ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‍ರಿಂದ ಟಿಕಾಯತ್‌ತನಕ

ಫೀನಿಕ್ಸ್‌ ಹಕ್ಕಿಯಂತೆ ಇದೀಗ ಮರುಹುಟ್ಟು ಪಡೆದಿದೆ ರೈತ ಚಳವಳಿ
Last Updated 31 ಜನವರಿ 2021, 19:31 IST
ಅಕ್ಷರ ಗಾತ್ರ

ಒಂದು ನೆನಪಿನಿಂದ ಈ ಲೇಖನ ಆರಂಭಿಸುತ್ತೇನೆ. 1987ರ ಡಿಸೆಂಬರ್ ಚಳಿಗಾಲದ ಸಂದರ್ಭ. ಕರ್ನಾಟಕದ ರೈತ ಚಳವಳಿಯ ಪ್ರೊ. ಎಂ.ಡಿ. ನಂಜುಂಡಸ್ವಾಮಿ ದೆಹಲಿಗೆ ಆಗಷ್ಟೇ ಬಂದಿದ್ದರು. ಅದಕ್ಕೆ ಕಾರಣವಿತ್ತು. ಆ ಹೊತ್ತಿಗೆ ರೈತ ಚಳವಳಿಯಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಅಂತರರಾಜ್ಯ ಸಮನ್ವಯ ಸಮಿತಿಗೆ ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ನಾಯಕರಾದ ಶರದ್ ಜೋಷಿ ಅವರನ್ನು ಸೇರಿಸಿಕೊಳ್ಳಬಾರದೆಂದು ಉತ್ತರಪ್ರದೇಶದ ಭಾರತೀಯ ಕಿಸಾನ್ ಯೂನಿಯನ್‌ನ ಮಹೇಂದ್ರ ಸಿಂಗ್ ಟಿಕಾಯತ್ ಪಟ್ಟು ಹಿಡಿದಿದ್ದರು. ಇವರ ನಡುವೆ ರಾಜಿ ಮಾಡಲು ನಂಜುಂಡಸ್ವಾಮಿ, ಹಿರಿಯ ಸಮಾಜವಾದಿ ಕಿಶನ್ ಪಟ್ನಾಯಕ್ ಮತ್ತು ಒಂದಿಬ್ಬರು ಹೋಗಬೇಕಿತ್ತು. ವಿದ್ಯಾರ್ಥಿಗಳಾಗಿದ್ದ ನಾವೆಲ್ಲ ಅದರ ಹಿಂದಿನ ರಾತ್ರಿ ಅವರನ್ನು ಜೆಎನ್‍ಯುಗೆ ಆಹ್ವಾನಿಸಿದ್ದೆವು.

ಈ ಸಂದರ್ಭದಲ್ಲಿ ಎರಡು ಅಂಶಗಳು ಮುನ್ನೆಲೆಗೆ ಬಂದವು: ಒಂದು, ಹತ್ತು ಹಲವು ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ರೈತ ಚಳವಳಿ ಕುರಿತು ಗೊತ್ತಿಲ್ಲದಿದ್ದುದು. ಇದು ಉತ್ತರ ಭಾರತದವರ ಅಜ್ಞಾನದ ಪರಾಕಾಷ್ಠೆಯ ದ್ಯೋತಕವಾಗಿತ್ತು. ಎರಡನೆಯದು, ಆ ಚರ್ಚೆಯಲ್ಲಿ ಹುಟ್ಟಿಕೊಂಡ ಹೊಸ ಪರಿಕಲ್ಪನೆ ‘ಖಾದಿ ಕರ್ಟನ್’.

ಇವುಗಳ ನಡುವೆ ಟಿಕಾಯತ್ ಕೊನೆಗೂ ರಾಜಿಯಾಗಲಿಲ್ಲ. ಟಿಕಾಯತ್ ಅವರ ಪ್ರಕಾರ, ಶರದ್ ಜೋಷಿ ಒಬ್ಬ ‘ರಾಜಕಾರಣಿ’ಯೇ ಹೊರತು ‘ರೈತ ನಾಯಕನಲ್ಲ’. ಯಾವುದೇ ಹೋರಾಟ ಅಂತಿಮ ವಿಶ್ಲೇಷಣೆಯಲ್ಲಿ ರಾಜಕೀಯದಿಂದ ಹೊರತಾಗಿರಲು ಸಾಧ್ಯವಿಲ್ಲವೆಂದರೂ ಟಿಕಾಯತ್ ಒಪ್ಪಲಿಲ್ಲ. ಕೊನೆಗೂ ಸಂಧಾನ ಮುರಿಯಿತು.

ಮಹೇಂದ್ರ ಸಿಂಗ್‌ ಟಿಕಾಯತ್‌ರನ್ನು ನೋಡಿದ್ದು ಇದೇ ಸಂದರ್ಭದಲ್ಲಿ- ಹರಕು ಚರ್‍ಪಾಯ್‍ ಮೇಲೆ ಕುಳಿತು ಹುಕ್ಕಾ ಸೇದುತ್ತಾ, ತೀರಾ ಗ್ರಾಮ್ಯ ಭಾಷೆಯಾಡುವ ‘ದೇಹಾತಿ’ಗೆ ರಾಷ್ಟ್ರ ಮಟ್ಟದ ಸ್ಥಾನ ಸಿಗಬಹುದೇ ಎಂಬ ಸಂದೇಹ ಬಂದದ್ದು ಸಹಜ. ಯಾಕೆಂದರೆ, ಅಷ್ಟರೊಳಗೆ ‘ಜಂಟಲ್‌ಮ್ಯಾನ್‌ ಫಾರ್ಮರ್’ ಎಂದು ಪ್ರತಿಬಿಂಬಿತರಾಗಿದ್ದ ಶರದ್ ಜೋಷಿ ಎಲ್ಲರ ಕಣ್ಮಣಿಯಾಗಿದ್ದರು. ಅವರ ಪರಿಕಲ್ಪನೆ ‘ಇಂಡಿಯಾ ವರ್ಸಸ್ ಭಾರತ್’ ಎಂಬ ಹೊಸ ಸಂಕಥನವನ್ನು ಹುಟ್ಟುಹಾಕಿತ್ತು.

ಇವುಗಳ ನಡುವೆ, 1980ರ ದಶಕದ ಅಂತ್ಯದವರೆಗೆ ಕರ್ನಾಟಕದ ನಂಜುಂಡಸ್ವಾಮಿಯವರಿಗೆ ಸಿಗಬೇಕಾದ ಸ್ಪೇಸ್ ಸಿಗಲಿಲ್ಲವೆಂದೇ ಹೇಳಬೇಕು. ಆರಂಭದ ದಿನಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್‌ನ ಹೋರಾಟದ ಕ್ಷೇತ್ರ ಉತ್ತರಪ್ರದೇಶದ ಮೀರಠ್‌ನ ಸಿಸೋಲಿ ಮತ್ತು ಶಾಮ್ಲಿಗೆ ಸೀಮಿತವಾಗಿತ್ತು. ಅದನ್ನು ಉತ್ತರಪ್ರದೇಶದ ಪೂರ್ವಕ್ಕೆ ವಿಸ್ತರಿಸಲು ಸಾಧ್ಯವೂ ಇರಲಿಲ್ಲ. ಯಾಕೆಂದರೆ ಅದರ ತಳಹದಿ ಇದ್ದದ್ದೇ ಮೀರಠ್‌ನ ಕಬ್ಬು ಬೆಳೆಗಾರರ ನಡುವೆ, ನೀರಾವರಿ ರೈತರ ನಡುವೆ ಮತ್ತು ‘ಹರಿತ್ ಕ್ಷೇತ್ರ’ದಲ್ಲಿ. ಅಷ್ಟು ಮಾತ್ರವಲ್ಲದೆ, ಟಿಕಾಯತ್ ಅಧೀನದಲ್ಲಿದ್ದ ‘ಖಾಪ್ ಪಂಚಾಯತ್’ಗಳು ಕೂಡ ಅದೇ ಪ್ರದೇಶಕ್ಕೆ ಸೀಮಿತಗೊಂಡಿದ್ದವು. ವಾಸ್ತವವಾಗಿ ಟಿಕಾಯತ್ ತನ್ನ ಜಾತಿಯ ಖಾಪ್ ಪಂಚಾಯತ್‍ನ ಮುಖ್ಯಸ್ಥರಾಗಿದ್ದರು. ಈ ಪಂಚಾಯತ್ ಹೆಚ್ಚು ಕಡಿಮೆ 48 ಹಳ್ಳಿಗಳಿಗೆ ಹರಡಿತ್ತು. ಟಿಕಾಯತ್ ರೈತ ನಾಯಕನಾಗಲು ಮತ್ತೆರಡು ಅಂಶಗಳು ಸಹಾಯ ಮಾಡಿದವು: ಅವುಗಳೆಂದರೆ ಅಲ್ಲಿದ್ದ ‘ಬೈಚಾರ’ ಸಂಬಂಧಗಳು ಮತ್ತು ಚರಣ್ ಸಿಂಗ್ ನಂತರ ಖಾಲಿಯಾಗಿದ್ದ ರೈತರ ನಾಯಕತ್ವ...

ಚರಣ್ ಸಿಂಗ್ ಒಬ್ಬ ಮುತ್ಸದ್ದಿ ರಾಜಕಾರಣಿ ಮಾತ್ರವಲ್ಲದೆ ರೈತರ ಧ್ವನಿಯಾಗಿದ್ದರು. ಇದಕ್ಕೆ ಅವರು ಬರೆದ ಪುಸ್ತಕಗಳೇ ಸಾಕ್ಷಿ: ಜಾಯಿಂಟ್ ಫಾರ್ಮಿಂಗ್... (1959), ಇಂಡಿಯಾಸ್ ಎಕನಾಮಿಕ್ ಪಾಲಿಸಿ- ದಿ ಗಾಂಧಿಯನ್ ಬ್ಲೂ ಪ್ರಿಂಟ್, (1978), ಎಕನಾಮಿಕ್ ನೈಟ್‌ಮೇರ್ ಆಫ್ ಇಂಡಿಯಾ (1981) ಇತ್ಯಾದಿ. ಇವುಗಳಲ್ಲಿ ...ಗಾಂಧಿಯನ್ ಬ್ಲೂ ಪ್ರಿಂಟ್ ಪುಸ್ತಕವು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪಠ್ಯಪುಸ್ತಕವೂ ಆಗಿತ್ತು.

1980ರ ದಶಕದಲ್ಲಿ ಕರ್ನಾಟಕದ ರೈತ ಸಂಘಕ್ಕೆ ಅವರು ಬರೆದ ಪತ್ರದ ತುಣುಕನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಉತ್ತಮ. ‘ಅತೀ ಹೆಚ್ಚು ರೈತ ಪ್ರತಿನಿಧಿಗಳು ನಮ್ಮ ಪಾರ್ಲಿಮೆಂಟಿಗೆ ಹೋಗಲಿ. ಆಗ ಗಂಗಾ- ಕಾವೇರಿ ಸಂಗಮವಾಗುತ್ತದೆ’. 1970ರ ದಶಕದಲ್ಲಿ ಚರಣ್ ಸಿಂಗ್ ಮತ್ತು ಹರಿಯಾಣದ ದೇವಿಲಾಲ್ ಅವರು ರೈತರಿಗೆ ರಾಜಕೀಯ ಧ್ವನಿ ನೀಡಿದರು. ಅವರ ಬೃಹತ್ ರ‍್ಯಾಲಿಗಳ ಬೇಡಿಕೆಗಳಲ್ಲಿ ಕೃಷಿಗೆ ಕೈಗಾರಿಕೆಯ ದರ್ಜೆ, ತುಲನಾತ್ಮಕ ಬೆಲೆ, ವಿದೇಶದಿಂದ ಕೃಷಿ ಸಲಕರಣೆಗಳ ಆಮದು, ಕೈಗಾರಿಕೆಗೆ ನೀಡುತ್ತಿರುವ ಸವಲತ್ತುಗಳ ಕಡಿತ, ಗ್ರಾಮೀಣ ಮತ್ತು ನಗರದ ನಡುವಿನ ಆದಾಯದ ಅಂತರ ಕಡಿಮೆಗೊಳಿಸುವುದು ಇತ್ಯಾದಿಗಳಿದ್ದವು. ಕೆಲವರು ಇವರ ವಾದವನ್ನು ಕುಲಕ್, ಅಂದರೆ ಶ್ರೀಮಂತ ರೈತರ ವಾದವೆಂದು ಕರೆದರು.

ಈ ಸಂದರ್ಭದಲ್ಲಿ ಹಿರಿಯ ಟಿಕಾಯತ್ ಮೂರು ಕಾರಣಗಳಿಗೆ ಮುಖ್ಯರಾಗುತ್ತಾರೆ. ಒಂದನೆಯದಾಗಿ, ರೈತ ಹೋರಾಟಕ್ಕೆ ಗ್ರಾಮೀಣ ಭಾಷೆಯ ಸೊಗಡನ್ನು ನೀಡಿದ್ದಕ್ಕಾಗಿ. ಅವರ ಹೋರಾಟಕ್ಕೆ ಹೊಸ ಆಯಾಮ ಸಿಕ್ಕಿದ್ದು ದೆಹಲಿಯ 1988ರ ಬೋಟ್ ಕ್ಲಬ್‍ನ ಹೋರಾಟದಿಂದ. ಅದರ 35 ಬೇಡಿಕೆಗಳ ಪಟ್ಟಿ ಒಂದು ಸನ್ನದು ಆಗಿತ್ತು- ಕಬ್ಬಿಗೆ ಬೆಂಬಲ ಬೆಲೆ, ವಿದ್ಯುತ್‍ ದರಗಳಲ್ಲಿ ಮಾಫಿ ಇತ್ಯಾದಿ. 1988ರಲ್ಲಿ 110 ದಿನಗಳ ರಸ್ತೆ ರೋಕೊ- ರೈಲ್ ರೋಕೊ ಚಳವಳಿ, 1989ರಲ್ಲಿ ನಲಿಮ ಲಾವೋ ಚಳವಳಿ, 1990ಕ್ಕೆ ಲಖನೌದಲ್ಲಿ ಬೃಹತ್ ಸಮಾವೇಶ, 1992ರಲ್ಲಿ ಮಹಾ ಪಂಚಾಯತ್, ಅದೇ ವರ್ಷ ಗಾಜಿಯಾಬಾದ್‍ನಲ್ಲಿ ಟೆಲ್ಕೊ ಕಂಪನಿಯ ವಿರುದ್ಧ ಭೂ ಪರಿಹಾರ ಚಳವಳಿ, 1993ಕ್ಕೆ ಬೀಜ ಸತ್ಯಾಗ್ರಹ, 2008ಕ್ಕೆ ಜಂತರ್ ಮಂತರ್‌ನಲ್ಲಿ ಧರಣಿ, ಸ್ವಾಮಿನಾಥನ್ ಸಮಿತಿ ವರದಿ ಜಾರಿಗೆ ಮತ್ತು ಸಾಲ ಮನ್ನಾ ಬೇಡಿಕೆಗಳೊಂದಿಗೆ ದೆಹಲಿತನಕ ಕಿಸಾನ್ ಕ್ರಾಂತಿ ಯಾತ್ರಾ ಚಳವಳಿ ಇತ್ಯಾದಿ.

ಎರಡನೆಯದಾಗಿ, ಕರ್ನಾಟಕದ ರೈತ ಹೋರಾಟದೊಂದಿಗೆ ಜೊತೆಗೂಡಿ ಹೊರಾಟವನ್ನು ಅಂತರರಾಷ್ಟ್ರೀಯಗೊಳಿಸಿದ್ದು ಮತ್ತು ಜಾಗತೀಕರಣ ವಿರೋಧಿ ಹೋರಾಟಗಳ ಭಾಗಿಯಾಗುತ್ತಾ ಗಟ್ಟಿ ಧ್ವನಿಯಾದದ್ದು. ಇವುಗಳ ನಡುವೆ ಟಿಕಾಯತ್‍ರ ತಳಹದಿಗಳು ಅಲ್ಲಾಡತೊಡಗಿದ್ದವು. ಅವರ ಸಾವಿನ ಸಂದರ್ಭದಲ್ಲಿ (2011) ಕೋಮು ಧ್ರುವೀಕರಣವು ಅವರ ಸಾಮಾಜಿಕ ತಳಹದಿಗಳನ್ನು ನುಂಗಿಹಾಕಿತ್ತು. ಒಂದು ಕಾಲದಲ್ಲಿ ಕೋಮುವಾದವನ್ನು ಗಟ್ಟಿಯಾಗಿ ವಿರೋಧಿಸುತ್ತಿದ್ದ ರೈತ ಹೋರಾಟವು ಅದಕ್ಕೆ ಬಲಿಯಾಯಿತು. ಅದರ ನಾಯಕರೇ ಇದರ ಭಾಗಗಳಾದದ್ದು ದುರಂತವೆನ್ನಬಹುದು. ಕೆಲವರು ಈ ಹೋರಾಟಕ್ಕೆ ಅಂತಿಮ ಚರಣವನ್ನು ಕೂಡ ಹಾಡಿದ್ದರು.

ಈ ಅಂತಿಮ ಚರಣವನ್ನು ದೆಹಲಿಯ ಕೆಂಪುಕೋಟೆಯ ಈಚಿನ ಘಟನೆ ಮತ್ತೊಮ್ಮೆ ಹಾಡಿದ ಮರುಕ್ಷಣವೇ ರೈತ ಹೋರಾಟ ಪುಟಿದೆದ್ದಿದೆ. ಟಿಕಾಯತ್‍ರ ಮಗನಾದ ರಾಕೇಶ್‍ ಟಿಕಾಯತ್‌ ಅವರ ಕಣ್ಣೀರು, ಹೋರಾಟದ ಕಥನವನ್ನು ಬದಲಾಯಿಸಿದೆ. ಕಣ್ಣೀರ ಹಿಂದೆ ಹತಾಶೆಯ ಬದಲಿಗೆ ನಂಬಿಕೆದ್ರೋಹದ ಕ್ರೋಧವಿತ್ತು, ದೃಢತೆ ಇತ್ತು, ಇಡೀ ರೈತ ಸಮುದಾಯದ ಕರಾಳ ಕಥನವಿತ್ತು. ರಾಕೇಶ್ ಖಾಪ್ ಪಂಚಾಯತ್‍ನ ಮುಖ್ಯಸ್ಥರೂ ಅಲ್ಲ, ಯೂನಿಯನ್‍ನ ಅಧ್ಯಕ್ಷರೂ ಅಲ್ಲ. ಒಬ್ಬ ಸಾಮಾನ್ಯ ವಕ್ತಾರ. ಹೋರಾಟದ ಮುಂಚೂಣಿಯಲ್ಲಿದ್ದ ಪಂಜಾಬ್‌ ರೈತರ ಸ್ಥಾನಕ್ಕೆ ಈಗ ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್‍ ಬಂದಿದೆ; ಇದು ಅವರ ದುಗುಡಕ್ಕೆ ಸಿಕ್ಕ ಸ್ಪಂದನದ ಪರಿಣಾಮ. ಕೋಮುವಾದಕ್ಕೆ ಬಲಿಯಾದ ಪಶ್ಚಾತ್ತಾಪದಿಂದ ಭಾರತೀಯ ಕಿಸಾನ್‌ ಯೂನಿಯನ್‌ ಹೊರಬರುವ ಲಕ್ಷಣಗಳು ಕಂಡುಬರುತ್ತಿವೆ.

ಉತ್ತರಪ್ರದೇಶ ನಮ್ಮ ದೇಶದ ರೈತರ ರಾಜಕಾರಣದ ಹೊಸ ಬಿಂದುವಾಗುವ ಲಕ್ಷಣಗಳಿವೆ. ಇವುಗಳ ಮಧ್ಯೆ ಹೊಸ ಬೇಡಿಕೆಗಳು ಮತ್ತು ಕಥನಗಳು ಸೇರ್ಪಡೆಯಾಗಬಹುದು. ರಾಕೇಶ್, ಚರಣ್ ಸಿಂಗ್‍ರ ಹೊಸ ಅವತಾರವಾದರೆ ಆಶ್ಚರ್ಯವಿಲ್ಲ. ಅದೇನೇ ಇದ್ದರೂ ರೈತ ಹೋರಾಟವು ಫೀನಿಕ್ಸ್ ಹಕ್ಕಿಯಂತೆ ಮರುಹುಟ್ಟು ಪಡೆದಿದ್ದು ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT