ಶನಿವಾರ, ಡಿಸೆಂಬರ್ 5, 2020
21 °C
ಬಿಜೆಪಿಗೆ ’ಖಳ’ ನಾಯಕರಾಗಿದ್ದ ಮುನಿರತ್ನ ಈಗ ’ನಾಯಕ’!

PV Web Exclusive | ‘ಮತ’ಕ್ಕಷ್ಟೇ ಕಿಮ್ಮತ್ತು: ಮಾತಿಗಿಲ್ಲ ನಿಯತ್ತು

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ಚುನಾವಣೆ ಬಂತೆಂದರೆ ಮತ ಸೆಳೆಯಲು ರಾಜಕಾರಣಿಗಳು ನಾನಾ ವಿಧದ ನಾಟಕಗಳ ಮೂಲಕ ರಂಗಕ್ಕಿಳಿಯುತ್ತಾರೆ. ಮಾತಿನ ತುಪಾಕಿಗಳು ಸಿಡಿಯತೊಡಗುತ್ತವೆ. ಮತ ಸರ್ಕಸ್ಸು ಮುಗಿದ ಕೂಡಲೇ ‘ಅಕ್ರಮ, ಆಡಿದ ಮಾತುಗಳು’ ಮರೆಯಾಗುತ್ತವೆ. ಮತ್ತೊಂದು ಚುನಾವಣೆ ಬರುವವರೆಗೂ ಆ ವಿಷಯ ಮುನ್ನೆಲೆಗೂ ಬರುವುದಿಲ್ಲ. ಚುನಾವಣೆ ಬಳಿಕ ಆಡಳಿತ ಚುಕ್ಕಾಣಿ ಹಿಡಿದವರು ತನಿಖೆಗೂ ಆದೇಶಿಸುವುದಿಲ್ಲ. ಇದು ಪ್ರಜಾತಂತ್ರದ ಅಪಹಾಸ್ಯ. . .

ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ, ಯಾವುದನ್ನೂ ಮುಚ್ಚುಮರೆಯಿಲ್ಲದ ಹೇಳುವಷ್ಟು ಧೈರ್ಯ ಇರುವ, ವಾಚಾಳಿ ಎನಿಸುವ ಬಿಜೆಪಿ ಶಾಸಕರಾಗಿರುವ ಉಮೇಶ ಕತ್ತಿ ಹೇಳುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾದೀತು.

‘ನಮ್ಮ ಹತ್ರ ಮೂರು ಸಿ.ಡಿ ಹಾಗೂ ಮೂರು ಬಾವುಟ ಇದಾವು. ಒಂದ್ ಸಿ.ಡಿನಲ್ಲಿ ಇಂದಿರಾಗಾಂಧಿಯವರ ಗರೀಬಿ ಹಠಾವೋ, ಬ್ಯಾಂಕ್ ರಾಷ್ಟ್ರೀಕರಣ, ಪ್ರತಿಯೊಬ್ಬರಿಗೂ ಮನೆ ಕೊಟ್ಟ ಯೋಜನೆಗಳು, ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ವಿವರ ಇವೆ. ಇನ್ನೊಂದರಲ್ಲಿ ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸರ್ಕಾರದ ಸಾಧನೆ, ಕೃಷ್ಣಾ ಯೋಜನೆ ಅನುಷ್ಠಾನದಲ್ಲಿ ಅವರ ಪರಾಕ್ರಮ, ಮೀಸಲಾತಿ ಜಾರಿ ಇವೆಲ್ಲ ಇವೆ. ಮತ್ತೊಂದು ಸಿ.ಡಿಯೊಳಗೆ ವಾಜಪೇಯಿ ಸರ್ಕಾರದ ಅದ್ಭುತ ಸಾಧನೆ, ಪ್ರಾಮಾಣಿಕ ಆಡಳಿತ, ಮೋದಿ ಅವರ ಕಾಲದಲ್ಲಾದ ಸುಧಾರಣೆಗಳ ಚಿತ್ರಣ ಇವೆ. ಚುನಾವಣೆ ಬಂದಾಗ, ಯಾವ್ದು ಅನುಕೂಲ ಆಗ್ತದೋ ಎಂದು ಗಮನಿಸಿ ಆ ಪಕ್ಷ ಬಾವುಟ, ಸಿ.ಡಿ. ಹಿಡ್ಕೊಂಡು ಹೋದ್ರಾತು. ಯಾವುದೂ ಸೂಟ್ ಆಗಲ್ಲ ಅಂದ್ರಾ ನಮ್ದೇ ಐತಲ್ರೀ ಪಕ್ಷೇತರ. ನಂತರ ಯಾವ ಪಕ್ಷ ಬರುತ್ತೋ ಆ ಪಕ್ಷದ ಜತೆಗೆ ಹೋಗೂದು ಸುಲಭಾರಿ. . . ’ ಎಂದು  ಕತ್ತಿ ಆಗಾಗ ಹೇಳುವುದುಂಟು. ಈಗಿನ ಕಾಲದಲ್ಲಿ ಬಹುತೇಕ ರಾಜಕಾರಣಿಗಳ ಮನದಾಳದ ಭಾವನೆಯನ್ನು ಕತ್ತಿ ಅಂತವರು ಹೀಗೆ ನೇರವಾಗಿ ಹೇಳಿಬಿಡುತ್ತಾರೆ.

ದಶಕಗಳ ಹಿಂದೆ ಚುನಾವಣೆಗಳ ಹೊತ್ತಿಗಷ್ಟೇ ಶಾಸಕರು ಅಪರೂಪಕ್ಕೆ ಎಂಬಂತೆ ಪಕ್ಷ ಬದಲಾವಣೆ ಮಾಡುತ್ತಿದ್ದುದು ಉಂಟು. ಆದರೆ 2006 ರಿಂದೀಚೆಗೆ ಈ ಚಾಳಿ ಎಲ್ಲ ಪಕ್ಷಗಳಿಗೆ ಅಂಟಿದ ಜಾಡ್ಯ ಆಗಿಬಿಟ್ಟಿದೆ. ಗೆದ್ದು ಒಂದೇ ವರ್ಷ ತುಂಬುವ ಹೊತ್ತಿಗೆ ಮತ್ತೊಂದು ಪಕ್ಷಕ್ಕೆ ನೆಗೆದಿರುತ್ತಾರೆ. ಆ ಚುನಾವಣೆಯಲ್ಲಿ ಹೇಳಿದ ಮಾತುಗಳು, ಮತ್ತೊಂದು ಚುನಾವಣೆ ಹೊತ್ತಿಗೆ ಖುಲ್ಲಂಖುಲ್ಲಾ ಉಲ್ಟಾ ರೂಪದಲ್ಲಿ ಹೊರಬರುತ್ತವೆ.

2018ರ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಿತು. ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ರಾಜ್ಯಮಟ್ಟದ ಸುದ್ದಿಯಾಗಿತ್ತು.

ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ, ಕ್ಷೇತ್ರದ ಮಹಿಳಾ ಚುನಾವಣಾ ಅಧಿಕಾರಿಗೆ ಬೈದಿದ್ದಲ್ಲದೇ, ಹಲ್ಲೆ ಮಾಡಲು ಹೋಗಿದ್ದರು ಎಂದು ಸ್ವತಃ ಚುನಾವಣಾಧಿಕಾರಿಯೇ ದೂರು ಕೊಟ್ಟಿದ್ದರು. ಬಿಜೆಪಿ–ಜೆಡಿಎಸ್‌ ನಾಯಕರು ಈ ವಿಷಯವನ್ನು ಹಾದಿಬೀದಿ ರಂಪ ಮಾಡಿದ್ದರು.

ಅದು ತಣ್ಣಗಾಗುವ ಹೊತ್ತಿಗೆ 20 ಸಾವಿರ ಮತದಾರರ ಗುರುತಿನ ಚೀಟಿ ಲಗ್ಗೆರೆ ಬಳಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಿಕ್ಕಿತ್ತು. ರಾತ್ರಿವೇಳೆ ಇದರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಪ್ರಧಾನಿ ದೇವೇಗೌಡರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಇದು ಮುನಿರತ್ನ ಆಪ್ತರು ಬಾಡಿಗೆ ಪಡೆದಿದ್ದ ಅಪಾರ್ಟ್‌ ಮೆಂಟ್ ಎಂಬುದು ಮೇಲ್ನೋಟಕ್ಕೆ ಗೊತ್ತಾದ ಬಳಿಕ ಪ್ರಕರಣ ದಾಖಲಾಗಿತ್ತು. ಹೀಗೆ ರಾಶಿ ರಾಶಿ ಮತದಾರರ ಚೀಟಿ ಪತ್ತೆಯಾದ ಬೆನ್ನಲ್ಲೇ ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಕ್ಷೇತ್ರಕ್ಕೆ ವಿಳಂಬವಾಗಿ ಚುನಾವಣೆ ನಡೆದಿತ್ತು. ಆಗ, ಕಾಂಗ್ರೆಸ್ ನಾಯಕರು ಮುನಿರತ್ನ ಬೆನ್ನಿಗೆ ನಿಂತಿದ್ದರು.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಈಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ‘ರಾಜರಾಜೇಶ್ವರಿ ನಗರದ ಅಭ್ಯರ್ಥಿ ಮುನಿರತ್ನ ಬಳಿ 20,000 ಮತದಾರರ ಗುರುತುಚೀಟಿ ದೊರೆತಿರುವುದು ಆಘಾತಕಾರಿ. ಅವರು ಅಕ್ರಮದ ಮೂಲಕ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಚುನಾವಣಾ ಆಯೋಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಜಾಪ್ರಭುತ್ವವನ್ನು ಉಳಿಸಬೇಕು’ ಎಂದು ಟ್ವೀಟ್ ಮಾಡಿದ್ದರು. ಬಿಜೆಪಿಯ  ಆರ್. ಅಶೋಕ, ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ ಹೀಗೆ ಸಕಲ ನಾಯಕರೂ ಮುನಿರತ್ನ ವಿರುದ್ಧ ಹರಿಹಾಯ್ದಿದ್ದರು.

ಮುನಿರತ್ನ ಆಯ್ಕೆಯೇ ಅಕ್ರಮವಾಗಿರುವುದರಿಂದ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಸುಪ್ರೀಂಕೋರ್ಟ್‌ವರೆಗೂ ಹೋಗಿದ್ದರು.

ಕಾಲ ಬದಲಾಯಿತು; ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಶಾಸಕ ಸ್ಥಾನದಿಂದ ಅನರ್ಹರೂ ಆದರು. ಈಗ ಬಿಜೆಪಿಯ ಎಲ್ಲ ನಾಯಕರು ಮುನಿರತ್ನ ಅಪ್ರತಿಮ ನಾಯಕ ಎಂದು ಕೊಂಡಾಡುತ್ತಲೇ ಇದ್ದಾರೆ. ಕೇವಲ ಎರಡೇ ವರ್ಷಗಳಲ್ಲಿ ಮುನಿರತ್ನ ಬಿಜೆಪಿಯವರ ಪಾಲಿಗೆ ಬದಲಾಗಿದ್ದಾರೆ. ಕಾಂಗ್ರೆಸ್‌ನವರ ಪಾಲಿಗೆ ಮುನಿರತ್ನ ಖಳನಾಯಕರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ,  ‘ಬಿಜೆಪಿ ಒಂದು ಕೋಮುವಾದಿ ಪಕ್ಷ. ಅವರು ಧರ್ಮ, ದೇವರು, ಸೈನಿಕರು ಮುಂತಾದ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡಿ ಮತ ಕೇಳುತ್ತಾರೆ. ಸೈನಿಕರ ಸಾಧನೆಯನ್ನು ತೋರಿಸಿ ಹಾಗೂ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದು ನೈತಿಕತೆ ಅಲ್ಲ. ದೇಶ ರಕ್ಷಣೆ ಪ್ರಧಾನಿ ಮೋದಿಯವರ ಸಾಧನೆ ಅಲ್ಲ. ಅದು ಪ್ರತಿಯೊಬ್ಬ ಆಡಳಿತ ನಡೆಸುವವರ ಕರ್ತವ್ಯ’  ಎಂದು ಪ್ರತಿಪಾದಿಸಿದ್ದರು. ಇಂದು ಮೋದಿ, ಅಮಿತ್ ಶಾ ಹಾಗೂ ಬಿಜೆಪಿಯನ್ನು ಮುನಿರತ್ನ ಹೊಗಳುತ್ತಿದ್ದಾರೆ.

ಈಶ್ವರಪ್ಪ–ಯತ್ನಾಳ: ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಬಿ.ಎಸ್‌. ಯಡಿಯೂರಪ್ಪ, ಅಲ್ಲಿ ಗೆಲುವು ಕಾಣದೇ ಮರಳಿ ಬಿಜೆಪಿಗೆ ಬಂದು ರಾಜ್ಯ ಅಧ್ಯಕ್ಷರೂ ಆದರು. ಆ ಹೊತ್ತಿನಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರಲು ಪ್ರಮುಖವಾಗಿ ಶ್ರಮಿಸಿದವರು ಡಿ.ವಿ. ಸದಾನಂದಗೌಡ ಮತ್ತು ಬಸನಗೌಡ ಪಾಟೀಲ ಯತ್ನಾಳ.

ಬಿಜೆಪಿ ಮರಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಯಡಿಯೂರಪ್ಪ ವಾಪಸ್ ಬರಬೇಕು ಎಂಬ ತರ್ಕ, ವಾದ ಮುಂದಿಟ್ಟಿದ್ದ ಈ ಇಬ್ಬರು ಇದಕ್ಕಾಗಿ ಲಾಬಿ ನಡೆಸಿದ್ದರು.

ಯಡಿಯೂರಪ್ಪ ಏನೋ ಬಿಜೆಪಿ ಸೇರಿದರು. ಆದರೆ, ತಮ್ಮ ಜತೆಗೆ ಕೆಜೆಪಿಗೆ ಹೋದವರು, ಹೊಸದಾಗಿ ಕೆಜೆಪಿಗೆ ಬಂದಿದ್ದವರನ್ನು ಬಿಜೆಪಿಗೆ ಕರೆತಂದು ಪ್ರಮುಖ ಸ್ಥಾನ ಕೊಟ್ಟರು. ಇದು ಮೂಲ ಬಿಜೆಪಿಗರಲ್ಲಿ ಸಿಟ್ಟು ತರಿಸಿತು. ಯಡಿಯೂರಪ್ಪ ಇಲ್ಲದ ನಿರ್ವಾತ ಸ್ಥಿತಿಯಲ್ಲಿ ಪಕ್ಷದಲ್ಲಿ ಮುಂಚೂಣಿಗೆ ಬಂದಿದ್ದ ಪ್ರಲ್ಹಾದ ಜೋಶಿ, ಕೆ.ಎಸ್. ಈಶ್ವರಪ್ಪ, ಬಿ.ಎಲ್‌. ಸಂತೋಷ ಗುಂಪಿಗೆ ಇದು ಸಹ್ಯವಾದ ಬೆಳವಣಿಗೆಯಾಗಿರಲಿಲ್ಲ. ಹೀಗಾಗಿ, ಬಿಜೆಪಿ ಮೂಲ ನಿವಾಸಿಗಳು ಎಂಬ ತಂಡವನ್ನು ಎಂ.ಬಿ. ಭಾನುಪ್ರಕಾಶ್‌, ನಿರ್ಮಲಕುಮಾರ್ ಸುರಾನ, ಸೊಗಡು ಶಿವಣ್ಣ, ತುಮಕೂರಿನ ನಂದೀಶ್ ಹೀಗೆ ಕೆಲವರು ಸೇರಿ ಕಟ್ಟಿಕೊಂಡು ಯಡಿಯೂರಪ್ಪ ವಿರುದ್ಧವಾಗಿ ಕೆಲಸ ಮಾಡತೊಡಗಿದರು.

ಅತ್ತ ಕೆ.ಎಸ್. ಈಶ್ವರಪ್ಪ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಮತ್ತೊಂದು ಪರ್ಯಾಯವನ್ನು ರೂಪಿಸತೊಡಗಿದರು. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರಿಗೆ ವಿರುದ್ದವಾದ ಕೇಂದ್ರವೊಂದನ್ನು ರೂಪಿಸುವುದೇ ಈ ಗುಂಪಿನ ಆಶಯವೂ ಆಗಿತ್ತು. ಈ ಎರಡು ತಂಡಗಳು ಎಷ್ಟು ಪ್ರಬಲವಾಗ ತೊಡಗಿದವು ಎಂದರೆ, ಅದು ಮತ್ತಷ್ಟು ಬಲಿಷ್ಠಗೊಂಡರೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ, ಅಂದು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರೇ, ಯಡಿಯೂರಪ್ಪ–ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಸಂಧಾನ ನಡೆಸಿದರು. ರಾಯಣ್ಣ ಬ್ರಿಗೇಡ್ ನಿಲ್ಲಿಸಲು ಕಟ್ಟಪ್ಪಣೆ ವಿಧಿಸಿದರು. ಬಿಜೆಪಿ ಮೂಲ ನಿವಾಸಿಗರ ತಂಡಕ್ಕೂ ತಾಕೀತು ಮಾಡಿದರು. ಆಗ ಎಲ್ಲವೂ ತಣ್ಣಗಾಯಿತು. ಆ ಹೊತ್ತಿನೊಳಗೆ ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರು.

ಈಗ ಚಿತ್ರಣ ಬದಲಾಗಿದೆ. ‘ಯಡಿಯೂರಪ್ಪ ಕುರ್ಚಿ ತ್ಯಾಗ ಮಾಡಬೇಕಾಗುತ್ತದೆ. ಅವರು ಹೆಚ್ಚು ದಿನ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ’ ಎಂದು ಯತ್ನಾಳ ಗರ್ಜಿಸುತ್ತಿದ್ದಾರೆ. ಅಂದು  ತಮ್ಮದೇ ತಂಡ ಕಟ್ಟಿಕೊಂಡು ಯಡಿಯೂರಪ್ಪ ವಿರುದ್ಧ ನಿಂತಿದ್ದ ಈಶ್ವರಪ್ಪ, ಈಗ ‘ಯತ್ನಾಳರಿಗೆ ನೋಟಿಸ್ ಕೊಡದೇ ಉಚ್ಚಾಟನೆ ಮಾಡಿ’ ಎಂದು ಏರು ಧ್ವನಿಯಲ್ಲಿ ಆಗ್ರಹಿಸುತ್ತಿದ್ದಾರೆ.

ರಾಜಕಾರಣದಲ್ಲಿ ಯಾರು ಯಾವಾಗ ಯಾವ ಕಡೆ ನಿಲ್ಲುತ್ತಾರೆ; ಯಾರು ಏಕೆ ಏಕ‍ಪಾತ್ರಾಭಿನಯ, ಕೆಲವೊಮ್ಮೆ ದ್ವಿಪಾತ್ರಾಭಿನಯಗಳ ಚತುರಾಭಿನಯ ಮಾಡುತ್ತಾರೆ ಎಂಬುದೇ ನಿಗೂಢ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವ ಜಾಣ್ಮೆಯನ್ನು ಮಾತ್ರ ರಾಜಕಾರಣಿಗಳು ಯಾವಾಗಲೂ ಮೈಗೂಡಿಸಿಕೊಂಡಿರುತ್ತಾರೆ. ಈಗ ಯತ್ನಾಳರನ್ನು ಬೈಯುತ್ತಿರುವವರೇ ಒಂದೊಮ್ಮೆ ನಾಳೆ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರೆ ಉಧೋ ಉಧೋ ಯತ್ನಾಳ ಎಂದು ಅವರ ಹಿಂದೆ ಸುತ್ತತೊಡಗುತ್ತಾರೆ. ಇದುವೇ ರಾಜಕಾರಣದ ಥೈಲಿ ಮತ್ತು ಶೈಲಿ ಆಗಿಬಿಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು