ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕನ್ನಡದತ್ತಲೂ ಹೊರಳಿತು ಐಐಎಸ್ಸಿಯ ‘ತಿರುಳು‘

ವಿಜ್ಞಾನ ಸಂಶೋಧನೆಗಳತ್ತ ಬೆಳಕು ಚೆಲ್ಲುವ ನಿಯತಕಾಲಿಕೆ ‘ಕರ್ನಲ್‌’ ಈಗ ಕನ್ನಡದಲ್ಲೂ
Last Updated 8 ಅಕ್ಟೋಬರ್ 2020, 6:08 IST
ಅಕ್ಷರ ಗಾತ್ರ

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕನ್ನಡ ನೆಲದ ಹೆಮ್ಮೆ. ವೈಜ್ಞಾನಿಕ ಸಂಶೋಧನೆಯ ವಿಚಾರದಲ್ಲಿ 110 ವರ್ಷಗಳಿಂದ ದಾರಿದೀಪದಂತಿರುವ ಈ ಸಂಸ್ಥೆ ಕರ್ನಾಟಕಕ್ಕೆ, ಬೆಂಗಳೂರಿಗೆ ಮಾತ್ರವಲ್ಲ ಇಡೀ ಭಾರತಕ್ಕೆ ಮುಕುಟಪ್ರಾಯ. ತನ್ನ ವೈಜ್ಞಾನಿಕ ಸಂಶೋಧನೆಗಳ ತಿರುಳಿನ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡುವ ಸಲುವಾಗಿ ಐಐಎಸ್ಸಿ ಐದು ವರ್ಷಗಳ ಹಿಂದೆ ‘ಕರ್ನಲ್’ (ತಿರುಳು ಎಂಬುದು ಇದರ ಅರ್ಥ) ಎಂಬ ನಿಯತಕಾಲಿಕದ ಪ್ರಕಟಣೆಯನ್ನು ಆರಂಭಿಸಿತು. ಸಂಸ್ಥೆಯ ವಿಜ್ಞಾನಿಗಳು ನಡೆಸಿರುವ ಮಹತ್ತರ ಸಂಶೋಧನೆಗಳನ್ನು ಆಧರಿಸಿದ ಲೇಖನಗಳು ಅದರಲ್ಲಿ ಪ್ರಕಟವಾಗುತ್ತಿದ್ದವು. ಈ ನಿಯತಕಾಲಿಕವನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವ ಮೂಲಕ ವಿಜ್ಞಾನ ಪ್ರಸಾರ ಕಾರ್ಯದಲ್ಲೂ ಐಐಎಸ್ಸಿ ಇತರ ವಿಶ್ವವಿದ್ಯಾಲಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿತ್ತು. ಈಗ ‘ಕರ್ನಲ್‌’ ಸಂಚಿಕೆಗಳ ಕನ್ನಡ ಅನುವಾದವನ್ನೂ ಪ್ರಕಟಿಸಲು ಐಐಎಸ್ಸಿ ಆರಂಭಿಸಿದೆ. 2020ರ ಜೂನ್‌ ತಿಂಗಳ ‘ಕರ್ನಲ್‌’ ಸಂಚಿಕೆಯ ಕನ್ನಡ ಅವತರಣಿಕೆ ಈಗ ಐಐಎಸ್ಸಿ ವೆಬ್‌ಸೈಟ್‌ನಲ್ಲಿ(https://iisc.ac.in/outreach/publications/iisc-kernel/) ಲಭ್ಯ.

ಜನಸಾಮಾನ್ಯರು, ವಿಜ್ಞಾನವನ್ನು ಪದವಿಪೂರ್ವ ಹಾಗೂ ಪದವಿ ಹಂತದಲ್ಲಿ ಅಭ್ಯಾಸ ಮಾಡಿರದವರು ಕೆಲವು ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುವುದು ಕಷ್ಟ. ವೈಜ್ಞಾನಿಕ ವಿಚಾರಗಳ ಕ್ಲಿಷ್ಟತೆ, ಸಂಕೀರ್ಣತೆಗಳನ್ನು ಕನ್ನಡದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಕಟ್ಟಿಕೊಡುವುದು ಇನ್ನೂ ಕಷ್ಟ. ವಿಜ್ಞಾನದಲ್ಲಿ ಆಗುತ್ತಿರುವ ಅತ್ಯಾಧುನಿಕ ಶೋಧಗಳು, ಹೊಸ ಹೊಸ ತಾಂತ್ರಿಕ ಪದಗಳ ಹುಟ್ಟಿಗೂ ಕಾರಣವಾಗುತ್ತಿವೆ. ಅವೆಲ್ಲವನ್ನು ಸಮರ್ಥವಾಗಿ ಕನ್ನಡದಲ್ಲಿ ಕಟ್ಟಿಕೊಡಲು ಅನೇಕ ಸಮಸ್ಯೆಗಳಿವೆ. ಈ ಕೊರತೆಗಳನ್ನು ಮೆಟ್ಟಿ ನಿಂತ ಐಐಎಸ್ಸಿಯ ಉತ್ಸಾಹಿ ಕನ್ನಡಿಗ ವಿಜ್ಞಾನಿಗಳ ತಂಡ ವಿಜ್ಞಾನದ ಸಂಶೋಧನೆ ವಿಚಾರಗಳ ತಿರುಳನ್ನು ಕನ್ನಡನ್ನು ತಿಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ.

ಕರ್ನಲ್‌ನ ಚೊಚ್ಚಲ ಕನ್ನಡ ಸಂಚಿಕೆಯಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ರೂಪಿಸಿದ ಸ್ವದೇಶಿ ವೆಂಟಿಲೇಟರ್‌ಗಳು, ಪರಿಣಾಮಕಾರಿ ಕ್ವಾಂಟಮ್‌ ಸರ್ಕೀಟ್‌ಗಳ ವಿನ್ಯಾಸ, ರೋಗಕಾರಕ ಬ್ಯಾಕ್ಟೀರಿಯಾ ಪತ್ತೆಗೆ ರಾಮನ್‌ ಸ್ಪೆಕ್ಟ್ರೋಸ್ಕೊಪಿಗಳ ಬಳಕೆ, ಜೀವವಿರೋಧಕ ಮೇಲ್ಮೈಗಳನ್ನು ರಚಿಸುವ ಬಗೆ, ಕೋವಿಡ್‌ ರಕ್ಷಾಕವಚ– ಮೂರು ಪದರವುಳ್ಳ ವೈರಾಣು ವಿರೋಧಕ ಮಾಸ್ಕ್‌, ಕ್ಷಣಾರ್ಧದ ಕಿಡಿ ಬಳಸಿ ತಯಾರಿಸಿದ ಅರಿವುಕಗಳು (ಸೆನ್ಸರ್ಸ್‌), ಯಾಂತ್ರಿಕ ಕಲಿಕೆ (ಮಷೀನ್‌ ಲರ್ನಿಂಗ್‌) ಮೂಲಕ 2ಡಿ ಅಯಸ್ಕಾಂತಗಳ ಆವಿಷ್ಕಾರ ಹಾಗೂ ಐಐಎಸ್ಸಿಯಲ್ಲಿ ಕೋವಿಡ್‌ ಕುರಿತು ನಡೆಯುತ್ತಿರುವ ಸಂಶೋಧನೆಗಳ ಮಾಹಿತಿಗಳಿವೆ.

ಮೂಲತಃ ಇಂಗ್ಲಿಷ್‌ನಲ್ಲಿದ್ದ ಈ ಮಾಹಿತಿಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ರೀತಿ ಹಿತಕರವಾಗಿದೆ. ಇದು ಐಐಎಸ್ಸಿಯ ಮೊದಲ ಪ್ರಯತ್ನದಂತೆ ಕಾಣಿಸುತ್ತಿಲ್ಲ. ವಿಜ್ಞಾನ ವಿಚಾರಗಳನ್ನು ಸರಳವಾಗಿ ಹಾಗೂ ಸ್ಫುಟವಾಗಿ ಹೇಳುವಾಗ ವಹಿಸಬೇಕಾದ ಎಚ್ಚರಗಳ ಬಗ್ಗೆ ಅನುವಾದಕರಿಗೆ ಸ್ಪಷ್ಟ ಅರಿವು ಇದ್ದ ಹಾಗಿದೆ. ಹಾಗಾಗಿಯೇ ಕನ್ನಡ ಲೇಖನಗಳಲ್ಲೂ ಕೆಲವೊಂದು ಜನಪ್ರಿಯ ಇಂಗ್ಲಿಷ್‌ ಪದಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.ತಾಂತ್ರಿಕ ಪದಗಳಿಗೆ ಅಗತ್ಯ ಇರುವ ಕಡೆ ಸರಳ ವಿವರಣೆಗಳನ್ನೂ ನೀಡಿದ್ದಾರೆ. ಉದಾಹರಣೆಗೆ ‘ಇಂಟರ್‌ ಡಿಸಿಪ್ಲಿನರಿ’ (interdisciplinary) ಎಂಬ ಇಂಗ್ಲಿಷ್‌ ಪದಕ್ಕೆ ‘ಅಂತರ್‌ ಶಾಸ್ತ್ರೀಯ’ ಎಂಬ ಕ್ಲಿಷ್ಟ ಪದ ಬಳಸದೆ, ‘ಒಂದಕ್ಕೊಂದು ಹೊಂದಿಕೊಳ್ಳುವಂತಹದ್ದು’ ಎಂದು ಕನ್ನಡೀಕರಿಸಿದ್ದಾರೆ. ಹೈಡ್ರೊಫೋಬಿಕ್‌ (Hydrophobic) ಎಂಬುದಕ್ಕೆ ‘ತೇವ ವಿರೋಧಿ’ ಎಂಬ ಸರಳ ಪದವನ್ನು, ‘ನುಮ್ಯಾಟಿಕ್‌’ (Pneumatic) ಎಂಬ ಪದಕ್ಕೆ ‘ವಾಯುಚಾಲಿತ’ ಎಂಬ ಪದವನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ. ಸುಲಭವಾಗಿ ಅರ್ಥವಾಗುವಂತೆ ವಿಚಾರವನ್ನು ಪ್ರಸ್ತುತಪಡಿಸಿದ್ದಾರೆ.

‘ಕನ್ನಡದಲ್ಲಿ ವಿಜ್ಞಾನ ವಿಚಾರಗಳನ್ನು ಜನರಿಗೆ ಅರ್ಥವಾಗುವಂತೆ ತಿಳಿಸುವುದು ಅಷ್ಟು ಸುಲಭವಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಅರ್ಥಮಾಡಿಕೊಳ್ಳುವಾಗ ಸಾಮಾನ್ಯ ಓದುಗ ಏನೆಲ್ಲ ಗೊಂದಲಗಳನ್ನು, ಸಂದೇಹಗಳನ್ನು ಎದುರಿಸುತ್ತಾನೆ ಎಂಬುದು ನಮಗೆ ಗೊತ್ತು. ಹಾಗಾಗಿ ಇಡೀ ಇಂಗ್ಲಿಷ್‌ ವಾಕ್ಯವನ್ನು ಯಥಾವತ್ತಾಗಿ ಅನುವಾದ ಮಾಡಿಲ್ಲ. ಅಗತ್ಯ ಇರುವ ಕಡೆ ಹೆಚ್ಚುವರಿ ವಿವರಣೆ ನೀಡಿದ್ದೇವೆ. ತಾಂತ್ರಿಕ ಪದಗಳ ಬಳಕೆ ಬಗ್ಗೆಯೂ ಎಚ್ಚರ ವಹಿಸಿದ್ದೇವೆ. ಭಾಷೆಯ ಲಾಲಿತ್ಯವನ್ನು ಉಳಿಸಿಕೊಂಡು ವಿಚಾರವನ್ನು ಅರ್ಥೈಸುವ ಪ್ರಯತ್ನ ಮಾಡಿದ್ದೇವೆ. ವೈಜ್ಞಾನಿಕವಾಗಿ ವಿಚಾರಗಳು ಸ್ಪಷ್ಟತೆ ಹೊಂದಿವೆಯೇ ಎಂಬುದನ್ನೂ ಖಾತರಿಪಡಿಸಿಕೊಂಡಿದ್ದೇವೆ’ ಎನ್ನುತ್ತಾರೆ ‘ಕರ್ನಲ್‌’ ಸಂಚಿಕೆಗಳ ಕನ್ನಡ ಅನುವಾದದ ಸಂಪಾದಕರಲ್ಲಿ ಒಬ್ಬರಾದ ಐಐಎಸ್ಸಿ ವಿಜ್ಞಾನಿ ಪ್ರೊ.ವಿಶ್ವೇಶ ಗುತ್ತಲ್‌.

ಐಐಎಸ್ಸಿಯ ಈ ಪ್ರಯತ್ನ ಕನ್ನಡದಲ್ಲಿ ವಿಜ್ಞಾನದ ತಿಳಿವಿನ ಹರವು ವಿಸ್ತರಣೆಗೂ ನಾಂದಿ ಹಾಡಲಿದೆ. ಐಐಎಸ್ಸಿಯಲ್ಲಿ ಏನೆಲ್ಲ ಸಂಶೋಧನೆಗಳಾಗುತ್ತಿವೆ ಎಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳುವುದು ಇದರಿಂದ ಸುಲಭವಾಗಲಿದೆ. ಕನ್ನಡದ ಒಲವು ಹೊಂದಿರುವ ವಿಜ್ಞಾನ ವಿದ್ಯಾರ್ಥಿಗಳೂ ಕನ್ನಡದಲ್ಲೇ ಲೇಖನ ಬರೆಯುವುದಕ್ಕೆ ಉತ್ತೇಜನ ನೀಡಲಿದೆ. ಕನ್ನಡದಲ್ಲಿ ವಿಜ್ಞಾನದ ಹೊಸ ಜ್ಞಾನ ಭಂಡಾರ ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ರೂಪುಗೊಳ್ಳಲು ಇದು ನೆರವಾಗಲಿದೆ. ಇನ್ನಷ್ಟು ಶೈಕ್ಷಣಿಕ ಸಂಸ್ಥೆಗಳು, ಬೆಂಗಳೂರಿನಲ್ಲೇ ನೆಲೆವೂರಿರುವ ಸಂಶೋಧನಾ ಸಂಸ್ಥೆಗಳೂ ಇದರಿಂದ ಪ್ರೇರಣೆ ಪಡೆದಿದ್ದೇ ಆದರೆ, ವಿಜ್ಞಾನದಲ್ಲೂ ಕನ್ನಡ ರಾರಾಜಿಸುವ ದಿನ ದೂರವಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಕನ್ನಡದಲ್ಲಿ ವಿಜ್ಞಾನ ವಿಚಾರಗಳನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಹೋರಾಟಗಾರರು.

‘ಬೆಂಗಳೂರಿನಲ್ಲಿ ತಂತ್ರಜ್ಞಾನ ಆಧರಿತ ಸಂಸ್ಥೆಗಳು ಹುಟ್ಟಿ, ಬೆಳೆಯುವುದಕ್ಕೆ ನಾಂದಿ ಹಾಕಿದ್ದ ಸಂಸ್ಥೆ ಐಐಎಸ್ಸಿ. ಈ ನೆಲದಲ್ಲೇ ಹುಟ್ಟಿಬೆಳೆದಿದ್ದರೂ ಐಐಎಸ್ಸಿ ಕನ್ನಡಿಗರಿಗೆ ಹತ್ತಿರವಾಗಿದ್ದು ಕಡಿಮೆ. ಆದರೆ ಈಗ ಸಂಶೋಧನಾ ಪ್ರಬಂಧಗಳ ಕುರಿತು ಮಾಹಿತಿ ನೀಡುವ ಕರ್ನಲ್‌ ನಿಯತಕಾಲಿಕವನ್ನು ಕನ್ನಡದಲ್ಲೂ ತರುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ’ ಎನ್ನುತ್ತಾರೆ ಮುನ್ನೋಟ ಸಂಸ್ಥೆಯ ವಸಂತ ಶೆಟ್ಟಿ.

ಎಸ್‌.ದೀಪಿಕಾ, ಕಾರ್ತಿಕ ರಾಮಸ್ವಾಮಿ, ನಿತ್ಯಾನಂದ ರಾವ್‌, ರಂಜನಿ ರಘುನಾಥ್‌, ಸಮೀರಅಗ್ನಿಹೋತ್ರಿ ಅವರ ತಂಡ ‘ಕರ್ನಲ್‌’ನ ನಿಯತಕಾಲಿಕವನ್ನು ಇಂಗ್ಲಿಷ್‌ನಲ್ಲಿ ರೂಪಿಸುತ್ತಿದ್ದರೆ, ಭಾರತಿ ಎಂ.ಎಚ್‌, ಜಯಶ್ರೀ ಎಸ್‌, ಕವಿತಾ ಹರೀಶ್‌, ಮಾಧವ ಅಜ್ಜಂಪುರ, ವೀರಣ್ಣ ಕಮ್ಮಾರ ಅವರನ್ನು ಒಳಗೊಂಡ ತಂಡ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸುತ್ತಿದೆ. ಮಂಜುನಾಥ ಕೃಷ್ಣಾಪುರ ಹಾಗೂ ವಿಶ್ವೇಶ ಗುತ್ತಲ್‌ ಅವರು ಕನ್ನಡ ಅನುವಾದದ ಸಂಪಾದಕರು. ಪ್ರೊ.ಕೌಶಲ್ ವರ್ಮ ಈ ಪ್ರಕರಣಗಳ ಉಸ್ತುವಾರಿ ನೋಡಿಕೊಳ್ಳುತ್ತಿದಾರೆ.

‘ಸದ್ಯಕ್ಕೆ ‘ಕರ್ನಲ್‌’ನ 2020ರ ಜೂನ್‌ತಿಂಗಳ ಸಂಚಿಕೆ ಕನ್ನಡದಲ್ಲಿ ಪ್ರಕಟವಾಗಿದೆ. ಇನ್ನು ಪ್ರತಿ ತಿಂಗಳ ಸಂಚಿಕೆ ಅದೇ ತಿಂಗಳಲ್ಲಿ ಕನ್ನಡದಲ್ಲೂ ಲಭ್ಯವಾಗಲಿದೆ’ ಎಂದು ವಿಶ್ವೇಶ ಗುತ್ತಲ್‌ ತಿಳಿಸಿದರು.

ವೈಜ್ಞಾನಿಕ ಸಂಶೋಧನಾ ಚಟುವಟಿಕೆಯಲ್ಲಿ ಜಗತ್ತಿನ ಮುಂಚೂಣಿ ಸಂಸ್ಥೆಗಳ ಸಾಲಿನಲ್ಲಿ ಐಐಎಸ್ಸಿಯೂ ವಿರಾಜಮಾನವಾಗಿದೆ. ವಿಜ್ಞಾನದ ಆಧುನಿಕ ಸಂಶೋಧನಾ ಕ್ಷೇತ್ರಗಳಲ್ಲಿನ ಆಗುಹೋಗಿಗಳ ಬಗ್ಗೆ ಕನ್ನಡದಲ್ಲೇ ತಿಳಿದುಕೊಳ್ಳುವ ಉತ್ಸಾಹ ನಿಮಗಿದ್ದರೆ, ನೀವೂ ‘ಕರ್ನಲ್‌’ನ ಕನ್ನಡ ಸಂಚಿಕೆಯತ್ತ (https://iisc.ac.in/outreach/publications/iisc-kernel/) ಕಣ್ಣು ಹಾಯಿಸಬಹುದು. ಸಂಚಿಕೆಯನ್ನು ಡೌನ್‌ಮಾಡಿಟ್ಟುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT