ಮ್ಯಾಂಚೆಸ್ಟರ್: ಭಾರತದ ರಿಷಭ್ ಪಂತ್ ಅವರು ‘ಶೂರತ್ವ’ವನ್ನು ಹೊಸದೊಂದು ಔನತ್ಯಕ್ಕೆ ಏರಿಸಿದರು. ಕಾಲ್ಬೆರಳು ಮುರಿದ ನೋವಿನಲ್ಲಿಯೂ ಬ್ಯಾಟಿಂಗ್ ಮಾಡಿದ ಪಂತ್ ಕ್ರಿಕೆಟ್ ಲೋಕದ ಮನಗೆದ್ದರು. ಆದರೆ ನಾಯಕ ಬೆನ್ ಸ್ಟೋಕ್ಸ್ ಅವರ ಅಮೋಘ ಬೌಲಿಂಗ್ ಆತಿಥೇಯ ಇಂಗ್ಲೆಂಡ್ ಆತ್ಮಬಲ ಗಟ್ಟಿಯಾಗಿಸಿತು.

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟವು ರಿಷಭ್ ಅವರ ಎದೆಗಾರಿಕೆಯ ಆಟಕ್ಕೆ ವೇದಿಕೆಯಾಯಿತು. ಬುಧವಾರ ಮೊದಲ ದಿನದಾಟದಲ್ಲಿ ಕ್ರಿಸ್ ವೋಕ್ಸ್ ಹಾಕಿದ್ದ ಯಾರ್ಕರ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ರಿಷಭ್ ಗಾಯಗೊಂಡಿದ್ದರು. ಚೆಂಡು ಅವರ ಬಲಗಾಲಿನ ಕಿರುಬೆರಳಿನ ಹತ್ತಿರ ಅಪ್ಪಳಿಸಿತ್ತು. ಕಾಲು ಊದಿಕೊಂಡು, ರಕ್ತಸ್ರಾವವಾಗಿ ನಡೆದಾಡಲೂ ಕಷ್ಟಪಟ್ಟಿದ್ದ ರಿಷಭ್ ಅವರು ಗಾಲ್ಫ್ ಕಾರ್ಟ್ ವಾಹನದಲ್ಲಿ ಪೆವಿಲಿಯನ್ಗೆ ಮರಳಿದ್ದರು. ನಂತರದ ತಪಾಸಣೆಯಲ್ಲಿ ಮೂಳೆ ಮುರಿತವಿರುವುದು ಪತ್ತೆಯಾಗಿತ್ತು. ಆದ್ದರಿಂದ ಅವರು ಆಡುವುದು ಅನುಮಾನವಿತ್ತು.

ಆದರೆ ಗುರುವಾರ ಕುಂಟುತ್ತಲೇ ಕ್ರೀಸ್ಗೆ ಬಂದ ಪಂತ್ (54; 75ಎಸೆತ) ಅರ್ಧಶತಕ ಹೊಡೆದಾಗ ಓಲ್ಡ್ ಟ್ರಾಫರ್ಡ್ನಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿಯಿತು.

ಇನ್ನೊಂದೆಡೆ ಆತಿಥೇಯ ತಂಡದ ನಾಯಕ, ಛಲದಂಕಮಲ್ಲ ಸ್ಟೋಕ್ಸ್ (72ಕ್ಕೆ5) ಎಂಟು ವರ್ಷದ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಪಂಚಗುಚ್ಛದ ಸಾಧನೆ ಮಾಡಿದರು. ಇದರಿಂದಾಗಿ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 358 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ಎರಡನೇ ದಿನದಾಟ ಮುಕ್ತಾಯಕ್ಕೆ 45.4 ಓವರ್ಗಳಲ್ಲಿ 2 ವಿಕೆಟ್ಗೆ 211 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಇನಿಂಗ್ಸ್ ಚುಕ್ತಕ್ಕೆ ಇನ್ನು 133 ರನ್ ದೂರವಿದೆ.

ಬೆನ್ ಡಕೆಟ್ (94;100ಎ) ಮತ್ತು ಜ್ಯಾಕ್ ಕ್ಯಾಲಿ (84;113) ಮೊದಲ ವಿಕೆಟ್ ಜೊತೆಯಾಟದಲ್ಲಿ 166 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಭಾರತದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಓವರ್ಗೆ ಐದು ರನ್ ಸರಾಸರಿಯಲ್ಲಿ ಬ್ಯಾಟ್ ಬೀಸಿತು.

ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ಅವರು 32ನೇ ಓವರ್ನಲ್ಲಿ ಕ್ರಾಲಿ ವಿಕೆಟ್ ಪಡೆದು ಜೊತೆಯಾಟ ಮುರಿದರು. ಅದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಡಕೆಟ್ ವಿಕೆಟ್ ಅನ್ಶುಲ್ ಕಂಭೋಜ್ ಪಾಲಾಯಿತು. ಇದು ಕಂಭೋಜ್ಗೆ ಪದಾರ್ಪಣೆ ಪಂದ್ಯವಾಗಿದೆ. ಓಲಿ ಪೋಪ್ (ಔಟಾಗದೇ 20) ಮತ್ತು ಜೋ ರೂಟ್ (ಔಟಾಗದೇ 11) ಮೂರನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಎರಡನೇ ದಿನದಾಟದ ಬೆಳಿಗ್ಗೆ ಮೋಡ ಕವಿದ ವಾತಾವರಣದಲ್ಲಿ ಹೊಸ ಚೆಂಡು ಪಡೆದ ಸ್ಟೋಕ್ಸ್ ಅವರು ವೋಕ್ಸ್ ಮತ್ತು ಆರ್ಚರ್ ಅವರನ್ನು ದಾಳಿಗಿಳಿಸಿದರು. ಆರ್ಚರ್ ಅಕ್ಷರಶಃ ಬೆಂಕಿಯುಂಡೆಯಂತಹ ಎಸೆತಗಳನ್ನು ಪ್ರಯೋಗಿಸಿದರು. ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ಅವರು ತಲಾ ಒಂದು ಬಾರಿ ಅಲ್ಪ ಅಂತರದಲ್ಲಿ ಔಟಾಗುವುದನ್ನು ತಪ್ಪಿಸಿಕೊಂಡರು.

ಆದರೆ ಛಲ ಬಿಡದ ಆರ್ಚರ್ ಎಸೆತದಲ್ಲಿ ಜಡೇಜ ಅವರ ಅಮೋಘ ಕ್ಯಾಚ್ ಪಡೆದ ಎರಡನೇ ಸ್ಲಿಪ್ ಫೀಲ್ಡರ್ ಹ್ಯಾರಿ ಬ್ರೂಕ್ ಸಂಭ್ರಮಿಸಿದರು.

ಠಾಕೂರ್ ಜೊತೆಗೂಡಿದ ವಾಷಿಂಗ್ಟನ್ ಸುಂದರ್ ಅವರಿಗೂ ಇಂಗ್ಲೆಂಡ್ ಬೌಲರ್ಗಳ ದಾಳಿಯ ಬಿಸಿ ತಟ್ಟಿತು. ಅವರಿಬ್ಬರೂ ಅಪಾರ ತಾಳ್ಮೆ ಮತ್ತು ಏಕಾಗ್ರತೆಯಿಂದ ಸಾಧಾರಣ ಎಸೆತಗಳಿಗೆ ಕಾದರು. ಅವುಗಳಿಂದ ರನ್ ಗಳಿಸಿದರು. ಕೆಲ ದೊಡ್ಡ ಹೊಡೆತಗಳನ್ನೂ ಪ್ರಯೋಗಿಸಿದರು. ಇದರಿಂದಾಗಿ ಇನಿಂಗ್ಸ್ನಲ್ಲಿ ಭರವಸೆ ಮೂಡಿತು.

ಈ ಜೊತೆಯಾಟವನ್ನು ಮುರಿಯುವ ಪ್ರಯತ್ನದಲ್ಲಿ ಬೌಲರ್ಗಳಿಗೆ ಹೆಚ್ಚು ಯಶಸ್ಸು ಸಿಗಲಿಲ್ಲ. ಆದರೆ ತಮ್ಮ ಕೈಗೆ ಚೆಂಡು ತೆಗೆದುಕೊಂಡ ಸ್ಟೋಕ್ಸ್ ಇದರಲ್ಲಿ ಯಶಸ್ವಿಯಾದರು. ಅವರು ಹಾಕಿದ ಹಾಫ್ ವಾಲಿ ಎಸೆತವನ್ನು ಠಾಕೂರ್ ಡ್ರೈವ್ ಮಾಡಿದರು. ಆದರೆ ಚೆಂಡಿನ ವೇಗವು ನಿರೀಕ್ಷೆಗಿಂತ ಹೆಚ್ಚಿತ್ತು. ಅದರಿಂದಾಗಿ ಚೆಂಡು ಗಾಳಿಯಲ್ಲಿ ತೇಲಿತು. ಗಲ್ಲಿಯಲ್ಲಿದ್ದ ಬೆನ್ ಡಕೆಟ್ ಡೈವ್ ಮಾಡಿ ಕ್ಯಾಚ್ ಪಡೆದರು.

ಠಾಕೂರ್ ನಿರ್ಗಮನಿಸುತ್ತಿದ್ದಂತೆ ಪಂತ್ ಪೆವಿಲಿಯನ್ ಮೆಟ್ಟಿಲುಗಳನ್ನು ಇಳಿದು ಬಂದರು. ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಅಚ್ಚರಿ, ಮೆಚ್ಚುಗೆಯ ಭಾವಗಳು ಎದ್ದುಕಂಡವು. ಆತಿಥೇಯ ತಂಡದ ಆಟಗಾರರು ಅರೆಕ್ಷಣ ಮೆಚ್ಚುಗೆ ನೋಟ ಸೂಸಿದರು. ಆದರೆ ತಮ್ಮ ಯೋಜನೆ ಬದಲಿಸಲಿಲ್ಲ.

ಸ್ಟೋಕ್ಸ್ ಹಾಕಿದ ಶಾರ್ಟ್ ಬಾಲ್ ನಲ್ಲಿ ಹುಕ್ ಮಾಡಿದ ವಾಷಿಂಗ್ಟನ್ ಡೀಪ್ ಫೈನ್ಲೆಗ್ನಲ್ಲಿದ್ದ ಕ್ರಿಸ್ ವೋಕ್ಸ್ಗೆ ಕ್ಯಾಚ್ ಆದರು. ಪದಾರ್ಪಣೆ ಆಟಗಾರ ಅನ್ಷುಲ್ ಕಂಬೋಜ್ ಅವರಿಗೆ ಖಾತೆ ತೆರೆಯಲು ಕೂಡ ಸ್ಟೋಕ್ಸ್ ಬಿಡಲಿಲ್ಲ. ಈ ನಡುವೆ ಪಂತ್ ಅವರ ಕಾಲುಗಳನ್ನೇ ಗುರಿಯಾಗಿಸಿಕೊಂಡ ಬೌಲರ್ಗಳು ಎಸೆತಗಳನ್ನು ಹಾಕಿದರು. ಅವುಗಳನ್ನು ದಿಟ್ಟವಾಗಿಯೇ ಎದುರಿಸಿದ ಪಂತ್, ಅವಕಾಶ ಸಿಕ್ಕಾಗ ರನ್ ಪಡೆದರು. ಬೌಂಡರಿ ಹೊಡೆದರು. ಆದರೆ ಆರ್ಚರ್ ಎಸೆತದಲ್ಲಿ ಆಫ್ಸ್ಟಂಪ್ ಕಳೆದುಕೊಂಡರು.

ಕುಂಟುತ್ತಲೇ ಕ್ರೀಸ್ಗೆ ಬಂದು ಅರ್ಧಶತಕ ದಾಖಲಿಸಿದ ಪಂತ್ ವೇಗಿ ಜೋಫ್ರಾ ಆರ್ಚರ್ಗೆ ಮೂರು ವಿಕೆಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.