ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವಳಿಗೆ ಗರ್ಭಧಾರಣೆಯ ಭಯ

Last Updated 20 ಏಪ್ರಿಲ್ 2019, 12:35 IST
ಅಕ್ಷರ ಗಾತ್ರ

ಹೆಣ್ಣು ಕಾಮಸುಖವನ್ನು ಸವಿಯಬೇಕಾದರೆ ಸಂತಾನೋತ್ಪತ್ತಿಯ ಕಾರ್ಯದಿಂದ ಬೇರ್ಪಡಿಸಲೇಬೇಕು, ಹಾಗೂ ಸಂತಾನವನ್ನು ಬದಿಗಿಟ್ಟು ಪಡೆದುಕೊಳ್ಳುವ ಕಾಮಪ್ರಜ್ಞೆಯ ನಿಲುವು ಹೆಣ್ಣಿನ ಅಸ್ಮಿತೆಯನ್ನು (identity) ಗಾಢಗೊಳಿಸುತ್ತದೆ ಎಂದು ಹೇಳುತ್ತಿದ್ದೆ. ಹೀಗಾದರೂ ಹೆಣ್ಣು ತನ್ನ ಕಾಮಪ್ರಜ್ಞೆಯನ್ನು ಮೆರೆಲಾಗುವುದಿಲ್ಲ. ಇದಕ್ಕೆ ಹಲವು ಬಲುಸೂಕ್ಷ್ಮ ಕಾರಣಗಳಿವೆ. ಅವೇನೆಂದು ನೋಡೋಣ.

ಗಂಡಿಗೆ ವೀರ್ಯಸ್ಖಲನದ ಜೊತೆಜೊತೆಗೇ ಕಾಮತೃಪ್ತಿ /ಭಾವಪ್ರಾಪ್ತಿ ಆಗುತ್ತದೆ. ಇಲ್ಲಿ ವೀರ್ಯಸ್ಖಲನವು ಸಂತಾನೋತ್ಪತ್ತಿಗೆ ಸಂಬಂಧಪಟ್ಟಿದೆ. ಅಂದರೆ ಗಂಡು ಸಂತಾನಕ್ಕಾಗಿ ಬೀಜ ಬಿತ್ತುವುದು ಹಾಗೂ ಕಾಮದಾಸೆ ಪೂರೈಸಿಕೊಳ್ಳುವುದು ಎರಡನ್ನೂ ಜೊತೆಜೊತೆಗೆ ನಡೆಸುತ್ತಾನೆ. ಆದರೆ ಹೆಣ್ಣಿನಲ್ಲಿ ಹಾಗಿಲ್ಲ. ಸಂತಾನಕ್ಕಾಗಿ ಅಂಡ ಬಿಡುಗಡೆ ಆಗುವುದಕ್ಕೂ ಕಾಮತೃಪ್ತಿಗೂ ಏನೇನೂ ಸಂಬಂಧವಿರದೆ ಇವೆರಡೂ ಪ್ರತ್ಯೇಕವಾಗಿವೆ. ಹಾಗಾಗಿ ಗಂಡು ಕಾಮದಾಸೆ ಪೂರೈಸಿಕೊಳ್ಳುವ ಕಾರಣವನ್ನು ಮುಂದಿಟ್ಟುಕೊಂಡು ಕೂಟಕ್ಕೆ ಪೀಠಿಕೆ ಹಾಕಿದರೂ ಅದರೊಳಗೆ ಸಂತಾನೋತ್ಪತ್ತಿಯ ಸಾಧ್ಯತೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಗಂಡು ಸಂಭೋಗದಲ್ಲಿ ರಭಸದಿಂದ ಚಲಿಸುತ್ತಿರುವಾಗ ಖುಷಿ ಹೆಚ್ಚಾಗಿ ಸಿಗುತ್ತಿರುವಾಗ ಸ್ಖಲನದ ಕ್ಷಣಗಳು ಹತ್ತಿರವಾದಷ್ಟೂ ಗರ್ಭಧಾರಣೆಯ ಸಾಧ್ಯತೆ ದಟ್ಟವಾಗುತ್ತದೆ. ಆಗ ತನ್ನ ಕಾಮತೃಪ್ತಿಯ ತುಟ್ಟತುದಿಯನ್ನು ಮುಟ್ಟಬೇಕಾದ ಹಾದಿಗಳನ್ನು ಅನ್ವೇಷಿಸುವುದರ ಬದಲು ಫಲವತ್ತತೆಯ ಪರ ಅಥವಾ ವಿರೋಧವಾದ ಪ್ರಕ್ರಿಯೆಗೆ ಯೋಚಿಸಬೇಕಾಗುತ್ತದೆ. ಅಂದರೆ, ಕಾಮಕೂಟಕ್ಕೆ ಕರೆಬಂದಾಗ ಹೆಣ್ಣಿಗೆ ಮೊಟ್ಟಮೊದಲು ಯೋಚನೆ ಬರುವುದು ಗರ್ಭಧಾರಣೆಯ ಬಗೆಗೆ! ಒಂದುವೇಳೆ ಗರ್ಭ ಧರಿಸಲು ಇಷ್ಟವಿದ್ದರೆ, ಅಥವಾ ಗರ್ಭನಿರೋಧದ ಶಸ್ತ್ರಚಿಕಿತ್ಸೆ ಆಗಿದ್ದರೆ ಪಾಲುಗೊಳ್ಳುವಲ್ಲಿ ನಿರಾಳತೆ ಇರುತ್ತದೆ. ಆದರೆ ಗರ್ಭ ಬೇಡದ ಕೂಟದಲ್ಲಿ ಹೆಣ್ಣಿಗೆ ಏನು ಅನ್ನಿಸಬಹುದು?

ಕೂಟದಲ್ಲಿ ತನ್ನ ಯೋನಿಯನ್ನು ಗಂಡಿಗೆ ಕೊಡುವಾಗಲೆಲ್ಲ ಹೆಣ್ಣು ಗರ್ಭಧಾರಣೆಯ ಆತಂಕವನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜೋಡಿಗಳಲ್ಲಿ ಹುಚ್ಚೆಬ್ಬಿಸುವ ಮುನ್ನಲಿವಿನ ನಂತರ ಇನ್ನೇನು ಯೋನಿಪ್ರವೇಶ ಮಾಡಬೇಕು ಎನ್ನುವಾಗ ಅಲ್ಪವಿರಾಮ ಬರುತ್ತದೆ. ಇತ್ತೀಚೆಗೆ ಆದ ಮುಟ್ಟು ನೆನಪಿಗೆ ಬರುತ್ತ ಕ್ಯಾಲೆಂಡರ್ ಕಣ್ಣಮುಂದೆ ಬರುತ್ತದೆ. ಇಬ್ಬರೂ ಲೆಕ್ಕಾಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದ ನಂತರವೇ ಸಂಭೋಗ ನಡೆಯುತ್ತದೆ. ಇಷ್ಟಾದರೂ ಕಾಂಡೋಮ್ ಹರಿದರೆ, ವೀರ್ಯ ಹೊರಬಿಡುವುದು ಕೈಕೊಟ್ಟರೆ, ತುರ್ತು ಮಾತ್ರೆ ಪರಿಣಾಮಕಾರಿ ಆಗದಿದ್ದರೆ, ಗರ್ಭನಿರೋಧ ಮಾತ್ರೆಯಿಂದ ದಪ್ಪಗಾದರೆ.... ಹೀಗೆ ಒಂದುಕಡೆ ಚಿಂತಿಸುತ್ತಲೇ ಇನ್ನೊಂದು ಕಡೆ ಅವುಗಳ ಸಂದುಗಳ ನಡುವೆ ಅಡಗಿರುವ ಸುಖವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅಷ್ಟರಲ್ಲೇ ಗಂಡು ತಯಾರಾಗಿರುವುದು ಎದ್ದುಕಾಣುತ್ತಿರುವಾಗ ಅವನನ್ನು ಕಾಯಿಸುತ್ತಿದ್ದೇನೆ ಎಂದೆನಿಸಿ, ತಪ್ಪಿತಸ್ಥ ಭಾವ ಕಾಡುತ್ತದೆ. ಇಂಥದ್ದೆಲ್ಲ ಹೆಣ್ಣಿಗೆ ಕಾಮಪ್ರಜ್ಞೆ ಅರಳುವ ಹಾದಿಯಲ್ಲಿ ಇವೆಲ್ಲ ಅಡ್ಡಗಲ್ಲಾಗಿ ನಿಲ್ಲುತ್ತವೆ.

ಹೆಣ್ಣು ಕಾಮತೃಪ್ತಿಯನ್ನು ಅನುಭವಿಸಬೇಕಾದರೆ ಅದನ್ನು ಸಂತಾನೋತ್ಪತ್ತಿಯ ಉದ್ದೇಶ ಹಾಗೂ ಭಯದಿಂದ ಪ್ರತ್ಯೇಕಗೊಳಿಸಬೇಕು ಎಂದು ಹೋದಸಲ ಚರ್ಚಿಸಿದ್ದೆ; ಅದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನೂ ಮುಂದಿಟ್ಟಿದ್ದೆ. ಆದರೆ ಈ ಅಂಶಗಳನ್ನು ಜಾರಿಗೆ ತರುವುದು ಖಂಡಿತವಾಗಿಯೂ ಸುಲಭವಲ್ಲ. ಯಾಕೆಂದರೆ, ವಿಶ್ವದಾದ್ಯಂತ ಹರಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಕಾಮುಕ ಜೀವಿ ಎಂದು ಯಾರೂ ಯೋಚಿಸುವ ಗೊಡವೆಗೇ ಹೋಗಿಲ್ಲ! ವ್ಯತಿರಿಕ್ತವಾಗಿ ಗಂಡು ಮಾತ್ರ ಕಾಮುಕ ಜೀವಿಯೆಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ– ಯಾಕೆಂದರೆ ಉದ್ರಿಕ್ತ ಶಿಶ್ನವು ಎದ್ದು ಕಾಣುತ್ತದಲ್ಲವೆ? ಗಂಡಿನ ಬದುಕಿನಲ್ಲಿ ಶಿಶ್ನೋದ್ರೇಕ, ವೀರ್ಯಸ್ಖಲನ ಶುರುವಾದರೆ ಕಾಮುಕತೆಯ ಮುಕ್ತ ಅಭಿವ್ಯಕ್ತಿಗೆ ಪರವಾನಗಿ ಸಿಕ್ಕಿದಂತೆ– ಮದುವೆಯೂ ಸೇರಿ. ಆದರೆ ಹೆಣ್ಣಿಗೆ ಕಾಮ ಕೆರಳಿದಾಗ ಭಗಾಂಕುರ ನಿಮಿರಿರುವುದು ಕಾಣುವುದಿಲ್ಲವಲ್ಲ? ಹಾಗಾಗಿ ಹೆಣ್ಣನ್ನು ಕಾಮಭಾವನೆಗಳಿಲ್ಲದ, ಗಂಡಿನ ಭೋಗ್ಯಕ್ಕೆ ಯೋನಿಯನ್ನು ನೀಡಲು ಸದಾ ಸಿದ್ಧಳಾಗಬೇಕಾದ ವ್ಯಕ್ತಿಯೆಂದೇ ಲೆಕ್ಕ ಮಾಡಲಾಗುತ್ತದೆ. ಹಾಗಾಗಿಯೇ ಯೋನಿಯಿಲ್ಲದೆ ಹುಟ್ಟಿದ ಹೆಣ್ಣು ಎಷ್ಟೇ ಯೋಗ್ಯಳಾದರೂ ಮದುವೆಯ ಮಾರುಕಟ್ಟೆಯಲ್ಲಿ ಮಾರಾಟವಾಗದ ಸರಕಾಗಿ ಉಳಿಯುತ್ತಾಳೆ. (ಕೆಲವರಲ್ಲಿ ಹುಟ್ಟಿನಿಂದ ಯೋನಿ ಇರುವುದಿಲ್ಲ. ಇವರಿಗೆ ಮದುವೆಗೆ ಅರ್ಹತೆ ಪಡೆಯಲು ಕೃತಕ ಯೋನಿಯನ್ನು ಸೃಷ್ಟಿ ಮಾಡಲಾಗುತ್ತದೆ) ಯೋನಿಯಿರುವ ಕಾರಣಕ್ಕೇ ವೇಶ್ಯೆಯರ ಅಮಾನುಷ ಕುಲವೇ ಸೃಷ್ಟಿಯಾಗಿದೆ. ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಹೆಣ್ಣು ತನ್ನ ಕಾಮತೃಪ್ತಿ ಪಡೆಯುವುದಕ್ಕೆ ಯೋಚಿಸುವ ಬಹುಮುಂಚೆ ತಾನೂ ಕಾಮಜೀವಿಯೆಂದು ಫಲಕ ಹಿಡಿದು ಪ್ರದರ್ಶಿಸುತ್ತ, ಅದಕ್ಕೆ ‘ವಿಶೇಷ ಅರ್ಹತೆ’ ಪಡೆದುಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ. ತನ್ನ ಯೋನಿಯನ್ನು ಪ್ರೀತಿಸದೆ ತನ್ನನ್ನು ಮಾತ್ರ ಪ್ರೀತಿಸುವವರು ಯಾರಾದರೂ ಇದ್ದಾರೆಯೇ ಎಂದು ಕೇಳಬೇಕಾಗುತ್ತದೆ.

ಇಲ್ಲೊಂದು ಸಮಸ್ಯೆಯೂ ಇದೆ: ಹೆಣ್ಣು ತಾನು ಕಾಮಜೀವಿಯೆಂದು ಸಾರ್ವತ್ರಿಕವಾಗಿ ಗುರುತಿಸಿಕೊಳ್ಳುವ ಮುಂಚೆ ಕಾಮಕೂಟಕ್ಕೆ ಸಮಾಜದಿಂದ ಅರ್ಹತಾ ಪತ್ರ ಪಡೆಯಬೇಕಾಗುತ್ತದೆ. ಅದಕ್ಕಾಗಿ ದಾಂಪತ್ಯಕ್ಕೆ ತಯಾರೆಂದು ಘೋಷಿಸಬೇಕಾಗುತ್ತದೆ. ಅದಕ್ಕಾಗಿ ತನ್ನ ಸಾಮಾಜಿಕ ಪಾತ್ರನಿರ್ವಹಣೆಯನ್ನು ಮಾಡಬಲ್ಲೆನೆಂದು ತೋರಿಸಿ ಕೊಡಬೇಕಾಗುತ್ತದೆ. ಹಾಗಾಗಿ ಮನಸ್ಸಿಲ್ಲದಿದ್ದರೂ ತನಗೆ ಗಂಡ-ಮಕ್ಕಳ ಜವಾಬ್ದಾರಿ ಹೊರಲು, ಗಂಡನ ಬಂಧುಗಳನ್ನೂ ನೋಡಿಕೊಳ್ಳಲು ತಯಾರಿದ್ದೇನೆ ಎಂದು ತನ್ನನ್ನು ತಾನೇ ನಂಬಿಸಬೇಕಾಗುತ್ತದೆ. ಇಷ್ಟಾದರೂ ಆಕೆಗೆ ಕಾಮಸುಖದ ಭರವಸೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇಲ್ಲೊಂದು ದೃಷ್ಟಾಂತ ಹೇಳಿಕೊಳ್ಳಲೇಬೇಕು. ಈ ದಾಂಪತ್ಯದ ಆರು ತಿಂಗಳಲ್ಲಿ ಎರಡು ಸಲ ಸಂಭೋಗ ನಡೆದು, ಹೆಂಡತಿ ಗರ್ಭಿಣಿಯಾಗಿ ಅವಳಿಗಳನ್ನು ಹೆತ್ತಿದ್ದಾಳೆ. ನಂತರ ಗಂಡ ಹೆಂಡತಿಯಲ್ಲಿ ಕಾಮಾಸಕ್ತಿ ಪೂರ್ತಿಯಾಗಿ ಕಳೆದುಕೊಂಡಿದ್ದಾನೆ. ವಿಚ್ಛೇದನಕ್ಕಾಗಿ ಹೆಂಡತಿ ದೂರು ಸಲ್ಲಿಸಿದಾಗ ನ್ಯಾಯಾಧೀಶರು ಹೇಳಿದ್ದೇನು? ‘ಗಂಡ ಒಳ್ಳೆಯವನೆನ್ನುತ್ತೀರಿ, ಈ ಎರಡು ಮಕ್ಕಳ ಮುಖ ನೋಡಿಕೊಂಡು ನಿಮ್ಮ ಕಾಮಾಸಕ್ತಿಯನ್ನು ಮರೆತು ಬಾಳುವೆ ಮಾಡಬಹುದಲ್ಲವೆ?’ ಇದರರ್ಥ ಏನು? ಒಂದುಸಲ ಮಕ್ಕಳಾದ ನಂತರ ಹೆಣ್ಣಿನ ಕಾಮಾಕಾಂಕ್ಷೆಯೇ ಸಾಮಾಜಿಕವಾಗಿ ಮಹತ್ವ ಕಳೆದುಕೊಳ್ಳುವ ಸಂಭವವಿದೆ.

ಕಾಮುಕತೆ ಹಾಗೂ ಅದರ ಅಭಿವ್ಯಕ್ತಿಯ ಅಗತ್ಯವು ಊಟ ನಿದ್ರೆಗಳಷ್ಟೇ ಸಾಮಾನ್ಯವಾಗಿದೆ. ಆದರೆ ಇದಕ್ಕೆ ಮಹತ್ವ ಬಂದಿದ್ದು ಮಕ್ಕಳನ್ನು ಹುಟ್ಟಿಸುವ ಗುಣ ಇದರಲ್ಲಿದೆ ಎಂಬುದಕ್ಕೆ– ಹಾಗಾಗಿಯೇ ಕಾಮಕ್ರಿಯೆಯ ಕಡತವು ದಾಂಪತ್ಯ ಎನ್ನುವ ತಪ್ಪು ಇಲಾಖೆಯಲ್ಲಿ ಸೇರಿಹೋಗಿದೆ. ಒಂದು ಮದುವೆಗೆ ಏನೆಲ್ಲ ಖರ್ಚು ಹಾಗೂ ರೀತಿ- ರಿವಾಜುಗಳು ಇರುವುದಾದರೂ, ನಂತರ ನಡೆಯುವ ಕಾಮಕ್ರಿಯೆ ಮಾತ್ರ ಊಟ- ನಿದ್ರೆಗಳಷ್ಟೇ ಸಾಮಾನ್ಯವಾಗಿ ನಡೆಯುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆಯ ಸಹಜತೆಯನ್ನೂ ಸಾಧಾರಣತೆಯನ್ನೂ ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ವಿಚಿತ್ರವೆಂದರೆ, ಏನೇನೂ ಬುದ್ಧಿಯಿಲ್ಲದ ಪ್ರಾಣಿಗಳೂ ಆರಾಮವಾಗಿ ನಡೆಸುವ ಕ್ರಿಯೆಯನ್ನು ನಾವು ಮಾನವರು ಬುದ್ಧಿ ಖರ್ಚುಮಾಡಿ ಎಷ್ಟೊಂದು ಸಂಕೀರ್ಣವನ್ನಾಗಿ ಪರಿವರ್ತಿಸಿ, ಅನುಸರಿಸಲು ಕಷ್ಟಕರವನ್ನಾಗಿ ಮಾಡಿಕೊಂಡಿದ್ದೇವೆ! ಇದನ್ನು ಪ್ರತಿ ಹೆಣ್ಣೂ ಅರ್ಥ ಮಾಡಿಕೊಳ್ಳಬೇಕು. ನನಗೆ ಮಲಗಲು ಸಮಯ ಬೇಕು ಎಂದು ಹೇಳುವಷ್ಟೇ ಸಹಜವಾಗಿ ನನಗೆ ಕಾಮಸುಖ ಸವಿಯಲು ಸಮಯ ಬೇಕು, ಅದಕ್ಕೇ ಬೇಗ ಮನೆಗೆ ಬಾ ಎಂದು ಗಂಡನಿಗೆ ಹೇಳುವ ಛಾತಿಯನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಬ್ಬಳು ಹೇಳಿದ್ದು ನೆನಪಿಗೆ ಬರುತ್ತದೆ: ‘ಇವೊತ್ತು ರಾತ್ರಿ ಹತ್ತು ಗಂಟೆಗೆ ನಮ್ಮ ಹಾಸಿಗೆಯಲ್ಲಿ ಸೆಕ್ಸ್ ನಡೆಯಲಿದೆ – ನೀನಿರಲಿ, ಇಲ್ಲದಿರಲಿ.’

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT