ಶುಕ್ರವಾರ, ಫೆಬ್ರವರಿ 21, 2020
29 °C

27.12.1994 ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಡಿ. 26– ರಾಜ್ಯದ ಹತ್ತನೇ ವಿಧಾನಸಭಾ ಸದಸ್ಯರಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂ ಅವರ ಮಂತ್ರಿಮಂಡಲದ ಎಲ್ಲ ಸದಸ್ಯರು, ಮಾಜಿ ಮುಖ್ಯಮಂತ್ರಿಗಳಾದ ಎಸ್‌. ಬಂಗಾರಪ್ಪ ಹಾಗೂ ಎಂ. ವೀರಪ್ಪ ಮೊಯಿಲಿ ಸೇರಿದಂತೆ 213 ಮಂದಿ ಇಂದು ಹಂಗಾಮಿ ವಿಧಾನಸಭಾಧ್ಯಕ್ಷ ಧರ್ಮಸಿಂಗ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಏಳನೇ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಮೊದಲನೆಯವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ಪೀಕರ್ ಆಗಿ ರಮೇಶ್ ಕುಮಾರ್ ಆಯ್ಕೆ ಖಚಿತ

ಬೆಂಗಳೂರು, ಡಿ. 26– ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಆಡಳಿತಾರೂಢ ಜನತಾ ದಳದ ಸದಸ್ಯ ರಮೇಶ್ ಕುಮಾರ್ ಅವರು ನಾಳೆ ವಿಧಾನಸಭೆಯ ಹದಿಮೂರನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕುಮಾರ್ ಹೆಸರು ಸೂಚಿಸಿ ಜನತಾದಳ ಎರಡು ಪ್ರಸ್ತಾವಗಳನ್ನು ಸಲ್ಲಿಸಿದೆ. ಒಂದನೇ ಪ್ರಸ್ತಾವದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರ ಹೆಸರು ಸೂಚಿಸಿದ್ದು, ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅನುಮೋದಿಸಿದ್ದಾರೆ. ಎರಡನೇ ಪ್ರಸ್ತಾವದಲ್ಲಿ ಕಂದಾಯ ಸಚಿವ ಆರ್‌.ಎಲ್‌. ಜಾಲಪ್ಪ ಅವರ ಹೆಸರು ಸೂಚಿಸಿದ್ದು, ಹಣಕಾಸು ಸಚಿವ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.

ಕರಾಚಿ: ಭಾರತದ ಕಾನ್ಸುಲೇಟ್ ಕಚೇರಿ ಮುಚ್ಚಲು ಪಾಕ್ ಸೂಚನೆ

ಇಸ್ಲಾಮಾಬಾದ್‌, ಡಿ. 26, (ಪಿಟಿಐ)– ಕರಾಚಿಯಲ್ಲಿನ ಭಾರತೀಯ ಕಾನ್ಸುಲೇಟ್ ಕಚೇರಿಯನ್ನು ಈ ಕೂಡಲೇ ಮುಚ್ಚುವಂತೆ ಪಾಕಿಸ್ತಾನದ ಸರ್ಕಾರ ಇಂದು ಭಾರತಕ್ಕೆ ಸೂಚಿಸಿದೆ. ಪಾಕಿಸ್ತಾನದ ಈ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಿರುವ ಭಾರತವು ಇದು ತೀರಾ ಅನಗತ್ಯ ಹಾಗೂ ಅನಪೇಕ್ಷಿತ ಹೆಜ್ಜೆ ಎಂದು ಬಣ್ಣಿಸಿದೆ.

‘ಕರಾಚಿಯಲ್ಲಿನ ಕಾನ್ಸುಲೇಟ್ ಕಚೇರಿ ಮುಚ್ಚುವಂತೆ ಒತ್ತಾಯಿಸುವ ಅಧಿಕಾರ ಚಲಾಯಿಸದೆ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇಲ್ಲ. ಪಾಕಿಸ್ತಾನದ ಒಳಗೆ ಭಯೋತ್ಪಾದನೆ, ಭಯೋತ್ಪಾದಕ ಚಟುವಟಿಕೆಯ ಕೇಂದ್ರವೊಂದು ಕಾರ್ಯ ನಿರ್ವಹಿಸಲು ನಾವು ಬಿಡುವುದಿಲ್ಲ’ ಎಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ನಜ್ಮುದ್ದೀನ್ ಶೇಖ್ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)