ಗುರುವಾರ , ಸೆಪ್ಟೆಂಬರ್ 23, 2021
21 °C
ಒಕ್ಕೂಟ ನೀತಿಗೆ ವಿರುದ್ಧದ ನಡೆ, ಖಾಸಗೀಕರಣಕ್ಕೆ ಒತ್ತು ಕೊಡುವ ಒಳ ಆಶಯ

ಶಿಕ್ಷಣ ನೀತಿ: ಒಂದು ಚಿಂತನೆ

ಎಸ್.ಜಿ.ಸಿದ್ದರಾಮಯ್ಯ Updated:

ಅಕ್ಷರ ಗಾತ್ರ : | |

Prajavani

ನಮ್ಮದು ಒಕ್ಕೂಟಗಳ ಭಾರತ, ಬಹುತ್ವ ಭಾರತ, ಬಹುಭಾಷಿಕ ಭಾರತ. ನಾವು ಯಾವ ಭಾಷೆಯನ್ನೂ ದ್ವೇಷಿಸುವುದಿಲ್ಲ. ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಲಿಪಿಯಿರಲಿ ಅಥವಾ ಇಲ್ಲದಿರಲಿ ಎಲ್ಲ ಭಾಷೆಗಳಿಗೂ, ಆಯಾ ಭಾಷಾ ಸಮುದಾಯಗಳಿಗೂ ಗೌರವ ತೋರಬೇಕಾದುದು ನಮ್ಮ ಮೂಲಭೂತ ಕರ್ತವ್ಯ.

ಯಾವುದೇ ಭಾಷೆಯ ಆಕ್ರಮಣವನ್ನು, ಬಲವಂತದ ಹೇರುವಿಕೆಯನ್ನು ನಾವು ಸಹಿಸುವುದಿಲ್ಲ. ಯಾರೂ ಸಹಿಸಬೇಕಾದ ಅಗತ್ಯವಿಲ್ಲ. ಈ ಕಾರಣದಿಂದ ಹಿಂದಿ ಹೇರುವಿಕೆಯನ್ನು ನಾವು ವಿರೋಧಿಸುತ್ತೇವೆ. ಯಾರು ಎಷ್ಟೇ ಭಾಷೆಯನ್ನು ಕಲಿಯುವುದು ಅವರ ಇಚ್ಛಾಶಕ್ತಿಗೆ ಬಿಟ್ಟ ವಿಚಾರ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ವಲಸೆ ಅನಿವಾರ್ಯ. ಆದರೆ ವಲಸೆಯೆಂಬುದು ವೈಜ್ಞಾನಿಕವಾದ, ಆರೋಗ್ಯಕರವಾದ ಸಹಬಾಳ್ವೆಯ ತತ್ವವಾದರೆ ಒಪ್ಪೋಣ. ಸ್ಥಳೀಯರನ್ನು ಕಡೆಗಣಿಸಿದ ದಬ್ಬಾಳಿಕೆಯ ವಲಸೆಯಾದರೆ ಅದನ್ನು ವಿರೋಧಿಸಲೇಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಗಳ ಅರಿವಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಂದು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮುನ್ನೋಟದಲ್ಲಿ ಹೇಳಿರುವಂತೆ ಈ ನೀತಿಯು ‘ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುತ್ತದೆ’– ಈ ಉದ್ದೇಶ ಅದ್ಭುತವಾದುದು. ಸಮಾನತೆ, ಸಾಕ್ಷರತೆ, ಸುಸ್ಥಿರ ಬಾಳ್ವೆಯ ಕನಸು ಕಾಣುವ ನಾಗರಿಕನ ಆಶಯಗಳಿಗೆ ಅರ್ಥಪೂರ್ಣ ವಾತಾವರಣ ಕಲ್ಪಿಸುವ ಉದ್ದೇಶದ ಮುನ್ನೋಟ ಇದಾಗಿದೆ. ಹೆಚ್ಚು ವೈಜ್ಞಾನಿಕ, ವೈಚಾರಿಕ ಮುನ್ನೋಟದಿಂದ ರೂಪಿಸಲಾಗಿರುವ ನೀತಿಯ ಮುಖ್ಯಾಂಶದಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ ಒಂದೊಂದನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಪ್ರಾಯೋಗಿಕವಾಗಿ ಒಕ್ಕೂಟ ನೀತಿಗೆ ವಿರುದ್ಧವಾದ ನಡೆಗಳಿರುವುದು ಗೋಚರವಾಗುತ್ತದೆ; ಖಾಸಗೀಕರಣಕ್ಕೆ ಹೆಚ್ಚು ಒತ್ತು ಕೊಡುವ ಒಳ ಆಶಯದಿಂದ ಇವು ಕೂಡಿವೆ.

ನಮ್ಮ ಸಂವಿಧಾನದಲ್ಲಿ ಶಿಕ್ಷಣದ ಕುರಿತು ಇರುವ ರಾಜ್ಯ ಮತ್ತು ಕೇಂದ್ರಗಳ ಸಹಭಾಗಿತ್ವದ ಉದ್ದೇಶವನ್ನೇ ವಿಫಲಗೊಳಿಸುವ ಸಾಧ್ಯತೆಗಳು ಢಾಳಾಗಿ ಕಾಣುತ್ತವೆ. ವಿಕೇಂದ್ರೀಕರಣಕ್ಕಿಂತ ಕೇಂದ್ರೀಕೃತ ಆಧಿಪತ್ಯದ ನೀತಿಯ ಒತ್ತಡ ಇಲ್ಲಿದ್ದಂತಿದೆ. ಆರಂಭದಲ್ಲಿ ಪ್ರಸ್ತಾಪಿಸಿರುವ ಶಾಲಾ ಶಿಕ್ಷಣ ಮತ್ತು ಆನಂತರ ಪ್ರಸ್ತಾಪಿಸಿರುವ ಉನ್ನತ ಶಿಕ್ಷಣದ ಭಾಗಗಳ ಕಡೆ ಗಮನಹರಿಸಿದರೆ- ‘ಸಮಾನ ಹಾಗೂ ಎಲ್ಲರನ್ನೂ ಒಳಗೊಂಡ ಶಿಕ್ಷಣ, ಯಾವುದೇ ಮಗು ತನ್ನ ಹುಟ್ಟು, ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಗಳ ಕಾರಣದಿಂದಾಗಿ ಕಲಿಕೆಯ ಅವಕಾಶದಿಂದ ವಂಚಿತವಾಗದಿರಲು ನೀತಿಯು ಅನೇಕ ಕ್ರಮಗಳನ್ನು ಸೂಚಿಸುತ್ತದೆ’ ಎಂದು ಹೇಳುತ್ತದೆ. ಈ ಅಂಶದ ಪ್ರಕಾರ, ಇಡೀ ದೇಶದಲ್ಲಿ ಈ ಆಶಯವನ್ನು ಜಾರಿಗೊಳಿಸಬೇಕಾದರೆ ಅದು ಕಡ್ಡಾಯ ಶಿಕ್ಷಣ ಮತ್ತು ಉಚಿತ ಶಿಕ್ಷಣ ಎಂಬ ಉದ್ದೇಶಿತ ಕಾರ್ಯಯೋಜನೆಯ ಮುಖೇನ ಮುಂದುವರಿಯಬೇಕಾಗುತ್ತದೆ. ಇದು ಜಾರಿಗೆ ಬರಬೇಕಾದರೆ ಇಡೀ ಶಿಕ್ಷಣದ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಬೇಕಾಗುತ್ತದೆ. ಖಾಸಗೀಕರಣದ ಶಿಕ್ಷಣದಿಂದ ಅದು ಸಾಧ್ಯವಾಗುವುದಿಲ್ಲ.

ಸಮಾನ ಶಿಕ್ಷಣದ ಆಶಯ ಜಾರಿಯಾಗಬೇಕಾದರೆ, ಮಗು ವಾಸಿಸುವ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಶಾಲೆಗೆ ಮಾತ್ರ ಅದನ್ನು ಸೇರಿಸಬೇಕು. ಜಿಲ್ಲಾಧಿಕಾರಿಯ ಮಗುವಾಗಲಿ, ಮುಖ್ಯಮಂತ್ರಿಯ ಮಗುವಾಗಲಿ, ಕೊಳೆಗೇರಿಯಲ್ಲಿರುವ ಕೂಲಿಕಾರ್ಮಿಕರ ಮಕ್ಕಳಾಗಲಿ ಎಲ್ಲರೂ ಈ ನಿಯಮಕ್ಕೆ ಬದ್ಧರಾಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಆಗ ಮಾತ್ರ ಗುಣಮಟ್ಟದ ಶಿಕ್ಷಣವೆಂಬುದು ಸಮಾನವಾಗುವ ಸಾಧ್ಯತೆ ಇರುತ್ತದೆ. ಅದುಬಿಟ್ಟು ಉಳ್ಳವರಿಗೆ ಖಾಸಗಿ ಶಿಕ್ಷಣ ಶಾಲೆಗಳು, ಬಡವರಿಗೆ ಸರ್ಕಾರಿ ಶಾಲೆಗಳು ಎಂಬ ನೀತಿ ಜಾರಿಯಾದರೆ ಈ ಆಶಯಕ್ಕೆ ಯಾವ ಅರ್ಥವೂ ಇರುವುದಿಲ್ಲ.

ಆದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಅಗತ್ಯವಿದೆ. ಅದಿಲ್ಲದೆ ದಿನದಿಂದ ದಿನಕ್ಕೆ ಖಾಸಗೀಕರಣವನ್ನು ಹೆಚ್ಚು ಬೆಂಬಲಿಸುತ್ತಿರುವ ಆಡಳಿತ ನೀತಿಯು ಅಸಮಾನತೆಯನ್ನು ಹೆಚ್ಚಿಸುತ್ತದೆ. ಶಿಕ್ಷಣವನ್ನುವ್ಯಾಪಾರೀಕರಣಗೊಳಿಸುತ್ತದೆ. ಇದರಿಂದ ಈ ‘ಎಲ್ಲರನ್ನೂ ಒಳಗೊಂಡ ಸಮಾನ ಶಿಕ್ಷಣ’ ಎಂಬುದು ಕೇವಲ ಬಡವರ ತುಟಿಗೆ ತುಪ್ಪ ಸವರಿದ ಮಾತಾಗುತ್ತದೆ.

ಹಾಗೆಯೇ ಕೊನೆಯಲ್ಲಿರುವ ‘ಎಚ್’ ವಿಭಾಗದಲ್ಲಿ– ‘ಶಾಲಾ ಕಾರ್ಯನಿರ್ವಹಣೆ ಹಾಗೂ ನಿಯಂತ್ರಣಗಳನ್ನು ಭಿನ್ನ ಭಿನ್ನ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುವುದು. ಇದು ಹಿತಾಸಕ್ತಿಗಳ ಸಂಘರ್ಷವನ್ನು ತಪ್ಪಿಸಲು ನೆರವಾಗುತ್ತದೆ. ನೀತಿ ನಿರೂಪಣೆ, ನಿಯಂತ್ರಣ, ಕಾರ್ಯಾಚರಣೆ ಮತ್ತು ಶೈಕ್ಷಣಿಕ ವಿಷಯಗಳನ್ನು ನಿರ್ವಹಿಸಲು ಭಿನ್ನ ಭಿನ್ನವಾದ ಹಾಗೂ ಸ್ಪಷ್ಟವಾದ ವ್ಯವಸ್ಥೆಗಳನ್ನು ರೂಪಿಸಲಾಗುತ್ತದೆ’ ಎಂಬ ವಿವರಣೆಯಿದೆ. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇದು ಖಾಸಗೀಕರಣದ ವಶಕ್ಕೆ ಇಡೀ ಶಿಕ್ಷಣ ಸಂಸ್ಥೆಯನ್ನು ಒಪ್ಪಿಸುವ ದಿಕ್ಕಿನತ್ತ ಹರಿಯುವ ಸ್ವರೂಪವೆಂಬುದು ಅರಿವಿಗೆ ಬರುತ್ತದೆ. ಮೇಲ್ನೋಟಕ್ಕೆ ಆದರ್ಶದ ನಿಯಂತ್ರಣ ನಿರ್ವಹಣೆಯಂತೆ ಕಂಡರೂ ಖಾಸಗಿ ಮತ್ತು ಸರ್ಕಾರಿ ಎಂಬ ಭಿನ್ನತೆಯನ್ನು ಹೆಚ್ಚು ಗಟ್ಟಿಗೊಳಿಸುವ, ಸಮಾನತೆಯ ಹೆಸರು ಹೇಳುತ್ತಲೇ ಅಸಮಾನತೆಯನ್ನು ಹೆಚ್ಚಿಸುವ ನೀತಿ ಇದಾಗಿದೆ.

ವಿವರಣೆಯ ಭಾಗದಲ್ಲಿ, ‘ಸ್ಥಳೀಯ ಸಮುದಾಯಗಳು ಮತ್ತು ಸ್ವಯಂಸೇವಕರ ಭಾಗವಹಿಸುವಿಕೆ’ ಎಂದಿದೆ. ಸ್ವಯಂಸೇವಕರು ಯಾರು? ಯಾವ ಸಂಘಟನೆಯವರು? ಇವೆಲ್ಲಾ ಅಸ್ಪಷ್ಟತೆಯಿಂದ ಕೂಡಿವೆ. ಇಲ್ಲಿನ ಗೋಪ್ಯತೆಯನ್ನು ನೋಡಿದರೆ, ಇಡೀ ಶಿಕ್ಷಣ ವ್ಯವಸ್ಥೆಯ ನಿರ್ವಹಣೆ, ಮೇಲ್ವಿಚಾರಣೆಯನ್ನು ಯಾರಿಗೋ ಗುತ್ತಿಗೆಗೆ ಒಳಗು ಮಾಡುವ ಉದ್ದೇಶವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ‘ಎಚ್’ ವಿಭಾಗದಲ್ಲಿ, ‘ದೇಶದೆಲ್ಲೆಡೆ ತ್ರಿಭಾಷಾ ಸೂತ್ರವನ್ನು ಕಾಯಾ ವಾಚಾ ಮನಸಾ ಅಳವಡಿಸಿಕೊಳ್ಳಲಾಗುವುದು’ ಎಂದೂ ಹೇಳಲಾಗಿದೆ! ಈ ಭಾಗದಲ್ಲಿ ಸ್ಥಳೀಯ ಭಾಷೆ ಮತ್ತು ಮಾತೃಭಾಷೆ ಎಂದು ಬಳಸುತ್ತಾರೆ. ಎಲ್ಲಿಯೂ ರಾಜ್ಯಭಾಷೆಗಳ ಅರ್ಥಾತ್ ರಾಜ್ಯಗಳಲ್ಲಿರುವ ಆಡಳಿತ ಭಾಷೆಗಳ ಪ್ರಸ್ತಾಪವೇ ಬರುವುದಿಲ್ಲ. ಈಗಾಗಲೇ ಕೋರ್ಟಿನಲ್ಲಿ ಮಾತೃಭಾಷೆಯ ಆಯ್ಕೆ ಪೋಷಕರಿಗೆ ಬಿಟ್ಟದ್ದು ಎಂದು ತೀರ್ಪು ಬಂದಿದೆ. ಇದರ ಲಾಭವನ್ನು ಪಡೆದಂತೆ ಖಾಸಗಿ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಮಾರಾಟದಲ್ಲಿ ನಿರತವಾಗಿವೆ. ಪೋಷಕರು ಕೂಡ ತಮ್ಮ ಮನೆಯ ಮಾತು ಅರ್ಥಾತ್ ಮಾತೃಭಾಷೆ ಯಾವುದೇ ಇದ್ದರೂ ಇಂಗ್ಲಿಷನ್ನು ಆಯ್ಕೆಯ ಭಾಷೆಯಾಗಿಸಿಕೊಂಡು ರಾಜ್ಯಭಾಷೆಯನ್ನು ಈಗಾಗಲೇ ಕಡೆಗಣಿಸುತ್ತಿದ್ದಾರೆ.

ಅಷ್ಟೇ ಅಲ್ಲ, ತ್ರಿಭಾಷಾ ನೀತಿಯಲ್ಲಿ ರಾಜ್ಯಭಾಷೆಯ ಕಡ್ಡಾಯದ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದರಿಂದ ರಾಜ್ಯಭಾಷೆಗಳು ರಾಜ್ಯದ ಶಿಕ್ಷಣದಲ್ಲಿ ಕಳೆದುಹೋಗುವುದು ನಿಶ್ಚಿತ. ಇದನ್ನು ಮನಗಂಡೇ ಕರ್ನಾಟಕ ಸರ್ಕಾರ 2017ರಲ್ಲಿ ಕನ್ನಡ ಭಾಷಾ ಕಲಿಕಾ ಕಾಯ್ದೆಯನ್ನು ಜಾರಿಗೊಳಿಸಿತು. ಅದರ ಅನ್ವಯ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರು, ಕನ್ನಡ ಭಾಷಾ ಕಲಿಕಾ ಕಾಯ್ದೆಯ ವಿರುದ್ಧ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದಾರೆ. ಈ ರೋಗ ಸಹಜವಾಗಿ ಖಾಸಗಿ ಶಿಕ್ಷಣ ಶಾಲೆಗಳಿಗೆ ಭರದಿಂದ ವ್ಯಾಪಿಸುವ ಸಾಧ್ಯತೆಯಿದೆ. ಏಕೆಂದರೆ ಹಲವು ಕಾನ್ವೆಂಟ್‌ಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ಹಾಕುವ ಪರಿಪಾಟವಿದೆ! ಬಹುತೇಕ ಎಲ್ಲ ರಾಜ್ಯಗಳ ಸ್ಥಿತಿಯೂ ಇದೇ ಆಗಿದೆ. ಪ್ರಾಥಮಿಕ ಶಿಕ್ಷಣದಲ್ಲಿಯೇ ರಾಜ್ಯಭಾಷೆ ಕನ್ನಡ ಕಳೆದುಹೋದರೆ ಅದನ್ನು ಉನ್ನತ ಶಿಕ್ಷಣದಲ್ಲಿ ಉಳಿಸಿಕೊಳ್ಳುವುದು ಹೇಗೆ?

ಇನ್ನು ತಾಂತ್ರಿಕ, ವೈದ್ಯಕೀಯ ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೆನಿಸುತ್ತದೆ.
ಹೀಗಿರುವಾಗ ಆಡಳಿತ ಭಾಷೆಯಾಗಿ ಕನ್ನಡ ಉಳಿಯುತ್ತದೆ ಎಂದುಕೊಳ್ಳುವುದು ದೂರದ, ಅರ್ಥವಿಲ್ಲದ ಮಾತಾಗುತ್ತದೆ.

ಯಾವ ರಾಜ್ಯದಲ್ಲಿ ಆಡಳಿತವೆಂಬುದು ಜನಭಾಷೆಯಲ್ಲಿ ನಡೆಯುವುದಿಲ್ಲವೋ ಆ ರಾಜ್ಯದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಜನರನ್ನು ಮುಟ್ಟುವುದರಲ್ಲಿ ವಿಫಲವಾಗುತ್ತವೆ. ರಾಜ್ಯದ ಪ್ರಗತಿ ಕುಂಠಿತವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು