ಆಗುಂಬೆಯ ಮುಂಜಾವಿನಲ್ಲಿ...

ಮಂಗಳವಾರ, ಏಪ್ರಿಲ್ 23, 2019
33 °C

ಆಗುಂಬೆಯ ಮುಂಜಾವಿನಲ್ಲಿ...

Published:
Updated:
Prajavani

ಸಂಧ್ಯಾ ಕಾಲದ ಭಾಸ್ಕರನ ಮನೋಹರತೆ, ಹಸಿರ ಸೆರಗಿಗೆ ಬಣ್ಣ ತುಂಬುವ ಆ ಅದ್ಭುತ ಗಳಿಗೆ ನೋಡಲು ದೇಶ, ವಿದೇಶ, ಪ್ರವಾಸಿಗರ ದಂಡೇ ಬರುತ್ತದೆ. ಆದರೆ, ಇಲ್ಲಿ ನಿತ್ಯ ಸೂರ್ಯಾಸ್ತ ನೋಡಲು ಅದೃಷ್ಟ ಮಾಡಿರಬೇಕು. ಸಾಲಿಟ್ಟ ಬೆಟ್ಟಗಳ ಹಣೆಯಿಂದ ಜಾರುವ ಭಾಸ್ಕರನ ಮನಮೋಹಕ ಗಳಿಗೆ ಮಧುರಾನುಭೂತಿ ನೀಡುತ್ತದೆ.

***

ತುಂಗಭದ್ರಾ ಡ್ಯಾಂನ ಹಿನ್ನೀರು, ವಿಶಾಲವಾಗಿ ಹರಡಿಕೊಂಡು ಬದಿಯಲ್ಲಿ ಒಣಕಲು ಮರಗಳು, ಅಸ್ಥಿಪಂಜರದಂತಿರುವ ಬೋಳು ಕೊಂಬೆಗಳು, ಕಲಾವಿದ ಬಿಡಿಸಿದ ಕಲಾಕೃತಿಗಳಂತೆ ಕಾಣುತ್ತಿದ್ದವು.

ಎಲ್ಲಾ ಜಾತಿಯ ಮರಗಳು ಒಗ್ಗೂಡಿ ಜೀವವೈವಿಧ್ಯವನ್ನು ಪ್ರದರ್ಶಿಸಿದ್ದವು. ದೂರದ ಬೆಟ್ಟಗಳಲ್ಲಿ ಪೊದೆಯಂತೆ ಕಾಣುವ ಕಾನನದ ನಡು ನಡುವೆ ಜನರ ಪುಟ್ಟ ಗೂಡು ಕುತೂಹಲ ಮೂಡುವಂತೆ ಮಾಡಿತ್ತು.

ಕರ್ನಾಟಕದ ಚಿರಾಪುಂಜಿ ಎಂದು ಕರೆಯುವ ಆಗುಂಬೆ ಹಾದಿಯಲ್ಲಿ ಕಂಡ ದೃಶ್ಯವಿದು. ಸಂಧ್ಯಾ ಕಾಲದ ಭಾಸ್ಕರನ ಮನೋಹರತೆ, ಹಸಿರ ಸೆರಗಿಗೆ ಬಣ್ಣ ತುಂಬುವ ಆ ಅದ್ಭುತ ಗಳಿಗೆ ನೋಡಲು ದೇಶ, ವಿದೇಶ, ಪ್ರವಾಸಿಗರ ದಂಡೇ ಬರುತ್ತದೆ. ಆದರೆ, ಇಲ್ಲಿ ನಿತ್ಯ ಸೂರ್ಯಾಸ್ತ ನೋಡಲು ಅದೃಷ್ಟ ಮಾಡಿರಬೇಕು. ಸಾಲಿಟ್ಟ ಬೆಟ್ಟಗಳ ಹಣೆಯಿಂದ ಜಾರುವ ಭಾಸ್ಕರನ ಮನಮೋಹಕ ಗಳಿಗೆ ಮಧುರಾನುಭೂತಿ ನೀಡುತ್ತದೆ. ಕಾಡಿನ ನಡುವೆ ಸೂರ್ಯಾಸ್ತ ನೋಡಲು ಬಂದವರಿಗೆ ಹಿಂತಿರುಗುವುದು ತುಸು ಕಷ್ಟವೇ. ಇಂಥ ಸಂದರ್ಭದಲ್ಲಿ ಆಶ್ರಯ ನೀಡುವುದೇ ಇಲ್ಲಿನ ದೊಡ್ಡಮನೆ.

ಯಾವುದು ಈ ದೊಡ್ಡಮನೆ

ಆಗುಂಬೆಯ ಮುಖ್ಯರಸ್ತೆಯಲ್ಲೇ ಇದೆ ಆ ದೊಡ್ಡಮನೆ. ಮಾಲ್ಗುಡಿ ಡೇಸ್‌ ಚಿತ್ರೀಕರಣ ನಡೆದದ್ದು ಇಲ್ಲಿಯೇ ಎಂಬುದು ಹೆಮ್ಮೆಯ ಸಂಗತಿ. ಆಗುಂಬೆಗೆ ಹೋದವರು ದೊಡ್ಡಮನೆಗೆ ಹೋಗದಿದ್ದರೆ ಪ್ರವಾಸ ಪೂರ್ಣವಾಗುವುದಿಲ್ಲ.

ಸುಮಾರು 150 ವರ್ಷ ಹಿಂದಿನ ವಿಶಾಲವಾದ ಎರಡು ಅಂತಸ್ತಿನ ತೊಟ್ಟಿಮನೆ ಈಗಲೂ ದೃಢವಾಗಿದೆ. ಮಂಗಳೂರು ಹೆಂಚು ಹೊದಿಸಲಾಗಿದೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಒಳಗೆ ಫಳಫಳ ಹೊಳೆಯುವ, ಸುಂದರ ಕೆತ್ತನೆಯ ಕಂಬಗಳು. ವಿಶಾಲವಾದ ಒಳಾಂಗಣ, ಉಳಿದುಕೊಳ್ಳಲು ಕೊಠಡಿಗಳು ಮಾತ್ರವಲ್ಲ, ಎಲ್ಲಾ ವ್ಯವಸ್ಥೆಯೂ ಇದೆ. ಹಂಡೆಯಲ್ಲಿ ಉರಿಯುವ ಬಿಸಿಬಿಸಿ ನೀರು, ಮನೆ ಮುಂದೆ ಹರಟೆ ಕಟ್ಟೆ, ದೇವರ ಮನೆಯ ಮುಂದೆ ಬಿಡಿಸಿದ ಚಿತ್ತಾರಗಳಲ್ಲಿ ಮಲೆನಾಡಿನ ಸಂಪ್ರದಾಯ ಆಕರ್ಷಿಸುತ್ತದೆ. ಈ ಮನೆಯ ಒಡತಿ ಕಸ್ತೂರಕ್ಕ.

ಹಿಂದೆ ಆಗುಂಬೆಯ ಘಾಟಿಯಲ್ಲಿ ರಾತ್ರಿ ಬಸ್ಸು ಸಂಚಾರ ಕಷ್ಟವಾಗಿತ್ತು. ಪ್ರಯಾಣಿಕರಿಗೆ, ಪ್ರವಾಸ ಬರುವ ಮಕ್ಕಳಿಗೆ, ದೂರದ ಊರಿಗೆ ಹೊರಟಿರುವ ಹೆಣ್ಣುಮಕ್ಕಳಿಗೆ, ದಾರಿ ಮಧ್ಯೆ ವಾಹನ ಕೆಟ್ಟು ಕಂಗಾಲಾದವರಿಗೆ ಈ ಮನೆ ಆಶ್ರಯ ನೀಡಿತ್ತು. ಈಗ ಪ್ರವಾಸಿಗರು, ಯಾತ್ರಿಕರಿಗೂ ನೆರವಾಗಿದೆ. ಮುಂಚಿತವಾಗಿಯೇ ಬುಕ್‌ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ.

ದೊಡ್ಡಮನೆಯಲ್ಲಿ ವಾಸ್ತವ್ಯ

ನಾವೂ ದೊಡ್ಡಮನೆ ತಲುಪಿದಾಗ ರಾತ್ರಿಯಾಗಿತ್ತು. ಅಲ್ಲೇ ವಾಸ್ತವ್ಯ ಹೂಡುವುದೆಂದು ತೀರ್ಮಾನವಾಯಿತು. ರಾತ್ರಿ ಮಲೆನಾಡಿನ ಬಾಳೆಎಲೆಯಲ್ಲಿ ತರಹೇವಾರಿ ರುಚಿಕರ ಚಟ್ನಿ, ಪಲ್ಯೆಗಳ ಊಟ. ಜೊತೆಗೆ ಕಷಾಯ. ರಾತ್ರಿ ಹಾಸಿಗೆಗೆ ಒರಗಿದ್ದು, ನಿದ್ದೆ ಹತ್ತಿದ್ದೇ ಗೊತ್ತಿಲ್ಲ. ಮುಂಜಾನೆ ಎಚ್ಚರವಾದಾಗ ದೂರದಲ್ಲೆಲ್ಲೋ ವಿಷ್ಣು ಮಂತ್ರ ಅಲೆಗಳಲ್ಲಿ ತೇಲುತ್ತಾ ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು. ಒಳಗಿಂದ ಕಷಾಯದ ಘಮಲು ಮೂಗಿಗೆ ಬಡಿಯುತ್ತಿತ್ತು. ಕಿಟಕಿಯಿಂದ ಟಪ್‌ಟಪ್‌ ನೀರಿನ ಹನಿ ನಿರಂತರವಾಗಿ ತಾಳ ಹಾಕುತ್ತಿತ್ತು. ಚಳಿಗೆ ಹೊದಿಕೆಯನ್ನು ಮತ್ತಷ್ಟು ಎಳೆದು ಮುದುಡಿ ಮಲಗಿದೆವು. ಯಾರೊಬ್ಬರೂ ನಮ್ಮನ್ನು ಏಳಿಸುವ ಗುಂಗಿಗೆ ಹೋಗಲಿಲ್ಲ. ನಿದ್ದೆ ಬಾರದಿದ್ದರೂ ದೇಹ ಹಾಸಿಗೆ ಬಿಟ್ಟು ಕದಲುವ ಸ್ಥಿತಿ ಇರಲಿಲ್ಲ. ಅಂದು ಊರು ಸುತ್ತುವ ಯೋಜನೆ ಹಾಕಿದ್ದು ತಡವಾಗಿ ನೆನಪಾಯಿತು.


ದೊಡ್ಡಮನೆ ಒಳಗೆ

ಆದರೂ, ತೂಕಡಿಸುತ್ತಲೇ ಇಬ್ಬರೂ ಸುತ್ತಾಟಕ್ಕೆ ಸಿದ್ಧರಾದೆವು. ಸುತ್ತಲೂ ಬೆಟ್ಟಗುಡ್ಡ, ಹೊಳೆಯುವ ಅಸಂಖ್ಯ ತೊರೆಗಳನ್ನು ತನ್ನಲ್ಲಿ ಅಡಗಿಸಿಟ್ಟ ಆಗುಂಬೆ ಎನ್ನುವ ಪುಟ್ಟ, ಸೊಗಸಾದ ಊರಿನ ಒಳಗೆ ಕಾಲಿಟ್ಟೆವು. ನಿಜಕ್ಕೂ ಅದೊಂದು ಮಂಜಿನ ಜಗತ್ತು. ಅದರಲ್ಲಿ ಕಳೆದು ಹೋಗದಿರಲು ಯಾರಿಂದಲೂ ಸಾಧ್ಯವಿಲ್ಲ.

ವಿಶಾಲವಾದ ರಾಜ ಬೀದಿಯಲ್ಲಿ ನಮ್ಮನ್ನೇ ನಾವು ಗುರುತಿಸಲಾಗದಷ್ಟು ಮಂಜು ಆವರಿಸಿತ್ತು. ದೇವಸ್ಥಾನದ ಬಳಿ ಹೋದಂತೆ ದೊಡ್ಡ ಮೈದಾನ, ನೂರಾರು ವರ್ಷಗಳ ಹಳೆಯ ತೊಟ್ಟಿಮನೆಗಳು, ಪಾಚಿಕಟ್ಟಿದ ಕಟ್ಟಡಗಳೂ ತಾವು ಎಷ್ಟು ಪುರಾತನದವರು ಎಂದು ಸಾರುತ್ತಿದ್ದವು. ಒಂದಷ್ಟು ಪಿಸುಪಿಸು ಮಾತು, ಪೋಟೊ ಕ್ಲಿಕ್ಕಿಸಿದ ಶಬ್ದ ಮುದ ನೀಡುತ್ತಿತ್ತು. ಊರ ತುಂಬ ಅಲೆದಾಡಿ ನಡುಗುತ್ತಲೇ ಮನೆಗೆ ವಾಪಸ್ಸಾದೆವು. ಯಥಾಪ್ರಕಾರ ಬಿಸಿ ಬಿಸಿ, ರುಚಿಕರ ತಿಂಡಿ ನಮಗಾಗಿ ಕಾಯುತ್ತಿತ್ತು. ಇಲ್ಲಿ ಉಳಿಯಲು ಹಾಗೂ ಊಟಕ್ಕೆ ‌ಹಣ ನಿಗದಿ ಮಾಡಿಲ್ಲ. ಹೊರಡುವಾಗ ಕೊಟ್ಟಷ್ಟನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ.

ಚಾರಣ ತಾಣಗಳು

ಆಗುಂಬೆಗೆ ತೀರಾ ಸಮೀಪದಲ್ಲಿ ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ಪ್ರವಾಸಿಗರು ಇಲ್ಲಿಂದ ತೆರಳುವಾಗ ಮಂಜಿನ ಸ್ವರ್ಗ ಕುಂದಾದ್ರಿಯನ್ನು ಮರೆಯುವುದಿಲ್ಲ. ಕಡಿದಾದ ಬೆಟ್ಟ, ಗುಟ್ಟಗಳ ಸಾಲಿನಲ್ಲಿ ಹತ್ತುತ್ತಾ, ಎತ್ತರಕ್ಕೇರಿ ಕೈಚಾಚಿದಷ್ಟು ಮಂಜಿನ ಅಲೆಗಳನ್ನು ಆಸ್ವಾದಿಸಲು ಮನಸುಗಳು ಹಾತೊರೆಯುತ್ತವೆ.

ಸಂಜೆಗೆ ಸೂರ್ಯಾಸ್ತ, ರಾತ್ರಿಯಲ್ಲಿ ದೊಡ್ಡಮನೆಯಲ್ಲಿ ಆತಿಥ್ಯ, ಮುಂಜಾನೆ ಕುಂದಾದ್ರಿಗೆ ಭೇಟಿ – ಇದು ಈ ಭಾಗದ ಅತ್ಯಂತ ಅಚ್ಚು
ಕಟ್ಟಾದ ಪ್ರವಾಸದ ಯೋಜನೆ. ಸುತ್ತ ಒನಕೆ, ಅಬ್ಬಿಯಂತಹ ಜಲಪಾತಗಳಿವೆ. ಅಲ್ಲಿ ಟ್ರಕ್ಕಿಂಗ್ ಮಾಡಬಹುದು. ಈ ಭಾಗದಲ್ಲಿ ಆಗಸ್ಟ್‌ನಿಂದ ಏಪ್ರಿಲ್‌ವರೆಗೆ ಪ್ರಯಾಣ ಮಾಡುವುದಕ್ಕೆ ಸೂಕ್ತ ಸಮಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !