ಸೋಮವಾರ, ಏಪ್ರಿಲ್ 12, 2021
26 °C
ಹೊಸ ಮಾದರಿಯ ಆರ್ಥಿಕ ವಿನ್ಯಾಸಗಳು ಇಂದು ದೇಶಕ್ಕೆ ಅವಶ್ಯಕವಾಗಿವೆ

ಅರವಿಂದ ಚೊಕ್ಕಾಡಿ ಲೇಖನ: ಇಂದಿನ ಭಾರತ ಮತ್ತು ಸಹಕಾರ ತತ್ವ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ರಾಷ್ಟ್ರೀಕರಣದ ದೋಷಗಳಿಂದ ಖಾಸಗೀಕರಣ, ಖಾಸಗೀಕರಣದ ದೋಷಗಳಿಂದ ರಾಷ್ಟ್ರೀಕರಣ ನಡೆಯು ವುದು ಒಂದು ಪ್ರಕ್ರಿಯೆಯಾಗಿ ಸಾಗುತ್ತದೆ. 1991ರಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡ ನಂತರ, ಅಭಿವೃದ್ಧಿಶೀಲ ರಾಷ್ಟ್ರ ಎಂಬ ನೆಲೆಯಲ್ಲಿ ದಕ್ಕಿದ ರಿಯಾಯಿತಿಗಳ ಅವಧಿ ಮುಗಿದ ಮೇಲೆ, ಜಾಗತೀಕರಣದ ನಿಜವಾದ ಪರಿಣಾಮವನ್ನು ಅನುಭವಿಸಲೇಬೇಕು.

ಜಾಗತೀಕರಣವು ಮೊದಲ ಹಂತದಲ್ಲಿ ಉದ್ಯೋಗದ ಹೆಚ್ಚಳ, ಹಣಕಾಸು ವ್ಯವಹಾರದ ಏರಿಕೆ ಮುಂತಾದ ಅನೇಕ ಸುಖಗಳನ್ನು ತಂದಿತ್ತು. 2013ರ ಸುಮಾರಿಗೆ ಸುಖದ ದಿನಗಳು ನಿಧಾನವಾಗಿ ಆರ್ಥಿಕ ಇಳಿಕೆಯ ಸ್ವರೂಪಕ್ಕೆ ತಿರುಗಿದ್ದವು. ಜಾಗತೀಕರಣದ ರಿಯಾಯಿತಿಯ ಅವಧಿ ಮುಗಿದ ನಂತರ ಜಾಗತೀ ಕರಣದ ಎಲ್ಲ‌ ನಿಯಮಗಳ ಪಾಲನೆ ಒಂದು ಅನಿವಾರ್ಯ ವಾಗುತ್ತದೆ.

ವರ್ತಮಾನದ ಭಾರತದ ಆರ್ಥಿಕ ನೀತಿಯು ಕೇವಲ ಭಾರತದ್ದಾಗಿ ಉಳಿಯುವುದಿಲ್ಲ. ಶಾಸನಾತ್ಮಕವಾಗಿ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳು ಪ್ರಭಾವಿಸಿದರೆ, ವ್ಯಾವಹಾರಿಕವಾಗಿ ಭಾರತದ ವ್ಯಾಪಾರದ ದಿಕ್ಕು ಯಾವ ದೇಶಗಳೊಂದಿಗಿದೆಯೋ ಆ ದೇಶಗಳ ವಿದ್ಯಮಾನಗಳೂ ಭಾರತದ ಆರ್ಥಿಕತೆಯನ್ನು ಪ್ರಭಾವಿಸುತ್ತವೆ. ಅಮೆರಿಕ, ಯುರೋಪ್, ಅರಬ್ ದೇಶಗಳು ಭಾರತದ ವ್ಯಾಪಾರದ ದಿಕ್ಕು ಪ್ರಧಾನವಾಗಿರುವ ರಾಷ್ಟ್ರಗಳಾಗಿವೆ. ಇವು ಖಾಸಗೀಕರಣವನ್ನು ಉತ್ತೇಜಿಸುವ ರಾಷ್ಟ್ರಗಳು. ಬಹುಶಃ ಮುಂದಿನ ಮೂರ್ನಾಲ್ಕು ದಶಕಗಳು ಖಾಸಗೀಕರಣದ ವಿಜೃಂಭಣೆಯ ದಿನಗಳಾಗಿರುತ್ತವೆ.

ಖಾಸಗೀಕರಣದ ಸ್ವರೂಪಗಳಲ್ಲಿ ಹಲವು ವಿಧಗಳಿವೆ. ಸ್ಥಳೀಯವಾಗಿ ಒಬ್ಬ ವ್ಯಕ್ತಿ ಒಂದು ಅಂಗಡಿಯನ್ನು ಹಾಕಿ ಕೊಂಡರೆ ಅದು ಕೂಡ ಖಾಸಗಿ ವ್ಯವಸ್ಥೆಯೇ ಆಗಿದೆ. ಇದು ಉತ್ತೇಜಿಸಬೇಕಾದ ಖಾಸಗೀಕರಣವಾಗಿದೆ. ದೇಶೀಯ ಬೃಹತ್ ಉದ್ಯಮಿಗಳು ನಡೆಸುವ ಉದ್ಯಮಗಳೂ ಖಾಸಗಿಯೇ. ಅಂತರರಾಷ್ಟ್ರೀಯ ಉದ್ಯಮಿಗಳ ಉದ್ಯಮಗಳೂ ಖಾಸಗಿಯೇ ಆಗಿರುತ್ತವೆ.

ಜಾಗತೀಕರಣದ ಫಲಾನುಭವಿಯಾದ ಭಾರತದ ಸಮಸ್ಯೆ ಜಾಗತೀಕರಣಕ್ಕೆ ಭಾರತವನ್ನು ಸಿದ್ಧಪಡಿಸದೇ ಇದ್ದುದರಲ್ಲಿದೆ. ಭಾರತಕ್ಕೆ ವಿದೇಶಿ ಕಂಪನಿಗಳು ಬಂದವು. ಆದರೆ ಭಾರತದಿಂದ ಎಷ್ಟು ಕಂಪನಿಗಳು ವಿದೇಶಕ್ಕೆ ಹೋದವು? ಒಂದು ಮಟ್ಟಿಗೆ ಸೇವೆಗಳ ರಫ್ತನ್ನು ಭಾರತ ಮಾಡಿದೆ. ಆದರೆ ಸೇವೆಗಳ ರಫ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದಾಯಿತು. ಭಾರತದ ರೈತರು ವಿದೇಶದಲ್ಲಿ ಬೆಳೆ ಬೆಳೆಯಲು ಹೋಗಲಿಲ್ಲ. ಅಂದರೆ ಸೇವೆಯ ರಪ್ತು ಎಲ್ಲ ಕ್ಷೇತ್ರಗಳಿಂದಲೂ ನಡೆಯಲಿಲ್ಲ. ಆಗ ಸಂತುಲಿತ ಅಭಿವೃದ್ಧಿ ಆಗುವುದಿಲ್ಲ. ತಂತ್ರಜ್ಞರ ರಫ್ತು ನಡೆದದ್ದು ಕೂಡ ಭಾರತದ ತಂತ್ರಜ್ಞರು ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಡಿಮೆ ವೇತನಕ್ಕೆ ದೊರೆಯುವು
ದರಿಂದಾಗಿದೆ.

ಇಂತಹ ಸನ್ನಿವೇಶದಲ್ಲಿ ಸಹಕಾರಿ ತತ್ವವನ್ನು ಬಲಪಡಿಸಬೇಕಾದ ಅಗತ್ಯವಿದೆ. ಒಬ್ಬ ಉದ್ಯಮಿ ಒಂದು ಕೋಟಿ ರೂಪಾಯಿಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾದರೆ, ನೂರು ಮಂದಿ ಭಾರತೀಯರು ಒಟ್ಟು ಸೇರಿದರೆ ಅದೇ ಯೋಜನೆಗೆ ಬೇಕಾದ ನೂರು ಕೋಟಿ ರೂಪಾಯಿಯನ್ನು ಹೊಂದಿಸಲು ಆಗುವುದಿಲ್ಲವೇ? ಆಗುತ್ತದೆ. ಸಹಕಾರಿ ಸಂಘಟನೆಗಳೂ ಖಾಸಗಿ ಸಂಘಟನೆ ಗಳೇ ಆಗಿವೆ. ಧನಶಕ್ತಿಯನ್ನು ಜನಶಕ್ತಿಯ ಮೂಲಕ ಎದುರಿಸಲು ಸಾಧ್ಯವಿದೆ. ಆದರೆ ಸಮಸ್ಯೆ ಇರುವುದು ಜನರ ಅರಿವು ಮತ್ತು ಸ್ವಭಾವಗಳಲ್ಲಿ.

ಭಾರತೀಯರು ಸಾಮಾನ್ಯ ಧ್ಯೇಯಕ್ಕಾಗಿ ಸಂಘಟಿತರಾಗುವುದು ತೀರಾ ವಿರಳವಾದದ್ದು.‌ ಸ್ವ ಹಿತಾಸಕ್ತಿಯೇ ಪ್ರಬಲವಾಗಿರುತ್ತದೆ. ಸಾಂಘಿಕ ಹಿತಾಸಕ್ತಿಯ ಮೂಲಕ ಸ್ವ ಹಿತಾಸಕ್ತಿಯನ್ನು ಸಾಧಿಸುವ ಪ್ರವೃತ್ತಿ ಕಡಿಮೆ ಇದೆ. ಜನಜೀವನದಲ್ಲಿರುವ ಹಲವು ರೀತಿಯ ಭಿನ್ನತೆಗಳು ಮತ್ತು ವೈರುಧ್ಯಗಳು ಈ ರೀತಿಯ ಸ್ವಭಾವವನ್ನು ರೂಪಿಸಿವೆ. ಆದ್ದರಿಂದಲೇ ಸಹಕಾರಿ ಸಂಘಗಳು ಯಶಸ್ವಿಯಾಗುವುದು ಕೂಡ ಕಡಿಮೆಯೇ. ಈ ಸಮಸ್ಯೆಯನ್ನು‌ ನೀಗಿಕೊಳ್ಳಬೇಕು.

ಎರಡನೆಯದಾಗಿ, ಬಹುರೂಪಿ ವಸ್ತುಗಳನ್ನು ಉತ್ಪಾದಿಸಬಲ್ಲ ಭಾರತದ ಜನರು ಬಹುಸಂಖ್ಯೆಯ ಸಂಘಟನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಾಂಘಿಕ ಒಡೆತನವು ಯಶಸ್ವಿಯಾಗಬೇಕಾದರೆ ವಿವೇಕಪೂರ್ಣವಾದ ಸಮರ್ಥ ನಾಯಕತ್ವದ ಅಗತ್ಯವಿದೆ. ನಾಯಕತ್ವ ಭ್ರಷ್ಟಗೊಂಡರೆ ವೈಫಲ್ಯ ಶತಸ್ಸಿದ್ಧ. ಆದ್ದರಿಂದ ಸಮರ್ಥ ನಾಯಕತ್ವವನ್ನು ರೂಪಿಸಲು ತೊಡಗಬೇಕು.

ಮೂರನೆಯದಾಗಿ, ಸಹಕಾರಿ ಸಂಘಗಳಿಗೆ ಹಣಕಾಸಿನ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾಂಘಿಕ ಹೂಡಿಕೆಗೆ ಅನುಕೂಲವಾಗುವ ಹಾಗೆ ಬ್ಯಾಂಕು ಗಳು ಸಾಲಗಳನ್ನು‌ ನೀಡಬೇಕು. ಅದಕ್ಕೆ ತಕ್ಕ ಬೆಂಬಲ ಸರ್ಕಾರದಿಂದ ಸಿಗಬೇಕು. ಮುಕ್ತ ಆರ್ಥಿಕ ನೀತಿಯಲ್ಲಿ ಸರ್ಕಾರವೇ ಮಾರುಕಟ್ಟೆ ವ್ಯವಹಾರ, ಉದ್ಯಮ ಸಾಹಸದಲ್ಲಿ ತೊಡಗಿಕೊಳ್ಳುವುದು ತೀರಾ ಕಡಿಮೆ ಪ್ರಮಾಣದ್ದಾಗಿರುತ್ತದೆ ಹೊರತು ತನ್ನ ದೇಶದ ಜನರು ಮುಕ್ತ ಆರ್ಥಿಕ ನೀತಿಯಲ್ಲಿ ತೊಡಗಿಕೊಳ್ಳಲು ಬೆಂಬಲಿಸ ಬಾರದೆಂದು ಇಲ್ಲ. ಸಹಕಾರಿ ತತ್ವ ಯಶಸ್ವಿಯಾಗಲು ಸರ್ಕಾರದ ಪ್ರೋತ್ಸಾಹ ಬಲು ಅಗತ್ಯವಾಗಿರುತ್ತದೆ.

ಸಹಕಾರಿ ತತ್ವದ ಆಧಾರದಲ್ಲಿ ಆರ್ಥಿಕವಾಗಿ ತೊಡಗಿಕೊಳ್ಳುವ ಜನರಲ್ಲಿ ಒಳ್ಳೆಯ ಶಿಕ್ಷಣದ ಅಗತ್ಯವಿರು ತ್ತದೆ. ಈ ರೀತಿಯ ಜ್ಞಾನವು ಎರಡು ರೀತಿಯಲ್ಲಿ ಬರುತ್ತದೆ. ಮೊದಲನೆಯದು, ಬಹಳಷ್ಟು ಕೆಟ್ಟ ಅನುಭವಗಳಾದ ಮೇಲೆ ಅನುಭವಜನ್ಯವಾಗಿ ಕಲಿಕೆ ಉಂಟಾಗುತ್ತದೆ. ‌ಉದಾಹರಣೆಗೆ ಹೇಳುವುದಾದರೆ, ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅಂದಿನ ರಾಜರುಗಳು ಅನುಮತಿ ನೀಡಿದ್ದು ವ್ಯಾಪಾರ ಚೆನ್ನಾಗಿ ನಡೆದು ಆದಾಯ ಬರಲೆಂಬ ಕಾರಣದಿಂದಲೇ. ಆದರೆ ಆಮೇಲೆ ಕಂಪನಿಯ ಆಡಳಿತಕ್ಕೊಳಗಾಗಿ ನಾನಾ ರೀತಿಯ ಹಿಂಸೆಯ ಅನುಭವವಾಗಿ ಉಂಟಾದ ಕಲಿಕೆಯು ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಟ್ಟು ಸೇರಿಸಿತು. ಈ ರೀತಿ ಆಗುವ ಕಲಿಕೆ ಅಪೇಕ್ಷಣೀಯ ವಲ್ಲ. ಕೊಡುವ ಔಪಚಾರಿಕ ಶಿಕ್ಷಣದಲ್ಲೇ ಸಂಘಟಿತ ಉದ್ಯಮ ಸಾಹಸದ ಶಿಸ್ತುಬದ್ಧತೆಯ ಕಲಿಕೆ ಇರಬೇಕು. ಆಗ ನಕಾರಾತ್ಮಕ ಪರಿಣಾಮವನ್ನು ಅನುಭವಿಸದೆಯೇ ಸಮರ್ಥ ಆರ್ಥಿಕತೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

ಐದನೆಯ ಬಹು‌ಮುಖ್ಯವಾದ ಅಂಶವೆಂದರೆ, ದುರ್ಬಲ ವರ್ಗವನ್ನು ದಕ್ಷ ಮತ್ತು ಸಮರ್ಥಗೊಳಿಸುವುದು. ಭಾರತದ ವಿಚಾರವಂತ ವರ್ಗ ಈ ದಿಸೆಯಲ್ಲಿ ಪ್ರಯತ್ನ ಮಾಡುವ ಸ್ವಭಾವವನ್ನೇ ಹೊಂದಿಲ್ಲ. ದುರ್ಬಲ ವರ್ಗಕ್ಕೆ ಸಬಲರ ಮೇಲೆ ಸಿಡಿದು ಬೀಳುವುದನ್ನು ಕಲಿಸುತ್ತಾ ಬರಲಾಗಿದೆಯೇ ಹೊರತು ಸಬಲ ವರ್ಗಕ್ಕೆ ಸವಾಲಾಗುವ ರೀತಿಯಲ್ಲಿ ತನ್ನ ದಕ್ಷತೆಯನ್ನು ಹೆಚ್ಚಿಸಿ ಕೊಳ್ಳುವುದು ಹೇಗೆ ಎಂದು ಕಲಿಸಿರುವುದು ತೀರಾ ಕಡಿಮೆ. ಖಾಸಗೀಕರಣದಲ್ಲಿ ಹೋರಾಟಗಳಿಗೆ ಹೆಚ್ಚು ಮಹತ್ವ ಇರುವುದಿಲ್ಲ. ಆದರೆ ದಕ್ಷತೆಗೆ ಮಹತ್ವ ಇರುತ್ತದೆ. ಆದ್ದರಿಂದ ದುರ್ಬಲ ವರ್ಗದವರನ್ನು ದಕ್ಷರನ್ನಾಗಿಸಲು ಪ್ರಾಮುಖ್ಯವನ್ನು ನೀಡಬೇಕಾಗುತ್ತದೆ.

ಖಾಸಗೀಕರಣವು ಜಾಗತಿಕ‌ ಲಕ್ಷಣವಾಗಿರುವಾಗ ದೇಶವನ್ನು ಅದಕ್ಕಾಗಿ ಸಿದ್ಧಪಡಿಸಲು ಇನ್ನಾ ದರೂ ಪ್ರಾಮುಖ್ಯವನ್ನು ನೀಡಬೇಕು. ಏಕೆಂದರೆ ಆರ್ಥಿಕ ಸ್ವಾತಂತ್ರ್ಯವು ಹೊರಟುಹೋದರೆ ಬೇರೆ ಯಾವ ಸ್ವಾತಂತ್ರ್ಯವೂ ಉಳಿಯುವುದಿಲ್ಲ. ಇದನ್ನು ಸಾಧಿಸಬೇಕಾದರೆ ಸಮಗ್ರತೆ ಇರುವ ಹೊಸ ಆರ್ಥಿಕ ಪರಿಕಲ್ಪನೆಗಳು ರೂಪುಗೊಳ್ಳಬೇಕಿದೆ. ಆದರೆ ಇದುವರೆಗಿನ ಸ್ವಾತಂತ್ರ್ಯೋತ್ತರ ಕಾಲಮಾನದ ಚಿಂತನೆಗಳು ಆಯಾ ಕಾಲಮಾನದ ಪ್ರಧಾನ ಆರ್ಥಿಕ ಚಿಂತನೆಗಳ ಚೌಕಟ್ಟಿನಲ್ಲಿ ಆರ್ಥಿಕತೆಯನ್ನು ಅರ್ಥೈಸುತ್ತಾ ಬಂದಿರುವುದನ್ನು ಕಾಣಬಹುದು.

ನೆಹರೂ ಅವರ ಆರ್ಥಿಕತೆಯ ಕಾಲಮಾನದ ಆರ್ಥಿಕ ಚಿಂತನೆಗಳು ಬಹುತೇಕ ಸಮಾಜವಾದದ ಒಳಗೆಯೇ ಆರ್ಥಿಕತೆಯನ್ನು ಅರ್ಥೈಸಿದ್ದವು. ಪಿ.ವಿ.ನರಸಿಂಹ ರಾವ್- ಮನಮೋಹನ್ ಸಿಂಗ್ ಆರ್ಥಿಕತೆ ಬಂದ ನಂತರ ಬಂಡವಾಳಶಾಹಿತ್ವದ ಒಳಗೆ ಆರ್ಥಿಕ ಚಿಂತನೆಗಳು ಹೆಚ್ಚಿದವು ಮತ್ತು ಸಮಾಜವಾದಿ ಆರ್ಥಿಕ ಚಿಂತನೆಗಳು ಬಂಡವಾಳಶಾಹಿ ವಿರುದ್ಧ ಸಂಘರ್ಷಕ್ಕೆ ತೊಡಗಿದವು. ಆದರೆ ಅದನ್ನು ಅರ್ಥಮಾಡಿಕೊಳ್ಳಲು ಹೋಗಲಿಲ್ಲ.

ಭಾರತದ ಆರ್ಥಿಕತೆಯ ತಳಮಟ್ಟಕ್ಕೆ ಗಾಂಧಿ ಆರ್ಥಿಕ ಚಿಂತನೆಗಳು ಈಗಲೂ ಸಹಾಯ ಮಾಡುತ್ತವೆ. ನಡುವಿನ ಸ್ತರದಲ್ಲಿ ನೆಹರೂ ಅವರ ಆರ್ಥಿಕ ಪರಿಕಲ್ಪನೆಗಳು ಉಪಯುಕ್ತವಾಗಿವೆ. ಮೇಲಿನ ಸ್ತರದಲ್ಲಿ‌ ಮನಮೋಹನ್ ಸಿಂಗ್ ಆರ್ಥಿಕತೆಯ ಮಾದರಿಗಳು ಉಪಯುಕ್ತವಾಗುತ್ತವೆ. ಈ ಮೂರನ್ನೂ ಸಮಗ್ರ ಸ್ವರೂಪದಲ್ಲಿ ಆರ್ಥಿಕ ಪರಿಕಲ್ಪನೆಯಾಗಿ ರೂಪಿಸಿ ಅನುಷ್ಠಾನಗೊಳಿಸಬೇಕಿದೆ. ಭಾರತ ಸಂವಿಧಾನದ ಆಶಯಗಳು ಮತ್ತು ವಿಶ್ವ ವ್ಯಾಪಾರ ಒಡಂಬಡಿಕೆಯ ನಿಯಮಗಳು- ಇವೆರಡರ ವ್ಯಾಪ್ತಿಗೂ ಹೊಂದುವಂತಹ, ಆದರೆ ಅನುಷ್ಠಾನ ಸಾಧ್ಯವಾಗುವಂತಹ ಹೊಸ ಮಾದರಿಯ ಆರ್ಥಿಕ ವಿನ್ಯಾಸಗಳು ಇಂದು ದೇಶಕ್ಕೆ ಅವಶ್ಯಕವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು