ಬುಧವಾರ, ಆಗಸ್ಟ್ 17, 2022
25 °C
ಅರಬ್ಬಿ ಸಮುದ್ರಕ್ಕಿಂತ ಇಲ್ಲೇ ಏಕೆ ಹೆಚ್ಚು ಚಂಡಮಾರುತಗಳು ಏಳುತ್ತವೆ?

ಚಂಡಮಾರುತದ ಶಕ್ತಿಕೇಂದ್ರ ಬಂಗಾಳಕೊಲ್ಲಿ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಚಂಡಮಾರುತಗಳಿಗೂ ಹೊರಗಿನ ಶತ್ರುಗಳ ಆಕ್ರಮಣಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಪೂರ್ವಸಿದ್ಧತೆ ಇಲ್ಲದಿದ್ದರೆ ಎರಡೂ ಆತಂಕಕಾರಿಯೇ. ಶತ್ರುಗಳನ್ನು ಎದುರಿಸಬಹುದು, ಆದರೆ ಚಂಡಮಾರುತಗಳಿಂದ ಬಚಾವಾಗುವುದೇ ಜಾಣತನ.

ಒಂದು ಅನುಕೂಲವೆಂದರೆ, ಚಂಡಮಾರುತದ ನಡೆ ತಂತ್ರಜ್ಞಾನದ ಕಣ್ಣು ತಪ್ಪಿಸುವುದಿಲ್ಲ. ಈಗಿನ ‘ನಿವಾರ್’ ಚಂಡಮಾರುತದ ಕಥೆಯೂ ಇದೇ. ನವೆಂಬರ್ 22ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹುಟ್ಟಿ, ಮರುದಿನವೇ ಶಕ್ತಿಕೇಂದ್ರವಾಗಿ ಬೆಳೆದು, 24ರ ಹೊತ್ತಿಗೆ ಚಂಡಮಾರುತ ಎಂಬ ಬಿರುದು ಹೊತ್ತು ತನ್ನ ತಾಕತ್ತೆಲ್ಲವನ್ನೂ ಸಂಚಯಿಸಿಕೊಂಡು ಆಕ್ರಮಣಕ್ಕೆ ಸಿದ್ಧವಾಯಿತು.

ಅಂತಿಮವಾಗಿ, ತಮಿಳುನಾಡು ಮತ್ತು ಪುದುಚೇರಿ ನಡುವೆ ಮರಕ್ಕಣಂ ಗ್ರಾಮಕ್ಕೆ ಅಪ್ಪಳಿಸಿ ಅದರ ರೌದ್ರಾವತಾರ ತೋರಿತು. ಆಗ ಅದರ ಆರ್ಭಟ ಗಂಟೆಗೆ 120 ಕಿಲೊಮೀಟರ್‌ಗೂ ಹೆಚ್ಚು. ನಿವಾರ್ ಚಂಡಮಾರುತದ ಎಲ್ಲ ವರಸೆಗಳನ್ನೂ ಬಿಚ್ಚಲು ಸಾಧ್ಯವಾದದ್ದು ಭಾರತೀಯ ಹವಾಮಾನ ಇಲಾಖೆ ಬಳಸಿದ ಡಾಪ್ಲರ್ ರಾಡಾರ್ ವ್ಯವಸ್ಥೆಯಿಂದ. ಇದು ಎಷ್ಟು ನಿಖರವಾಗಿತ್ತೆಂದರೆ, ವಾಯುಭಾರ ಕುಸಿತದಿಂದ ಸಮುದ್ರದ ಮೇಲೆ ಸಂಗ್ರಹವಾದ ನೀರಿನ ಹನಿಗಳ ಗಾತ್ರ, ಅದು ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನೆಲ್ಲ ಸ್ಪಷ್ಟವಾಗಿ ತಿಳಿಯಬಹುದಾಗಿತ್ತು. ಇದನ್ನಾಧರಿಸಿಯೇ ಮುನ್ಸೂಚನೆ ಕೊಡುವುದು ಸಾಧ್ಯವಾಯಿತು.

ಇತ್ತ ಕೋಲ್ಕತ್ತದಿಂದ, ಅತ್ತ ಅರಬ್ಬಿ ಸಮುದ್ರದ ತಡಿಯಲ್ಲೇ ಇರುವ ಮುಂಬೈವರೆಗೆ ಇಂಥ 27 ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ಮುಕ್ಕಾಲುಪಾಲು ಬಂಗಾಳಕೊಲ್ಲಿಯ ವೀಕ್ಷಣೆಗೆ ಮುಡಿಪಾಗಿವೆ. ಈ ಸಲ ಸುಮಾರು ಎರಡು ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ತಮಿಳುನಾಡು ಮತ್ತು ಪುದುಚೇರಿಯಿಂದ ಸ್ಥಳಾಂತರಿಸಲಾಯಿತು. ಮೀನುಗಾರರ ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ದೋಣಿಗಳು, ಬಲೆಗಳು ಬಚಾವಾಗಿದ್ದು ತಂತ್ರಜ್ಞಾನಕ್ಕೆ ಸಲ್ಲಬೇಕಾದ ಯಶಸ್ಸು.

ನಿವಾರ್ ಎಂದರೆ ಬೆಳಕು. ಈ ಚಂಡಮಾರುತಕ್ಕೆ ಇರಾನ್ ನೀಡಿದ ಹೆಸರು ಇದು. ಆದರೆ ಈ ಬೆಳಕು ಹೆಚ್ಚಿನ ಸಾವು-ನೋವು ತರಲಿಲ್ಲವಾದರೂ ರೈತಾಪಿವರ್ಗಕ್ಕೆ ತಂದದ್ದು ಗಾಢಾಂಧಕಾರವನ್ನೇ. ಮೊದಲು ಪುದುಚೇರಿ ಬಳಿ ಅಪ್ಪಳಿಸಿ, ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಮತ್ತು ಒಳಭಾಗಗಳ ಮೇಲೆ ನಿವಾರ್ ದಾಳಿ ಇಟ್ಟಿತು, ಮುಂದೆ ದುರ್ಬಲವಾಯಿತು. ಇದರ ನಡೆಯನ್ನು ಅರಿಯಲು ಭಾರತೀಯ ಹವಾಮಾನ ಇಲಾಖೆಯ ಜೊತೆಗೆ ಅಮೆರಿಕದ ನೌಕಾಪಡೆಯ, ಉಷ್ಣಸಾಗರಗಳ ಚಂಡಮಾರುತ ಅಧ್ಯಯನ ಮಾಡುವ ಘಟಕ ಕೂಡ ಕೈಜೋಡಿಸಿ ಎಚ್ಚರಿಕೆಯನ್ನು ನೀಡಿತ್ತು.

ಬಂಗಾಳಕೊಲ್ಲಿಯಲ್ಲಿ ನೈಋತ್ಯ ಭಾಗದಲ್ಲಿ ಹುಟ್ಟಿ, ವಾಯವ್ಯ ದಿಕ್ಕಿನಲ್ಲಿ ಸಾಗುವಾಗ ಜನರ ಸಾವು–ನೋವಿಗಿಂತ ಬೆಳೆ ನಷ್ಟವಾದದ್ದೇ ಹೆಚ್ಚು. ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿ ಒಂದೇ ಏಟಿಗೆ 8,500 ಎಕರೆ ಭತ್ತದ ಫಸಲು ನೆಲಕಚ್ಚಿತು. ಇದೇ ಸಂದರ್ಭದಲ್ಲಿ ಚೆನ್ನೈನಲ್ಲಿ ಒಂದಷ್ಟು ನೀರಿನ ದಾಹವನ್ನೂ ತಣಿಸಿತ್ತು. ಚೆನ್ನೈನಲ್ಲಿ ವಾಡಿಕೆ ಮಳೆಗಿಂತ ಈ ಚಂಡಮಾರುತದಿಂದ ಶೇ 36ರಷ್ಟು ಹೆಚ್ಚು ಮಳೆ ಬಿತ್ತು. ಪುದುಚೇರಿಯಲ್ಲೂ ಇದೇ ಸ್ಥಿತಿ. ಚೆನ್ನೈನ ಉಪನಗರವಾದ ತಾಂಬರಂನಲ್ಲಿ 24 ಗಂಟೆಗಳಲ್ಲೇ 31 ಸೆಂ.ಮೀ. ಮಳೆ. ತಮಿಳುನಾಡಿನಲ್ಲಿ ಅಪಾರ ಬೆಳೆ ನಷ್ಟ.

ನಿವಾರ್, ಬಂಗಾಳಕೊಲ್ಲಿಯಲ್ಲಿ ಈ ವರ್ಷದಲ್ಲಿ ಹುಟ್ಟಿದ ಏಕೈಕ ಚಂಡಮಾರುತವಲ್ಲ. ಇಡೀ ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳ ಋತುವೂ ಇದೆ. ಅಂದರೆ ಹೆಚ್ಚುಕಡಿಮೆ ನಿಯತವಾಗಿ ಘಟಿಸುವ ಕಾಲ. ಏಪ್ರಿಲ್‍ನಿಂದ ಜೂನ್‍ವರೆಗೆ, ಎರಡನೆಯ ವರಸೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ. ಈ ವರ್ಷದಲ್ಲಿ ನಿವಾರ್ ಮೂರನೆಯದು. ಮೇ ತಿಂಗಳಲ್ಲಿ ಎರಗಿದ ‘ಅಂಪನ್’ ಚಂಡಮಾರುತವು ಪಶ್ಚಿಮಬಂಗಾಳ, ಒಡಿಶಾ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟ ಮಾಡಿತು. 130 ಮಂದಿ ಬಲಿಯಾಗಿದ್ದರು. ಜೂನ್ ತಿಂಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಹುಟ್ಟಿದ ಚಂಡಮಾರುತ ‘ನಿಸರ್ಗ’ ಕೂಡ ಭಾರಿ ನಷ್ಟ ಉಂಟುಮಾಡಿತು. ಹಾಗೆ ನೋಡಿದರೆ ಈ ವರ್ಷದಲ್ಲೇ ಜಾಗತಿಕ ಮಟ್ಟದಲ್ಲಿ 124 ಉಷ್ಣವಲಯ ಚಂಡಮಾರುತಗಳು ಘಟಿಸಿವೆ. ಈ ಪೈಕಿ ಶೇ 95 ಭಾಗ ಅಟ್ಲಾಂಟಿಕ್ ಸಾಗರದಲ್ಲೇ ಹುಟ್ಟಿವೆ.

ಅರಬ್ಬಿ ಸಮುದ್ರಕ್ಕಿಂತ ಬಂಗಾಳಕೊಲ್ಲಿಯಲ್ಲೇ ಏಕೆ ಹೆಚ್ಚು ಚಂಡಮಾರುತಗಳು ಏಳುತ್ತವೆ, ಅವೇಕೆ ಉಗ್ರ ಸ್ವರೂಪದವಾಗಿರುತ್ತವೆ ಎಂಬ ಪ್ರಶ್ನೆಗಳು ಬಹುಮಂದಿಯನ್ನು ಕಾಡುತ್ತವೆ. ಕಡಲಿನ ಈ ಭಾಗದ ಭೌಗೋಳಿಕ ನೆಲೆಯ ಉಷ್ಣ ವಿನಿಮಯದ ಪ್ರಮಾಣ, ಅದಕ್ಕೆ ಪೂರಕವಾದ ಗಾಳಿ ಮುಂತಾದ ಅಂಶಗಳನ್ನು ಹವಾಮಾನ ತಜ್ಞರು ಸಮಗ್ರವಾಗಿ ಅಧ್ಯಯನ ಮಾಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಒಂದು ಚಂಡಮಾರುತ ಎದ್ದರೆ, ಬಂಗಾಳಕೊಲ್ಲಿಯಲ್ಲಿ ಇದರ ಸಂಖ್ಯೆ ನಾಲ್ಕು. ವಿಶಾಲವಾದ ಅರಬ್ಬಿ ಸಮುದ್ರದ್ದು ಬಹುತೇಕ ಅನಿರೀಕ್ಷಿತ ನಡೆ. ಉತ್ತರದತ್ತ ಸಾಗುವಾಗ ಒತ್ತಡ ಮತ್ತು ಉಷ್ಣತೆಯ ವ್ಯತ್ಯಯವಾಗಿ ಇದ್ದಕ್ಕಿದ್ದಂತೆ ಅದು ಹಿಂತಿರುಗಬಹುದು. ‘ನಿಸರ್ಗ’ ಚಂಡಮಾರುತ ಮಾಡಿದಂತೆ. ಒಂದರ್ಥದಲ್ಲಿ ಶತ್ರುವಿನ ನಡೆಯನ್ನು ಊಹೆ ಮಾಡುವುದು ಸುಲಭವಲ್ಲ ಎನ್ನುವಂತೆ.

ಇನ್ನು ಬಂಗಾಳಕೊಲ್ಲಿಯದು ಬೇರೆಯದೇ ಆದ ಭೌಗೋಳಿಕ ಲಕ್ಷಣ. ಹಿಂದೂ ಮಹಾಸಾಗರದ ಒಂದು ಭಾಗವಾಗಿದ್ದರೂ ಇಲ್ಲಿ ಭಾರತದ ಪೂರ್ವ ಕರಾವಳಿ ಒಂದು ಮಿತಿ ಹಾಕಿದರೆ, ಅತ್ತ ಬಾಂಗ್ಲಾದೇಶ, ಮ್ಯಾನ್ಮಾರ್‌, ಥಾಯ್ಲೆಂಡ್‌, ಮಲೇಷ್ಯಾ, ಇಂಡೊನೇಷ್ಯಾ, ಶ್ರೀಲಂಕಾ- ಇವು ಕೂಡ ಬಂಗಾಳಕೊಲ್ಲಿಗೆ ಒಂದು ಮಿತಿಯನ್ನು ಕಲ್ಪಿಸಿವೆ. ಭೂಭಾಗವು ಬಂಗಾಳಕೊಲ್ಲಿಯನ್ನು ಬೇಗ ಕಾಯುವಂತೆ ಮಾಡುತ್ತದೆ. ಹಂಡೆಗಿಂತ ಒಂದು ಬಟ್ಟಲಿನಲ್ಲಿ ನೀರನ್ನು ಬಿಸಿ ಮಾಡುವುದು ಸುಲಭ ತಾನೇ? ವರ್ಷವಿಡೀ ಸಾಮಾನ್ಯವಾಗಿ ಬಂಗಾಳಕೊಲ್ಲಿಯ ನೀರಿನ ಉಷ್ಣತೆ 24ರಿಂದ 27 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ. ಜೊತೆಗೆ ಒತ್ತಡವೂ ಇಲ್ಲಿ ಕಡಿಮೆಯೇ. ಅಲ್ಲದೆ ಗಂಗಾ, ಬ್ರಹ್ಮಪುತ್ರ, ಮಹಾನದಿ, ಗೋದಾವರಿ ಇವೆಲ್ಲವೂ ತಣ್ಣನೆಯ ನೀರನ್ನು ಕೊಲ್ಲಿಯ ಮಡಿಲಿಗೆ ಒಯ್ಯತ್ತವೆ. ಅಂದರೆ ಬೆಚ್ಚನೆಯ ನೀರು ಮತ್ತು ತಣ್ಣೀರಿನಿಂದಾಗಿ ಕೊಲ್ಲಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಏಳುತ್ತದೆ. ಮೊದಲ ಹಂತವೆಂದರೆ ಒತ್ತಡ ಕುಸಿತ, ಅದರ ಸುತ್ತ ಗಾಳಿಯ ಗಿರಕಿ- ಇದು ಚಂಡಮಾರುತಕ್ಕೆ ಕಣ್ಣನ್ನು ನೀಡುತ್ತದೆ. ಇದು ತೀವ್ರವಾದಂತೆ ಚಂಡಮಾರುತ ನಿಜವಾಗಿ ಮೈದಳೆಯುತ್ತದೆ. ಇದಲ್ಲದೆ ದೂರದ ಪೆಸಿಫಿಕ್ ಸಾಗರದಿಂದ ಅಡೆತಡೆಯಿಲ್ಲದೆ ನುಗ್ಗಿಬರುವ ಗಾಳಿಯು ಬಂಗಾಳಕೊಲ್ಲಿಯಲ್ಲಿ ಚಂಡಮಾರುತಕ್ಕೆ ನೂಕುಬಲ ಕೊಡುತ್ತದೆ. ಪೂರ್ವ ತೀರದಲ್ಲೇ ಇರುವ ನೆಲೆಗಳಿಗೆ ಮೊದಲು ಅಪ್ಪಳಿಸುತ್ತದೆ. ಬಹುಶಃ ಈ ಸ್ಥಿತಿ ಎಂದಿಗೂ ಬದಲಾಗದು.

ಒಂದೂವರೆ ಶತಮಾನದಿಂದ ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ಚಂಡಮಾರುತಗಳ ಅಧ್ಯಯನವನ್ನು ಹವಾಮಾನ ಇಲಾಖೆ ಮಾಡಿದೆ. ನವೆಂಬರ್ ತಿಂಗಳಿನಲ್ಲಿ ಹುಟ್ಟುವ ಚಂಡಮಾರುತಗಳ ಸಂಖ್ಯೆ ಹೆಚ್ಚು ಎಂಬುದು ತಿಳಿದುಬಂದಿದೆ. ಈ ಸಮಸ್ಯೆಯನ್ನು ಯಾರೂ ಪ್ರಾಂತೀಯವಾಗಿ ನೋಡುವುದಿಲ್ಲ. ಈಗ ಎಲ್ಲ ಸಮಸ್ಯೆಗಳನ್ನೂ ಜಾಗತಿಕ ಮಟ್ಟದಲ್ಲೇ ನೋಡಬೇಕು. ಜಗತ್ತಿನ ಎಲ್ಲ ಸಾಗರಗಳ ಉಷ್ಣತೆಯೂ ಏರುತ್ತಿದೆ ಎನ್ನುವುದಕ್ಕಿಂತ ನಾವು ತೈಲ, ಕಲ್ಲಿದ್ದಲನ್ನು ಉರಿಸಿ, ನೀರು-ನೆಲದ ಉಷ್ಣತೆಯ ಸಮತೋಲವನ್ನು ಕೆಡಿಸುತ್ತಿದ್ದೇವೆ ಎನ್ನುವುದೇ ಸರಿ. ಇದು ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಮೂಲಕ ಪ್ರಕಟವಾಗುತ್ತಿದೆ.

ಚಂಡಮಾರುತವನ್ನು ಸದ್ಯಕ್ಕೆ ತಡೆಯಲಂತೂ ಸಾಧ್ಯವಿಲ್ಲ. ಪರಿಹಾರವೆಂದರೆ, ಅತ್ಯಾಧುನಿಕ ತಂತ್ರ ಜ್ಞಾನದ ಮೂಲಕ ನಿಖರ ಮುನ್ಸೂಚನೆ ಪಡೆಯುವುದು, ಪ್ರಾಣ ಹಾಗೂ ಆಸ್ತಿ ನಷ್ಟವನ್ನು ತಗ್ಗಿಸುವುದು. ವಿಜ್ಞಾನವು ಸಮಾಜಮುಖಿಯಾಗಬೇಕೆಂದು ಗಾಂಧೀಜಿ ಹೇಳಿದ ಮಾತು ಇಲ್ಲಿಯೂ ಒಪ್ಪುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು