ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮರ ಸಮಾಚಾರ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಕಷ್ಟಪಟ್ಟು ನಿವೇಶನವನ್ನೇನೋ ಖರೀದಿಸಿದ್ದಾಯ್ತು. ಈಗ ಮನೆ ಕಟ್ಟಿಸಬೇಕು ಎಂದು ಕನಸು ಕಾಣುತ್ತಿರುವಿರಾ? ಎಲ್ಲದಕ್ಕೂ ಮುನ್ನ ಬಾಗಿಲು, ಕಿಟಕಿಗಳಿಗೆ ಅಗತ್ಯವಾದ ಮರದ ಸಾಮಗ್ರಿ ಖರೀದಿಸುವ ಬಗ್ಗೆ ಆಲೋಚಿಸಿ.

ಮೊದಲು ಒಬ್ಬ ನುರಿತ ಸಿವಿಲ್ ಎಂಜಿನಿಯರ್ ಅಥವಾ ಆರ್ಕಿಟೆಕ್ಟ್‌ನಿಂದ ನಿಮ್ಮ `ಕನಸಿನ ಮನೆ~ಯ ನೀಲನಕ್ಷೆ ಸಿದ್ಧಪಡಿಸಿಟ್ಟುಕೊ. ಮನೆಯಲ್ಲಿ ಎಷ್ಟು ಕೊಠಡಿ ಇರಬೇಕು? ಅವೆಲ್ಲಕ್ಕೂ ಮರದ ಬಾಗಿಲೇ ಬೇಕೆ? ಪ್ಲೈವುಡ್ ಅಥವಾ ಫೈಬರ್ ಬಾಗಿಲಾದರೂ ಆದೀತೆ? ಅಡುಗೆ ಮನೆಗೂ ಬಾಗಿಲು ಅಗತ್ಯವೇ?(ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆ ಮತ್ತು ಊಟದ ಹಜಾರ-ಡೈನಿಂಗ್ ಹಾಲ್ ಅಥವಾ ನಡುಮನೆ-ಲಿವಿಂಗ್ ಹಾಲ್ ಪ್ರತ್ಯೇಕಿಸುವ ರೂಢಿಯೇ ಹೋಗಿದೆ).
 
ಸ್ನಾನದ ಮನೆಗೆ ಫೈಬರ್‌ನಿಂದ ಮಾಡಿದ್ದೇ ಸಾಕೆ? ದೇವರ ಕೋಣೆಗೆ ಬೀಟೆಮರದ(ರೋಸ್‌ವುಡ್)  ಬಾಗಿಲು ಹಾಕಿಸುವ ಕನಸಿದೆಯೆ? ಹಾಲ್ ಮತ್ತು ರೂಮಿನ ಕಿಟಕಿ ಎಷ್ಟು ವಿಸ್ತಾರವಾಗಿರಬೇಕು? ಮುಂಬಾಗಿಲು ಚೌಕಟ್ಟು ಎಷ್ಟು ಎತ್ತರ-ಅಗಲ-ದಪ್ಪ ಇರಬೇಕು? ಅದರ ಬಾಗಿಲಲ್ಲಿ ಸುಂದರ ಕೆತ್ತನೆ ಮಾಡಿಸಬೇಕೆಂಬ ಯೋಚನೆ ಇದೆಯೆ? ಈ ಎಲ್ಲ ಅಂಶಗಳನ್ನೂ ಮನೆಯ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರವನ್ನು ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಿರಿ.

ನಂತರ ನಿಮ್ಮ ಪರಿಚಯದ ವ್ಯಾಪ್ತಿಯಲ್ಲಿಯೇ ಒಬ್ಬ ನುರಿತ ಮರಗೆಲಸಗಾರರ(ಕಾರ್ಪೆಂಟರ್) ಬಗ್ಗೆ ವಿಚಾರಿಸಿ ತಿಳಿದುಕೊಳ್ಳಿ. ಅವರು ಬೇರೆಡೆ ಮಾಡಿರುವ ಕೆಲಸವನ್ನು ಒಮ್ಮೆ ಪ್ರತ್ಯಕ್ಷ ಕಾಣವುದು ಒಳ್ಳೆಯದು. ಆ ಮೂಲಕ ಆ ಕೆಲಸಗಾರನ ವೃತ್ತಿ ನೈಪುಣ್ಯ, ಕೆಲಸದಲ್ಲಿನ ಬದ್ಧತೆ, ಹೇಳಿದ ಅವಧಿಯಲ್ಲಿ ಕೆಲಸ ಮುಗಿಸಿಕೊಡಬಲ್ಲರೇ.. ಅವರು ಕೆಲಸಕ್ಕೆ ಪಡೆಯುವ ಹಣ ಎಷ್ಟು ಎಂಬುದನ್ನೆಲ್ಲ ತಿಳಿಯಿರಿ.

ಸಾಮಾನ್ಯವಾಗಿ ಈಗ ಮರಗೆಲಸದವರು ಅಡಿ ಲೆಕ್ಕದಲ್ಲಿಯೇ ಕೆಲಸದ ಹಣ ನಿಗದಿಪಡಿಸುತ್ತಾರೆ. ದಿನದ ಲೆಕ್ಕದಲ್ಲಿ ಸಂಬಳ ಪಡೆಯಲು ಇಚ್ಛಿಸುವುದಿಲ್ಲ. ಅವರು ಹಣ ಪಡೆಯುವ ಬಗೆಯನ್ನೂ ಮೊದಲೇ ಮಾತನಾಡಿ ಖಚಿತಪಡಿಸಿಕೊಳ್ಳಿ. ಕೆಲವರು ಮುಂಗಡವಾಗಿಯೇ ಹಣ ಬೇಕು ಎನ್ನುತ್ತಾರೆ.
 
ಹಾಗೆ ಮುಂಗಡ ನೀಡುವುದಾದರೆ ಕರಾರು ಪತ್ರ ಮಾಡಿಸಿಟ್ಟುಕೊಳ್ಳುವುದು, ಪಾವತಿ ರಶೀತಿ ಪಡೆದು ಇಟ್ಟುಕೊಳ್ಳುವುದು ಸುರಕ್ಷಿತ. ಕೆಲವರು ಮಾಡಿದ ಕೆಲಸಕ್ಕೆ ತಕ್ಕಷ್ಟು ಹಣವನ್ನು ವಾರಾಂತ್ಯದಲ್ಲಿ  ಪಡೆಯುತ್ತಾರೆ. ಇದು ಎರಡೂ ಪಕ್ಷದವರಿಗೂ ಸುರಕ್ಷಿತ ವಿಧಾನ.

ಹೊಸ ಮನೆಗಾಗಿ ನಿಗದಿಪಡಿಸಿರುವ ಬಾಗಿಲು-ಕಿಟಕಿಗಳ ವಿವರವನ್ನು ನೀವು ನೀಡಿದರೆ ಅಗತ್ಯವಾದ ಮರದ ಲೆಕ್ಕವನ್ನು ಕಾರ್ಪೆಂಟರ್ ಪಟ್ಟಿ ಮಾಡಿಕೊಡುತ್ತಾರೆ.
ಅದೆಲ್ಲವೂ ಇಂಚು, ಅಡಿ ಲೆಕ್ಕದಲ್ಲಿ ಇರುತ್ತದೆ. ಸಾಮಾನ್ಯವಾಗಿ 3 ಅಡಿ ಅಗಲ, ಆರೂವರೆ ಅಥವಾ ಏಳು ಅಡಿ ಎತ್ತರದ ಮುಂಬಾಗಿಲು ಚೌಕಟ್ಟಿಗೆ 3 ಮತ್ತು 6 ಇಂಚು ದಪ್ಪದಾದ ಮತ್ತು 7 ಅಥವಾ 8 ಅಡಿ ಉದ್ದವಾದ ಎರಡು ಪಟ್ಟಿ ಹಾಗೂ ಅಷ್ಟೇ ಗಾತ್ರದ ಆದರೆ 4-5 ಅಡಿ ಉದ್ದದ ಎರಡು ಅಡ್ಡಪಟ್ಟಿ ಬೇಕಾಗುತ್ತದೆ.

ಅದಕ್ಕೆ ಜೋಡಿಸುವ ಬಾಗಿಲಿಗೆ ಚಟ್ರಾಸ್ ಪಟ್ಟಿಗಳು ಮತ್ತು ಹಲಗೆಗಳು ಅಗತ್ಯವಿರುತ್ತದೆ. ಆದರೆ, ಒಳಗಿನ ಕೊಠಡಿ ಬಾಗಿಲುಗಳಿಗೆ ಹೊಸ್ತಿಲು ಅಗತ್ಯ ಇರುವುದಿಲ್ಲವಾದ್ದರಿಂದ ಅಡ್ಡ ಪಟ್ಟಿ ಒಂದೇ ಸಾಕಾಗುತ್ತದೆ.

ಇನ್ನು ಕಿಟಕಿಗಳಿಗೆ ಬಳಸುವ ಮರದ ಪಟ್ಟಿಗಳ ದಪ್ಪವನ್ನು ನಿಮ್ಮ ಇಚ್ಛೆಗೆ ತಕ್ಕಂತೆ, ಬಾಗಿಲುಗಳ ಚಟ್ರಾಸ್ ಪಟ್ಟಿಯನ್ನೂ ಅದಕ್ಕೆ ಅಳವಡಿಸುವ ಗಾಜಿನ ಗಾತ್ರಕ್ಕೆ ತಕ್ಕಂತೆ ನಿಗದಿಪಡಿಸಬೇಕಿರುತ್ತದೆ.

ಇದಿಷ್ಟೂ ಮರದ ಪಟ್ಟಿಗಳನ್ನೂ  ಲೆಕ್ಕಹಾಕಿ `ಘನ ಅಡಿ~(ಕ್ಯುಬಿಕ್ ಫೀಟ್) ಗೆ ಪರಿವರ್ತಿಸಿಕೊಂಡಲ್ಲಿ ನಿಮ್ಮ ಮನೆಗೆ ಬೇಕಾಗುವ ಒಟ್ಟು ಮರದ ಸಾಮಗ್ರಿ ಲೆಕ್ಕೆ ಸಿಕ್ಕಂತಾಗುತ್ತದೆ.

ಇದರಲ್ಲಿ ಎಲ್ಲವೂ ತೇಗದ್ದೇ ಬೇಕಿದೆಯೇ ಅಥವಾ ಮುಂಬಾಗಿಲಿಗೆ ಮಾತ್ರ ತೇಗದ್ದು ಸಾಕು. ಕಿಟಕಿ ಮತ್ತು ಒಳಗಿನ ಬಾಗಿಲ ಚೌಕಟ್ಟಿಗೆ ಬೇವಿನ ಮರದ  ಪಟ್ಟಿಗಳಾದರೂ ಆಗುತ್ತದೆ. ಚಟ್ರಾಸ್ ಮತ್ತು ಹಲಗೆಗೆ ಮತ್ತಿ, ಬಿಲ್ವಾರ, ಮಲೇಷಿಯನ್ ಟೀಕ್ ಆದರೂ ಪರವಾಗಿಲ್ಲವೇ ಎನ್ನುವುದಿದ್ದರೆ ಮರದ ಸಾಮಗ್ರಿಯಲ್ಲಿಯೂ ಹಣದ ಉಳಿತಾಯ ಸಾಧ್ಯವಿದೆ. ಏನೇ ಇದ್ದರೂ ನಿಮ್ಮ ಬಜೆಟ್ ನೋಡಿಕೊಂಡು ಈ ಬಗ್ಗೆ ನಿರ್ಧರಿಸುವುದು ಒಳಿತು.

ನೀವು ನಗರ ವಾಸಿಗಳಾಗಿದ್ದಲ್ಲಿ ಸಾಮಿಲ್ ಅಥವಾ ಕಟ್‌ಪೀಸ್ ಮಾರಾಟದ ಅಂಗಡಿಗಳಿರುವ ಪ್ರದೇಶಕ್ಕೇ ಹೋಗಿ ಮರ ಖರೀದಿಸಬಹುದು. ಆದರೆ, ಅಲ್ಲಿ ವರ್ಷಕ್ಕೂ ಮುನ್ನವೇ ಕತ್ತರಿಸಿಟ್ಟ, ಸಾಕಷ್ಟು ಒಣಗಿರುವ(ಸೀಸನ್ಡ್) ಮರದ ಪಟ್ಟಿಗಳು ಲಭ್ಯ ಇವೆಯೆ? ಯಾವ ಅಂಗಡಿಯಲ್ಲಿ ಕಡಿಮೆ ಬೆಲೆ ಎಂಬುದನ್ನು ಸ್ವಲ್ಪ ಸುತ್ತಾಡಿ ವಿಚಾರಿಸಿಕೊಳ್ಳಿ. ಜತೆಗೊಬ್ಬರು ಅನುಭವಿ ಇದ್ದರೆ ಒಳಿತು.

ಗ್ರಾಮೀಣ ಭಾಗದಲ್ಲಿ ಬೇವು, ಮತ್ತಿ, ಹೊನ್ನೆ, ಬಿಲ್ವಾರ ಮತ್ತಿತರ ಜಾತಿಯ ಜೀವಂತ ಮರಗಳು ಸಿಗುತ್ತವೆ. ಚೌಕಾಷಿ ಮಾಡಿದರೆ ಬಹಳ ಕಡಿಮೆ ಬೆಲೆಗೂ ಇವು ಸಿಗುತ್ತವೆ. ಗ್ರಾಮೀಣ ಭಾಗದಲ್ಲಿ ಬಂಧು-ಮಿತ್ರರು ಇದ್ದಲ್ಲಿ ಈ ಪ್ರಯತ್ನ ಮಾಡಬಹುದು.
 
ಆದರೆ ಆ ಮರವನ್ನು ಕತ್ತರಿಸಿ ಉರುಳಿಸುವುದು, ಸಾಮಿಲ್‌ಗೆ ಸಾಗಿಸುವುದು, ಅಲ್ಲಿ ನಿಂತು ನಿಮಗೆ ಅಗತ್ಯವಾದ ಪ್ರಮಾಣಕ್ಕೆ ಪಟ್ಟಿಗಳನ್ನು ಕೊಯ್ಯಿಸುವುದು ಎಲ್ಲವೂ ಬಹಳ ಕಷ್ಟದ ಕೆಲಸ. ಇದೆಲ್ಲಕ್ಕೂ ಬಹಳ ಅನುಭವ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಕೆಲಸಕ್ಕೆ ಅರಣ್ಯ ಇಲಾಖೆಯಿಂದ ಮೊದಲೇ ಅನುಮತಿ ಪಡೆದುಕೊಂಡಿರಬೇಕು. ಇಲ್ಲವಾದರೆ ಮರ ಸಾಗಣೆ ಅಸಾಧ್ಯ.

ಇನ್ನೊಂದು ಸರಳ ವಿಧಾನವೆಂದರೆ ಇದೇ ಗ್ರಾಮೀಣ ಭಾಗದಲ್ಲಿರುವ ಸಾಮಿಲ್‌ಗಳಲ್ಲಿ ಕತ್ತರಿ ಇಟ್ಟ ಮರದ ಪಟ್ಟಿಗಳು ನಗರದಲ್ಲಿರುವುದಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತವೆ. ಆದರೆ, ಸಾಗಣೆಯೊಂದು ಹೆಚ್ಚುವರಿ ವೆಚ್ಚವಾಗುತ್ತದೆ. ಇಲ್ಲಿ ಖರೀದಿಸಿದರೆ ತೆರಿಗೆ ಪಾವತಿಸಿ ಬಿಲ್ ಪಡೆಯುವುದನ್ನು ಮರೆಯಬೇಡಿ. ಇಲ್ಲವಾದರೆ ಸಾಗಣೆ-ಸಂಗ್ರಹಣೆ ಸಮಸ್ಯೆ ತಂದೊಡ್ಡಬಲ್ಲದು.

ಮರಮುಟ್ಟು ಖರೀದಿಗೂ ಬಹಳ ಅನುಭವ ಅಗತ್ಯ. ಇಲ್ಲವಾದರೆ ಮೋಸ ಹೋಗುವ ಸಂಭವವೇ ಹೆಚ್ಚು. ಉದಾಹರಣೆಗೆ ತೇಗದ ಮರ ಎಂದು ಬೇರಾವುದೋ ಮರವನ್ನು ಸಾಮಿಲ್‌ನವರೊ, ಕಟ್‌ಪೀಸ್ ಮಾರಾಟಗಾರರೋ ನಿಮ್ಮನ್ನು ವಂಚಿಸಬಹುದು.
ಈ ಬಗ್ಗೆ ಮುಂದಿನ ವಾರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT