ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬಾಲ್ಯವಿವಾಹ: ಚಾಟಿ ಏಟು ತರವೇ?

Last Updated 19 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬಾಲ್ಯವಿವಾಹಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಅಸ್ಸಾಂ ಸರ್ಕಾರ ಬೀಸಿದ ಚಾಟಿ ಏಟು ಬಲವಾಗಿದ್ದು, ಅಲ್ಲಿನ ಕೆಲವು ಕುಟುಂಬಗಳ ನೆಮ್ಮದಿಯನ್ನು ಕದಡಿದೆ. ಏಟು ಬಿದ್ದದ್ದು ಒಬ್ಬರಿಗಾದರೆ ನೋವಾದದ್ದು ಮತ್ತೊಬ್ಬರಿಗೆ. ಬಾಲಕಿಯರನ್ನು ವಿವಾಹವಾದ ಯುವಕರನ್ನು, ಅವರ ಮದುವೆಗೆ ಅನುಮತಿ ನೀಡಿದ ಹಿರಿಯರನ್ನು, ಮದುವೆ ಮಾಡಿಸಿದ ಪುರೋಹಿತರನ್ನು, ಮೌಲ್ವಿಗಳನ್ನು ಹಿಡಿದು, ಎಳೆದೊಯ್ದು ಪೊಲೀಸರು ಜೈಲಿಗಟ್ಟಿದ್ದಾರೆ.

ಈ ಸಂಬಂಧ ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಅಸ್ಸಾಂನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಜನವರಿ 23ರಂದು ನಿರ್ಣಯ ಕೈಗೊಳ್ಳಲಾಯಿತು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರನ್ನು ವಿವಾಹವಾದ ಎಲ್ಲ ಪುರುಷರನ್ನೂ ದಸ್ತಗಿರಿ ಮಾಡಿ ಶಿಕ್ಷಿಸುವಂತೆ ಅದರ ಬೆನ್ನಿಗೇ ಆದೇಶ ಹೊರಬಿತ್ತು. ಏಕೆಂದರೆ, ಭಾರತದಲ್ಲಿ ಮಹಿಳೆ ವಿವಾಹವಾಗಬಹುದಾದ ಕನಿಷ್ಠ ವಯಸ್ಸು 18 ವರ್ಷಗಳು. ಈ ಆದೇಶದ ಫಲವೇ ಈ ಚಾಟಿ ಏಟಿನ ಕ್ರಮ.

ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುತ್ತಿರುವವರ ಪ್ರಮಾಣವು ಅಸ್ಸಾಂನಲ್ಲಿ ಹೆಚ್ಚಿಗೆ ಇದೆ. ಇದರ ಅರ್ಥ ರಾಜ್ಯದಲ್ಲಿ ಬಾಲ್ಯವಿವಾಹವು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ತಾಯಂದಿರ ಮರಣ ಪ್ರಮಾಣವೂ ಹೆಚ್ಚಾಗಿದೆ. ಸಮುದಾಯದ ಹಿತ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

2019- 21ರ ಅವಧಿಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯು ಭಾರತದಲ್ಲಿನ 20-24 ವರ್ಷಗಳ ವಯೋಮಾನದಲ್ಲಿರುವ ಮಹಿಳೆಯರ ಪೈಕಿ ಶೇ 23ರಷ್ಟು ಮಹಿಳೆಯರು ತಾವು 18 ವರ್ಷ ತುಂಬುವುದಕ್ಕೆ ಮುನ್ನ ವಿವಾಹವಾಗಿರುವು ದಾಗಿ ಹೇಳಿದ್ದಾರೆ. ಈ ಪ್ರಮಾಣ ಅಸ್ಸಾಂ ರಾಜ್ಯದಲ್ಲಿ ಶೇ 31.8ರಷ್ಟು ಇದ್ದು, ಅತ್ಯಂತ ಹೆಚ್ಚಿನ ಬಾಲ್ಯವಿವಾಹಗಳು ನಡೆಯುವ ರಾಜ್ಯ ಇದಾಗಿದೆ. ಈ ಕಾರಣದಿಂದ ಬಾಲ್ಯವಿವಾಹಗಳನ್ನು ತಡೆಗಟ್ಟುವ ಈ ಕ್ರಮ ಬಿಗಿಯಾಗಿ ಜರುಗಲಿದೆ ಎಂದಿದ್ದಾರೆ.

ಬಾಲ್ಯವಿವಾಹಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯವೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಅಂಕಿ ಅಂಶಗಳ ಪ್ರಕಾರ, ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳು ದಾಖಲಾಗುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ಹಿಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಕಡಿಮೆಯಾಗುವ ಬದಲು ಸತತವಾಗಿ ಏರುತ್ತಲೇ ಇದೆ.

ದೇಶದಲ್ಲಿ, ಬಾಲ್ಯವಿವಾಹ (ಎಂದರೆ ಹದಿನೆಂಟು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹುಡುಗಿ ಮತ್ತು 21 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಹುಡುಗ) ಮಕ್ಕಳ ವಿರುದ್ಧ ನಡೆಯುವ ಒಂದು ಗಂಭೀರ ಅಪರಾಧ. ಈ ಪದ್ಧತಿಯನ್ನು ನಿರ್ಮೂಲನ ಮಾಡಲು ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲೂ ಈ ಪಿಡುಗು ಇದೆ. ಬಾಲ್ಯವಿವಾಹವು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದಷ್ಟೇ ಅಲ್ಲದೆ ಅವರನ್ನು ಹಿಂಸೆ, ಶೋಷಣೆ ಮತ್ತು ದೌರ್ಜನ್ಯಗಳಿಗೆ ಗುರಿ ಮಾಡುತ್ತದೆ. ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ಪಡೆಯಲು ಅವರಿಗಿರುವ ಹಕ್ಕನ್ನೂ ಅವರಿಂದ ಕಸಿಯುತ್ತದೆ.

‘ಕುಟುಂಬದ ಹಣಕಾಸು ಪರಿಸ್ಥಿತಿ, ಅವರ ವಾಸಸ್ಥಳ... ಇವ್ಯಾವೂ ಬಾಲ್ಯವಿವಾಹಗಳ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಶಿಕ್ಷಣ ಇಲ್ಲದಿರುವುದೇ ಬಾಲ್ಯ ವಿವಾಹಗಳ ಹೆಚ್ಚಳಕ್ಕೆ ಕಾರಣ’ ಎಂದು ಭಾರತೀಯ ಬಾಲ್ಯವಿವಾಹಗಳ ಬಗ್ಗೆ ಯುನಿಸೆಫ್ ನಡೆಸಿರುವ ಸಮೀಕ್ಷೆ ತಿಳಿಸಿದೆ. ವಿಪರ್ಯಾಸವೆಂದರೆ, ಅಸ್ಸಾಂನಲ್ಲಿ ಹೆಚ್ಚು ಹೆಚ್ಚು ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚು ಹೆಚ್ಚು ಮಕ್ಕಳನ್ನು ಶಾಲೆಗೆ ಕರೆತರುವ ಬದಲು, ಹಿಂದಿನ ಸೆಪ್ಟೆಂಬರ್‌ನಲ್ಲಿ, ನೀತಿ ಆಯೋಗದ ಮಾರ್ಗಸೂಚಿಯಂತೆ 1,700 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸ ಲಾಯಿತು. ಶಾಲೆ ದೂರವಾದಷ್ಟೂ ಭದ್ರತೆಯ ಕೊರತೆ ಎಂಬ ಕಾರಣಕ್ಕಾಗಿ ಇನ್ನಷ್ಟು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವಂತೆ ಆಗುತ್ತದೆ. ಹಾಗೆಯೇ, ಅಸ್ಸಾಂನಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಅತ್ಯಲ್ಪ ಪ್ರಮಾಣದಲ್ಲಿದೆ
(ಶೇ 14). ಇದಕ್ಕೆ, ಶಿಕ್ಷಣ ಇಲ್ಲದಿರುವುದೂ ಒಂದು ಕಾರಣ ಎನ್ನಲಾಗಿದೆ. ಬಾಲ್ಯವಿವಾಹಗಳ ಹೆಚ್ಚಳಕ್ಕೆ ಇದೂ ಕಾರಣ. ಹತ್ತು ವರ್ಷಗಳಿಗೂ ಹೆಚ್ಚು ಕಾಲ ಶಾಲೆಗೆ ಹೋಗಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ತಿಳಿಸುತ್ತದೆ.

2006ರಲ್ಲಿ ಜಾರಿಗೆ ಬಂದ ಬಾಲ್ಯವಿವಾಹ ನಿಷೇಧ ಕಾನೂನಿನ ಪ್ರಕಾರ, ಬಾಲ್ಯವಿವಾಹ ಒಂದು ಸಂಜ್ಞೇಯ ಮತ್ತು ಜಾಮೀನುರಹಿತ ಅಪರಾಧ. ಕಾನೂನಿನ ಉದ್ದೇಶವು ಅಪರಾಧಕ್ಕೆ ಒಳಗಾದವರಿಗೆ ನ್ಯಾಯ
ದೊರಕಿಸಿಕೊಡುವುದು ಮತ್ತು ಅಪರಾಧ ಮಾಡಿದವರಿಗೆ ಸೂಕ್ತ ಶಿಕ್ಷೆ ವಿಧಿಸುವುದು. ಆದರೆ ಇದೊಂದು ವಿಚಿತ್ರ ಸನ್ನಿವೇಶ. ಇಲ್ಲಿ, ತಪ್ಪು ಮಾಡಿದವರನ್ನು ಶಿಕ್ಷಿಸಿದರೆ, ಅದರ ಬರೆ ಬಿದ್ದಿರುವುದು ಶೋಷಣೆಗೆ ಒಳಗಾದವರಿಗೇ! ಕುಟುಂಬದ ದುಡಿಯುವ ಕೈಗಳಿಗೆ ಕೋಳ
ತೊಡಿಸಿರುವುದರಿಂದ ಅನೇಕ ಕುಟುಂಬಗಳು ಅತಂತ್ರವಾಗಿವೆ, ದಿಕ್ಕು ತೋಚದ ಸಣ್ಣ ವಯಸ್ಸಿನ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿರುವುದೂ ವರದಿಯಾಗಿದೆ. ಹಾಗೆಂದು ಇಂಥ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಬಾರದು ಎಂದೂ ಹೇಳಲಾಗದು.

ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು. ಹಾಗೆಯೇ ಇದು, ಒಂದು ರಾಜ್ಯಕ್ಕೆ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾದುದೂ ಅಲ್ಲ. ಸಾಮಾಜಿಕ ಸಮಸ್ಯೆ ಯೊಂದನ್ನು ಕಾನೂನು ಕ್ರಮದಿಂದ ಮಾತ್ರ ನಿವಾರಿಸಲು ಸಾಧ್ಯವಿಲ್ಲ ಎಂಬುದನ್ನು ಜಾರಿಗೆ ಬಂದಿರುವ ನಮ್ಮ ಅನೇಕ ಸಮಾಜ ಸುಧಾರಣಾ ಕಾನೂನುಗಳು
ರುಜುವಾತುಪಡಿಸಿವೆ.

ಯಾವುದೇ ಸಮಾಜ ಸುಧಾರಣಾ ಕಾನೂನು ಯಶಸ್ವಿಯಾಗಿ ಜಾರಿಯಾಗಬೇಕಾದರೆ, ಆ ನಿರ್ದಿಷ್ಟ ಸಾಮಾಜಿಕ ಪಿಡುಗು ಸಮಾಜದಲ್ಲಿ ಬೇರೂರಲು ಕಾರಣಗಳೇನು ಎಂಬುದನ್ನು ತಿಳಿದು, ಅವುಗಳನ್ನು ನಿವಾರಿಸುವ ಪ್ರಯತ್ನಗಳಾಗಬೇಕು. ಬಾಲ್ಯವಿವಾಹದಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಹೆಣ್ಣುಮಕ್ಕಳಲ್ಲಿ ಮತ್ತು ಅವರ ತಂದೆ–ತಾಯಿ, ಪೋಷಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅಗತ್ಯವಿರುವ ಎಲ್ಲ ಅವಕಾಶಗಳನ್ನು ಕಲ್ಪಿಸಬೇಕು. ಗ್ರಾಮ, ತಾಲ್ಲೂಕು, ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸಬೇಕು, ಶಾಲಾ ಶಿಕ್ಷಕರಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಅವರಿಗೆ ಅರಿವು ಮೂಡಿಸುವ ಮೂಲಕ ಶಾಲಾ ಮಕ್ಕಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮ ಗಳನ್ನು, ಶಿಕ್ಷಣದ ಮಹತ್ವವನ್ನು ತಿಳಿಯಪಡಿಸಬೇಕು. ಹೆಣ್ಣುಮಕ್ಕಳ ಯಶೋಗಾಥೆಯ ಉದಾಹರಣೆಗಳನ್ನು ಹೇಳಿ ಶಾಲೆ ತಪ್ಪಿಸದಂತೆ ಹುರಿದುಂಬಿಸಬೇಕು. ಶಾಲೆ ತಪ್ಪಿಸದೇ ಇರುವ ಮಕ್ಕಳಿಗೆ ಸಣ್ಣ ಪುಟ್ಟ ಪ್ರೋತ್ಸಾಹಕಗಳನ್ನು ಕೊಡಬೇಕು.

ಇದಾವುದೂ ಕಷ್ಟದ ಕೆಲಸವಲ್ಲ. ಇದಕ್ಕೆ ಬೇಕಾಗಿರುವುದು ಇಚ್ಛಾಶಕ್ತಿ ಮಾತ್ರ. ಕಾನೂನು ಮಾಡದ ಪವಾಡವನ್ನು ಈ ಕ್ರಮಗಳು ಮಾಡುತ್ತವೆ. ಇವೆಲ್ಲದರ ಹೊರತಾಗಿಯೂ ಕಾನೂನಿನ ಭಯ ಇರಲೇಬೇಕು. ತಿಳಿವಳಿಕೆಯ ಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಿ ಸಕಾರಾತ್ಮಕ ಪರಿಣಾಮಗಳಿಗೆ ಕಾರಣವಾದರೆ, ಕಾನೂನಿನ ಕ್ರಮ ಜನರಲ್ಲಿ ಶಿಕ್ಷೆಯ ಭಯ ಹುಟ್ಟಿಸಿ ತಪ್ಪು ಮಾಡದಂತೆ ಎಚ್ಚರಿಕೆ ಮೂಡಿಸುತ್ತದೆ.

ವಿವಾಹವು ಮಹಿಳೆಯ ಆಯ್ಕೆಯಾಗಬೇಕೆ ವಿನಾ ಶಿಕ್ಷೆಯಾಗಬಾರದು. ಮಹಿಳೆಯರ ಸಬಲೀಕರಣ ಮತ್ತು ಜನಜಾಗೃತಿ ಮಾತ್ರವೇ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಸಾಧ್ಯವಿರುವ ಮಾರ್ಗಗಳು. ಏಕಾಏಕಿ ಕೈಗೊಂಡ ಬಿಗಿ ಕ್ರಮ ಅಸ್ಸಾಂನಲ್ಲಿ ಭಯ ಹುಟ್ಟಿಸಿರುವು ದಂತೂ ನಿಜ. ದಕ್ಷಿಣ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ನಿಗದಿಯಾಗಿದ್ದ 100ಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು
ರದ್ದುಗೊಳಿಸಲಾಗಿದೆ ಇಲ್ಲವೇ ಮುಂದೂಡಲಾಗಿದೆ ಎನ್ನಲಾಗಿದೆ.

ಈ ನಡುವೆ, ಸರ್ಕಾರದ ಈ ಕ್ರಮ ರಾಜಕೀಯ ಬಣ್ಣ ಪಡೆದುಕೊಂಡಿದೆ. ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳು ಬಂದಿವೆ. ಹಾಗಾಗಿ, ಈ ಕ್ರಮ ಸಕಾರಾತ್ಮಕ ಫಲ ನೀಡುವ ಸಾಧ್ಯತೆ ಎಷ್ಟಿದೆಯೋ ಅಷ್ಟೇ ನಕಾರಾತ್ಮಕ ಪರಿಣಾಮವನ್ನೂ ಬೀರುವ ಸಾಧ್ಯತೆಯೂ ಇದೆ ಎಂದು
ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT