ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ವಿಶ್ಲೇಷಣೆ: ಶಿಕ್ಷಣ ನೀತಿ ಮತ್ತು ವಾಸ್ತವದ ಅರಿವು

ತಾತ್ವಿಕವಾಗಿ ಮಹತ್ವದ್ದಾಗಿರುವ ಈ ನೀತಿಯನ್ನು ಕ್ರಿಯೆಗೆ ಇಳಿಸಲು ನಮ್ಮ ಸಿದ್ಧತೆಗಳೇನು?
Last Updated 14 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ನೂತನ ಶಿಕ್ಷಣ ನೀತಿ ಜಾರಿಗೆ ಬರುವ ಸಂದರ್ಭವು ಜಗತ್ತಿನ ಆರ್ಥಿಕತೆಯೇ ಹೊರಳು ದಾರಿಯಲ್ಲಿ ಮಹತ್ವದ ತಿರುವು ಪಡೆಯುವ ಹಂತದಲ್ಲಿದೆ. ಆ ಹಂತ ಬೇರೆ ಯಾವುದೂ ಅಲ್ಲ; ಭವಿಷ್ಯದ ಬದುಕು ಜಾತಿ, ಮತ-ಧರ್ಮ, ಜನಾಂಗ, ಭಾಷೆ ಈ ಯಾವುದೂ ಆಗಿರುವುದಿಲ್ಲ. ದಕ್ಷತೆ ಇದ್ದವನು ಯಶಸ್ಸು ಪಡೆಯಲಿದ್ದಾನೆ ಎನ್ನುವುದೇ ಆಗಿರುತ್ತದೆ. ಪ್ರತಿಭೆ ಮತ್ತು ಪರಿಶ್ರಮ ಮಾತ್ರವೇ ಮುಖ್ಯವಾಗುತ್ತದೆ. ಏಕೆಂದರೆ ಪ್ರತಿಭೆ ಮತ್ತು ಪರಿಶ್ರಮವನ್ನು ನಿರಾಕರಣೆ ಮಾಡಲು ಯಾವ ಕಾಲದಲ್ಲಿ ಯಾವ ವ್ಯವಸ್ಥೆಗೂ
ಸಾಧ್ಯವಾಗುವುದಿಲ್ಲ.

‘ಉತ್ತೀರ್ಣಗೊಳ್ಳುವುದು- ಉತ್ತೀರ್ಣಗೊಳಿಸುವುದು’ ಈ ರೂಪದ ಚರ್ಚೆಗಳು ಚರ್ಚೆಗಳಾಗಿಯೇ ಉಳಿಯುತ್ತವೆ. ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಕೂಡ ಆ ಅಂಕಗಳ ಕಾರಣಕ್ಕಾಗಿ ಇಡೀ ಜೀವನದಲ್ಲಿ ಪ್ರಸ್ತುತರಾಗಿ ಉಳಿಯಲಾರರು. ಅವರ ಕಾರ್ಯದಕ್ಷತೆ ಏನು ಎನ್ನುವುದಷ್ಟೇ ಮಹತ್ವವನ್ನು ಪಡೆಯುತ್ತದೆ. ಆದ್ದರಿಂದ ಹೊರಳು ದಾರಿಯಲ್ಲಿ ಸಾಗಲಿರುವ ಜಗತ್ತಿನಲ್ಲಿ ತನ್ನ ಮಹತ್ವವನ್ನು ಉಳಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಸಾಮರ್ಥ್ಯವಿರುವ ಶಿಕ್ಷಕರ ಅಗತ್ಯ ಖಂಡಿತವಾಗಿಯೂ ಇದೆ. ಈ ನೆಲೆಯಲ್ಲಿ ನೂತನ ಶಿಕ್ಷಣ ನೀತಿಯು ಶಿಕ್ಷಕರ ಸಾಮರ್ಥ್ಯ ವರ್ಧನೆಗಾಗಿ ಸೂಚಿಸಿರುವ ಕ್ರಮಗಳು, ಶಿಕ್ಷಕರ ಮೌಲ್ಯಮಾಪನ, ಶಿಕ್ಷಣ ಸಂಸ್ಥೆಯ ಮೌಲ್ಯಮಾಪನ- ಇವೆಲ್ಲವೂ ತುಂಬಾ ಅಗತ್ಯ ಉಳ್ಳದ್ದಾಗಿವೆ.

ನೂತನ ಶಿಕ್ಷಣ ನೀತಿಗೆ ತಾತ್ವಿಕ ಮಹತ್ವ ಬಹಳವಿದೆ. ಆದರೆ ತಾತ್ವಿಕವಾಗಿ ಮಹತ್ವದ್ದಾದುದನ್ನು ವಾಸ್ತವೀಕರಣ
ಗೊಳಿಸಲು ನಮ್ಮ ಬಳಿ ಇರುವ ಸಿದ್ಧತೆಗಳೇನು ಎನ್ನುವ ಚರ್ಚೆ ಪ್ರಸ್ತುತವಾಗಿದೆ. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಾಗ ಸಮಾಜ ಈಗಿನಷ್ಟು ಸಂಕೀರ್ಣವಾಗಿರಲಿಲ್ಲ. ಶೈಕ್ಷಣಿಕ ರಚನೆ ಕೂಡ ಈಗಿರುವುದಕ್ಕಿಂತ ಸರಳವಿತ್ತು. ಏನೂ ಇಲ್ಲದಿರುವಲ್ಲಿ ಹೊಸದನ್ನು ಕಟ್ಟಿದಷ್ಟು ಸುಲಭವಾಗಿ, ಜಟಿಲವಾದದ್ದನ್ನು ಸರಿಪಡಿಸಿಕೊಂಡು ಹೊಸದನ್ನು ಅಳವಡಿಸಲು ಆಗುವುದಿಲ್ಲ.

ವರ್ತಮಾನದ ಶಿಕ್ಷಣ ತುಂಬ ಜಟಿಲವಾದ ರಚನೆಯಾಗಿ ಮಾರ್ಪಟ್ಟಿದೆ. ‘ಎಲ್ಲರಿಗೂ ಶಿಕ್ಷಣ- ದುರ್ಬಲರಿಗೇ ಶಿಕ್ಷಣ- ಪ್ರತಿಭಾವಂತರಿಗಾಗಿ ಶಿಕ್ಷಣ’ ಎಂಬಿತ್ಯಾದಿ ಘೋಷಣೆಗಳು ಶಿಕ್ಷಣದ ಜಟಿಲತೆಯ ಸಾಂಕೇತಿಕ ರೂಪಗಳಾಗಿವೆ. ಎಲ್ಲರಿಗೂ ಶಿಕ್ಷಣ ಎಂದ ಮೇಲೆ ಅಲ್ಲಿ ದುರ್ಬಲರು ಮತ್ತು ಪ್ರತಿಭಾವಂತರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ದುರ್ಬಲರಿಗೇ ಶಿಕ್ಷಣ ಎನ್ನುವುದು ಆದ್ಯತೆಯಾದರೆ ಪ್ರತಿಭಾವಂತರಿಗೆ ಆದ್ಯತೆ ಉಳಿಯುವುದಿಲ್ಲ. ಪ್ರತಿಭಾವಂತರಿಗೇ ಆದ್ಯತೆಯಾದರೆ ಉಳಿದವರ ಶಿಕ್ಷಣಕ್ಕೆ ಮಹತ್ವ ಕಡಿಮೆಯಾಗುತ್ತದೆ. ಪ್ರತಿಭೆ ಮತ್ತು ದೌರ್ಬಲ್ಯವನ್ನು ಶೈಕ್ಷಣಿಕವಾಗಿ ನಿರ್ಧರಿಸುವ ಮಾನದಂಡದ ವಿಚಾರ ಆಮೇಲಿನದು. ಆದರೆ ಶಿಕ್ಷಣವನ್ನು ಬಹುಕೋನೀಯವಾಗಿ ವಿವರಿಸಿಕೊಂಡಿರುವ ರೀತಿಯೇ ಹೇಗೆ ಜಟಿಲತೆಯನ್ನು ನಿರ್ಮಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಈ ಅಂಶವನ್ನು ಪ್ರಸ್ತಾಪಿಸಿದ್ದು.

ಉದಾಹರಣೆಯಾಗಿ ಹೇಳಿದ ರೀತಿಯ ವಿಚಾರಗಳು ಬಹಳ ಇವೆ. ಮೂಲಭೂತವಾಗಿ ನಮ್ಮ ಧ್ಯೇಯದ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ. ಇದು ಯಾಕೆ ಅಗತ್ಯ? ನೂತನ ಶಿಕ್ಷಣ ನೀತಿಯು ಶಿಕ್ಷಣ ಸಂಸ್ಥೆಯ ಮೌಲ್ಯಮಾಪನದ ಬಗ್ಗೆ ಹೇಳುತ್ತದೆ. ಮೌಲ್ಯ‌ಮಾಪನಕ್ಕೆ ರೂಪಿಸುವ ಮಾನದಂಡಗಳ ಸಿದ್ಧತೆ ಬೇಕಾಗುತ್ತದೆ. ಏಕೆಂದರೆ, ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನೇ ತೆಗೆದುಕೊಳ್ಳುವ ಶಾಲೆಗಳಿಗೂ ಶೇ 35ರಿಂದ 55ರಷ್ಟು ಅಂಕ ಪಡೆದ ಮಕ್ಕಳನ್ನು ತೆಗೆದುಕೊಳ್ಳುವ ಶಾಲೆಗಳಿಗೂ ಅಂಕವನ್ನು ಮಾನದಂಡವಾಗಿ ಪರಿಗಣಿಸುವಾಗ ಒಂದೇ ರೀತಿಯ ಮಾನದಂಡವನ್ನು ಅಳವಡಿಸಲು ಬರುವುದಿಲ್ಲ.

ಜಾಗತೀಕರಣದ ತರುವಾಯ ನಡೆದ ಶೈಕ್ಷಣಿಕ ಬೆಳವಣಿಗೆಗಳು ಬಹುಮಟ್ಟಿಗೆ ಶಾಲಾ ಪದ್ಧತಿಯನ್ನು ವರ್ಗ ಆಧಾರಿತವಾಗಿ ಮರು ನಿರೂಪಿಸಿವೆ. ಇದರಿಂದ ಆಗುವ ಶೈಕ್ಷಣಿಕ ಪರಿಣಾಮವು ಸಾಮಾಜಿಕ ಸಂಬಂಧಗಳು ಹಾಗೂ ಸೃಜನಶೀಲತೆಯ ದುರ್ಬಲೀಕರಣ. ಶಾಲಾ ಪದ್ಧತಿಯಲ್ಲಿ ‘ವರ್ಗ’ದ ಪರಿಕಲ್ಪನೆ ಬಂದಾಗ ಸಮಾಜದ ಎಲ್ಲ ವರ್ಗಗಳ ಮಕ್ಕಳು ಒಡನಾಡಿಗಳಾಗಲು ಅವಕಾಶ ಇರುವುದಿಲ್ಲ. ಆಗ ಸಮಾಜದ ವಿವಿಧ ವರ್ಗಗಳೊಂದಿಗಿನ ಸಂಬಂಧ ಮಕ್ಕಳಲ್ಲಿ ದುರ್ಬಲವಾಗುತ್ತದೆ. ಅಲ್ಲದೆ, ವಿವಿಧ ವರ್ಗಗಳ ಪರಸ್ಪರ ಅನುಭವಗಳ ಹಂಚಿಕೆ ಹೊರಟು ಹೋಗುತ್ತದೆ. ಸೃಜನಶೀಲತೆಯ ವಿಕಾಸ ನಡೆಯುವುದು ವಿವಿಧ ರೀತಿಯ ಅನುಭವಗಳ ಅರಿವಿನ ಮೂಲಕವಾಗಿರುತ್ತದೆ. ಹೀಗಿರುವಾಗ ಅನುಭವಗಳನ್ನು ಅಳೆಯುವ ಮಾನದಂಡವನ್ನು ರೂಪಿಸುವುದು ಸವಾಲಿನ ಕೆಲಸ.

ಶಾಲೆಗಳ ಮೂಲ ಸೌಕರ್ಯಗಳಲ್ಲಿಯೂ ನಮ್ಮಲ್ಲಿ ಬಹಳ ವ್ಯತ್ಯಾಸಗಳಿವೆ. ಕಲಿಕಾ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಹೊರಟಾಗ ಬಹುಮಟ್ಟಿಗೆ ಸಮಾನವಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ವ್ಯವಸ್ಥಿತ ಪ್ರಯೋಗಾಲಯವಿದ್ದು, ಆ ಪ್ರಯೋಗಾಲಯವು ಸಮರ್ಪಕವಾಗಿ ಬಳಕೆಯೂ ಆದಾಗ ಉಂಟಾಗುವ ಕಲಿಕಾ ಪರಿಣಾಮಕ್ಕೂ ಪ್ರಯೋಗಾಲಯವಿಲ್ಲದೆ ಅಥವಾ ಇದ್ದರೂ ಬಳಸಲು ಸಾಧ್ಯವಾಗದೆ ಇರುವಲ್ಲಿ ಉಂಟಾಗುವ ಕಲಿಕಾ ಪರಿಣಾಮಕ್ಕೂ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಆಗ ಮೂಲ ಸೌಕರ್ಯಗಳ ಒದಗಣೆಯಲ್ಲಿ ಸಮಾನತೆಯನ್ನು ತರಬೇಕಾಗುತ್ತದೆ. ಅದಕ್ಕೊಂದು ಮಾನದಂಡ ಬೇಕು. ಇಷ್ಟು ಮೂಲ ಸೌಕರ್ಯಗಳು ಎಲ್ಲ ಶಾಲೆಗಳಲ್ಲಿ ಇರಬೇಕು ಎನ್ನುವುದು ಒಂದು ಮಾನದಂಡವಾದರೆ, ಅದಕ್ಕಿಂತ ಹೆಚ್ಚಿನದನ್ನು ಒದಗಿಸಿದಾಗ ಉಂಟಾಗುವ ಕಲಿಕಾ ಪರಿಣಾಮಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದೇ ಇರಬೇಕಾದದ್ದು ಮತ್ತೊಂದು ಅಗತ್ಯವಾಗಿರುತ್ತದೆ.

ಶಿಕ್ಷಕರ ಗುಣಮಟ್ಟದ ಸುಧಾರಣೆಯ ಅನೇಕ ಸಾರ್ಥಕ ಕಾರ್ಯಕ್ರಮಗಳು ಶಿಕ್ಷಕರ ವಿಷಯಜ್ಞಾನವನ್ನು ಪರೀಕ್ಷಿಸುತ್ತಾ ಬಂದಿವೆ. ಇದು ಶಿಕ್ಷಕರ ಅರ್ಹತೆಯ ಒಂದು ಭಾಗವಷ್ಟೇ ಆಯಿತು. ಆದರೆ ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗ್ಗೆ ಇರುವ ಬದ್ಧತೆ, ಶಿಕ್ಷಕರಲ್ಲಿನ ಜೀವನ ಮೌಲ್ಯಗಳ ಪ್ರಜ್ಞೆ ಮತ್ತು ಬದ್ಧತೆ, ಶಿಕ್ಷಕರ ವರ್ತನೆ ಮತ್ತು ನಡವಳಿಕೆಯಂತಹ ಸಂಗತಿಗಳು ವಿಷಯ ತಜ್ಞತೆಗಿಂತಲೂ ಹೆಚ್ಚು ಶೈಕ್ಷಣಿಕ ಮಹತ್ವವನ್ನು ಹೊಂದಿವೆ. ಆದರೆ ಶಿಕ್ಷಕರನ್ನು ಈ ದಿಸೆಯಲ್ಲಿ ವಿಶ್ಲೇಷಿಸುವ ವ್ಯವಸ್ಥೆಯು ನಿಯಂತ್ರಣಾಧಿಕಾರಿಯ ನಿಯಮಾವಳಿ ಆಧಾರಿತ ವ್ಯವಸ್ಥೆಗಿಂತ ಭಿನ್ನವಾದ ಶೈಕ್ಷಣಿಕ ವ್ಯವಸ್ಥೆಯಾಗಿ ಜಾರಿಯಲ್ಲಿ ಇಲ್ಲ.

ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ, ಅನುದಾನಿತ, ಅನುದಾನರಹಿತ ಮುಂತಾದ ಬಹುಕೋನೀಯ ಶೈಕ್ಷಣಿಕ ಘಟಕಗಳಲ್ಲಿ ಕೆಲಸ ಮಾಡುವ ಶಿಕ್ಷಕರ ನಿಯಂತ್ರಣಾಧಿಕಾರವೂ ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆ ಬೇರೆಯಾಗಿರುತ್ತದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿಯಾಗಿರುವ ಶಿಕ್ಷಕರು ಯಾವ ಸಾಮಾನ್ಯ ಧೋರಣೆಯ ಲಯದಲ್ಲಿ ಒಂದಾಗಬಲ್ಲರು ಎಂಬುದನ್ನು ಕಂಡುಕೊಳ್ಳದೆ, ಸಾರ್ವತ್ರಿಕವಾಗಿ ಶಿಕ್ಷಕರ ಸಾಮರ್ಥ್ಯವರ್ಧನೆ ಎಂಬ ಪರಿಕಲ್ಪನೆಯು ವಾಸ್ತವಿಕವಾಗಲಾರದು.

ನೂತನ ನೀತಿಯ ಅತ್ಯಂತ ಅಭಿನಂದನಾರ್ಹ ವಿಷಯವೆಂದರೆ, ಶಿಕ್ಷಕರನ್ನು ಬೋಧನೇತರ ಚಟುವಟಿಕೆಗೆ ತೊಡಗಿಸುವುದನ್ನು ನಿಲ್ಲಿಸಬೇಕೆಂದು ಹೇಳಿರುವುದು. ಸರ್ವ ಶಿಕ್ಷಣ ಅಭಿಯಾನ ಜಾರಿಯಾದ ನಂತರ ಹೆಚ್ಚಿದ ಶಿಕ್ಷಕರ ಕಾರ್ಯಒತ್ತಡವನ್ನು ಪರಿಗಣಿಸಿದ ಆ ನಂತರದ ಎಲ್ಲ ಶೈಕ್ಷಣಿಕ ವರದಿಗಳೂ ಶಿಕ್ಷಕರನ್ನು ಬೋಧನೇತರ ಕಾರ್ಯಗಳಿಗೆ ತೊಡಗಿಸಬಾರದು ಎಂಬ ಅಭಿನಂದನಾರ್ಹ ವಿಷಯವನ್ನೇ ಹೇಳಿವೆ. ಆದರೆ ವಾಸ್ತವದಲ್ಲಿ ಸಾಧ್ಯ ಆಗಿದೆಯೇ? ಅದು ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಬೋಧನೇತರ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಪ್ರತ್ಯೇಕವಾದ ಆಡಳಿತಾತ್ಮಕ ಸಿಬ್ಬಂದಿಯ ನೇಮಕ ಆಗಬೇಕಾಗುತ್ತದೆ. ಇಲ್ಲವಾದರೆ ಶಿಕ್ಷಕರೇ ಆ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಈ ವಿಚಾರದಲ್ಲಿ ನೂತನ ನೀತಿ ಒಂದು ಸಣ್ಣ ಸಾಧ್ಯತೆಯನ್ನು ಹೇಳಿದೆ. ಶಾಲಾ
ಸಂಕೀರ್ಣಗಳನ್ನು ರಚಿಸಬೇಕೆಂದು ಹೇಳಿದೆ. ಶಾಲಾ ಸಂಕೀರ್ಣಗಳಾದಾಗ ಒಂದು ಶಾಲೆಯಲ್ಲಿ ಶಿಕ್ಷಕರ ಕೊರತೆಯಾದಾಗ ಮತ್ತೊಂದು ಶಾಲೆಯಿಂದ ಶಿಕ್ಷಕರನ್ನು ಕರೆಸಿಕೊಳ್ಳಲು ಅವಕಾಶವಿದೆ.

ಅಂದರೆ ನೂತನ ಶಿಕ್ಷಣ ನೀತಿ ತುಂಬಾ ಚೆನ್ನಾಗಿದೆ. ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ಭಾರತೀಯ ಶಿಕ್ಷಣ ವ್ಯವಸ್ಥೆಯೇ ಜಾಗತಿಕ ಗುರುತಿಸುವಿಕೆಯನ್ನು ಪಡೆಯಬಲ್ಲಷ್ಟು ನೀತಿಯು ತಾತ್ವಿಕವಾಗಿ ಸುಂದರವಾಗಿದೆ. ಆದರೆ ಅದು ವಾಸ್ತವಿಕವಾಗಬೇಕಾದರೆ
ವಾಸ್ತವದ ಅರಿವಿನೊಂದಿಗೆ ಸೂಕ್ತ ಸಿದ್ಧತೆಗಳು ಆಗಬೇಕಾಗಿವೆ. ಈ ನೆಲೆಯಲ್ಲಿ ಹೆಚ್ಚು ಚರ್ಚೆ; ಚರ್ಚೆಯ ನಂತರ ಸಿದ್ಧತೆಯ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT