ಕಲೆಯು ಸಮಾಜವನ್ನು ಬದಲು ಮಾಡಬಲ್ಲುದೆ? ಒಂದು ನಾಟಕ, ಒಂದು ಗೀತೆ ಅಥವಾ ಒಂದು ಚಿತ್ರವು ಆಮೂಲಾಗ್ರ ಸಾಮಾಜಿಕ ಬದಲಾವಣೆ ತರಬಲ್ಲುದೆ? ಇಲ್ಲವೆಂದು ನಿರ್ಧರಿಸಿಬಿಟ್ಟಿದೆ ಇಂದಿನ ದಿನಮಾನ. ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಮನರಂಜನೆಯ ಸ್ಥಾನಕ್ಕೆ ಇಳಿಸಿ ಕೂರಿಸಿದೆ. ಗಾಢ ಅಪನಂಬಿಕೆಯ ದಿನಮಾನಗಳಿವು.

ಹೀಗೇಕಿರಬಹುದು ಎಂದು ನೀವೆಂದಾದರೂ ಯೋಚಿಸಿದ್ದೀರಾ ಅಥವಾ ಯಾವಾಗಲೂ ಹೀಗೆಯೇ ಇತ್ತೆ? ಇಲ್ಲ. ಹಿಂದೆ ಒಂದು ಕಾಲದಲ್ಲಿ ಕಲೆಯಿಂದ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯವಿತ್ತು. ಬೃಹತ್ ಸೈನ್ಯಗಳು ಸಾಧಿಸಲಾಗದ್ದನ್ನು ಯಃಕಶ್ಚಿತ್ ಕಲಾವಿದರು ಸಾಧಿಸಿ ತೋರಿಸಿದ್ದರು. ಕತ್ತಿ ಬಳಸದಲೇ ಕಾಂಚಾಣ ಝಣ ಝಣಿಸದಲೇ ಕಲೆಯ ಮೂಲಕ ಸಾಮಾಜಿಕ ಒಳಿತನ್ನು ಸಾಧಿಸಿದ್ದರು. ಭಾರತೀಯ ಸಂದರ್ಭದಲ್ಲಿ ಅಂತಹ ಯುಗವನ್ನು ‘ಭಕ್ತಿಯುಗ’ ಎಂದು ಕರೆಯಲಾಗುತ್ತದೆ. ಇದೇ ಯುಗವನ್ನು ‘ಮೌಢ್ಯದ ಯುಗ’, ‘ಮಧ್ಯಮ ಯುಗ’, ‘ ಕತ್ತಲ ಯುಗ’ ಎಂದೆಲ್ಲಾ ಆಧುನಿಕ ಚರಿತ್ರೆಯು ಕರೆದಿದೆ. ಅದೇನೇ ಇರಲಿ, ‘ಭಕ್ತಿ ಯುಗ’ದಲ್ಲಿ ಮಹಾನ್ ಸಾಮಾಜಿಕ ಕ್ರಾಂತಿಗಳಾದವು. ಸಾಮಾನ್ಯವಾಗಿ ಮೂಢರೆಂದು ಪರಿಗಣಿತರಾಗುವ ಗ್ರಾಮೀಣ ಜನರೇ ಸಾಮಾಜಿಕ ಕ್ರಾಂತಿ ನಡೆಸಿದರು. ಈ ಕ್ರಾಂತಿಯ ಮತ್ತೊಂದು ವಿಶೇಷವೆಂದರೆ ಅವರೆಲ್ಲರೂ ಕವಿಗಳು, ಕಲಾವಿದರು, ನಟರು ಕೂಡಾ ಆಗಿರುತ್ತಿದ್ದರು.

ಯಾರು ಈ ಕಲಾವಿದರು? ಕಬೀರದಾಸ, ರವಿದಾಸ, ಅಲ್ಲಮ, ಪುರಂದರ ಇತ್ಯಾದಿಗಳು. ಹಾಡಿಯೇ ಇವರೆಲ್ಲರೂ ಸಮಾಜದಲ್ಲಿ ಬದಲಾವಣೆ ತಂದರು. ಶೂನ್ಯ ಸಿಂಹಾಸನದ ಮೇಲೆ ಕುಳಿತೇ ರತ್ನಖಚಿತ ಸಿಂಹಾಸನಗಳನ್ನು ಅಲುಗಾಡಿಸಿದರು. ಆದರೆ ಇಂದು ಇವರನ್ನು ಕಲಾವಿದರು ಎಂದು ಕರೆಯಲಾಗುತ್ತಿಲ್ಲ. ಸಂತರು, ದೇವದೂತರು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದೆ. ಇವರನ್ನು ಶುದ್ಧ ಸಂತರನ್ನಾಗಿಸಿರುವುದು ಕೂಡಾ ಒಂದು ರಾಜಕೀಯ. ಇರಲಿ. ಕಬೀರದಾಸ, ರವಿದಾಸ, ಅಲ್ಲಮ, ಪುರಂದರರನ್ನು ಯಃಕಶ್ಚಿತ್ ಕಲಾವಿದರು ಎಂದು ನಾನು ಬೇಕೆಂದೇ ಕರೆದೆ. ಏಕೆಂದರೆ ಯಃಕಶ್ಚಿತ್ತತನವೇ ಅವರ ಲಾಂಛನವಾಗಿತ್ತು. ಅರಿವಿನಿಂದ ತಮ್ಮನ್ನು ತಾವು ಯಃಕಶ್ಚಿತ್‌ಗೊಳಿಸಿಕೊಂಡಿದ್ದರು ಅವರು. ಇಲ್ಲವೇ ತಮ್ಮ ಜೀವನ ನಿರ್ವಹಣೆಗಾಗಿ ಕುಶಲಕರ್ಮಿ ಆಗಿರುತ್ತಿದ್ದರು. ಇಲ್ಲವೇ ಭಿಕ್ಷಾಟನೆ ಮಾಡುತ್ತಿದ್ದರು.

ಹಾಗಂತ, ಹಿಂದಿನ ಯುಗಗಳೆಲ್ಲ ಹೀಗೆಯೇ ಇರಲಿಲ್ಲ. ಇದು ನಾವು ಗಮನಿಸಬೇಕಾದ ಬಹು ಮುಖ್ಯ ಸಂಗತಿಯಾಗಿದೆ. ಉದಾಹರಣೆಗೆ ಬಲಪಂಥೀಯರು, ಇಂದು ಸಂಭ್ರಮಿಸುತ್ತಿರುವ ಅಭಿಜಾತ ಯುಗ ಹೀಗಿರಲಿಲ್ಲ. ಕಾಳಿದಾಸ, ಭೋಜರಾಜ, ಪಂಪ ಮುಂತಾದವರು ಆಸ್ಥಾನ ಕವಿಗಳಾಗಿರುತ್ತಿದ್ದರು ಇಲ್ಲವೇ ತಾವೇ ರಾಜರಾಗಿರುತ್ತಿದ್ದರು. ಅಭಿಜಾತವೆಂಬುದು ಆಳುವ ಸಂಸ್ಕೃತಿಯೇ ಹೊರತು ವಿರೋಧಿ ಸಂಸ್ಕೃತಿಯಲ್ಲ. ಕಾಳಿದಾಸನು ಮಹಾನ್ ಪ್ರತಿಭೆ ಹೌದಾದರೂ ಸಾಮಾಜಿಕ ಬದಲಾವಣೆಯ ಪ್ರಯತ್ನವನ್ನು ಮಾಡಲಿಲ್ಲ. ಈ ಮಾತನ್ನು ಅಭಿಜಾತವನ್ನು ಹೀಗಳೆಯಲಿಕ್ಕೆ ಹೇಳುತ್ತಿಲ್ಲ ನಾನು. ಕಾಳಿದಾಸನ ಪ್ರತಿಭೆಯನ್ನು ಹೀಗಳೆದರೆ ನನ್ನ ಉಗುಳು ನನ್ನ ಮೇಲೆಯೇ ಬಿದ್ದೀತು. ಬಹು ಮುಖ್ಯವಾದ ಹಾಗೂ ಈವರೆಗೆ ಕಡೆಗಣಿತವಾಗಿದ್ದ ಒಂದು ಸಾಮಾಜಿಕ ಸಂಗತಿಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಅಷ್ಟೆ.

ಇಂದಿನ ಯಂತ್ರನಾಗರಿಕ ಯುಗವು ಅಭಿಜಾತ ಯುಗದ ಒಂದು ಅಣಕವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ನಿಯೊ-ಕ್ಲಾಸಿಕಲ್ ಚಾಳಿ ಎಂದು ಗುರುತಿಸಲಾಗುತ್ತದೆ. ಕನ್ನಡದಲ್ಲಿ ಇದೇ ಚಾಳಿಯನ್ನು ನವ-ಅಭಿಜಾತ ಚಾಳಿ ಎಂದು ಕರೆಯಬಹುದಾಗಿದೆ. ಈ ಚಾಳಿ ಇರುವ ಹೆಚ್ಚಿನ ಕಲಾವಿದ– ಸಾಹಿತಿಗಳು ಸರ್ಕಾರಿ ಕಲಾವಿದರಾಗಿರುತ್ತಾರೆ ಇಲ್ಲವೇ ಮಾರುಕಟ್ಟೆಯ ದಾಸರಾಗಿರುತ್ತಾರೆ. ಮೂಲತಃ ಇದು ಅವರ ಜೀವನಶೈಲಿಯ ಪ್ರಶ್ನೆಯಾಗಿದೆ. ಹೌದು ಜೀವನಶೈಲಿಯ ಪ್ರಶ್ನೆ. ಯಾವುದನ್ನು ಸೌಂದರ್ಯ ಮೀಮಾಂಸೆಯ ಉದ್ಧಾಮ ಪ್ರಶ್ನೆಯೆಂದು ತಿಳಿದು ಈವರೆಗೆ ನಾವು ತಲೆಘಟ್ಟಿಸಿಕೊಳ್ಳುತ್ತಿದ್ದೆವೋ ಅದು ಸರಳ ಜೀವನಶೈಲಿಯ ಪ್ರಶ್ನೆಯೇ ಹೌದು. ಬದ್ಧತೆಯ ಪ್ರಶ್ನೆ ಕೂಡಾ ಹೌದು ಇದು. ಆದರೆ ಬದ್ಧತೆಯು ತತ್ವಕ್ಕಿಂತ ಮಿಗಿಲಾಗಿ ಸರಳ ಬದುಕಿಗೆ ಸಲ್ಲುತ್ತದೆ. ಕಬೀರ, ರವಿದಾಸ, ಅಲ್ಲಮ ಹಾಗೂ ಪುರಂದರರು ಮೂಲತಃ ಭಕ್ತರು, ಮೂಲತಃ ನಂಬಿಕಸ್ತರು. ನಂಬಿಕಾರ್ಹವಾದದ್ದು ಜೀವನಶೈಲಿ ಮಾತ್ರ.

ನಾವೀಗ ಚರ್ಚಿಸುತ್ತಿರುವ ಈ ಪ್ರಶ್ನೆ ಹೊಸತೇನಲ್ಲ ಅಥವಾ ಹಳತೂ ಅಲ್ಲ. ಆಧುನಿಕ ಯುಗದಲ್ಲಿ ಹಲವರು ಹಲವು ಬಾರಿ ಈ ಪ್ರಶ್ನೆಯನ್ನು ಎತ್ತಿ ಚರ್ಚಿಸಿದ್ದಾರೆ. ಉದಾಹರಣೆಗೆ ಟಾಲ್‍ಸ್ಟಾಯ್ ಮಹಾಶಯ ಷೇಕ್ಸ್‌ಪಿಯರ್ ಮಹಾಕವಿಯನ್ನು ತಿರಸ್ಕರಿಸಿದ್ದ. ಏಕೆ ತಿರಸ್ಕರಿಸಿದ್ದ? ಆತ ತಿರಸ್ಕರಿಸಿದ್ದು ಷೇಕ್ಸ್‌ಪಿಯರ್‌ನ ಅಗಾಧ ಪ್ರತಿಭೆಯನ್ನಲ್ಲ, ತನ್ನ ನಾಟಕಗಳಲ್ಲಿ ಷೇಕ್ಸ್‌ಪಿಯರ್ ವಿಜೃಂಭಿಸುತ್ತಿದ್ದ ನೈತಿಕ ದ್ವಂದ್ವವನ್ನು. ಷೇಕ್ಸ್‌ಪಿಯರ್ ಆಸ್ಥಾನ ನಾಟಕಕಾರನಾಗಿರಲಿಲ್ಲ ನಿಜ, ಆದರೆ ಆಸ್ಥಾನಗಳ ವಿಪರೀತ ಚಟವಿದ್ದ ನಾಟಕಕಾರನಾಗಿದ್ದ ಎಂಬ ಸಂಗತಿ ಇಲ್ಲಿ ಉಲ್ಲೇಖಾರ್ಹ.

ಷೇಕ್ಸ್‌ಪಿಯರ್ ಒಂದರ್ಥದಲ್ಲಿ ಜಗತ್ತಿನ ಮೊದಲ ಆಧುನಿಕ ಲೇಖಕ. ಆತನ ‘ಹ್ಯಾಮ್ಲೆಟ್’ ಪಾತ್ರ ಆಧುನಿಕತೆಯ ದ್ವಂದ್ವವನ್ನು ಭಟ್ಟಿ ಇಳಿಸಿದಂತಹ ಪಾತ್ರ. ‘ಇರಲೆ ಇಲ್ಲದಿರಲೆ’ ಎಂದು ತೊಳಲಾಡುವ ಹಾಗೂ ತೊಳಲಾಡುತ್ತ ತೊಳಲಾಡುತ್ತಲೇ ಜೀವನವನ್ನು ಕ್ಷಯಿಸಿಬಿಡುವ - ತನ್ನೊಟ್ಟಿಗೆ ಬದುಕಿದ ಇತರೆ ಅನೇಕ ಪ್ರೀತಿಪಾತ್ರರ ಜೀವನವನ್ನೂ ತೊಳಲಾಟದ ಕಾರಣಕ್ಕಾಗಿ ಕ್ಷಯಿಸಿಬಿಡುವ ಹ್ಯಾಮ್ಲೆಟ್, ನಂತರದಲ್ಲಿ ಬಂದ ಆಧುನಿಕ ಯುಗಕ್ಕೆ ಒಂದು ಆಕರ್ಷಕ ಮಾದರಿಯಾದ ಎಂಬುದು ಕೂಡಾ ಉಲ್ಲೇಖಾರ್ಹ.

ಷೇಕ್ಸ್‌ಪಿಯರ್‌ನನ್ನು ಭಾರತಕ್ಕೆ ತಂದದ್ದು ವಸಾಹತುಶಾಹಿಗಳು. ವಸಾಹತುಶಾಹಿ ಬ್ರಿಟಿಷರ ಮೂಲಕ ಬಂದ ಇಂಗ್ಲಿಷ್ ಭಾಷೆ, ಇಂಗ್ಲಿಷ್ ಸಂಸ್ಕೃತಿ, ಇಂಗ್ಲಿಷ್ ಜೀವನಶೈಲಿ ಹಾಗೂ ಇಂಗ್ಲಿಷ್ ಮಾರುಕಟ್ಟೆಗಳ ಜೊತೆ ಈತನೂ ಬಂದ ಭಾರತಕ್ಕೆ. ಇಂಗ್ಲಿಷ್‌ಗೆ ಮಾರುಹೋದ ಭಾರತದ ಆಧುನಿಕ ಮಧ್ಯಮವರ್ಗ ಕಬೀರ, ರವಿದಾಸ, ಅಲ್ಲಮ ಹಾಗೂ ಪುರಂದರರನ್ನು ಮರೆತದ್ದು ಹಾಗೂ ಷೇಕ್ಸ್‌ಪಿಯರ್‌ನನ್ನು ತಲೆಯ ಮೇಲೆ ಹೊತ್ತು ತಿರುಗಿದ್ದು ಕೇವಲ ಕಾಕತಾಳೀಯವಾಗಿರಲಿಲ್ಲ. ಪ್ರತಿಯೊಬ್ಬ ಗುಲಾಮನಿಗೆ ತಾನು ಗುಲಾಮನಲ್ಲ ಎಂದು ತೋರಿಸಿಕೊಳ್ಳುವ ಅಗತ್ಯವಿರುತ್ತದೆ. ಬಂಡಾಯ ಹೂಡುವ ಅಗತ್ಯವಿರುತ್ತದೆ. ಹುಸಿ ಬಂಡಾಯಗಾರರು ನಾವು ಆಧುನಿಕರು. ಚೀನಿ ಭಾಷೆಯ ಮಹಾನ್ ಲೇಖಕ ಲೂಷುನ್‌ನ ಅಹ್-ಕ್ಯೂ ಎಂಬ ಚಿರಸ್ಮರಣೀಯ ಪಾತ್ರವು ಇಲ್ಲಿ ನೆನಪಿಗೆ ಬರುತ್ತಿದೆ ನನಗೆ. ಅಹ್-ಕ್ಯೂ ವಿನಾಕಾರಣ ಸಿಕ್ಕಿಹಾಕಿಕೊಳ್ಳುವ, ಜುಟ್ಟು ಕಳಚುವ ಹುಸಿ ಬಂಡಾಯದ ದುರಂತ ನೆನಪಿಗೆ ಬರುತ್ತಿದೆ ನನಗೆ. ಕನ್ನಡದ ನವ್ಯ ಪಂಥವನ್ನು ರೂಪಿಸಿತು ಆಧುನಿಕತೆ. ಇದರ ಕೇಂದ್ರ ತತ್ವವಾದರೂ ಏನು? ನವ್ಯ ನಂಬುತ್ತದೆ; ಜಗತ್ತನ್ನು ಬದಲಾಯಿಸುವುದು ನನ್ನ ಕೆಲಸವಲ್ಲ, ಜಗತ್ತನ್ನು ಚಿತ್ರಿಸುವುದಷ್ಟೇ ನನ್ನ ಕೆಲಸ ಎಂದು. ನವ್ಯರ ಈ ವಾದಕ್ಕೆ ಬುನಾದಿ ಒದಗಿಸಿದ ಷೇಕ್ಸ್‌ಪಿಯರ್.

ಕಬೀರ, ರವಿದಾಸ, ಅಲ್ಲಮ ಹಾಗೂ ಪುರಂದರರು ದೇವರನ್ನು ಸಾಕ್ಷಾತ್ಕರಿಸಿಕೊಂಡಿದ್ದ ಸಂತರಾಗಿದ್ದರು ಎಂಬ ಸಂಗತಿಯನ್ನು ಕೂಡಾ ಅಲ್ಲಗಳೆಯುತ್ತಿಲ್ಲ ನಾನು. ಕಲಾವಿದನೇ ಸಂತನಾಗಬಲ್ಲ, ಸಂತನಾಗಬೇಕು ಎಂಬುದಷ್ಟೇ ನನ್ನ ಪ್ರತಿಪಾದನೆಯಾಗಿದೆ. ಶುದ್ಧ ಆರ್ಥಿಕತೆ ಪ್ರತಿಪಾದಿಸುತ್ತಿರುವ ಶುದ್ಧ ದೇವರು ಅಶುದ್ಧ ಪ್ರತಿಪಾದನೆಯಾಗಿದೆ.

ಪರಿಶುದ್ಧ ದೇವರು ಎಂದರೇನು? ಸಾಮಾಜಿಕ ಸಂಬಂಧವಿರದ ದೇವರು ಎಂದು ತಾನೆ? ಅಂತಹದ್ದೊಂದು ದೇವರೇ ಇಲ್ಲ ಎನ್ನುತ್ತೇನೆ ನಾನು. ಒಂದೊಮ್ಮೆ ಇದ್ದದ್ದೇ ಆದರೆ ಅಂತಹ ದೇವರು ಶ್ರೀಮಂತರ ರತ್ನಖಚಿತ ಮನೆಗಳಲ್ಲಿ ಬಂಧಿತನಾಗಿರುವ ಕ್ಷುದ್ರಜೀವಿ ಮಾತ್ರ ಎಂದೆನ್ನುತ್ತೇನೆ ನಾನು ಅಥವಾ ಸಿಟಿಮಾರ್ಕೆಟ್ಟಿನ ಮೋರಿಯ ಬದಿಯ ಕಸದಲ್ಲಿ ಮಾರಾಟವಾಗುತ್ತಿರುವ ಪ್ಲಾಸ್ಟಿಕ್ಕಿನ ಪಟಗಳು ಮಾತ್ರ ಎಂದೆನ್ನುತ್ತೇನೆ ನಾನು.

ದೇವರ ಬಗೆಗೆ ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಕಬೀರ, ರವಿದಾಸ, ಅಲ್ಲಮ, ಪುರಂದರರಿಗೆ ನಮಿಸಿದರೆ ಸಾಕು; ಅವರಿಗೊಲಿದಿರುವ ದೇವರು ನಮ್ಮ ಮಡಿಲಿಗೂ ಸುಲಭವಾಗಿ ಜಾರಿಬಿಡುತ್ತಾನೆ ಎಂಬುದು ಅಂತಹ ಒಂದು ತಪ್ಪುಕಲ್ಪನೆ. ದೇವರು ಸುಲಭದಲ್ಲಿ ಯಾರದ್ದೇ ಮಡಿಲಿಗೂ ಜಾರಲಾರ. ಏಕೆಂದರೆ ಎಲ್ಲ ದೇವರೂ ಶ್ರಮದ ದೇವರು ಮಾತ್ರ, ಪರಿಶ್ರಮದ ದೇವರು. ನಾವು ಸುಲಭ ಜೀವಿಗಳು. ದೇವರೂ ಸೇರಿದಂತೆ ಎಲ್ಲವನ್ನೂ ಸುಲಭಗೊಳಿಸಿಕೊಂಡಿದ್ದೇವೆ, ಎಲ್ಲವನ್ನೂ ಪ್ರತ್ಯೇಕಿಸಿಕೊಂಡಿದ್ದೇವೆ. ಗೀತೆಯನ್ನು ಭಕ್ತಿಗೀತೆ ಹಾಗೂ ಮನರಂಜನೆ ಎಂದು ಒಡೆದುಕೊಂಡಿದ್ದೇವೆ. ಚಿತ್ರಗಳನ್ನು ದೇವರಚಿತ್ರ ಹಾಗೂ ಹೆಂಗಸಿನ ಬತ್ತಲಿನ ಚಿತ್ರ ಎಂದು ಒಡೆದುಕೊಂಡಿದ್ದೇವೆ. ನಾಟಕವನ್ನೇ ತೆಗೆದುಕೊಳ್ಳಿ. ಕಬ್ಬಿನ ಜಲ್ಲೆಯಂತೆ ಯಂತ್ರದ ಗಾಣಕ್ಕೆ ಸಿಕ್ಕಿಸಿ ಅರೆದು ಸಿನಿಮಾ, ಸೀರಿಯಲ್ಲು, ಇಂಟರ್‍ನೆಟ್ಟು ಇತ್ಯಾದಿ ಸಿಹಿ ಮನರಂಜನೆಯನ್ನಾಗಿಸಿ ಕೊಂಡಿದ್ದೇವೆ.

ಜನಪ್ರಿಯ ಕಲೆಗಳಲ್ಲಿ ಅಷ್ಟಿಷ್ಟು ಸಾಮಾಜಿಕ ಬದ್ಧತೆ ಉಳಿದಿದೆ ನಿಜ. ದುರಂತವೆಂದರೆ, ಅದು, ಕೇವಲ ಮೆಸೇಜುಗಳಾಗಿ ಉಳಿದುಕೊಂಡಿದೆ, ಅರೆಸತ್ತ ಸಾಮಾಜಿಕ ಮೆಸೇಜುಗಳು. ಮೆಸೇಜುಗಳದ್ದೇ ಹಾವಳಿ ಜನಪ್ರಿಯ ಕಲೆಗಳಲ್ಲಿ. ಇಡೀ ಚಿತ್ರದ ತುಂಬ ರಕ್ತ ಹರಿಸಿ ಹೆಣ್ಣನ್ನು ಪೋರ್ನಾಗ್ರಫಿ ಸರಕನ್ನಾಗಿಸಿ, ಮಾಡಬಾರದ್ದನ್ನೆಲ್ಲ ಮಾಡಿಸಿ, ಆಡಬಾರದ್ದನ್ನೆಲ್ಲ ಆಡಿಸಿ, ಹಸಿ ಹಸಿ ಹಿಂಸೆ ಹಸಿ ಹಸಿ ಕಾಮಗಳನ್ನು ವಾಸ್ತವಿಕವಾಗಿ ಚಿತ್ರಿಸಿ, ಮತ್ತೆ ಮತ್ತೆ ತೋರಿಸಿ, ಕೊನೆಗೊಮ್ಮೆ ಒರೆಸುವ ಕೊಳೆ ಬಟ್ಟೆಯಂತೆ ಎಸೆಯಲಾಗಿರುತ್ತದೆ ಮೆಸೇಜನ್ನು ಅಲ್ಲಿ.

ಇತ್ತ ಆಧುನಿಕ ಕಲೆಗಳಾದರೋ ಮಡಿವಂತಿಕೆಯ ಪರಮಾವಧಿ! ತನಗೂ ಮೆಸೇಜಿಗೂ ಸಂಬಂಧವೇ ಇಲ್ಲ, ಮುಟ್ಟಿದರೆ ಮೈಲಿಗೆಯಾಗುತ್ತೇನೆ ಎಂದು ಹೌಹಾರಿ ಬೀಳುತ್ತವೆ ಅವು. ಮಾತ್ರವಲ್ಲ, ಇವೂ ವಾಸ್ತವಿಕ ಶೈಲಿಗೆ ಬಲಿ ಬಿದ್ದಿವೆ. ವಾಸ್ತವಿಕ ನರಳಾಟ, ವಾಸ್ತವಿಕ ಹತಾಶೆ, ವಾಸ್ತವಿಕ ಒಂಟಿತನಗಳ ಚಿತ್ರಣವಾಗಿದೆ ಹೆಚ್ಚಿನ ಆಧುನಿಕ ಕಲೆಗಳು.

ತುಂಬ ಉದ್ದುದ್ದ ಮಾತನಾಡಿದೆ. ಕಾರಣವಿದೆ. ಬದಲಾವಣೆಯ ಗಾಳಿ ಬೀಸತೊಡಗಿದೆ. ಮುಂದಿನ ದಿನಮಾನಗಳು ಸಾಂಸ್ಕೃತಿಕ ಹೋರಾಟಗಳ ದಿನಮಾನಗಳಾಗಲಿವೆ. ರಾಜಕಾರಣವೂ ಸೇರಿದಂತೆ ಬೃಹತ್ತಾದ ಎಲ್ಲವನ್ನೂ ತಿರಸ್ಕರಿಸುವ ಗುಬ್ಬಿ ದನಿಗಳು ಮುಂದಿನ ದಿನಮಾನಗಳಲ್ಲಿ ಕೇಳಿಬರಲಿವೆ. ದೇವರು ಮತ್ತೊಮ್ಮೆ ದೈಹಿಕ ದುಡಿಮೆಯ ರೂಪದಲ್ಲಿ ಜನುಮ ತಾಳಲಿದ್ದಾನೆ.

ಹೀಗೆಲ್ಲ ಮಾತನಾಡುತ್ತಿರುವ ಈತನಿಗೆ ಹುಚ್ಚು ಹಿಡಿದಿದೆ ಎಂದು ನಿಮಗನ್ನಿಸುತ್ತಿರಬಹುದು. ಶ್ರೀಮಂತರು ಹಾಗೂ ಬಡವರ ನಡುವಣ ಆರ್ಥಿಕ ಅಸಮಾನತೆಯು ಮುಗಿಲು ಮುಟ್ಟಿರುವಾಗ ಹಸಿದವರ ಸಂಖ್ಯೆ ಹಿಂದೆಂದಿಗಿಂತಲೂ ಮಿಗಿಲಾಗಿರುವಾಗ, ನಿರುದ್ಯೋಗಿಗಳ ಸಂಖ್ಯೆ ಹಿಂದೆಂದಿಗಿಂತಲೂ ಮಿಗಿಲಾಗಿರುವಾಗ, ತಂತ್ರಜ್ಞಾನವು ಮಂಗಳಗ್ರಹದಲ್ಲಿ ಮಾನವಕಾಲನಿ ನಿರ್ಮಿಸಲು ಚಡಪಡಿಸುತ್ತಿರುವಾಗ ಇದು ಹೇಗೆ ಸಾಧ್ಯ ಎಂದು ಅನ್ನಿಸುತ್ತಿರಬಹುದು. ಸಾಧ್ಯವಿದೆ! ಪಟ್ಟಿ ಮಾಡಿದ ಅತಿರೇಕಗಳ ಕಾರಣಕ್ಕಾಗಿಯೇ ಸಾಧ್ಯವಿದೆ.

ರಾಜಕಾರಣ ಮುಂದೆಯೂ ಇರುತ್ತದೆ. ಆದರೆ ಶ್ರೀಮಂತಿಕೆಯನ್ನು ಕಳಚುವ ರಾಜಕಾರಣವಾಗಿರುತ್ತದೆ ಅದು. ಮಿತಿಮೀರಿದ ತಂತ್ರಜ್ಞಾನವನ್ನು ಕಳಚುವ ರಾಜಕಾರಣವಾಗಿರುತ್ತದೆ ಅದು. ಗಲೀಜು ವಸ್ತ್ರವನ್ನು ಕಳಚೊಗೆಯುವಂತೆ ಶ್ರೀಮಂತರು ಶ್ರೀಮಂತಿಕೆಯನ್ನು ಕಳಚೊಗೆಯಲಿದ್ದಾರೆ. ಒಂದೊಮ್ಮೆ ಕಳಚದೆ ಹೋದರೆ ಗಲೀಜೆಂಬುದು ಅವರ ಮೈಗಂಟಿಕೊಂಡು ಹೊತ್ತಿ ಉರಿಯಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಲೆಯು ದೇವರಿಗೆ ಹೊಸ ರೂಪು ಕೊಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.