ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 20–4–1969

Last Updated 19 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ರಾಜ್ಯ ಯೋಜನೆಗಳಿಗೆ ಇನ್ನೂ ಹೆಚ್ಚು ಹಣ: ಎನ್‌.ಡಿ.ಸಿ. ಸಭೆಯಲ್ಲಿ ಮುಖ್ಯಮಂತ್ರಿಗಳ ಒತ್ತಾಯ
ನವದೆಹಲಿ, ಏ. 19– ನಾಲ್ಕನೆ ಪಂಚವಾರ್ಷಿಕ ಯೋಜನೆಯಲ್ಲಿ ರಾಜ್ಯಗಳ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಗಣನೀಯವಾಗಿ ಹೆಚ್ಚಬೇಕೆಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು– ಅವರ ರಾಜಕೀಯ ಧೋರಣೆ ಏನೇ ಇರಲಿ, ಇಂದು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯಲ್ಲಿ ಒತ್ತಾಯಪಡಿಸಿದರು.

ಮುಖ್ಯಮಂತ್ರಿಗಳು ಒತ್ತಾಯಪಡಿಸಿದ ಈ ಏರಿಕೆ 500 ಕೋಟಿ ರೂಪಾಯಿಗಳಿಂದ 1000 ಕೋಟಿ ರೂಪಾಯಿಗಳವರೆಗಿತ್ತು.

ನಾಲ್ಕನೆ ಪಂಚವಾರ್ಷಿಕ ಯೋಜನೆಯ ಅಂತಿಮ ಕರಡನ್ನು ಪರಿಶೀಲಿಸಿ ಅನುಮೋದಿಸಲು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯನ್ನು ಕರೆಯಲಾಗಿದೆ.

ಹೂತು ಹೋದ ಸಮಾಜವಾದ!
ನವದೆಹಲಿ, ಏ. 19– ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯಲ್ಲಿ ಭಾಗವಹಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು ಸಮಾಜವಾದ ಎಲ್ಲಿದೆ ಎಂದು ಬಹು ಹುಡುಕಾಡಿದರಂತೆ. ‘ಸಮಾಜವಾದ’ ನಾಲ್ಕನೆ ಯೋಜನೆ ದಾಖಲೆಯಲ್ಲಿ ಹೂತುಹೋಗಿದೆ. ಅಲ್ಲಿಂದ ಅದನ್ನು ಹೊರತೆಗೆಯಲು ಸಾಧ್ಯವಿಲ್ಲ ಎಂಬುದು ಆನಂತರ ಅವರಿಗೆ ಗೊತ್ತಾಯಿತು.

ಈ ಅನುಭವವಾದದ್ದು ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರಿಗೆ.

‘ಸಮಾಜವಾದದಲ್ಲಿ ನಂಬಿಕೆಯುಳ್ಳವರು ಈ ಯೋಜನೆಯನ್ನು ಸಿದ್ಧಗೊಳಿಸಿದ್ದಾರೆಂದು ನಾವು ಹೇಗೆ ತಾನೆ ಹೇಳಲು ಸಾಧ್ಯ?’ ಎಂದು ಶ್ರೀ ಕರುಣಾನಿಧಿ ಉಳಿದ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

‘ಯೋಜನೆಯ ಮೊದಲನೆ ಅಧ್ಯಾಯದಲ್ಲಿ ಸಮಾಜವಾದದ ಪ್ರಸ್ತಾಪವಿದೆ. ಈ ಸಮಾಜವಾದ ಎಲ್ಲಿದೆ ಎಂದು ಬಹಳ ಹೊತ್ತು ಹುಡುಕಾಡಿದೆ. ನಾಲ್ಕನೆ ಯೋಜನೆ ದಾಖಲೆಯಲ್ಲಿ ಅದು ಹೂತು ಹೋಗಿದೆ. ಅದನ್ನು ಅಲ್ಲಿಂದ ಮೇಲಕ್ಕೆತ್ತಲು ಸಾಧ್ಯವಿಲ್ಲವೆನ್ನುವುದು ಆನಂತರ ನನಗೆ ಗೊತ್ತಾಯಿತು’ ಎಂದು ಶ್ರೀ ಕರುಣಾನಿಧಿ ಹೇಳಿದರು.

ಸಾಕಷ್ಟು ಸಂಪನ್ಮೂಲ ಸಂಗ್ರಹ: ರಾಜ್ಯಗಳಿಗೆ ಇಂದಿರಾ ಕರೆ
ನವದೆಹಲಿ, ಏ. 19– ನಾಲ್ಕನೆ ಯೋಜನೆಗೆ ಸಾಕಷ್ಟು ಸಂಪನ್ಮೂಲ ಸಂಗ್ರಹಿಸುವುದರಲ್ಲಿ ಕೇಂದ್ರ ಸರಕಾರದೊಡನೆ ಜೊತೆಗೂಡುವಂತೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ರಾಜ್ಯ ಮುಖ್ಯಮಂತ್ರಿಗಳಿಗೆ ಕರೆಕೊಟ್ಟರು.

ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಎರಡು ದಿನಗಳ ಸಭೆಯನ್ನು ಉದ್ಘಾಟಿಸಿದ ಶ್ರೀಮತಿ ಗಾಂಧಿ ಅವರು, ಪ್ರಸಕ್ತ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಯೋಜನೆಗಳ ದೃಷ್ಟಿಯಿಂದ ಆಲೋಚಿಸಿದರೆ ನಮ್ಮ ಮುಂದಿರುವ ಸಮಸ್ಯೆಗಳ ಬಗೆಗೆ ನಮ್ಮದು ಸಂಪೂರ್ಣ ತಪ್ಪು ಪ್ರತಿಕ್ರಿಯೆಯಾಗುತ್ತದೆ’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಗ್ಗಟ್ಟಾಗಿ ಪರಸ್ಪರ ಸಮಸ್ಯೆಗಳನ್ನು ಅರಿತು ಸಾಮರಸ್ಯದಿಂದ ವರ್ತಿಸುವ ಮೂಲಕ ರಾಷ್ಟ್ರೀಯ ಸಂಪನ್ಮೂಲಗಳ ಮೇಲೆ ಸರಕಾರಿ ಉದ್ಯಮ ರಂಗದ ಹತೋಟಿ ಹೆಚ್ಚಿಸಲು ಪ್ರಾಧಾನ್ಯ ಕೊಡಬೇಕೇ ಹೊರತು, ನಮ್ಮ ಫೆಡರಲ್ ವ್ಯವಸ್ಥೆಯ ವಿವಿಧ ವಲಯಗಳ ನಡುವೆ ಈಗಿನ ಸಂಪನ್ಮೂಲಗಳ ಹಂಚಿಕೆಗಲ್ಲ’ ಎಂದು ಶ್ರೀಮತಿ ಗಾಂಧಿ ನುಡಿದರು.

ತೆಲಂಗಾಣ ಜನರ ಹಿತರಕ್ಷಣೆ:ನ್ಯಾಯಮೂರ್ತಿ ವಾಂಚೂ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರ ಸಮಿತಿ ರಚನೆ
ನವದೆಹಲಿ, ಏ. 19– ತೆಲಂಗಾಣದ ಜನತೆಗೆ ಆಶ್ವಾಸನೆ ಕೊಡಲಾಗಿದ್ದ ಸುರಕ್ಷತೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಾನುಷ್ಠಾನಕ್ಕೆ ತರುವ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರಕಾರ ನ್ಯಾಯವಾದಿಗಳ ಉನ್ನತ ಸಮಿತಿಯೊಂದನ್ನು ಇಂದು ನೇಮಿಸಿತು.

ಮಾಜಿ ಶ್ರೇಷ್ಠ ನ್ಯಾಯಾಧೀಶ ಕೆ.ಎನ್. ವಾಂಚೂ ಅವರು ಈ ಸಮಿತಿಯ ಅಧ್ಯಕ್ಷರಾಗಿರುವರು. ಮಾಜಿ ಅಟಾರ್ನಿ ಜನರಲ್ ಎಂ.ಸಿ. ಸೆಟಲ್‌ವಾಡ್ ಮತ್ತು ಈಗ ಅಟಾರ್ನಿ ಜನರಲ್ ಆಗಿರುವ ನಿರೇನ್ ಡೆ. ಅವರು ಸಮಿತಿಯ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT