ಮಂಗಳವಾರ, ಜೂನ್ 28, 2022
26 °C
ಜ್ಞಾನ ಮತ್ತು ಕೌಶಲಗಳು ಅಭಿನ್ನವಾದ ಅರಿವನ್ನು ಇಂದಿನ ಶಿಕ್ಷಣವು ಕಟ್ಟಿಕೊಳ್ಳಬೇಕಿದೆ

ವಿಶ್ಲೇಷಣೆ: ಜ್ಞಾನ ಅಧಿಕಾರ ಮತ್ತು ಅಹಂಕಾರ

ಡಾ. ಗೀತಾ ವಸಂತ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣದ ಗುರಿಯಿರುವುದು ವ್ಯಕ್ತಿತ್ವದ ಸಮಗ್ರ ವಿಕಸನದ ಕಡೆಗೋ ಅಥವಾ ವೃತ್ತಿಪರ ಮಾನವ ಸಂಪನ್ಮೂಲವನ್ನು ಒಗ್ಗೂಡಿಸುವ ಕಡೆಗೋ ಎಂಬುದು ಮೂಲಪ್ರಶ್ನೆ. ಇದು ಜ್ಞಾನ ಮತ್ತು ಕೌಶಲದ ಪ್ರಶ್ನೆಯೂ ಹೌದು. ಒಳಗಿನ ಅನ್ವೇಷಣೆಯಿಂದ ಆರಂಭವಾಗುವ ಸಹಜ ಕಲಿಕೆಯು ಉದ್ದೇಶವೊಂದರ ಪೂರೈಕೆಗಾಗಿ ರೂಪಿಸಲ್ಪಟ್ಟಾಗ ಅದು ವ್ಯವಸ್ಥೆಯಾಗಿ ಬದಲಾಗುತ್ತದೆ. ‘ಜ್ಞಾನ ವ್ಯವಸ್ಥೆ’ಯು ತನಗೆ ಬೇಕಾದಂತಹ ವ್ಯಕ್ತಿಗಳನ್ನು ತಯಾರಿಸುವ ಕಾರ್ಖಾನೆ ಯಾಗುತ್ತದೆ. ಜ್ಞಾನಕ್ಕಿರಬೇಕಾದ ಚಲನಶೀಲ ಗುಣ ಕಣ್ಮರೆಯಾಗುತ್ತದೆ. ಸೃಜನಶೀಲತೆಯ ಅನಂತ ಮುಖಗಳು ಮಸುಕಾಗುತ್ತ ಹೋಗುತ್ತವೆ. ವ್ಯವಸ್ಥೆಯು ಬಲಗೊಳ್ಳುತ್ತ ವ್ಯಕ್ತಿತ್ವವು ದುರ್ಬಲಗೊಳ್ಳುವುದೇ ಹೀಗೆ.

ಜ್ಞಾನವನ್ನು ‘ರೂಪಿಸು’ವಾಗ ನೇಪಥ್ಯದಲ್ಲಿ ಒಂದು ದೃಷ್ಟಿಕೋನವು ಕೆಲಸ ಮಾಡುತ್ತಿರುತ್ತದೆ. ಅದು ಅಧಿಕಾರ ಕೇಂದ್ರವನ್ನು ಅವಲಂಬಿಸಿರುತ್ತದೆ. ಈ ಅವ್ಯಕ್ತ ದೃಷ್ಟಿಕೋನವು ಸಾಮಾಜಿಕ ಬದುಕಿನಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ಅಭಿನೀತವಾಗುತ್ತದೆ. ಇದರಿಂದಾಗಿ ಸಮಾಜವು ನಿರೀಕ್ಷಿಸುವ ವರ್ತನೆಗಳನ್ನೇ ವ್ಯಕ್ತಿಗಳು ಅನುಸರಿಸುತ್ತಿರುತ್ತಾರೆಯೇ ವಿನಾ ವ್ಯಕ್ತಿತ್ವದ ಸಹಜ ವಿಕಸನದ ಎಲ್ಲೆಗಳು ಹಿಗ್ಗುವುದಿಲ್ಲ. ಪುರುಷಕೇಂದ್ರಿತ ಅನುಭವ, ಅನುಭೂತಿಗಳಿಂದ ಕಟ್ಟಿದ ಜ್ಞಾನವು ಹೆಣ್ಣು ಅನುಭವ ಹಾಗೂ ಅವಳ ಅನುಭೂತಿಯ ನೆಲೆಗಳನ್ನು ಪ್ರಜ್ಞಾಪೂರ್ವಕವಾಗಿಯೋ ಕೆಲವೊಮ್ಮೆ ಅಪ್ರಜ್ಞಾ ಪೂರ್ವಕವಾಗಿಯೋ ಒಳಗೊಂಡಿರುವುದಿಲ್ಲ. ಚರಿತ್ರೆ ಯನ್ನು ಗಮನಿಸಿದಾಗ ಅಲ್ಲಿ ಪ್ರಬಲವಾಗಿ ಕೇಳುವುದು ಗಂಡುಧ್ವನಿ. ಅವನು ಕಟ್ಟಿದ ಜ್ಞಾನ ಮೀಮಾಂಸೆ ಹಾಗೂ ಸೌಂದರ್ಯ ಮೀಮಾಂಸೆಗಳೇ ಇಂದು ಜಗತ್ತನ್ನು ಆಳುತ್ತಿವೆ.

ಅಲೆಮಾರಿಯಾಗಿದ್ದ ಮನುಷ್ಯನು ಸಾಮ್ರಾಜ್ಯಗಳನ್ನು ಸ್ಥಾಪಿಸುತ್ತ ನಡೆದ ಬೆಳವಣಿಗೆಯಲ್ಲೇ ನಾಗರಿಕತೆಗಳು ಉದಿಸಿದವು. ಕೊಳ್ಳೆ ಹೊಡೆಯುವ ಯುದ್ಧೋನ್ಮಾದವು ಪೌರುಷ ಹಾಗೂ ಪರಾಕ್ರಮದ ವ್ಯಾಖ್ಯಾನಗಳನ್ನು ರೂಪಿಸಿತು. ಪ್ರಭುತ್ವ ಶಕ್ತಿಗಳು ಬಲಗೊಳ್ಳುತ್ತ ಹೋದಂತೆ ಅದನ್ನು ಸ್ಥಿರೀಕರಿಸುವ ಸಾಧನಗಳೂ ರೂಪುಗೊಂಡವು. ಧರ್ಮ ಮತ್ತು ಪ್ರಭುತ್ವಗಳ ಬೆಸುಗೆ ಹಾಗೆಯೇ ಗಟ್ಟಿಯಾಗತೊಡಗಿತು. ನಾಗರಿಕತೆಯನ್ನು ಭೌತಿಕವಾಗಿ ಕಟ್ಟಲು ಬೇಕಾದ ಎಲ್ಲ ಕೌಶಲಗಳು ಅಭಿವೃದ್ಧಿಗೊಂಡವು. ಕಸುಬುಗಳ ಆಧಾರದ ಮೇಲೆ ಸಾಮಾಜಿಕ ಶ್ರೇಣೀಕರಣವೂ ಬೆಳೆಯುತ್ತ ಹೋಯಿತು. ಕಣ್ಣಿಂದ, ಕೈಯಿಂದ, ಇಡೀ ದೇಹವನ್ನೇ ತೊಡಗಿಸುವ ಮೂಲಕ ಕಟ್ಟಿಕೊಂಡ ಕೌಶಲಗಳಿಗಿಂತ ಬುದ್ಧಿಮಾತ್ರದಿಂದ ಆಳುವ ಜ್ಞಾನ ದೊಡ್ಡದು ಎಂಬ ಪರಿಭಾವಿಸುವಿಕೆ ಜ್ಞಾನದ ಅಧಿಕಾರವನ್ನು ಸ್ಥಾಪಿಸಿತು. ಅಧಿಕಾರವೆಂಬುದು ಗೆಲ್ಲುವುದರಲ್ಲಿದೆ, ಆಳುವುದರಲ್ಲಿದೆ, ಭೋಗಿಸುವುದರಲ್ಲಿದೆ ಎಂಬ ಪುರುಷಪ್ರಧಾನವಾದ ತಿಳಿವಳಿಕೆಯು ಹೆಣ್ಣಿನ ಸಂಗೋಪನೆಯ ಗುಣವನ್ನು ಗೌಣವಾಗಿಸಿತು.

ಪ್ರಕೃತಿಯೊಂದಿಗೆ ತಾದಾತ್ಮ್ಯಗೊಂಡ ಅವಳ ಪ್ರಜ್ಞೆ ನಿಧಾನ ಲಯದ ಆದರೆ ನಿರಂತರವಾದ ವಿಕಸನವನ್ನು ಪ್ರತಿನಿಧಿಸುತ್ತಿತ್ತು. ಆದರೆ ಪ್ರಕೃತಿಯನ್ನು ಗೆದ್ದು, ಅದನ್ನು ತನ್ನ ಅಧೀನಗೊಳಿಸಿ ತನ್ನ ಉಪಭೋಗಕ್ಕೆ ಬಳಸುವ ಪುರುಷಪ್ರಜ್ಞೆ ಮುನ್ನೆಲೆಗೆ ಬಂತು. ಅದನ್ನೇ ಪರಾಕ್ರಮವೆಂದು ವರ್ಣಿಸುತ್ತಾ ಬಂದ ಅಕ್ಷರ ಜಗತ್ತು, ಚರಿತ್ರೆಯಲ್ಲಿ ಪೌರುಷವನ್ನೇ ವಿಜೃಂಭಿಸಿತು. ತಾಳ್ಮೆಯನ್ನು ಬೇಡುವ ಕೌಶಲಗಳ ಜಗತ್ತು ಅಪ್ರಧಾನವಾಯಿತು. ಬದುಕನ್ನು ಕಟ್ಟುವವರಿಗಿಂತ ಆಳುವವರು ಪ್ರಧಾನ ನೆಲೆಯಲ್ಲಿ ನಿಂತರು.

ಭೂಮಿ, ಹೆಣ್ಣು ಹಾಗೂ ಸಕಲ ಚರಾಚರಗಳನ್ನುಳ್ಳ ಸಾವಯವ ಜಗತ್ತನ್ನು ಸಂಪತ್ತಾಗಿಯೂ ಆ ಮೂಲಕ ಭೋಗವಸ್ತುವಾಗಿಯೂ ಪರಿಭಾವಿಸುತ್ತ ಬಂದ ದೃಷ್ಟಿಕೋನವು ಇಂದಿಗೂ ಮುನ್ನೆಲೆಯಲ್ಲಿದೆ. ಇದು ಪಿತೃಪ್ರಧಾನತೆಯ ದೃಷ್ಟಿಕೋನವೂ ಹೌದು. ಇಡೀ ಪ್ರಕೃತಿಯನ್ನು ಬೇಟೆಯಾಡುವ ಈ ಪ್ರವೃತ್ತಿ ಸೃಷ್ಟಿಸಿದ ಜ್ಞಾನವು ಜಗತ್ತನ್ನು ಇಂದು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಕನ್ನಡದ ಕವಿ ಬೇಂದ್ರೆಯವರ ‘ಚಿಗರಿಗಂಗಳ ಚೆಲುವಿ’ ಎಂಬ ಕವಿತೆ ಅಧಿಕಾರದ ಗಂಡುಪ್ರಜ್ಞೆ ಉಂಟುಮಾಡುತ್ತಿರುವ ವಿನಾಶದ ತಲ್ಲಣವನ್ನು ಆಳವಾದ ಅನುಭವಸಾಂದ್ರತೆಯಲ್ಲಿ ಕಟ್ಟಿಕೊಟ್ಟಿದೆ.

ಭೂಮಿಯನ್ನು ಬರಿಯ ಸಂಪನ್ಮೂಲವಾಗಿ ಕಾಣದೆ, ಅದು ಉಸಿರಾಡುತ್ತಿರುವ ಜೀವಂತ ಜಗತ್ತು ಎಂದು ಭಾವಿಸಿದಾಗ ನಮ್ಮ ನೋಟಕ್ರಮಗಳು ಪಲ್ಲಟಿಸುತ್ತವೆ. ಕವಿತೆಯು ‘ಬ್ಯಾಟಿ ನಾಯೊದರ್ಯಾವೋ ಹಸುಜೀವ ಬೆದರ್ಯಾವೋ’ ಎಂಬ ಪ್ರತಿಮೆಯಲ್ಲಿ ಈ ಜೀವಜಗತ್ತಿನ ತಲ್ಲಣವನ್ನು ವ್ಯಕ್ತಗೊಳಿಸುತ್ತದೆ. ಅಲ್ಲಿ ಬರುವ ಹೆಣ್ಣು ಮತ್ತು ಪ್ರಕೃತಿ ಬೇರೆಯಲ್ಲ. ಅವಳು ಕೂಡ ಬೇಟೆಯ ತುತ್ತಾದವಳೇ. ಅವಳ ದೇಹ ಮತ್ತು ಮನಸ್ಸುಗಳ ಮೇಲೆ ನಡೆದ, ನಡೆಯುತ್ತಲೇ ಇರುವ ಆಕ್ರಮಣಗಳಿಗೆ ಕೊನೆಯೆಂಬುದೇ ಇಲ್ಲವೇನೋ ಎಂಬ ತಲ್ಲಣ ನಮ್ಮನ್ನು ಕಾಡುತ್ತದೆ. ‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ ಎಂಬ ಉದ್ಗಾರದಲ್ಲಿ ಅದು ಹರಳುಗಟ್ಟಿದೆ. ಹಾಗೆಯೇ ಪ್ರಕೃತಿಯ ಮೇಲೆ ಆಗುತ್ತಿರುವ ಆಕ್ರಮಣಗಳೂ ಅವ್ಯಾಹತವಾಗಿವೆ. ಅದರ ಸೂಕ್ಷ್ಮ ಚೀತ್ಕಾರಗಳು ನಮಗೆ ಕೇಳದಾಗಿವೆ. ನಮ್ಮ ಸ್ವಾರ್ಥ ಹಾಗೂ ಲಾಭಕೋರತೆಯ ತೀರದ ಹಸಿವುಗಳು ನಿಜವನ್ನು ಕಾಣದಂತೆ ನಮ್ಮನ್ನು ಅಸೂಕ್ಷ್ಮಗೊಳಿಸಿವೆ.

ಅವಳು ‘ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾಳೋ’ ಎಂಬಲ್ಲಿ ಪ್ರಕೃತಿಯನ್ನು ಪರಿಭಾವಿಸಬೇಕಾದ ನೈಜ ನೋಟವಿದೆ. ಪ್ರಕೃತಿಯ ಭಾಗವೇ ಆದ ನಾವು ಭೂಪತಿಗಳಲ್ಲ, ಭೂತಾಯಿಯ ಮಕ್ಕಳು ಎಂಬ ಭಾವ ಬಲಿತಾಗ ತಾಯಿ– ಮಗುವಿನ ನಡುವಿನ ಸಾವಯವ ಸಂಬಂಧದ ಜ್ಞಾನ ನಮಗಾಗುತ್ತದೆ. ಉಸಿರಿದ್ದ ಒಡಲಿನ ಕಂಪನ ಅರಿವಾಗತೊಡಗುತ್ತದೆ.

ಇಂದು ನಾವು ಸೃಷ್ಟಿಸಬೇಕಾಗಿರುವ ಜ್ಞಾನವು ಸಕಲ ಜೀವರಾಶಿಯನ್ನೊಳಗೊಂಡ ಸಮಸ್ತ ಪ್ರಕೃತಿಯ ಉಳಿವಿಗಾಗಿ ಇರಬೇಕೋ ಅಥವಾ ತಾತ್ಕಾಲಿಕ ಸಮಸ್ಯೆಗಳ ಶಮನಕ್ಕಾಗಿ ಇರಬೇಕೋ ಎಂಬುದು ಯೋಚಿಸಬೇಕಾದ ವಿಷಯ. ತಂತ್ರಜ್ಞಾನವು ತಂದುಕೊಟ್ಟ ವೇಗ ಹಾಗೂ ಯಂತ್ರಗಳ ದೈತ್ಯಶಕ್ತಿ ತಂದುಕೊಟ್ಟ ಅಹಂಕಾರಗಳು ನಮ್ಮನ್ನು ಪ್ರಕೃತಿಯಿಂದ ಭಿನ್ನಗೊಳಿಸಿ ಅದನ್ನು ಆಳುವ ಉನ್ಮಾದವನ್ನು ಸೃಷ್ಟಿಸುತ್ತಲೇ ಇವೆ.

ಹೆಣ್ಣಿನ ವಿಷಯದಲ್ಲಿ ಬಂಡವಾಳಶಾಹಿ ಜಗತ್ತು ತೋರಿಸುತ್ತಿರುವ ತಣ್ಣನೆಯ ಕ್ರೌರ್ಯವೂ ಇದೇ ಬಗೆಯದು. ಇದೊಂದು ಬಗೆಯ ಆಂತರಿಕ ಪ್ರಳಯ. ನಮ್ಮ ಜ್ಞಾನಕ್ರಮಗಳು ಕಣ್ಣಿಗೆ ಕಾಣದಂತೆ ಇದನ್ನು ಉಂಟುಮಾಡುತ್ತಿವೆ. ಇದರಿಂದ ಉಳಿಯಬೇಕಾದರೆ ಈ ವಿನಾಶಕಾರಿ ಆಲೋಚನಾಕ್ರಮವು ಬದಲಾಗಲೇಬೇಕು. ಜ್ಞಾನವೆಂಬುದು ಸಮಗ್ರವಾಗಬೇಕಾದರೆ ಅಲ್ಲಿ ಹೆಣ್ಣು ಕಟ್ಟಿಕೊಂಡು ಬಂದ ಕೌಶಲಗಳ ಜಗತ್ತೂ ಮುಖ್ಯವಾಗ ಬೇಕಾಗುತ್ತದೆ. ವೈದೇಹಿ ‘ತಿಳಿದವರೇ ಹೇಳಿ’ ಎಂಬ ಪದ್ಯದಲ್ಲಿ ಹೀಗೆ ಪ್ರಶ್ನಿಸುತ್ತಾರೆ.

ತಿಳಿಸಾರು ಎಂದರೆ ಏನೆಂದುಕೊಂಡಿರಿ?
ಅದಕ್ಕೂ ಬೇಕು ಒಳಗೊಂದು
ಜಲತತ್ವ ಗಂಧತತ್ವ
ಕುದಿದು ಹದಗೊಂಡ ಸಾರತತ್ವ

ಒಂದು ಕಿಟಕಿಯೂ ಇರದ ಹೊಗೆ ಹಿಡಿದ ಅಡುಗೆ ಮನೆಯಲ್ಲಿ ಶತಮಾನಗಳನ್ನು ಕಳೆದ ಹೆಣ್ಣಿಗೂ ಒಂದು ಅಂತರ್‌ದೃಷ್ಟಿಯಿದೆ. ಬದುಕು ಹದಗೊಳ್ಳುವುದು ಹೇಗೆಂದು ತಿಳಿಯುವುದು ಪರಮಜ್ಞಾನ. ಅದೇ ಪಕ್ವತೆಯ ಪರಾಕಾಷ್ಠೆ. ಅದು ಕುದುಕುದಿದು ಹದಗೊಂಡವಳಲ್ಲಿದೆ. ಇನ್ನು ಲೌಕಿಕ ಜ್ಞಾನಕ್ಕೆ ಬಂದರೆ ಅದೂ ಅವಳಿಗೆ ತಿಳಿದಿದೆ. ಜಲತತ್ವ ಅಗ್ನಿತತ್ವ ಗಂಧತತ್ವ ಎಲ್ಲವೂ ಹೇಗೆ ಎಷ್ಟು ಯಾವಾಗ ಬೆರೆಯಬೇಕೆಂಬುದು ಅವಳಿಗೆ ಗೊತ್ತು. ಜ್ಞಾನವೆಂಬುದು ಮಾತಿನ ತುತ್ತಲ್ಲ. ಅಕ್ಷರದ ಅಹಂಕಾರವಲ್ಲ. ಅದು ಅನುದಿನದ ಬದುಕನ್ನು ಪೋಷಿಸುವ ಲೌಕಿಕ ಶಕ್ತಿಯೂ ಹೌದು. ಇದನ್ನೇ ಕಮ್ಮಾರಿಕೆ ಚಮ್ಮಾರಿಕೆ ಕೃಷಿ ಎಲ್ಲವುಗಳ ಬಗ್ಗೆಯೂ ಹೇಳಬಹುದು.

ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ವೊಂದರಲ್ಲಿ ಯು.ಆರ್. ಅನಂತಮೂರ್ತಿಯವರು ಆಡಿದ್ದ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ‘ಜ್ಞಾನ ಅನ್ನೋದು ಬರೀ ತಲೆಯಲ್ಲಲ್ಲ, ಮೈಯಲ್ಲಿ ಇದೆ, ಕೈಯಲ್ಲಿ ಇದೆ, ಕಣ್ಣಲ್ಲಿ ಇದೆ, ಕಾಲಲ್ಲಿ ಇದೆ. ಈ ತಂತ್ರಜ್ಞಾನವೆಲ್ಲ ಬರೋದು ದೇಹದ ಒಳಗಿನ ಜ್ಞಾನದಿಂದ’. ಕುಶಲ ಕರ್ಮಿಗಳ ಜ್ಞಾನ ಬರಿಯ ಆಲೋಚನೆಗಳಿಂದ ಕಟ್ಟುವ ಜ್ಞಾನಕ್ಕಿಂತ ಕಡಿಮೆಯೇನಲ್ಲ. ಜ್ಞಾನ ಮತ್ತು ಕೌಶಲಗಳು ಅಭಿನ್ನವಾದ ಅರಿವನ್ನು ಇಂದಿನ ಶಿಕ್ಷಣವು ಕಟ್ಟಿಕೊಳ್ಳಬೇಕಿದೆ. ನಾವು ಸಂಗತಿಗಳನ್ನು ‘ಕಾಣುವ’ ನೋಟ ದಲ್ಲಾಗುವ ಪರಿವರ್ತನೆಯೇ ಜ್ಞಾನದ ಮೊದಲ ಮೆಟ್ಟಿ ಲಾಗಬೇಕು. ಆಗ ಜಗತ್ತು ಹೊಚ್ಚಹೊಸದಾಗಿ ಕಾಣತೊಡಗುತ್ತದೆ. ಜ್ಞಾನವು ಅಹಂಕಾರವಾಗದೇ ಅರಿವಾಗಿ ಪೊರೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು