ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 19–1–1994

Last Updated 18 ಜನವರಿ 2019, 19:45 IST
ಅಕ್ಷರ ಗಾತ್ರ

ಮೊಯಿಲಿ ಮುಂದುವರಿಕೆ–ಸೂತ್ರಕ್ಕೆ ಭಿನ್ನರ ಅಸಮ್ಮತಿ

ಬೆಂಗಳೂರು, ಜ. 18– ವೀರಪ್ಪ ಮೊಯಿಲಿ ಅವರೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಯುವುದು, ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಾಕಷ್ಟು ಪ್ರಾಮುಖ್ಯತೆ ನೀಡುವುದು, ಮಾಜಿ ಕಂದಾಯ ಸಚಿವ ಎಂ. ರಾಜಶೇಖರ ಮೂರ್ತಿ ಅವರಿಗೆ ರಾಜ್ಯಸಭಾ ಸ್ಥಾನ ಪರಿಶೀಲನೆ, ಭಿನ್ನರನ್ನೂ ಸೇರಿಸಿಕೊಂಡು ಸಂಪುಟ ಹಾಗೂ ಕೆಪಿಸಿಸಿ ಪುನರ್ ರಚನೆ ಇವು ಎಐಸಿಸಿ ವೀಕ್ಷಕ ಡಾ. ಜಗನ್ನಾಥ ಮಿಶ್ರಾ ಅವರು ರಾಜ್ಯ ಕಾಂಗೈ ಒಳಜಗಳ ಬಗೆಹರಿಸಲು ಪ್ರಕಟಿಸಿದ ಹನ್ನೆರಡು ಸೂತ್ರಗಳಲ್ಲಿ ಪ್ರಮುಖವಾದವು.

ಈ ಮಧ್ಯೆ ಇಂದು ರಾತ್ರಿ ಮೂರ್ತಿ ಅವರ ಮನೆಯಲ್ಲಿ ಸಭೆ ಸೇರಿದ್ದ ಭಿನ್ನಮತೀಯ ಶಾಸಕರು ತಾವೆಲ್ಲ ಸಾಮೂಹಿಕವಾಗಿ ರಾಜೀನಾಮೆ ನೀಡಿ ಆ ಪತ್ರಗಳನ್ನು ಭಿನ್ನ ಸಂಸತ್ ಸದಸ್ಯರಿಗೆ ಸಲ್ಲಿಸಿ ಪಕ್ಷದ ಅಧ್ಯಕ್ಷರಿಗೆ ತಲುಪಿಸಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿನ ಪಕ್ಷದ ಬಿಕ್ಕಟ್ಟನ್ನು ಬಗೆಹರಿಸಲು ಪಕ್ಷದ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ತೀರ್ಮಾನದಂತೆ ಇವನ್ನು ಪ್ರಕಟಿಸಿರುವುದಾಗಿ ತಿಳಿಸಿದ ಮಿಶ್ರಾ ಅವರು ಇದರಿಂದ ರಾಜ್ಯದಲ್ಲಿ ಕಳೆದ ಏಳೆಂಟು ತಿಂಗಳಿಂದ ತಲೆದೋರಿದ್ದ ನಾಯಕತ್ವ ಬದಲಾವಣೆ ಸಂಬಂಧದಲ್ಲಿನ ಬಿಕ್ಕಟ್ಟು ಬಗೆಹರಿದಂತೆ ಎಂದರು.

ಈಜು: ಕರ್ನಾಟಕದ ಸ್ವರ್ಣ ಬೇಟೆ

ಪುಣೆ, ಜ. 18– ಕರ್ನಾಟಕ ತಂಡದವರು ಮೂರನೆ ರಾಷ್ಟ್ರೀಯ ಕ್ರೀಡೆಗಳಲ್ಲಿ, ಈಜಿನ ಮೂಲಕ ಚಿನ್ನದ ಬೇಟೆ ಆರಂಭಿಸಿದರು. ಕರ್ನಾಟಕ ಇಂದು ಒಟ್ಟು ಐದು ಸ್ವರ್ಣಗಳನ್ನು ಗೆದ್ದುಕೊಂಡಿತು.

ಆದರೆ ಇವುಗಳಲ್ಲಿ ಈಜಿನದೇ ಸಿಂಹಪಾಲು. ಇಂದು ನಿರ್ಧಾರವಾದ ನಾಲ್ಕು ಸ್ವರ್ಣಗಳಲ್ಲಿ ಮೂರು ಚಿನ್ನವನ್ನಲ್ಲದೇ ಎರಡು ಕಂಚಿನ ಪದಕಗಳನ್ನೂ ರಾಜ್ಯದ ಈಜು ಸ್ಪರ್ಧಿಗಳು ಕಬಳಿಸಿದರು.

ವೈಭವದ ಪರ್ಯಾಯ ಮಹೋತ್ಸವ

ವಾದಿರಾಜ ಮಂಟಪ (ಉಡುಪಿ), ಜ. 18– ವೇದ ಘೋಷಗಳ ಪಠಣಗಳ ಮಧ್ಯೆ ಜಗತ್‌ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣನ ಪೂಜಾ ಕೈಂಕರ್ಯವನ್ನು ಹಸ್ತಾಂತರಿಸುವ ಪರ್ಯಾಯ ಮಹೋತ್ಸವವು ಇಂದು ಇಲ್ಲಿ ವೈಭವಪೂರ್ಣವಾಗಿ ಜರುಗಿತು.

ಅರುಣೋದಯದ ನಂತರ ಕೆಲವೇ ನಿಮಿಷಗಳ ಅಂತರದಲ್ಲಿ ಸಮಯಕ್ಕೆ ಸರಿಯಾಗಿ ಆರಂಭವಾದ ವರ್ಣರಂಜಿತ ಸಮಾರಂಭದಲ್ಲಿ ಪರ್ಯಾಯ ದರ್ಬಾರು ಆರಂಭವಾಯಿತು. ಇದುವರೆಗೆ ಪರ್ಯಾಯ ಪೀಠವನ್ನು ಅಲಂಕರಿಸಿ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಅನೇಕ ಜನಹಿತ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಪರ್ಯಾಯಪಟ್ಟವನ್ನು ಏರುತ್ತಿರುವ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರಿಗೆ ಕೃಷ್ಣನ ಪೂಜಾ ಅಧಿಕಾರವನ್ನು ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT