ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು, ಕಾಮ, ಸಂತಾನ

Last Updated 20 ಏಪ್ರಿಲ್ 2019, 12:35 IST
ಅಕ್ಷರ ಗಾತ್ರ

ಬೆಳೆಯುವ ಹಂತದಲ್ಲಿ ಹೆಣ್ಣಿನ ಕಾಮದ ಅಭಿವ್ಯಕ್ತಿ ಹತ್ತಿಕ್ಕುವ ಬಗೆಗೆ ಮಾತಾಡುತ್ತ, ಕಾಮುಕತೆಯ ಅರ್ಹತೆಯು ಕೇವಲ ಸುಂದರ ಎನ್ನಿಸಿಕೊಳ್ಳುವ ಶರೀರಗಳಿಗಷ್ಟೇ ಅಲ್ಲ, ಎಲ್ಲ ಶರೀರಗಳಿಗೂ ಇದೆ ಎಂದು ಹೇಳುತ್ತಿದ್ದೆ. ಈಸಲ ಹೆಣ್ಣಿನ ಸಂತಾನೋತ್ಪತ್ತಿಗೂ ಕಾಮಪ್ರಜ್ಞೆಗೂ ಇರುವ ಸಂಬಂಧದ ಬಗೆಗಿನ ಸತ್ಯಗಳನ್ನು ಕಂಡುಕೊಳ್ಳೋಣ.

ಮದುವೆಯಾದ ಮೇಲೆಯೆ ಕಾಮಕ್ರಿಯೆ ಶುರುಮಾಡುವ ರೂಢಿ ನಮ್ಮಲ್ಲಿದೆ. ಯಾಕೆಂದರೆ, ದಾಂಪತ್ಯದ ಚೌಕಟ್ಟಿನಲ್ಲಿ ನಡೆಯುವ ಕಾಮಕ್ರಿಯೆಯಿಂದ ಸಂತಾನೋತ್ಪತ್ತಿಗೆ ಹಾಗೂ ಸಂತಾನದ ಜವಾಬ್ದಾರಿ ನಿರ್ವಹಣೆಗೆ ಅತ್ಯನುಕೂಲ. ವಿಪರ್ಯಾಸ ಎಂದರೆ, ದಾಂಪತ್ಯದ ಚೌಕಟ್ಟಿನೊಳಗೆ ನಡೆಯಬೇಕಾದ ಕಾಮಕ್ರಿಯೆಯು ಸಾಕಷ್ಟು ನಡೆಯದಿರುವುದೇ ಹೆಚ್ಚಾಗಿದೆ! ನಂಬುವುದಿಲ್ಲವೆ? ಹೀಗೆ ಯೋಚಿಸಿ: ಮದುವೆಗೆ ಮುಂಚೆ ಕಾಮಸುಖದ ಬಗೆಗೆ (ಸಂಭೋಗವೇ ಆಗಬೇಕೆಂದಿಲ್ಲ) ಕಟ್ಟಿಕೊಂಡ ಕಲ್ಪನೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿಕೊಂಡಿದ್ದೀರಿ ಎಂದು ಅಳೆದುಕೊಂಡರೆ ಹೆಚ್ಚಿನಂಶ ಇಲ್ಲವೆಂದೇ ಅನಿಸುತ್ತದೆ. ಅಷ್ಟೇಕೆ, ಕೆಲವರು ಸಹ-ವಾಸದಲ್ಲಿ (live-in) ಇರುವಾಗ, ಅಥವಾ ಡೇಟಿಂಗ್ ಮಾಡುತ್ತಿರುವಾಗ ಅನುಭವಿಸಿದಷ್ಟು ಕಾಮಸುಖವನ್ನು ದಾಂಪತ್ಯದಲ್ಲಿ ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ನನ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗೇಕೆ?

ಈಚೆಗೆ ದಾಂಪತ್ಯದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ವಿದ್ಯಾಭ್ಯಾಸ, ಉದ್ಯೋಗಕ್ಕೆ ಹೆಚ್ಚು ಸಮಯ ಹಿಡಿಯುವುದರಿಂದ ದಾಂಪತ್ಯ ಶುರುವಾಗುವುದು ತಡವಾಗುತ್ತಿದೆ. ಮದುವೆ ತಡವಾದಷ್ಟೂ ಮಕ್ಕಳು ಬೇಗ ಆಗಲಿ ಎನ್ನುವ ಅನಿಸಿಕೆ ಹೆಚ್ಚಿನ ದಂಪತಿಗಳಲ್ಲಿ ಮೂಡುತ್ತಿದೆ. ಸಾಕಾಗದ್ದಕ್ಕೆ, ವಯಸ್ಸಾದಂತೆ ಸಂತಾನ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಅನಿಸಿಕೆಯನ್ನು ಅವರ ಮೇಲೆ ಹೇರಲಾಗುತ್ತಿದೆ. ಪಿ.ಸಿ.ಓ.ಎಸ್. ಹಾಗೂ ಸ್ಥೂಲಕಾಯ ಇದ್ದರಂತೂ ಸಂತಾನವು ಕಷ್ಟಸಾಧ್ಯ ಎಂದು ನಿರ್ಣಯಿಸುವ ವೈದ್ಯರಿದ್ದಾರೆ (ಇಂಥ ದೇಹಸ್ಥಿತಿಗಳಿಗೆ ಮನೋಭಾವುಕ ಕಾರಣಗಳಿದ್ದು, ಇದಕ್ಕೆ ಮನೋಚಿಕಿತ್ಸೆ ನೆರವಾಗಬಹುದು ಎನ್ನುವುದು ಅನೇಕರಿಗೆ ಗೊತ್ತಿಲ್ಲ). ಹಾಗಾಗಿ ಮಗು ಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಇರುವವರು, ಹಾಗೂ ಮಗುವು ಈಗಲೇ ಬೇಡವೆನ್ನುವವರು ಉದ್ದೇಶ ಬದಲಿಸಿ, ‘ಮಗುವೊಂದು ಬೇಗ ಆಗಲಿ’ ಎಂದು ತರಾತುರಿಯಲ್ಲಿ ಗರ್ಭಧಾರಣೆಯ ಯತ್ನಕ್ಕೆ ತೊಡಗುತ್ತಾರೆ. ಕಾಮಬಾಂಧವ್ಯವನ್ನು ನೆಲೆಗೊಳಿಸುವ ಸಮಯದಲ್ಲಿ ಗರ್ಭಧಾರಣೆಗೆ ಆದ್ಯತೆ ಕೊಡುವುದರ ಪರಿಣಾಮವು ನೇರವಾಗಿ ಆಗುವುದು ಗಂಡಹೆಂಡಿರ ಅನ್ಯೋನ್ಯತೆಯ ಮೇಲೆ. ಇಬ್ಬರೂ ಪಾರಸ್ಪರಿಕ ಕಾಮಸುಖವನ್ನು ಬದಿಗಿಟ್ಟು ವ್ಯವಸ್ಥೆಯ ಬಂದಿಗಳಾಗಿ, ಸಂತಾನದ ಯಂತ್ರಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಆಗ ನಡೆಯುವ ‘ಸಂಕಟ ಸಂಭೋಗ’ವು ಲೈಂಗಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತ, ಕೊನೆಗೆ ಕಾಮಕ್ರಿಯೆಯೇ ಬೇಡವೆನಿಸುತ್ತದೆ. ಕಾಮಕ್ರಿಯೆಗಾಗಿಯೇ ಕಟ್ಟಿಕೊಳ್ಳುವ ದಾಂಪತ್ಯದಲ್ಲಿ ಕಾಮತೃಪ್ತಿಯೇ ಲೋಪವಾಗುವುದು ಎಂಥ ವಿಪರ್ಯಾಸ! ಇದೆಲ್ಲದರ ಪರಿಣಾಮ ಹೆಣ್ಣಿನ ಮೇಲೆ ಹೆಚ್ಚಾಗುತ್ತದೆ. ಏಕಾಂತದಲ್ಲಿ ಗಂಡನೊಡನೆ ಮಲಗಿ ವೀರ್ಯ ಪಡೆಯಬೇಕಾದವಳು ಅದನ್ನೇ ಆಸ್ಪತ್ರೆಯಲ್ಲಿ ನಾಲ್ಕು ಜನರ ನಡುವೆ ಬೆತ್ತಲೆಯಾಗಿ ಮಲಗಿ ನಿಸ್ಸಹಾಯಕ ಪಶುವಿನಂತೆ ಪಡೆಯಬೇಕಾದ ಪ್ರಸಂಗವು ಯಾವ ಅತ್ಯಾಚಾರಕ್ಕೂ ಕಡಿಮೆಯಿಲ್ಲ. ಇಂಥ ಭಾವನಾತ್ಮಕ ದಿವಾಳಿತವನ್ನೂ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಎಲ್ಲೆಲ್ಲೂ ತಲೆಯೆತ್ತಿ ಸಂತಾನದ ವ್ಯಾಪಾರೀಕರಣ ನಡೆಸುವ ಫಲವತ್ತತೆಯ ಕೇಂದ್ರಗಳೇ ಸಾಕ್ಷಿ.

ಒತ್ತಾಯದ ಗರ್ಭಧಾರಣೆಯಲ್ಲಿ ಹಿರಿಯರ ಪಾತ್ರವೂ ಸಾಕಷ್ಟಿದೆ. ‘ಮೊದಲು ಮಗುವಾಗಲಿ, ನಂತರ ಸುಖಪಡುವುದು ಇದ್ದೇ ಇದೆ’ ಎನ್ನುವುದು ಮೇಲುನೋಟಕ್ಕೆ ಯುವದಂಪತಿಯ ಹಿತಚಿಂತನೆಯಂತೆ ಕಂಡರೂ ಒಳಗೊಳಗೆ ಹಿರಿಯರ ಸ್ವಾರ್ಥವಿದೆ. (ಉದಾ. ನಿನ್ನ ಮಗುವನ್ನು ನೋಡಿಯೇ ನಾನು ಕಣ್ಣು ಮುಚ್ಚಬೇಕು). ಮಗುವಾದರೆ ಅದೇ ಕಾರಣದಿಂದ ಕಾಮಸುಖವು ಇನ್ನೂ ದುರ್ಲಭವಾಗುತ್ತದೆ ಎಂಬುದು ಎಲ್ಲ ಹಿರಿಯರಿಗೂ ಆದ ಅನುಭವ.

ಇನ್ನು, ಸ್ವಂತ ಕಾಮಸುಖಕ್ಕೆ ಬೆನ್ನು ತಿರುಗಿಸಿ ಸಂತಾನಕ್ಕೆ ಕೈಹಾಕುವ ಹೆಣ್ಣಿನ ಮನಸ್ಸಿನೊಳಗೆ ಏನು ನಡೆಯುತ್ತದೆ? ಗಂಡು ಕಾಮಜೀವಿ, ಹೆಣ್ಣಾಗಿ ಅವನಾಸೆ ಪೂರೈಸಿ, ಮಗುವನ್ನು ಹೆತ್ತುಕೊಟ್ಟು ಕುಟುಂಬದ ಅಂತಸ್ತನ್ನು ಹೆಚ್ಚಿಸಬೇಕು. ಇಲ್ಲವಾದರೆ ತನಗೆ ಬೆಲೆಯಿರುವುದಿಲ್ಲ ಎಂದುಕೊಳ್ಳುವ ಹೆಣ್ಣಿಗೆ ಸ್ವಂತಿಕೆ ಎಷ್ಟಿದೆ ಎನ್ನುವುದು ಯಾರೇ ಊಹಿಸಬಹುದು. ಹೆಣ್ಣಿಗೂ ಕಾಮುಕತೆಯಿದೆ ಎಂದು ಒಪ್ಪಲು ಯಾವ ಗಂಡಸೂ ತಯಾರಿಲ್ಲ ಯಾಕೆ? ಒಪ್ಪಿಕೊಂಡರೆ ಪೂರೈಸುವ ಹೊಣೆ ಹೊರಬೇಕಾಗುತ್ತದೆ! ನಮ್ಮಲ್ಲಿ ಹೆಂಗಸನ್ನು ಅರ್ಥಮಾಡಿಕೊಳ್ಳಲು ಗಂಡಸು ಪ್ರಯತ್ನಪಡಬೇಕಾಗಿಲ್ಲ, ಗಂಡನನ್ನು ಅರ್ಥಮಾಡಿಕೊಳ್ಳುವುದು ಹೆಂಡತಿಯ ಜವಾಬ್ದಾರಿ ಎಂಬ ತಪ್ಪು ನಂಬಿಕೆಯಿದೆ.

ಇಲ್ಲೇನು ನಡೆಯುತ್ತಿಲ್ಲ? ಸಂತಾನಕ್ಕೆ ವಯಸ್ಸು ತಡವಾಗುತ್ತಿದೆ ಎಂದರೆ ಕಾಮಕ್ರಿಯೆಗೂ ತಡವಾಗುತ್ತಿದೆ ಎಂದು ಯಾರೂ ಯೋಚಿಸುತ್ತಿಲ್ಲ! ಇಪ್ಪತ್ತೆಂಟರೊಳಗೆ ಮಗು ಬೇಕು ಎನ್ನುವವರು ಹದಿನೆಂಟರೊಳಗೆ ಹುಟ್ಟಿದ ಕಾಮೇಚ್ಛೆಯ ಬಗೆಗೆ ಏನು ಹೇಳುತ್ತಾರೆ? ಮದುವೆಯ ತನಕ ಕಾಮೇಚ್ಛೆಯನ್ನು ನಿಯಂತ್ರಿಸಬೇಕು ಎಂದೆನ್ನುವ ಹಿರಿಯರು ಮದುವೆಯ ನಂತರ (ಸಂತಾನಾಪೇಕ್ಷೆಯನ್ನು ಬದಿಗಿಟ್ಟು) ಅದರ ಪುಟ್ಟಪೂರಾ ಹರಿವಿಗೆ ಆದ್ಯತೆ ಏಕೆ ಕೊಡುವುದಿಲ್ಲ? ಕಾಮತೃಪ್ತಿಯ ಸಾಮರಸ್ಯ ಸಾಧಿಸಿದ ಅನ್ಯೋನ್ಯತೆಯ ದಾಂಪತ್ಯವು ಅದಿಲ್ಲದೆ ಸಂತಾನ ಪಡೆದ ದಾಂಪತ್ಯಕ್ಕಿಂತಲೂ ಅತ್ಯಂತ ಸ್ವಸ್ಥವಾಗಿರುತ್ತದೆ ಎಂದೇಕೆ ಯೋಚಿಸುವುದಿಲ್ಲ?

ಪರಿಹಾರವೇನು? ಕಾಮಜೀವನವನ್ನು ಬಯಸುವ ಹೆಣ್ಣಿಗೆ ಈ ಆಯ್ಕೆಗಳಿವೆ:

* ಮದುವೆಗೆ ಮುಂಚೆ ಗಂಡಿನೊಡನೆ ಲೈಂಗಿಕ ವಿಷಯಗಳನ್ನಷ್ಟೇ ಅಲ್ಲ, ತನ್ನ ಕಾಮಸುಖದ ಅಗತ್ಯವನ್ನೂ ಹೇಳಿಕೊಳ್ಳುತ್ತ, ಮುಕ್ತವಾಗಿ ಚರ್ಚಿಸಬೇಕು. ತನ್ನ ಭಾವನಾತ್ಮಕ ಸಾಂಗತ್ಯವನ್ನು ಸ್ಥಿರವಾಗಿ ಪೂರೈಸಿಕೊಳ್ಳುವ ಲಕ್ಷಣ ಕಾಣದಿದ್ದರೆ ಸಂಬಂಧವನ್ನು ಕೊನೆಯ ಕ್ಷಣದಲ್ಲಿಯೂ ಕೊನೆಗಾಣಿಸಲು ತಯಾರಿರಬೇಕು.

* ನವದಾಂಪತ್ಯದಲ್ಲಿ ತೃಪ್ತಿಕರ ಕಾಮಸಂಬಂಧ ಬೆಳೆಯುವ ತನಕ ಎಷ್ಟೇ ತಡವಾಗಲಿ, ಗರ್ಭಧಾರಣೆಗೆ ಒಪ್ಪಿಕೊಳ್ಳಕೂಡದು. ಸಂತಾನ ಆಯ್ಕೆಯೇ ವಿನಾ ಅನಿವಾರ್ಯವಲ್ಲ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು. ಇದರ ಬಗೆಗೆ ಭಾವೀ ಅತ್ತೆಮಾವಂದಿರನ್ನು ಮುಂಚೆಯೇ ಒಪ್ಪಿಸಬೇಕು.

* ಮೊದಲ ಸಮಾಗಮವನ್ನು ನಿಶ್ಚಯ ಮಾಡುವಾಗಲೇ ಶಿಸ್ತುಬದ್ಧ ಗರ್ಭನಿರೋಧ ಕ್ರಮಗಳನ್ನು ಕೈಗೊಂಡಿರಬೇಕು. (ನಿಯಮಿತವಾಗಿ ಸೇವಿಸುವ ಗರ್ಭನಿರೋಧ ಮಾತ್ರೆ ಸೂಕ್ತ) ಅಕಸ್ಮಾತ್ತಾಗಿ ಗರ್ಭಧರಿಸುವ ಆತಂಕವಿದ್ದರೆ ಸುಖಪಡಲು ಆಗುವುದಿಲ್ಲ.

* ಸಂಗಾತಿ ಗರ್ಭಧಾರಣೆಯ ವಿಚಾರವನ್ನು ಹೇರುವ ಹಾಗಿದ್ದರೆ ಯೋನಿ–ಶಿಶ್ನದ ಸಂಭೋಗವನ್ನು ನಿರ್ದಾಕ್ಷಿಣ್ಯವಾಗಿ ದೂರವಿಟ್ಟು ಇನ್ನಿತರ ವಿಧಗಳಲ್ಲಿ ಸುಖಪಡೆಯಲು ಆಹ್ವಾನಿಸಬೇಕು.

* ಮನಪೂರ್ತಿ ಕಾಮಕೂಟಕ್ಕೆ ಒಪ್ಪಿದರೂ ಗರ್ಭಧರಿಸುವ ಸಾಧ್ಯತೆಯುಳ್ಳ ‘ಯೋನಿಯೊಳಗೆ ಸ್ಖಲನ’ವನ್ನು ವಿರೋಧಿಸುವ ಹಕ್ಕು ಹೆಣ್ಣಿಗಿದೆ. ಇದು ಆತ್ಮರಕ್ಷಣೆಯೇ ವಿನಾ ದಾಂಪತ್ಯ ಸಾಮರಸ್ಯಕ್ಕೆ ವಿರೋಧವಲ್ಲ, ಹಾಗಾಗಿ ತಪ್ಪಿತಸ್ಥ ಭಾವ ಬೇಡ. ಹೆಣ್ಣಿನ ಅನುಮತಿ ಇಲ್ಲದೆ ಯೋನಿಯಲ್ಲಿ ವೀರ್ಯ ಬಿಡುವುದು ಹೆಣ್ಣಿನ ಭಾವನೆಗೆ ಗೌರವಿಸದೆ, ಆಕೆ ಮೇಲೆ ಮಾಡುವ ದಬ್ಬಾಳಿಕೆ ಎಂದು ಗಂಡಿಗೆ ಅರ್ಥಮಾಡಿಸುವುದೂ ಅತ್ಯಗತ್ಯ.

* ಹೀಗೆ ಸಂತಾನವನ್ನು ಬದಿಗಿಟ್ಟು ಪಡೆಯುವ ಕಾಮಪ್ರಜ್ಞೆಯ ನಿಲುವು ಹೆಣ್ಣಿನ ಅಸ್ಮಿತೆಗೆ ಭೂಷಣ.

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT