ಶನಿವಾರ, ಜುಲೈ 2, 2022
25 °C

ಕಲಿಸುವ ಮನ ಚೊಕ್ಕವಿರಬೇಕು: ಹಿಜಾಬ್ ವಿವಾದದ ಕುರಿತು ಶಿಕ್ಷಕಿಯೊಬ್ಬರು ಬರೆದ ಲೇಖನ

. Updated:

ಅಕ್ಷರ ಗಾತ್ರ : | |

ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸಮಾಡುತ್ತಿರುವ ಶಿಕ್ಷಕಿ ನಾನು. ಈ ಬರಹ ಬರೆದದ್ದು ನಾನು ಎಂದು ಹೇಳಿಕೊಂಡರೆ ಕೆಲಸ ಕಳೆದುಕೊಳ್ಳುತ್ತೇನೆ; ಇಲ್ಲವೆ, ಸಲ್ಲದ ಕಿರುಕುಳಕ್ಕೆ ಒಳಗಾಗುತ್ತೇನೆ. ಮೂರುವರೆ ವರ್ಷದ ನನ್ನ ಮಗಳಿಗೋಸ್ಕರವಾಗಿಯಾದರೂ ನಾನು ನನ್ನ ಕೆಲಸ ಉಳಿಸಿಕೊಳ್ಳಬೇಕು. ಆದರೆ ಅನ್ಯಾಯದ ಎದುರು ನ್ಯಾಯವಾದ ಕೆಲವು ಮಾತನ್ನು ಅಡಗಿಯಾದರೂ ಹೇಳಬೇಕಿದೆ. ಹಾಗಾಗಿ ಹೆಸರು ಹೇಳಿಕೊಳ್ಳದೆ ಈ ಕೆಳಗಿನದ್ದನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ನನ್ನನ್ನು ಅನಾಮಿಕೆ ಎಂದು ಬೇಕಾದರೆ ಕರೆದುಕೊಳ್ಳಿ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ.

***

ಶಿಕ್ಷಕಿಯಾಗಿ ಕಂಡದ್ದು, ಇದು: ಎರಡು-ಮೂರು ತಿಂಗಳ ಹಿಂದಿನ ವಿಷಯ. ಹಿಜಾಬ್ ವಿವಾದ ಆಗಿನ್ನೂ ಶುರುವಾಗಿರಲಿಲ್ಲ. ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹೆಸರು ಮುಂತಾದ ಮಾಹಿತಿ, ಹಾಗೂ ಫೋಟೋಗಳನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಬೇಕಿತ್ತು. ಮಕ್ಕಳಿಗೆ ತಮ್ಮತಮ್ಮ ಪಾಸ್‍ಪೋರ್ಟ್ ಅಳತೆಯ ಫೋಟೋವನ್ನು ತರಲು ಹೇಳಿದ್ದೆವು. ಕೆಲವು ಮಕ್ಕಳ ಫೋಟೋಗಳನ್ನು ನೋಡಿದಾಗ, ಶಾಲೆಯ ಮುಖ್ಯಸ್ಥರು ‘ಹಿಜಾಬ್, ಅಥವಾ ಟೋಪಿ, ಹಾಕಿಕೊಂಡ ವಿದ್ಯಾರ್ಥಿಗಳ ಫೋಟೋಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ,’ ಎಂದರು. ಅದಕ್ಕೆ, ‘ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ’ ಎಂಬ ಕಾರಣವನ್ನು ಕೊಟ್ಟರು. ಹಾಗಾಗಿ, ಹಿಜಾಬ್ ಹಾಗೂ ಟೋಪಿ ಹಾಕಿಕೊಂಡ ಮುಸಲ್ಮಾನ ವಿದ್ಯಾರ್ಥಿ–ವಿದ್ಯಾರ್ಥಿನಿಯರು ತಲೆಯ ಮೇಲೆ ಏನನ್ನೂ ಹಾಕಿಕೊಳ್ಳದೇ ಫೋಟೋ ತಂದು ಕೊಟ್ಟು ಪರೀಕ್ಷೆ ಕಟ್ಟಿದರು. ಆದರೆ, ಅಸಲಿಗೆ, ಪರೀಕ್ಷಾ ಮಂಡಳಿಯಾಗಲೀ, ಶಾಲಾ ಶಿಕ್ಷಣದ ಇಲಾಖೆಯಾಗಲೀ ಶಾಲೆಯ ಮುಖ್ಯಸ್ಥರು ಆವತ್ತು ಹೇಳಿದಂಥ ಯಾವ ಕಾನೂನನ್ನೂ ಮಾಡಿಲ್ಲ.

ಜನವರಿ 26, ಗಣರಾಜ್ಯೋತ್ಸವದ ಆಚರಣೆಯ ದಿನ, ಹಿಂದಿನ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆಸಿ ಗೌರವಿಸಲಾಗುತ್ತದೆ.

ಆಗ, ಶಾಲೆಯ ಹಿರಿಯ ವಿದ್ಯಾರ್ಥಿಗಳು ದತ್ತಿ ಇತ್ತಿರುವ ಹಣವನ್ನು ಅವರಿಗೆ ಬಹುಮಾನವಾಗಿ ನೀಡಲಾಗುತ್ತದೆ. ಒಂದು ಬಾರಿ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಲ್ಲಿ ಮುಸಲ್ಮಾನ ಹುಡುಗಿಯೊಬ್ಬಳಿದ್ದಳು. ಅವಳು ಆವತ್ತು ಹಿಜಾಬ್ ತೊಟ್ಟಿದ್ದಳು. ಅವಳಿಗೆ ಬಹುಮಾನ ಕೊಡುವಾಗ, ಶಾಲೆಯ ಮುಖ್ಯಸ್ಥರು, ‘ಹಿಜಾಬ್ ತೆಗೆ’ ಎಂದರು. ಆದರೆ, ಆ ಹುಡುಗಿ ಅದನ್ನು ತೆಗೆಯಲು ಒಪ್ಪಲಿಲ್ಲ. ಮುಖ್ಯಸ್ಥರು, ‘ದತ್ತಿ ಇಟ್ಟವರಿಗೆ ದಾಖಲೆಗೆ ಫೋಟೋ ಕಳಿಸಬೇಕು. ನೀನು ಹಿಜಾಬ್ ತೆಗೆಯಲೇ ಬೇಕು’ ಎಂದು ಅವಳನ್ನು ಬಹಳವಾಗಿ ಒತ್ತಾಯಿಸಿದರು. ಅ ಹುಡುಗಿ ಹಿಜಾಬನ್ನಂತೂ ತೆಗೆಯಲಿಲ್ಲ. ಆ ಸಮಯದಲ್ಲಿ ಎಲ್ಲ ಶಿಕ್ಷಕರೂ ಸೇರಿ ‘ಹಿಜಾಬ್ ತೆಗೆ, ತೆಗೆ’ ಎಂದಾಗ, ಆ ಹುಡುಗಿ ಕಕ್ಕಾಬಿಕ್ಕಿಯಾಗಿ ನಿಂತುಬಿಟ್ಟಳು. ಅವಳ ಪರಿಸ್ಥಿತಿ ಕಂಡು ನನಗೆ ಬಹಳ ಬೇಸರವಾಯಿತು.

ಶಾಲೆ ಶುರುವಾದಾಗಿನಿಂದ ಪ್ರತಿದಿನ ಶಾಲೆಗೆ ಬರುತ್ತಿದ್ದ ಮುಸಲ್ಮಾನ ವಿದ್ಯಾರ್ಥಿಯೊಬ್ಬಳು ಒಂದು ತಿಂಗಳು ಶಾಲೆಗೆ ಬರಲಿಲ್ಲ. ಕುಟುಂಬದೊಳಗಿನ ಯಾವುದೋ ಸಮಸ್ಯೆಯಿಂದಾಗಿ ಅವಳ ಮನೆಯವರೆಲ್ಲ ಕೆಲವು ಕಾಲ ಬೇರೆ ರಾಜ್ಯಕ್ಕೆ ಹೋಗಿದ್ದರು. ಅವಳೂ ಅವರ ಜೊತೆ ಹೋಗಬೇಕಾಯಿತು. ಆದರೆ ನಮ್ಮ ಶಾಲೆಯಲ್ಲಿ ಅವಳ ಹಾಜರಾತಿ ಅವಳು ಪರೀಕ್ಷೆ ಬರೆಯುವುದಕ್ಕೆ ಎಷ್ಟು ಬೇಕೋ ಅಷ್ಟಂತೂ ಇತ್ತು. ಆದರೂ ಅವಳಿಗೆ ಪ್ರವೇಶಪತ್ರವನ್ನು ಕೊಡಬಾರದು ಎಂದು ಶಾಲೆಯ ಮುಖ್ಯಸ್ಥರು ಅನ್ಯಾಯಮಾಡಲು ಹೊರಟರು. ಅವರ ತೀರ್ಮಾನ ಶಾಲೆಯ ಶಿಕ್ಷಕರ ನಡುವೆ ಜೋರು ಚರ್ಚೆಗೆ ಒಳಗಾಯಿತು. ಕೆಲವು ನ್ಯಾಯಯುತ ಶಿಕ್ಷಕರು ಅವಳ ಪರವಾಗಿ ನಿಂತದ್ದರಿಂದ ಅವಳಿಗೆ ಅನ್ಯಾಯಮಾಡಲು ಮುಖ್ಯಸ್ಥರಿಗೆ ಸಾಧ್ಯವಾಗಲಿಲ್ಲ, ಅವಳಿಗೆ ಪರೀಕ್ಷೆ ಬರೆಯಲು ಅನುಮತಿ ಸಿಕ್ಕಿತು.

ಮೇಲೆ ಕಥಿಸಿರುವ ಪ್ರಸಂಗಗಳು ಏನನ್ನು ಹೇಳುತ್ತವೆ? ಈವತ್ತು ಹಲವು ಶಾಲೆಗಳಲ್ಲಿ ಮುಸಲ್ಮಾನರ ಮೇಲೆ ಇಲ್ಲಸಲ್ಲದ ಅಸಹನೆ ಇದೆ ಎನ್ನುವುದನ್ನು ಅವು ಎತ್ತಿ ತೋರುತ್ತವೆ. ಆ ಅಸಹನೆಯಿಂದ ಮುಸಲ್ಮಾನ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು ಯಾರ ಅಂಕೆಯೂ ಇಲ್ಲದಿರುವುದರಿಂದ, ಆ ಶಾಲೆಗಳಲ್ಲಿ ಅಧಿಕಾರಸ್ಥರು ಆ ವಿದ್ಯಾರ್ಥಿಗಳನ್ನು ತಮ್ಮ ಶಕ್ತ್ಯಾನುಸಾರ ಹಿಂಸಿಸುತ್ತಿದ್ದಾರೆ. ಆದರೆ ಅವರ ಆ ತಣ್ಣನೆಯ ಕ್ರೌರ್ಯ ಎಲ್ಲೂ ದಾಖಲಾಗುವುದೇ ಇಲ್ಲ.

ಅಂಥವರ ಹಲವು ವರ್ಷಗಳ ಅಸಹನೆ ರಾಜಾರೋಷವಾಗಿ ಹೊರಗೆ ಬರುವುದಕ್ಕೆ ಈವತ್ತಿನ ಹಿಜಾಬ್ ವಿವಾದ ಒಂದು ವೇದಿಕೆಯನ್ನು ನೀಡಿದೆ. ಈವತ್ತು ಶಾಲಾ ಕಾಲೇಜಿನ ಸ್ಟಾಫ್ ರೂಂ, ಬಸ್, ರೈಲು, ಸಂತೆ ಎಲ್ಲಾ ಕಡೆಯಲ್ಲೂ ಸಮವಸ್ತ್ರ ಹಾಕಿಕೊಂಡು ಬರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಕೊರೋನಾ ತಾಂಡವವಾಗುತ್ತಿದ್ದಾಗಲೂ ಪರೀಕ್ಷೆ ನಡೆಸಿದ ಸರ್ಕಾರವು ಹಿಜಾಬ್ ವಿವಾದದ ಸುಳಿವೇ ಇರದ ಕಡೆಗಳಲ್ಲೂ ಎರಡು ದಿನ ರಜೆ ನೀಡಿ ಎಲ್ಲರ ಗಮನವನ್ನೂ ಹಿಜಾಬ್‍ ಕಡೆಗೆ ಸೆಳೆಯುವಲ್ಲಿ ಯಶಸ್ವಿಯೂ ಆಯಿತು.

***

ವಿದ್ಯಾರ್ಥಿನಿಯಾಗಿ ಉಂಡದ್ದು, ಇದು:
ನಾವು ಶಾಲೆಯಲ್ಲಿ ಓದುವಾಗ ಮುಸಲ್ಮಾನ ಗೆಳತಿಯರು ರಂಝಾನ್ ಸಮಯದಲ್ಲಿ ಉಪವಾಸ ಮಾಡುತ್ತಿದ್ದರು. ನಾವೆಲ್ಲಾ ಊಟಕ್ಕೆ ಹೋದಾಗ ಅವರು ತರಗತಿಯಲ್ಲಿ ನಮಾಜ್ ಮಾಡುತ್ತಿದ್ದರು. ಅದರಿಂದ ಯಾರಿಗೂ ತೊಂದರೆಯಾಗಲಿಲ್ಲ.

ನಾನು ಓದಿದ ಮಹಿಳಾ ಕಾಲೇಜೊಂದರಲ್ಲಿ. ಆದರೂ ಅಲ್ಲೊಂದು ‘ಲೇಡೀಸ್ ರೂಂ’ ಇತ್ತು. ಅಲ್ಲಿ ನಮ್ಮ ಮುಸಲ್ಮಾನ ಸಹಪಾಠಿಗಳು ಬುರ್ಖಾವನ್ನು ತೆಗೆದಿಟ್ಟು ತರಗತಿಗೆ ಬರುತ್ತಿದ್ದರು.

ನನ್ನ ಮುಸಲ್ಮಾನ ಗೆಳತಿಯೊಬ್ಬಳು ನೋಡಲು ಬಹಳ ಸುಂದರವಾಗಿದ್ದಳು. ನೃತ್ಯ ಮಾಡುವುದನ್ನು ಬಹಳ ಇಷ್ಟಪಡುತ್ತಿದ್ದಳು ಅವಳು. ಆದರೆ ಅವರ ಮನೆಯಲ್ಲಿ ಅವಳು ಅದನ್ನೆಲ್ಲ ಮಾಡಗೊಡುವಷ್ಟು ಸ್ವಾತಂತ್ರ್ಯ ಇರಲಿಲ್ಲ. ಆ ಬಗ್ಗೆ ಅವಳಿಗೂ ಬೇಸರ ಇತ್ತು. ಆಗ ನಮಗೂ ಅವರ ಕಟ್ಟುಪಾಡುಗಳ ಬಗ್ಗೆ ತುಂಬ ಬೇಸರವಾಗುತ್ತಿತ್ತು; ಈಗಲೂ ಆಗುತ್ತದೆ.

***

ಇದೀಗ, ಕಂಡುಂಡು ಹೇಳುವುದು, ಇದು:
ನಾನು ಚಿಕ್ಕವಳಿದ್ದಾಗ ಮುಸಲ್ಮಾನರ ಮದುವೆಯೊಂದಕ್ಕೆ ಹೋದ ನೆನಪಿದೆ. ಆಗ ವಧುವು ಮದುವೆಯ ಕಾರ್ಯ ಆಗಿ ಮುಗಿಯುವವರೆಗೆ ಕಣ್ಣು ಮುಚ್ಚಿಕೊಂಡೇ ಕುಳಿತಿದ್ದನ್ನು ನೋಡಿದೆ. ಈಗಿನ ಮದುವೆಗಳಲ್ಲಿ ಅಂಥದೆಲ್ಲ ಕಡಿಮೆಯಾಗಿದೆ.

ನಿಖಾ ಆಗುವತನಕ ಮದುಮಕ್ಕಳು ಒಬ್ಬರ ಪಕ್ಕ ಒಬ್ಬರು ನಿಲ್ಲಲೂ ಬಿಡದ ಕರ್ಮಠ ಸಂಪ್ರದಾಯಸ್ಥರೂ ಇದ್ದಾರೆ; ‘ಪ್ರೀ ವೆಡ್ಡಿಂಗ್’ ಫೋಟೋ ಶೂಟ್ ಮಾಡಿಸಿಕೊಳ್ಳುವ ಮದುಮಕ್ಕಳೂ ಇದ್ದಾರೆ.

ತಮ್ಮ ಹೆಣ್ಣು ಮಕ್ಕಳು ಪಾಶ್ಚಾತ್ಯ ದಿರಿಸು ಉಡದಂತೆ ತಾಕೀತು ಮಾಡುವ ಪೋಷಕರಿರುವ ಹಾಗೆಯೆ, ಅವರು ತಮಗೆ ಬೇಕಾದ ಬಟ್ಟೆ ಹಾಕಿಕೊಳ್ಳಲು ಬಿಡುವವರೂ ಮುಸಲ್ಮಾನರಲ್ಲಿ ಇದ್ದಾರೆ.

ಒಟ್ಟಿನಲ್ಲಿ, ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಮುಸಲ್ಮಾನರಲ್ಲೂ ಬದಲಾವಣೆ ಆಗುತ್ತಿದೆ. ಮುಸಲ್ಮಾನರ ಈ ಹಿಜಾಬ್ ಮತ್ತು ಬುರ್ಖಾವನ್ನು ಇಷ್ಟೇ ಸರಳವಾಗಿ ನೋಡಬೇಕು. ಉಡುವ, ತೊಡುವ ಬಟ್ಟೆಯನ್ನು ಧರ್ಮಕ್ಕೆ ಗಂಟು ಹಾಕಿದರೆ ಈಗ ಇರುವ ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ಆದರೆ ಇದರ ಕೆಟ್ಟ ಪರಿಣಾಮವನ್ನು ಹೆಚ್ಚಾಗಿ ಅನುಭವಿಸುವವರು ಹೆಣ್ಣುಮಕ್ಕಳಲ್ಲದೆ ಗಂಡು ಮಕ್ಕಳಲ್ಲ.

ಈಗ ಹೆಚ್ಚಿನ ಜನರು ‘ಹಿಜಾಬ್ ಹಾಕಿಕೊಳ್ಳಬೇಕೇ ಬೇಡವೇ’ ಎಂಬ ಪ್ರಶ್ನೆಯನ್ನು ಚರ್ಚಿಸುತ್ತಿದ್ದಾರೆ. ಅದಕ್ಕೆ ಉತ್ತರ ನೀಡಬೇಕಾದವರು, ಆ ವಿಷಯದಲ್ಲಿ ನಿರ್ಧಾರ ಮಾಡಬೇಕಾದವರು ಮುಸಲ್ಮಾನ ಹೆಣ್ಣುಮಕ್ಕಳು ಮಾತ್ರ. ಅವರಿಗೆ ಹಿಜಾಬ್ ಹಾಕಿಕೊಳ್ಳುವುದು ಬೇಡ ಎನಿಸಿದರೆ ‘ಹಾಕಿಕೊಳ್ಳಿ’ ಎಂದು ಹೇಳುವುದೂ ತಪ್ಪು; ಅವರನ್ನು ಬೀದಿಯಲ್ಲಿ ನಿಲ್ಲಿಸಿ ಅದನ್ನು ತೆಗೆಸುವುದೂ ತಪ್ಪು.

ಇಂದಿಗೂ ನಮ್ಮ ಶಾಲೆಯ ಪ್ರಾರ್ಥನೆಯಲ್ಲಿ ರಾಷ್ಟ್ರಗೀತೆ, ನಾಡಗೀತೆಯ ಜತೆ ಎಲ್ಲಾ ಧರ್ಮದವರೂ ‘ಗುರುಬ್ರಹ್ಮ ….’ ಶ್ಲೋಕವನ್ನು ಹೇಳುತ್ತಾರೆ. ಊಟದ ಸಮಯದಲ್ಲಿ ‘ಸಹನಾವವತು…’ ಹೇಳುತ್ತಾರೆ. ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವವರು, ಶಾಲೆಗೆ ಬಂದಮೇಲೆ ಅದನ್ನು ತೆಗೆದಿಟ್ಟು ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಇಲ್ಲದ ಸಮಸ್ಯೆಯನ್ನು ಮುನ್ನಲೆಗೆ ತಂದು ಮನೆಮನೆಗಳಲ್ಲೂ ಇದರ ಬಗ್ಗೆ ಚರ್ಚೆ ಆಗುವಂತೆ ಮಾಡುತ್ತಿರುವುದು ವ್ಯವಸ್ಥಿತವಾದ ಕೆಟ್ಟ ರಾಜಕೀಯವೇ ಸರಿ. ಆದರೆ, ಈ ವಿವಾದದಲ್ಲಿ ತುಂಬ ಬವಣೆ ಪಡುವವರು ಮಾತ್ರ ಹೆಣ್ಣುಮಕ್ಕಳೇ.

–ಅನಾಮಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು