ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರದಿ ಸ್ವೀಕರಿಸಲು ಹಿಂದೇಟು ಹಾಕಿದರು’

Last Updated 2 ಅಕ್ಟೋಬರ್ 2020, 21:03 IST
ಅಕ್ಷರ ಗಾತ್ರ

ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದಿರುವ ‘ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕಮತ್ತು ಶೈಕ್ಷಣಿಕ ಸಮೀಕ್ಷೆ’ಯು ರಾಜ್ಯದ ತಳಸ್ತರದ ಸಮುದಾಯಗಳ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಒತ್ತಾಸೆಯಂತೆ ಈ ಸಮೀಕ್ಷೆ ನಡೆಯಿತು. ರಾಜ್ಯದ ಎಲ್ಲ ಕುಟುಂಬಗಳ ಪ್ರತಿ ಸದಸ್ಯನ ಸಮಗ್ರ ವಿವರವನ್ನು ಸಂಗ್ರಹಿಸಿ, ದಾಖಲಿಸಬೇಕಿದ್ದ ಕಾರಣದಿಂದ ಸಮೀಕ್ಷೆಯನ್ನು ಪೂರ್ಣಗೊಳಿಸುವುದು ವಿಳಂಬವಾಯಿತು. ಈ ಕಾರಣದಿಂದ ನಿಗದಿತ ಕಾಲಮಿತಿಯೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಧ್ಯವಾಗಲಿಲ್ಲ.

ಸಮೀಕ್ಷೆಯ ಆರಂಭದಿಂದಲೂ ಕೆಲವು ತೊಡಕುಗಳು ಇದ್ದವು. ಜನಸಂಖ್ಯೆಯ ಮಾಹಿತಿ ಕಲೆಹಾಕುವ ಸಂದರ್ಭದಲ್ಲೇ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯಗಳಿಂದ ಆಕ್ಷೇಪಗಳು ಎದ್ದಿದ್ದವು. ರಾಜಕೀಯವಾಗಿಯೂ ಈ ಆಕ್ಷೇಪಗಳು ಸಾಕಷ್ಟು ಕೆಲಸ ಮಾಡಿದ್ದವು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಮೀಕ್ಷೆಯ ವರದಿ ಸಿದ್ಧವಾಗಿತ್ತು. ವರದಿ ಸಲ್ಲಿಸುವುದಕ್ಕಾಗಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ತಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಹಲವು ಬಾರಿ ಭೇಟಿಮಾಡಿತ್ತು. ಆದರೆ, ಅವರು ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಒಪ್ಪಲಿಲ್ಲ. ವರದಿ ಸ್ವೀಕರಿಸಬಾರದು ಎಂಬ ಒತ್ತಡ ಮುಖ್ಯ ಕಾರ್ಯದರ್ಶಿಯವರ ಮೇಲೆ ಇದ್ದಂತೆ ಕಂಡುಬರುತ್ತಿತ್ತು.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಮುಗಿಯವವರೆಗೂ ಪ್ರಯತ್ನ ನಡೆಸಿದರೂ ಸರ್ಕಾರಕ್ಕೆ ವರದಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಯೋಗದ ಅಂದಿನ ಅಧ್ಯಕ್ಷ ಕಾಂತರಾಜ್‌ ಮತ್ತು ಎಲ್ಲ ಸದಸ್ಯರ ತೀರ್ಮಾನದಂತೆ ಆಯೋಗದ ಕಾರ್ಯದರ್ಶಿಯವರಿಗೆ ವರದಿಯನ್ನು ಸಲ್ಲಿಸಲಾಗಿತ್ತು. ‘ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ’ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಬಿ. ಶ್ರೀರಾಮುಲು ಅವರು ವಿಧಾನಮಂಡಲದಲ್ಲಿ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿದೆ. ವರದಿ ಈಗಲೂ ಆಯೋಗದ ಕಾರ್ಯದರ್ಶಿಯವರ ಬಳಿಯಲ್ಲೇ ಇದೆ.

ಈ ವರದಿಯು ರಾಜ್ಯದ ಎಲ್ಲ ಸಮುದಾಯಗಳ ಜನಸಂಖ್ಯೆ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ನಿಖರ ಅಂಕಿಅಂಶಗಳನ್ನು ಒದಗಿಸಲಿದೆ. ವಿವಿಧ ಜಾತಿ, ಸಮುದಾಯಗಳ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ನಿರ್ಧರಿಸಲು ವರದಿ ನೆರವಾಗುತ್ತದೆ. ಆದರೆ, ವರದಿಯಲ್ಲಿರುವ ನಿಖರ ಅಂಕಿಅಂಶಗಳನ್ನು ಒಪ್ಪಿಕೊಳ್ಳುವ ಇಚ್ಛಾಶಕ್ತಿ ಅಧಿಕಾರ ಕೇಂದ್ರದಲ್ಲಿರುವವರಿಗೆ ಇದ್ದಂತೆ ಕಾಣಿಸುವುದಿಲ್ಲ. ಈ ವರದಿಯನ್ನು ಸ್ವೀಕರಿಸಿ, ಅನುಷ್ಠಾನಕ್ಕೆ ತರಲು ಪ್ರಯತ್ನಗಳು ನಡೆಯಬಹುದು ಎಂಬ ಆಶಾಭಾವನೆಯೇನೂ ಉಳಿದಿಲ್ಲ.

(ಲೇಖಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT