ಮಂಗಳವಾರ, ಮಾರ್ಚ್ 28, 2023
33 °C
ಪಠ್ಯದಲ್ಲಿ ಮೌಲ್ಯ ಶಿಕ್ಷಣ ಬೇಕು ಎಂದಾದರೆ ಸಮಾಜದಲ್ಲಿ ಮೌಲ್ಯ ದುರ್ಬಲವಾಗಿದೆ ಎಂದರ್ಥ

ಅರವಿಂದ ಚೊಕ್ಕಾಡಿ ಲೇಖನ | ಮೌಲ್ಯ ಶಿಕ್ಷಣದ ಬಿಕ್ಕಟ್ಟುಗಳು

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ಯಾವುದೇ ಕಾಲದ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು‌ ಎಂಬ ಆಶಯವನ್ನು ಹೊಂದಿರುತ್ತದೆ. 2020ರ ಶಿಕ್ಷಣ ನೀತಿಯಲ್ಲಿಯೂ ಈ ಅಂಶವು ಪ್ರಸ್ತಾಪಿಸಲ್ಪಟ್ಟಿದೆ. ಆದರೆ, ವಾಸ್ತವದಲ್ಲಿ ಮೌಲ್ಯ ಶಿಕ್ಷಣದಷ್ಟು ಜಟಿಲವಾದ ಪಠ್ಯ ಅಂಶ ಇನ್ನೊಂದು ಇಲ್ಲ. ಏಕೆಂದರೆ ಕಲಿಕೆಯ ಮೇಲೆ ಪರಿಸರವು ಅಪಾರ ಪ್ರಭಾವವನ್ನು ಹೊಂದಿರುತ್ತದೆ.

ಮಕ್ಕಳ‌ ಕಲಿಕಾ ಪರಿಸರವಾದ ಸಮಾಜದಲ್ಲಿ ನೈತಿಕ ಮೌಲ್ಯಗಳು ಜೀವಂತವಾಗಿದ್ದರೆ, ತರಗತಿಗಳಲ್ಲಿ ಮೌಲ್ಯ ಶಿಕ್ಷಣದ ಮೂಲಕ ಕಲಿಸುವಂಥದ್ದೇನೂ ಇರುವುದಿಲ್ಲ. ತಾನೇ ತಾನಾಗಿ ನೈತಿಕ ಮೌಲ್ಯಗಳು ರೂಢಿಯಾಗುತ್ತವೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಇಲ್ಲದೇ ಇದ್ದರೆ ಮಕ್ಕಳಲ್ಲಿ ಅವನ್ನು ರೂಢಿಸಲು ಸಾಧ್ಯವಿಲ್ಲ.‌ ಏಕೆಂದರೆ ನೈತಿಕ ಮೌಲ್ಯಗಳು ಬೋಧಿಸಿದ್ದನ್ನು ನೆನಪಿರಿಸಿಕೊಂಡು ಬರೆಯುವಂಥವುಗಳಲ್ಲ.‌ ಜೀವನದಲ್ಲಿ ರೂಢಿಯಾಗಿ ಅನುಷ್ಠಾನದಲ್ಲಿ ಕಂಡುಬರಬೇಕಾದಂಥವು.‌ ಹಾಗೆ ಬರಬೇಕಾದರೆ ನೀತಿವಂತ ನಡವಳಿಕೆಗಳಿಗೆ ಸಮಾಜದಲ್ಲಿ ಪುರಸ್ಕಾರ ಸಿಗಬೇಕು.‌ ಆ ಪುರಸ್ಕಾರವು ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುತ್ತದೆ.

ಆದರೆ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಡವಳಿಕೆಗೆ ಸಮಾಜದಲ್ಲಿ ಎಷ್ಟರಮಟ್ಟಿಗೆ ಪುರಸ್ಕಾರ ದೊರೆಯುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆಯಾ ಗಿದೆ. ಅತ್ಯಾಚಾರದ ಶಿಕ್ಷೆಗೆ ಒಳಗಾದವರಿಗೆ, ಭ್ರಷ್ಟಾಚಾರದ ಆರೋಪಕ್ಕೆ ಒಳಗಾದವರಿಗೆ ಅದ್ಧೂರಿಯ ಸ್ವಾಗತ ನೀಡಿ, ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುವ ದಿನಗಳಲ್ಲಿ ನಾವಿದ್ದೇವೆ. ಇದೆಲ್ಲ ಮಕ್ಕಳ ಅರಿವಿಗೆ ಬರುವುದಿಲ್ಲವೆಂದು ಭಾವಿಸಬಾರದು. ನೀತಿವಂತನಲ್ಲದಿದ್ದರೆ ಕಳೆದು ಕೊಳ್ಳುವಂತಹುದು ಏನೂ ಇಲ್ಲ ಎಂದು ಅವರಿಗೆ ಅರ್ಥವಾಗುತ್ತದೆ. ಅಂದರೆ ಮಕ್ಕಳಿಗೆ ನೈತಿಕ ಮೌಲ್ಯಗಳ ಬೋಧನೆಯು ಬರೀ ಉಪದೇಶವಾಗಿ ಉಳಿದುಕೊಳ್ಳುತ್ತದೆಯೇ ವಿನಾ ಅದು ಸಮಾಜದಲ್ಲಿ ಅನುಷ್ಠಾನ ಗೊಳ್ಳುತ್ತಲೂ ಇದೆ ಎಂದು ಅನಿಸಲು ಮಾದರಿಗಳಿಲ್ಲ.

ನೇರವಾಗಿ ಮಕ್ಕಳಿಗೇ ಆಗುವ ಅನುಭವಗಳಲ್ಲಾದರೂ ನೈತಿಕ ಮೌಲ್ಯಗಳು ಹೇಗಿರುತ್ತವೆ? ಪ್ರಬಂಧ ಸ್ಪರ್ಧೆಯಲ್ಲಿ ಯಾರಿಂದಲೋ ಬರೆಸಿದ ಪ್ರಬಂಧಕ್ಕೆ ಬಹುಮಾನ ಸಿಕ್ಕಿದರೆ ತಂದೆ– ತಾಯಿಗೆ ಸಾಮಾನ್ಯವಾಗಿ ಆಕ್ಷೇಪ ಇರುವುದಿಲ್ಲ. ತಮ್ಮ ಮಗ, ಮಗಳಿಗೆ ಬಹುಮಾನ ಬಂದಿರಬೇಕು ಎನ್ನುವುದು ಅವರ ಚಿಂತನೆ. ಕ್ರೀಡಾಕೂಟಗಳಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳು ಯಾವ ವಿಧಾನದಲ್ಲಿ ಬಹುಮಾನ ಪಡೆದರೂ ಸಾಮಾನ್ಯವಾಗಿ ಅವರ ಅಧ್ಯಾಪಕರಿಗೆ ಆಕ್ಷೇಪ ಇರುವುದಿಲ್ಲ. ತಮ್ಮ‌ ಶಾಲೆಗೆ ಮನ್ನಣೆ ಸಿಗುವುದಾದರೆ ಅಧ್ಯಾಪಕರ ಮಟ್ಟದಲ್ಲೂ ನೈತಿಕತೆಯ ಬಗ್ಗೆ ಬಹಳ ಒಲವೇನೂ ಇಲ್ಲ, ಎಂದ ಮೇಲೆ ನೈತಿಕ ಮೌಲ್ಯಗಳು ರೂಢಿಯಾಗಲು ಹೇಗೆ ಸಾಧ್ಯ?

ಗಣಿತ, ವಿಜ್ಞಾನವು ವಿಚಾರವಾಗಿ ಅರ್ಥವಾದರೂ ಉಪಯೋಗವಿದೆ. ಆದರೆ ನೈತಿಕ‌ ಮೌಲ್ಯಗಳ ಶಿಕ್ಷಣವು ವಿಚಾರವಾಗಿ ಅರ್ಥವಾಗುವುದರಿಂದ ಉಪಯೋಗವಿಲ್ಲ. ಅವು ನಡವಳಿಕೆಯಲ್ಲಿ ಕಾಣಿಸುವ ಕಲಿಕೆಯಾಗಿ ರೂಢಿಯಾದಾಗ ಮಾತ್ರ ಉಪಯೋಗ ಆಗಲಿವೆ. ಆದರೆ ಮೌಲ್ಯ ಶಿಕ್ಷಣದ ಬಿಕ್ಕಟ್ಟನ್ನು ಎಲ್ಲ ಕಾಲದಲ್ಲೂ ಸಮಾಜ ಎದುರಿಸುತ್ತಲೇ ಬಂದಿದೆ. ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದ ರಾಜನೇ ತಂದೆಯನ್ನು ಕೊಂದ ವ್ಯಕ್ತಿಗೆ ಶಿಕ್ಷೆ ಕೊಡುವ ಮೂಲಕವೇ ನಾಗರಿಕತೆಯ ವಿಕಾಸ ನಡೆದದ್ದು. ಇದು ವಿಡಂಬನೆ ಹೌದು.‌ ಆದರೆ ವಾಸ್ತವ ಸತ್ಯವೂ ಹೌದು.

ಇಷ್ಟಾದರೂ ನೈತಿಕ ಮೌಲ್ಯಗಳ ಶಿಕ್ಷಣದ ಅವಶ್ಯಕತೆ ಇದೆ. ಏಕೆಂದರೆ ಕುಸಿಯುತ್ತಿರುವ ಮೌಲ್ಯಗಳ ಪ್ರಜ್ಞೆಯನ್ನಾದರೂ ಉಳಿಸಿಕೊಳ್ಳಲು ನಮಗೆ ಬೇರೆ ದಾರಿಗಳಿಲ್ಲ. ಇದನ್ನು ಶೈಕ್ಷಣಿಕವಾಗಿ ಯಾವ ರೀತಿ ಕೊಂಡೊಯ್ಯಬೇಕು ಎಂಬುದರ ಸ್ಪಷ್ಟತೆ ಬೇಕಾಗುತ್ತದೆ. ನಾವು ಇಂದು ಹೇಳುವ ಅನೇಕ ಮೌಲ್ಯಗಳು ರಾಜಪ್ರಭುತ್ವದ ಮೌಲ್ಯಗಳು.‌ ಒಂದರ್ಥದಲ್ಲಿ ರಾಜಪ್ರಭುತ್ವದಲ್ಲಿ ಮೌಲ್ಯ ಶಿಕ್ಷಣಕ್ಕೆ ಇದ್ದ ಸ್ಪಷ್ಟತೆ ಪ್ರಜಾಪ್ರಭುತ್ವದಲ್ಲಿ ಇಲ್ಲ. ಏಕೆಂದರೆ ರಾಜಪ್ರಭುತ್ವದಲ್ಲಿ ತಾತ್ವಿಕವಾಗಿಯೇ ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗಗಳು ಪ್ರತ್ಯೇಕವಾಗಿದ್ದವು.‌ ನೈತಿಕ ಮೌಲ್ಯಗಳು ಇದ್ದದ್ದು ಆಳಿಸಿಕೊಳ್ಳುವ ವರ್ಗಕ್ಕೆ. ಆಳುವ ವರ್ಗಕ್ಕೆ ಬಹಳವೇನೂ ನೈತಿಕ ನಿರ್ಬಂಧವಿರಲಿಲ್ಲ.

ಆದರೆ ಪ್ರಜಾಪ್ರಭುತ್ವದಲ್ಲಿ ನೈತಿಕ ಮೌಲ್ಯಗಳ ಶಿಕ್ಷಣದ ಪರಿಕಲ್ಪನೆಯು ಹೆಚ್ಚು ಜಟಿಲವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ತಾತ್ವಿಕ ನಿಲುವುಗಳು ಮತ್ತು ವಾಸ್ತವ ಸತ್ಯದ ನಡುವೆಯೇ ವ್ಯತ್ಯಾಸವಿದೆ.‌ ವಾಸ್ತವದಲ್ಲಿ, ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗವು ರಾಜಪ್ರಭುತ್ವಕ್ಕಿಂತಲೂ ಹೆಚ್ಚಿನ ಭೋಗ ಮತ್ತು ವಿಲಾಸವನ್ನು ಅನುಭವಿಸುತ್ತದೆ. ಆದರೆ ತಾತ್ವಿಕವಾಗಿ ಆಳಿಸಿಕೊಳ್ಳುವವರೇ ಆಳುವವರಾಗಿ ದ್ದಾರೆ. ಹೀಗಿರುವಲ್ಲಿ ನೈತಿಕ ಮೌಲ್ಯಗಳ ಪರಿಕಲ್ಪನೆಯಿಂದ ಯಾರನ್ನೂ ಹೊರಗಿಡಲು ಬರುವುದಿಲ್ಲ. ಯಾರನ್ನೂ ಹೊರಗಿಡದೇ ಇದ್ದಾಗ ಅನುಷ್ಠಾನ ಗೊಳಿಸುವ ಶಕ್ತಿ ಅಮೂರ್ತವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಕುಟುಂಬಕ್ಕೆ ಯಜಮಾನ ಇದ್ದಾರೆ. ಆದರೆ ಅವರು ಕುಟುಂಬಕ್ಕೆ ನೈತಿಕತೆಯನ್ನು ನಿರ್ದೇಶಿಸುವ ಅಧಿಕಾರವನ್ನು ಹೊಂದಿಲ್ಲ. ಬರೀ ಸೂಚಿಸಬಹುದಷ್ಟೆ.‌ ಸೂಚಿಸಿದ್ದನ್ನು ಕುಟುಂಬದ ಸದಸ್ಯರು ಪಾಲಿಸದೇ ಇರಲು ಅವರಿಗೆ ಸಾಂವಿಧಾನಿಕ ಹಕ್ಕುಗಳಿವೆ. ಅದನ್ನು ಯಜಮಾನ ಉಲ್ಲಂಘಿಸಿದರೆ ಕಾನೂನಿನ ಸಮಸ್ಯೆ ಎದುರಾಗುತ್ತದೆ. ಅವರು ಸೂಚಿಸಿದ್ದನ್ನು ಪಾಲಿಸುವುದು ಬಿಡುವುದು ಕುಟುಂಬದ ಸದಸ್ಯರ ವೈಯಕ್ತಿಕ ಇಚ್ಛೆಗೆ ಒಳಪಟ್ಟಿರುತ್ತದೆ. ಶಾಲೆಗೆ ಬಂದಾಗ ಅಧ್ಯಾಪಕರು ಮಕ್ಕಳಿಗೆ ನೈತಿಕ ಮೌಲ್ಯಗಳ ತಿಳಿವಳಿಕೆ ನೀಡಬಹುದು. ಪಾಲಿಸುವುದು ಬಿಡುವುದು ಮಕ್ಕಳ‌ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾಗುತ್ತದೆ.

ಈ ರೀತಿಯ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳ ಶಿಕ್ಷಣವು ನೈತಿಕ ಮೌಲ್ಯಗಳ ನಮ್ಯತೆಗೆ ಹೆಚ್ಚು ನಿಷ್ಠವಾಗಿ ಇರಬೇಕಾಗುತ್ತದೆ. ಅಂದರೆ ಇವತ್ತು ನೀತಿಯಾಗಿ ಕಾಣಿಸಿದ್ದು ನಾಳೆಗೆ ನೀತಿಯಲ್ಲದೆಯೂ ಇರಬಹುದು, ಒಂದು ಸಂದರ್ಭದಲ್ಲಿ ನೈತಿಕ ಮೌಲ್ಯ ಎನಿಸಿದ್ದು ಮತ್ತೊಂದು ಸಂದರ್ಭದಲ್ಲಿ ನೈತಿಕ ಮೌಲ್ಯವೇ ಅಲ್ಲ ಎಂದು ಅನಿಸಬಹುದು ಎಂಬ ಪರಿಕಲ್ಪನೆಯನ್ನು ಇರಿಸಿಕೊಂಡು ಮೌಲ್ಯ ಶಿಕ್ಷಣವನ್ನು ವಿನ್ಯಾಸಗೊಳಿಸಬೇಕಾಗುತ್ತದೆ.‌ ಆಗ ಯಾವ ಸಂದರ್ಭದಲ್ಲಿ ಯಾವುದು ನೈತಿಕತೆ ಎಂದು ನಿರ್ಧರಿಸುವ ಸ್ವ ವಿವೇಚನೆಯ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸುವುದೇ ಆದ್ಯತೆಯ ಕೆಲಸವಾಗಬೇಕಾಗುತ್ತದೆ. ಅಂದರೆ ಸತ್ಯವನ್ನೇ ಹೇಳಬೇಕು ಎಂದು ಕಲಿಸಲು ಬರುವುದಿಲ್ಲ.‌ ಯಾವ ಸಂದರ್ಭ ಗಳಲ್ಲಿ ಸತ್ಯವನ್ನೇ ಹೇಳಬೇಕು ಎಂದು ತೀರ್ಮಾನಿಸುವ ಶಕ್ತಿಯನ್ನು ಬೆಳೆಸಬೇಕಾಗುತ್ತದೆ.‌ ವ್ಯಕ್ತಿಯನ್ನು ಆಂತರಿಕವಾಗಿಯೇ ಉನ್ನತೀಕರಿಸುವ ಈ ಪದ್ಧತಿ ಅತ್ಯಂತ ಪರಿಣಾಮಕಾರಿ. ಆದರೆ ಇದು ಸ್ವಯಂ ಶಿಸ್ತು ಮತ್ತು ಸ್ವ ನಿಯಂತ್ರಣಗಳಿದ್ದಾಗ ಮಾತ್ರ ಯಶಸ್ವಿಯಾಗುತ್ತದೆ.

ಮೌಲ್ಯ ಶಿಕ್ಷಣದ ನಿರ್ವಹಣೆಗೆ ಹೆಚ್ಚಾಗಿ ಎರಡು ಕ್ರಮಗಳನ್ನು ಅನುಸರಿಸಲಾಗುತ್ತದೆ. ಮೊದಲನೆಯದು, ಧಾರ್ಮಿಕ, ಐತಿಹಾಸಿಕ ಕಥೆಗಳ ಮೊರೆ ಹೋಗುವುದು.‌ ನೈತಿಕ ಮೌಲ್ಯಗಳ ವಿಶ್ಲೇಷಣೆಗೆ ಇವು ಸಹಾಯ ಮಾಡುತ್ತವೆ. ಆದರೆ ಮೌಲ್ಯ ಪ್ರಜ್ಞೆಯ ಬೆಳವಣಿಗೆಗೆ ಸಾಕಾಗುವುದಿಲ್ಲ. ಇಂತಹ ಕಥೆಗಳು ಮಕ್ಕಳಲ್ಲಿ ಕಾಲ್ಪನಿಕ ಮನೋಚಿತ್ರಗಳನ್ನು‌ ಮೂಡಿಸಬಲ್ಲವೇ ವಿನಾ ವಾಸ್ತವಿಕ ಮನೋಚಿತ್ರಗಳನ್ನು ರೂಪಿಸುವುದಿಲ್ಲ.‌ ಆದ್ದರಿಂದ ಮೌಲ್ಯ ಶಿಕ್ಷಣದ ಸಂಪನ್ಮೂಲವನ್ನು ವಾಸ್ತವದಿಂದಲೇ ಆಯ್ದು ಕ್ರೋಡೀಕರಿಸಬೇಕಾಗಿದೆ.

ಎರಡನೆಯದಾಗಿ, ಮಕ್ಕಳ‌ ಕಲ್ಪನೆಗೆ ನಿಲುಕಲು ಕಷ್ಟವಾಗುವ ವ್ಯಕ್ತಿತ್ವಗಳನ್ನು ನೈತಿಕ ಮೌಲ್ಯಗಳ ಮಾದರಿಯಾಗಿ ಮಕ್ಕಳಿಗೆ ಕೊಡುವ ಪದ್ಧತಿ ಇದೆ.‌ ಗಾಂಧಿ, ನೆಹರೂ, ಪಟೇಲ್, ಸುಭಾಷ್‌ಚಂದ್ರ ಬೋಸ್ ಎಂದೆಲ್ಲ ವ್ಯಕ್ತಿತ್ವಗಳ ಮಾದರಿ ಕೊಟ್ಟಾಗ ವ್ಯಕ್ತಿತ್ವಗಳು ಮಕ್ಕಳು ಕಾಣದ, ಅವರ ಕಾಲಮಾನಕ್ಕೆ ನಿಲುಕದ, ಮೌಲ್ಯಗಳು ಕೂಡ ಕೈಗೆಟುಕದ ಮಟ್ಟದ್ದಾಗಿ ಬರೀ ವಿಚಾರವಾಗಿ ಉಳಿಯುವಂತಾಗುತ್ತದೆ.‌ ಬದಲಿಗೆ ಮಕ್ಕಳ ನಡುವೆಯೇ ಇರುವ ಸಮುದಾಯದ ಪ್ರಮುಖರು, ಮನೆಯ ಹಿರಿಯರು, ಶಿಕ್ಷಕರು ಇಂಥವರಲ್ಲೇ ಮಕ್ಕಳಿಗೆ ನಿಕಟವಾದ ವ್ಯಕ್ತಿತ್ವಗಳ‌ ಮಾದರಿಗಳನ್ನು ಕೊಡಬೇಕು.

ಶಿಕ್ಷಣ ನೀತಿ ಬದಲಾಗಿದೆ. ಬೋಧನಾ ಪದ್ಧತಿಯೂ ತಂತ್ರಜ್ಞಾನ ಆಧಾರಿತವಾಗಿದೆ.‌ ಹಾಗಿರುವಾಗ, ಇಂದಿನ ಕಾಲಮಾನದ ಅಗತ್ಯಗಳಿಗೆ ಅನುಗುಣವಾಗಿ ಮೌಲ್ಯ ಶಿಕ್ಷಣದ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯವಾಗುವ ಹಾಗೆ ನೈತಿಕ ಮೌಲ್ಯಗಳ ಶಿಕ್ಷಣವನ್ನು ಮರು ನಿರೂಪಿಸಿಕೊಳ್ಳಬೇಕಾದ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು