ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಅರುಣ್ ಸಿನ್ಹಾ ಲೇಖನ: ಪ್ರತಿಜ್ಞೆ, ಪ್ರಮಾಣಪತ್ರ ಮತ್ತು ಗೋವಾ ಚುನಾವಣೆ!

ಗೋವಾದಲ್ಲಿ ರಾಜಕೀಯ ನಿಷ್ಠೆಯು ಮೀನು ಮಾರಾಟದಂತೆ ಆಗಿದೆ
Last Updated 6 ಫೆಬ್ರುವರಿ 2022, 21:47 IST
ಅಕ್ಷರ ಗಾತ್ರ

ಬಿಜೆಪಿಯನ್ನು ಒಬ್ಬಂಟಿಯಾಗಿ ಸೋಲಿಸಲಾಗದು ಎಂದು ಮಮತಾ ಬ್ಯಾನರ್ಜಿ ಅವರು ಚುನಾವಣಾ ಕಣದ ಮಧ್ಯಭಾಗದಲ್ಲಿ ಅರಿತುಕೊಂಡಿದ್ದಾರೆ. ಕಾಂಗ್ರೆಸ್ ತಮ್ಮ ಜೊತೆ ಬರಲಿ ಎಂದು ಬಯಸುತ್ತಿದ್ದಾರೆ.

ಪಶ್ಚಿಮ ಬಂಗಾಳದಿಂದ ಗೋವಾಕ್ಕೆ ತುಸು ಅಹಂಕಾರದಿಂದಲೇ ಬಂದ ಮಮತಾ, ತಮ್ಮ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಗೋವಾದಲ್ಲಿಯೂ ಸೋಲಿಸಬಹುದು ಎಂದುಕೊಂಡಿದ್ದರು. ಅವರ ಮನವಿಯನ್ನು ಕಾಂಗ್ರೆಸ್ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರೋಧಿ ಮತದಾರರ ನಡುವೆ ಟಿಎಂಸಿ ಪಾರಮ್ಯ ಸಾಧಿಸಿರುವಂತೆ, ಗೋವಾ ದಲ್ಲಿ ಬಿಜೆಪಿ ವಿರೋಧಿ ಮತದಾರರ ನಡುವೆ ಕಾಂಗ್ರೆಸ್ ತನಗೆ ಪಾರಮ್ಯವಿದೆ ಎನ್ನುತ್ತಿದೆ.

ಅದು ಅಲ್ಲಿ ಟಿಎಂಸಿ ಬೆಳವಣಿಗೆಗೆ ಅವಕಾಶ ಕೊಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕುಸಿಯುತ್ತಿದ್ದರೂ, ಅಲ್ಲಿ ಅದಕ್ಕೆ ಮತದಾರರ ನೆಲೆ ಇದೆ. ಆದರೆ, ಟಿಎಂಸಿಗೆ ಗೋವಾದಲ್ಲಿ ಯಾವ ನೆಲೆಯೂ ಇಲ್ಲ. ಮತ ತಂದುಕೊಡದ ಪಕ್ಷದ ಜೊತೆ ಹೊಂದಾಣಿಕೆ ಏಕೆ ಎಂಬುದು ಕಾಂಗ್ರೆಸ್ಸಿನ ವಾದ.

ಟಿಎಂಸಿಯು ಸ್ನೇಹಿತನೂ ಶತ್ರುವೂ ಏಕಕಾಲದಲ್ಲಿ ಆಗುವುದು ಹೇಗೆ ಎಂಬುದು ಕಾಂಗ್ರೆಸ್ಸಿನ ಪ್ರಶ್ನೆ. ಕಾಂಗ್ರೆಸ್ಸಿನ ಹಿರಿಯ ಹಾಗೂ ಮಧ್ಯಮ ಶ್ರೇಯಾಂಕದ ನಾಯಕರನ್ನು ಸೆಳೆಯುವ ಮೂಲಕ ಟಿಎಂಸಿ ಗೋವಾದಲ್ಲಿ ತನ್ನ ಪಯಣ ಆರಂಭಿಸಿತು. ಎರಡು ತಿಂಗಳು ಇದನ್ನು ಮುಂದುವರಿಸಿದ ಟಿಎಂಸಿ, ನಂತರ ಕಾಂಗ್ರೆಸ್ ಜೊತೆ ಹೊಂದಾಣಿಕೆಯ ಮಾತು ಶುರುಮಾಡಿತು. ತನ್ನನ್ನು ಒಡೆಯಲು ಬಂದ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ಸಿಗೆ ಆಗಲಿಲ್ಲ.

ಜನವರಿ ಎರಡನೆಯ ಹಾಗೂ ಮೂರನೆಯ ವಾರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿ ತಮ್ಮ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದ್ದವು. ಟಿಎಂಸಿಯು ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೊತ್ತುಮಾಡಲು ಹೆಣಗಾಟ ನಡೆಸಿತ್ತು. ಕಾಂಗ್ರೆಸ್ಸಿನಿಂದ ಟಿಎಂಸಿ ಕಡೆ ಬಂದ ಅಲೆಕ್ಸೊ ಲೊರೆಂಕೊ ಅವರು, ತಿಂಗಳು ತುಂಬುವ ಮೊದಲೇ ಟಿಎಂಸಿ ತೊರೆದರು. ಅವರ ಭಾವಚಿತ್ರ
ವನ್ನು ಟಿಎಂಸಿಯು ಮಮತಾ ಅವರ ಭಾವಚಿತ್ರದ ಜೊತೆ ರಾಜ್ಯದಾದ್ಯಂತ ಪ್ರದರ್ಶಿಸಿತ್ತು.

ಫಟೋರ್ಡಾ ಕ್ಷೇತ್ರಕ್ಕೆ ಟಿಎಂಸಿಯು ಲೂಸಿಯಾನೊ ಫೆಲೆರೊ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಫೆಲೆರೊ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ, ಗೋವಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ. ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು, ತಾವು ತಮ್ಮ ವಿಧಾನಸಭಾ ಕ್ಷೇತ್ರವನ್ನು ಟಿಎಂಸಿ ಅಭ್ಯರ್ಥಿಗೆ ಬಿಟ್ಟುಕೊಡುವುದು ಹಾಗೂ ಗೋವಾದಲ್ಲಿ ಟಿಎಂಸಿ ಚುನಾವಣಾ ಅಭಿಯಾನದ ನೇತೃತ್ವವನ್ನು ತಾವು ವಹಿಸುವುದು ಎಂಬ ಒಪ್ಪಂದವನ್ನು ಫೆಲೆರೊ ಅವರು ಮಮತಾ ಜೊತೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಟಿಎಂಸಿಯು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಯೂ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿಯೂ ಮಾಡಿತು. ಆದರೆ, ಪಕ್ಷದ ನಾಯಕತ್ವವು ಫೆಲೆರೊ ಅವರಿಗೆ ಫಟೋರ್ಡಾ ಕ್ಷೇತ್ರದಿಂದ ಕಣಕ್ಕಿಳಿಯು ವಂತೆ ಸೂಚಿಸಿತು. ಇದು ಮೊದಲ ಒಪ್ಪಂದದ ಭಾಗವಾಗಿರಲಿಲ್ಲ. ಇದು ಟಿಎಂಸಿಯ ಸ್ಥಿತಿಯನ್ನು ತೋರಿಸುತ್ತದೆ.

ಟಿಎಂಸಿಯ ಸಮಸ್ಯೆಗಳು ಅದರದೇ ಸೃಷ್ಟಿ. ಚುನಾವಣೆಗೆ ಸಿದ್ಧವಾಗಲು ಪಕ್ಷಕ್ಕೆ ಸಮಯವೇ ಇರಲಿಲ್ಲ. ತಳಮಟ್ಟದಿಂದ ಪಕ್ಷ ಕಟ್ಟುವ ಬದಲು, ಮೇಲಿನಿಂದ ಪಕ್ಷ ಕಟ್ಟಲು ಅದು ತೀರ್ಮಾನಿಸಿತು. ಬೇರೆ ಪಕ್ಷಗಳ ಪ್ರಮುಖ ನಾಯಕರನ್ನು ಸೆಳೆದು, ಅವರ ಪ್ರಭಾವ ಬಳಸಿ ರಾಜ್ಯದಲ್ಲಿ ವಿಸ್ತರಿಸಿಕೊಳ್ಳಲು ಆಲೋಚಿಸಿತು. ಈ ಕಾರ್ಯತಂತ್ರ ವಿಫಲವಾಗಿದೆ. ಫೆಲೆರೊ, ಲೊರೆಂಕೊ ಮತ್ತು ಚರ್ಚಿಲ್ ಅಲೆಮಾವೊ ಅವರಿಗೆ ಪಕ್ಷವು ಸೀಮಿತವಾಗಿದೆ. ಲೊರೆಂಕೊ ಟಿಎಂಸಿ ತೊರೆದಾಗಿದೆ. ಟಿಎಂಸಿಯು ಈಗ ಗೋವಾದಲ್ಲಿ ಕೆಲವು ಸ್ಥಾನಗಳನ್ನು ಮಾತ್ರ ಗೆಲ್ಲುವತ್ತ ಗಮನಹರಿಸಿದೆ. ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು, ಪಕ್ಷ ಕೆಲವು ಸ್ಥಾನಗಳನ್ನು ಗೆದ್ದರೂ ಅದು ದೊಡ್ಡ ಜಯ ಎನ್ನುತ್ತಿದ್ದಾರೆ.

ಕಾಂಗ್ರೆಸ್ಸಿಗೆ ಕ್ರೈಸ್ತರು ಹಾಗೂ ಮುಸ್ಲಿಮರ ಬೆಂಬಲ ಇದೆ. ಗೋವಾದಲ್ಲಿ ಕ್ರೈಸ್ತರ ಮತದಾನದ ಮೇಲೆ ಪ್ರಭಾವ ಬೀರುವಲ್ಲಿ ಚರ್ಚ್‌ನ ಪಾತ್ರವಿದೆ. ‘ಜಾತ್ಯತೀತ’ ಮತಗಳು ಒಡೆದುಹೋಗಬಾರದು ಎಂಬ ಸಂದೇಶವನ್ನು ಕ್ರೈಸ್ತರಿಗೆಚರ್ಚ್‌ ರವಾನಿಸುತ್ತಿದೆ. ಇದು ಕಾಂಗ್ರೆಸ್ಸಿಗೆ ಅನುಕೂಲಕರ. ಆಡಳಿತ ವಿರೋಧಿ ಮತಗಳ ದೊಡ್ಡ ಪಾಲನ್ನು ಸೆಳೆಯುವ ಅವಕಾಶವು ಹೆಚ್ಚಿರುವುದು ಕೂಡ ಕಾಂಗ್ರೆಸ್ಸಿಗೆ. ಹಿಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಹಿಂದಿನ ಎರಡು ವರ್ಷಗಳಲ್ಲಿ ಹಣ ಖರ್ಚು ಮಾಡಿರುವ ಎಎಪಿ, ಪ್ರತೀ ಕುಟುಂಬಕ್ಕೆ ಉಚಿತವಾಗಿ ಆಹಾರಧಾನ್ಯ ನೀಡಿದೆ, ಮಾಧ್ಯಮಗಳ ಮೂಲಕ ತನ್ನ ಪರ ಪ್ರಚಾರಾಂದೋಲನ ನಡೆಸಿದೆ. ಆದರೆ ತಾನು ಬೇರೆ ಪಕ್ಷಗಳಿಗಿಂತ ಯಾವ ರೀತಿಯಲ್ಲಿಯೂ ಭಿನ್ನವಲ್ಲ ಎಂಬುದನ್ನು ಸಾಬೀತುಮಾಡಿದೆ. ಬೇರೆ ಪಕ್ಷಗಳಿಂದ ಬಂದವರಿಗೆ ಟಿಕೆಟ್ ನೀಡಿದೆ.

ಗೋವಾದಲ್ಲಿ ರಾಜಕೀಯ ಪಕ್ಷಗಳು ವಿಮಾನ ನಿಲ್ದಾಣಗಳಂತೆ ಆಗಿವೆ. ಒಂದಿಷ್ಟು ಜನ ನಿಲ್ದಾಣಕ್ಕೆ ಬರುತ್ತಿರುತ್ತಾರೆ, ಇನ್ನೊಂದಿಷ್ಟು ಜನ ನಿಲ್ದಾಣದಿಂದ ತೆರಳುತ್ತ ಇರುತ್ತಾರೆ. ರಾಜಕೀಯ ನಿಷ್ಠೆಯು ಮೀನು ಮಾರಾಟದಂತೆ ಆಗಿದೆ. ಚುನಾವಣೆಯ ನಂತರದಲ್ಲಿ ಪಕ್ಷ ನಿಷ್ಠೆಯ ಮಾರಾಟ ನಿಲ್ಲುವುದೇ? ಇದಕ್ಕೆ ಉತ್ತರ ‘ಇಲ್ಲ’.

ಬಿಜೆಪಿ ಕೂಡ ರಾಜ್ಯದಲ್ಲಿ ಬಹಳ ಸುಭದ್ರವಾಗಿಯೇನೂ ಇಲ್ಲ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 40 ಸ್ಥಾನಗಳ ಪೈಕಿ 13ರಲ್ಲಿ ಮಾತ್ರ ಗೆಲುವು ಕಂಡಿತ್ತು. ಪಕ್ಷದ ಪರಿಸ್ಥಿತಿಯು ಅದಾದ ನಂತರ ಸುಧಾರಿಸಿಲ್ಲ. ಬದಲಿಗೆ, ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರದ ವೈಫಲ್ಯಗಳ ಕಾರಣದಿಂದಾಗಿ ಇನ್ನಷ್ಟು ಕುಸಿದಿದೆ. ಆದರೆ, ಪಕ್ಷವು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷವು ಈಗ ಅಮಿತ್ ಶಾ ಅವರ ‘ನಾವು ಗೆಲ್ಲಲಿ, ಸೋಲಲಿ; ಆಡಳಿತ ಮಾತ್ರ ನಮ್ಮದೇ ಆಗಿರುತ್ತದೆ’ ಎಂಬತತ್ವವನ್ನು ಪಾಲಿಸುತ್ತಿದೆ.

ಕಾಂಗ್ರೆಸ್ ಪಕ್ಷವು ಜನವರಿ 22ರಂದು ತನ್ನ ಎಲ್ಲ ಅಭ್ಯರ್ಥಿಗಳನ್ನು ಪೂಜಾ ಸ್ಥಳಗಳಿಗೆ, ಪ್ರಾರ್ಥನಾ ಮಂದಿರಗಳಿಗೆ ಕರೆದೊಯ್ಯಿತು. ಕಾಂಗ್ರೆಸ್ಸಿನ ಅಭ್ಯರ್ಥಿಗಳೆಲ್ಲ ದೇವರ ಸಾಕ್ಷಿಯಾಗಿ, ಚುನಾವಣೆಯ ನಂತರದಲ್ಲಿ ತಾವು ಬೇರೆ ಪಕ್ಷಗಳಿಗೆ ಹಾರುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದರು. ತನ್ನ ಅಭ್ಯರ್ಥಿಗಳು ಕೂಡ ಚುನಾವಣೆಯ ನಂತರ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಪ್ರಮಾಣಪತ್ರವೊಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ ಎಂದು ಎಎ‍ಪಿ ಹೇಳಿದೆ.

ಆದರೆ, ದೇವರ ಮುಂದೆ ಮಾಡುವ ಪ್ರತಿಜ್ಞೆಯಾಗಲಿ, ಪ್ರಮಾಣಪತ್ರಕ್ಕೆ ಸಹಿ ಹಾಕುವುದಾಗಲಿ ಕೆಲಸಕ್ಕೆ ಬರಲಿಕ್ಕಿಲ್ಲ. ಗೋವಾದ ವಿಧಾನಸಭಾ ಕ್ಷೇತ್ರಗಳು ಸಣ್ಣದಾಗಿರುವುದೇ ಇದಕ್ಕೆ ಕಾರಣ. ಇಲ್ಲಿನ ವಿಧಾನಸಭಾ ಕ್ಷೇತ್ರಗಳ ಮತದಾರರ ಸರಾಸರಿ ಸಂಖ್ಯೆ 25 ಸಾವಿರ. ಇಲ್ಲಿನ ಹೆಚ್ಚೆಚ್ಚು ರಾಜಕಾರಣಿಗಳು ತಮ್ಮದೇ ಆದ ಮತಬ್ಯಾಂಕ್ ಕಟ್ಟಿಕೊಂಡಿದ್ದಾರೆ. ಮತದಾರರಿಗೆ ಸರ್ಕಾರಿ ಕೆಲಸ ಕೊಡಿಸಿ, ಅವರಿಗೆ ಹಣಕಾಸಿನ ನೆರವು ನೀಡಿ, ಅವರಿಗೆ ಹುಶಾರಿಲ್ಲದಿದ್ದರೆ ವಾಹನ ಸೌಕರ್ಯ ಕಲ್ಪಿಸಿ, ಅವರ ಮನೆಯಲ್ಲಿನ ಮದುವೆಗೆ ನೆರವು ಒದಗಿಸಿ ಅಥವಾ ಅವರ ಮಕ್ಕಳ ಶಾಲಾ ಶಿಕ್ಷಣದ ಶುಲ್ಕವನ್ನು ತಾವೇ ತುಂಬಿ ಮತದಾರರ ನಿಷ್ಠೆಯನ್ನು ಖರೀದಿಸಿದ್ದಾರೆ. ಈ ರಾಜಕಾರಣಿಗಳು ಪಕ್ಷಗಳಿಗಿಂತಲೂ ದೊಡ್ಡವರಾಗಿ ಬೆಳೆದಿದ್ದಾರೆ. ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದು ಇಲ್ಲಿ ಮುಖ್ಯವಲ್ಲ. ಮತದಾರರಿಗೂ ಅವರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದು ಪ್ರಮುಖವಲ್ಲ. ರಾಜಕೀಯ ನಾಯಕರು ಹಾಗೂ ಮತದಾರರ ನಡುವೆ ಸಾಲ–ಬದ್ಧತೆಯ ವ್ಯವಸ್ಥೆಯೊಂದು ರೂಪುಗೊಂಡಿದೆ.

ಲೇಖಕ: ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT