ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವಾಹನ: ಗುರಿ ಸಾಧನೆಗೆ ಸವಾಲು: ಡಾ. ಎಚ್.ಆರ್.ಕೃಷ್ಣಮೂರ್ತಿ ಅವರ ವಿಶ್ಲೇಷಣೆ

ಮಹತ್ವಾಕಾಂಕ್ಷೆಯ ಯೋಜನೆ– ತೊಡಕು ನಿವಾರಣೆಗೆ ಬೇಕಿದೆ ತ್ವರಿತ ಸ್ಪಂದನ
Last Updated 27 ಜೂನ್ 2022, 0:55 IST
ಅಕ್ಷರ ಗಾತ್ರ

ಈ ವರ್ಷದ ಮೇ ತಿಂಗಳ ಆರಂಭದಲ್ಲಿ ನಮ್ಮ ದೇಶದಲ್ಲಿ ಒಟ್ಟು 12 ಲಕ್ಷ ಬ್ಯಾಟರಿಚಾಲಿತ ಅಥವಾ ಇ-ವಾಹನಗಳಿದ್ದು, ವರ್ಷಾಂತ್ಯದ ವೇಳೆಗೆ ಈ ಸಂಖ್ಯೆ 40 ಲಕ್ಷ ಆಗುವುದೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅದು 3 ಕೋಟಿಯಾಗುವ ನಿರೀಕ್ಷೆ ಇದೆ. ಇದರಲ್ಲಿ ಶೇ 60ಕ್ಕೂ ಹೆಚ್ಚು ಭಾಗ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಆಗಿರಲಿವೆ.

2030ರ ವೇಳೆಗೆ ದೇಶದಲ್ಲಿ ಮಾರಾಟವಾಗುವ ಒಟ್ಟು ಖಾಸಗಿ ಕಾರುಗಳ ಶೇ 30 ಭಾಗ, ವಾಣಿಜ್ಯ ವಾಹನಗಳ ಶೇ 70 ಭಾಗ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಶೇ 80ಭಾಗ ಇ-ವಾಹನಗಳು ಆಗಿರಬೇಕೆಂಬ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬೇಕಾದರೆ ಇ-ವಾಹನ ಕ್ಷೇತ್ರದಲ್ಲಿನ ಹಲವಾರು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು.

ಇ-ವಾಹನಗಳ ಸಂಖ್ಯೆ ಹೆಚ್ಚಬೇಕಾದರೆ ಅವುಗಳ ಬೆಲೆ ಮೊದಲು ಕಡಿಮೆಯಾಗಬೇಕು. ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತ ಇ-ವಾಹನಗಳ ಬೆಲೆ ಸರಿಸುಮಾರುಶೇ 50ರಷ್ಟು ಹೆಚ್ಚು. ಉದಾಹರಣೆಗೆ, ಒಂದು ಹೆಸರಾಂತ ಕಂಪನಿಯ ಪೆಟ್ರೋಲ್ ಕಾರಿನ ಆರಂಭಿಕ ಬೆಲೆ ₹ 7 ಲಕ್ಷವಾದರೆ, ಅದೇ ಕಾರಿನ ಬ್ಯಾಟರಿಚಾಲಿತ ಮಾದರಿಯ ಬೆಲೆ ₹ 13 ಲಕ್ಷ. ಇನ್ನೊಂದು ಮಾದರಿಯ ಇ-ವಾಹನದ ಬೆಲೆ ₹ 15 ಲಕ್ಷ. ಅದರಲ್ಲಿರುವ ಬ್ಯಾಟರಿಯ ಬೆಲೆ ₹ 6 ಲಕ್ಷ. ಹೆಚ್ಚಿನ ಬಳಕೆದಾರರಿಗೆ ಕೈಗೆಟುಕದಷ್ಟು ದುಬಾರಿ. ಇ- ವಾಹನಗಳಲ್ಲಿ ಬಳಕೆಯಾಗುವ ಬ್ಯಾಟರಿಗಳನ್ನು 5-6 ವರ್ಷಗಳಲ್ಲಿ ಬದಲಿಸುವುದು ಅಗತ್ಯ. ಅದು ಕೂಡ ದುಬಾರಿಯೇ.

ಪ್ರತಿಸಲ ಬ್ಯಾಟರಿ ಚಾರ್ಜ್ ಮಾಡುವಾಗಲೂ ವಾಹನವನ್ನು ಎರಡು– ಮೂರು ಗಂಟೆಗಳ ಕಾಲ ಕಡ್ಡಾಯವಾಗಿ ನಿಲ್ಲಿಸಬೇಕು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಎಷ್ಟು ದೂರ ಓಡುತ್ತದೆ ಎಂಬ ಅಂಶವೂ ಬಹು ಮುಖ್ಯ. ಹೆಚ್ಚು ದೂರ ಸಂಚರಿಸುವವರು ಚಾರ್ಜ್ ಮುಗಿಯುವುದರ ಒಳಗಾಗಿ ಮುಂದಿನ ಚಾರ್ಜಿಂಗ್ ಸ್ಟೇಶನ್ ತಲುಪಬೇಕು. ಇದು ‘ರೇಂಜ್ ಆ್ಯಂಕ್ಸೈಟಿ’ ಎಂಬ ಮಾನಸಿಕ ಒತ್ತಡಕ್ಕೆ ಕಾರಣವಾಗುವ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

2022- 23ರ ಮುಂಗಡಪತ್ರ ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಈ ಎಲ್ಲ ಸಮಸ್ಯೆಗಳನ್ನು ಸಮರ್ಪಕವಾಗಿ ಬಗೆಹರಿಸಲು ಅಗತ್ಯವಾದ ನೀತಿಯೊಂದನ್ನು ರೂಪಿಸುವ ಸೂಚನೆ ನೀಡಿದ್ದರು. ಅದರಂತೆ ಈ ವರ್ಷದ ಏಪ್ರಿಲ್‌ನಲ್ಲಿ ನೀತಿ ಆಯೋಗವು ‘ಬ್ಯಾಟರಿ ವಿನಿಮಯ ಕರಡು ನೀತಿ’ಯನ್ನು (ಡ್ರಾಫ್ಟ್ ಬ್ಯಾಟರಿ ಸ್ವ್ಯಾಪಿಂಗ್ ಪಾಲಿಸಿ) ಸಾರ್ವಜನಿಕರ, ಉದ್ಯಮದ, ಪರಿಣತರ ಅವಗಾಹನೆ, ಸಲಹೆಗಳಿಗಾಗಿ ಬಿಡುಗಡೆ ಮಾಡಿತು. ಈ ನೀತಿಯ ಮುಖ್ಯ ಅಂಶವೆಂದರೆ, ಡಿಸ್‍ಚಾರ್ಜ್ ಆದ ಬ್ಯಾಟರಿಯನ್ನು, ಸಂಪೂರ್ಣವಾಗಿ ಚಾರ್ಜ್ ಆದ ಬ್ಯಾಟರಿಯೊಂದಿಗೆ ವಿನಿಮಯಕ್ಕೆ ಇರುವ ಅವಕಾಶ. ಪೆಟ್ರೋಲ್ ಬಂಕ್‍ನಲ್ಲಿ ಇಂಧನ ತುಂಬಿಸಿಕೊಳ್ಳುವ ರೀತಿಯಲ್ಲಿಯೇ, ‘ಬ್ಯಾಟರಿ ವಿನಿಮಯ ನಿಲ್ದಾಣ’ಗಳಲ್ಲಿ (ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಶನ್) ಬ್ಯಾಟರಿಯನ್ನು ಬದಲಿಸಿಕೊಳ್ಳಬಹುದು.

ಈ ಪ್ರಸ್ತಾವಿತ ನೀತಿಯು ವಾಹನ ಮತ್ತು ಬ್ಯಾಟರಿಗಳನ್ನು ಪ್ರತ್ಯೇಕಿಸುತ್ತದೆ. ಹೀಗಾಗಿ ಬಳಕೆದಾರನು ಬ್ಯಾಟರಿ ಇಲ್ಲದ ವಾಹನವನ್ನು ಮಾತ್ರ ಕೊಳ್ಳುತ್ತಾನೆ. ಬ್ಯಾಟರಿಯನ್ನು ಒದಗಿಸುವ ಕಂಪನಿಗೆ ಚಂದಾದಾರನಾಗಿ, ಬ್ಯಾಟರಿಯನ್ನು ಗುತ್ತಿಗೆಯ ಮೇಲೆ ಪಡೆದು, ವಾಹನದಲ್ಲಿ ಬಳಸುತ್ತಾನೆ. ಪ್ರತಿಸಲ ಬ್ಯಾಟರಿಯನ್ನು ವಿನಿಮಯ ಮಾಡಿಕೊಂಡಾಗಲೂ ನಿಗದಿತ ಶುಲ್ಕವನ್ನು ಕಂಪನಿಗೆ ನೀಡುತ್ತಾನೆ. ಇ-ವಾಹನದ ಉತ್ಪಾದಕರು, ವಾಹನದಲ್ಲಿ ಬ್ಯಾಟರಿಯನ್ನು ಅಳವಡಿಸದ ಕಾರಣ ವಾಹನದ ಮಾರಾಟದ ಬೆಲೆ ಶೇ 30ರಿಂದ ಶೇ 60ರಷ್ಟು ಕಡಿಮೆಯಾಗಿ, ಪೆಟ್ರೋಲ್ ವಾಹನದ ಬೆಲೆಯ ಮಟ್ಟಕ್ಕೇ ಬರಬಹುದು. ಬ್ಯಾಟರಿ ವಿನಿಮಯ ನಿಲ್ದಾಣಗಳಲ್ಲಿ,ಬ್ಯಾಟರಿಗಳನ್ನು ಕೆಲವೇ ನಿಮಿಷಗಳಲ್ಲಿ ಬದಲಿಸುವ ವ್ಯವಸ್ಥೆ ಬರಲಿದೆ. ಬ್ಯಾಟರಿ ವಿನಿಮಯ ನಿಲ್ದಾಣಗಳನ್ನು ಸ್ಥಾಪಿಸಲು ವಿಶಾಲವಾದ ಜಾಗ ಅನಗತ್ಯ. ಪೆಟ್ರೋಲ್ ಬಂಕ್ ಸ್ಥಾಪಿಸಲು ಬೇಕಾದ ಜಾಗದ ಶೇ 20ರಷ್ಟು ಸ್ಥಳದಲ್ಲಿ ಸ್ವ್ಯಾಪಿಂಗ್ ಸ್ಟೇಶನ್ ನಿರ್ಮಿಸಬಹುದು.

ನೀತಿ ಆಯೋಗ ಪ್ರಕಟಿಸಿರುವ ಕರಡು ನೀತಿಯಲ್ಲಿ, ವಿನಿಮಯ ಮಾಡಿಕೊಳ್ಳಬಹುದಾದ ಬ್ಯಾಟರಿಗಳಿಗೆ, ಅವುಗಳನ್ನು ಉತ್ಪಾದಿಸುವ ಕಂಪನಿಗಳಿಗೆ, ಬಳಕೆದಾರರಿಗೆ ದೊರೆಯಲಿರುವ ಸವಲತ್ತು, ರಿಯಾಯಿತಿ, ಪ್ರೋತ್ಸಾಹಕಗಳ ಪ್ರಸ್ತಾಪವಿದೆ. ಬ್ಯಾಟರಿಗಳ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅವುಗಳ ವಿವರವಾದ ಪರೀಕ್ಷೆ ಮತ್ತು ಗುಣಮಟ್ಟ ಖಾತರಿಗೆ ಕ್ರಮಗಳನ್ನು ಸೂಚಿಸಲಾಗಿದೆ. 2015ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಆ್ಯಂಡ್ ಎಲೆಕ್ಟ್ರಿಕ್ ವೆಹಿಕಲ್ಸ್’ ಯೋಜನೆಯಡಿ ನಿಗದಿಪಡಿಸಲಾದ ಅಥವಾ ಅದಕ್ಕಿಂತ ಉತ್ತಮ ಗುಣಮಟ್ಟದ ಬ್ಯಾಟರಿಗಳನ್ನು ಮಾತ್ರ ಈ ವಿನಿಮಯ ಪ್ರಕ್ರಿಯೆಯಲ್ಲಿ ಬಳಸಲು ಅವಕಾಶವಿದೆ. ಉತ್ಪಾದನೆಯ ಹಂತದಲ್ಲೇ ಪ್ರತಿಯೊಂದು ಬ್ಯಾಟರಿಗೂ ಅನನ್ಯ ಗುರುತಿನ ಸಂಖ್ಯೆ ನೀಡಿ, ಬ್ಯಾಟರಿಯ ಜೀವಿತಾವಧಿಯ ಎಲ್ಲ ವಿವರಗಳನ್ನೂ ದಾಖಲಿಸುವ, ಅಗತ್ಯವಾದಾಗ ದೂರದಿಂದಲೇ ಬ್ಯಾಟರಿಯನ್ನು ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ ಅಳವಡಿಸುವ ಯೋಜನೆಯಿದೆ.

ಈ ನೀತಿ ಅನುಮೋದನೆಗೊಂಡು ಅನುಷ್ಠಾನಕ್ಕೆ ಬಂದ ಮೊದಲ ಎರಡು ವರ್ಷಗಳಲ್ಲಿ, 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ನಗರಗಳಲ್ಲಿ ಬ್ಯಾಟರಿ ವಿನಿಮಯ ನಿಲ್ದಾಣಗಳು, ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬರಲಿವೆ. ಮುಂದೆ 5 ಲಕ್ಷ ಜನಸಂಖ್ಯೆಯನ್ನು ಮೀರಿದ ನಗರಗಳಿಗೆ ಯೋಜನೆ ವಿಸ್ತರಿಸಲಿದೆ.

ಈ ಕರಡು ನೀತಿಗೆ ಸಾರ್ವಜನಿಕರು, ಬಳಕೆದಾರರು, ಉದ್ಯಮಿಗಳ ಸಲಹೆ, ಸೂಚನೆ, ಟೀಕೆ ಟಿಪ್ಪಣಿಗಳಿಗೆ ನೀಡಲಾಗಿದ್ದ ಕಾಲಾವಕಾಶ ಕೊನೆಗೊಂಡಿದ್ದು, ಅವುಗಳ ಪರಿಶೀಲನೆ ಪ್ರಾರಂಭವಾಗಿದೆ. ದೇಶದ ನಾಸ್ಕಾಮ್ ಸಂಸ್ಥೆ ಈ ಕರಡು ನೀತಿಯನ್ನು ಸ್ವಾಗತಿಸಿದ್ದು, ಪ್ರತೀ ವಿನಿಮಯಕ್ಕೆ ಕನಿಷ್ಠ 80 ಕಿ.ಮೀ. ನೀಡುವಂತಹ ಬ್ಯಾಟರಿಗಳನ್ನು ಮಾತ್ರ ಬಳಸಬೇಕೆಂಬ ಸಲಹೆ ಮಾಡಿದೆ. ಬ್ಯಾಟರಿ ವಿನಿಮಯದ ಪರಿಕಲ್ಪನೆ ಯಶಸ್ವಿಯಾಗಬೇಕಾದರೆ ಬ್ಯಾಟರಿ ಉತ್ಪಾದಕರು ಮತ್ತು ವಾಹನ ಉತ್ಪಾದಕರ ನಡುವೆ ಅತಿ ನಿಕಟವಾದ ವೃತ್ತಿನಿರತ, ಕೌಶಲಾಧಾರಿತ, ಸಹಕಾರ ಸಂಬಂಧ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿವಿಧ ಸಂಸ್ಥೆಗಳು ಉತ್ಪಾದಿಸುವ ಬ್ಯಾಟರಿಗಳು ಒಂದೇ ಸ್ವರೂಪದವಾಗಿದ್ದು, ಅವುಗಳ ನಡುವೆ ಗುಣಮಟ್ಟ, ಕಾರ್ಯದಕ್ಷತೆ ಮುಂತಾದವುಗಳಲ್ಲಿ ಪರಸ್ಪರ ಹೊಂದಾಣಿಕೆಯಿದ್ದಾಗ ಮಾತ್ರ ವಿನಿಮಯ ಸಾಧ್ಯ. ಈ ರೀತಿಯ ತಾಂತ್ರಿಕ ಏಕರೂಪತೆಯಿಂದ ಬ್ಯಾಟರಿ ಉತ್ಪಾದಿಸುವ ವಿವಿಧ ಕಂಪನಿಗಳ ನಡುವೆ ಆರೋಗ್ಯಕರ ಸ್ಪರ್ಧೆಯೇ ಇಲ್ಲದಂತಾಗಿ ಸಂಶೋಧನೆ, ಅಭಿವೃದ್ಧಿ, ನವನಿರ್ಮಿತಿಗಳು ನೆಲ ಕಚ್ಚಬಹುದು ಎಂಬ ಕಳವಳವೂ ವ್ಯಕ್ತವಾಗಿದೆ. ಕಾರುಗಳಲ್ಲಿಬ್ಯಾಟರಿಗಳನ್ನು ವಿನಿಮಯಕ್ಕೆ ಅನುವುಗೊಳಿಸುವಾಗ ವಿಶೇಷ ಸವಾಲುಗಳು ಎದುರಾಗುತ್ತವೆ. ಬಳಕೆದಾರರಿಗೆ ಬ್ಯಾಟರಿಯ ಮಾಲೀಕತ್ವ ಇದ್ದಲ್ಲಿ ಮಾತ್ರ ಅವರು ಬ್ಯಾಟರಿಯನ್ನು ಎಚ್ಚರದಿಂದ ಬಳಸುತ್ತಾರೆ. ಹೀಗಾಗಿ ಈ ವಿನಿಮಯ ಮಾದರಿಯಲ್ಲಿ ಅವುಗಳ ಗುಣಮಟ್ಟ ಬೇಗ ಹಾಳಾಗುತ್ತದೆ ಎಂಬ ಅಭಿಪ್ರಾಯವಿದೆ. ಜೀವಿತಾವಧಿ ಮುಗಿದು, ನಿರರ್ಥಕವಾದ ಬ್ಯಾಟರಿಗಳ ನಿರ್ವಹಣೆಯ ಸವಾಲುಗಳ ಬಗೆಗೂ ಪರಿಣತರು ಎಚ್ಚರಿಸಿದ್ದಾರೆ. ಈ ಎಲ್ಲ ಸಮಸ್ಯೆ, ಸವಾಲುಗಳ ಬಗ್ಗೆ 250ಕ್ಕೂ ಹೆಚ್ಚುಸ್ಟಾರ್ಟ್‌ಅಪ್‍ಗಳು ಕೆಲಸ ಮಾಡುತ್ತಿವೆಯೆಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಈ ಮಧ್ಯೆ, ಈ ಯೋಜನೆ ಒದಗಿಸಿರುವ ವ್ಯಾಪಾರ ಅವಕಾಶಗಳನ್ನು ಬಳಸಿಕೊಂಡಿರುವ ಓಲಾ ಸಂಸ್ಥೆಯು ದೆಹಲಿಯ ಗುರುಗ್ರಾಮದಲ್ಲಿ ಇ-ರಿಕ್ಷಾಗಳಿಗಾಗಿ 14 ಬ್ಯಾಟರಿ ವಿನಿಮಯ ಘಟಕಗಳನ್ನು ಸ್ಥಾಪಿಸಿ, ಪ್ರತಿದಿನ 280 ಬ್ಯಾಟರಿಗಳನ್ನು ವಿನಿಮಯ ಮಾಡುತ್ತಿದೆ. ಬೌನ್ಸ್ ಇನ್‍ಫಿನಿಟಿ, ಬೆಂಗಳೂರಿನಲ್ಲಿ ದ್ವಿಚಕ್ರವಾಹನಗಳಿಗಾಗಿ 150 ಬ್ಯಾಟರಿ ವಿನಿಮಯ ನಿಲ್ದಾಣಗಳನ್ನು ಸ್ಥಾಪಿಸಿದೆ.

2023ರ ಮಧ್ಯಭಾಗದ ವೇಳೆಗೆ, ಬ್ಯಾಟರಿ ವಿನಿಮಯ ಸೌಲಭ್ಯ ಬಳಸಿಕೊಂಡ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ಸರಕು ಸಾಗಣೆಯ ಹಗುರ ವಾಹನಗಳು ನಮ್ಮ ರಸ್ತೆಗಳಲ್ಲಿ ವ್ಯಾಪಕವಾಗಿ ಸಂಚರಿಸಬೇಕೆಂಬುದು ಸರ್ಕಾರದ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT