ಮಂಗಳವಾರ, ನವೆಂಬರ್ 19, 2019
29 °C
ಶನಿವಾರ, 5–11–1994

ವಿರೋಧ ಪಕ್ಷದ ನಾಯಕನ ಹತ್ಯೆ ಪ್ರಕರಣದ ತನಿಖೆಗೆ ಭಾರತದ ನೆರವು ಕೇಳಿದ್ದ ಲಂಕಾ

Published:
Updated:

ಡಿಸ್ಸ ನಾಯಕೆ ಹತ್ಯೆಯ ತನಿಖೆ: ಭಾರತಕ್ಕೆ ಅಧಿಕೃತ ಕೋರಿಕೆ
ಕೊಲಂಬೊ, ನ. 4 (ಪಿಟಿಐ, ಯುಎನ್‌ಐ)– ಅಕ್ಟೋಬರ್ 24 ರಂದು ಚುನಾವಣಾ ರ್‍ಯಾಲಿಯೊಂದರಲ್ಲಿ ಬಾಂಬ್ ಸ್ಫೋಟಕ್ಕೆ ಬಲಿಯಾದ ಶ್ರೀಲಂಕಾ ವಿರೋಧ ಪಕ್ಷದ ನಾಯಕ ಗಾಮಿನಿ ಡಿಸ್ಸನಾಯಕೆ ಅವರ ಹತ್ಯೆಯ ಸಂಚಿನ ಬಗ್ಗೆ ತನಿಖೆ ನಡೆಸಲು ಇಂದು ಶ್ರೀಲಂಕಾ ಸರ್ಕಾರ ಔಪಚಾರಿಕವಾಗಿ ಭಾರತದ ನೆರವನ್ನು ಕೇಳಿತು.

ಈ ಸಂಬಂಧ ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ್ ಕದಿರಂಗಮಾರ್ ಭಾರತ ಸರ್ಕಾರಕ್ಕೆ ತಲುಪಿಸುವಂತೆ ಇಲ್ಲಿರುವ ಭಾರತೀಯ ಹೈಕಮೀಷನರ್ ಅವರಿಗೆ ಪತ್ರವೊಂದನ್ನು ಹಸ್ತಾಂತರಿಸಿದರು.

ತನಿಖೆಗೆ ವಿದೇಶಿ ನೆರವು ಪಡೆಯುವ ವಿಚಾರದಲ್ಲಿ ಡಿಸ್ಸನಾಯಕೆ ಕುಟುಂಬದ ಅಭಿಪ್ರಾಯವನ್ನು ಶ್ರೀಲಂಕಾ ಪ್ರಧಾನಿ ಚಂದ್ರಿಕಾ ಕುಮಾರತುಂಗಾ ಕೇಳಿದ್ದರ ಹಿನ್ನೆಲೆಯಲ್ಲಿ ಭಾರತದ ನೆರವನ್ನು ಪಡೆಯುವಂತೆ ಡಿಸ್ಸನಾಯಕೆ ಅವರ ಪತ್ನಿ ಶ್ರೀಮಾ ಸೂಚಿಸಿದ್ದರು. ಅದರಲ್ಲೂ ರಾಜೀವ್ ಗಾಂಧಿಯವರ ಹತ್ಯೆ ಬಗ್ಗೆ ತನಿಖೆ ನಡೆಸಿರುವ ಸಿಬಿಐನ ಡಿ.ಆರ್. ಕಾರ್ತಿಕೇಯನ್ ಮತ್ತು ಫಾರೆನ್ಸಿಕ್ ವಿಜ್ಞಾನ ಪರಿಣಿತ ಪ್ರೊ. ಪಿ. ಚಂದ್ರಶೇಖರನ್ ಅವರನ್ನು ತನಿಖೆಗೆ ನೇಮಿಸುವಂತೆ ಸಲಹೆ ಮಾಡಿದ್ದರು. ರಾಜೀವ್  ಮತ್ತು ಡಿಸ್ಸನಾಯಕೆ ಅವರ ಹತ್ಯೆ ಘಟನೆ ಒಂದೇ ರೀತಿಯಾಗಿದ್ದು ಎರಡರಲ್ಲೂ ಎಲ್‌ಟಿಟಿಇ ಆತ್ಮಹತ್ಯಾ ದಳದ ಮಹಿಳೆ ಪಾಲ್ಗೊಂಡಿರುವ ಸುಳಿವು ದೊರೆತದ್ದರಿಂದ ಈ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ ಈಗ ಅಧಿಕೃತವಾಗಿ ಭಾರತದ ಸಹಾಯವನ್ನು ಯಾಚಿಸಿದೆ.

 ಬಸವನಗುಡಿ–ವಜ್ರಮುನಿ, ಸೊರಬಕ್ಕೆ ಪರಶುರಾಮಪ್ಪ
ಬೆಂಗಳೂರು, ನ. 4– ವಿಧಾನಸಭೆಗೆ ಮತ್ತೆ ಪ್ರವೇಶಿಸಲು ಟಿಕೆಟ್ ಸಿಗದ ಹಾಲಿ ಶಾಸಕರ ಒತ್ತಡ, ಕೊನೆಗಳಿಗೆಯ ಬದಲಾವಣೆಗಾಗಿ ಆಕಾಂಕ್ಷಿಗಳು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಮುಂಚೆ ಪ್ರಕಟಿಸಿದ್ದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳೆಲ್ಲರಿಗೆ ಇಂದು ‘ಬಿ’ ಫಾರಂ ನೀಡಲಾಗಿದೆ.

ಪ್ರತಿಷ್ಠಿತ ಕ್ಷೇತ್ರವಾಗಿರುವ ಸೊರಬದಿಂದ ಪರಶುರಾಮಪ್ಪ ಅವರನ್ನು ಕಣಕ್ಕಿಳಿಸಲು ಇಂದು ರಾತ್ರಿ ನಿರ್ಧರಿಸಲಾಯಿತು. ಕೆ.ಜಿ.ಎಫ್. ಕ್ಷೇತ್ರವನ್ನು ಎಐಎಡಿಎಂಕೆ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರೂ ಆ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದುದರಿಂದ ಈ ಕ್ಷೇತ್ರದಿಂದ ಎ.ಕೆ. ಶೆಲ್ವರಾಜ್ ಎಂಬುವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು.

ಖಳನಾಯಕ ಪಾತ್ರಧಾರಿಯಾಗಿ ಮೆರೆದು ಜನಮನದಲ್ಲಿ ದುಷ್ಟ ಎಂಬ ಭಾವನೆ ಅಚ್ಚೊತ್ತಿರುವುದು ಬಸವನಗುಡಿ ಕ್ಷೇತ್ರದ ಟಿಕೆಟ್ ಪಡೆದಿದ್ದ ಚಿತ್ರನಟ ವಜ್ರಮುನಿ ಅವರನ್ನು ಬದಲಾಯಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಈ ಕ್ಷೇತ್ರದಲ್ಲಿ ಅವರನ್ನೇ ಉಳಿಸಿಕೊಳ್ಳಲಾಗಿದೆ. ವಜ್ರಮುನಿ ಅವರ ಚಿತ್ರಗಳ ವಿಡಿಯೋ ಪ್ರದರ್ಶನ ಮಾಡಿ ತಮ್ಮ ಕಡೆಗೆ ಜನರ ಮನವೊಲಿಸಲು ಬಿಜೆಪಿ ಯತ್ನಿಸುತ್ತಿರುವ ಸಂಗತಿ ತಿಳಿದು ಅಭ್ಯರ್ಥಿ ಬದಲಾಯಿಸುವ ಆಲೋಚನೆಯಿತ್ತಾದರೂ ಕೊನೆಗಳಿಗೆಯಲ್ಲಿ ಮೊದಲ ನಿರ್ಧಾರಕ್ಕೆ ಅಂಟಿಕೊಳ್ಳಲಾಯಿತು.

ಹುಬ್ಬಳ್ಳಿ ಗೋಲಿಬಾರ್ ತನಿಖೆಗೆ ಆಯೋಗ
ಬೆಂಗಳೂರು, ನ. 4– ಹುಬ್ಬಳ್ಳಿಯ ಧ್ವಜಾರೋಹಣ ವಿವಾದದ ಸಂಬಂಧ ನಡೆದ ಗೋಲಿಬಾರ್ ಬಗ್ಗೆ ವಿಚಾರಣೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ರಾಜಶೇಖರಮೂರ್ತಿ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.

ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರುವುದು ಎಂದೂ ಸರ್ಕಾರಿ ಆದೇಶ ತಿಳಿಸಿದೆ.

ಪ್ರತಿಕ್ರಿಯಿಸಿ (+)