ಸೋಮವಾರ, ಸೆಪ್ಟೆಂಬರ್ 27, 2021
22 °C

ವೈದ್ಯ ಪದ್ಧತಿಯ ಟೀಕೆ ತರವಲ್ಲ: ವಚನಾನಂದ ಸ್ವಾಮೀಜಿ

ವಚನಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ಯೋಗಗುರು ರಾಮದೇವ್‌ ಅವರು ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ‘ಸ್ಟುಪಿಡ್‌ ಸೈನ್ಸ್‌’ ಎಂದು ಕರೆದಿದ್ದಾರೆ. ಅವರ ಆ ಮಾತು ದೇಶದಾದ್ಯಂತ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ.

ಆದರೆ, ಒಂದಂತೂ ಸತ್ಯ. ಅಲೋಪಥಿ ಪದ್ಧತಿಯು ಅಲ್ಲೊಂದು ಇಲ್ಲೊಂದು ಬಾನಗಡಿ ಸೃಷ್ಟಿಸಿರಬಹುದು. ಅದಕ್ಕಿಂತ ಮುಖ್ಯ ಅದು ಉಳಿಸಿದ ಜನರ ಜೀವ, ಅದು ಕೊಟ್ಟ ನೆಮ್ಮದಿ. ತುರ್ತು ಸಂದರ್ಭಗಳಲ್ಲಂತೂ ಇಂಗ್ಲಿಷ್‌ ಔಷಧ ಅತ್ಯುತ್ತಮ ಎನ್ನುವುದನ್ನು ಮರೆಯಬಾರದು. ಇಲ್ಲಿ ಒಂದು ವಿಷಯವನ್ನು ಹೇಳಬೇಕು. ಅಲೋಪಥಿ ಔಷಧವು ಹೇಗೆ ದೇಹದ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತಿದೆಯೇ ಹಾಗೆಯೇ ಪುರಾತನ ಯೋಗಪದ್ಧತಿ ಕೂಡ ದೈಹಿಕ ಮಾತ್ರವಲ್ಲ ಮನೋದೈಹಿಕ ಕಾಯಿಲೆಗಳನ್ನೂ ಶಮನ ಮಾಡುವ ಶಕ್ತಿ ಹೊಂದಿದೆ. ಆಯುರ್ವೇದ ಆಗಲಿ, ಅಲೋಪಥಿ ಆಗಲಿ ಅಥವಾ ಇನ್ನಾವುದೇ ಪರ್ಯಾಯ ಚಿಕಿತ್ಸಾ ಪದ್ಧತಿ ಆಗಿರಲಿ ಅದನ್ನು ಗೌರವಿಸಬೇಕು. ಎಲ್ಲಾ ಚಿಕಿತ್ಸಾ ಪದ್ಧತಿಗಳಿಗೂ ಅದರದ್ದೇ ಆದ ಮಹತ್ವ ಇದೆ. ಹಾಗೆಯೇ ಮಿತಿಯೂ ಇದೆ.

ಹೃದಯ ತಜ್ಞ ಡಾ. ದೇವಿಶೆಟ್ಟಿಯವರು ಒಂದು ಕಡೆ ಹೇಳಿಕೊಂಡಿದ್ದಾರೆ– ‘ನನ್ನ ಪತ್ನಿಗೆ ವಿಪರೀತ ಬೆನ್ನುನೋವು ಇತ್ತು. ಎಂಆರ್‌ಐ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿದ್ರೂ ನೋವು ಕಡಿಮೆ ಆಗಲೇ ಇಲ್ಲ. ಆಗ ಕುಟುಂಬದವರ ಸಲಹೆಯಂತೆ ಅಕ್ಯುಪಂಚರ್‌ ಚಿಕಿತ್ಸೆಗೆ ಕರೆದೊಯ್ಯಲಾಯ್ತು. ಅಲ್ಲಿ ಆ ಚಿಕಿತ್ಸಕರು ನೆಲದ ಮೇಲೆ ಮಲಗಿಸಿ ಹತ್ತೇ ಹತ್ತು ನಿಮಿಷದ ಅಕ್ಯುಪಂಚರ್‌ ಚಿಕಿತ್ಸೆ ನೀಡಿದರು. ನೀವು ನಂಬಲ್ಲ, ಆಮೇಲೆ ನನ್ನ ಪತ್ನಿಗೆ ಜೀವಮಾನವಿಡೀ ಬೆನ್ನುನೋವು ಬರಲೇ ಇಲ್ಲ’. 

ಡಾ. ದೇವಿಶೆಟ್ಟಿ ಹೇಳೋದು ಇಷ್ಟೆ. ಆ ಚಿಕಿತ್ಸಾ ಪದ್ಧತಿ ಈ ಚಿಕಿತ್ಸಾ ಪದ್ಧತಿ ಅಂತ ಪರಸ್ಪರ ದೂರಿದರೆ ಏನೂ ಪ್ರಯೋಜನವಿಲ್ಲ. ಎಲ್ಲಾ ಚಿಕಿತ್ಸಾ ಪದ್ಧತಿಗಳೂ ಇರಬೇಕು. ಯಾಕೆಂದರೆ ಅಲೋಪಥಿಯಲ್ಲಿ ಗುಣವಾಗದ್ದು ಅಕ್ಯುಪಂಚರ್‌ ನಲ್ಲಿ ಆಗಬಹುದು. ಅಕ್ಯುಪಂಚರ್‌ನಲ್ಲಿ ಆಗದ್ದು ಯೋಗದಲ್ಲಾಗಬಹುದು. ಎಲ್ಲದರ ಗುರಿ ಒಂದೇ– ರೋಗಿ ಗುಣಮುಖವಾಗಬೇಕು. ಅದಕ್ಕೆ ಯಾವ ಚಿಕಿತ್ಸಾ ಪದ್ಧತಿ ಆದರೆ ಏನು?

ಇದನ್ನೂ ಓದಿ: 

ನಾನು ಅನುಸರಿಸುತ್ತಿರುವ ಪದ್ಧತಿಯೇ ಶ್ರೇಷ್ಠ ಅನ್ನುವುದು ಕೆಲವು ಸಲ ಸೀಮಿತ ಚೌಕಟ್ಟಿನೊಳಗಣ ತೀರ್ಮಾನ ಎನಿಸಿಬಿಡುತ್ತದೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ನಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದ ತೊಂದರೆಗೊಳಗಾಗುವುದು ರೋಗಿಯೇ ಹೊರತು ವೈದ್ಯನಲ್ಲ. ಸರಿಯಾಗಿ ಚಿಕಿತ್ಸೆ ಕೊಡದ ವೈದ್ಯರನ್ನು ಟೀಕಿಸಿದರೆ ತಪ್ಪಲ್ಲ. ಆದರೆ ಒಂದು ಜನಪ್ರಿಯ ವೈದ್ಯಪದ್ಧತಿಯತ್ತ ಬೊಟ್ಟು ಮಾಡಿ ತೋರಿಸುವುದು ಸಮಂಜಸವಲ್ಲ.

ವೈದ್ಯನೇ ದೇವರು ಅಂತ ನಂಬಿಕೊಂಡಿರುವ ದೇಶ ನಮ್ಮದು. ಜೀವ ಉಳಿಸುವ ಮತ್ತು ಕೊಲ್ಲುವ ಎರಡೂ ಸಾಧ್ಯತೆ ವೈದ್ಯರ ಕೈಯಲ್ಲಿರುತ್ತದೆ. ಹಾಗಂತ ವೈದ್ಯ ದೇವರಾಗಿಯೇ ಉಳಿದಿದ್ದಾನೆ ಅಂತೇನೂ ಅಲ್ಲ. ಯೋಗ ಕೇವಲ ಯೋಗವಾಗಿಯೇ ಉಳಿದಿದೆ ಅಂತಲ್ಲ. ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡ ಹಾಗೆ ವೈದ್ಯ  ಕ್ಷೇತ್ರವನ್ನೂ ಯೋಗ ಕ್ಷೇತ್ರವನ್ನೂ ವ್ಯವಹಾರ ಆವರಿಸಿದೆ. ಈಗ ಯೂಟ್ಯೂಬ್‌ ನೋಡಿಕೊಂಡು ನೀವೊಬ್ಬ ಯೋಗ ಟೀಚರ್‌ ಆಗಬಹುದು. ಆದರೆ ಅದರಲ್ಲಿ ತಪಶ್ಶಕ್ತಿ ಇರುವುದಿಲ್ಲ. ಬದ್ಧತೆ ಇರುವುದಿಲ್ಲ. ಆಯುರ್ವೇದದ ಪುಸ್ತಕ ಓದಿಕೊಂಡರೆ ಆಯುರ್ವೇದ ವೈದ್ಯ ಆಗಲು ಸಾಧ್ಯವಿಲ್ಲ. ಅದೆಲ್ಲಾ ವ್ಯಾವಹಾರಿಕ ಬದಲಾವಣೆ ಅಷ್ಟೆ. ಅಂಥವರನ್ನು ಪ್ರೋತ್ಸಾಹಿಸಲೂಬಾರದು.

ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದುದು ಸ್ಪರ್ಶ. ರೋಗಿಯನ್ನು ವೈದ್ಯ ಮುಟ್ಟಿಯೇ ಪರೀಕ್ಷಿಸಬೇಕು.

ಡೇವಿಡ್‌ ಹಾರ್ಟ್‌ಮನ್‌ ಅನ್ನೋ ಅಂಧ ಡಾಕ್ಟರ್‌ ಆದ ಕಥೆ ನಿಮಗೆ ಗೊತ್ತಿರಬಹುದು. ಎಂಟನೇ ವಯಸ್ಸಿನಿಂದಲೇ ಅಂಧನಾಗಿದ್ದ ಡೇವಿಡ್‌ ಹಾರ್ಟ್‌ಮನ್ ವೈದ್ಯನಾಗಬೇಕು ಎಂದು ಆಸೆಪಡುತ್ತಾನೆ. ಕಣ್ಣಿಲ್ಲದ ಹುಡುಗ ವೈದ್ಯಶಾಸ್ತ್ರ ಓದುವುದೇ ಎಂದು ಜನ ನಕ್ಕರು. ಆದರೆ, ಹಾರ್ಟ್‌ಮನ್‌ ಹಟ ಬಿಡಲಿಲ್ಲ. 1972ರಲ್ಲಿ  ಫಿಲಡೆಲ್ಫಿಯಾದ ಟೆಂಪಲ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ಗೆ ಸೇರುತ್ತಾನೆ. ಕಣ್ಣಿದ್ದವರ ನಡುವೆ ಕಣ್ಣೇ ಇಲ್ಲದ ಹಾರ್ಟ್‌ಮನ್‌ ಅತ್ಯಂತ ಶ್ರದ್ಧೆಯಿಂದ ನಾಲ್ಕು ವರ್ಷ ಅಭ್ಯಾಸ ಮಾಡಿ, ಡಾಕ್ಟರ್‌ ಆಗುತ್ತಾನೆ. ಆತನಿಗೆ ಬೇರೆಲ್ಲಾ ಡಾಕ್ಟರ್‌ಗಳಿಗಿಂತ ರೋಗಿಯ ತಲ್ಲಣಗಳು ಹೆಚ್ಚು ಅರ್ಥವಾಗುತ್ತಿದ್ದವು. ವೈದ್ಯನಿಗೆ ಅದೊಂದು ವರದಾನ.

ವೈದ್ಯ ವಿಜ್ಞಾನದ ಹಾಗೆಯೇ ಯೋಗ ವಿಜ್ಞಾನ ಕೂಡ ಜಗತ್ತಿನಾದ್ಯಂತ ಬೆಳೆದಿದೆ. ಪ್ರಾಣಾಯಾಮದ ಆಸನ ಮತ್ತು ಮುದ್ರೆಗಳ ಮೇಲೆ ಸಂಶೋಧನೆಗಳು ಆಗುತ್ತಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿ ಬೆಳೆದು ನಿಂತಿದೆ. ಇನ್ನೂರು ವರ್ಷದ ಇತಿಹಾಸವಿರುವ ಅಲೋಪಥಿ ಚಿಕಿತ್ಸಾ ವಿಧಾನದಲ್ಲಿ ವಾಸಿಯಾಗದ ಎಷ್ಟೋ ಕಾಯಿಲೆಗಳು ಪುರಾತನ ಯೋಗ ಪದ್ಧತಿಯಿಂದ ವಾಸಿಯಾಗಿವೆ. ದೈಹಿಕ ಕಾಯಿಲೆ ಅಷ್ಟೇ ಅಲ್ಲ, ಮಾನಸಿಕವಾಗಿಯೂ ರೋಗಿ ಯೋಗದಿಂದ ನೆಮ್ಮದಿ ಕಾಣಬಲ್ಲ. ಆದ್ರೆ ಅಲೋಪಥಿಯಲ್ಲಿ ದೈಹಿಕವಾಗಿ ಚಿಕಿತ್ಸೆ ದೊರಕುತ್ತದೆ ಅಷ್ಟೆ, ಮಾನಸಿಕವಾಗಿ ಅಲ್ಲ. ಯೋಗಕ್ಕೊಂದು ದೈವೀ ಗುಣವಿದೆ. ಅಲೋಪಥಿಗೆ ಅದಿಲ್ಲ.

ಇದೊಂದು ಅತ್ಯಂತ ಸಂಕಷ್ಟಕಾಲ. ಯಾರನ್ನೋ ದೂಷಿಸುವ ಯಾವುದೋ ಪದ್ಧತಿಯನ್ನು ಧಿಕ್ಕರಿಸುವ ಕಾಲವಲ್ಲ ಇದು. ಅಲೋಪಥಿಯೋ ಆಯುರ್ವೇದವೋ ಯೋಗವೋ ಮತ್ತೊಂದೋ, ಯಾವುದು ಬೇಕೋ ಅದನ್ನು ರೋಗಿ ಅನುಸರಿಸಲಿ. ಅದು ಅವನ ವಿವೇಚನೆಗೆ ಬಿಟ್ಟಿದ್ದು. ನಿಮಗೆ ಬೇಕಾದ ಚಿಕಿತ್ಸಾ ವಿಧಾನ ಅನುಸರಿಸಿ ನಿಮ್ಮ ನಿಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಿ. ಯಾಕೆಂದರೆ ಕೊರೊನಾ ಸೋಂಕಿನಿಂದ ಜೀವ ಉಳಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.

ಲೇಖಕ: ಪಂಚಮಸಾಲಿ ಜಗದ್ಗುರು, ಹರಿಹರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು