ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆತ್ಮನಿರ್ಭರತೆಯಿಂದ ಪರಮಾತ್ಮ ನಿರ್ಭರತೆಯೆಡೆಗೆ...

ಮುಂದೆ ಬರಬಹುದಾದ ಅಲೆಯನ್ನು ಎದುರಿಸಲು ನಾವೆಷ್ಟು ಸಿದ್ಧರಾಗಿದ್ದೇವೆ ಎಂಬ ಬಗ್ಗೆ ಅವಲೋಕನ ನಡೆಸಬೇಕು
Last Updated 19 ಮೇ 2021, 19:30 IST
ಅಕ್ಷರ ಗಾತ್ರ

ಕೋವಿಡ್–19 ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸದೆ ಇದ್ದುದು ನಮ್ಮ ಸಮಾಜದ ಚೌಕಟ್ಟನ್ನೇ ಚೂರಾಗಿಸಿದೆ ಎಂಬುದು, ಕಳೆದ ಒಂದೂಕಾಲು ವರ್ಷದಲ್ಲಿ ಆಗಿಹೋಗಿರುವುದನ್ನು ಗಮನಿಸಿದರೆ ಗೊತ್ತಾಗುತ್ತದೆ. ಸಾಂಕ್ರಾಮಿಕ ಕಾಲಿರಿಸಿದ ಹದಿನಾಲ್ಕು ತಿಂಗಳುಗಳ ನಂತರದಲ್ಲಿ ನಾವು ಆಸ್ಪತ್ರೆಗಳಲ್ಲಿ ಹಾಸಿಗೆಗೆ, ಆಮ್ಲಜನಕಕ್ಕೆ, ಔಷಧಗಳಿಗೆ ಹಾಗೂ ವೆಂಟಿಲೇಟರ್‌ಗಳಿಗೆ ಒದ್ದಾಟ ನಡೆಸುತ್ತಿದ್ದೇವೆ. ಇಷ್ಟೇ ಅಲ್ಲ. ಸಾವುಗಳಿಗೆ ಲೆಕ್ಕ ಇಲ್ಲ, ಸತ್ತವರ ಸಾಮೂಹಿಕ ಅಂತ್ಯಸಂಸ್ಕಾರಗಳು ನಡೆಯುತ್ತಿವೆ, ಭರವಸೆಗಳು ಬತ್ತಿವೆ. ವಿಶ್ವದ ಎಲ್ಲ ಕಡೆಗಳಿಂದಲೂ ನಮ್ಮತ್ತ ಸಹಾಯ ಹರಿದುಬರುತ್ತಿದ್ದರೂ ಪ್ರೀತಿಪಾತ್ರರನ್ನು ಕಳೆದುಕೊಂಡಿರು
ವವರು ಹತ್ತಿರದ ಇನ್ನಷ್ಟು ಜನರನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಪರಿಸ್ಥಿತಿ ಇದಕ್ಕಿಂತ ಕೆಟ್ಟದ್ದಾಗಲು ಸಾಧ್ಯವಿದೆಯೇ? ‘ಆತ್ಮನಿರ್ಭರ’ ಎಂಬ ಘೋಷಣೆಯು ಈಗ ‘ಪರಮಾತ್ಮನಿರ್ಭರ’ ಆಗಿದೆ (ದೇವರನ್ನು ನೆಚ್ಚಿ ಕುಳಿತಿರುವ ಸ್ಥಿತಿ).

ಲಾಕ್‌ಡೌನ್‌ ಜೊತೆಯಲ್ಲೇ ವಲಸೆ ಕಾರ್ಮಿಕರ ಬಿಕ್ಕಟ್ಟು ಎದುರಾಯಿತು. ನಗರಗಳನ್ನು ತೊರೆದ ಕಾರ್ಮಿಕರು ತಮ್ಮ ಹಳ್ಳಿ ತಲುಪಲು ನೂರಾರು ಕಿಲೊಮೀಟರ್‌ ಕಾಲ್ನಡಿಗೆಯಲ್ಲಿ ಸಾಗಿದರು. ವೈದ್ಯಕೀಯ ಸೌಲಭ್ಯ ಇಲ್ಲದಿದ್ದ ಕಾರಣ ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ಕಾರ್ಮಿಕರಿಗೆ ರೈಲು ಸೌಲಭ್ಯವೂ ಇರಲಿಲ್ಲ. ನಂತರದಲ್ಲಿ ರೈಲು ಸೌಲಭ್ಯ ಒದಗಿಸಲಾಯಿತಾದರೂ, ಕಾರ್ಮಿಕರ ಕೈಯಲ್ಲಿ ಅಳಿದುಳಿದಿದ್ದ ಹಣವೂ ಆ ಸೌಲಭ್ಯ ಪಡೆಯಲು ಖರ್ಚಾಯಿತು. ಟಿಕೆಟ್ ಖರೀದಿಸುವುದು ಕಡ್ಡಾಯ ಎಂದು ಹೇಳಲಾಯಿತು. ನಂತರದಲ್ಲಿ, ರೈಲ್ವೆ ಸಚಿವರು ಹಾಗೂ ರಾಜ್ಯ ಸರ್ಕಾರಗಳ ನಡುವೆ ಆರೋಪ–ಪ್ರತ್ಯಾರೋಪ ಶುರುವಾಯಿತು. ಕಾರ್ಮಿಕರಿಗಾಗಿನ ರೈಲು ಸೌಲಭ್ಯವನ್ನು ತಡವಾಗಿ ಆರಂಭಿಸಿದ್ದು, ಕುಂಭಮೇಳಕ್ಕೆ ಹೋಗುವವರಿಗೆ ಈ ಸೌಲಭ್ಯ ಸುಲಭವಾಗಿ ಸಿಗುವಂತೆ ಮಾಡಿದ್ದನ್ನು ನಾವು ಸುಲಭವಾಗಿ ಮರೆಯಲಾಗದು.

ಬಹುಶಃ ಹಿಂದುತ್ವದ ಅಜೆಂಡಾಕ್ಕೆ ಪೂರಕವಾಗಿ, ಕೋಟ್ಯಂತರ ಜನರ ಭಾಗವಹಿಸುವಿಕೆಯಲ್ಲಿ, ಒಂದು ವರ್ಷ ಮೊದಲೇ ಆಯೋಜನೆಯಾದ ಕುಂಭಮೇಳವು ಬಹುದೊಡ್ಡ ಲೋಪವಾಗಿ ಪರಿಣಮಿಸಿತು. ಕಳೆದ ವರ್ಷ ನಡೆದ ತಬ್ಲಿಗ್‌ ಜಮಾತ್ ಕಾರ್ಯಕ್ರಮವು ಕೊರೊನಾ ಸೋಂಕು ಹರಡುವಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಹಲವರು ಹೇಳಿದ್ದರು. ಆದರೆ, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆಯು ಕುಂಭಮೇಳದಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆಗೆ ಹೋಲಿಸಿದರೆ ಸಣ್ಣದು. ಇದು, ‘ಸಮತೋಲನದಿಂದ ಕೂಡಿದ್ದು’ ಎಂದು ನಾವು ನಂಬಬೇಕಿರುವ ಸಮಾಜವೇ? ಇದೇ ವೇಳೆ, ರಂಜಾನ್‌ ಅವಧಿಯಲ್ಲಿ ಮಸೀದಿಗಳಲ್ಲಿ ಇಫ್ತಾರ್‌ಗೆ 50ಕ್ಕಿಂತ ಹೆಚ್ಚು ಜನರನ್ನು ಸೇರಿಸಲು ವಿರೋಧವಿದ್ದಾಗಲೇ, ಸಹಸ್ರಾರು ಜನ ಪಾಲ್ಗೊಳ್ಳುವ ಅಮರನಾಥ ಯಾತ್ರೆಯನ್ನು ಆಯೋಜಿಸುವ ಬಗ್ಗೆ ಸರ್ಕಾರ ಆಲೋಚಿಸಿತು.

ಇದರ ಜೊತೆಯಲ್ಲೇ, ಪಶ್ಚಿಮ ಬಂಗಾಳಕ್ಕಾಗಿ ಬಿಜೆಪಿ ರೂಪಿಸಿದ ‘ಮಿಷನ್ 200’, ಸಾಂಕ್ರಾಮಿಕವನ್ನು ತಡೆಯುವುದಕ್ಕಿಂತ ದೊಡ್ಡ ಗುರಿಯಾಯಿತು. ಈ ನಡುವೆ ಅಹಂಕಾರ, ವಾಗ್ಯುದ್ಧ ಮತ್ತು ಇತರ ಕೆಲವು ಸಂಗತಿಗಳೂ ಇದ್ದವು. ರಾಜಕೀಯದ ಘಟಾನುಘಟಿಗಳ ಶಕ್ತಿಯೆಲ್ಲ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ವ್ಯಯವಾಯಿತು. ಅದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಇದಕ್ಕೆ ಒಂದು ಕಾರಣ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಎಡವಿದ್ದು.

ಮುಂದಿನ ವರ್ಷ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಆಗ ಜನ ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆಗೆ ಪಡಿಪಾಟಲು ಅನುಭವಿಸಬಹುದು, ಮೃತಪಟ್ಟವರಿಗೆ ಘನತೆಯ ಅಂತ್ಯಸಂಸ್ಕಾರವೂ ಸಿಗದಿರಬಹುದು. ಆದರೆ ಆವಾಗ ಗುರಿ ‘ಮಿಷನ್ 300’ ಆಗಿರುತ್ತದೆ.

ಇನ್ನೂ ಕೆಲವು ಭಾರಿ ತಪ್ಪುಗಳು ಆಗಿವೆ. ಕೋವಿಡ್ ಲಸಿಕೆ ಕಾರ್ಯಕ್ರಮವೇ ಆಡಳಿತ ಕುಸಿದುಬಿದ್ದಿರುವ ಒಂದು ಕಥೆ. ಪರಿಸ್ಥಿತಿ ಬದಲಾಗಬೇಕು ಎಂದಾದರೆ ಲಸಿಕೆ ನೀಡಬೇಕು ಎಂಬುದನ್ನು ಜಗತ್ತಿನಾದ್ಯಂತ ಜನ ಅರ್ಥ ಮಾಡಿಕೊಂಡಿದ್ದಾರೆ. ಬೇರೆ ದೇಶಗಳು ದೊಡ್ಡ ಪ್ರಮಾಣದಲ್ಲಿ ಲಸಿಕೆ ಖರೀದಿಸುತ್ತಿದ್ದಾಗ ಭಾರತವು ನೋಡುತ್ತಿತ್ತು, ಆಲೋಚಿಸುತ್ತಿತ್ತು, ಚರ್ಚಿಸುತ್ತಿತ್ತು. ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದಕರು ನಾವು ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಇದ್ದ ಸಂದರ್ಭದಲ್ಲಿಯೇ ನಾವು ಸ್ಪರ್ಧೆಯಲ್ಲಿ ಹಿಂದುಳಿದಿದ್ದೆವು. ಈಗ ನಾವು ಭಾರತಕ್ಕೆ ಲಸಿಕೆ ಕಳುಹಿಸಿ ಎಂದು ವಿದೇಶಿ ತಯಾರಕರಲ್ಲಿ ಬೇಡುತ್ತಿದ್ದೇವೆ. ಇಲ್ಲಿ ಬೇಕಿದ್ದುದು ಅತ್ಯಂತ ಮೂಲಭೂತವಾದ, ಸಂಕೀರ್ಣವಲ್ಲದ ಲೆಕ್ಕಾಚಾರ ಮಾತ್ರ – ನೂರು ಕೋಟಿಗಿಂತ ಹೆಚ್ಚಿನ ಜನರಿಗೆ ಲಸಿಕೆ ನೀಡಬೇಕು ಎಂಬುದು ನಮಗೆ ಗೊತ್ತಿತ್ತು. ಹೀಗಿದ್ದರೂ ನಾವು ಕೆಲಸವನ್ನು ಸರಿಯಾಗಿ ಮಾಡಲಿಲ್ಲ.

ಲಸಿಕೆಯ ಕೊರತೆ ತೀವ್ರವಾಗಲಿದೆ ಎಂಬುದು ಗೊತ್ತಾದ ನಂತರ ಸರ್ಕಾರವು ಎರಡನೆಯ ಡೋಸ್ ಹಾಕಿಸುವುದನ್ನು ಮುಂದೂಡಿತು. ಈ ನಡುವೆ, 18 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಲಸಿಕೆ ನೀಡುವುದಾಗಿ ಘೋಷಿಸಲಾಯಿತು. ಎಲ್ಲರಿಗೂ ಲಸಿಕೆ ನೀಡುವುದು ಈಗಲೂ ಮರೀಚಿಕೆಯಾಗಿಯೇ ಉಳಿದಿದೆ. ಲಸಿಕೆಯ ಕೊರತೆ ಇಲ್ಲ ಎಂದು ಆರೋಗ್ಯ ಸಚಿವರು ಈಚೆಗೆ ಹೇಳಿದ್ದರು. ಆದರೆ, ಲಸಿಕೆ ಹಾಕಿಸಿಕೊಳ್ಳಲು ಕೋವಿನ್‌ ವೆಬ್‌ಸೈಟ್‌ ಸಮಯ ನಿಗದಿ ಮಾಡಿಕೊಡುತ್ತಿಲ್ಲ. ಹಾಗಾಗಿ, ಸಚಿವರ ಹೇಳಿಕೆಯಲ್ಲಿ ಸತ್ಯವಿಲ್ಲ. ಲಸಿಕೆಯ ಕೊರತೆಯಿದೆ ಎಂದು ಹಲವು ರಾಜ್ಯಗಳು ಕೇಂದ್ರದ ಬಳಿ ಹೇಳಿವೆ. ಆದರೆ ಪ್ರಯೋಜನವಾಗಿಲ್ಲ. ಮೊದಲ ಡೋಸ್ ಹಾಕಿಸಿಕೊಂಡವರಿಗೆ ಎರಡನೆಯ ಡೋಸ್ ನಿಗದಿತ ಅವಧಿಯಲ್ಲಿ ಬೇಕು. ಇನ್ನುಳಿದವರು ತಮಗೆ ಲಸಿಕೆ ಸಿಗುವವರೆಗೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾರೆ.

ಸೆಂಟ್ರಲ್ ವಿಸ್ತಾ ಯೋಜನೆಗೆ ಮಾಡುತ್ತಿರುವ ವೆಚ್ಚದ ಎರಡು ಪಟ್ಟು ಹೆಚ್ಚು ವೆಚ್ಚವನ್ನು ಆರೋಗ್ಯ ಕ್ಷೇತ್ರಕ್ಕಾಗಿ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವರು ಟ್ವೀಟ್ ಮಾಡಿದ್ದಾರೆ. ಅವರ ಮಾತು ನಂಬುವುದಾಗಿದ್ದರೆ, ಆಮ್ಲಜನಕ ಹಾಗೂ ವೆಂಟಿಲೇಟರ್ ಕೊರತೆಯಿಂದ ಜನ ಸಾಯುವ ಪರಿಸ್ಥಿತಿ ಇರುತ್ತಿರಲಿಲ್ಲ. ರೋಗಿಗಳು ಮರದ ಕೆಳಗಡೆ, ಆಂಬುಲೆನ್ಸ್‌ನಲ್ಲಿ ಸಾಯುತ್ತಿರಲಿಲ್ಲ. ಇದಕ್ಕೆ ಯಾರು ಜವಾಬ್ದಾರಿ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಎರಡನೆಯ ಹಾಗೂ ಮೂರನೆಯ ಹಂತದ ನಗರಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಬಗ್ಗೆ 2018ರಲ್ಲಿ ಆರಂಭಿಸಲಾದ ‘ಆಯುಷ್ಮಾನ್ ಭಾರತ’ ಯೋಜನೆಯಲ್ಲಿ ಉಲ್ಲೇಖವಿತ್ತು. ವಾಸ್ತವದಲ್ಲಿ ಎಷ್ಟು ಆಸ್ಪತ್ರೆಗಳು ನಿರ್ಮಾಣ ಆಗಿವೆ ಎಂಬುದನ್ನು ಯಾರಾದರೂ ತಿಳಿಸಬೇಕು. ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಮಹಾನಗರಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ ಎಂದಾದರೆ, ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳ ಬಗ್ಗೆ ಆಲೋಚಿಸಿದಾಗ ನಡುಕ ಹುಟ್ಟುತ್ತದೆ. ರಾಷ್ಟ್ರೀಯ ವೈದ್ಯಕೀಯ ತುರ್ತುಸ್ಥಿತಿಯನ್ನು ಘೋಷಿಸಬೇಕಿರುವ ಈ ಮಹಾನ್ ದುರಂತದ ಸಂದರ್ಭದಲ್ಲಿ, ಆಲಿಸಲಿಕ್ಕಾದರೂ ಯಾರಾದರೂ ಇದ್ದಾರೆಯೇ?

ಸಾಂಕ್ರಾಮಿಕದ ಈ ಪರಿಯ ಪರಿಣಾಮವನ್ನು ಊಹಿಸಿರಲಿಲ್ಲ ಎಂದು ಭಾವಿಸಿದರೂ, ತಪ್ಪು ಆಗಿದ್ದೆಲ್ಲಿ ಎಂಬುದನ್ನು ವಿವರಿಸುವ ಹಾಗೂ ನಷ್ಟಕ್ಕೆ ಹೊಣೆ ಹೊತ್ತುಕೊಳ್ಳುವ ಕರ್ತವ್ಯವನ್ನು ಪ್ರಧಾನಿಯವರು ನಿಭಾಯಿಸಬೇಕಲ್ಲವೇ? ನಾವೆಲ್ಲರೂ ಅವರ ಜೊತೆ ಸೇರಿ ಚಪ್ಪಾಳೆ ಹೊಡೆದೆವು, ದೀಪ ಆರಿಸಿ ಎಂದು ಅವರು ಹೇಳಿದಾಗ ಅದನ್ನು ಮಾಡಿದೆವು, ಆದರೆ ಕೇಳದಿದ್ದಾಗಲೂ ಮಾಡಬೇಕಿರುವುದನ್ನು ಅವರು ಮಾಡಿದರೇ? ಉತ್ತರ ಸಿಗುವ ಬದಲು ನಮಗೆ ‘ಯಾವ ತಪ್ಪೂ ಆಗಿಲ್ಲ’ ಎಂಬ ಪತ್ರಿಕಾ ಹೇಳಿಕೆಗಳು ಬಿಜೆಪಿ ಕಡೆಯಿಂದ ಸಿಗುತ್ತಿವೆ. ಕೋವಿಡ್‌ನ ಮೂರನೆಯ ಅಲೆ ಬರುವುದು ಖಚಿತ ಎಂದು ಸರ್ಕಾರದ ವೈಜ್ಞಾನಿಕ ಸಲಹೆಗಾರರು ಹೇಳಿದರು. ಮಾರನೆಯ ದಿನವೇ ಆ ಮಾತು ಹಿಂಪಡೆದರು. ಮೂರನೆಯ ಅಲೆಯನ್ನು ತಡೆಯಬಹುದು ಎಂದರು.

ಹೇಳಿಕೆ ನೀಡುವುದು ಹಾಗೂ ಅದನ್ನು ಹಿಂದಕ್ಕೆ ಪಡೆಯುವುದು ನಿಲ್ಲಬೇಕು. ಮುಂದೆ ಬರಬಹುದು ಎನ್ನಲಾಗಿರುವ ಅಲೆಯನ್ನು ಎದುರಿಸಲು ನಾವೆಷ್ಟು ಸಿದ್ಧರಾಗಿದ್ದೇವೆ ಎಂಬ ಬಗ್ಗೆ ಅವಲೋಕನ ನಡೆಸಬೇಕು. ನನ್ನ ತಂದೆ ಕುಲದೀಪ್ ನಯ್ಯರ್ ಅವರು ದೇಶವಿಭಜನೆಯ ಸಂದರ್ಭದಲ್ಲಿ ವಾಘಾ ಗಡಿ ದಾಟಿ ಬಂದವರು. ಈಗ ಅವರು ನಾವೇ ತಂದಿಟ್ಟುಕೊಂಡ ಸ್ಥಿತಿಯನ್ನು ಸ್ವರ್ಗದಿಂದಲೇ ಒದ್ದೆ ಕಣ್ಣಿನಿಂದ ನೋಡುತ್ತಿರುತ್ತಾರೆ.

ವಿಶ್ಲೇಷಣೆ: ಆತ್ಮನಿರ್ಭರತೆಯಿಂದ ಪರಮಾತ್ಮ ನಿರ್ಭರತೆಯೆಡೆಗೆ...

ಲೇಖಕ: ದೆಹಲಿ ಹೈಕೋರ್ಟ್‌ನ ಹಿರಿಯ ವಕೀಲ

(ಈ ಲೇಖನವು ಮೊದಲು ಎನ್‌ಡಿಟಿವಿ.ಕಾಂನಲ್ಲಿ ಪ್ರಕಟವಾಗಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT