ಭಾನುವಾರ, ಆಗಸ್ಟ್ 14, 2022
25 °C
ಸಮಸ್ಯೆಯನ್ನು ನಿರ್ವಹಿಸುವುದು, ಭರವಸೆಯ ಭದ್ರತೆಯನ್ನು ವಾಸ್ತವವಾಗಿಸುವುದು ವರ್ತಮಾನದ ತುರ್ತು

ವಿಶ್ಲೇಷಣೆ: ನಾಯಕತ್ವದ ಭಿನ್ನ ಮಾದರಿ

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

‘ವಿಷಯ ಗೊತ್ತಾಯ್ತಾ? ನಿನ್ನ ಕ್ಲಾಸ್‍ಮೇಟ್ ಹೋದಳು. ಅವಳ ತಂದೆ ತಾಯಿ ಇಬ್ಬರೂ ಹೋದವಾರ ಹೋದರು. ಅವಳ ತಮ್ಮ ಇನ್ಯಾವುದೋ ಆಸ್ಪತ್ರೆಯಲ್ಲಿ ಪಾಸಿಟಿವ್ ಆಗಿ ಟ್ರೀಟ್‍ಮೆಂಟ್‌ನಲ್ಲಿ ಇದ್ದಾನಂತೆ, ನಾವೆಲ್ಲಾ ಇದ್ದೂ ಸತ್ತಂತಾಗಿದ್ದೀವಿ. ಏನೂ ಹೆಲ್ಪ್ ಮಾಡೋಕಾಗ್ತಿಲ್ಲ, ನಾವು ವೇಸ್ಟ್ ಅನ್ನಿಸ್ತಿದೆ’ ಅನ್ನುತ್ತಲೇ ದುಃಖದ ಕಡಲಲ್ಲಿ ಮುಳುಗಿದ ತನ್ನ ಮೇಷ್ಟ್ರು ದೆಹಲಿಯಿಂದ ಮಾಡಿದ ಕರೆಯನ್ನು ಕೇಳುತ್ತಾ ಮೂವತ್ತರ ಹರೆಯದ ಹುಡುಗ ಕಣ್ಣೀರು ಹಾಕುತ್ತಾನೆ.

ಎಲ್ಲೆಲ್ಲೂ ನಮ್ಮ ಆತ್ಮೀಯರನ್ನು ಕಳೆದುಕೊಳ್ಳುತ್ತಾ ಕ್ಷುಬ್ಧ ಸಾಗರದ ಅಲೆಯಲ್ಲಿ ಜೀವ ಎಂಬ ತೆಪ್ಪವನ್ನು ಏರಿ ಪಯಣ ಹೊರಟ ಸ್ಥಿತಿಯಲ್ಲಿ ನಾವೆಲ್ಲಾ ಇದ್ದೇವೆ. ಇದನ್ನು ತಡೆಯಲು, ತೀವ್ರತೆ ಕಡಿಮೆ ಮಾಡಲು ಆಗುತ್ತಿರಲಿಲ್ಲವೇ? ಇಂತಹ ಸಂದರ್ಭಗಳನ್ನು ಸವಾಲು ಎಂದು ಸ್ವೀಕರಿಸಿ ಸಾಮೂಹಿಕ ಪ್ರಯತ್ನಗಳನ್ನು ಉದ್ದೀಪಿಸಿ, ವ್ಯಕ್ತಿಗಳು ಮರೆಯಲ್ಲಿ ನಿಂತು ಕೆಲಸಗಳು ಮುನ್ನೆಲೆಗೆ ಬರುವಂತೆ ಮಾಡುವುದನ್ನೇ ನಿಜವಾದ ನಾಯಕತ್ವ ಎನ್ನುವುದು. ಆ ನಾಯಕತ್ವಕ್ಕೆ ಯಾವ ಡಿಫೆನ್ಸ್ ಲಾಯರ್‌ಗಳ ಅವಶ್ಯಕತೆ ಇರುವುದಿಲ್ಲ. ವಿವೇಕ ಇರುವ ಜನರೇ ಅದನ್ನು ಗುರುತಿಸಿ ಎತ್ತಿ ಹಿಡಿಯುತ್ತಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜರ್ಮನಿಯ ನಾಯಕಿಯರನ್ನು ಜಗತ್ತು ಹೇಗೆ ಗುರುತಿಸಿತೋ ಹಾಗೆ. ನಮ್ಮದೇ ಕೇರಳದ ಶೈಲಜಾ ಟೀಚರ್‍ರನ್ನು ಜನ ಹೇಗೆ ಅಪ್ಪಿಕೊಂಡರೋ ಹಾಗೆ. ಅವರಿಗಿಂದು ಎರಡನೆಯ ಅವಕಾಶ ಸಿಗದಿದ್ದಾಗ ಆತಂಕ ಮತ್ತು ಹತಾಶೆ ಅನುಭವಿಸುತ್ತಿರುವ ಜನ, ‘ನಮ್ಮ ಶೈಲಜಾ ಟೀಚರನ್ನು ನಮಗೆ ನೀಡಿ’ ಎಂದು ಧ್ವನಿ ಎತ್ತುತ್ತಿದ್ದಾರೆ. ಇವೆಲ್ಲವೂ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಮಾದರಿ. ನಾಯಕತ್ವವೆಂದರೆ ಪ್ರಾಮಾಣಿಕತೆಯ ಜೊತೆಗೆ ಸಮಯಪ್ರಜ್ಞೆ, ಸಾಮಾನ್ಯ ಜ್ಞಾನ (ಕಾಮನ್ ಸೆನ್ಸ್) ಮತ್ತು ಭಾವನಾತ್ಮಕ ಬೆಂಬಲ.

ನಾನಿಲ್ಲಿ ಇತಿಹಾಸದ ಘಟನೆಯೊಂದನ್ನು ನೆನಪಿಸಬಯಸುತ್ತೇನೆ. ನಮ್ಮೆಲ್ಲಾ ಮಹಾನ್ ಜ್ಞಾನಗಳು, ಮೇರು ಸಾಧನೆಗಳು, ಕಠಿಣ ಆಡಳಿತ ವ್ಯವಸ್ಥೆಗಳು ಇದ್ದಾಗಲೂ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಹೇಗೆ ತಲೆಮಾರುಗಳನ್ನೇ ನಾಶ ಮಾಡಿತು, ಹೇಗೆ ಕೇವಲ ಕರ್ತವ್ಯದ ವಿಧೇಯತೆಯಲ್ಲಿ ಮುಳುಗಿ, ತಕ್ಷಣದ ಅಪಾಯವನ್ನು ಚಕ್ಕನೆ ಗ್ರಹಿಸದೇ ಹೋಗಿದ್ದರಿಂದ ಏನೆಲ್ಲಾ ಸರಿಪಡಿಸದ ಅನಾಹುತಗಳು ನಡೆದುಹೋದವು, ಅದನ್ನು ಮುಚ್ಚಿಡಲು ಸರ್ಕಾರ ಮಾಡಿದ ಕಸರತ್ತು ಇನ್ನಷ್ಟು ಅಮಾಯಕರ ಬದುಕನ್ನು ಹೇಗೆ ಸದ್ದಿಲ್ಲದೆ ನರಕಸದೃಶಗೊಳಿಸಿತು ಎಂಬುದನ್ನು ಇದು ದಾಖಲಿಸುತ್ತದೆ.

1986ರಲ್ಲಿ ಆಗಿನ ಸೋವಿಯತ್ ಒಕ್ಕೂಟದ ಚರ್ನೋಬಿಲ್‍ನಲ್ಲಿ ನಡೆದ ಪರಮಾಣು ರಿಯಾಕ್ಟರ್ ಸ್ಫೋಟದ ಘಟನೆಯದು. ‘ನಾಲ್ಕನೇ ನಂಬರ್ ಸ್ಥಾವರ. ಥಟ್ಟನೆ ತುರ್ತು ಸನ್ನಿವೇಶವೊಂದು ಎದುರಾದರೆ ಸ್ಥಾವರವನ್ನು ತಣ್ಣಗಾಗಿಸುವ ವಿಧಾನವೊಂದನ್ನು ಪರೀಕ್ಷಿಸುವ ಪ್ರಯೋಗ ನಡೆಯುತ್ತಿದೆ... ಎಲ್ಲೋ ಏನೋ ಎಡವಟ್ಟಾಯಿತು. ಎಲ್ಲಿ ಏನು ತಪ್ಪು ಗಂಟಾಯ್ತು ಎಂದು ಗ್ರಹಿಕೆಗೂ ಸಿಗದಷ್ಟು ವೇಗದಲ್ಲಿ ವಿದ್ಯಮಾನಗಳು ಜರುಗುತ್ತಿದ್ದವು. 12.35ರಿಂದ 12.45ರ ಒಳಗೆ ಎರಡು ಸಲ ಎಚ್ಚರಿಕೆಯ ಗಂಟೆ ಮೊಳಗಿತು. ಆದರೆ ಪಾಳಿಯಲ್ಲಿದ್ದ ತಂತ್ರಜ್ಞರು ಅದನ್ನು ನಿರ್ಲಕ್ಷಿಸಿ, ಪ್ರಯೋಗವನ್ನು ಮುಂದುವರಿಸಿದರು... ಏನಾಗುತ್ತಿದೆ ಎನ್ನುವುದು ಅರಿವಿಗೆ ನಿಲುಕುವಷ್ಟರಲ್ಲಿ ಚರ್ನೋಬಿಲ್ ಅಣುಸ್ಥಾವರ ಸಂಕೀರ್ಣದ ನಾಲ್ಕನೇ ನಂಬರಿನ ಘಟಕ ಸಿಡಿದು ಚೂರಾಯಿತು. ಇಲ್ಲಿಂದ ಸಿಡಿದ ಬೆಂಕಿಚೆಂಡುಗಳು ಪಕ್ಕದ ಮೂರನೇ ನಂಬರಿನ ಸ್ಥಾವರದ ಮೇಲೂ ಬಿದ್ದವು. ಆ ಸ್ಥಾವರವು ಇನ್ನೂ ಕೆಲಸ ಮಾಡುತ್ತಲೇ ಇತ್ತು. ಬೆಂಕಿಯನ್ನು ನೋಡಿದ್ದೇ ರಾತ್ರಿ ಪಾಳಿಯ ಮುಖ್ಯಸ್ಥ ಸ್ಥಾವರವನ್ನು ಶಟ್‍ಡೌನ್ ಮಾಡೋಣ ಎಂದರೆ ಮುಖ್ಯ ಎಂಜಿನಿಯರ್ ಒಪ್ಪಲಿಲ್ಲ. ವಿಕಿರಣದ ದುಷ್ಪರಿಣಾಮ ತಟ್ಟದ ಹಾಗೆ ಮುಖವಾಡ ತೊಟ್ಟು ಕೆಲಸ ಮುಂದುವರಿಸುವಂತೆ ತಾಂತ್ರಿಕ ಸಿಬ್ಬಂದಿಗೆ ಹೇಳಿದ (ನಂತರ ಅದೂ ಸ್ಫೋಟಗೊಂಡು ದುರಂತದ ತೀವ್ರತೆ ಹಲವುಪಟ್ಟು ಹೆಚ್ಚಿತು)’. ನೊಬೆಲ್ ಪ್ರಶಸ್ತಿ ಪಡೆದ ಸ್ವೆಟ್ಲಾನಾ ಅಲೆಕ್ಸಿವಿಚ್‍ರ ರಷ್ಯನ್ ಕೃತಿ ‘ಚರ್ನೋಬಿಲ್ ಪ್ರಾರ್ಥನೆ’ ಎಂಬ, ಸುಮಂಗಲಾ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಕೃತಿಯಲ್ಲಿನ ಸಾಲುಗಳಿವು.

ಇಂತಹ ಕೃತಿಗಳು ನಮ್ಮ ಇಂದನ್ನು ರೂಪಿಸಲು ದಾರಿದೀಪಗಳಾಗದೇ ಹೋದರೆ ಹಲವು ಎಚ್ಚರಿಕೆಗಳ ನಡುವೆಯೂ ನಾವು ತಡೆಯಬಹುದಾಗಿದ್ದ ಕೋವಿಡ್ ದುರಂತಗಳನ್ನು ತಡೆಯುವುದಾದರೂ ಹೇಗೆ?

ಇಂತಹ ಸಂಗತಿಗಳು ಎಲ್ಲ ಪರಿಣತಿ, ಸಾಮರ್ಥ್ಯ, ಸಿದ್ಧಾಂತ, ಸಿದ್ಧತೆ, ಆಡಳಿತಾತ್ಮಕ ಸುವ್ಯವಸ್ಥೆಗಳ ನಡುವೆಯೂ ಆ ಕ್ಷಣದಲ್ಲಿ ಅವೆಲ್ಲವನ್ನೂ ಬಳಸಿಕೊಂಡು ಮುನ್ನಡೆಸಬಲ್ಲ ಚತುರಮತಿ ಮತ್ತು ತಾಯ್ತನದ ಅಕ್ಕರಾಸ್ಥೆ ಮುನ್ನಡೆಸುವವರಲ್ಲಿ ಇರಬೇಕು ಎನ್ನುವುದಕ್ಕೂ ಪಾಠವೇ ಆಗಿರುತ್ತದೆ.


ಸಬಿತಾ ಬನ್ನಾಡಿ

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್ ನಿರ್ವಹಣೆ ಬೇರೆ ಬೇರೆ ರೀತಿಯಲ್ಲಿ ನಡೆದಿದೆ. ಆದರೆ ಕಳೆದ ಬಾರಿ ಇದು ದೂರದ ಚೀನಾದಲ್ಲಿ ಸುದ್ದಿಯಾಗಿದ್ದಾಗಲೇ ಮುನ್ನೋಟ ಹರಿಸಿ ಜಾಗರೂಕತೆಯನ್ನು ತೋರಿದ್ದು ಕೇರಳ ರಾಜ್ಯ. ಅಲ್ಲಿನ ಸರ್ಕಾರ ಎಲ್ಲಾ ಅನುಕೂಲ ಮತ್ತು ಸಹಕಾರಗಳನ್ನು ನೀಡಿ ಒಂದು ತಂಡವಾಗಿ ಕೆಲಸ ನಿರ್ವಹಿಸಿದ್ದರ ಜೊತೆ ಜೊತೆಗೇ ಆರೋಗ್ಯ ಸಚಿವೆ ಶೈಲಜಾ ಅವರ ವೈಯಕ್ತಿಕ ಛಾತಿಯೂ ಭಿನ್ನ ತೆರನಾಗಿತ್ತು. ವುಹಾನ್‍ನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಮಾಡಿದ ಮೊದಲ ಕೆಲಸ, ಅಲ್ಲಿ ಕೇರಳಿಗರು ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ತರಿಸಿಕೊಂಡಿದ್ದು ಮತ್ತು ‘ನಿಮ್ಮೊಡನೆ ನಾವಿದ್ದೇವೆ’ ಎಂಬ ಸಂದೇಶ ರವಾನಿಸಿದ್ದು. ಎಚ್ಚರಿಕೆಯ ಗಂಟೆ ಬಡಿಯುವ ಮೊದಲೇ ಸಿದ್ಧತೆ ಮಾಡಿಕೊಂಡಿದ್ದು ಮಾತ್ರವಲ್ಲ, ಸರ್ಕಾರ ಎಂಬ ತಾಯಿಯ ಅಭಯವನ್ನು ಪ್ರಜೆಗಳು ಎಂಬ ಮಕ್ಕಳಿಗೆ ನೀಡಿದ ಭದ್ರತೆಯ ಭಾವವಿದೆಯಲ್ಲಾ ಅದನ್ನು ಎಲ್ಲರೂ ಮಾಡಲಾರರು.

ನಮ್ಮಲ್ಲಿ ಕ್ರಿಮಿನಲ್ ಕುಶಾಗ್ರಮತಿ ಹಲವರಲ್ಲಿ ಇರುತ್ತದೆ. ಇಂತಹ ಕಷ್ಟಕಾಲದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳುವ, ವಿರೋಧಿಗಳನ್ನು ಹಣಿಯಲು ಅವಕಾಶ ಸೃಷ್ಟಿಸಿಕೊಳ್ಳುವ, ತಮ್ಮನ್ನು ಟೀಕಿಸಿದವರನ್ನು ನಾಶ ಮಾಡುವ ಎಲ್ಲ ದಾರಿಗಳನ್ನು ಹೆಣೆಯುವವರಿದ್ದಾರೆ. ನಮಗೀಗ ಬೇಕಿರುವುದು ಇದ್ಯಾವುದೂ ಅಲ್ಲ. ಶೈಲಜಾರ ವಿಷಯದಲ್ಲಿ ಇನ್ನೊಂದು ಉದಾಹರಣೆಯನ್ನು ನೆನಪಿಸಿಕೊಳ್ಳಬಹುದು. ತಾವು ವಿರೋಧ ಪಕ್ಷದಲ್ಲಿದ್ದಾಗ, ಸೌಮ್ಯ ಕೊಲೆ ಪ್ರಕರಣದಲ್ಲಿ ಫೊರೆನ್ಸಿಕ್ ವಿಭಾಗದ ಡಾ. ಉನ್ಮೇಶ್ ಅವರನ್ನು ಶೈಲಜಾ ತೀವ್ರವಾಗಿ ಟೀಕಿಸಿದ್ದರು. ತನಿಖೆಯ ನಂತರ ಅವರು ನಿರಪರಾಧಿ ಎಂದು ತಿಳಿಯುತ್ತದೆ. ಶೈಲಜಾ ಅವರು ಮಂತ್ರಿಯಾದ ಮೇಲೆ ಅವರ ವಿಭಾಗಕ್ಕೆ ಭೇಟಿ ಕೊಡುವ ಸನ್ನಿವೇಶ ಬರುತ್ತದೆ. ಅಲ್ಲಿ ಉನ್ಮೇಶ್‍ರನ್ನು ನೋಡಿದ್ದೇ ಶೈಲಜಾ ಎಲ್ಲರ ಮುಂದೆ ಅವರ ಕ್ಷಮೆ ಕೇಳುತ್ತಾರೆ. ಇದು ನಮಗಿಂದು ಬೇಕಿರುವುದು. ಈ ಹಲವು ಕಾರಣಗಳಿಗಾಗಿ ಶೈಲಜಾ ಉಳಿದ ಮಹಿಳಾ ರಾಜಕಾರಣಿಗಳಿಗಿಂತಲೂ ಭಿನ್ನ. ಹುಲಿಯಂತೆ ದಾಳಿ ಮಾಡುವ, ಸೇರಿಗೆ ಸವ್ವಾಸೇರು ಎಂಬಂತಿರುವುದೇ ನಾಯಕತ್ವವಲ್ಲ.

ಶೈಲಜಾ ಅವರದು ಎಲ್ಲ ಗಂಡಸರೂ ಹೆಂಗಸರೂ ಅನುಸರಿಸಬೇಕಾದ ಪೋಷಣೆಯ ಹೆಣ್ಣು ಮಾದರಿ. ಪಿಣರಾಯಿ ವಿಜಯನ್ ನೇತೃತ್ವದ ಹಿಂದಿನ ಸರ್ಕಾರವೂ ಈ ಮಾದರಿಗೆ ನೀರೆರೆದಿದೆ. ಇದನ್ನು ಗುರುತಿಸಿ ಪುನರಾಯ್ಕೆ ಮಾಡಿದ ಕೇರಳದ ಜನರ ವಿವೇಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಯನ್ನು ಕೇವಲ ಭಾವುಕವಾದದ್ದೆಂದು ನಿರ್ಲಕ್ಷಿಸುವಂತಿಲ್ಲ. ಸಿದ್ಧಾಂತ, ನಿಯಮಗಳಾಚೆಗೆ ವಿಜಯನ್‍ರಂತೆಯೇ ಶೈಲಜಾ ಅವರ ನಾಯಕತ್ವದ ಫಲವೂ ಜನರಿಗೆ ಸಿಗುವಂತಾಗಬೇಕಿದೆ. ಎಲ್ಲ ಅತ್ಯುತ್ತಮ ತಂದೆಯರು ಅಂತಿಮವಾಗಿ ತಾಯಿಯರೇ ಆದಾಗ ಅಲ್ಲಿ ಭಾವನಾತ್ಮಕ ಸ್ಪರ್ಶದ ಮೃದುತ್ವವಿರುತ್ತದೆ. ಹಾಗಿದ್ದಾಗ, ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ದುರಂತಗಳಿಗೆ ಅವಕಾಶವೇ ಇರುವುದಿಲ್ಲ. ಈಗ ನಮಗೆ ತುರ್ತಾಗಿ, ಶೈಲಜಾ ಟೀಚರ್ ಜೊತೆಗೆ ನೂರಾರು ಶೈಲಜೆಯರು ಬೇಕಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು