ಶುಕ್ರವಾರ, ಆಗಸ್ಟ್ 12, 2022
22 °C
ಬಿಕ್ಕಟ್ಟಿನ ಸಂದರ್ಭದಲ್ಲಿ ಬದುಕಿನ ಬಗ್ಗೆ ನಾವು ಮೂಡಿಸಿಕೊಳ್ಳುವ ಸುಂದರ ಭಾವನೆಯ ಪಾತ್ರ ಮಹತ್ವದ್ದು

ಅಸ್ತಿತ್ವವಾದ, ಬಿಕ್ಕಟ್ಟು ಮತ್ತು ಸ್ಫೂರ್ತಿ

ಪ್ರೊ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Prajavani

ಇಪ್ಪತ್ತನೇ ಶತಮಾನದಲ್ಲಿ ಎರಡನೆಯ ಮಹಾಯುದ್ಧ ಸಮಾಪ್ತಿಯಾಗುವ ವೇಳೆಗೆ, ಯುರೋಪಿನಲ್ಲಿ ಎಲ್ಲೆಡೆ ನೆಲೆಸಿದ್ದು ಎಣೆಯೇ ಇಲ್ಲದ ಶೋಕ. ಇಡೀ ಖಂಡವು ರಕ್ತದಲ್ಲಿ ಮುಳುಗಿ ಎದ್ದಂತೆ ತೋರುತ್ತಿತ್ತು. ಯುದ್ಧದಲ್ಲಿ ಭಾಗಿಯಾದ ದೇಶಗಳ ಪ್ರತೀ ಕುಟುಂಬವೂ ಕನಿಷ್ಠ ಒಂದಾದರೂ ಸಾವು ಅಥವಾ ನೋವನ್ನು ಅನುಭವಿಸಿತ್ತು. ಕಡೆಗೆ ರಷ್ಯಾದ ಪರಾಕ್ರಮದಿಂದ ನಾಜಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸಾಧ್ಯವಾಯಿತು. ಆದರೆ ಅಷ್ಟೊತ್ತಿಗಾಗಲೇ ಮಾನವಕುಲಕ್ಕೆ ಮಾನವನೇ ಮುಳ್ಳು ಎಂಬ ಸತ್ಯದ ಅರಿವು ಎಲ್ಲರಿಗೂ ಆಗಿತ್ತು. ಯುರೋಪಿನ ಪ್ರತಿಯೊಬ್ಬರ ಹೃದಯದ ಬಡಿತದಲ್ಲಿ ಕೇಳಿಬರುತ್ತಿದ್ದ ಏಕೈಕ ಪದವೆಂದರೆ ಶಾಂತಿ.

ಸಮಾಜವಿಜ್ಞಾನಿಗಳ ಪ್ರಕಾರ, ಯುದ್ಧ ಮತ್ತು ಶಾಂತಿ ಎರಡೂ ಸಮಾಜದ ಅವಿಭಾಜ್ಯ ಅಂಶಗಳು. ಆದರೆ ಯುದ್ಧಗಳ ಮೂಲವನ್ನು ಅರಸುವ ವೈಜ್ಞಾನಿಕ ಪ್ರಯತ್ನ ಮಾಡಿದರೆ ನಮಗೆ ನಿರ್ಣಾಯಕವಾಗಿ ದೊರಕುವುದು ಒಂದೇ ಉತ್ತರ: ಸಾಮ್ರಾಜ್ಯಶಾಹಿ ಧೋರಣೆ. ಈ ಧೋರಣೆಗೆ ವಿರೋಧ ವ್ಯಕ್ತವಾದಾಗಲೆಲ್ಲ ನಮ್ಮ
ಇತಿಹಾಸದುದ್ದಕ್ಕೂ ಯುದ್ಧಗಳಾಗಿವೆ. ಆದರೆ ಇಪ್ಪತ್ತನೇ ಶತಮಾನದ ಮಹಾಯುದ್ಧಗಳು ಹಿಂದೆ ನಡೆದಿರುವ ಎಲ್ಲ ಯುದ್ಧಗಳಿಗಿಂತಲೂ ಬಹಳ ವಿಭಿನ್ನ. ಇವುಗಳಲ್ಲಿ ಎರಡನೆಯ ಮಹಾಯುದ್ಧವು ಅತ್ಯಂತ ಕ್ರೂರವಾದದ್ದು. ಈ ಯುದ್ಧವು ಮುಗಿಯುವ ವೇಳೆಗೆ 5.4 ಕೋಟಿ ಜನರು ಜೀವ ಕಳೆದುಕೊಂಡರೆ, 2.8 ಕೋಟಿ ಜನ ಶಾಶ್ವತವಾಗಿ ಅಂಗವಿಕಲರಾದರು.

ಎರಡೂ ಮಹಾಯುದ್ಧಗಳು ಜೀವಹಾನಿಗೆ ಮಾತ್ರ ಕಾರಣವಾಗಲಿಲ್ಲ. ಗಮನಿಸಬೇಕಾದ ಬಹಳ ಮುಖ್ಯವಾದ ಅಂಶವೆಂದರೆ, ಯುರೋಪಿನ ಜನರಲ್ಲಿ ಮಾನವನಿರ್ಮಿತ ಸಂಸ್ಥೆಗಳ ಬಗ್ಗೆ ಇದ್ದ ಅಪಾರವಾದ ನಂಬಿಕೆಯಲ್ಲಿ ಬಿರುಕು ಕಾಣಿಸತೊಡಗಿತು. ಸೃಷ್ಟಿ, ಜೀವನ ಮತ್ತು ಮನುಷ್ಯ ಇತ್ಯಾದಿ ಅಂಶಗಳ ಕ್ರಿಶ್ಚಿಯನ್ ವ್ಯಾಖ್ಯಾನಗಳು ಅರ್ಥಹೀನ ಎನಿಸತೊಡಗಿದವು.
ತತ್ವಜ್ಞಾನಿಗಳ ನವಪೀಳಿಗೆಯೇ ಪ್ರಾರಂಭವಾಗಿ, ಮನುಷ್ಯ ಎಂದರೆ ಯಾರು, ಜೀವನ ಎಂದರೆ ಏನು, ಜೀವನದ ಅರ್ಥ ಮತ್ತು ಉದ್ದೇಶಗಳೇನು ಎಂಬ ಪ್ರಶ್ನೆಗಳನ್ನು ಕೇಳುತ್ತ ಸಾರ್ತ್ರ್ ಎಂಬ ಚಿಂತಕ ಅಸ್ತಿತ್ವವಾದ ಎಂಬ ಹೊಸ ಚಿಂತನೆಗೆ ನಾಂದಿ ಹಾಡಿದ.

ತಾನು ಸಹ ಯುದ್ಧದಲ್ಲಿ ಭಾಗಿಯಾಗಿದ್ದ ಸಂದರ್ಭ ದಲ್ಲಿ ಮಾರ್ಟಿನ್ ಹೇಯ್ಡಿಗರ್ ಚಿಂತನೆಗಳಿಂದ ಸಾರ್ತ್ರ್ ಬಹಳ ಪ್ರಭಾವಿತನಾಗಿದ್ದ. ಸಾರ್ತ್ರ್ ಪ್ರಕಾರ, ಈ ಭೂಮಿ ಎಂಬ ರಂಗದಲ್ಲಿ ನಾವು ಯಾವುದೇ ಹಸ್ತಪ್ರತಿಯ ಸಹಾಯವಿಲ್ಲದೆ ವೇದಿಕೆಗೆ ತಳ್ಳಲ್ಪಟ್ಟ ನಟರಿದ್ದಂತೆ. ‘ಬೀಯಿಂಗ್ ಆ್ಯಂಡ್ ನಥಿಂಗ್‌ನೆಸ್’ ಎಂಬ ಪುಸ್ತಕದಲ್ಲಿ, ಜೀವನ ಏನು ಎಂಬುದನ್ನು ನಿರ್ಧರಿಸುವ ಜಾಗೃತ ಮನಸ್ಸಿನ ಜೀವಿಗಳು ನಾವು ಎಂದು ಸಾರ್ತ್ರ್ ವಾದಿಸುತ್ತಾನೆ. ಅಂದರೆ ನಮ್ಮ ಹಿಂದೆ ಧರ್ಮದ ರಕ್ಷೆಯಾಗಲೀ ದಾರಿದೀಪವಾಗಲೀ ಇರುವುದಿಲ್ಲ, ನಾವು ಏಕಾಂಗಿಗಳು ಎಂದು ಬಹಳ ಹತಾಶೆಯಿಂದ ಹೇಳುತ್ತಾನೆ. ನಮ್ಮ ಇರುವಿಕೆಯನ್ನು (ಬೀಯಿಂಗ್) ನಮ್ಮ ಗಮನಕ್ಕೆ ತರುವುದು ಬೇಸರ ಮತ್ತು ವಾಕರಿಕೆ. ಶೂನ್ಯತೆಯನ್ನು (ನಥಿಂಗ್‌ನೆಸ್) ನಾವು ಹೊರಗೆಲ್ಲೂ ಹುಡುಕಬೇಕಿಲ್ಲ. ಶೂನ್ಯತೆಯು ನಮ್ಮ ಇರುವಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಈ ಪುಸ್ತಕದ ಮೂಲಕ ಸಾರ್ತ್ರ್ ಇಪ್ಪತ್ತನೇ ಶತಮಾನದ ಮನುಷ್ಯನ ಜೀವನವನ್ನು ವಿವರಿಸುತ್ತಾನೆ.

ಅಸ್ತಿತ್ವವಾದದ ಹರಿಕಾರನಾಗಿ ಸಾರ್ತ್ರ್ ಗುರುತಿಸಲ್ಪಟ್ಟರೂ ಇವನಿಗಿಂತ ಮುಂಚೆ ಜರ್ಮನಿಯ ಚಿಂತಕ ಫ್ರೆಡ್ರಿಕ್‌ ನೀಷೆ  ‘ದೇವರು ಸತ್ತು ಹೋಗಿದ್ದಾನೆ’ ಎಂಬ ವಾಕ್ಯದ ಮೂಲಕ ಇಡೀ ಯುರೋಪಿಗೆ ಆಘಾತ ಉಂಟುಮಾಡಿದ್ದನು. ಮನುಷ್ಯನ ಆಧುನಿಕ ಜೀವನದಲ್ಲಿ ಧರ್ಮ ಮತ್ತು ದೇವರ ಪಾತ್ರಗಳನ್ನು ವ್ಯಾಖ್ಯಾನಿಸುವ ಹಿನ್ನೆಲೆಯಲ್ಲಿ ಮನುಷ್ಯನ ಮುಖ್ಯ ಗುಣಗಳು ದುರ್ಬಲತೆ ಮತ್ತು ಹೇಡಿತನ ಎಂದು ಹೇಳುತ್ತಾನೆ. ದೇವರು ಸತ್ತು ಹೋಗಿದ್ದಾನೆ ಎಂದರೆ ದೇವರ ಬಗ್ಗೆ ಇದ್ದ ನಂಬಿಕೆ ಸತ್ತಿದೆ ಎಂದು ಅರ್ಥ. ಮನುಷ್ಯನು ದೇವರ ಮೇಲಿನ ತನ್ನ ಅವಲಂಬನೆಯನ್ನು ಬಿಟ್ಟ ನಂತರ ಅವನ ಅರಿವಿಗೆ ಬರುವುದು ಅವನ ಒಂಟಿತನ.

ಸಾರ್ತ್ರ್, ನೀಷೆ, ಕೀರ್ಕೆಗಾರ್ಡ್‌ರಂತಹ ಚಿಂತಕರ ಕೊಡುಗೆಗಳಿಂದ ಸಾಹಿತ್ಯ ರಚನೆಗೆ ಹೊಸ ಆಯಾಮಗಳು ಮತ್ತು ಹೊಸ ವಿಷಯಗಳು ದೊರೆತವು. ಜೀವನದ ಅನುಭವಗಳನ್ನು ಅಭಿವ್ಯಕ್ತಗೊಳಿಸುವ ದಿಸೆಯಲ್ಲಿ ಅಸ್ತಿತ್ವ ವಾದವು ಅನೇಕ ಬರಹಗಾರರಿಗೆ ಹಿನ್ನೆಲೆಯಾಯಿತು. ಬಹಳಷ್ಟು ಸಾಹಿತಿಗಳು ಇಪ್ಪತ್ತನೇ ಶತಮಾನದ ಮನುಷ್ಯ ಅನುಭವಿಸುತ್ತಿದ್ದ ಆತಂಕ, ಶೂನ್ಯತೆ, ಅರ್ಥಹೀನತೆ, ಸಾವು, ಪರಕೀಯತೆ ಮುಂತಾದ ವಿಚಾರಗಳನ್ನು ಚರ್ಚಿಸ ತೊಡಗಿದರು. ಅಷ್ಟು ಸಾಲದೆಂಬಂತೆ ಈ ಅಂಶಗಳು ದೇವರಿಗಿಂತ ಮಿಗಿಲಾದ ಸತ್ಯಗಳು ಎಂದು ಓದುಗರ ಮನ ಸೆಳೆದಿದ್ದವು.

ಇಪ್ಪತ್ತನೇ ಶತಮಾನವನ್ನು ಮಹಾಯುದ್ಧಗಳು ಕಾಡಿದರೆ ಇಪ್ಪತ್ತೊಂದನೇ ಶತಮಾನವನ್ನು ಕೋವಿಡ್– 19 ಸಾಂಕ್ರಾಮಿಕವು ಕಾಡುತ್ತಿದೆ. ಬಹಳಷ್ಟು ಜನ ಅಸ್ತಿತ್ವವಾದವನ್ನು ಒಪ್ಪುತ್ತಿರುವುದು ಮತ್ತು ಆತಂಕ, ಶೂನ್ಯತೆ, ಅರ್ಥಹೀನತೆ, ಸಾವು, ಪರಕೀಯತೆ ಮುಂತಾದ ಅಂಶಗಳು ಬಹಳ ಆಪ್ತ ಎನಿಸುತ್ತಿರುವುದು ಇತಿಹಾಸವು ಪುನರಾವರ್ತನೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹತಾಶೆ ಎಲ್ಲರಲ್ಲಿಯೂ ಮನೆ ಮಾಡಿದೆ. ಭವಿಷ್ಯ ಎಂಬುದು ಈ ಕ್ಷಣಕ್ಕೆ ಯಾರ ಚಿಂತನೆಗಳಲ್ಲಿಯೂ ಇದ್ದಂತೆ ತೋರುತ್ತಿಲ್ಲ. ಈ ಸಾಂಕ್ರಾಮಿಕದಿಂದ ಪಾರಾದರೆ ಸಾಕು ಎಂಬುದು ಎಲ್ಲರ ಸದ್ಯದ ಆದ್ಯತೆ.

ಇತಿಹಾಸ ಪುನರಾವರ್ತನೆಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂದರೆ, ಮಹಾಯುದ್ಧಗಳು ಮುಗಿದ ನಂತರ ಜನರಲ್ಲಿ ಮೊದಲು ಅಪನಂಬಿಕೆ ಹುಟ್ಟಿದ್ದು ಧರ್ಮದ ಬಗ್ಗೆ. ನಂತರ ರಾಜಕೀಯ ಸ್ಥಿರತೆಯೂ ಅನುಮಾನಾಸ್ಪದವಾಗಿ ಕಾಣಿಸತೊಡಗಿತು. ನಮ್ಮ ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ದೇವರ ಮೊರೆ ಹೋಗುವ ಅನಿವಾರ್ಯ ಎದುರಾಗಿದ್ದರೂ ಅವರ ತರ್ಕಕ್ಕೆ ನಿಲುಕ ದಂತೆ ಜನರ ಸಾವಿಗೆ ಕಾರಣವಾಗುತ್ತಿರುವ ವೈರಸ್ಸು ದೈವಶಕ್ತಿಗಿಂತಲೂ ಪ್ರಬಲ ಎಂದು ತೋರುತ್ತಿದೆ. ಇದು ಸಾಲದೆಂಬಂತೆ ಲಸಿಕೆಯ ಲಭ್ಯತೆಯಲ್ಲಿನ ಗೊಂದಲ, ಆರೋಗ್ಯ ವ್ಯವಸ್ಥೆಯ ವೈಫಲ್ಯ ಮುಂತಾದವುಗಳು ಪ್ರತಿ ಯೊಬ್ಬರಲ್ಲೂ ತಾವು ಏಕಾಂಗಿಗಳು ಎಂಬ ಭಾವನೆಗೆ ಕಾರಣವಾಗಿವೆ.

ಹೀಗೆ ಬಹಳ ಹತಾಶೆಯಿಂದ ಕೂಡಿದ ಸಾಹಿತ್ಯ ರಚನೆ ಯನ್ನು ನೆನಪಿಸಿಕೊಳ್ಳುವ ಸಮಯದಲ್ಲಿ ಹೋಲೊಕಾಸ್ಟ್ ಕೂಡ ನೆನಪಾಗುತ್ತದೆ. ಇಪ್ಪತ್ತನೇ ಶತಮಾನದ ಮತ್ತೊಂದು ಮರೆಯಲಾಗದ ಅಂಶವೆಂದರೆ, ಜರ್ಮನಿಯಲ್ಲಿ ಆದ ಯಹೂದಿಯರ ನರಮೇಧ. ಇದನ್ನೇ ಹೋಲೊಕಾಸ್ಟ್ ಎಂದು ಕರೆಯುವುದು. ಈ ನರಮೇಧದಲ್ಲಿ ನಾಜಿಗಳು ಅರವತ್ತು ಲಕ್ಷ ಯಹೂದಿ ಯರನ್ನು ಬಹಳ ವ್ಯವಸ್ಥಿತವಾಗಿ ಕೊಂದು ಹಾಕಿದರು. ಯಹೂದಿಯರನ್ನು ಕೊಲ್ಲಲಿಕ್ಕಾಗಿಯೇ ಕಾನ್ಸ
ನ್ಟ್ರೇಷನ್ ಕ್ಯಾಂಪುಗಳನ್ನು ಹಿಟ್ಲರ್ ನಿರ್ಮಿಸಿದ್ದನು. ಈ ಹಂತದಲ್ಲಿ ಈ ಅಮಾನವೀಯ ಮತ್ತು ಅತ್ಯಂತ ಕ್ರೂರ ನರಮೇಧದಲ್ಲಿ ಬಲಿಪಶುಗಳಾದವರ ಕತೆಗಳನ್ನಾಧರಿಸಿದ, ಆಸ್ಕರ್ ಪ್ರಶಸ್ತಿಗೆ ಭಾಜನವಾದ ಚಲನಚಿತ್ರ ‘ಲೈಫ್ ಈಸ್ ಬ್ಯೂಟಿಫುಲ್’ ನೆನಪಿಗೆ ಬರುತ್ತದೆ.

ರೊಬೆರ್ಟೊ ಬೆನಿಗ್ನಿ ನಿರ್ದೇಶನದ ಈ ಚಿತ್ರದಲ್ಲಿ ಕಥಾನಾಯಕ ಯಹೂದಿ ಆಗಿದ್ದು, ಅವನು ಮತ್ತು ಅವನ ಪುಟ್ಟ ಮಗ ಇಬ್ಬರೂ ಕಾನ್ಸನ್ಟ್ರೇಷನ್ ಕ್ಯಾಂಪುಗಳಲ್ಲಿ ಬಂಧಿತರಾಗುತ್ತಾರೆ. ಸಾಮಾನ್ಯವಾಗಿ ಈ ಕ್ಯಾಂಪುಗಳಲ್ಲಿ ಕಂಡುಬರುವುದು ನಿರಂತರ ಯಾತನೆ, ಎಣೆಯೇ ಇಲ್ಲದ ನೋವು ಮತ್ತು ತಪ್ಪಿಸಲು ಸಾಧ್ಯವಿರದ ಸಾವು. ಇಂತಹ ವಿಷಮ ಪರಿಸ್ಥಿಯಲ್ಲಿ ಸಹ ಕಥಾನಾಯಕ ತನ್ನ ಮಗನಿಗೆ ಅದೊಂದು ಆಟ ಮತ್ತು ಉಳಿದ ಯಹೂದಿಯರು ಅವನೊಂದಿಗೆ ಆ ಆಟದಲ್ಲಿ ಪಾಲ್ಗೊಂಡಿರುವ ಆಟಗಾರರು ಎಂಬ ಭಾವನೆ ಬರುವಂತೆ ಮಾಡುತ್ತಾನೆ. ಯಾವ ಹಂತದಲ್ಲಿಯೂ ಆ ಪುಟ್ಟ ಬಾಲಕನಿಗೆ ತಾವು ಸಾವನ್ನು ಎದುರು ನೋಡುತ್ತಿದ್ದೇವೆ ಎಂದು ಅನ್ನಿಸುವು ದಿಲ್ಲ. ಕಡೆಗೆ ತನ್ನ ತಂದೆಯ ಕೊಲೆಯಾದ ಮೇಲೂ ಆ ಬಾಲಕ ತಾನೊಂದು ಆಟ ಆಡುತ್ತಿದ್ದೇನೆ, ಜೀವನ ಸುಂದರವಾಗಿದೆ ಎಂಬ ಭಾವನೆಯಲ್ಲಿಯೇ ಇರುತ್ತಾನೆ.

ಈ ದಿಸೆಯಲ್ಲಿ ಅಸ್ತಿತ್ವವಾದವನ್ನು ಒಳಗೊಂಡ ಸಾಹಿತ್ಯ ನಮ್ಮ ಪರಿಸ್ಥಿತಿಯನ್ನು ಸತ್ಯಕ್ಕೆ ದೂರವಿರದಂತೆ ವ್ಯಾಖ್ಯಾನಿಸಿದರೂ ಇಂದಿನ ಬಿಕ್ಕಟ್ಟಿನಲ್ಲಿ ‘ಲೈಫ್ ಈಸ್ ಬ್ಯೂಟಿಫುಲ್’ ಚಲನಚಿತ್ರವೇಕೆ ನಮಗೆ ಜೀವನದ
ಸ್ಫೂರ್ತಿಯಾಗಬಾರದು ಎಂಬುದಷ್ಟೇ ಒಂದು ಸಣ್ಣ ಆಶಯ.

ಲೇಖಕ: ಪ್ರಾಧ್ಯಾಪಕ, ಇಂಗ್ಲಿಷ್‌ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತುಮಕೂರು ವಿಶ್ವವಿದ್ಯಾಲಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು