ಶುಕ್ರವಾರ, ಜುಲೈ 30, 2021
22 °C

25 ವರ್ಷಗಳ ಹಿಂದೆ | ಮಂಗಳವಾರ, ಜೂನ್ 6, 1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ
ರನ್ನಮಂಟಪ, ಮಧುರಚೆನ್ನ ವೇದಿಕೆ, ಮುಧೋಳ, ಜೂನ್ 5– ‘ರನ್ನನ ಊರಿದು ಮುಧುವೊಳಲು’ ಎಂದು ಸಂಭ್ರಮದಿಂದ ಎದೆತಟ್ಟಿ ಹೇಳುವ ಅವಕಾಶ ಮುಧೋಳದ ನಾಗರಿಕರಿಗೆ ಸಿಕ್ಕಿತು. ಮುಧುವೊಳಲಿನಲ್ಲಿ ಹರಿದ ಕಾವ್ಯ ಸುಧೆಯನ್ನು ಪರಿಚಯಿಸುವ, ಮುಧುವೊಳಲಿನ ಸಾಹಿತ್ಯ ಪ್ರೀತಿಯನ್ನು ಎಲ್ಲರಿಗೂ ಹಂಚುವ ಕೆಲಸವನ್ನು ಮುಧೋಳ ಯಶಸ್ವಿಯಾಗಿ ನಿಭಾಯಿಸುವುದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 64ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮುಧೋಳದಲ್ಲಿ ಸಮ್ಮೇಳನದ ಯಶಸ್ಸು ನಿರಂತರವಾಗಿ ಎಲ್ಲರಿಗೂ ನೆನಪಿರಲಿ ಎಂಬಂತೆ ಸಾಹಿತ್ಯ ಸಮ್ಮೇಳನ ನಡೆದ ಜಾಗದ ಸ್ವಲ್ಪ ಮುಂಚೆಯೇ ರನ್ನನ ‘ಗದಾಯುದ್ಧ’ವನ್ನು ಕಣ್ಣಿಗೆ ಕಟ್ಟುವಂತಹ ಪ್ರತಿಮೆಯ ಸ್ಮಾರಕ ಉದ್ಘಾಟಿಸಲಾಯಿತು. ಮೂರು ಊರಿನ ರಸ್ತೆಗಳು ಸೇರುವ ಜಾಗಕ್ಕೆ ‘ರನ್ನ ವೃತ್ತ’ ಎಂದು ಹೆಸರಿಡಲಾಯಿತು.

ಗಡಿ ವಲಸೆ– ತಿದ್ದುಪಡಿಗೆ ಆಗ್ರಹ
ರನ್ನ ಮಂಟಪ, ಮಧುರಚೆನ್ನ ವೇದಿಕೆ, ಮುಧೋಳ, ಜೂನ್ 5–ಭಾಷಾವಾರು ಪ್ರಾಂತ್ಯ ವಿಂಗಡಣೆ ನಂತರ ಉದ್ಭವಿಸಿರುವ ಗಡಿವಲಸೆ, ಮತ್ತಿತರ ಸಾಂಸ್ಕೃತಿಕ, ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಿಗೂ ಅನ್ವಯಿಸುವಂತಹ ರಾಷ್ಟ್ರೀಯ ನೀತಿಯನ್ನು ರೂಪಿಸಲು ರಾಜ್ಯಾಂಗದಲ್ಲಿ ಅಗತ್ಯ ತಿದ್ದುಪಡಿ ಆಗಬೇಕು ಎಂದು ಅಖಿಲ ಭಾರತ 64ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ ಮೂಲಕ ಒತ್ತಾಯಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಹಿರಂಗ ಅಧಿವೇಶನದಲ್ಲಿ ಶ್ರೀನಿವಾಸನ್ 13 ನಿರ್ಣಯಗಳನ್ನು ಓದಿ ಹೇಳಿದರು. ಜನರು ಚಪ್ಪಾಳೆ ತಟ್ಟಿ ನಿರ್ಣಯ ಅಂಗೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.