ಮಂಗಳವಾರ, ಜೂನ್ 28, 2022
24 °C
ನಮ್ಮ ಪೂರ್ವಿಕರ ಭಾಷಾ ಸೂಕ್ಷ್ಮತೆಯ ಅರಿವು ಅರತ ಭಾವಸ್ಥಿತಿ ನಮ್ಮದಾಗಿದೆ

ವಿಶ್ಲೇಷಣೆ | ಕನ್ನಡ: ಜೀವಂತ ಭಾಷೆಯ ಅಸ್ಮಿತೆ

ಎಸ್.ಜಿ.ಸಿದ್ಧರಾಮಯ್ಯ Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆ–‍ಪ್ರಾತಿನಿಧಿಕ ಚಿತ್ರ

ಲಿಪಿಗಳ ರಾಣಿ ಕನ್ನಡ ಲಿಪಿ– ವಿನೋಬಾ ಭಾವೆ

ಕನ್ನಡ ಭಾಷೆಯ ಅನನ್ಯತೆಯು ವರ್ಣಮಾಲೆಯನ್ನೊಳಗೊಂಡು ಉಚ್ಚಾರದ ವ್ಯತ್ಯಯ ಸೂಕ್ಷ್ಮದಲ್ಲಿ ಪ್ರಕಟವಾಗುವುದು. ಅಷ್ಟೇ ಅಲ್ಲ, ಜಗತ್ತಿನಲ್ಲಿರುವ ಯಾವುದೇ ಭಾಷೆಯ ಉಚ್ಚಾರವನ್ನು ಮೂಲ ಉಚ್ಚಾರಕ್ಕೆ ಎರವಾಗದಂತೆ ಅಕ್ಷರ ರೂಪದಲ್ಲಿ ಹಿಡಿದಿಡಲು ಕನ್ನಡ ವರ್ಣಮಾಲೆಗೆ ಸಾಧ್ಯ. ಏಕೆಂದರೆ ಒಂದು ಜೀವಂತ ಭಾಷೆಯಾದ ಕನ್ನಡ, ಜಗತ್ತಿನ ಹಲವು ಭಾಷೆಗಳಿಗೆ ಮುಖಾಮುಖಿಯಾದಾಗ ಕೊಡು-ಪಡೆಗೆ ಆರೋಗ್ಯಕರವಾದ ರೀತಿಯಲ್ಲಿ ತೆರೆದುಕೊಂಡ ಭಾಷೆಯಾಗಿದೆ. ತನ್ನ ಪ್ರಭಾವಳಿಯ ಆವರಣಕ್ಕೆ ಬಂದ ಎಷ್ಟು ಭಾಷೆಗಳಿಗೆ ತನ್ನ ಪದಗಳನ್ನೂ ಪರಿಭಾಷೆಗಳನ್ನೂ ಕನ್ನಡ ನೀಡಿದೆಯೋ ಗೊತ್ತಿಲ್ಲ. ಆದರೆ ಆ ಭಾಷೆಗಳಿಂದ ಸಮೃದ್ಧವಾಗಿ ಪದ, ಪಾರಿಭಾಷಿಕ ಪದಸಂಪತ್ತನ್ನು ಪಡೆದುಕೊಂಡಿದೆ. ಹೀಗೆ ಪಡೆದುಕೊಳ್ಳುವಾಗ ಅವುಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಂಡಂತೆ ಉಚ್ಚಾರ ಭಿನ್ನತೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಇದು ಯಾವುದೇ ಜೀವಂತ ಭಾಷೆಯ ಗುಣಲಕ್ಷಣ.

ಕನ್ನಡದ ವಿಶೇಷವೆಂದರೆ, ವರ್ಣಮಾಲೆಯಲ್ಲೂ ಅಕ್ಷರಗಳ ಕುರಿತಾಗಿ ಬಹಳಷ್ಟು ಸ್ವೀಕಾರ ಕ್ರಿಯೆಗಳು ನಡೆದಿವೆ. ಈಗ ಸದ್ಯ ಬಳಕೆಯಲ್ಲಿರುವ ಕನ್ನಡ ವರ್ಣಮಾಲೆಯ ಅಕ್ಷರಗಳು ಐವತ್ತೆರಡು. ಆಧುನಿಕ ವೈಯ್ಯಾಕರಣಿಗಳು, ಭಾಷಾ ತಜ್ಞರು ಕನ್ನಡ ವರ್ಣಮಾಲೆಯಲ್ಲಿನ ಈ ಅಕ್ಷರಗಳನ್ನು ಕಡಿಮೆ ಮಾಡಲು ಹೊರಟಿದ್ದಾರೆ. ಈ ರೀತಿಯ ಪ್ರಯೋಗ ಹಿಂದೆಯೂ ನಡೆದಿತ್ತು. ಸಂಪೂರ್ಣ ಅಚ್ಚ ಕನ್ನಡದ ಪದಗಳನ್ನು ಬಳಸಿ ಕಾವ್ಯ ಬರೆಯುವ ಹಟಕ್ಕೆ ಬಿದ್ದಂತೆ ಆಂಡಯ್ಯ ಕವಿ ‘ಕಬ್ಬಿಗರ ಕಾವಂ ಬರೆದ. ಆದರೆ ಆ ಪ್ರಯೋಗ ಕೇವಲ ಒಂದು ಪ್ರಯೋಗವಾಗಿ ಉಳಿಯಿತೇ ಹೊರತು ಮತ್ತೊಬ್ಬ ಆ ದಾರಿಯ ಪಯಣಿಗನಾಗಲಿಲ್ಲ. ಈಗಲೂ ಈ ವೈಯ್ಯಾಕರಣಿಗಳು ತಾತ್ವಿಕವಾಗಿ ತಮ್ಮ ಪ್ರಯೋಗಗಳನ್ನು ಹೇಳಿದರೂ ಪ್ರಾಯೋಗಿಕವಾಗಿ ಅವರು ತಮ್ಮ ಬರಹದಲ್ಲಿ ಅದನ್ನು ರೂಢಿಗೆ ತರುತ್ತಿಲ್ಲ. ಉದಾಹರಣೆಗೆ ‘ಪ್ರಶ್ನೆ’ಗೆ ಬದಲಾಗಿ ‘ಕೇಳ್ವಿ’ ಕನ್ನಡಪದ ಪ್ರಯೋಗಿಸಲು ಸೂಚಿಸುತ್ತಾರೆ. ಆದರೆ ಅವರೇ ತಮ್ಮ ಎಲ್ಲಾ ರೀತಿಯ ಬರಹದಲ್ಲೂ ‘ಪ್ರಶ್ನೆ’ಯನ್ನೇ ಪ್ರಯೋಗಿಸುತ್ತಾರೆ. ಹಾಗೆಯೇ ಮಹಾಪ್ರಾಣಗಳು ಕನ್ನಡಕ್ಕೆ ಬೇಕಿಲ್ಲವೆನ್ನುತ್ತಾರೆ. ಆದರೆ ಅವರ ಬರಹದಲ್ಲಿ ಎಲ್ಲೂ ಮಹಾಪ್ರಾಣಗಳನ್ನು ಬಿಟ್ಟು ಬರವಣಿಗೆ ಮಾಡಿಲ್ಲ, ಮಾಡುತ್ತಿಲ್ಲ.

ಹೀಗಾಗಿ ಯಾರು ಏನೇ ಬದಲಾವಣೆಗೆ ವ್ಯಕ್ತಿಗತ ನೆಲೆಯಲ್ಲಿ ಪ್ರಯೋಗಶೀಲರಾದರೂ ಅದು ಕೇವಲ ಒಂದು ಪ್ರಯೋಗಾತ್ಮಕ ಉದಾಹರಣೆಯಾಗಿ ಉಳಿದಿದೆಯೇ ಹೊರತು ಕನ್ನಡದ ವರ್ಣಮಾಲೆಯ ಐವತ್ತೆರಡು ಅಕ್ಷರಗಳೂ ಇಂದು ಸಹಜಗತಿಯ ಬಳಕೆಯಲ್ಲಿರುವುದು ಸತ್ಯ. ಈ ಐವತ್ತೆರಡು ಅಕ್ಷರಗಳು ಬಳಕೆಯಲ್ಲಿರುವುದರಿಂದಲೇ ಜಗತ್ತಿನ ಎಲ್ಲ ಭಾಷೆಗಳನ್ನು ಆಯಾ ಭಾಷೆಯ ಉಚ್ಚಾರಕ್ಕೆ ಎರವಾಗದಂತೆ ಕನ್ನಡ ಅಕ್ಷರಗಳಲ್ಲಿ ಬರೆದುಕೊಳ್ಳುವುದು ಸಾಧ್ಯವಿದೆ. ಉದಾಹರಣೆಗೆ, ಕನ್ನಡದಲ್ಲಿ ಘರ್ಷ್ಯ ಧ್ವನಿ ಇಲ್ಲ. ಇಂಗ್ಲಿಷಿನ Za - Fa ಧ್ವನಿಗಳು ಕನ್ನಡದಲ್ಲಿ ಇಲ್ಲ. ಡಜನ್‌, ಕಾಫಿ ಪದಗಳನ್ನು ಕನ್ನಡ ಅಕ್ಷರದಲ್ಲಿ ಉಚ್ಚಾರಕ್ಕೆ ಎರವಾಗದಂತೆ ಬಳಸಲಾಗುತ್ತಿದೆ. ಮೊದಲು ಜ ಗೆ ಜ಼ ಎಂದೂ ಫ ಗೆ ಫ಼ ಎಂದೂ ಅಕ್ಷರಗಳ ಕೆಳಗೆ ಎರಡು ಚುಕ್ಕಿಗಳನ್ನು ಇಟ್ಟು ಪ್ರಯೋಗಿಸಲಾಗುತ್ತಿತ್ತು. ಈಗ ಚುಕ್ಕಿಗಳನ್ನು ಬಿಟ್ಟು ಪ್ರಯೋಗ ನಡೆದಿದೆ. ಆದರೆ ಸಂದರ್ಭಾನುಸಾರ ಉಚ್ಚಾರದಲ್ಲಿ ವ್ಯತ್ಯಾಸಗಳನ್ನು ತರಲಾಗುತ್ತದೆ. ಉದಾಹರಣೆಗೆ, ಫಲ ಅಂದಾಗ ಅದು ಕನ್ನಡ ಉಚ್ಚಾರದ ಫಲವೇ ಆಗುತ್ತದೆ. ಅದೇ ಫ ಅಕ್ಷರ ಇಂಗ್ಲಿಷಿನ ಫಿನಾಯಿಲ್‌ ಎನ್ನುವಾಗ ಉಚ್ಚಾರದಲ್ಲಿ ಫಿ಼ ಎಂಬ ಉಚ್ಚಾರ ಅಯಾಚಿತವಾಗಿ ಚುಕ್ಕಿಗಳ ಪ್ರಯೋಗವಿಲ್ಲದೆಯೂ ಆಗುತ್ತದೆ. ಇದು ರೂಢಿಗೆ ಬಂದ ಪ್ರಯೋಗ
ವಾಗಿ ಒಗ್ಗಿ ಹೋಗಿದೆ. ಇಂಥ ಕಿಂಚಿತ್‌ ಪ್ರಯೋಗ ವ್ಯತ್ಯಯಗಳನ್ನು ಬಿಟ್ಟರೆ ಮಿಕ್ಕಂತೆ ಎಲ್ಲ ಉಚ್ಚಾರಗಳೂ ಸಹಜ ದನಿ ಸ್ಪಂದನದ ವೈಜ್ಞಾನಿಕ ಸಮೀಕರಣದಲ್ಲಿ ಪ್ರಯೋಗಕ್ಕೆ ಹೊಂದಿಕೊಳ್ಳುತ್ತವೆ. ಇದು ಕನ್ನಡದ ವಿಶೇಷ.

ವೈಜ್ಞಾನಿಕ ವಿಧಾನದ ಈ ಸೌಲಭ್ಯ ಎಷ್ಟು ಭಾಷೆಗಳಲ್ಲಿದೆಯೋ ಗೊತ್ತಿಲ್ಲ. ಆದರೆ ಕನ್ನಡಕ್ಕೆ ಮಾತ್ರ ಉಚ್ಚಾರಕ್ಕೂ ಅಕ್ಷರ ಬರಹಕ್ಕೂ ಇರುವ ಸಾಮ್ಯ ಅಚ್ಚರಿ ಹುಟ್ಟಿಸುವ ಸಮೀಕರಣ ಸಾಂಗತ್ಯದಿಂದ ಕೂಡಿದೆ. ಈ ಅನುಕೂಲವು ಕನ್ನಡದ ಸೋದರಿ ಭಾಷೆಗಳಾದ ಇತರ ದ್ರಾವಿಡ ಭಾಷೆಗಳಿಗೆ ಇಲ್ಲ. ತಮಿಳಿನಲ್ಲಿ ‘ಸ’ ಅಕ್ಷರ ಬಿಟ್ಟರೆ ‘ಶ’, ‘ಷ’ಗಳಿಲ್ಲ. ಕನ್ನಡಕ್ಕೆ ಇವು ಹೊರೆ ಅಲ್ಲ; ಅನುಕೂಲ. ಶಂಕರ ಸಂಕರನಾಗಲಾರ. ಷಣ್ಮುಖ ಸಣ್ಮುಖನಾಗಲಾರ. ಇದನ್ನು ಕನ್ನಡ ಭಾಷೆಯ ಜಾಯಮಾನ ಅಚ್ಚುಕಟ್ಟಾಗಿ ರೂಢಿಸಿಕೊಂಡಿದೆ. ಈ ರೀತಿಯ ಬಹಳಷ್ಟು ಉದಾಹರಣೆಗಳನ್ನು ಕನ್ನಡ ಪ್ರಯೋಗದಲ್ಲಿ ಎತ್ತಿಕೊಡಬಹುದು. ಅದೇ ಜಗತ್ತಿನ ಬಹುಭಾಗವನ್ನು ಆಕ್ರಮಿಸಿಕೊಂಡಿರುವ ಇಂಗ್ಲಿಷ್‌ನಲ್ಲಿ ಉಚ್ಚಾರಕ್ಕೂ ಬರಹಕ್ಕೂ ಸಾಂಗತ್ಯವೇ ಇಲ್ಲ. ಎಷ್ಟೋ ಕಡೆ ಅಕ್ಷರಗಳು ಬರಹದಲ್ಲಿ ಬಳಕೆಯಲ್ಲಿವೆ, ಉಚ್ಚಾರದಲ್ಲಿ ಅವು ಸೈಲೆಂಟ್‌ ಆಗುತ್ತವೆ. Walk, Could, Should, Psychology ಇತ್ಯಾದಿ. ಈ ಎಡವಟ್ಟು ಕನ್ನಡಕ್ಕಿಲ್ಲ. ಇದು ಗಮನಾರ್ಹ ವಿಷಯ.

ಕನ್ನಡದ ಇನ್ನೊಂದು ವಿಶೇಷವೆಂದರೆ ಕಾಗುಣಿತ ಪ್ರಯೋಗ. ತಲೆಕಟ್ಟು, ದೀರ್ಘ, ಹ್ರಸ್ವ, ಏತ್ವ, ಐತ್ವ, ಓತ್ವ, ಔತ್ವದಂಥ ವಿಚಾರದಲ್ಲಿ ಆಗುವ ಅರ್ಥ ವ್ಯತ್ಯಾಸಗಳು ಕನ್ನಡ ಭಾಷೆಯ ಸಂಕೀರ್ಣತೆಯನ್ನು, ಸೂಕ್ಷ್ಮತೆಯನ್ನು ಬಿಂಬಿಸುತ್ತವೆ. ಇಲ್ಲಿ ಉದಾಹರಣೆಗೆ ಎರಡು ಪದಗಳನ್ನು ನೋಡಿ. ಅರಿತು= ತಿಳಿದುಕೊಂಡು. ಅರತು= ಬತ್ತಿ ಹೋಗು, ಬತ್ತಿ ಹೋದ. ಇಲ್ಲಿ ‘ರ’ಕ್ಕೆ ಇಳಿ ಬಂದರೆ ಅರಿತು ಅದೇ ‘ರ’ಕ್ಕೆ ತಲೆಕಟ್ಟು ಉಳಿದರೆ ಅರತು. ಅರ್ಥವ್ಯತ್ಯಾಸ ಅಗಾಧ ರೀತಿಯಲ್ಲಿ ಆಗುತ್ತದೆ. ಪ್ರಯೋಗಕ್ಕಾಗಿ ಈ ವಚನ ನೋಡಿ:ಮೊದಲ ಭಾಗ– ಅಹಂಕಾರವರತು ಗುರುವಾಗಿ, ಜಗವರತು ಲಿಂಗವಾಗಿ, ತ್ರಿವಿಧವರತು ಜಂಗಮವಾಗಿ, ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ.


ಎಸ್‌.ಜಿ.ಸಿದ್ಧರಾಮಯ್ಯ

ಎರಡನೇ ಭಾಗ- ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ, ಆವಸ್ಥಲದಲ್ಲಿ ನಿಂದು ನೋಡಿದರೂ ಭಾವ ಶುದ್ಧವಾಗಿ, ಗುರುವಿಂಗೆ ಗುರುವಾಗಿ ಲಿಂಗಕ್ಕೆ ಲಿಂಗವಾಗಿ, ಜಂಗಮಕ್ಕೆ ಜಂಗಮವಾಗಿ, ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ, ಕಾಲಾಂತಕ ಭೀಮೇಶ್ವರ ಲಿಂಗವು ತಾನೇ (ಢಕ್ಕೆಯ ಬೊಮ್ಮಣ್ಣನ ವಚನ – 10).

ವಚನದ ಮೊದಲ ಭಾಗದಲ್ಲಿ ಅರತು= ಬತ್ತಿ ಹೋಗಿ, ಇಲ್ಲವಾಗಿ, ಲಯವಾಗಿ ಎಂಬ ಅರ್ಥ ಪ್ರತೀತಗೊಂಡು ವಚನದ ಆಶಯ ಬೆಳೆದಿದೆ. ಸಂಸಾರದ ಗಡಬಡೆಯಲ್ಲಿ ಗುರುಲಿಂಗ ಜಂಗಮಗಳು ಸಿಲುಕದಿರಬೇಕಾದರೆ ಅಹಂಕಾರ, ಜಗ, ತ್ರಿವಿಧಗಳು ಅಂದರೆ ಈ ಗುಣಗಳು ಬತ್ತಿ ಹೋಗಬೇಕು, ವರ್ಜಿತವಾದವುಗಳಾಗಬೇಕು. ಅದು ತಪ್ಪಿ ಅವುಗಳನ್ನು ಒಳಗೊಂಡಿದ್ದರೆ ಅವನು ಗುರು, ಲಿಂಗ, ಜಂಗಮ ಸ್ವರೂಪಿಯಾಗಲಾರ. ಕಾಲಾಂತಕ ಭೀಮೇಶ್ವರ ಲಿಂಗವು ತಾನೇ ಆಗಲಾರ. ಇದು ವಚನದ ಎರಡನೇ ಭಾಗದ ಆಶಯ.

ಇಲ್ಲಿ ಇದೇ ಅರತು ಪದಕ್ಕೆ ಬದಲಾಗಿ ಅರಿತು ಪದಪ್ರಯೋಗ ಮಾಡಿನೋಡಿ. ಅರ್ಥವ್ಯತ್ಯಾಸದ ಪರಿ ಹೇಗೆ ಬೆಳೆಯುತ್ತದೆ ಎಂಬುದು ಕುತೂಹಲಕರ ವಿಚಾರ. ಅರಿತು ಎಂದರೆ ತಿಳಿದುಕೊಂಡು ಎಂದರ್ಥ. ಅರಿವು ಎಂಬುದು ಕೇವಲ ತಿಳಿವಳಿಕೆಯಾದರೆ ಕ್ರಿಯೆ ಇಲ್ಲದ ಅರಿವು ಹೀನವಪ್ಪುದು. ಈ ವಚನದಲ್ಲಿ ಮುಂದಿನ ಭಾಗಕ್ಕೆ ಹೊಂದಿಸಿಕೊಂಡಾಗ ಕ್ರಿಯೆಯ ವಿಚಾರದ ಪರಿಣಾಮವನ್ನು ಧ್ವನಿತ ಭಾವದಲ್ಲಿ ವ್ಯಂಜಿಸುತ್ತಿದೆ. ಈ ಪರಿಯ ಪ್ರಯೋಗವನ್ನು ಅಧ್ಯಾಹಾರದ ಭಾವಾರ್ಥ ಪ್ರಯೋಗ ಎಂದು ಕರೆಯುತ್ತಾರೆ. ಹೀಗಾಗಿ ಗುರು, ಲಿಂಗ, ಜಂಗಮಗಳು ತಾನೇ ಕಾಲಾಂತಕ ಭೀಮೇಶ್ವರ ಲಿಂಗವಾಗುವುದಕ್ಕೆ ಈ ತಿಳಿವು ಮುಖ್ಯ ಎಂಬುದನ್ನು ಇದು ಸಾರುತ್ತಿದೆ.

ಮೇಲುನೋಟಕ್ಕೆ ಎರಡೂ ಪ್ರಯೋಗಗಳು ಸರಿ ಹಾಗೂ ಸಮ ಎನ್ನಿಸುವಂತೆ ಕಂಡರೂ ಅರತು ಎಂಬುದು ಸಾಧಕನ ಅಂತಿಮ ಪರಿಣಾಮ ಗುಣವನ್ನು ಪರಿಭಾವಿಸಿ ಹೇಳುತ್ತಿದೆ. ಅರಿತು ಎಂಬುದು ಸಾಧಕನ ಪ್ರಯೋಗಶೀಲ ಗುಣವನ್ನು ಸಾದರಪಡಿಸಿದಂತೆ ವ್ಯಂಜಿಸಿ ಹೇಳುತ್ತಿದೆ. ಹೀಗೆ ಎರಡೂ ಪ್ರಯೋಗಗಳ ಆಂತರ್ಯದ ವ್ಯತ್ಯಯ ತುಂಬಾ ಸಂಕೀರ್ಣವಾದುದು. ಇದು ಭಾಷಾ ಬಳಕೆಯ ಪ್ರಜ್ಞಾಪರಿಣತಿಗೆ ಸಂಬಂಧಿಸಿದ್ದು. ಕನ್ನಡಪ್ರಜ್ಞೆ ಇಂಥ ಸೂಕ್ಷ್ಮತೆಗಳ ನೆಲೆಯಲ್ಲಿ ಜ್ಞಾನ ವಿಚಾರಗಳನ್ನು ಧಾರಣ ಮಾಡಿಕೊಂಡಿದೆ. ಈ ಸೂಕ್ಷ್ಮತೆಯ ಅರಿವಿಲ್ಲದ ಜನ, ಕನ್ನಡ ಭಾಷೆಯನ್ನಾಡುವ ಕನ್ನಡಜನ ತಮ್ಮ ಭಾಷೆಯ ಬಗೆಗೆ ತಾವೇ ಕೀಳರಿಮೆ ಬೆಳೆಸಿಕೊಂಡಿರುವುದು ಕನ್ನಡ ಭಾಷೆಯ ದೌರ್ಭಾಗ್ಯ, ಕನ್ನಡ ಜನತೆಯ ದುರಂತ. ನಮ್ಮ ಪೂರ್ವಿಕರ ಭಾಷಾ ಸೂಕ್ಷ್ಮತೆಯ ಅರಿವು ಅರತ ಭಾವಸ್ಥಿತಿ ನಮ್ಮದಾಗಿದೆ. ಇದರಿಂದ ಭಾಷೆಗೆ ಒಳ್ಳೆಯದಲ್ಲ; ಭಾಷಾ ಸಮುದಾಯಕ್ಕೂ ಭವಿಷ್ಯವಿಲ್ಲ.

ಗೂಗಲ್‌, ಅಮೆಜಾನ್‌ಗಳಲ್ಲಿ ಈಗ ಆಗಿರುವ ಅವಮಾನಕಾರಕ ಘಟನೆಗಳು ಖಂಡನಾರ್ಹ. ಇವುಗಳನ್ನು ಪ್ರಶ್ನಿಸುವಾಗ, ಇದಕ್ಕೆ ಕಾರಣವಾದ ನಮ್ಮ ಕ್ರಿಯಾಹೀನ ಅರಿವನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು