ಶುಕ್ರವಾರ, ಜನವರಿ 27, 2023
20 °C

ಅತಿ ಹೆಚ್ಚು ಅಡಿಕೆ ಬೆಳೆಯುವ ಕರ್ನಾಟಕದ ಮುಂದಿರುವ ಸವಾಲುಗಳಾದರೂ ಎಷ್ಟು?

ಡಾ. ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ರಾಜ್ಯದೆಲ್ಲೆಡೆ ವೇಗವಾಗಿ ಪಸರಿಸುತ್ತಿರುವ ಅಡಿಕೆಯ ಎಲೆಚುಕ್ಕೆ ರೋಗದ ತೀವ್ರತೆಯನ್ನು ಖುದ್ದು ಅರಿಯಲು, ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರ ತೋಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಭೇಟಿ ನೀಡಿದ್ದರು. ಹಲವಾರು ಸಮಸ್ಯೆಗಳಲ್ಲಿ ತೊಳಲಾಡುತ್ತಿರುವ ಅಡಿಕೆಗೆ, ನಾಡಿನ ದೊರೆಯೇ ತನ್ನ ಅಂಗಳಕ್ಕೆ ಬಂದಾಗ ಏನನ್ನಿಸಿರಬೇಕು?

ಸಸ್ಯಗಳಿಗೆ ಅದೆಂಥ ಭಾವನೆ ಎಂದು ಕೇಳಬೇಡಿ. ಜೀವಕೋಶಗಳಲ್ಲಿರುವ ಲವಣಗಳು ಸೃಜಿಸುವ ವಿದ್ಯುತ್ ತರಂಗಗಳು ಹಾಗೂ ಹಾರ್ಮೋನುಗಳ ರಾಸಾಯನಿಕ ಕ್ರಿಯೆಗಳ ಮೂಲಕವೇ ಸಂವೇದನೆಗಳನ್ನು ಗ್ರಹಿಸುವ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸುವ ವಿಶಿಷ್ಟ ಸಂವಹನ ಸಾಮರ್ಥ್ಯವು ಸಸ್ಯಗಳಿಗೆ ಇರುವುದು ವಿಜ್ಞಾನ
ಲೋಕಕ್ಕೆ ತಿಳಿದಿದೆ. ನಮಗೆ ಅರ್ಥವಾಗುವಂತೆ ಅದನ್ನು ಶಬ್ದಗಳಲ್ಲಿ ಪ್ರಕಟಿಸುವ ಗುಣ ಮಾತ್ರ ಅವಕ್ಕಿಲ್ಲ. ಹೀಗಾಗಿ, ಗಿಡಮರಗಳ ಸಮಸ್ಯೆಗಳ ಕುರಿತಂತೆಲ್ಲ ವನವಾಸಿಗಳೋ ಕೃಷಿಕರೋ ಅಥವಾ ತಜ್ಞರೋ ಹೇಳಬೇಕು.

ಇರಲಿ, ಸರ್ಕಾರಕ್ಕೆ ಜರೂರಾಗಿ ಹೇಳಲೇಬೇಕಿರುವ ಅಡಿಕೆಯ ಅಂಥ ನೋವುಗಳಾದರೂ ಯಾವುವು? ಮುಖ್ಯಮಂತ್ರಿಯವರು ಆಲಿಸಲೇಬೇಕಾದ ಹಲವು ಮಹತ್ವದ ಸಂಗತಿಗಳು ಅಡಿಕೆಯ ಬಳಿಯಲ್ಲಿರಲು ಕಾರಣವಿದೆ. ಜಗತ್ತಿನ ಒಟ್ಟು ಉತ್ಪಾದನೆಯ ಅರ್ಧಕ್ಕಿಂತಲೂ ಹೆಚ್ಚಿನ ಅಡಿಕೆ ಇಂದು ಭಾರತದಲ್ಲೇ ಬೆಳೆಯುತ್ತಿದೆ. ಇನ್ನು, ನಮ್ಮ ದೇಶದ ಒಟ್ಟು ಉತ್ಪಾದನೆಯ ಅರ್ಧಕ್ಕಿಂತಲೂ ಹೆಚ್ಚುಭಾಗ ಕರ್ನಾಟಕದ್ದೇ ಆಗಿದ್ದು, ವಾರ್ಷಿಕ ಆರು ಲಕ್ಷ ಟನ್ ಮೀರುತ್ತಿದೆ. ಅಂದರೆ ಜಗತ್ತಿನ ಅಡಿಕೆ ಉತ್ಪಾದನೆಯ ಕಾಲುಭಾಗವೇ ನಮ್ಮ ರಾಜ್ಯದ್ದು!

ಇಲ್ಲಿನ ನೂರಾನಲವತ್ತಕ್ಕೂ ಹೆಚ್ಚು ತಾಲ್ಲೂಕುಗಳಿಗೆ ಈ ವಾಣಿಜ್ಯಬೆಳೆ ಈಗಾಗಲೇ ಪಸರಿಸಿದೆ. ಬೆಂಗಳೂರು ನಗರವು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ಕೇಂದ್ರವಾಗಿ ಪ್ರಸಿದ್ಧಿಯಾಗಿದ್ದರೆ, ಕರುನಾಡಿನ ಕೃಷಿ ಭೂಮಿಯು ಜಗತ್ತಿನ ಪಾಲಿಗೆ ಅಡಿಕೆಯ ತವರಾಗುತ್ತಿದೆ! ರಾಜ್ಯದ ಆರ್ಥಿಕತೆ ಹಾಗೂ ಕೃಷಿಕರ ಭವಿಷ್ಯದ ದೃಷ್ಟಿಯಿಂದ ಗಮನಿಸಲೇಬೇಕಾದ ಸಂಗತಿಯಿದು. ಹೀಗಾಗಿ, ಅಡಿಕೆ ಕೃಷಿಯ ಸದ್ಯದ ಸವಾಲುಗಳ ಪರಿಹಾರಕ್ಕೆ ಮುಂದಾಗಲೇಬೇಕಿದೆ. ಅವುಗಳಲ್ಲಿ ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸೋಣ.

ಮೊದಲಿನದು, ಹೆಚ್ಚುತ್ತಿರುವ ರೋಗಬಾಧೆ ಕುರಿತು. ತೀರಾ ಇತ್ತೀಚಿನ ದಶಕಗಳವರೆಗೂ ಕೊಳೆರೋಗ ಬಿಟ್ಟು ಇನ್ನಾವುದೂ ಅಡಿಕೆಯನ್ನು ತೀವ್ರವಾಗಿ ಬಾಧಿಸಿದ್ದಿಲ್ಲ. ಆದರೆ, ಜಾಗತಿಕ ಹವಾಮಾನ ಬದಲಾವಣೆ ಹಾಗೂ ಸ್ಥಳೀಯ ನೆಲ- ಜಲ ನಾಶದ ಒಟ್ಟಾರೆ ಪರಿಣಾಮದಿಂದಾಗಿ, ರೋಗಗಳ ವೈವಿಧ್ಯ ಮತ್ತು ತೀವ್ರತೆ ಹೆಚ್ಚುತ್ತಿವೆ. ಈಗ ಸುದ್ದಿಯಲ್ಲಿರುವ ಎಲೆಚುಕ್ಕೆ ರೋಗ ಅಥವಾ ಹಳದಿರೋಗ ಈ ಗಂಭೀರ ಸಮಸ್ಯೆಯ ಮೇಲ್ಪದರ ಮಾತ್ರ. ಸೂಕ್ಷ್ಮಾಣುಜೀವಿ, ಪೋಷಕಾಂಶ ವ್ಯತ್ಯಯದಂತಹವೇ ನೆಪವಾಗಿ ಹತ್ತಾರು ಹೊಸ ರೋಗಗಳು ಈಗ ವಕ್ಕರಿಸುತ್ತಿವೆ.

ಕೃಷಿ ಪರಿಸರದ ಸಮತೋಲನವನ್ನು ಪುನರುಜ್ಜೀವ ಗೊಳಿಸುವ ‘ಸಂಯೋಜಿತ ರೋಗ ನಿರ್ವಹಣೆ’ (ಐ.ಪಿ.ಎಮ್) ತಂತ್ರದಿಂದ ಮಾತ್ರ ಇವನ್ನು ನಿಭಾಯಿಸಬಹುದು ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ. ಆದರೆ, ತಕ್ಷಣದ ಶಮನವನ್ನು ಮಾತ್ರ ಪರಿಗಣಿಸಿ ಮತ್ತಷ್ಟು ಕ್ರಿಮಿ ನಾಶಕಗಳ ಸಿಂಪಡಣೆಯ ಶಿಫಾರಸಿನಲ್ಲೇ ಮುಳುಗಿರುವ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಇಲಾಖೆಗೆ ವಿವೇಕದ ಕಿವಿಮಾತು ಯಾರು ಹೇಳಬೇಕು?

ಎರಡನೆಯದು, ಅಡಿಕೆ ಕೃಷಿಯು ಮಾಲಿನ್ಯ ಸಮಸ್ಯೆಗೆ ಸಿಲುಕುತ್ತಿರುವ ಸಂಗತಿ. ಬೋರ್ಡೊ ಮಿಶ್ರಣದಂಥ ಸುರಕ್ಷಿತ ಕ್ರಿಮಿನಾಶಕ ಬಿಟ್ಟು, ಕೃತಕ ರಾಸಾಯನಿಕ ಕ್ರಿಮಿನಾಶಕಗಳು ಅಡಿಕೆ ತೋಟವನ್ನು ಪ್ರವೇಶಿಸಿವೆ. ಉದಾಹರಣೆಗೆ, ಹೂವರಳುವ ಸಮಯದಲ್ಲಿ ಕೀಟಬಾಧೆ ನಿವಾರಿಸಲು ಸಿಂಪಡಿಸುತ್ತಿರುವ ಕ್ಲೋರ್‌ಪೈರಿಫೋಸ್
ತರಹದ ಕ್ರಿಮಿನಾಶಕ ಬಳಕೆಯಿಂದಾಗಿ, ತೋಟದ ಸುತ್ತಲ ಜೇನು ಸಂಕುಲಗಳೆಲ್ಲ ಬಲಿಯಾಗುತ್ತಿರುವುದು ಮಲೆನಾಡಿನಲ್ಲಿ ದಾಖಲಾಗಿದೆ. ಸಾವಯವ ಪದ್ಧತಿಯಲ್ಲಿಯೇ ವಿಕಾಸವಾಗಿದ್ದ ಪಾರಂಪರಿಕ ಅಡಿಕೆ ಕೃಷಿಯು
ವಾಣಿಜ್ಯೋದ್ಯಮದ ಲಾಭಕ್ಕೆ ಮರುಳಾಗಿ ವಿಷಮಯ ವಾಗುತ್ತಿದೆ. ಕೃಷಿಭೂಮಿ, ಜಲಮೂಲ ಮತ್ತು ಅವನ್ನು ಆಶ್ರಯಿಸಿದ ವೈವಿಧ್ಯಮಯ ಜೀವಸಂಕುಲಗಳ ಮೇಲೆ ಇವು ಬೀರುತ್ತಿರುವ ಮಾರಣಾಂತಿಕ ಪರಿಣಾಮಗಳ ಕುರಿತು ರೈತರು ಹಾಗೂ ವ್ಯಾಪಾರಸ್ಥರನ್ನು ಯಾರು ಎಚ್ಚರಿಸಬೇಕು?

ಮೂರನೆಯದು, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಜಾಗತಿಕ ನಿರ್ಧಾರದ ಬಗ್ಗೆ. ಭಾರತದ ಪಾರಂಪರಿಕ ಅಡಿಕೆ ಕೃಷಿ ಹಾಗೂ ವೈವಿಧ್ಯಮಯ ಬಳಕೆಯ ಹೊರತಾಗಿಯೂ ವಿಜ್ಞಾನ ಜಗತ್ತು ಈ ನಿರ್ಣಯಕ್ಕೆ ಬಂದಿದೆ. ಅಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಅರೆಕೋಲಿನ್ ರಾಸಾಯನಿಕದಿಂದಾಗಿ, ಅಡಿಕೆ ಸೇವನೆಯು ನಿಶ್ಚಿತವಾಗಿಯೂ ಕ್ಯಾನ್ಸರ್ ತರುತ್ತದೆ ಎಂದು ಆಧುನಿಕ ವೈದ್ಯಕೀಯ ವಿಜ್ಞಾನ ಸಾರುತ್ತಿದೆ. ಹೀಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಆಶ್ರಯದ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು (ಐಎಸಿಆರ್‌), ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಪ್ರಮುಖ ನೈಸರ್ಗಿಕ ವಸ್ತುಗಳ ಪಟ್ಟಿಯಲ್ಲಿಯೇ ಅಡಿಕೆಯನ್ನು ಸೇರಿಸಿಬಿಟ್ಟಿದೆ! ದೇಶದಲ್ಲಿ ನಡೆದಿರುವ ಸಂಶೋಧನೆಗಳು, ಸಮ್ಮೇಳನಗಳು, ರಾಜಕೀಯ ಒತ್ತಡ ಹಾಗೂ ಕಾನೂನು ಹೋರಾಟ- ಇವು ಯಾವುದಕ್ಕೂ ಈ ಜಾಗತಿಕ ಅಭಿಪ್ರಾಯವನ್ನು ಕದಲಿಸಲು ಈವರೆಗೂ ಸಾಧ್ಯವಾಗಿಲ್ಲ. ಅಡಿಕೆ ಸೇವನೆ ಅಪಾಯಕಾರಿಯಲ್ಲ ಎಂದು ಜಾಗತಿಕವಾಗಿ ನಿರೂಪಿಸಲು ದೇಶದ ಸಂಶೋಧನಾ ಕ್ಷೇತ್ರ ವಿಫಲವಾಗಿದೆ ತಾನೆ? ಈ ಹೊಣೆಗಾರಿಕೆಯನ್ನು ಯಾರು ಹೊರಬೇಕು?

ಕೊನೆಯದು, ರಾಜ್ಯದಾದ್ಯಂತ ವೇಗವಾಗಿ, ಅವೈಜ್ಞಾನಿಕವಾಗಿ ವಿಸ್ತರಣೆಯಾಗುತ್ತಿರುವ ಅಡಿಕೆ ಕೃಷಿ ಕುರಿತು. ಇತ್ತೀಚಿನವರೆಗೂ ಕರಾವಳಿ, ಮಲೆನಾಡಿನ ಕಾಡಿನ ಕಣಿವೆಗಳ ಸಣ್ಣರೈತರ ತೋಟಗಳಲ್ಲಿ ಮಿಶ್ರಬೆಳೆ
ಯಾಗಿದ್ದ ಅಡಿಕೆ, ಇಂದು ನಾಡಿನೆಲ್ಲೆಡೆ ವಾಣಿಜ್ಯಿಕ ನೆಡುತೋಪಾಗಿ ಹಬ್ಬುತ್ತಿದೆ. ಒಳನಾಡು, ಬಯಲು ಸೀಮೆಯಲ್ಲಿ ಕಾಲುವೆ ನೀರಾವರಿ, ಕೊಳವೆಬಾವಿ ಜಲಮೂಲವನ್ನಾಧರಿಸಿ ಬೆಳೆಯಲಾಗುತ್ತಿದೆ. ಇದರ ಪರಿಣಾಮವಾದರೂ ಏನು? ಒಂದೆಡೆ, ಭತ್ತ, ಗೋಧಿ, ಜೋಳ, ಸಿರಿಧಾನ್ಯ, ಹಣ್ಣು ಹಂಪಲಿನಂಥ ಆಹಾರಬೆಳೆಯ ಸಮೃದ್ಧ ಕೃಷಿಕ್ಷೇತ್ರ ಮಾಯವಾಗುತ್ತಿದೆ. ಇನ್ನೊಂದೆಡೆ, ಕಾಡು ಹಾಗೂ ಸಾಮೂಹಿಕ ಭೂಮಿ ಒತ್ತುವರಿ, ಅಂತರ್ಜಲದ ಮಿತಿಮೀರಿದ ಬಳಕೆಯಂತಹ ಪರಿಸರ ನಾಶದ ವಿದ್ಯಮಾನ. ಕೃಷಿ ವಿಸ್ತರಣೆಗೆ ಕನಿಷ್ಠ ಮಾರ್ಗಸೂಚಿಯನ್ನಾದರೂ ತೋರಬಲ್ಲ ‘ನೆಲಬಳಕೆ ನೀತಿ’ಯೇ ಇರದಿರುವುದರ ಪರಿಣಾಮವಿದು! ಇದಕ್ಕೆ ಯಾರು ಹೊಣೆ?

ಎಲ್ಲರೂ ಈ ವಾಣಿಜ್ಯ ಬೆಳೆಯ ಲಾಭದ ಹಿಂದೆಯೇ ಓಡತೊಡಗಿರುವುದರಿಂದ, ಅಡಿಕೆ ಕೃಷಿಯ ಮೂಲ ಭೂತ ಸಮಸ್ಯೆಗಳ ಕುರಿತು ಯಾರೂ ಸೊಲ್ಲೆತ್ತಿರುವಂತಿಲ್ಲ. ಸರ್ಕಾರ ರಚಿಸಿರುವ ಅಡಿಕೆ ಕಾರ್ಯಪಡೆ ಹಾಗೂ ಅಡಿಕೆ ಉದ್ಯಮದಲ್ಲಿ ತೊಡಗಿರುವ ರೈತರ ಸಹಕಾರಿ ಸಂಘಟನೆ ಗಳಾದರೂ ಈ ಕುರಿತು ಮುಕ್ತ ಚಿಂತನೆಗೆ ತೆರೆದುಕೊಳ್ಳಬೇಕಿತ್ತು. ಆದರೆ, ಅಡಿಕೆ ಆರ್ಥಿಕತೆಯ ಅಸಹಜ ಲಾಭಕ್ಕೆ ಎಲ್ಲರೂ ಮರುಳಾದಂತಿದೆ!

ಹಿಂದಿನ ಎರಡು ದಶಕಗಳ ನಿರ್ಲಕ್ಷ್ಯದಿಂದಾಗಿ ಈ ಸಂಕೀರ್ಣ ಸಮಸ್ಯೆಗಳು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ನಿಕಟ ಭವಿಷ್ಯದಲ್ಲಿಯೇ ಸ್ಫೋಟಗೊಳ್ಳುವ ಸೂಚನೆಗಳು ಈಗ ಗೋಚರಿಸುತ್ತಿವೆ. ಸರ್ಕಾರ ಈಗ ಲಾದರೂ ಇವನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಅಂದಹಾಗೆ, ‘ಡೀಪ್ ಲರ್ನಿಂಗ್’ ಎಂದು ಕರೆಯ ಲಾಗುವ ಕೃತಕ ಬುದ್ಧಿಮತ್ತೆ ಆಧಾರಿತ ‘ಯಂತ್ರಗಳ ಕಲಿಕೆ’ ಕುರಿತ ಆಧುನಿಕ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳ ಬಗೆಗೆ ತಮಗೆ ತಿಳಿದಿರಬಹುದು. ಅದನ್ನು ಬಳಸಿಕೊಂಡು ಸಸ್ಯಗಳಲ್ಲಿನ ಸೂಕ್ಷ್ಮ ಸಂವೇದನೆಗಳನ್ನು ಮನುಷ್ಯರು ಅರ್ಥೈಸುವಂತೆ ಶಬ್ದಗಳಾಗಿ ಪರಿವರ್ತಿಸು
ವಂಥ ವಿಶಿಷ್ಟ ಸಂಶೋಧನೆಗಳೆಲ್ಲ ವಿಜ್ಞಾನಲೋಕದಲ್ಲಿ ಇಂದು ಸಾಗುತ್ತಿವೆ. ಇನ್ನೇನು, ಕೆಲವೇ ದಶಕಗಳಲ್ಲಿ ಗಿಡಮರಗಳ ಅಂತರಂಗವನ್ನು ಶಬ್ದ-ಧ್ವನಿಗಳಲ್ಲಿ ಪ್ರಚುರಗೊಳಿಸಬಲ್ಲ ಮಿನಿಯಂತ್ರಗಳೂ ಮಾರುಕಟ್ಟೆಗೆ ಬಂದಾವು! ಆದರೆ, ತನ್ನ ಸಮಸ್ಯೆಗಳನ್ನೆಲ್ಲ ನಿವೇದಿಸಲು ಆವರೆಗೆ ಕಾಯುವಷ್ಟು ಸಮಯ ಅಡಿಕೆಗೆ ಉಳಿದಿಲ್ಲ.

ಬಿಗಡಾಯಿಸುತ್ತಿರುವ ಅಡಿಕೆ ಕೃಷಿಯ ಪರಿಸ್ಥಿತಿ ಕುರಿತ ಅಧ್ಯಯನಗಳು ಹಾಗೂ ತಜ್ಞರ ಅಭಿಪ್ರಾಯ
ಗಳನ್ನು ಸರ್ಕಾರವು ತ್ವರಿತವಾಗಿ ಆಲಿಸಲೇಬೇಕಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು