ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ವರ್ಗೀಕರಿಸದ ಅರಣ್ಯದ ಮೇಲೆ ಸರ್ಕಾರದ ಕಣ್ಣು

ಆಡಳಿತಾರೂಢರಿಗೆ ರುಚಿಸುತ್ತಿಲ್ಲ ಪರಿಣತರ ಅಭಿಪ್ರಾಯ
Last Updated 6 ಜನವರಿ 2023, 21:47 IST
ಅಕ್ಷರ ಗಾತ್ರ

2021ರ ‘ಭಾರತದ ಅರಣ್ಯ ಪರಿಸ್ಥಿತಿ ವರದಿ’ ನಮ್ಮ ದೇಶದ ಅರಣ್ಯಗಳನ್ನು ಕಾಯ್ದಿಟ್ಟ (ರಿಸರ್ವ್ಡ್‌), ರಕ್ಷಿತ (ಪ್ರೊಟೆಕ್ಟೆಡ್) ಮತ್ತು ವರ್ಗೀಕರಿಸದ (ಅನ್‌ಕ್ಲಾಸ್ಡ್) ಅರಣ್ಯಗಳೆಂದು ಮೂರು ಭಾಗಗಳಾಗಿ ವಿಂಗಡಿಸಿದೆ. ಕಾಯ್ದಿಟ್ಟ ಅರಣ್ಯದಲ್ಲಿ ಗರಿಷ್ಠ ಮಟ್ಟದ ರಕ್ಷಣೆ. ಅರಣ್ಯ ಇಲಾಖೆಯ ಅನುಮತಿಯಿಲ್ಲದ ಯಾವ ಚಟುವಟಿಕೆಗೂ ಅಲ್ಲಿ ಅವಕಾಶವಿಲ್ಲ. ರಕ್ಷಿತ ಅರಣ್ಯದಲ್ಲಿ ಅರಣ್ಯ ಇಲಾಖೆ ನಿಷೇಧಿಸಿರದ ಕೆಲಸಗಳಿಗೆ ಅವಕಾಶವುಂಟು. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯಗಳು ಈ ಎರಡರ ವ್ಯಾಪ್ತಿಯಲ್ಲಿ ಬರುತ್ತವೆ. ಈ ಎರಡೂ ಗುಂಪಿಗೆ ಸೇರದ ಪ್ರದೇಶವೇ ವರ್ಗೀಕರಿಸದ ಅರಣ್ಯ. ಇಂಥ ಅರಣ್ಯಭೂಮಿಯ ಒಡೆತನ ಸರ್ಕಾರದಲ್ಲಿರಬಹುದು, ಸಮುದಾಯ, ಬುಡಕಟ್ಟು ಪಂಗಡ ಅಥವಾ ವ್ಯಕ್ತಿಗಳಲ್ಲಿ ಇರಬಹುದು.

ಅರಣ್ಯ ಪರಿಸ್ಥಿತಿಯ ವರದಿಯಂತೆ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯಗಳನ್ನು ಹೊಂದಿರುವ ರಾಜ್ಯಗಳೆಂದರೆ ಮಿಜೊರಾಂ (ರಾಜ್ಯದ ಭೂಭಾಗದ ಶೇ 84ರಷ್ಟು ಅರಣ್ಯ), ಅರುಣಾಚಲ ಪ್ರದೇಶ (ಶೇ 79), ಮೇಘಾಲಯ (ಶೇ 76), ಮಣಿಪುರ ಮತ್ತು ನಾಗಾ ಲ್ಯಾಂಡ್ (ಶೇ 74). ಆದರೆ ಈ ಅರಣ್ಯಗಳ ಬಹುತೇಕ ಭಾಗ ಆಯಾ ರಾಜ್ಯ ಸರ್ಕಾರಗಳ ಅರಣ್ಯ ಇಲಾಖೆಗೆ ಸೇರಿಲ್ಲ. ನಾಗಾಲ್ಯಾಂಡ್‍ನಲ್ಲಿ ಅರಣ್ಯದ ಶೇ 97ರಷ್ಟು ಭಾಗ, ಮೇಘಾಲಯ ಅರಣ್ಯದ ಶೇ 88ರಷ್ಟು, ಮಣಿಪುರ ಅರಣ್ಯದ ಶೇ 75ರಷ್ಟು ಮತ್ತು ಅರುಣಾಚಲ ಪ್ರದೇಶದ ಶೇ 53ರಷ್ಟು ಭಾಗ ವರ್ಗೀಕರಿಸದ ಅರಣ್ಯವಾಗಿದ್ದು, ಸಂಪೂರ್ಣವಾಗಿ ಸಮುದಾಯದ ಒಡೆತನದಲ್ಲಿವೆ. ಈ ಅರಣ್ಯಗಳ ಮೇಲೆ ಇಲಾಖೆಗೆ ಯಾವುದೇ ರೀತಿಯ ಅಧಿಕಾರವಿಲ್ಲ.

ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಇಲಾಖೆಯ ಸುಪರ್ದಿಯಲ್ಲಿರುವ ಒಟ್ಟು ಅರಣ್ಯದ ಪ್ರಮಾಣ
ಶೇ 10ಕ್ಕಿಂತ ಕಡಿಮೆ ಎಂಬ ಅಂದಾಜಿದೆ. ಇಲ್ಲಿನ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಐತಿಹಾಸಿಕ ವಾಗಿ ಅರಣ್ಯ ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸಿಕೊಂಡು ಬಂದಿವೆ. ಜಿಲ್ಲಾ, ಗ್ರಾಮ ಅಥವಾ ಸಮುದಾಯ ಮಟ್ಟದ ಮಂಡಳಿಗಳು ಅರಣ್ಯ ಪ್ರದೇಶದ ನಿರ್ದಿಷ್ಟ ಭಾಗವನ್ನು ‘ಸಮುದಾಯ ಸಂರಕ್ಷಿತ ಪ್ರದೇಶ’ವೆಂದು ಘೋಷಿಸುತ್ತವೆ. ಅಲ್ಲಿ ಮುಂದಿನ ನಾಲ್ಕೈದು ವರ್ಷಗಳ ಕಾಲ ಕೃಷಿ, ಬೇಟೆ, ಮೀನುಗಾರಿಕೆ, ಅರಣ್ಯ ಉತ್ಪನ್ನ ಸಂಗ್ರಹದಂತಹ ಸರ್ವ ಸಮಸ್ತ ಚಟುವಟಿಕೆಗಳನ್ನೂ ನಿಷೇಧಿಸಲಾಗುತ್ತದೆ. ಅಲ್ಲಿ ಪ್ರಕೃತಿಯದೇ ಕಾರುಬಾರು. ಆ ಅವಧಿ ಮುಗಿದ ನಂತರ ನಿಷೇಧವನ್ನು ತೆಗೆದು, ಬೆಳೆದುನಿಂತ ಅರಣ್ಯದಿಂದ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ಸಮು ದಾಯದ ಸದಸ್ಯರಿಗೆ ಕಲ್ಪಿಸಲಾಗುತ್ತದೆ. ಮುಂದೆ ಅರಣ್ಯದ ಮತ್ತೊಂದು ಭಾಗವನ್ನು ಸಮುದಾಯ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗುತ್ತದೆ.

ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ, ಯಾವುದೇ ಗಂಭೀರ ಸಮಸ್ಯೆ, ಘರ್ಷಣೆಗಳಿಲ್ಲದೇ ಸಮುದಾಯದ ಒಡೆತನ, ನಿರ್ವಹಣೆಯಲ್ಲಿರುವ ವರ್ಗೀಕರಿಸದ ಅರಣ್ಯಗಳ ಮೇಲೆ ಸರ್ಕಾರಗಳ ಕಣ್ಣುಬಿದ್ದು, ಅಂತಹ ಅರಣ್ಯಗಳನ್ನು ಜಾಣತನದಿಂದ ತಮ್ಮ ಸುಪರ್ದಿಗೆ ತೆಗೆದು ಕೊಳ್ಳುವ ಪ್ರಯತ್ನಗಳು ಪ್ರಾರಂಭವಾದದ್ದು 2002ರಲ್ಲಿ. 2022ರ ಅಂತ್ಯದ ವೇಳೆಗೆ 1,300 ಚದರ ಕಿ.ಮೀ.ಗಳಷ್ಟು ಸಮುದಾಯ ಅರಣ್ಯದ ಮೇಲೆ ಸರ್ಕಾರಗಳು ಜಂಟಿ ಒಡೆತನವನ್ನು ಸ್ಥಾಪಿಸಿ, ನಿರ್ವಹಣೆಯನ್ನು ನಿಯಂತ್ರಿಸುತ್ತಿವೆ.

ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಸಮುದಾಯದ ಒಡೆತನದಲ್ಲಿರುವ ಅರಣ್ಯವನ್ನು ಸಮುದಾಯದ ಒಪ್ಪಿಗೆ ಇಲ್ಲದೇ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳುವಂತಿಲ್ಲ. ಈ ಕಾನೂನಾತ್ಮಕ ಅಡಚಣೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು 2002ರಲ್ಲಿ, 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮಕ್ಕೆ ತಿದ್ದುಪಡಿಯೊಂದನ್ನು ತಂದು, ‘ಕಾಯ್ದಿಟ್ಟ ಸಮುದಾಯ ಅರಣ್ಯ’ದ ಪರಿಕಲ್ಪನೆಯನ್ನು ಪರಿಚಯಿಸಿತು. ಅದರಂತೆ ಜಿಲ್ಲಾ, ಗ್ರಾಮ ಮಂಡಳಿ, ಗ್ರಾಮ ಸಭೆಯಂತಹ ಸ್ಥಳೀಯ ಸರ್ಕಾರಿ ಸಂಸ್ಥೆಗಳು, ಸಮುದಾಯಗಳೊಡನೆ ಐದು ವರ್ಷಗಳ ಅವಧಿಗೆ ಒಪ್ಪಂದವೊಂದನ್ನು ಮಾಡಿಕೊಂಡು, ಸಮುದಾಯದ ಒಡೆತನದ ಅರಣ್ಯವನ್ನು ‘ಕಾಯ್ದಿಟ್ಟ ಸಮುದಾಯ ಅರಣ್ಯ’ವೆಂದು ಘೋಷಿಸಬಹುದು. ಹೀಗೆ ಸೃಷ್ಟಿಯಾದ ಅರಣ್ಯ ಪ್ರದೇಶದಲ್ಲಿ ಸರ್ಕಾರ ‘ಜಂಟಿ ಅರಣ್ಯ ಯೋಜನೆ’ ಯನ್ನು ಜಾರಿಗೆ ತರುತ್ತದೆ. ಇದಾದ ಕೂಡಲೇ ಅಂತಹ ಅರಣ್ಯ ಪ್ರದೇಶದ ಮೇಲೆ ಇಲಾಖೆಗೆ ಸಹ ಒಡೆತನ ಲಭಿಸುತ್ತದೆ. ಸಂರಕ್ಷಣೆ, ನಿರ್ವಹಣೆಯಲ್ಲೂ ಇಲಾಖೆಯ ಅಭಿಪ್ರಾಯವನ್ನು ಕಡೆಗಣಿಸುವಂತಿಲ್ಲ. ಒಪ್ಪಂದದಲ್ಲಿ ಇರುವಂತೆ, ಅರಣ್ಯ ಇಲಾಖೆಯು ಸಮುದಾಯದ ಸದಸ್ಯರಿಗೆ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸ ಬೇಕು. ಅಂತಹ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದಿಂದ ಧನಸಹಾಯ ದೊರೆಯುತ್ತದೆ.

1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದಡಿ ಯಲ್ಲಿನ ಕಾನೂನುಗಳು, ಒಪ್ಪಂದದ ನಂತರ ಕಾಯ್ದಿಟ್ಟ ಸಮುದಾಯ ಅರಣ್ಯಕ್ಕೆ ಅನ್ವಯವಾಗುವುದರಿಂದ, ಸ್ಥಳೀಯ ಸಮುದಾಯದ ಜನ ಅಲ್ಲಿ ಕೃಷಿ ಮಾಡುವಂತಿಲ್ಲ. ಬೇಟೆ, ಮೀನುಗಾರಿಕೆಗೆ ಅವಕಾಶವಿಲ್ಲ. ಸೊಪ್ಪು, ನಾರು, ಬೇರಿನಂತಹ ಲಘು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ. ಈ ನಿಷೇಧಗಳಿಂದ ತಮ್ಮ ಜೀವ ನೋಪಾಯ ಮಾರ್ಗಗಳನ್ನು ಕಳೆದುಕೊಂಡವರಿಗೆ ಕೇಂದ್ರ ಸರ್ಕಾರದಿಂದ ನೆರವು ದೊರೆಯುತ್ತದೆ. ಆದರೆ ಅದು ಅತ್ಯಲ್ಪ. ನಾಗಾಲ್ಯಾಂಡ್‍ನ ಜುನ್‍ಹೆಬಾಟೋ ಜಿಲ್ಲೆಯ ಅಶುಖೋಮಿ ಸಮುದಾಯ ರಕ್ಷಿಸುತ್ತಿದ್ದ 2.8 ಚದರ ಕಿ.ಮೀ. ಅರಣ್ಯವನ್ನು 2019ರಲ್ಲಿ ಒಪ್ಪಂದದ ನಂತರ ಕಾಯ್ದಿಟ್ಟ ಸಮುದಾಯ ಅರಣ್ಯವನ್ನಾಗಿ ಘೋಷಿಸ ಲಾಯಿತು. ಇದರಿಂದ ತಮ್ಮ ಬದುಕಿಗೆ ಆಸರೆಯಾಗಿದ್ದ ಅರಣ್ಯದ ಮೇಲಿನ ಒಡೆತನವನ್ನು ಕಳೆದುಕೊಂಡ ಹಳ್ಳಿಯ 240 ಕುಟುಂಬಗಳಿಗೆ ಸರ್ಕಾರದಿಂದ ದೊರೆತ ಹಣ, ವರ್ಷಕ್ಕೆ ತಲಾ ₹ 840.

ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚಾಗಿರುವ ಈ ಒಪ್ಪಂದಕ್ಕೆ ಗುಡ್ಡಗಾಡು ಸಮುದಾಯಗಳು ಹೇಗೆ ಒಪ್ಪಿಗೆ ನೀಡುತ್ತವೆ ಎಂಬುದು ಬಹುದೊಡ್ಡ ಪ್ರಶ್ನೆ. ಸರ್ಕಾರೇತರ ಸಂಘಟನೆಗಳು ನಡೆಸಿರುವ ಅಧ್ಯಯನಗಳಂತೆ, ಒಪ್ಪಂದ ತರುವ ಬದಲಾವಣೆಗಳ ಬಗ್ಗೆ ಸ್ಥಳೀಯ ಸಮುದಾಯಕ್ಕೆ ಸಂಪೂರ್ಣ ಮಾಹಿತಿಯೇ ಇರುವುದಿಲ್ಲ. ಸರ್ಕಾರ ಮತ್ತು ಸಮುದಾಯಗಳ ನಡುವಿನ ಒಪ್ಪಂದ ಒಂದು ಸಂಕೀರ್ಣ ಕಾನೂನಾತ್ಮಕ ದಾಖಲೆಯಾಗಿದ್ದು, ಅದರ ಒಳಾರ್ಥಗಳು ಸಮುದಾಯಕ್ಕೆ ಸ್ಪಷ್ಟವಾಗಿ ಅರ್ಥವಾಗದ ಅನೇಕ ಪ್ರಕರಣಗಳಿವೆ.

ಇಲಾಖೆಯ ಆಶ್ವಾಸನೆಗಳನ್ನು ಜನ ಸುಲಭವಾಗಿ ನಂಬುತ್ತಾರೆ. ಅನೇಕ ಪ್ರಕರಣಗಳಲ್ಲಿ ಸಮುದಾಯದ ನಾಯಕರು ಉಳಿದವರನ್ನು ಬಲವಂತದಿಂದ ಒಪ್ಪಿಸು ತ್ತಾರೆ. ಅಪವಾದವೆನ್ನುವಂತೆ ಅಲ್ಲಲ್ಲಿ ಕಾಣುವ ಯಶಸ್ಸಿನ ಪ್ರಕರಣಗಳನ್ನೇ ಎತ್ತಿ ತೋರಿ ಸಮುದಾಯಗಳನ್ನು ನಂಬಿಸುವುದೂ ಉಂಟು. ಈ ಎಲ್ಲ ಪ್ರಯತ್ನಗಳ ಫಲ ವಾಗಿ ನಾಗಾಲ್ಯಾಂಡ್‍ನಲ್ಲಿ 114, ಮೇಘಾಲಯದಲ್ಲಿ 74 ಕಾಯ್ದಿಟ್ಟ ಸಮುದಾಯ ಅರಣ್ಯಗಳಿವೆ. ಕೇಂದ್ರ ಪರಿಸರ ಸಚಿವಾಲಯದ ಮೂಲಗಳಂತೆ, ಕರ್ನಾಟಕದ ಏಕಮಾತ್ರ ಕಾಯ್ದಿಟ್ಟ ಸಮುದಾಯ ತಾಣವೆಂದರೆ ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು.

ಸ್ಥಳೀಯ ಸಮುದಾಯ ಮತ್ತು ಸರ್ಕಾರದ ನಡುವಿನ ಒಪ್ಪಂದದ ಅವಧಿ ಐದು ವರ್ಷಗಳು. ನಂತರ ಅರಣ್ಯ ಪ್ರದೇಶವು ಸಮುದಾಯಕ್ಕೆ ಹಿಂದಿರುಗಬೇಕು. ಆದರೆ ಸರ್ಕಾರಕ್ಕೆ ಒಪ್ಪಂದದ ಈ ಅಂಶವನ್ನು ಪಾಲಿಸುವ ಆಸಕ್ತಿಯಿಲ್ಲ. ಒಪ್ಪಂದದ ಅವಧಿ ಮುಗಿದ ಮೇಲೆ ಸರ್ಕಾರದಿಂದ ಸಮುದಾಯದ ಸದಸ್ಯರಿಗೆ ದೊರೆ ಯುತ್ತಿದ್ದ ಅಲ್ಪಸ್ವಲ್ಪ ಆರ್ಥಿಕ ನೆರವೂ ನಿಲ್ಲುತ್ತದೆ. ಅರಣ್ಯದ ಮೇಲಿನ ಒಡೆತನವನ್ನು ಕಳೆದುಕೊಂಡ ಸಮು ದಾಯಗಳು, ಒಪ್ಪಂದದ ಅವಧಿ ಮುಗಿದ ನಂತರವೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಅರಣ್ಯಗಳನ್ನು ಸಂರಕ್ಷಿಸಬೇಕೆಂಬುದು ಸರ್ಕಾರದ ನಿರೀಕ್ಷೆ. ಇದು ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‍ನ ಸ್ಥಳೀಯ ಸಮುದಾಯಗಳು ಅರಣ್ಯದ ಮೇಲಿನ ಒಡೆತನವನ್ನು ಹಿಂಪಡೆಯಲು ಚಳವಳಿಯನ್ನು ಪ್ರಾರಂಭಿಸಿವೆ.

ಅರಣ್ಯ ಸಂರಕ್ಷಣೆ ಮತ್ತು ಸಂಪನ್ಮೂಲಗಳ ವಿವೇಕಯುತ ಬಳಕೆಯೇ ಸರ್ಕಾರದ ಪ್ರಾಮಾಣಿಕ ಉದ್ದೇಶವಾಗಿದ್ದಲ್ಲಿ, ಈಶಾನ್ಯ ರಾಜ್ಯಗಳ ಸಮುದಾಯ ಗಳಲ್ಲಿ ಪ್ರಚಲಿತವಾಗಿರುವ ಸಮುದಾಯ ಸಂರಕ್ಷಿತ ಪ್ರದೇಶಗಳನ್ನು ಅಧಿಕೃತವಾಗಿ ಮಾನ್ಯ ಮಾಡಿ, ಆರ್ಥಿಕ ನೆರವು ನೀಡಬೇಕು. ನಿರ್ವಹಣೆಯನ್ನು ಸಮುದಾಯಗಳ ಜಾಣ್ಮೆ, ವಿವೇಚನೆಗಳಿಗೇ ಬಿಡಬೇಕು ಎನ್ನುವುದು ಪರಿಣತರ ನಿಲುವು. ಆದರೆ ಈಶಾನ್ಯ ರಾಜ್ಯಗಳಲ್ಲಿ ತನ್ನ ಸುಪರ್ದಿಯಲ್ಲಿರುವ ಅತಿ ಕಡಿಮೆ ಅರಣ್ಯದ ವ್ಯಾಪ್ತಿಯನ್ನು ಭರದಿಂದ ವಿಸ್ತರಿಸುವ ಪ್ರಯತ್ನದಲ್ಲಿರುವ ಸರ್ಕಾರಕ್ಕೆ ಪರಿಣತರ ಅಭಿಪ್ರಾಯ ರುಚಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT