ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ವಿಶ್ಲೇಷಣೆ | ಮೂಲಸೌಕರ್ಯ: ಇನ್ನಷ್ಟು ಬೇಕಿತ್ತು –ರಕ್ಷಿತ್ ಪೊನ್ನಾಥಪುರ

Last Updated 18 ಫೆಬ್ರುವರಿ 2023, 7:34 IST
ಅಕ್ಷರ ಗಾತ್ರ

ವಿರೋಧ ಪಕ್ಷದ ಸದಸ್ಯರು ಕಿವಿ ಮೇಲೆ ಹೂವು ಇಟ್ಟುಕೊಂಡು, ಪ್ರತಿಭಟನೆ ದಾಖಲಿಸಿದ್ದರ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹಾಲಿ ಅವಧಿಯ ಕೊನೆಯ ಬಜೆಟ್ ಮಂಡಿಸಿದರು. ಕರ್ನಾಟಕವು ಕಳೆದ ಹಲವು ದಶಕಗಳಿಂದ ಆರ್ಥಿಕ ಸ್ವಾಸ್ಥ್ಯ ಕಾಪಾಡಿಕೊಂಡು ದೇಶದ ಮಾದರಿ ರಾಜ್ಯಗಳಲ್ಲಿ ಒಂದಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19ರ ಪರಿಣಾಮವಾಗಿ ರಾಜ್ಯದ ಆದಾಯವು ಖರ್ಚಿಗಿಂತ ಕಡಿಮೆಯಾಗಿತ್ತು. ರಾಜ್ಯವು ಆದಾಯ ಕೊರತೆಯ ಸ್ಥಿತಿ ತಲುಪಿತ್ತು.

ಜನಜೀವನ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬಂದಿದೆ. ಒಂದು ಕಡೆ ಕೈಗಾರಿಕೆ ಹಾಗೂ ಸೇವಾ ವಲಯಗಳು ಪ್ರಗತಿ ಸಾಧಿಸಿವೆ. ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವುದರಿಂದ ಎಲ್ಲ ಗುಂಪುಗಳನ್ನು ಓಲೈಸುವಂತಹ ಮುಂಗಡಪತ್ರವನ್ನೇ ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೂ ಈ ಮುಂಗಡ ಪತ್ರವು ಮೂಲಸೌಕರ್ಯ ವಲಯದ ಪಾಲಿಗೆ ನಿರಾಶಾದಾಯಕವಾಗಿದೆ.

ಉಪನಗರ ರೈಲಿಗೆ ಕಡಿಮೆ ಹಣ ನಿಗದಿ: ಬೆಂಗಳೂರು ಉಪನಗರ ರೈಲು ಯೋಜನೆಯು ದಶಕಗಳಿಂದ ಕಾಗದದ ಮೇಲೆ ಮಾತ್ರ ಉಳಿದಿತ್ತು. ಇದೀಗ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಎಲ್ಲ ಅನುಮತಿಗಳು ಸಿಕ್ಕಿದ್ದರೂ ಯೋಜನೆಯ ಪ್ರಗತಿ ಮಂದಗತಿಯಲ್ಲಿದೆ. ಈ ವರ್ಷವೂ ರಾಜ್ಯ ಸರ್ಕಾರ ಉಪನಗರ ರೈಲು ಯೋಜನೆಗೆ ಕೇವಲ ₹ 1 ಸಾವಿರ ಕೋಟಿಯನ್ನು ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚು ಹಣವನ್ನು ಹೆದ್ದಾರಿ, ಮೇಲ್ಸೇತುವೆ, ವೈಟ್ ಟಾಪಿಂಗ್ ಯೋಜನೆಗಳಿಗೆ ನಿಗದಿ ಮಾಡಿದೆ.

ಬೆಂಗಳೂರು ಅತ್ಯಂತ ಹೆಚ್ಚಿನ ಸಂಚಾರ ದಟ್ಟಣೆಯಿರುವ ವಿಶ್ವದ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ. ಸಾರ್ವಜನಿಕ ಸಾರಿಗೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದೇ ಸಂಚಾರ ದಟ್ಟಣೆಯನ್ನು ತಪ್ಪಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ನಗರ ಸಂಚಾರ ತಜ್ಞರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೂ ಸರ್ಕಾರವು ಖಾಸಗಿ ವಾಹನ ಬಳಕೆಯನ್ನು ಉತ್ತೇಜಿಸುವಂತಹ ಮೂಲಸೌಕರ್ಯಕ್ಕೆ ಹೆಚ್ಚು ಒಲವು ತೋರಿಸುವ ತನ್ನ ಚಾಳಿಯನ್ನು ಈ ವರ್ಷವೂ ಮುಂದುವರೆಸಿದೆ.

ನಿರ್ಲಕ್ಷ್ಯಕ್ಕೆ ಒಳಗಾದ ಬಸ್ ವ್ಯವಸ್ಥೆ: ಸಾರ್ವಜನಿಕ ಮೂಲಸೌಕರ್ಯದ ಅವಿಭಾಜ್ಯ ಅಂಗ ಬಸ್ ವ್ಯವಸ್ಥೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದುಪ್ಪಟ್ಟಾಗಿದ್ದರೂ ಬಸ್ಸುಗಳ ಸಂಖ್ಯೆ ಅದಕ್ಕೆ ಅನುಗುಣವಾಗಿ ಹೆಚ್ಚಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಇನ್ನಾದರೂ ಏರಿಸಬೇಕೆಂದು, ಅದಕ್ಕೆ ಅನುಗುಣವಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಈ ಬಾರಿ ಆಗ್ರಹಿಸಲಾಗಿತ್ತು. ಆದರೆ ಸರ್ಕಾರವು ಮುಂಗಡ ಪತ್ರದಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸೇರಿ ಕೇವಲ 1,200 ಬಸ್ಸುಗಳನ್ನು ಖರೀದಿಸಲು ₹ 500 ಕೋಟಿ ನಿಗದಿಪಡಿಸಿದೆ. ಇದರಿಂದಾಗಿ ಸಾರ್ವಜನಿಕ ಬಸ್ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಅಸಾಧ್ಯ.

2012ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಮೂಲಸೌಕರ್ಯವನ್ನು ಹೆಚ್ಚಿಸಲು ನಿರ್ಭಯಾ ನಿಧಿಯನ್ನು ಸ್ಥಾಪಿಸಲಾಯಿತು. ಆದರೆ ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಪ್ರತಿ ವರ್ಷ ಸಿಸಿಟಿವಿ ಮಾತ್ರ ಖರೀದಿಸುತ್ತಾ, ಅಳವಡಿಸುತ್ತಾ ಬಂದಿದೆ. ಆದರೆ ಸಿಸಿಟಿವಿ ಅಳವಡಿಕೆ ಮಾಡಿದ ಮಾತ್ರಕ್ಕೆ ಮಹಿಳೆಯರ ಸುರಕ್ಷತೆ ಹೆಚ್ಚುತ್ತದೆ ಎನ್ನಲು ಯಾವ ಪುರಾವೆಗಳೂ ಇಲ್ಲ. ಸಿಸಿಟಿವಿಗಳು ಮಹಿಳೆಯರ ರಕ್ಷಣೆಯನ್ನು ಹೆಚ್ಚಿಸುವುದಕ್ಕಿಂತಲೂ ಸರ್ಕಾರಕ್ಕೆ ನಾಗರಿಕರ ಮೇಲೆ ಹೆಚ್ಚು ಕಣ್ಗಾವಲಿಡಲು ಸಹಾಯ ಮಾಡುತ್ತವೆ ಎಂಬುದು ಬಹುತೇಕ ತಜ್ಞರು ಹಾಗೂ ಸ್ತ್ರೀವಾದಿಗಳ ಅಭಿಪ್ರಾಯ.

ಹಾಗೆ ನೋಡಿದರೆ, ನಗರಗಳ ವಾಣಿಜ್ಯ ಕೇಂದ್ರಗಳ ಸುತ್ತಮುತ್ತ ಮಹಿಳೆಯರಿಗೆ ಶೌಚಾಲಯ ಕಟ್ಟಿಸುವ ಯೋಜನೆಯು ಹೆಚ್ಚು
ಉಪಯುಕ್ತವಾಗಲಿದೆ. ಕೆಲಸ ಮಾಡುವ ಮಹಿಳೆಯರು ದಿನನಿತ್ಯದ ಓಡಾಟದಲ್ಲಿ ಎದುರಿಸುವ ಒಂದು ಅತಿ ದೊಡ್ಡ ಸಮಸ್ಯೆಯನ್ನು ಈ ಯೋಜನೆ ನಿವಾರಿಸಬಹುದು.

ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ದೇಶದ ಪ್ರಗತಿಗೆ ಅತ್ಯಮೂಲ್ಯ. ಭಾರತದಲ್ಲಿ ಈ ಪ್ರಮಾಣವು ಅತ್ಯಂತ ಕಡಿಮೆಯಾಗಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಸುರಕ್ಷಿತವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಂತಹ, ಕೆಲಸ ಮಾಡುವಂತಹ ಪರಿಸ್ಥಿತಿ ಸೃಷ್ಟಿಸುವುದು ಸರ್ಕಾರದ ಕರ್ತವ್ಯ. ನಿರ್ಭಯಾ ನಿಧಿಯನ್ನು ಈ ರೀತಿಯ ಯೋಜನೆಗಳಿಗೆ ಹೆಚ್ಚಾಗಿ ಬಳಸಬೇಕಾಗಿದೆ.

ಲೇಖಕ: ಹಣಕಾಸು ನೀತಿ ಸಂಶೋಧನಾ ಸಂಸ್ಥೆಯೊಂದರಲ್ಲಿ ಸಂಶೋಧಕ ಹಾಗೂ ದತ್ತಾಂಶ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT