ಶನಿವಾರ, ಫೆಬ್ರವರಿ 4, 2023
21 °C
ಆಮೆ ನಡಿಗೆಯಲ್ಲಿ ಸಾಗಿದೆ ಈ ರಾಷ್ಟ್ರೀಯ ದಾಖಲಾತಿ ಯೋಜನೆ

ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ವನ್ಯಜೀವಿ ಸಂರಕ್ಷಣೆಗೆ ಸರ್ಕಾರವು ತಜ್ಞರೊಡನೆ ಕೈಜೋಡಿಸಿದರೆ ಎಂಥ ಅದ್ಭುತ ಕೆಲಸವಾಗಬಹುದು
ಎನ್ನುವುದಕ್ಕೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಕಾಡೇ ಸಾಕ್ಷಿ. ಇಲ್ಲಿ 2015ರಲ್ಲಿ ‘ನೇಚರ್ ಕನ್ಸರ್ವೇಶನ್ ಫೌಂಡೇಷನ್’ ಸದಸ್ಯರು ಚಿಂಕಾರಗಳನ್ನು (ಹುಲ್ಲೆ) ಪತ್ತೆ ಮಾಡಿದ್ದರು. ಕಳೆದ ವರ್ಷ ಆ ಕಾಡನ್ನು ‘ಚಿಂಕಾರ ವನ್ಯಧಾಮ’ ಎಂದು ಕರ್ನಾಟಕ ಸರ್ಕಾರ ಘೋಷಿಸಿತು. ಇದರಿಂದ ಚಿಂಕಾರಗಳ ಜೊತೆಗೆ ಆ ಕಾಡಿನ ಕಿರುಬ, ಕರಡಿಗಳಿಗೂ ರಕ್ಷಣೆ ಸಿಕ್ಕಂತಾಯಿತು.

ಇದು ಎರಡು ವಿಚಾರಗಳನ್ನು ಮುನ್ನೆಲೆಗೆ ತರುತ್ತದೆ. ಈವರೆಗೆ ಅಜ್ಞಾತವಾಗಿಯೇ ಉಳಿದಿದ್ದ ಜೀವಿ ಪ್ರಭೇದಗಳನ್ನು ಪತ್ತೆಹಚ್ಚಲು ಭಾರತದಲ್ಲಿ ಇನ್ನೂ ಅವಕಾಶವಿದೆ ಎಂಬುದು ಒಂದಾದರೆ, ಸಂರಕ್ಷಣೆಗಾಗಿ ದಶಕಗಳ ಕಾಲ ಕಾಯಬೇಕಿಲ್ಲ ಎಂಬುದು ಇನ್ನೊಂದು ಸಂದೇಶ. ಆ ಕಾಡಿನಲ್ಲಿ ಚಿಂಕಾರಗಳಿವೆ ಎಂದು ಇದುವರೆಗೂ ಯಾರಿಗೂ ತಿಳಿದಿರಲಿಲ್ಲ ಎಂದರೆ ಅಲ್ಲಿ ಗಂಭೀರವಾದ ಸಮೀಕ್ಷೆಗಳು ಆಗಿರಲಿಲ್ಲ ಎಂದೇ ಅರ್ಥ. ಈ ಹಿನ್ನೆಲೆಯಲ್ಲಿ ಜೀವಿವೈವಿಧ್ಯ ದಾಖಲಾತಿ ಯೋಜನೆಯನ್ನು ನೋಡಬೇಕಾಗುತ್ತದೆ.


ಟಿ.ಆರ್.ಅನಂತರಾಮು

ಈ ಪರಿಕಲ್ಪನೆಗೆ ಕಾರಣವಾದದ್ದು 1992ರಲ್ಲಿ ಬ್ರೆಜಿಲ್‍ನ ರಿಯೊದಲ್ಲಿ ಆದ ಪೃಥ್ವಿ ಶೃಂಗಸಭೆ. ಅಲ್ಲಿ ಎತ್ತಿಕೊಂಡ ಬಹುಮುಖ್ಯ ಚರ್ಚೆಗಳಲ್ಲಿ, ಜಾಗತಿಕ ಮಟ್ಟದಲ್ಲಿ ಜೀವಿವೈವಿಧ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಒಂದು. ಸಂರಕ್ಷಣೆಯ ಬಗ್ಗೆ ಎಲ್ಲ ದೇಶಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂಬುದಕ್ಕೂ ಅಲ್ಲಿ ಒತ್ತುಬಿದ್ದಿತು. ಮುಂದಿನ ಎರಡೇ ವರ್ಷಗಳಲ್ಲಿ ಭಾರತ ಈ ನಿಲುವಿಗೆ ಬದ್ಧವಾಯಿತು. ಮುಂದೆ 2002ರಲ್ಲಿ ಜೈವಿಕ ವೈವಿಧ್ಯ ಸಂರಕ್ಷಣೆಗೆ ಒಂದು ಕಾಯ್ದೆಯನ್ನೇ ರೂಪಿಸಿತು. ದೇಶದ ಉದ್ದಗಲಕ್ಕೂ ತಜ್ಞರ ಸಲಹೆ ಪಡೆದು ಕೇಂದ್ರದಲ್ಲಿ ರಾಷ್ಟ್ರೀಯ ಜೀವಿವೈವಿಧ್ಯ ಪ್ರಾಧಿಕಾರವನ್ನೂ ಅದನ್ನು ಅನುಸರಿಸಿ ರಾಜ್ಯ ಜೀವಿವೈವಿಧ್ಯ ಪ್ರಾಧಿಕಾರ ಮತ್ತು ಮಂಡಳಿಗಳನ್ನೂ ಸ್ಥಾಪಿಸಿತು.

ಆಗ ಸರ್ಕಾರಕ್ಕೆ ಅರ್ಥವಾದ ಅಂಶವೆಂದರೆ, ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುವವರು ಗ್ರಾಮೀಣ ಪ್ರದೇಶದ ಜನ ಎಂಬ ಸತ್ಯ. ಇದಕ್ಕೆ ಪೂರಕವಾಗಿ, ಆಯಾ ಪಂಚಾಯಿತಿಗಳು ಇದಕ್ಕಾಗಿಯೇ ‘ಜೀವಿವೈವಿಧ್ಯ ನಿರ್ವಹಣಾ ಸಮಿತಿ’ಗಳನ್ನು ರೂಪಿಸಬೇಕು, ಅವು ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡಬೇಕೆಂಬ ಉದಾರ ನೀತಿಯನ್ನು ಸರ್ಕಾರ ಪ್ರಕಟಿಸಿತು. ಈ ಉದ್ದೇಶವೇನೋ ಘನವಾದದ್ದೇ. ಆದರೆ ಪಂಚಾಯಿತಿ ಮಟ್ಟಕ್ಕೆ ಬಂದಾಗ, ನಿರೀಕ್ಷಿತ ಪ್ರಮಾಣದ ಮುನ್ನಡೆ ಸಾಧನೆಯಾಗಲಿಲ್ಲ. ಈ ಬಾಬತ್ತು ಕುರಿತಂತೆ ಪಂಚಾಯಿತಿಗಳಿಗೆ ಸಿಕ್ಕಬೇಕಾದ ಫಂಡ್ ಸಿಕ್ಕಲಿಲ್ಲ. ಎಷ್ಟೋ ಪಂಚಾಯಿತಿಗಳಿಗೆ ಸರ್ಕಾರ ಇಂಥದ್ದೊಂದು ಯೋಜನೆಯನ್ನು ಹಾಕಿಕೊಂಡಿದೆ ಎಂಬುದು ತಿಳಿದಿಲ್ಲ.

ಜೀವಿವೈವಿಧ್ಯ ದಾಖಲಾತಿಗಳಲ್ಲಿ ಯಾವ ಯಾವ ಅಂಶಗಳನ್ನು ದಾಖಲಿಸಬೇಕೆಂಬುದನ್ನು ಕರ್ನಾಟಕದ ಜೀವಿ ವೈವಿಧ್ಯ ಪ್ರಾಧಿಕಾರ ಸೂಚಿಸಿದೆ. ವಿಶೇಷವಾಗಿ ಪಶ್ಚಿಮಘಟ್ಟದ ಜೀವಿ ಸಂರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವು ಯಾವ ಯಾವ ಅಂಶಗಳನ್ನು ಒಳಗೊಂಡಿರಬೇಕು ಎಂಬುದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಭಾಗದ ಪ್ರೊ. ಮಾಧವ ಗಾಡ್ಗೀಳ್ ಸ್ಪಷ್ಟ ಚೌಕಟ್ಟನ್ನು ಒದಗಿಸಿದ್ದಾರೆ. ಇದು ಜನತಾ ಜೈವಿಕ ವೈವಿಧ್ಯದ ದಾಖಲಾತಿ. ಅಂದರೆ ಪಾರಂಪರಿಕ ಜ್ಞಾನವುಳ್ಳವರನ್ನು ಇದರಲ್ಲಿ ತೊಡಗಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಸುತ್ತಮುತ್ತಲಿನ ಜೀವಿವೈವಿಧ್ಯ, ಔಷಧೀಯ ಸಸ್ಯಗಳು, ಸಸ್ಯ ಮತ್ತು ಜೀವಿ ಕುರಿತಂತೆ ತಪಶೀಲು ಮಾಹಿತಿಯನ್ನು ಸಂಗ್ರಹಿಸುವುದು.

ಇದರಲ್ಲಿ ಮಹಿಳೆಯರ ಪಾತ್ರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಸದ್ಯ ಕರ್ನಾಟಕದಲ್ಲಿ ಔಷಧೀಯ ಸಸ್ಯ ಪ್ರಾಧಿಕಾರ ಇರುವುದರಿಂದ ಅದು ಸಾಕಷ್ಟು ಪ್ರಗತಿಯನ್ನೇ ಸಾಧಿಸಿದೆ. ಅದರಲ್ಲೂ ಮುಂದೆ ಸ್ವಾಮ್ಯದ ಪ್ರಶ್ನೆ ಬಂದಾಗ ಇಲ್ಲಿ ಸಂಗ್ರಹಿಸಿರುವ ಮಾಹಿತಿ ದೊಡ್ಡ ಪಾತ್ರ ವಹಿಸಲಿದೆ. ಈ ಕೆಲಸ ಒಮ್ಮೆ ದೇಶದಾದ್ಯಂತ ಮುಂದುವರಿದು ಅಂತಿಮಘಟ್ಟ ತಲುಪಿದರೆ ಯಾವುದರ ಸಂರಕ್ಷಣೆಗೆ ಆದ್ಯತೆ ಕೊಡಬೇಕೆಂಬ ಯೋಜನೆಯನ್ನು ರೂಪಿಸಲು ನೆರವಾಗುತ್ತದೆ.

ಯೋಜನೆಯೇನೋ ಸ್ಪಷ್ಟವಾಗಿದೆ. ಆದರೆ ನಿರೀಕ್ಷಿಸಿದಷ್ಟು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಏಕೆಂದರೆ ಕಾಲಮಿತಿಯ ಬಗ್ಗೆ ತೋರಿರುವ ಔದಾರ್ಯ. ಇದರ ಜೊತೆಗೆ ಇನ್ನು ಕೆಲವು ಸಿಕ್ಕುಗಳಿವೆ. ಈಗ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಷ್ಟೇ ಜೀವಿವೈವಿಧ್ಯ ದಾಖಲಾತಿಯ ಬಗ್ಗೆ ಕೆಲಸ ಮಾಡುತ್ತಿಲ್ಲ, ಜೊತೆಗೆ 24 ಸಚಿವಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಜೀವಿವೈವಿಧ್ಯ ಸಂರಕ್ಷಣೆ ಯೋಜನೆಗಳನ್ನು ತಮ್ಮ ಯೋಜನೆಗಳಲ್ಲೂ ಅಳವಡಿಸಿಕೊಂಡಿವೆ. ಅಂದರೆ ಕಚೇರಿಯು ದೊಡ್ಡದಾಗುತ್ತಿದೆ, ಅದಕ್ಕನುಗುಣವಾಗಿ ಕೆಳ ಹಂತದಲ್ಲಿ ಜನತಾ ಜೀವಿವೈವಿಧ್ಯ ದಾಖಲಾತಿಯ ಕೆಲಸ ಆಗುತ್ತಿಲ್ಲ. ಅಂತಿಮವಾಗಿ ಈ ಯೋಜನೆಗೆ ಆರ್ಥಿಕ ನೆರವನ್ನು ನೀಡುವುದು ಪಂಚಾಯತ್‌ರಾಜ್ ಸಚಿವಾಲಯ. ಈ ಕುರಿತು ‘ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್‍ವಿರಾನ್‍ಮೆಂಟ್’ ಎಂಬ ಖಾಸಗಿ ಸಂಸ್ಥೆ ಸರ್ಕಾರದ ಗಮನ ಸೆಳೆದಿದೆ.

ಕರ್ನಾಟಕದ ವಿಚಾರಕ್ಕೆ ಬಂದಾಗ ರಾಜ್ಯದ ಜೀವಿವೈವಿಧ್ಯ ಪ್ರಾಧಿಕಾರವು ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರಿಗೆ ತರಬೇತಿ ಕೊಡುತ್ತಿದೆ. ವಿಶೇಷವಾಗಿ, ಪಶ್ಚಿಮಘಟ್ಟದಲ್ಲಿ ಜೀವಿವೈವಿಧ್ಯ ದಾಖಲಾತಿ ಬಗ್ಗೆ ಹೆಚ್ಚು ಗಮನಕೊಟ್ಟಿದೆ. ಈಗಿನ ವಸ್ತುಸ್ಥಿತಿ ಎಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಕ್ಷ್ಮ ಪ್ರದೇಶಗಳ ಮೇಲೆ ಬೀಳುವ ಒತ್ತಡವನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪಂಚಾಯಿತಿಗಳು ದಾಖಲಾತಿಯನ್ನು ಪೂರ್ಣಗೊಳಿಸುವ ಹಂತದಲ್ಲಿವೆ. ಇದೊಂದು ಸಾಹಸದ ಕೆಲಸ.

ಜನತಾ ಜೀವಿವೈವಿಧ್ಯ ದಾಖಲಾತಿಯು ರಾಷ್ಟ್ರೀಯ ಯೋಜನೆ. ಎಲ್ಲ ರಾಜ್ಯಗಳಿಗೂ ಈ ಹೊಣೆ ಇದೆ. ಕೇರಳ ರಾಜ್ಯದ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳು ಯಶಸ್ವಿಯಾಗಿ ಯೋಜನೆಯನ್ನು ಮುಗಿಸಿವೆ. ಮುಂದೆ ಸಂರಕ್ಷಣೆಗಾಗಿ ಯಾವುದಕ್ಕೆ ಆದ್ಯತೆ ಕೊಡಬೇಕೆಂಬುದನ್ನು ನಿರ್ಧರಿಸಲು ಇದು ಮೂಲ ಮಾಹಿತಿ.

ಗೋವಾ ಕೂಡ ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಪ್ರಗತಿ ಸಾಧಿಸಿದೆ. ಕೇವಲ ಆರು ವರ್ಷಗಳ ಹಿಂದಷ್ಟೇ ಒಂದು ರಾಜ್ಯವಾಗಿ ತಲೆ ಎತ್ತಿದ ತೆಲಂಗಾಣ ಇದನ್ನು ಗಂಭೀರವಾಗಿ ಪರಿಗಣಿಸಿ ಪಂಚಾಯಿತಿಗಳಿಗೆ ಉತ್ತೇಜನ ನೀಡಿದೆ. ಸದ್ಯ 1,32,653 ಜನತಾ ಜೀವಿವೈವಿಧ್ಯ ದಾಖಲಾತಿ ಪೂರ್ಣಗೊಂಡಿದೆ– ಗುರಿ ದೂರವಿದೆ.

ತಳಮಟ್ಟದಲ್ಲಿ ಜೀವಿವೈವಿಧ್ಯದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಸ್ಥಳೀಯರು, ಬುಡಕಟ್ಟು ಜನರಲ್ಲದೆ ಜೀವಿವೈವಿಧ್ಯದ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಮೀನುಗಾರರು, ರೈತರು, ನಾಟಿ ವೈದ್ಯರು- ಇವೇ ಮುಂತಾದ ವರ್ಗಗಳನ್ನು ‘ಸರ್ಕಾರ ವಿಶೇಷ ಜ್ಞಾನದ ಭಂಡಾರ’ ಎಂದು ಪರಿಗಣಿಸಿದೆ. ಇದರ ಒಂದು ಭಾಗವಾಗಿ 1996ರಲ್ಲೇ ಸ್ಥಳೀಯ ಸಸ್ಯ ತಜ್ಞರು ನೀಡಿದ ಔಷಧೀಯ ಸಸ್ಯಗಳ ಮಾಹಿತಿಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ಧ್ವನಿಮುದ್ರಣ ಮಾಡಿಕೊಂಡಿತು. ಈಗ ಸ್ಪಷ್ಟವಾಗಿರುವ ಸತ್ಯವೆಂದರೆ, ಔಷಧಿ ಸಸ್ಯಗಳಲ್ಲಿ ಮುಂಚೂಣಿಯಲ್ಲಿರುವ ‘ಅಶ್ವಗಂಧ’ ಅಳಿವಿನಂಚಿನ ಸಸ್ಯವೆಂಬ ಘಟ್ಟ ಮುಟ್ಟಿದೆ.

ಸರ್ಕಾರ ಈಗ ಕಾರ್ಪೊರೇಟ್ ಸಂಸ್ಥೆಗಳ ನೆರವನ್ನೂ ಕೋರಿ ‘ಜೀವಿವೈವಿಧ್ಯ ಸಂರಕ್ಷಣೆ ನಿಮ್ಮ ಸಾಮಾಜಿಕ ಜವಾಬ್ದಾರಿ’ ಎಂದು ನೆನಪಿಸಿದೆ. ಜನತಾ ಜೀವಿವೈವಿಧ್ಯ ದಾಖಲಾತಿ ನಿಧಾನಗೊಂಡಿರುವುದಕ್ಕೆ ರಾಜ್ಯ ಸರ್ಕಾರಗಳು ಹಲವು ಕಾರಣಗಳನ್ನು ಕೊಡಬಹುದು. ಆದರೆ ಹಸಿರು ನ್ಯಾಯಪೀಠ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಜೀವಿವೈವಿಧ್ಯ ಪ್ರಾಧಿಕಾರ ಸೇರಿದಂತೆ ಯಾವ ಯಾವ ಘಟಕಗಳು ದಾಖಲಾತಿ ಕುರಿತು ಹೊಣೆ ಹೊತ್ತಿವೆಯೋ ಅವು 2020ರ ಫೆಬ್ರುವರಿ ತಿಂಗಳಿನಿಂದ ಮುಂದಿನ ಆರು ತಿಂಗಳಿನಲ್ಲಿ ವಹಿಸಿಕೊಂಡಿರುವ ಕೆಲಸ ಮುಗಿಸಲೇಬೇಕು, ತಪ್ಪಿದರೆ ಪ್ರತೀ ತಿಂಗಳೂ ದಂಡದ ರೂಪದಲ್ಲಿ ಹತ್ತು ಲಕ್ಷ ರೂಪಾಯಿ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ಗಡುವು ಮೀರಿದೆ. ಆದರೆ ಕೇರಳವನ್ನು ಹೊರತುಪಡಿಸಿದರೆ ಯಾವ ರಾಜ್ಯವೂ ಜನತಾ ಜೀವಿವೈವಿಧ್ಯ ದಾಖಲಾತಿಯನ್ನು ಪೂರ್ಣಗೊಳಿಸಿರುವುದಾಗಿ ಈವರೆಗೂ ಘೋಷಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು