ಬುಧವಾರ, ಆಗಸ್ಟ್ 17, 2022
25 °C
ನೆಲ-ಜಲ– ಕಾಡು ರಕ್ಷಣೆಯ ಅಡಿಪಾಯವಿರದೆ, ಅಭಿವೃದ್ಧಿ ಗೋಪುರ ಮೇಲೇರಲು ಸಾಧ್ಯವೇ?

ವಿಶ್ಲೇಷಣೆ: ಸಹ್ಯಾದ್ರಿಯ ಉಸಿರು ಕಸಿಯಲು ಬೇಡ

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದಲ್ಲಿನ ನೀರಿನ ಲಭ್ಯತೆ ಕಾದುಕೊಂಡು, ವಾತಾವರಣವನ್ನು ಸುರಕ್ಷಿತವಾಗಿರಿಸಿ, ಜನಜೀವನವನ್ನು ಪೊರೆಯುತ್ತಿರುವ ಜೀವಸೆಲೆಯಾಗಿರುವ ಪಶ್ಚಿಮಘಟ್ಟದ ಪರಿಸರಸೂಕ್ಷ್ಮ ಪ್ರದೇಶಗಳನ್ನು, ಕಸ್ತೂರಿರಂಗನ್ ವರದಿ ಆಧಾರದಲ್ಲಾದರೂ ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ನೀಡಿದ ವರ್ಷಾಂತ್ಯದ ಗಡುವು ಈಗ ಸಮೀಪಿಸುತ್ತಿದೆ. ಹೀಗಾಗಿ, ಸಹ್ಯಾದ್ರಿಯ ಪರಿಸರ ಪರಿಸ್ಥಿತಿಯು ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ವಿಶೇಷವೆಂಬಂತೆ, ಮೊನ್ನೆ ಇದೇ 11ರಂದು ವಿಶ್ವಸಂಸ್ಥೆಯ ಆಶ್ರಯದಲ್ಲಿ ಆಚರಿಸಿದ ‘ಜಾಗತಿಕ ಪರ್ವತ ದಿನಾಚರಣೆ’ ಸಂದರ್ಭದಲ್ಲಿ ಈ ಕಾಳಜಿಯು ಜಾಗತಿಕ ಮಟ್ಟದಲ್ಲೂ ಮತ್ತೊಮ್ಮೆ ವ್ಯಕ್ತವಾಯಿತು. ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (IUCN) ಪ್ರಕಟಿಸಿದ ವಿಸ್ತೃತ ಸಂಶೋಧನಾ ವರದಿಯೊಂದು ಸಹ್ಯಾದ್ರಿಶೇಣಿಯ ನೈಸರ್ಗಿಕ ಸಂಪತ್ತು ಗಣನೀಯವಾಗಿ ಕರಗುತ್ತಿರುವ ಪರಿಯನ್ನು ಅಂಕಿಅಂಶ ಸಹಿತ ನಿರೂಪಿಸಿದೆ. ಇವೆಲ್ಲ ತೆರೆದಿಡುತ್ತಿರುವುದು, ಮಲೆನಾಡು ಹಾಗೂ ಇಲ್ಲಿನ ಜನಸಮುದಾಯಗಳು ಎದುರಿಸುತ್ತಿರುವ ತೀವ್ರ ಸಂಕಟಗಳ ಆಳ-ಅಗಲವನ್ನೇ. ಆದರೆ, ನಾಡಿನ ಪಶ್ಚಿಮಘಟ್ಟದ ತಪ್ಪಲಿನ ರೈತರು ಹಾಗೂ ವನವಾಸಿಗರಿಗೆ ಇವ್ಯಾವುವೂ ಹೊಸ ಸಂಗತಿಗಳಾಗಿ ತೋರುತ್ತಿಲ್ಲ. ಕಳೆದ ಮೂರ್ನಾಲ್ಕು ದಶಕಗಳಿಂದ ಇಲ್ಲಿನ ನೆಲ-ಜಲ-ಕಾಡು-ಕೃಷಿಯ ಆರೋಗ್ಯ ಹದಗೆಡುತ್ತಿರುವುದನ್ನು ಅವರು ಕಣ್ಣಾರೆ ಕಾಣುತ್ತಿದ್ದಾರೆ. ಕಳೆದ ಎರಡು ದಶಕಗಳಿಂದಂತೂ ಪರಿಸರನಾಶವು ಜನಜೀವನಕ್ಕೆ ತಂದಿಡುತ್ತಿರುವ ಸಂಕಷ್ಟಗಳನ್ನು ಅನುಭವಿಸುತ್ತಲೂ ಇದ್ದಾರೆ.

ಮಲೆನಾಡಿನೆಲ್ಲೆಡೆ ಮಳೆಗಾಲ ಬಂತೆಂದರೆ ಒಮ್ಮೆಲೇ ನೆರೆ ಹಾಗೂ ಹಲವೆಡೆ ಭೂಕುಸಿತ. ನೆರೆ ಬಸಿದು, ರೋಗ ಕಳೆದು ಇನ್ನೇನು ಉಳಿದ ಬೆಳೆಯಾದರೂ ಕೈಗೆ ಬಂದೀತೆಂಬ ಶರತ್ಕಾಲದ ಸಂತಸದ ನಿರೀಕ್ಷೆಯಲ್ಲಿರುವಾಗ, ಮಂಗ, ಆನೆ, ಕಾಡುಕೋಣ, ಕಾಡುಹಂದಿಗಳಿಂದ ಬೆಳೆನಾಶ. ಸಹ್ಯಾದ್ರಿಯ ಸೆರಗಲ್ಲೇ ಬದುಕು ಕಟ್ಟಿಕೊಂಡಿರುವ ಕರಾವಳಿಯಲ್ಲಿ, ಸಮುದ್ರದಲ್ಲೂ ಮೀನು ದೊರಕದ ಮತ್ಸ್ಯಕ್ಷಾಮ. ಮಳೆಗಾಲದಲ್ಲಿ ಧೋ ಎಂದು ಮಳೆ ಸುರಿವ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಕರಾವಳಿ ಪ್ರದೇಶಗಳಲ್ಲೂ ಬೇಸಿಗೆಯಲ್ಲಿ ಹಲವೆಡೆ ಕುಡಿಯುವ ನೀರೂ ದೊರಕದಷ್ಟು ಒಣಗುವ ಬಾವಿ-ಕೆರೆ, ನದಿ-ತೊರೆಗಳು!

ಯಾಕೆ ಹೀಗಾಗುತ್ತಿದೆ? ಇದಕ್ಕೆ ಉತ್ತರ ಕಂಡುಕೊಳ್ಳಲು ಕಳೆದ ಹಲವು ದಶಕಗಳಿಂದ ಸರ್ಕಾರ, ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಇವರೆಲ್ಲ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅರಣ್ಯಪ್ರದೇಶ ನಾಶವಾಗಿ ಮೇಲ್ಮಣ್ಣು ಸವಕಳಿ ಆದಂತೆಲ್ಲ ಮಲೆನಾಡಿನ ನದಿತಪ್ಪಲುಗಳ ಮಳೆನೀರು ಇಂಗಿಸುವ ಸಾಮರ್ಥ್ಯ ಕುಗ್ಗಿ, ಕರಾವಳಿಯತ್ತ ಸಾಗುವ ನೇತ್ರಾವತಿ, ಕಾಳಿಯಂಥ ನದಿಗಳು ಹಾಗೂ ಒಳನಾಡಿಗೆ ಹರಿಯುವ ಘಟಪ್ರಭಾ, ಮಲಪ್ರಭಾ, ತುಂಗಾ, ಭದ್ರಾ, ಕಾವೇರಿ ನದಿಕಣಿವೆಗಳಲ್ಲೆಲ್ಲ ಭಾರಿ ಪ್ರಮಾಣದಲ್ಲಿ ನೆರೆ ಹೆಚ್ಚುತ್ತಿರುವ ಬೆಳವಣಿಗೆಯನ್ನು ಅವು ದಾಖಲಿಸಿವೆ.

ಮಳೆನೀರು ಇಂಗುವಿಕೆ ಕಡಿಮೆಯಾಗುವುದರಿಂದ ಅಂತರ್ಜಲ ಮರುಪೂರಣ ಇಲ್ಲವಾಗಿ, ನದಿಗಳಿಗೆ ನೀರುಣಿಸುವ ಝರಿಗಳು ಒಣಗಿ, ಬೇಸಿಗೆಯಲ್ಲಿ ಜಲಕ್ಷಾಮ ಸಾಮಾನ್ಯವಾಗುತ್ತಿದೆ. ವಿಶಿಷ್ಟ ಬಗೆಯ ಅರಣ್ಯವಿರುವ ಪಶ್ಚಿಮಘಟ್ಟಗಳ ಕಡಿದಾದ ಶೃಂಗಗಳನ್ನೂ ಕತ್ತರಿಸುವ ಅವೈಜ್ಞಾನಿಕ ಭೂಬಳಕೆ ವಿಧಾನಗಳಿಂದಾಗಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಹಲವೆಡೆ ಪ್ರತಿವರ್ಷವೂ ಭೂಕುಸಿತವಾಗತೊಡಗಿದೆ. ಬಲಾಢ್ಯರು ಕಾನು ಹಾಗೂ ಗೋಮಾಳಗಳನ್ನು ವ್ಯಾಪಕವಾಗಿ ಒತ್ತುವರಿ ಮಾಡುತ್ತಿರುವುದರಿಂದ, ಪಾರಂಪರಿಕ ವನವಾಸಿಗಳ ಹಕ್ಕುಗಳು ಮೊಟಕುಗೊಳ್ಳುತ್ತಿವೆ. ಕಾಡುನಾಶ, ಮರಳು ಗಣಿಗಾರಿಕೆ ಹಾಗೂ ಅಕ್ರಮ ಕ್ವಾರಿಗಳಿಂದ ಅರಣ್ಯವು ಛಿದ್ರವಾಗಿ, ವನ್ಯಜೀವಿಗಳು ಊರಿಗೆ ದಾಳಿಯಿಟ್ಟು ಬೆಳೆಹಾನಿ ಮಾಡುವ ಸಂದರ್ಭಗಳು ಹೆಚ್ಚುತ್ತಿವೆ.

ದೇಶದ ಅರಣ್ಯನೀತಿಯು ಕನಿಷ್ಠ ಶೇ 33ರಷ್ಟು ಅರಣ್ಯವಿರಬೇಕೆಂದು ಹೇಳಿದರೂ ಮಲೆನಾಡಿನಲ್ಲಿ ನೈಜಅರಣ್ಯವು ಶೇ 10ಕ್ಕಿಂತಲೂ ಕಡಿಮೆಯಾಗಿರುವುದರ ಪರಿಣಾಮವಿದು. ಪಾಳುಭೂಮಿ ಪ್ರದೇಶ ಹೆಚ್ಚುತ್ತಿದೆಯೆಂದು ಇಸ್ರೊದ ಆಧುನಿಕ ಸಂವೇದಕಗಳು (AWiFS) ನೀಡುತ್ತಿರುವ ನಿಖರ ಉಪಗ್ರಹಚಿತ್ರಗಳು ಸಾರುತ್ತಿವೆ. ಹೀಗಾಗಿ, ಈ ಪರ್ವತಮಾಲೆಯ ಸಂರಕ್ಷಣೆಯು ಕೇವಲ ಮಲೆನಾಡಷ್ಟೇ ಅಲ್ಲ, ಕರಾವಳಿ ಹಾಗೂ ಸಮಗ್ರ ಒಳನಾಡಿನ ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆಗಳ ಸುರಕ್ಷತೆಯ ದೃಷ್ಟಿಯಿಂದಲೂ ಮಹತ್ವದ್ದು ಎಂಬುದು ಈಗ ಸಾಬೀತಾಗಿರುವ ಸತ್ಯ. ವಿಶಿಷ್ಟ ಭೂರಚನೆ ಹಾಗೂ ಅಪಾರ ಜೀವವೈವಿಧ್ಯವಿರುವ ಈ ಸೂಕ್ಷ್ಮ ಭೌಗೋಳಿಕ ಪ್ರದೇಶವನ್ನು ನಿರ್ವಹಿಸಲು ವಿಶೇಷ ನೀತಿ-ನಿಯಮಗಳ ಅಗತ್ಯವಿರುವುದು ಈ ಕಾರಣಗಳಿಗಾಗಿ.

ಕಳೆದ ಮೂರು ದಶಕಗಳಿಂದ ವಿಜ್ಞಾನಿಗಳು, ಜನಪರ ಅಭಿಯಾನಗಳು, ರೈತ ಮತ್ತು ಪರಿಸರ ಸಂಘಟನೆಗಳೆಲ್ಲ ಹೇಳಲು ಪ್ರಯತ್ನಪಟ್ಟಿದ್ದು ಇದನ್ನೇ. ಸಂಸತ್ತಿನ ಸ್ಥಾಯಿಸಮಿತಿಗಳು, ನೀತಿ ಆಯೋಗ ಸಹ ಇದನ್ನು ಆಳವಾಗಿ ಚರ್ಚಿಸಿವೆ. ಇಂಥ ದೀರ್ಘ ಮತ್ತು ಆಳವಾದ ಚಿಂತನೆಯ ಫಲವಾಗಿಯೇ ರಚಿತವಾಗಿದ್ದ ಮಾಧವ ಗಾಡ್ಗೀಳ್‌ ಸಮಿತಿಯು ಅರ್ಥಪೂರ್ಣ ವರದಿಯನ್ನೇ 2011ರಲ್ಲಿ ನೀಡಿತ್ತು. ಸ್ಥಳೀಯರ ಪಾರಂಪರಿಕ ಹಕ್ಕುಗಳನ್ನು ನಿರ್ಬಂಧಿಸುವ ಅಥವಾ ರೈತರು-ವನವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಸ್ತಾಪವೇ ಅದರಲ್ಲಿರಲಿಲ್ಲ. ಪರಿಸರಸ್ನೇಹಿ ಅಭಿವೃದ್ಧಿ ವಿಧಾನಗಳನ್ನು ನಿರ್ಣಯಿಸುವ ಅಂತಿಮ ಆಯ್ಕೆಯು ಗ್ರಾಮಸಭೆಗಳಿಗೆ ಇರಬೇಕೆಂದೇ ಅದು ಹೇಳಿತ್ತು. ‘ಪಂಚಾಯತ್‌ರಾಜ್‌ ಕಾಯ್ದೆ’ಯ (1993) ನೈಜ ಗ್ರಾಮಸ್ವರಾಜ್ಯದ ಅಶಯಗಳಿಗೆ ಜೀವತುಂಬುವ ಪ್ರಯತ್ನ ಅದಾಗಿತ್ತು. ಆದರೆ, ಕೆಲವು ಶಕ್ತಿಗಳು ಆ ವರದಿಯ ಕುರಿತು ಸಾರ್ವಜನಿಕರಲ್ಲಿ ಭಯ ಮೂಡುವಂತೆ ಸುಳ್ಳುಮಾಹಿತಿಗಳನ್ನು ವ್ಯಾಪಕವಾಗಿ ಹಬ್ಬಿಸಿದ್ದರಿಂದಾಗಿ, ಸರ್ಕಾರ ಅದನ್ನು ಕೈಬಿಡಬೇಕಾಯಿತು.


ಕೇಶವ ಎಚ್. ಕೊರ್ಸೆ

ಅದರ ಬದಲಾಗಿ ಆನಂತರ ರಚಿತವಾದ ಕಸ್ತೂರಿರಂಗನ್ ನೇತೃತ್ವದ ಸಮಿತಿಯು 2013ರಲ್ಲಿ ನೀಡಿದ ವರದಿಯೇ ಈಗ ಚರ್ಚೆಯಲ್ಲಿರುವುದು. ಗಾಡ್ಗೀಳ್ ವರದಿಯಲ್ಲಿದ್ದ ಅನೇಕ ಧನಾತ್ಮಕ ಅಂಶಗಳು ಇದರಲ್ಲಿ ಕಣ್ಮರೆಯಾಗಿವೆ. ಆದರೂ, ಪರಿಸರ ಸಂರಕ್ಷಣಾ ಕಾಯ್ದೆ (1986) ಅನ್ವಯ, ಮಲೆನಾಡಿನ ಕನಿಷ್ಠ ಶೇ 37ರಷ್ಟು ಅತಿಸೂಕ್ಷ್ಮ ಪ್ರದೇಶವನ್ನಾದರೂ ಸಂರಕ್ಷಿಸಬಲ್ಲ ಶಿಫಾರಸು
ಗಳಿವೆ. ಒಕ್ಕಲೆಬ್ಬಿಸುವ ಅಥವಾ ಕೃಷಿಕರನ್ನು ಕಂಗೆಡಿಸುವ ಅದ್ಯಾವ ಸಲಹೆಗಳೂ ಅದರಲ್ಲಿಲ್ಲ. ಸುಸ್ಥಿರ ಅಭಿವೃದ್ಧಿ ಕಾರ್ಯಗಳ ಆಯ್ಕೆಯ ತೀರ್ಮಾನವನ್ನು ಪಂಚಾಯಿತಿಗೇ ಮೀಸಲಿರಿಸಿದೆ. ಇಷ್ಟಾಗಿಯೂ ಈ ವರದಿಯನ್ನು ಸಹ ಕೈಬಿಡಲು ಕೆಲವರು ಒತ್ತಾಯಿಸುತ್ತಿದ್ದಾರೆ!

ಗಾಂಧಿವಾದಿ ಹಾಗೂ ಜನಕೇಂದ್ರಿತ ವಿಜ್ಞಾನದ ಪ್ರತಿಪಾದಕ ಗಾಡ್ಗೀಳರಂಥ ಶ್ರೇಷ್ಠ ಪರಿಸರ ವಿಜ್ಞಾನಿಗಳ ಪ್ರಾಮಾಣಿಕತೆ ಹಾಗೂ ಕ್ಷಮತೆಯನ್ನೂ ಸಂಶಯಿಸಲಾಗುತ್ತಿದೆ. ನೆಲ-ಜಲ-ಕಾಡಿನ ಕುರಿತು ಕಾಳಜಿ ವ್ಯಕ್ತಪಡಿಸುತ್ತಿರುವವರನ್ನೆಲ್ಲ ‘ಪರಿಸರವ್ಯಾಧಿಗಳು’ ಎಂದು ಬೆದರಿಕೆಯ ಧ್ವನಿಯಲ್ಲಿ ಹೀಯಾಳಿಸಲಾಗುತ್ತಿದೆ. ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ?

ಭೂರಚನೆ, ಮೇಲ್ಮೈ ಹಸಿರು ಕವಚ, ವಾತಾವರಣ- ಒಂದೊಂದೂ ವಿಶಿಷ್ಟವಾಗಿರುವ ಸಹ್ಯಾದ್ರಿಯ ಪರಿಸರವು ನಾಶವಾದರೆ, ಪುನಃ ರೂಪಿಸಲು ಸಾಧ್ಯವೇ ಇಲ್ಲ. ಅದರಿಂದ ಜನಜೀವನವು ಎದುರಿಸಬೇಕಾದ ಅಪಾಯಗಳಿಗೆ ಮಿತಿಯೂ ಇರಲಿಕ್ಕಿಲ್ಲ. ನದಿಗಳ ಜಲಮೂಲ, ಕೃಷಿಭೂಮಿಯ ಮಣ್ಣಿನಸಾರ, ಮಳೆಚಕ್ರ ಹಾಗೂ ವಾತಾವರಣದ ಸಮತೋಲನ ನಿರ್ವಹಿಸುವ ಮಳೆಕಾಡು, ಜೀವವೈವಿಧ್ಯಭರಿತ ನದಿಕಣಿವೆ, ಕೃಷಿಕರ ಬೆನ್ನೆಲುಬಾದ ಸಮುದಾಯಭೂಮಿ, ಒಳನಾಡು ಹಾಗೂ ಕರಾವಳಿಗೆ ನೀರುಣಿಸುವ ತೊರೆಗಳು- ಇವೆಲ್ಲವನ್ನೂ ಪೋಷಿಸುತ್ತಿರುವ ಸೂಕ್ಷ್ಮಸಹ್ಯಾದ್ರಿಯ ಹೃದಯಭಾಗಗಳನ್ನಾದರೂ ಸಂರಕ್ಷಿಸಬೇಕಿದೆ. ಗಾಡ್ಗೀಳ್ ವರದಿಯನ್ನು ಕೈಬಿಟ್ಟಾಗಿದೆ. ಕೊನೇಪಕ್ಷ ಕಸ್ತೂರಿರಂಗನ್ ವರದಿಯ ಅಂಶಗಳನ್ನಾದರೂ ಸ್ವೀಕರಿಸುವ ವಿವೇಕ ಆಳುವವರದ್ದಾಗಲಿ. ನೈಸರ್ಗಿಕ ಸಂಪನ್ಮೂಲ ಕಾಪಾಡುವುದು ನಾಗರಿಕರ ಮೂಲಕರ್ತವ್ಯವೆಂದು ಗುರುತಿಸಿರುವ ಸಂವಿಧಾನದ ಅನ್ವಯವೇ ರಚಿಸಿರುವ ಪರಿಸರ ಸಂರಕ್ಷಣಾ ಕಾನೂನಿನ ಮಹತ್ವವನ್ನು ಅರಿತರೆ ಅದು ಸಾಧ್ಯವಾಗಬಲ್ಲದು.

ಆಡಳಿತಸೂತ್ರದಲ್ಲಿ ಕೊಂಚವಾದರೂ ದೂರದೃಷ್ಟಿ, ವಿವೇಕ ಹಾಗೂ ಸರ್ವೋದಯ ತತ್ವಗಳಿಗೆ ಆದ್ಯತೆ ಇರದಿದ್ದರೆ, ಸಾಮೂಹಿಕ ಭವಿಷ್ಯ ಬರಡಾದೀತು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು