ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ವಿಜ್ಞಾನಿಗಳ ಸಾಮಾಜಿಕ ಹೊಣೆ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಭಾರತವು ಮೇ 11ರಂದು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ ಆಚರಿಸಿದಾಗ, ಇದರಲ್ಲಿ ಎರಡು ಮುಖ್ಯ ಸಂಗತಿಗಳು ಸೇರಿದ್ದವು. ರಾಜಸ್ಥಾನದ ಪೋಖ್ರಾನ್‌ನಲ್ಲಿ 1998ರಲ್ಲಿ ಇದೇ ದಿನ ಪರಮಾಣು ಬಾಂಬಿನ ಯಶಸ್ವಿ ಎರಡನೇ ಪ್ರಯೋಗವಾಗಿ, ಭಾರತ ತಾನು ಪರಮಾಣು ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸಿಕೊಂಡಿತ್ತು. ಅದನ್ನು ನೆನಪಿಸುವ ಆಚರಣೆ ಇದಾಗಿತ್ತು. ಎರಡನೆಯದು, 2019ರಲ್ಲೇ ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಿದ್ಧಪಡಿಸಿದ್ದ ‘ವಿಜ್ಞಾನಿಗಳ ಸಾಮಾಜಿಕ ಹೊಣೆ’ ಎಂಬ ಮಾರ್ಗದರ್ಶಿ ಸೂತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು. ಹಾಗೆ ನೋಡಿದರೆ ವಿಜ್ಞಾನಿಗಳಿಗೂ ಸಾಮಾಜಿಕ ಹೊಣೆ ಇರಬೇಕೆಂಬುದು ಸಮಾಜದ ಬಹುಕಾಲದ ನಿರೀಕ್ಷೆ ಕೂಡ ಹೌದು.

ಗಾಂಧೀಜಿ ಪ್ರತಿಪಾದಿಸಿದ್ದ ಸಪ್ತಪಾತಕಗಳಲ್ಲಿ ‘ಮಾನವೀಯತೆ ಇಲ್ಲದ ವಿಜ್ಞಾನ’ವೂ ಪಾಪದ ಲೆಕ್ಕಕ್ಕೇ ಬರುತ್ತದೆ. ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಸಂಘರ್ಷವಿದೆ ಎನ್ನುವುದಾದರೆ, ಅದರಲ್ಲಿ ಎದ್ದು ಕಾಣುವುದೇ ವಿಜ್ಞಾನವು ಸಮಾಜದ ಒಳಿತಿಗಾಗಿಯೇ ಇರಬೇಕು ಎಂಬ ಅಂಶ.

ಈ ನಿರೀಕ್ಷೆಗೆ ಬೇರೆ ಆಯಾಮವೂ ಇದೆ. ಸಮಾಜವನ್ನು ಕೇಳಿ ವಿಜ್ಞಾನಿಗಳು ಪ್ರಯೋಗಕ್ಕೆ ಇಳಿಯುತ್ತಾರೆಯೇ? ಅಥವಾ ಸರ್ಕಾರದ ನಿಯಂತ್ರಣದಲ್ಲಿ
ಕೆಲಸ ಮಾಡುವ ವಿಜ್ಞಾನಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆಯೇ? ಯಾವುದು ಸಮಾಜಕ್ಕೆ ಉಪಯೋಗಿ, ಯಾವುದು ಅಲ್ಲ ಎಂದು ನಿರ್ಧರಿಸುವ ಹಕ್ಕು ನಿಜಕ್ಕೂ ವಿಜ್ಞಾನಿಗಳಿಗೆ ಇರುತ್ತದೆಯೇ? ಈ ವಿಚಾರ ಮುನ್ನೆಲೆಗೆ ಬಂದರೆ ಭಾರತವಷ್ಟೇ ಅಲ್ಲ, ಯಾವ ದೇಶದಲ್ಲೂ ಇದಕ್ಕೆ ‘ಇಲ್ಲ’ ಎಂಬ ಉತ್ತರವೇ ಬಂದೀತು. ದೊಡ್ಡ ದೊಡ್ಡ ಸಂಶೋಧನೆಗಳು ಬಜೆಟ್‌ನಲ್ಲಿ ದೊಡ್ಡ ಮೊತ್ತವನ್ನೇ ಬೇಡುತ್ತವೆ. ಅಂದರೆ ವಿಜ್ಞಾನ ಪ್ರಭುತ್ವಾವಲಂಬಿ. ಯಾವ ವಿಜ್ಞಾನಿಯೂ ಇದನ್ನು ಪ್ರಶ್ನಿಸುವುದಿಲ್ಲ. ಪ್ರಶ್ನಿಸಿ ಹೊರಬಂದವರು ಕೂಡ ಕಡಿಮೆಯೇ.

ಎರಡನೇ ಮಹಾಯುದ್ಧದಲ್ಲಿ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಅಮೆರಿಕವು ಪರಮಾಣು ಬಾಂಬ್‌ ಹಾಕಿದ ಸಂಗತಿ ಶಾಶ್ವತವಾಗಿ ಇತಿಹಾಸದಲ್ಲಿ ದಾಖಲಾಗಿರು
ವುದನ್ನು ಹೊಸತಾಗಿ ನೆನಪಿಸಬೇಕಾಗಿಲ್ಲ. ಈ ಬಾಂಬ್‌ ಹಾಕುವ ಕೆಲವೇ ವಾರದ ಹಿಂದೆ ಹ್ಯಾರಿ ಟ್ರೂಮನ್‌ ಅಧ್ಯಕ್ಷ ಹುದ್ದೆಗೆ ಏರಿದ್ದರು. ಅವರ ಒಪ್ಪಿಗೆ ಇಲ್ಲದೆ ಈ ಕಾರ್ಯ ಎಸಗುವಂತಿರಲಿಲ್ಲ. ಆತ ಎಂಥ ಮಾನವತಾವಾದಿ ನೋಡಿ! ‘ಆಯ್ದ ಮಿಲಿಟರಿ ನೆಲೆಗಳನ್ನು ನಾಶ ಮಾಡಿ, ಜನದಟ್ಟಣೆ ಪ್ರದೇಶಗಳ ಮೇಲೆ ಹಾಕುವುದು ಬೇಡ’ ಎಂದಿದ್ದರು. ಮುಂದಿನದೆಲ್ಲ ಗೊತ್ತಿರುವ ಕಥೆಯೇ.

ಈ ಕೆಲಸವನ್ನು ಸಮಾಜಮುಖಿ ಎನ್ನಲಾದೀತೆ? ಪರಮಾಣು ಬಾಂಬಿನ ಸಾಧ್ಯತೆಯ ಬಗ್ಗೆ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌, ಆಗಿನ ಅಧ್ಯಕ್ಷ ರೂಸ್‌ವೆಲ್ಟ್‌ ಅವರಿಗೆ ಪತ್ರ ಬರೆದಿದ್ದರು. ಅಮೆರಿಕ ಒಡನೆ ಕಾರ್ಯಗತ
ಗೊಳಿಸಿತು. ಐನ್‌ಸ್ಟೀನ್‌ ಅವರ ಸೂಚನೆಯನ್ನು ‘ಅಮಾನವೀಯ’ ಎಂದೇ ಈಗಲೂ ಅನೇಕ ಜನರು ಭಾವಿಸಿದ್ದಾರೆ.

ಇತ್ತ ಪೋಖ್ರಾನ್‌ನಲ್ಲಿ 1998ರಲ್ಲಿ ಎರಡನೆಯ ಬಾರಿಗೆ ಪರಮಾಣು ಬಾಂಬ್‌ ಪರೀಕ್ಷೆ ಮಾಡಿದಾಗ, ತಂಡದಲ್ಲಿ ಎ.ಪಿ.ಜೆ. ಅಬ್ದುಲ್‌ ಕಲಾಂ ಇದ್ದರು, ದೊಡ್ಡ ಜವಾಬ್ದಾರಿ ಹೊತ್ತ ವಿಜ್ಞಾನಿಗಳ ದೊಡ್ಡ ತಂಡವೇ ಇತ್ತು. ‘ನೆರೆಯ ರಾಷ್ಟ್ರಗಳು ಪರಮಾಣು ಬಾಂಬು ತಯಾರಿಸುತ್ತಿರುವಾಗ, ನಾವು ತೆಪ್ಪಗೆ ನೋಡುತ್ತ ಕುಳಿತಿರಬೇಕೆ? ಒಂದು ಕೆನ್ನೆಗೆ ಹೊಡಿ ಎಂದರೆ ಎರಡೂ ಕೆನ್ನೆಗಳಿಗೆ ಬಾರಿಸುವ ಸಂದರ್ಭ ಇದು’ ಎಂಬುದು ಆಗಿನ ಸಮರ್ಥನೆ. ಈ ಹಿನ್ನೆಲೆಯಲ್ಲೇ ಕಲಾಂ ಅವರು ಮುಂದೆ ‘ಸಾಮರ್ಥ್ಯವು ಸಾಮರ್ಥ್ಯವನ್ನು ಗೌರವಿಸುತ್ತದೆ’ ಎಂದಿದ್ದು.

ರಾಷ್ಟ್ರ ರಕ್ಷಣೆಗೆ ಇದು ಅನಿವಾರ್ಯ ಎನ್ನುವುದಾದರೆ ಸಮಾಜ ಇದಕ್ಕೆ ಏನು ಉತ್ತರಿಸೀತು? ಸರ್ಕಾರವು ಜನಾಭಿಪ್ರಾಯ ಕೇಳುತ್ತ ಕೂರಲು ಸಾಧ್ಯವೇ ಎನ್ನುವುದು ಇನ್ನೊಂದು ಸಮಜಾಯಿಷಿ. ಇಲ್ಲೆಲ್ಲ ವಿಜ್ಞಾನಿಗಳ ಸ್ವಾತಂತ್ರ್ಯ, ನಿಯಂತ್ರಣ ಪ್ರಭುತ್ವದ ಕೈಲೇ ಇರುತ್ತದೆ ಎಂಬುದು ನಿರ್ವಿವಾದ. ಈಗಲೂ ನೀವು ಪ್ರಶ್ನೆ ಕೇಳಬಹುದು. ‘ಭಾರತದಲ್ಲಿ ಎಷ್ಟು ಪರಮಾಣು ಅಸ್ತ್ರಗಳಿವೆ, ಅವನ್ನು ಎಲ್ಲಿ ಜೋಪಾನ ಮಾಡಲಾಗಿದೆ’ ಎಂದು. ‘ಇದು ಗೋಪ್ಯ, ಅಂದರೆ ವರ್ಗೀಕೃತ ಮಾಹಿತಿ, ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವಂತಿಲ್ಲ’ ಎಂಬ ಉತ್ತರ ಬರುತ್ತದೆ. ಇಂಥ ಉತ್ತರ ಕೊಡದ ಅನೇಕ ಸಂಗತಿಗಳು ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಅಂದರೆ ಇಲ್ಲಿ ವಿಜ್ಞಾನಿ ಅಸಹಾಯಕ. ವಿಚಿತ್ರವೆಂದರೆ, ನಿವೃತ್ತರಾದ ನಂತರವೂ ಎಷ್ಟೋ ವಿಜ್ಞಾನಿಗಳು ಬಾಯಿ ಬಿಡುವುದೇ ಇಲ್ಲ. ಹಾಗಾದರೆ ಈಗ ಅಧಿಕೃತವಾಗಿ ಬಿಡುಗಡೆ ಮಾಡಿರುವ ‘ವಿಜ್ಞಾನಿಗಳ ಸಾಮಾಜಿಕ ಹೊಣೆ’ ಎಂಬ ಮಾರ್ಗಸೂಚಿ ವಿಜ್ಞಾನಿಗಳಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟಿದೆ?

ವರ್ಷಕ್ಕೆ ಹತ್ತು ದಿನವನ್ನಾದರೂ ಸಮಾಜದ ಒಳಿತಿಗಾಗಿ ಮೀಸಲಿಡಿ. ನಮ್ಮಲ್ಲೇ ಇರುವ ಸಂಪನ್ಮೂಲ
ವ್ಯಕ್ತಿಗಳನ್ನು ಗುರುತಿಸಿ. ಬಡತನದ ನಿವಾರಣೆಗೆ ತಂತ್ರಜ್ಞಾನ ನೆರವಾಗಲಿ- ಇವೇ ಮುಂತಾದ ಹದಿನೇಳು ಅಂಶಗಳನ್ನು ಈ ಮಾರ್ಗದರ್ಶಿ ಸೂತ್ರದಲ್ಲಿ ಸೇರಿಸಲಾಗಿದೆ. ಜೊತೆಗೆ ಇದನ್ನು ಜಾರಿಗೆ ತಂದರೆ ವಿಜ್ಞಾನಿಗಳ ವಾರ್ಷಿಕ ಚಟುವಟಿಕೆಯಲ್ಲಿ ಇದನ್ನು ನಮೂದಿಸಿ ಅಂಥವರಿಗೆ ಉತ್ತೇಜನ ನೀಡುವುದಾಗಿಯೂ ಘೋಷಿಸಲಾಗಿದೆ. ಇದಕ್ಕಾಗಿಯೇ ಆಯವ್ಯಯದಲ್ಲಿ ಪ್ರತ್ಯೇಕ ಹಣವನ್ನು
ನಿಗದಿಪಡಿಸಲಾಗಿದೆ.

ವಿಜ್ಞಾನದ ಎಲ್ಲ ಚಟುವಟಿಕೆಗಳೂ ಸಮಾಜ ಮುಖಿಯಾಗಿ ಇರುವುದಿಲ್ಲ; ಅದನ್ನು ನಿರೀಕ್ಷಿಸ ಲೂಬಾರದು. ಥರ್ಮೋಡೈನಮಿಕ್ಸ್‌ ಕುರಿತು ಮಾಡುವ ಸಂಶೋಧನೆಗಿಂತ ನಮ್ಮ ರೈತನಿಗೆ ತ್ವರಿತವಾಗಿ ಬೇಕಾಗಿರುವುದು ಬರವನ್ನು ನಿರೋಧಿಸಿ ಬೆಳೆಯುವ ಬೆಳೆಗಳು. ಕೀಟನಾಶಕಗಳನ್ನು ಬಳಸಿ ಬೆಳೆದ ಬೆಳೆಗಳು ನಮ್ಮ ಹೊಟ್ಟೆಯನ್ನೂ ಸೇರುತ್ತವಲ್ಲ? ಇದಕ್ಕೆ ಪರಿಹಾರ ಬೇಡವೇ? ಇದರ ಸಾಮಾಜಿಕ ಹೊಣೆಯನ್ನು ಯಾರು ಹೊರುತ್ತಾರೆ? ಕೃಷಿ ತಜ್ಞರೋ ರಾಸಾಯನಿಕ ವಿಜ್ಞಾನಿಗಳೋ?

‘ಡೌನ್‌ ಟು ಅರ್ತ್‌’ ಪತ್ರಿಕೆಯ ಇತ್ತೀಚಿನ ವರದಿಯಂತೆ, 2020ರ ಒಂದೇ ವರ್ಷದಲ್ಲಿ 13,92,179 ಮಂದಿ ಭಾರತದಲ್ಲಿ ಕ್ಯಾನ್ಸರಿಗೆ ಬಲಿಯಾಗಿದ್ದಾರೆ. ಇದನ್ನು ಹೇಗೆ ಅರ್ಥೈಸುವುದು? ಆಹಾರ ತಜ್ಞರ ಸಾಮಾಜಿಕ ಹೊಣೆ ಏನು ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ ನಮ್ಮ ಹೆಮ್ಮೆಯ ಸಂಸ್ಥೆ ಕೂಡ. ಜಾಗತಿಕ ಮಟ್ಟದಲ್ಲಿ ಅತಿ ಮೇಲಿರುವ ಸಂಸ್ಥೆ. ವರ್ಷಕ್ಕೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಸರ್ಕಾರದ ಅನುದಾನ ಪಡೆಯುತ್ತದೆ. ಬೆಂಗಳೂರಿನ ಕೆರೆಗಳ ಬಗ್ಗೆ, ವಿಶೇಷವಾಗಿ ಮಾಲಿನ್ಯದ ಬಗ್ಗೆ ದೊಡ್ಡ ಪ್ರಮಾಣದ ಸಂಶೋಧನೆ ಮಾಡಿದೆ. ವರದಿ ಸರ್ಕಾರದ ಕೈ ಸೇರಿದೆ ಕೂಡ. ಆದರೆ ಸಾರ್ವಜನಿಕವಾಗಿ
ಅಲ್ಲಿನ ವಿಜ್ಞಾನಿಗಳು ಮಾಹಿತಿಯನ್ನು ಹಂಚಿಕೊಂಡ ಸಂದರ್ಭಗಳು ಕಡಿಮೆ. ಏಕೆಂದರೆ ಆ ಸಂಸ್ಥೆ ಕೂಡ ಒಂದು ಆಡಳಿತಾತ್ಮಕ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ
ಎಂದು ಸಮರ್ಥಿಸಿಕೊಳ್ಳಬಹುದು.

ಪಶ್ಚಿಮ ಘಟ್ಟಗಳ ಸಂರಕ್ಷಣೆ, ಅಭಿವೃದ್ಧಿ ಕುರಿತು ಕಸ್ತೂರಿ ರಂಗನ್‌ ದೀರ್ಘ ವರದಿಯನ್ನೇ ನೀಡಿದ್ದಾರೆ. ಆ ಕುರಿತು ಪರ-ವಿರೋಧದ ಬಹಳಷ್ಟು ಚರ್ಚೆಗಳೂ ಆಗಿವೆ. ಆದರೆ ಸಾರ್ವಜನಿಕವಾಗಿ ಈ ಕುರಿತು ಅವರು ಎಲ್ಲೂ ಚರ್ಚಿಸಿರುವುದು ಕಾಣುವುದಿಲ್ಲ. ಇದೇಕೆ ಹೀಗೆ? ವರದಿ ಕೊಟ್ಟಿರುವೆ, ನೋಡಿಕೊಳ್ಳಿ ಎಂಬ ಇಂಗಿತ ವಿಜ್ಞಾನಿಗಳ ಧೊರಣೆಯೇ ಆಗಿದೆ. ವಿಜ್ಞಾನಿಗಳು ದಂತಗೋಪುರದಲ್ಲಿಯೇ ಇರುತ್ತಾರೆ ಎಂಬ ಅಭಿಪ್ರಾಯ ಸಾರ್ವಜನಿಕರಿಗೆ
ಇದ್ದರೆ ಅದು ಸಹಜವೇ. ಎಷ್ಟೋ ವೇಳೆ ರಾಷ್ಟ್ರ ಮಟ್ಟದಲ್ಲಿ ನೈಸರ್ಗಿಕ ದುರಂತಗಳಾದಾಗ ವಿದ್ಯುನ್ಮಾನ ಮಾಧ್ಯಮಗಳು ತಜ್ಞರಿಗಾಗಿ ತಡಕಾಡುತ್ತಿರುತ್ತವೆ. ಉನ್ನತ ವಿಜ್ಞಾನ ಸಂಸ್ಥೆಗಳ ಬಹುತೇಕ ವಿಜ್ಞಾನಿಗಳು ಮಾಧ್ಯಮದ ಮುಂದೆ ಬರಲು ಹಿಂಜರಿಯುತ್ತಾರೆ. ಹಾಗಾದರೆ ಜನಸಾಮಾನ್ಯರಿಗೆ
ವೈಜ್ಞಾನಿಕ ಸತ್ಯಗಳು ತಿಳಿಯುವುದಾದರೂ ಹೇಗೆ? ಇಲ್ಲೇ ವಿಜ್ಞಾನಿಗಳ ಸಾಮಾಜಿಕ ಹೊಣೆ ಎಂಬುದು ಮುಖ್ಯವಾಗುತ್ತದೆ.

ಮೂಢನಂಬಿಕೆಯ ವಿರುದ್ಧ ಸೆಣಸಬೇಕೆಂಬುದು ಸರ್ಕಾರದ ನಿಲುವೇನೋ ಹೌದು. ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವ ಅಗತ್ಯ ಸಾರುವ ಅಂಶವನ್ನು ನಮ್ಮ ಸಂವಿಧಾನದಲ್ಲೇ ಅಧಿಕೃತವಾಗಿ ಸೇರಿಸಲಾಗಿದೆ. ಇದು ನಮ್ಮ ನಾಗರಿಕರ ಮೂಲಭೂತ ಹಕ್ಕು ಎಂದೂ ಸ್ಪಷ್ಟಪಡಿಸಲಾಗಿದೆ. ಹೀಗಿದ್ದೂ ಮಾಧ್ಯಮಗಳಲ್ಲಿ ಫಲಜ್ಯೋತಿಷಕ್ಕೆ ಏಕೆ ಕಡಿವಾಣ ಹಾಕಿಲ್ಲ ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT