ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ: ಜಾತ್ಯತೀತತೆಯ ಮೊಹರು | ಬರಗೂರು ರಾಮಚಂದ್ರಪ್ಪ ಬರಹ

Last Updated 14 ನವೆಂಬರ್ 2020, 1:35 IST
ಅಕ್ಷರ ಗಾತ್ರ
ADVERTISEMENT
""

ಭೂತಕೋಶದಲ್ಲಿ ಹೂತು ಹಾಕುವ ಹುನ್ನಾರಕ್ಕೆ ಬಲಿಯಾಗುತ್ತಿರುವ ಎರಡು ಹೆಸರುಗಳೆಂದರೆ- ನೆಹರೂ ಮತ್ತು ಜಾತ್ಯತೀತತೆ. ಜವಾಹರಲಾಲ್‌ ನೆಹರೂ ಎಂಬ ವ್ಯಕ್ತಿ ಮತ್ತು ಜಾತ್ಯತೀತ ಪರಿಕಲ್ಪನೆಗಳ ಕೊಡುಗೆಗಳನ್ನು ಕಡೆಗಣಿಸಿದ ಕಾಮಾಲೆ ಕಾರ್ಖಾನೆಗಳು ಈಗ ಕ್ರಿಯಾಶೀಲವಾಗಿವೆ. 1947ರ ಡಿಸೆಂಬರ್ ಒಂದರಂದು ರೇಡಿಯೊ ಭಾಷಣದಲ್ಲಿ ತಮ್ಮನ್ನು ‘ಭಾರತದ ಮೊದಲ ಸೇವಕ’ ಎಂದು ಕರೆದುಕೊಂಡ ನೆಹರೂ ಜೀವಮಾನವಿಡೀ ಜಾತಿ, ಧರ್ಮಗಳಲ್ಲಿ ಭೇದ ಹುಡುಕದೆ ಬದುಕಿದ ಜಾತ್ಯತೀತವಾದಿಯಾಗಿದ್ದರು.

1947ರ ಆಗಸ್ಟ್ 15ರಂದು ‘ನಾವು ಯಾವುದೇ ಧರ್ಮದವರಾಗಲಿ, ಎಲ್ಲರೂ ಸಮಾನ ಹಕ್ಕು, ಸೌಲಭ್ಯ ಮತ್ತು ಕರ್ತವ್ಯದಿಂದ ಕೂಡಿದ ಭಾರತದ ಮಕ್ಕಳಾಗಿದ್ದೇವೆ’ ಎಂದು ನುಡಿದ ನೆಹರೂ, 1951ರ ಅಕ್ಟೋಬರ್ 2ರಂದು ‘ಯಾರೇ ಆಗಲಿ ಧರ್ಮದ ಹೆಸರಿನಲ್ಲಿ ಇತರರ ಮೇಲೆ ಕೈ ಮಾಡುವುದಾದರೆ, ನಾನು ನನ್ನ ಕಡೆಯ ಉಸಿರಿರುವವರೆಗೂ ಅಂಥವರ ವಿರುದ್ಧ ಹೋರಾಡುತ್ತೇನೆ’ ಎಂದು ಘೋಷಿಸಿದರು. 1959ರಲ್ಲಿ ‘ಜಾತಿರಹಿತ, ವರ್ಗರಹಿತ ಸಮಾಜವೊಂದು ನಿರ್ಮಾಣವಾಗಬೇಕೆಂದು ನಾನು ಇಚ್ಛಿಸುತ್ತೇನೆ’ ಎಂಬ ಸೈದ್ಧಾಂತಿಕ ನೆಲೆಗೆ ನುಡಿಯಾದರು. ಈ ವಿಚಾರಧಾರೆಯಿಂದ ಮೂಲಭೂತವಾದಿ ಪರಿವಾರದ ಕಣ್ಣುಗಳಿಗೆ ಕಮ್ಯುನಿಸ್ಟರಾಗಿ ಕಂಡರು!

ಬರಗೂರು ರಾಮಚಂದ್ರಪ್ಪ

1926ರಲ್ಲಿ ಸೋವಿಯತ್‌ ಯೂನಿಯನ್‍ಗೆ ಹೋಗಿದ್ದ ನೆಹರೂ ಮಾರ್ಕ್ಸ್‌ವಾದದ ಪ್ರಭಾವಕ್ಕೆ ಒಳಗಾಗಿದ್ದರೂ ಕಮ್ಯುನಿಸ್ಟ್ ಆಗಿರಲಿಲ್ಲ. ಬದಲಾಗಿ, ಫ್ರಾಂಕ್ ಮೊರೇಸ್ ಅವರು ಹೇಳಿದಂತೆ ‘ಪ್ರಜಾಸತ್ತಾತ್ಮಕ ಸಮಾಜವಾದಿ’ಯಾಗಿದ್ದರು.

ಆದರೆ ನೆಹರೂ ಅವರನ್ನು ವಿರೋಧಿಸಿದ ವಲಯದಲ್ಲಿ ಕೆಲವು ಸಮಾಜವಾದಿಗಳೂ ಇದ್ದಾರೆ. ಇಂಥವರ ವಿರೋಧಕ್ಕೆ ನೆಹರೂ ಅವರು ‘ಬ್ರಾಹ್ಮಣ’ ಎಂಬ ಕಾರಣವೂ ಇದ್ದಂತಿದೆ. ಪ್ರಧಾನಿಯಾಗಿದ್ದಾಗ ಅವರ ಜೀವನವೆಚ್ಚದ ಏರಿಕೆಯೂ ಸಮಾಜವಾದಿಗಳ ಟೀಕೆಗೆ ಕಾರಣವಾಗಿದೆ. ಆದರೆ ನೆಹರೂ ತಮ್ಮ ಸಮಾಜವಾದಿ ಆಶಯವನ್ನು ಸದಾ ಪ್ರತಿಪಾದಿಸುತ್ತಲೇ ಇದ್ದರು. 1939ರ ಏಪ್ರಿಲ್ ಮೂರರಂದು ಸುಭಾಷ್‌ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ ಹೀಗೆ ಬರೆದಿದ್ದರು: ‘ಬೌದ್ಧಿಕವಾಗಿ ನಾನು ಸಮಾಜವಾದಿ
ಯಾಗಿದ್ದೇನೆ. ಸಮಾಜವಾದವು ವ್ಯಕ್ತಿತ್ವವನ್ನು ಕೊಲ್ಲುವುದಿಲ್ಲ, ಇಲ್ಲವೆ ಹತ್ತಿಕ್ಕುವುದಿಲ್ಲ. ಅಸಂಖ್ಯಾತ ವ್ಯಕ್ತಿಗಳಿಗೆ ಅವರ ಆರ್ಥಿಕ ಹಾಗೂ ಸಾಂಸ್ಕೃತಿಕ ಬಂಧನಗಳಿಂದ ಬಿಡುಗಡೆ ನೀಡುತ್ತದೆ. ಆದ್ದರಿಂದ ನಾನು ಅದಕ್ಕೆ ಆಕರ್ಷಿತನಾಗಿದ್ದೇನೆ’- ಹೀಗೆ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದ ನೆಹರೂ, ಸಮತಾವಾದಿ ಸಿದ್ಧಾಂತದ ಒಂದು ಅಂಶವಾದ ‘ಖಾಸಗಿ ಆಸ್ತಿ ಹಕ್ಕಿನ ವಿರೋಧ’ಕ್ಕೆ ಸಹಮತಿಯೂ ಆಗಿದ್ದರು. 1955ರ ಜನವರಿ 22ರಂದು ಕಲ್ಕತ್ತದಲ್ಲಿ ಮಾಡಿದ ಭಾಷಣದಲ್ಲಿ ‘ನಾವು ಸಂಪತ್ತನ್ನು ಪಡೆಯಬೇಕು. ಆನಂತರ ಅದನ್ನು ಸಮಾನವಾಗಿ ವಿತರಿಸಬೇಕು’ ಎಂದು ಪ್ರತಿಪಾದಿಸಿದರು. ಅಷ್ಟೇಕೆ ಸ್ವತಃ ಡಾ. ಅಂಬೇಡ್ಕರ್ ಅವರೇ ‘ಸಂವಿಧಾನಸಭೆಯ ಚರ್ಚೆಯಲ್ಲಿ ಖಾಸಗಿ ಆಸ್ತಿ ಹಕ್ಕನ್ನು ವಿರೋಧಿಸಿದವರು ನೆಹರೂ ಒಬ್ಬರೇ’ ಎಂದು ಹೇಳಿದ್ದಾರೆ. ಡಾ. ಅಂಬೇಡ್ಕರ್ ಅವರ ಬಗ್ಗೆ ನೆಹರೂ ‘ಜಾತ್ಯತೀತ ನವಭಾರತ ನಿರ್ಮಾಣಕ್ಕೆ ಸಂವಿಧಾನದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಡಾ. ಅಂಬೇಡ್ಕರ್ ವಿಚಾರಧಾರೆಯಂತೆಯೇ ನೆಹರೂ ಕೂಡ ‘ಸಾಮಾಜಿಕ ಸಮಾನತೆ’ಯನ್ನು ಸಮಕಾಲೀನ ಆದರ್ಶವೆಂದು ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತಿಪಾದಿಸಿದ್ದರು (1929, ಸೆಪ್ಟೆಂಬರ್ 22). ಹೀಗೆ ‘ನವಭಾರತ’ ನಿರ್ಮಾಣದ ಕನಸುಗಾರರೂ ‘ಭಾರತದ ಮೊದಲ ಸೇವಕ’ನೆಂದು ಕರೆದುಕೊಂಡವರೂ ಆಗಿದ್ದ ನೆಹರೂ ಅವರನ್ನು ಇಂದು ‘ಖಳನಾಯಕ’ರಂತೆ ಬಿಂಬಿಸುವ ಮೂಲಭೂತವಾದಿಗಳೂ ಇದ್ದಾರೆ. ‘ಧರ್ಮ ಮತ್ತು ರಾಜಕೀಯದ ನಡುವಣ ಕೋಮುವಾರು ಸಂಬಂಧ ಅತ್ಯಂತ ವಿಪತ್ಕಾರಿಯಾದುದು. ಇದು ಅತ್ಯಂತ ವಿಕೃತವಾದ ಅಕ್ರಮ ಸಂತಾನದ ಫಲದಂತೆ ದುಷ್ಪರಿಣಾಮಕಾರಿ’ (1963 ಜುಲೈ 27) ಎಂದು ಪ್ರತಿಪಾದಿಸುತ್ತಲೇ ಇದ್ದ ನೆಹರೂ ಸಹಜವಾಗಿಯೇ ಕೋಮುವಾದಿ- ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸರ್ದಾರ್ ವಲ್ಲಭಭಾಯ್ ಪಟೇಲರು ನೆಹರೂ ಬದಲು ಪ್ರಧಾನಿಯಾಗಬೇಕಿತ್ತೆಂಬ ಬಯಕೆಯಲ್ಲೂ ನೆಹರೂ ವಿರೋಧಿ ನೆಲೆಯಿದೆ. ಪಟೇಲ್ ಅವರಿಗೆ ಅರ್ಹತೆ ಮತ್ತು ದಕ್ಷತೆ ಎರಡೂ ಇವೆ, ನಿಜ. ಆದರೆ 1946ರಲ್ಲಿ ನಡೆದ ಪ್ರಾಂತೀಯ ಶಾಸನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ನೆಹರೂ ಅವರನ್ನು ಮಧ್ಯಂತರ ಸರ್ಕಾರದ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು. 1941- 42ರಲ್ಲಿಯೇ ಗಾಂಧಿಯವರು ನೆಹರೂ ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದನ್ನು ಇಲ್ಲಿ ನೆನೆಯಬಹುದು. ನೆಹರೂ ಅವರ ಅಚಲ ಜಾತ್ಯತೀತ ಬದ್ಧತೆಯು ಗಾಂಧಿ ಘೋಷಣೆಯ ಪ್ರೇರಣೆಯಾಗಿರಬಹುದು.

ಅಷ್ಟೇಕೆ, ಸ್ವತಃ ಸರ್ದಾರ್ ಪಟೇಲರೇ 1949ರ ಅಕ್ಟೋಬರ್ 14ರ ತಮ್ಮ ಲೇಖನದಲ್ಲಿ ‘ಸ್ವತಂತ್ರಭಾರತದ ಅಮೂಲ್ಯನಿಧಿ, ಅಸಂಖ್ಯಾತ ಭಾರತೀಯರ ಅದ್ವಿತೀಯ ನೇತಾರ, ಉತ್ಕಟ ಭಾವುಕ, ದಬ್ಬಾಳಿಕೆಯ ಕಟ್ಟಾ ವಿರೋಧಿ, ಜಾತಿ, ಮತ, ಧರ್ಮ ಪಂಥಗಳನ್ನು ಮೀರಿ ಸಮಸ್ತರನ್ನೂ ಸೆಳೆಯಬಲ್ಲ ಪಾರದರ್ಶಕ ಪ್ರಾಮಾಣಿಕ’- ಮುಂತಾದ ವಿಶೇಷಣಗಳಿಂದ ನೆಹರೂ ಅವರನ್ನು ಪ್ರಶಂಸೆ ಮಾಡಿದ್ದಾರೆ. ಜೊತೆಗೆ ‘ಕೆಲವು ಸ್ವಹಿತಾಸಕ್ತ ಜನರು ನಮ್ಮಿಬ್ಬರ ನಡುವೆ ಅನ್ಯೋನ್ಯತೆ ಇಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಸುಳ್ಳು’ ಎಂದು ಹೇಳುತ್ತಾ ತಾವಿಬ್ಬರೂ ‘ಜೀವಮಾನದ ಗೆಳೆಯರಾಗಿ’ ಕೆಲಸ ಮಾಡುತ್ತಿದ್ದೇವೆ ಎಂದು ಬರೆದಿದ್ದಾರೆ.

ಅಂತೆಯೇ 1952ರ ಜುಲೈ 24ರಂದು ಸಂಸತ್ತಿನಲ್ಲಿ ನೆಹರೂ ಅವರು ಸರ್ದಾರ್ ಪಟೇಲರ ದಕ್ಷತೆ ಮತ್ತು ಸಹಕಾರ ಕುರಿತು ಮುಕ್ತ ಪ್ರಶಂಸೆ ಮಾಡಿದ್ದಾರೆ. ಹೀಗಿದ್ದರೂ ಮೂಲಭೂತವಾದಿ ವಲಯವು ನೆಹರೂ ವಿರೋಧಕ್ಕೆ ಪಟೇಲರನ್ನು ಅಸ್ತ್ರವನ್ನಾಗಿ ಬಳಸುತ್ತಿರುವುದು ಅನುಚಿತ.

ಕಾಶ್ಮೀರ ಸಮಸ್ಯೆಗೆ ನೆಹರೂ ಅವರನ್ನೇ ಹೊಣೆ ಮಾಡುತ್ತ, 370ನೇ ವಿಧಿಯಡಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರವೇ ಅದು ಭಾರತದ ಭಾಗವಾಯಿತೆಂಬಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ವಾಸ್ತವವಾಗಿ ರಾಜಾ ಹರಿಸಿಂಗ್ ಅವರೊಂದಿಗೆ ನೆಹರೂ ನೇತೃತ್ವದ ಸರ್ಕಾರವು 1947ರ ಅಕ್ಟೋಬರ್ 26ರಂದು ಒಪ್ಪಂದ ಮಾಡಿಕೊಂಡಾಗಲೇ ಕಾಶ್ಮೀರವು ಭಾರತದ ಭಾಗವಾಯಿತು. ಜಮ್ಮು ಮತ್ತು ಕಾಶ್ಮೀರ ಪ್ರತಿನಿಧಿಗಳ ಜೊತೆಗೆ 1952ರ ಜುಲೈ 20ರಂದು ನೆಹರೂ ನಡೆಸಿದ ಅಧಿಕೃತ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತದ ಸಂವಿಧಾನಕ್ಕೆ ಬದ್ಧವಾದ ರಾಜ್ಯವೆಂದೂ ಅಲ್ಲಿನವರೆಲ್ಲ ಸಂವಿಧಾನದ 1 ಮತ್ತು 5ನೇ ವಿಧಿಯಂತೆ ಭಾರತದ ಪೌರರೆಂದೂ ಒಪ್ಪಿ ಖಾತರಿಪಡಿಸಲಾಯಿತು. ಆ ರಾಜ್ಯದ ಪ್ರತಿನಿಧಿಗಳು ಅದಾಗಲೇ ಅಸ್ಸಾಂನ ಬುಡಕಟ್ಟು ಮತ್ತು ಪಂಜಾಬ್ ಪ್ರದೇಶದಲ್ಲಿರುವ ಭೂ ಸಂಬಂಧಿ ಸ್ವಾಯತ್ತ ಹಕ್ಕುಗಳು ತಮಗೂ ಬೇಕೆಂದು ಕೇಳುತ್ತಾರೆ.

ಕಾಶ್ಮೀರ ಸಮಸ್ಯೆಯ ಸೂಕ್ಷ್ಮತೆ ಮತ್ತು ಭಾರತದಲ್ಲೇ ಉಳಿಸುವ ಬದ್ಧತೆಯ ಕಾರಣಕ್ಕಾಗಿ ವಿಶೇಷ ಸವಲತ್ತಿನ 370ನೇ ವಿಧಿ ಜಾರಿಯಾಗುತ್ತದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಈಗ ರದ್ದಾಗಿದ್ದರೂ ನಾಗಾಲ್ಯಾಂಡ್ (371ಎ) ಅಸ್ಸಾಂ (371ಬಿ) ಮಣಿಪುರ (371ಸಿ) ಮಿಜೋರಾಂ (371ಜಿ) ಅರುಣಾಚಲ ಪ್ರದೇಶ (371ಎಚ್‌) ಸ್ವಲ್ಪ ಹೆಚ್ಚು ಕಡಿಮೆ ಕಾಶ್ಮೀರಕ್ಕೆ ಇದ್ದಂತಹ ಸ್ವಾಯತ್ತ ಸೌಲಭ್ಯಗಳನ್ನು ಈಗಲೂ ಹಕ್ಕಾಗಿ ಉಳಿಸಿಕೊಂಡಿವೆ. ನಾಗಾಲ್ಯಾಂಡ್, ಮಿಜೋರಾಂನಲ್ಲಿ ಈಗಲೂ ಬೇರೆ ರಾಜ್ಯದವರು ಭೂಮಿ ಖರೀದಿಸುವಂತಿಲ್ಲ. ಹೀಗಾಗಿ ಕಾಶ್ಮೀರ ಸಮಸ್ಯೆಗೆ ನೆಹರೂ ಅವರೇ ಕಾರಣವೆಂಬುದು ವಾಸ್ತವವಲ್ಲ.

ಹಾಗೆಂದು ನೆಹರೂ ಯಾವತ್ತೂ ತಪ್ಪು ನಿರ್ಧಾರಗಳನ್ನು ಮಾಡಿಯೇ ಇಲ್ಲವೆಂದಲ್ಲ. ಒಂದುವೇಳೆ ತಪ್ಪಾಗಿದ್ದರೂ ಅದನ್ನು ಮೀರಿ ಕೊಡುಗೆಗಳನ್ನು ಸಕಾರಾತ್ಮಕವಾಗಿ ಗೌರವಿಸುವ ಭಾರತೀಯ ಮನಸ್ಸು ನಮ್ಮದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT