ಮಂಗಳವಾರ, ಜನವರಿ 19, 2021
17 °C

PV Web Exclusive: ಮತದಾನದ ಹಕ್ಕು ಭದ್ರವಾಗಿದೆಯೇ, ಖಾತರಿಪಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕಾಣೆಯಾಗಿದೆ. ನನ್ನ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ’– ಪ್ರತಿಯೊಂದು ಚುನಾವಣೆಯ ಮತದಾನದ ಸಂದರ್ಭದಲ್ಲೂ ಕೆಲವರು ಈ ರೀತಿ ಆರೋಪ ಮಾಡುವುದು ಮಾಮೂಲಿ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಂತೂ ಇಂತಹ ಪ್ರಸಂಗ ಇನ್ನೂ ಜಾಸ್ತಿ.

ಬೆಂಗಳೂರಿನಲ್ಲಿ ನೆಲೆಸಿರುವವರಲ್ಲಿ ಬಹುತೇಕರು ವಲಸಿಗರು. ಉದ್ಯೋಗದ ಕಾರಣಕ್ಕಾಗಿ ಅನಿವಾರ್ಯವಾಗಿ ಇಲ್ಲಿ ನೆಲೆ ಕಂಡುಕೊಂಡವರು. ಅವರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರ ಸಂಖ್ಯೆಯೇ ಜಾಸ್ತಿ. ಈ ವರ್ಷ ಒಂದು ವಾರ್ಡ್‌ನಲ್ಲಿ ವಾಸಿಸುತ್ತಿದ್ದರೆ, ಮುಂದಿನ ವರ್ಷ ಮತ್ಯಾವುದೋ ವಾರ್ಡ್‌ನಲ್ಲಿ ವಾಸ. ಪದೇ ಪದೇ ಮನೆ ಬದಲಾಯಿಸಿಕೊಂಡರೂ ಮತದಾರರ ಪಟ್ಟಿಯನ್ನು ಹೆಸರು ವರ್ಗಾಯಿಸುವುದಕ್ಕೆ ಮಾತ್ರ ಏಕೋ ನಿರಾಸಕ್ತಿ. ಹೇಗೂ ಒಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿದೆಯಲ್ಲವೇ, ಚುನಾವಣೆ ಬಂದಾಗ ಆ ವಾರ್ಡ್‌ಗೇ ಹೋಗಿ ಮತ ಚಲಾಯಿಸಿದರಾಯಿತು ಎಂಬ ಉದಾಸೀನ. ಮತಗಟ್ಟೆಗೆ ಹೋಗಿ ನೋಡಿದರೆ ಹೆಸರೇ ನಾಪತ್ತೆಯಾದರೆ ಇಂತಹ ಉದ್ಗಾರ ಹೊರಹೊಮ್ಮುವುದು ಸಹಜ.

ಇದು ಮತದಾರರ ಕತೆಯಾದರೆ, ಅಧಿಕಾರಿಗಳಿಗೆ ಬೇರೆಯೇ ರೀತಿಯ ಒತ್ತಡ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇ80ರಿಂದ 90ರವರೆಗೆ ದಾಖಲಾದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಅದು ಜಪ್ಪಯ್ಯ ಎಂದರೂ ಶೇ 50– 55 ದಾಟದು. ಮತದಾರರ ಜಾಗೃತಿಗಾಗಿ ಏನೇನೆಲ್ಲಾ ಕಸರತ್ತು ಮಾಡಿದರೂ ಮತದಾನದ ಪ್ರಮಾಣದ ಗ್ರಾಫ್‌ ಮೇಲೇರುವುದೇ ಇಲ್ಲ. ಇದಕ್ಕೆ ನಗರದ ನಿವಾಸಿಗಳು ಮತದಾನದ ಬಗ್ಗೆ ಹೊಂದಿರುವ ಅಸಡ್ಡೆ  ಒಂದು ಕಾರಣವಾದರೆ, ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆ ವಾರ್ಡ್‌ನಲ್ಲಿ ನೆಲೆಸಿರದೇ ಇರುವುದು ಮತ್ತೊಂದು ಕಾರಣ. 

ನಗರದ ಜನಸಂಖ್ಯೆ 1.39 ಕೋಟಿ. ಮತದಾರರ ಸಂಖ್ಯೆ 90.83 ಲಕ್ಷ. ಮತದಾರರ ಪಟ್ಟಿಯಲ್ಲಿ ಹೆಸರಿರುವವರಲ್ಲಿ ಅನೇಕರು ತಮ್ಮ ಹಕ್ಕು ಚಲಾಯಿಸುತ್ತಿಲ್ಲ. ಹಾಗಾಗಿ ವರ್ಷಕ್ಕೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವಾಗ ಯಾರೆಲ್ಲ ಆಯಾ ಮತಗಟ್ಟೆಯ ವ್ಯಾಪ್ತಿಯ ವಿಳಾಸದಲ್ಲಿ ನೆಲೆಸಿರುವುದಿಲ್ಲವೊ ಅಂತಹವರ ಹೆಸರುಗಳನ್ನು ಕಿತ್ತು ಹಾಕಲಾಗುತ್ತದೆ.

‘ಹೆಸರು ತೆಗೆದುಹಾಕುವ ಮುನ್ನ ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ) ಎರಡೆರಡು ಬಾರಿ ಆ ವಿಳಾಸಕ್ಕೆ ಭೇಟಿ ನೀಡಿ ವಿಚಾರಿಸುತ್ತಾರೆ. ಮತದಾರರು ವರ್ಷಾನುಗಟ್ಟಲೆ ಆ ವಿಳಾಸದಲ್ಲಿ ನೆಲೆಸಿಲ್ಲದಿದ್ದರೆ ಮಾತ್ರ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಮತದಾನದ ಹಕ್ಕು ಕಳೆದುಕೊಳ್ಳಬಾರದು ಎಂಬ ಉದ್ದೇಶ ನಿಮ್ಮದಾಗಿದ್ದರೆ ಪ್ರತಿ ಬಾರಿ ವಿಳಾಸ ಬದಲಾಯಿಸಿದಾಗ ಮತದಾರರ ಪಟ್ಟಿಯಲ್ಲಿರುವ ಹೆಸರನ್ನೂ ಹೊಸ ವಿಳಾಸಕ್ಕೆ ವರ್ಗಾಯಿಸುವುದು ಉತ್ತಮ. ಕೆಲವೊಮ್ಮೆ ಯಾರದೋ ಹೆಸರು ತೆಗೆದುಹಾಕಲು ಹೋಗಿ ಇನ್ಯಾರದೋ ಹೆಸರು ಕಿತ್ತು ಹಾಕುವ ಸಾಧ್ಯತೆಗಳೂ ಇರುತ್ತದೆ. ಇಂತಹ ಅಪದ್ಧಗಳನ್ನು ತಪ್ಪಿಸಲೆಂದೇ ಚುನಾವಣಾ ಆಯೋಗ ವರ್ಷಾಂತ್ಯದಲ್ಲೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಥವಾ ತೆಗೆದ ಹಾಕಲು ನೆರವಾಗಲೆಂದೇ ವಿಶೇಷ ಜಾಗೃತಿ ಮೂಡಿಸಲಾಗುತ್ತದೆ. ಈ ಬಾರಿ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ, ತಿದ್ದುಪಡಿಗೆ, ತಮ್ಮ ಹಕ್ಕು ಅಥವಾ ಆಕ್ಷೇಪಣೆ ಸಲ್ಲಿಸುವುದಕ್ಕೆ ಹಾಗೂ ಪರಿಷ್ಕರಣೆಗೆ ಡಿ.17ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಲುವಾಗಿ ಇದೇ 22ರಿಂದ ಸತತ ನಾಲ್ಕು ಭಾನುವಾರ ವಿಶೇಷ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ 2021ರ ಅನ್ವಯ ಬಿಬಿಎಂಪಿಯ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರಗಳಲ್ಲೂ ಈ ನಾಲ್ಕು ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 6ರರವರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ‌ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ಕುಟುಂಬದವರ ಹೆಸರು ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬಹುದು. 2021ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದು.

‘ಆಯಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಮತದಾರರ ಸಹಾಯಕ ನೋಂದಣಾಧಿಕಾರಿ, ವಾರ್ಡ್‌ ಸಹಾಯ ಕೇಂದ್ರ ಹಾಗೂ ಮತಗಟ್ಟೆಗಳಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅಧಿಕಾರಿಗಳು ನೆರವಾಗಲಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅಥವಾ ತಿದ್ದುಪಡಿಗೆ ಮತದಾರರ ಭಾವಚಿತ್ರ, ಶಾಲಾ ವರ್ಗಾವಣೆ ಪ್ರಮಾಣಪತ್ರದ ಅಥವಾ ಅಂಕಪಟ್ಟಿಯ ಪ್ರತಿ, ಆಧಾರ್‌ ಗುರುತಿನ ಚೀಟಿಯ ಪ್ರತಿ ಅಥವಾ ಪಡಿತರ ಚೀಟಿಯ ಪ್ರತಿಗಳನ್ನು ಹಾಜರು ಪಡಿಸಬಹುದು. ಮೃತ ವ್ಯಕ್ತಿಯ ಹೆಸರು ತೆಗೆಸುವುದಕ್ಕೆ ಮರಣ ದೃಢೀಕರಣ ಪತ್ರ ಬೇಕಾಗುತ್ತದೆ. ಆನ್‍ಲೈನ್ ಮೂಲಕ ಸಾರ್ವಜನಿಕರು ತಮ್ಮ ದೂರು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಬಹುದು’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌.  

ಈಗಾಗಲೇ ಬಿಬಿಎಂಪಿ ಸಿದ್ಧಪಡಿಸಿರುವ ಮತದಾರರ ಕರಡು ಪಟ್ಟಿಯನ್ನು ಆಯಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಮತದಾರರ ಸಹಾಯಕ ನೋಂದಣಾಧಿಕಾರಿ, ವಾರ್ಡ್‌ ಸಹಾಯ ಕೇಂದ್ರ ಹಾಗೂ ಮತಗಟ್ಟೆಗಳಲ್ಲಿ ಪ್ರದರ್ಶಿಸಲಾಗಿದೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಮತದಾನ ಹಕ್ಕಿನಿಂದ ನೀವು ವಂಚಿತರಾಗಲು ಬಯಸುವುದಿಲ್ಲವಾದರೆ ಈಗಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿದ್ದರೂ ಈಗಲೇ ಮರು ಸೇರ್ಪಡೆ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ಮತದಾನದಂದು ಕೊನೆಯ ಗಳಿಗೆಯಲ್ಲಿ ‘ನನ್ನ ಹಕ್ಕನ್ನು ಕಸಿದುಕೊಳ್ಳಲಾಗಿದೆ’ ಎಂದು ಪ್ರಲಾಪಿಸುವುದು ತಪ್ಪಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು