ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪರಿಸರ ತುರ್ತುಪರಿಸ್ಥಿತಿ!

ಪರಿಸರ ನಿರ್ವಹಣೆ ಹೊಣೆಗಾರಿಕೆ ತೋರದೆ, ಭೂಕುಸಿತದಂಥ ದುರಂತಕ್ಕೆ ಪರಿಹಾರ ಅಸಾಧ್ಯ
Last Updated 9 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡದ ಕಾಳಿನದಿ ತಪ್ಪಲಿನ ಕಳಚೆ ಕಣಿವೆಯು ಸಹ್ಯಾದ್ರಿಯ ಸೌಂದರ್ಯವೆಲ್ಲ ಮೈವೆತ್ತ ತಾಣವಾಗಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅದು ಸಂಪೂರ್ಣ ಕೊಚ್ಚಿಹೋಗಿದೆ! ಗುಡ್ಡಗಳು ಬಿರಿದು, ಕಣಿವೆಗಳು ಕುಸಿದು, ನದಿಗಳು ಕಕ್ಷೆ ಬದಲಿಸಿ, ನೂರಾರು ಮನೆ- ಕೊಟ್ಟಿಗೆಗಳು ಮಣ್ಣಿನಡಿ ಹುಗಿದುಹೋಗಿವೆ.

ಪ್ರವಾಹವು ತಂದ ಹೂಳಿನಲ್ಲಿ ತೋಟ- ಗದ್ದೆಗಳು ಮುಚ್ಚಿಹೋಗಿವೆ. ರಸ್ತೆ, ವಿದ್ಯುತ್ ಸಂಪರ್ಕವಿಲ್ಲದಾಗಿದೆ. ಪರ್ವತಮಾಲೆಯ ಅರಣ್ಯಗಳಿಂದ ಸದಾಕಾಲ ಹರಿದುಬರುತ್ತಿದ್ದ ಝರಿಗಳೆಲ್ಲ ಕುಸಿದ ಗುಡ್ಡಗಳಡಿ ಮಾಯವಾಗಿವೆ. ತಾತ್ಕಾಲಿಕ ಶೆಡ್ಡುಗಳಲ್ಲಿ ನೆಲೆ ನಿಂತಿರುವ ಹಲವಾರು ಕುಟುಂಬಗಳೀಗ, ಕುಡಿಯುವ ಬಿಂದಿಗೆ ನೀರಿಗೂ ಮಳೆಗೆ ಕೊಡ ಹಿಡಿಯಬೇಕಾದ ಸ್ಥಿತಿ! ಮಲೆನಾಡಿನ ಸಮೃದ್ಧ ಹಳ್ಳಿಯೊಂದು ಒಂದೇ ದಿನದ ಭಾರಿ ಮಳೆಗೆ ಸಂಪೂರ್ಣ ನಾಶವಾದ ದುರಂತದ ಚಿತ್ರಣವಿದು.

ಮನೆ- ಹೊಲಗಳನ್ನೆಲ್ಲ ಕಳೆದುಕೊಂಡು ಭವಿಷ್ಯದ ಭರವಸೆಯೇ ಕೊಚ್ಚಿಹೋದಂತಿರುವ ಇಲ್ಲಿನ ಸಮುದಾಯಕ್ಕೆ ಈಗ ಉಳಿದಿರುವುದು, ಅಧಿಕಾರ ವಹಿಸಿಕೊಂಡ ಮರುದಿನವೇ ಭೇಟಿ ನೀಡಿದ ನೂತನ ಮುಖ್ಯಮಂತ್ರಿಯ ಆಡಳಿತವು ಸೂಕ್ತ ಪರಿಹಾರ ಒದಗಿಸೀತೆಂಬ ನಿರೀಕ್ಷೆ ಮಾತ್ರ!

ಕಳೆದೊಂದು ದಶಕದಿಂದ ಕರಾವಳಿ ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಆರಂಭವಾಗಿರುವ ಈ ಬಗೆಯ ಭೂಕುಸಿತವು ಕಳೆದ ಐದು ವರ್ಷಗಳಿಂದ ತೀವ್ರ ಸ್ವರೂಪ ಪಡೆಯುತ್ತಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಇದೀಗ ಉತ್ತರ ಕನ್ನಡ! ಪ್ರವಾಹ ಹಾಗೂ ಭೂಕುಸಿತಗಳ ಈ ಸರಣಿಗೆ ಕಾಡು– ಕಣಿವೆ, ಕೆರೆ- ನದಿಮೂಲ, ತೋಟ- ಗದ್ದೆಗಳೆಲ್ಲ ಬಲಿಯಾಗುತ್ತಿವೆ. ಸಂಕಷ್ಟಕ್ಕೆ ಈಡಾದವರ ಪ್ರಾಥಮಿಕ ಅಗತ್ಯಗಳಾದ ಸೂರು- ನೀರನ್ನಾದರೂ ಪೂರೈಸಲು, ಸರ್ಕಾರ ಹಾಗೂ ನಾಗರಿಕ ಸಮಾಜ ಶ್ರಮಿಸ
ಲೇಬೇಕಾದ ತುರ್ತುಪರಿಸ್ಥಿತಿಯಿದು.

‘ಜಾಗತಿಕ ಹವಾಮಾನ ಬದಲಾವಣೆ’ಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಳೆಚಕ್ರದ ಲಯ ತಪ್ಪುತ್ತಿರುವುದನ್ನು ವಿಜ್ಞಾನವು ಗುರುತಿಸುತ್ತಿರುವುದು ಎಲ್ಲರಿಗೂ ಗೊತ್ತು. ಒಂದೇ ದಿನ ಭಾರಿ ಮಳೆ ಸುರಿಯುವ ಸಂದರ್ಭಗಳು ಹೆಚ್ಚುತ್ತಿದ್ದು, ಮಲೆನಾಡು- ಕರಾವಳಿಯ ಭೂಕುಸಿತಗಳಿಗೆ ಅದುವೇ ಮೊದಲ ಕಾರಣವಾಗುತ್ತಿದೆ. ಆದರೆ, ಇಂಥ ವಿಕೋಪಗಳನ್ನೆಲ್ಲ ತಾಳಿಕೊಳ್ಳುವ ಪ್ರಕೃತಿಯ ಧಾರಣಾ ಸಾಮರ್ಥ್ಯವೇಕೆ ಒಮ್ಮೆಲೇ ನಾಶವಾಗುತ್ತಿದೆ? ಕೇಳಲೇಬೇಕಾದ ಮುಖ್ಯ ಪ್ರಶ್ನೆಯಿದು.

ದಶಕವೊಂದರಿಂದ ನಾಡಿನಲ್ಲಿ ಘಟಿಸುತ್ತಿರುವ ಭೂಕುಸಿತಗಳನ್ನು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪ್ರಕಟಿಸಿರುವ ವರದಿಗಳನ್ನೆಲ್ಲ ಕ್ರೋಡೀಕರಿಸಿ, ರಾಜ್ಯ ಜೀವವೈವಿಧ್ಯ ಮಂಡಳಿಯು ಕಳೆದ ಏಪ್ರಿಲ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿ ನೋಡಿದರೆ, ಇದಕ್ಕೆ ಉತ್ತರ ದೊರಕಬಲ್ಲದು.

ಸಹ್ಯಾದ್ರಿ ಪರ್ವತಗಳ ಮೇಲ್ಮಣ್ಣೆಂದರೆ, ನೀರು ಬಸಿದುಹೋಗುವ ಸಡಿಲ ಮಣ್ಣಿನ ಒಂದು ತೆಳುಪದರು. ಜಂಬಿಟ್ಟಿಗೆಮಣ್ಣು, ಬೆಸಾಲ್ಟ್, ಬೆಣಚುಕಲ್ಲು ಇತ್ಯಾದಿಗಳ ಮಿಶ್ರಣದ ಕೆಂಪುಮಣ್ಣದು. ಇದನ್ನು ಈವರೆಗೆ ರಕ್ಷಿಸಿರುವುದು ಇಲ್ಲಿನ ಹೊರಮೈ ಕಾಡಿನ ಹೊದಿಕೆ. ಗಗನಚುಂಬಿ ಮರಗಳ ರೆಂಬೆಗಳು, ಪೊದೆ- ಬಳ್ಳಿಗಳು, ಸಾವಯವ ತ್ಯಾಜ್ಯಗಳ ಹ್ಯೂಮಸ್ ನೆಲಹೊದಿಕೆ ಹಾಗೂ ನೆಲದಾಳಕ್ಕೆ ಇಳಿಯುವ ಬೇರಿನ ಜಾಲ- ಕಾಡಿನ ಈ ಎಲ್ಲ ಅಂಶಗಳೂ ಸೇರಿ, ಮಣ್ಣಿನ ಈ ರಕ್ಷಣಾಪೊರೆ ವಿಕಾಸವಾಗಿರುವುದು.

ಇದು ನಾಶವಾದರೆ, ಬಿದ್ದ ಮಳೆನೀರು ಒಮ್ಮೆಲೆ ಜಾಳಾದ ಮೇಲ್ಮಣ್ಣಿನ ಪದರುಗಳಡಿ ಇಳಿಯತೊಡಗುತ್ತದೆ. ಆಳದಲ್ಲಿರುವ ಜೇಡಿಮಣ್ಣು ಅಥವಾ ಗ್ರಾನೈಟ್ ಪದರು ಈ ನೀರನ್ನು ಹೀರಿಕೊಳ್ಳಲಾರದು. ಅಲ್ಲಿ ನಿಲ್ಲಲು ಸ್ಥಳವಿರದಾಗ, ನೀರು ಕಣಿವೆಯ ತಗ್ಗಿನ ಹೊರಮೈ ದಿಕ್ಕಿನಲ್ಲಿ ಗುರುತ್ವಶಕ್ತಿಯಿಂದಾಗಿ ತಳ್ಳಲ್ಪಡತೊಡಗುತ್ತದೆ. ಭಾರಿ ಮಳೆಯಾದಾಗ ಅಪಾರ ಪ್ರಮಾಣದ ನೀರು ಒಮ್ಮೆಲೆ ಹೀಗೆ ನುಗ್ಗುವಾಗ, ತನ್ನ ಜೊತೆ ಮೇಲ್ಭಾಗದ ಮಣ್ಣು-ಕಾಡುಗಳನ್ನೂ ಜಾರಿಸುತ್ತದೆ. ಆಗ ಗುಡ್ಡ ಬಿರಿದು, ಭೂಕುಸಿತ ಸಂಭವಿಸುತ್ತದೆ!

ಇಳಿಜಾರಿನ ಗುಡ್ಡಗಳಿರುವ ಹಾಗೂ ವಾರ್ಷಿಕ ಮೂರು ಸಾವಿರ ಮಿ.ಮೀ.ಗೂ ಹೆಚ್ಚು ಮಳೆಯಾಗುವ ಮಲೆನಾಡು- ಕರಾವಳಿಯ 23ಕ್ಕೂ ಹೆಚ್ಚಿನ ತಾಲ್ಲೂಕುಗಳಲ್ಲಿ ಈ ಪ್ರಕ್ರಿಯೆ ಗಂಭೀರ ಸ್ವರೂಪ ಪಡೆಯುತ್ತಿದೆಯೆಂದು, ರಾಜ್ಯ ಪ್ರಾಕೃತಿಕ ವಿಕೋಪ ಮಾಹಿತಿ ಕೇಂದ್ರದ (KSNDMC) ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ಭಾರಿ ಮಳೆಯೆಂಬುದು ಕೈಮೀರಿದ ಪ್ರಾಕೃತಿಕ ವಿದ್ಯಮಾನವಾದರೂ, ಇದನ್ನು ವಿಪತ್ತನ್ನಾಗಿ ಮಾಡಿದ್ದು ಮೇಲ್ಮಣ್ಣು ರಕ್ಷಿಸುವ ಕಾಡನ್ನು ಕಡಿದ ಮಾನವ ಎಂಬುದೀಗ ಸ್ಪಷ್ಟ. ಅರಣ್ಯ ನಾಶ, ಅವೈಜ್ಞಾನಿಕವಾಗಿ ಗುಡ್ಡ ಅಗೆಯುವುದು, ಏಕಸಸ್ಯ ನೆಡುತೋಪು, ನೆಲದ ಸೂಕ್ಷ್ಮತೆಯರಿಯದ ಅಭಿವೃದ್ಧಿ ಯೋಜನೆಗಳು- ಇವೆಲ್ಲವುಗಳಿಂದಾಗಿ ಭೂಪರಿಸರವು ಗಾಸಿಗೊಂಡು ತನ್ನ ಧಾರಣಾ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿರುವುದರ ಪರಿಣಾಮವಿದು. ಭೂಕುಸಿತವಾದೆಡೆ ಹೋದರೆ ಅರಿವಿಗೆ ಬರುವ ಸತ್ಯವಿದು.

ಪಶ್ಚಿಮಘಟ್ಟದ ಇಳಿಜಾರಿನ ಅರಣ್ಯಗಳಲ್ಲೂ ಒತ್ತುವರಿ ಹಾಗೂ ಮರಕಡಿತವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸೋಲುತ್ತಿದೆ. ಸಹಜ ಕಾಡಿರುವಲ್ಲೂ ಅಕೇಶಿಯಾ ತರಹದ ಏಕಸಸ್ಯ ನೆಡುತೋಪು ಬೆಳೆಸುವ ಹಾಗೂ ಮರ ಕಡಿಯುವ ಯೋಜನೆಗಳನ್ನು ಅದು ಕೈಬಿಡುತ್ತಿಲ್ಲ! ಅರಣ್ಯ ಹಾಗೂ ಗೋಮಾಳಗಳಲ್ಲಿನ ಅಕ್ರಮ ಕ್ವಾರಿಗಳನ್ನು ನಿಯಂತ್ರಿಸಲು ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕ್ವಾರಿಗಳಲ್ಲಿ ಭಾರಿ ಪ್ರಮಾಣದ ಮದ್ದುಗುಂಡು ಸಿಡಿಸಿ ಬಂಡೆಗಳನ್ನು ಸ್ಫೋಟ ಮಾಡಿದರೂ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪರಿಸರ ಇಲಾಖೆಗೆ ಅದು ಕೇಳಿಸುತ್ತಿಲ್ಲ. ನದಿಯಂಗಳದ ಮರಳನ್ನೆಲ್ಲ ಅವೈಜ್ಞಾನಿಕವಾಗಿ ತೆಗೆಯುವುದು ಸ್ಥಳೀಯ ಆಡಳಿತಗಳಿಗೆ ಗೋಚರಿಸುತ್ತಿಲ್ಲ. ಇತಿಮಿತಿಯಿಲ್ಲದೆ ಜೆಸಿಬಿ ಯಂತ್ರಗಳನ್ನು ಬಳಸಿ ಕಾನೂನುಬಾಹಿರವಾಗಿ ಭೂಸ್ವರೂಪ ಪರಿವರ್ತಿಸುವ ವರ್ತಮಾನ ನಡೆದೇ ಇದೆ. ಹೆದ್ದಾರಿ ಅಥವಾ ಕಟ್ಟಡ ನಿರ್ಮಿಸುವಾಗ, ಗುಡ್ಡಗಳನ್ನು ಲಂಬಕೋನದಲ್ಲಿ ಕತ್ತರಿಸಬಾರದೆಂಬ ಕನಿಷ್ಠ ವಿವೇಕವೂ ಮಾಯವಾಗುತ್ತಿದೆ.

ಬಸಿಗಾಲುವೆಗಳನ್ನು ಕಸ- ಹೂಳು ತುಂಬದಂತೆ ನಿರ್ವಹಿಸಿ, ಕೃತಕ ಪ್ರವಾಹ ತಡೆಯುವ ಪ್ರಾಥಮಿಕ ಕರ್ತವ್ಯ ನಿರ್ವಹಣೆಯೂ ಸ್ಥಳೀಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಎಲ್ಲವೂ ಜರುಗಿ, ‘ಎಲ್ಲ ಸರಿಯಾಗಿ ಸಾಗುತ್ತಿದೆ’ ಎಂಬಂಥ ವರದಿಗಳು ಸರ್ಕಾರದ ಕೈಸೇರುತ್ತವೆ. ನೆರೆ- ಭೂಕುಸಿತಗಳಂಥ ಅವಘಡ ಸಂಭವಿಸಿದಾಗ, ‘ಭಾರಿ ಮಳೆ’ ಮಾತ್ರವೇ ಕಾರಣ ಎಂದು ಹೇಳುವುದರೊಂದಿಗೆ, ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯೇ ಮುಗಿದುಹೋಗುತ್ತದೆ!

ಸೂಕ್ತ ನೆಲ- ಜಲ ಬಳಕೆಯ ನೀತಿಯೊಂದರ ಆಧಾರದಲ್ಲಿ ಸುಸ್ಥಿರ ಅಭಿವೃದ್ಧಿ ಮಾರ್ಗಗಳನ್ನು ಈಗಲಾದರೂ ರೂಪಿಸಬೇಕಿದೆ. ಮಳೆಯನ್ನು ಸೂಕ್ತವಾಗಿ ನಿರ್ವಹಿಸಿ, ಪ್ರಕೃತಿ ವಿಕೋಪಗಳ ಪರಿಣಾಮ ತಗ್ಗಿಸುವ ಕ್ಷಮತೆಯನ್ನು ಸಾಧಿಸಲು ಆಗ ಸಾಧ್ಯ. ಅರಣ್ಯ ಸಂರಕ್ಷಣೆ, ಜಲಾನಯನ ಅಭಿವೃದ್ಧಿಯಾಧಾರಿತ ಮೇಲ್ಮಣ್ಣು ನಿರ್ವಹಣೆ, ಕೃಷಿಅರಣ್ಯ, ಪರಿಸರದ ಅಂಗಗಳ ಪುನಶ್ಚೇತನ, ನದಿಪಾತ್ರ ನಿರ್ವಹಣೆ- ಈ ತತ್ವಗಳನ್ನೆಲ್ಲ ಜನರು ಹಾಗೂ ಪಂಚಾಯತ್‌ ರಾಜ್ ವ್ಯವಸ್ಥೆಯ ಪಾಲ್ಗೊಳ್ಳುವಿಕೆಯೊಂದಿಗೆ ಜಾರಿಗೊಳಿಸಬೇಕಿದೆ. ಪ್ರಾಕೃತಿಕ ವಿಕೋಪ ನಿಯಂತ್ರಣ ನಿಧಿಯೂ ಸೇರಿದಂತೆ ಅನುದಾನಗಳನ್ನೆಲ್ಲ ಕ್ರೋಡೀಕರಿಸಿ, ಈ ಸುಸ್ಥಿರ ಯೋಜನೆಗಳನ್ನು ಅನುಷ್ಠಾನ ಮಾಡುವುದೇ ಈ ಕ್ಷಣದ ಅಗತ್ಯ.

ತೊಂಬತ್ತರ ದಶಕದ ಆರಂಭದಲ್ಲಿ, ಹುಬ್ಬಳ್ಳಿ ನಗರದ ಉಣಕಲ್ ಕೆರೆಯಂಗಳದ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರೆಲ್ಲ ಕೈಜೋಡಿಸಿದ್ದ ಸಂದರ್ಭವೊಂದು ಇಲ್ಲಿ ಉಲ್ಲೇಖನೀಯ. ಪಕ್ಕದ ನೃಪತುಂಗ ಬೆಟ್ಟದಲ್ಲಿ ಹಸಿರೀಕರಣವೂ ಸಾಗಿತ್ತು. ಆ ಕಾರ್ಯದಲ್ಲಿ ತಮ್ಮ ಮಿತ್ರರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡ ಸುಶಿಕ್ಷಿತ ಹಾಗೂ ಉತ್ಸಾಹಿ ತರುಣ ಬಸವರಾಜ ಬೊಮ್ಮಾಯಿ ಅವರ ನೆನಪಾಗುತ್ತಿದೆ ಈಗ. ಮೂರು ದಶಕಗಳ ನಂತರ, ಜನಸಹಭಾಗಿತ್ವದ ನೆಲ- ಜಲ ರಕ್ಷಣೆಯ ಮಹತ್ವವನ್ನರಿತ ಅವರೇ ಈಗ ಜನಾಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ, ಸುಸ್ಥಿರ ಅಭಿವೃದ್ಧಿ ಮಾರ್ಗಗಳಿಗೆ ಆದ್ಯತೆ ದೊರಕೀತೆಂಬ ನಿರೀಕ್ಷೆ ಇಟ್ಟುಕೊಳ್ಳೋಣವಲ್ಲವೇ?‌

ಇಲ್ಲವಾದಲ್ಲಿ, ಭಾರಿ ಬಜೆಟ್ಟಿನಲ್ಲಿ ಸಿಮೆಂಟ್- ಗೋಡೆಗಳನ್ನು ನಿರ್ಮಿಸಿ, ಕುಸಿದ ಬೆಟ್ಟಗಳನ್ನೆಲ್ಲ ಹಿಡಿದೆತ್ತಿ ನಿಲ್ಲಿಸುತ್ತೇವೆನ್ನುವ ‘ಬೃಹತ್ ಕಾಮಗಾರಿವಾದಿಗಳು’ ಸಹ್ಯಾದ್ರಿಯ ತಪ್ಪಲಿಗೆ ಬಂದಿಳಿದಾರು!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ
ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT