣೆಗಳ ಬಗ್ಗೆಯೇ ಪ್ರಶ್ನೆ ಎತ್ತುವುದೂ ಇದೆ. ಉದಾಹರಣೆಗೆ ಕರ್ನಾಟಕದಲ್ಲಿಯೇ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಎಸ್.ಆರ್.ಹಿರೇಮಠರ ಬಗ್ಗೆ ಮಾಡುವ ಆರೋಪಗಳನ್ನೇ ನೆನಪಿಸಿಕೊಳ್ಳಿ. ಏನೇ ಇರಲಿ. ಈ ಎಲ್ಲ ಪ್ರವೃತ್ತಿಗಳ ಒಟ್ಟು ಪರಿಣಾಮವೆಂದರೆ ಭ್ರಷ್ಟಾಚಾರದ ಮೇಲಿನ ನಮ್ಮ ಎಲ್ಲ ಸಾರ್ವಜನಿಕ ಚರ್ಚೆಗಳು ಶೂನ್ಯಮೊತ್ತದ ಲೆಕ್ಕಾಚಾರವಾಗಿಯೇ (ಜೀರೊಸಮ್ ಗೇಮ್) ಉಳಿಯುತ್ತಿವೆ.

ಈ ಬಗೆಯ ಭಂಡತನದ ಮತ್ತು ನಿರ್ಲಜ್ಜತೆಯ ಪ್ರದರ್ಶನ ನಮ್ಮ ಸಾರ್ವಜನಿಕ ಬದುಕಿನಲ್ಲಿ ನಾವು ಕಳೆದುಕೊಂಡಿರುವ ಸೂಕ್ಷ್ಮತೆ ಮತ್ತು ನೈತಿಕತೆಯ ಸಂಕೇತವಾಗಿದೆ. ಭ್ರಷ್ಟರು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಆದರೆ ನಿಷ್ಕಪಟತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳು ಸಾರ್ವಜನಿಕ ಜೀವನದಲ್ಲಿರುವವರ ಮೂಲಮಂತ್ರಗಳಾಗಬೇಕು ಎನ್ನುವ ನಂಬಿಕೆ ಇಂದು ಇಲ್ಲ ಎನ್ನುವುದು ಸುಸ್ಪಷ್ಟ.

ಹವಾಲ ಹಗರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾಯಿತು ಎಂದೊಡನೆಯೇ ತಮ್ಮ ಲೋಕಸಭಾ ಸ್ಥಾನಕ್ಕೆ 1996ರಲ್ಲಿ ರಾಜೀನಾಮೆ ನೀಡಿದ ಅಡ್ವಾಣಿ ಅವರು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ನಿಷ್ಕಪಟತೆಯನ್ನು ಸ್ಥಾಪಿಸಿದ ನಂತರ ಮಾತ್ರವೇ ತಾನು ರಾಜಕೀಯ ಅಧಿಕಾರದ ಸ್ಥಾನ ಪಡೆಯಬೇಕು, ಜನರ ಪ್ರತಿನಿಧಿಯಾಗಬೇಕು ಎಂಬ ಅಡ್ವಾಣಿಯವರ ನಿಲುವನ್ನು, ಅವರ ರಾಜಕೀಯ ನೈತಿಕತೆಯನ್ನು ಇತರ ಸಂದರ್ಭಗಳಲ್ಲಿ ಪ್ರಶ್ನಿಸುವವರೂ ಕೂಡ ಗೌರವಿಸಬೇಕು. ನಾವಿಂದು ಕಳೆದುಕೊಂಡಿರುವುದು ಅಡ್ವಾಣಿಯವರು ಪ್ರದರ್ಶಿಸಿದ ರೀತಿಯ ವೈಯಕ್ತಿಕ ನಿಷ್ಠುರತೆಯನ್ನು.

ಸುಷ್ಮಾ ಸ್ವರಾಜ್ ಅವರ ಪ್ರಕರಣವನ್ನೇ ಗಮನಿಸಿ. ಅವರ ಪತಿ ಸ್ವರಾಜ್ ಕೌಶಲ್ ಮತ್ತು ಅವರ ಪುತ್ರಿ ಬಾನ್ಸುರಿ ಸ್ವರಾಜ್ ಇಬ್ಬರೂ ಲಲಿತ್ ಮೋದಿಯ ವಕೀಲರು. ಇದು ಹೊಸದಾಗಿ ಆರಂಭವಾಗಿರುವ ವ್ಯಾವಹಾರಿಕ ಸಂಬಂಧವೇನೂ ಅಲ್ಲ. ಸ್ವರಾಜ್ ಕೌಶಲ್ ಇಪ್ಪತ್ತೆರಡು ವರ್ಷಗಳಿಂದ ಮೋದಿಯನ್ನು ಪ್ರತಿನಿಧಿಸುತ್ತಿದ್ದಾರೆ. ಮೋದಿಯ ಅಪರಾಧಗಳೇನೇ ಇದ್ದರೂ ಅವರ ವಕೀಲರಾಗಿರುವುದು ಕಾನೂನಿನ ಪ್ರಕಾರ ಅಥವಾ ನೈತಿಕವಾಗಿ ತಪ್ಪಲ್ಲ. 

ಆದರೆ, ಸುಷ್ಮಾ ಸ್ವರಾಜ್ ಅವರು ಮಂತ್ರಿಯಾಗುತ್ತಿದ್ದಂತೆಯೇ ಅವರ ಕುಟುಂಬವರ್ಗದ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿಯಿರುತ್ತದೆ.  ಅವರ ವೃತ್ತಿಜೀವನದಲ್ಲಿ ಹಿಂದಿನ ಸ್ವಾತಂತ್ರ್ಯ ಇರುವುದಿಲ್ಲ. ಸುಷ್ಮಾ ಅವರು ಸದಸ್ಯರಾಗಿರುವ ಕ್ಯಾಬಿನೆಟ್‌ನ ಮುಂದೆ ಬರಬಹುದಾದ ವಿಚಾರಗಳಲ್ಲಿ ಅವರ ಕುಟುಂಬ ವರ್ಗದವರು ವಕಾಲತ್ತು ಹಾಕಿರಬಾರದು. ಕನಿಷ್ಠಪಕ್ಷ ಸುಷ್ಮಾರ ಇಲಾಖೆಗೆ ಸಂಬಂಧಿಸಿದ ವಿಚಾರಗಳಲ್ಲಾದರೂ ಅವರ ಪತಿ ಮತ್ತು ಪುತ್ರಿ ಮೋದಿಯವರ ವಕೀಲರಾಗಿರಬಾರದಿತ್ತು. ಸುಷ್ಮಾ ಅವರು ಸಹ ತಮ್ಮ ಪತಿ ಇಲ್ಲವೇ ಪುತ್ರಿಯ ಪೂರ್ವ ಅಥವಾ ಇಂದಿನ ಕಕ್ಷಿದಾರರ ವಿಚಾರದಲ್ಲಿ ಕೂಡ ತಮ್ಮ ಇಲಾಖೆಯ ಇತರರು (ರಾಜ್ಯ ಮಂತ್ರಿ ಇಲ್ಲವೇ ವಿದೇಶಾಂಗ ಕಾರ್ಯದರ್ಶಿ) ನಿರ್ಧಾರ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಇಂತಹ ವಿಚಾರಗಳಲ್ಲಿ ಪಶ್ಚಿಮದ ಪ್ರಜಾಪ್ರಭುತ್ವಗಳಲ್ಲಿ ಸ್ಪಷ್ಟವಾದ ನಿಯಮಗಳನ್ನೇ ರೂಪಿಸಿರುತ್ತಾರೆ.

ಅಮೆರಿಕದಲ್ಲಿ ಅಧ್ಯಕ್ಷರು ನೇಮಿಸುವ ಕ್ಯಾಬಿನೆಟ್ ಮಂತ್ರಿಗಳನ್ನು ಅಲ್ಲಿನ ಸೆನೆಟ್ ದೃಢೀಕರಣ ಮಾಡುವ ಸಂಪ್ರದಾಯವಿದೆ. ಅಂತಹ ಸಂದರ್ಭಗಳಲ್ಲಿ ಸೆನೆಟ್‌ನಲ್ಲಿ ಹೀಗೆ ನೇಮಕಗೊಂಡಿರುವವರ ಹಾಗೂ ಅವರ ಕುಟುಂಬ ಸದಸ್ಯರ ವ್ಯಾವಹಾರಿಕ ಸಂಬಂಧಗಳನ್ನು ತನಿಖೆ ಮಾಡುತ್ತಾರೆ. ಉದಾಹರಣೆಗೆ, ಹಿಲರಿ ಕ್ಲಿಂಟನ್ ಅಮೆರಿಕದ ವಿದೇಶಾಂಗ ಸಚಿವರಾಗಿ ನೇಮಕಗೊಂಡಾಗ ಬಿಲ್ ಕ್ಲಿಂಟನ್ ಅವರು  ತಮ್ಮ ಅಧ್ಯಕ್ಷ ಅವಧಿ ಮುಗಿದ ಮೇಲೆ ಹೊಂದಿದ್ದ ಎಲ್ಲ ವ್ಯಾವಹಾರಿಕ ಸಂಬಂಧಗಳನ್ನು ಪರಿಶೀಲಿಸಲಾಯಿತು. ವಿಶೇಷವಾಗಿ ವಿದೇಶಿ ಕಂಪೆನಿಗಳು ಮತ್ತು ಉದ್ಯಮಿಗಳ ಜೊತೆಗೆ ಕ್ಲಿಂಟನ್ ಅವರ ಸಂಬಂಧ ಹಾಗೂ ಅವರು ತಮ್ಮ ಫೌಂಡೇಷನ್‌ಗೆ ಪಡೆದಿದ್ದ ಧನ ಸಹಾಯದ ವಿವರಗಳನ್ನು ತನಿಖೆ ಮಾಡಲಾಯಿತು.

ಯುಪಿಎ ಸರ್ಕಾರದ ಹಗರಣಗಳಿಗೆ ಇಲ್ಲವೇ ‘ವ್ಯಾಪಂ’ಗೆ ಹೋಲಿಸಿದಾಗ ಸುಷ್ಮಾ ಸ್ವರಾಜ್ ಅವರ ಮೇಲಿನ ಆರೋಪಗಳು ಹೆಚ್ಚು ಮುಖ್ಯವಲ್ಲ, ಕೇವಲ ಹಿತಾಸಕ್ತಿಗಳ ಸಂಘರ್ಷದ ಪ್ರಶ್ನೆ ಎನಿಸಬಹುದು. ಆದರೆ ಎರಡು ವಿಭಿನ್ನ ದೃಷ್ಟಿಕೋನಗಳಿಂದ (ಒಂದು ತಾತ್ವಿಕ ಮತ್ತೊಂದು ನೈತಿಕ) ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಸ್ಥಿರತೆಗೆ ನಾವು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು. ತಾತ್ವಿಕವಾಗಿ ನೋಡುವುದಾದರೆ, ಪ್ರಜೆಗಳ ಪ್ರಭುತ್ವದ ಪರಿಕಲ್ಪನೆಯ ಮೂಲ ಅಡಿಪಾಯವಿರುವುದು ಅಧಿಕಾರವನ್ನು ಅನುಮಾನದಿಂದ ನೋಡುವುದರಲ್ಲಿ. ಅಂದರೆ ಅಧಿಕಾರದಲ್ಲಿರುವವರನ್ನು ತಡೆಯುವ ಮತ್ತು ಸಮತೋಲನ ಮಾಡುವ ಕ್ರಿಯೆಗಳ ಮೂಲಕ ನಾವು ನಿಯಂತ್ರಿಸುತ್ತೇವೆ. ಆ ಮೂಲಕವೇ ಅಧಿಕಾರ ಕೇಂದ್ರೀಕೃತವಾಗುವುದನ್ನು, ಸರ್ವಾಧಿಕಾರಿಗಳು ಹುಟ್ಟುವುದನ್ನು ತಡೆಯುತ್ತೇವೆ. ಅದಕ್ಕಾಗಿಯೇ ಸಂವಿಧಾನವನ್ನು ರಚಿಸುವುದು, ನಿಯಮಿತ ಚುನಾವಣೆಗಳನ್ನು ನಡೆಸುವುದು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯನ್ನು ನಡೆಸಲು ಸಾವಿರಾರು ನಿಯಮಗಳನ್ನು ರೂಪಿಸುವುದು.

ಇದರೊಡನೆ ರಾಜಕೀಯ ನೈತಿಕತೆಯ ಪ್ರಶ್ನೆಯೊಂದನ್ನು ಸಹ ನಾವು ಗಮನಿಸಬೇಕಿದೆ. ಹಿತಾಸಕ್ತಿಗಳ ಸಂಘರ್ಷದ (ಕಾನ್‌ಫ್ಲಿಕ್ಟ್ ಆಫ್‌ ಇಂಟರೆಸ್ಟ್) ಪ್ರಶ್ನೆ ನಮ್ಮ ರಾಜಕೀಯ ನೈತಿಕತೆ ಪ್ರಶ್ನೆಯ ಕೇಂದ್ರದಲ್ಲಿರುವುದು. ಸಾರ್ವಜನಿಕ ಜೀವನದಲ್ಲಿ, ಮತ್ತೂ ಹೆಚ್ಚು ನಿರ್ದಿಷ್ಟವಾಗಿ ಚುನಾವಣೆ ರಾಜಕಾರಣದಲ್ಲಿ ಇರಬಯಸುವವರ ಮತ್ತು ಅವರ ಕುಟುಂಬಗಳ ಮೇಲೆ ಯಾವ ಬಗೆಯ ಸ್ವಯಂಪ್ರೇರಿತ ಮಿತಿಗಳಿರಬೇಕು? ಈ ಪ್ರಶ್ನೆಗೆ ಅತ್ಯಂತ ಪ್ರಭಾವಶಾಲಿ ಉತ್ತರ ನೀಡಿದವರು ಮಹಾತ್ಮ ಗಾಂಧಿ. ತಮ್ಮ  ‘ಹಿಂದ್  ಸ್ವರಾಜ್ ’ ಕೃತಿಯ ಕಡೆಯಲ್ಲಿ ಸತ್ಯಾಗ್ರಹಿಯ ಗುಣಗಳ ಬಗ್ಗೆ  ಚರ್ಚಿಸುತ್ತ, ‘ಸ್ವಯಂಪ್ರೇರಿತ ಬಡತನ’ವನ್ನು ನಾಲ್ಕು ಅವಶ್ಯಕ ಗುಣಗಳಲ್ಲೊಂದು ಎಂದು ಗುರುತಿಸುತ್ತಾರೆ.

ಇದು ಕೇವಲ ವಸಾಹತುಶಾಹಿ ವಿರೋಧಿ ಚಳವಳಿಯ ಸಂದರ್ಭದ ಅವಶ್ಯಕತೆ ಮಾತ್ರವಲ್ಲ. ಗಾಂಧೀಜಿ ಪ್ರಕಾರ,  ಎಲ್ಲ ಕಾಲದಲ್ಲೂ ಸಾರ್ವಜನಿಕ ಜೀವನದಲ್ಲಿ ಇರಬಯಸುವವರು ಹೊಂದಿರಬೇಕಾದ ಗುಣ. ‘ರಾಜಕಾರಣಿಗಳ ಮಕ್ಕಳು ವ್ಯವಹಾರ ಮಾಡಬಾರದೆ’ ಎಂದು ಬಿಡುಬೀಸಾಗಿ ಕೇಳುವ ಇಂದಿನ ದಿನಗಳಲ್ಲೂ ಗಾಂಧಿ ಅವರೊಡನೆ ನಿಂತು  ‘ಇಲ್ಲ, ಮಾಡಕೂಡದು’ ಎಂದು ಹೇಳಬೇಕಾದ ಅನಿವಾರ್ಯ ನಮ್ಮ ಮುಂದಿದೆ. ಇದು ಪ್ರಜಾಪ್ರಭುತ್ವದ ಉಳಿವಿಗೆ ನಾವು ಪುನಃ ಪ್ರತಿಷ್ಠಾಪಿಸಬೇಕಿರುವ ನೈತಿಕ ಮೌಲ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT