ಗುರುವಾರ , ಅಕ್ಟೋಬರ್ 6, 2022
26 °C
ಈ ವಿನಾಯಿತಿ ಅನ್ವಯವಾಗುವುದು ಲಸಿಕೆಗಳಿಗಷ್ಟೇ ಎಂಬುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ

ವಿಶ್ಲೇಷಣೆ | ಟ್ರಿಪ್ಸ್ ವಿನಾಯಿತಿ: ಅತ್ಯಲ್ಪ ಪ್ರಯೋಜನ

ಡಾ. ಎಚ್‍.ಆರ್‌.ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಈ ವರ್ಷದ ಜೂನ್ 17ರಂದು ಸಭೆ ಸೇರಿದ್ದ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಸಚಿವರು, ಕೋವಿಡ್- 19ರ ಲಸಿಕೆಗೆ ಸಂಬಂಧಿಸಿದಂತೆ ಒಮ್ಮತದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಅದರಂತೆ ಮುಂದಿನ ಐದು ವರ್ಷಗಳ ಕಾಲ ಕೋವಿಡ್ ಲಸಿಕೆಯ ಉತ್ಪಾದನೆಗೆ ಬೌದ್ಧಿಕ ಹಕ್ಕಿನ ನಿರ್ಬಂಧಗಳಿಂದ ವಿನಾಯಿತಿ ದೊರೆತಿದೆ.

ಕೋವಿಡ್ ಲಸಿಕೆಗಳ ವ್ಯಾಪಕ ಲಭ್ಯತೆಗೆ ಸಂಬಂಧಿಸಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ಇಂದಿಗೂ ಕಂಡುಬರುತ್ತಿರುವ, ನೈತಿಕವಾಗಿ ಒಪ್ಪಲಾಗದ ಅಸಮಾನತೆಯನ್ನು ನಿವಾರಿಸಲು ಇಂತಹ ವಿನಾಯಿತಿ ಅಗತ್ಯವಾಗಿತ್ತು ಎಂದು ಸಂಘಟನೆಯ ಮಹಾನಿರ್ದೇಶಕ ಡಾ. ಎನ್‍ಗೋಜಿ ಒಕೋಂಜೋ ಇವೇಲಾ ಶ್ಲಾಘಿಸಿದ್ದಾರೆ. ಆದರೆ ಒಮ್ಮತದ ನಿರ್ಧಾರವಷ್ಟೇ ಆಗಬೇಕೆಂಬ ಒತ್ತಡಕ್ಕೆ ಮಣಿದು ನಿರ್ಧಾರವನ್ನು ಬೆಂಬಲಿಸಿದ ಅನೇಕ ದೇಶಗಳು, ಆರೋಗ್ಯ ಕ್ಷೇತ್ರದಲ್ಲಿನ ಜಾಗತಿಕ ಸಂಘಟನೆಗಳು, ಈ ವಿನಾಯಿತಿಯ ಬಗ್ಗೆ ತಮ್ಮ ನಿರಾಸೆ, ಅಸಮಾಧಾನ ವ್ಯಕ್ತಪಡಿಸಿವೆ. ಈ ನಿರ್ಧಾರ ತೀವ್ರ ಟೀಕೆಗೂ ಒಳಗಾಗಿದೆ.

ಎರಡು ವರ್ಷಗಳ ಹಿಂದೆ, ಪ್ರಪಂಚದ 175ಕ್ಕೂ ಹೆಚ್ಚು ದೇಶಗಳು ಕೋವಿಡ್- 19ರ ಬಿಗಿ ಹಿಡಿತದಲ್ಲಿ ಸಿಲುಕಿ, ಜೀವರಕ್ಷಕ ಲಸಿಕೆಗಾಗಿ ಹಾತೊರೆಯುತ್ತಿದ್ದ ಸನ್ನಿವೇಶದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ, ವಿಶ್ವ ವ್ಯಾಪಾರ ಸಂಘಟನೆಯ ‘ಟ್ರೇಡ್ ರಿಲೇಟೆಡ್ ಆ್ಯಸ್ಪೆಕ್ಟ್ಸ್ ಆಫ್ ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್’ (ಟ್ರಿಪ್ಸ್) ಮಂಡಳಿಯ ಮುಂದೆ ಪ್ರಸ್ತಾವವೊಂದನ್ನು ಮಂಡಿಸಿದವು. ಕೋವಿಡ್ ರೋಗ ನಿರ್ಣಯ, ಲಸಿಕೆಯ ಉತ್ಪಾದನೆ, ಚಿಕಿತ್ಸಾ ವಿಧಾನ, ವೈರಸ್‍ನಿಂದ ರಕ್ಷಿಸುವ ಸಾಧನಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ ಔಷಧ ತಯಾರಿಕಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಪಡೆದುಕೊಂಡಿರುವ ಪೇಟೆಂಟ್‍ಗಳನ್ನು, ಪ್ರಪಂಚದ ಎಲ್ಲ ದೇಶಗಳ ಒಳಿತಿನ ದೃಷ್ಟಿಯಿಂದ ಮೂರು ವರ್ಷಗಳ ಕಾಲ ರದ್ದುಪಡಿಸುವಂತೆ ಕೋರಲಾಗಿತ್ತು. ನೂರಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದರೂ, ಅಮೆರಿಕ, ಇಂಗ್ಲೆಂಡ್, ಸ್ವಿಟ್ಜರ್ಲೆಂಡ್, ನಾರ್ವೆ, ಆಸ್ಟ್ರೇಲಿಯಾ, ಜಪಾನ್ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ತೀವ್ರವಾಗಿ ವಿರೋಧಿಸಿದವು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬೃಹತ್ ಬಂಡವಾಳ ಹೂಡಿರುವ ಔಷಧ ತಯಾರಿಕಾ ಕಂಪನಿಗಳ ಪರಿಶ್ರಮಕ್ಕೆ ಈ ಪ್ರಸ್ತಾವ ತೀವ್ರ ಹಿನ್ನಡೆ ಉಂಟುಮಾಡುತ್ತದೆ ಎಂಬುದು ಅವುಗಳ ವಾದವಾಗಿತ್ತು.

ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾವ ಸಲ್ಲಿಕೆಯಾದ ಸುಮಾರು ಒಂದು ವರ್ಷದ ನಂತರ, 2021ರ ನವೆಂಬರ್‌ನಲ್ಲಿ ಜಾಗತಿಕ ಮಟ್ಟದ ಪೀಪಲ್ ವ್ಯಾಕ್ಸಿನ್ ಅಲಯನ್ಸ್ ಸಂಸ್ಥೆ ವರದಿಯೊಂದನ್ನು ಪ್ರಕಟಿಸಿತು. ಆಫ್ರಿಕನ್ ಅಲಯನ್ಸ್, ಗ್ಲೋಬಲ್ ಜಸ್ಟಿಸ್ ನೌ,
ಆಕ್ಸ್‌ಫಾಮ್ ಮುಂತಾದ 80 ಸದಸ್ಯರನ್ನು ಒಳಗೊಂಡಿರುವ ಪೀಪಲ್ ವ್ಯಾಕ್ಸಿನ್‌ ಅಲಯನ್ಸ್ ತನ್ನ ವರದಿಯಲ್ಲಿ, ಫೈಜರ್, ಬಯೋಎನ್‍ಟೆಕ್ ಮತ್ತು ಮೊಡೆರ್ನಾ ಕಂಪನಿಗಳು ಒಟ್ಟಾಗಿ, ಕೋವಿಡ್ ಲಸಿಕೆಗಳ ಮಾರಾಟದಿಂದ ಪ್ರತೀ ಒಂದು ನಿಮಿಷಕ್ಕೆ ಸುಮಾರು ₹ 47 ಲಕ್ಷ ಲಾಭ ಪಡೆಯುತ್ತಿರುವುದನ್ನು ದಾಖಲೆಗಳ ಸಮೇತ ವಿವರಿಸಿತು.

ಮೊಡೆರ್ನಾ ತಾನು ಉತ್ಪಾದಿಸಿದ ಒಟ್ಟು ಲಸಿಕೆಯಲ್ಲಿ ಶೇ 0.2, ಫೈಜರ್ ಹಾಗೂ ಬಯೋಎನ್‍ಟೆಕ್ ಕಂಪನಿಗಳು ಶೇ 1ಕ್ಕಿಂತ ಕಡಿಮೆ ಪ್ರಮಾಣದ ಲಸಿಕೆಗಳನ್ನು ಬಡದೇಶಗಳಿಗೆ ಒದಗಿಸಿದ್ದವು. ಈ ವರದಿಯ ನಂತರ ಮತ್ತೊಮ್ಮೆ ನೂರಕ್ಕೂ ಹೆಚ್ಚು ದೇಶಗಳು ಟ್ರಿಪ್ಸ್ ವಿನಾಯಿತಿಗಾಗಿ ಒತ್ತಾಯಿಸಿದವು. ಅಲ್ಲಿಂದ ಮುಂದೆ ನಡೆದ ಮಾತುಕತೆ, ಚರ್ಚೆ, ತೆರೆಮರೆಯ ಸಂಧಾನಗಳು, ಒತ್ತಾಯಗಳ ಫಲವಾಗಿ, ಅಂತಿಮವಾಗಿ ವಿನಾಯಿತಿಯ ಮೊದಲ ಪ್ರಸ್ತಾವ ಬಂದ ಸುಮಾರು 22 ತಿಂಗಳ ನಂತರ, ಅನೇಕ ಮಾರ್ಪಾಡುಗಳೊಂದಿಗೆ ಟ್ರಿಪ್ಸ್ ವಿನಾಯಿತಿಗೆ ಸಂಘಟನೆಯ ಅನುಮೋದನೆ ದೊರೆಯಿತು. ಈ ಪ್ರಸ್ತಾವದಲ್ಲಿರುವ ಹಲವಾರು ಅಂಶಗಳು ಇದೀಗ ಗಂಭೀರ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿವೆ.

ಅನುಮೋದನೆ ದೊರೆತಿರುವ ಹೊಸ ಪ್ರಸ್ತಾವದಂತೆ, ಕೋವಿಡ್ ವಿರುದ್ಧದ ಲಸಿಕೆಗಳ ಉತ್ಪಾದನೆಗೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ರೀತಿಯ ಪೇಟೆಂಟ್ ಕಟ್ಟುಪಾಡುಗಳು ಇರುವುದಿಲ್ಲ. ಉತ್ಪಾದಿಸಿದ ಲಸಿಕೆಗಳನ್ನು ಆಯಾ ದೇಶಗಳಲ್ಲೇ ಬಳಸಬೇಕು, ಸಗಟು ಪ್ರಮಾಣದಲ್ಲಿ ಬೇರೆ ದೇಶಗಳಿಗೆ ರಫ್ತು ಮಾಡಬಾರದು ಎಂಬ ಈ ಹಿಂದಿನ ನಿಬಂಧನೆಯೂ ಇರುವುದಿಲ್ಲ. ಮೂಲಸೌಕರ್ಯ, ತಂತ್ರಜ್ಞಾನ, ನುರಿತ, ತಜ್ಞ ಸಿಬ್ಬಂದಿಯಿರುವ ಯಾವುದೇ ದೇಶವಾದರೂ ಲಸಿಕೆಗಳನ್ನು ಉತ್ಪಾದಿಸಬಹುದು. ಹೊರನೋಟಕ್ಕೆ ಈ ವಿನಾಯಿತಿ ಸ್ವಾಗತಾರ್ಹ ಎನಿಸಿದರೂ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಲಸಿಕೆಯ ಕೊರತೆ ಇಂದು ಸಮಸ್ಯೆಯಲ್ಲ. ತೊಂದರೆ ಗಳಿರುವುದು ಈ ಲಸಿಕೆಗಳನ್ನು ದೇಶವೊಂದರ ಮೂಲೆ ಮೂಲೆಗಳಲ್ಲಿರುವ ಜನರಿಗೆ ಮುಟ್ಟಿಸುವ ವಿತರಣಾ ವ್ಯವಸ್ಥೆಗಳಲ್ಲಿ. ಉದಾಹರಣೆಗೆ, ವಿಶ್ವ ಆರೋಗ್ಯ ಸಂಸ್ಥೆಯ, ಆಫ್ರಿಕಾ ದೇಶಗಳಿಗೆ ಸಂಬಂಧಿಸಿದ ಪ್ರಾದೇಶಿಕ ನಿರ್ದೇಶಕ ಡಾ. ಮಟ್ಶಿಡಿಸೋ ಮೊಯೇಟಿ ‘ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಂತೆ ಆಫ್ರಿಕಾ ದೇಶಗಳ ಶೇ 70ರಷ್ಟು ಪ್ರಜೆಗಳಿಗೆ ನೀಡುವಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದೆ. ಅದು ಸಮಸ್ಯೆಯೇ ಅಲ್ಲ. ವಿತರಣೆಯ ಜಾಲದಲ್ಲಿರುವ ಅಡೆತಡೆ
ಗಳನ್ನು ನಿವಾರಿಸುವುದು ನಮ್ಮ ಬಹುಮುಖ್ಯ ಆದ್ಯತೆ’ ಎನ್ನುತ್ತಾರೆ. ಜಾಗತಿಕ ಮಟ್ಟದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಲಭ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ, ಬಹಳ ತಡವಾಗಿ ಬಂದಿರುವ ಟ್ರಿಪ್ಸ್ ವಿನಾಯಿತಿಗೆ ಹೆಚ್ಚಿನ ಮಹತ್ವವಿಲ್ಲ ಎನ್ನುವ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.

ಈಗ ದೊರೆತಿರುವ ವಿನಾಯಿತಿ ಅನ್ವಯವಾಗುವುದು ಲಸಿಕೆಗಳಿಗೆ ಮಾತ್ರ ಎಂಬ ಅಂಶ ಜಾಗತಿಕ ಮಟ್ಟದ ಆರೋಗ್ಯ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ರೋಗ ನಿರ್ಣಯದ ಪರೀಕ್ಷೆಗಳು, ಚಿಕಿತ್ಸಾ ವಿಧಾನಗಳು, ವೈದ್ಯಕೀಯ ಸಾಧನಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ, ಔಷಧ ತಯಾರಿಕಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಪಡೆದುಕೊಂಡಿರುವ ಪೇಟೆಂಟ್‍ಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಇದರ ಪರಿಣಾಮವಾಗಿ, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ವಿವಿಧ ಔಷಧಗಳು, ವಿಶೇಷ ಸಾಧನಗಳು ಕೈಗೆಟುಕುವ ದರದಲ್ಲಿ ಬಡ ದೇಶಗಳಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾದ ಮೊದಲ ಪ್ರಸ್ತಾವದಲ್ಲಿ ಬಹು ಮುಖ್ಯವಾಗಿದ್ದ ಈ ಬೇಡಿಕೆಗೆ ಒಪ್ಪಿಗೆ ದೊರೆತಿಲ್ಲ. ರೋಗ ನಿರ್ಣಯ ಮತ್ತು ಚಿಕಿತ್ಸಾ ವಿಧಾನಗಳಿಗೆ ಪೇಟೆಂಟ್ ವಿನಾಯಿತಿ ನೀಡುವುದಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟದ ದೇಶಗಳಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಚರ್ಚೆಯನ್ನು ಮುಂದೂಡಿದ ವಿಶ್ವ ವ್ಯಾಪಾರ ಸಂಘಟನೆಯು ಮುಂದಿನ ಆರು ತಿಂಗಳ ಒಳಗಾಗಿ ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಫೈಜರ್ ಕಂಪನಿ ‘ಅಕಾರ್ಡ್ ಫಾರ್ ಹೆಲ್ತಿಯರ್ ವರ್ಲ್ಡ್’ ಎಂಬ ಯೋಜನೆಯೊಂದನ್ನು ಘೋಷಿಸಿದೆ. ಪ್ರಪಂಚದ 45 ಅಲ್ಪ ಆದಾಯದ ದೇಶಗಳ ಆರೋಗ್ಯ ರಕ್ಷಣೆಯೇ ಈ ಯೋಜನೆಯ ಉದ್ದೇಶವೆಂದು ಹೇಳಿಕೊಂಡಿರುವ ಫೈಜರ್, ಕೋವಿಡ್ ಮತ್ತು ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ತಾನು ಪೇಟೆಂಟ್ ಪಡೆದುಕೊಂಡು ಉತ್ಪಾದಿಸುತ್ತಿರುವ ಎಲ್ಲ 23 ಲಸಿಕೆ ಮತ್ತು ಔಷಧಗಳನ್ನು ‘ಲಾಭವಿಲ್ಲದಂತೆ ಉತ್ಪಾದನೆಯ ಬೆಲೆಯಲ್ಲೇ’ ಈ ದೇಶಗಳಿಗೆ ನೀಡುವುದಾಗಿ ಹೇಳಿದೆ. ಆದರೆ ಇದರ ನಿಜವಾದ ಉದ್ದೇಶವೇ ಬೇರೆ ಎಂದು ಯೋಜನೆಯನ್ನು ಜಾಗತಿಕ ಆರೋಗ್ಯ ಸಂಘಟನೆಗಳು ಕಟುವಾಗಿ ಟೀಕಿಸಿವೆ. ಈ ಯೋಜನೆಯಿಂದ, ವಿಶ್ವಸಂಸ್ಥೆಯ ‘ಅತಿ ಕಡಿಮೆ ಅಭಿವೃದ್ಧಿ ಹೊಂದಿದ’ ಪಟ್ಟಿಯಲ್ಲಿರುವ ದೇಶಗಳು, ಜನೌಷಧವನ್ನು ಉತ್ಪಾದಿಸುವ ತಮ್ಮ ಪ್ರಯತ್ನಗಳನ್ನು ಕೈಬಿಟ್ಟು, ಫೈಜರ್ ಮೇಲೆಯೇ ಸದಾಕಾಲ ಅವಲಂಬಿತವಾಗಿರುವಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂಬುದು ಈ ಸಂಘಟನೆಗಳ ದೂರು.


ಡಾ. ಎಚ್‍.ಆರ್‌.ಕೃಷ್ಣಮೂರ್ತಿ

ಮುಂದಿನ ಆರು ತಿಂಗಳ ಒಳಗಾಗಿ ಕೋವಿಡ್ ಲಸಿಕೆಯ ಜೊತೆಗೆ ರೋಗ ನಿರ್ಣಯ, ಚಿಕಿತ್ಸಾ ವಿಧಾನ ಮುಂತಾದವುಗಳಿಗೂ ಸಂಪೂರ್ಣ ವಿನಾಯಿತಿಯ ಪ್ರಶ್ನೆಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳುವ ಭರವಸೆಯ ಮೇರೆಗೆ, ಆಂಶಿಕ ಟ್ರಿಪ್ಸ್ ವಿನಾಯಿತಿಗೆ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಆ ಭರವಸೆಯನ್ನು ಈಡೇರಿಸುವ ಜವಾಬ್ದಾರಿ ಇದೀಗ ವಿಶ್ವ ವ್ಯಾಪಾರ ಸಂಘಟನೆಯ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು