ಶನಿವಾರ, ಜನವರಿ 28, 2023
13 °C
ಪ್ರಾಮಾಣಿಕತೆಯ ರೂಪ ಒಂದೇ, ಭ್ರಷ್ಟಾಚಾರದ ಮಾರ್ಗಗಳು ನೂರೆಂಟು

ವಿಶ್ಲೇಷಣೆ: ಈ ಲೋಕದಲ್ಲಿರಲು ತೆರಬೇಕಾದುದು...

ಜಿ.ಎಸ್.ಜಯದೇವ/ ಕೃಷ್ಣಮೂರ್ತಿ ಹನೂರು  Updated:

ಅಕ್ಷರ ಗಾತ್ರ : | |

Prajavani

ನಮ್ಮ ಎಲ್ಲ ರಾಜಕೀಯ ಪಕ್ಷಗಳ ನೇತಾರರು ಚುನಾವಣೆಯ ಈ ಹೊತ್ತಿನಲ್ಲಿ, ಇನ್ನೇನು ಕೆಲವೇ ತಿಂಗಳಲ್ಲಿ ತಮತಮಗೇ ದೊರಕಿಬಿಡಬಹುದಾದ ಅಧಿಕಾರದಿಂದ ರಾಮರಾಜ್ಯವನ್ನು ಸ್ಥಾಪಿಸಿಬಿಡುವ ಉತ್ಸಾಹದ ಮಾತಾಡುತ್ತಿರುವ ಈ ದಿನಗಳಲ್ಲಿ; ಅದನ್ನೆಲ್ಲ ಬಿಟ್ಟು ದೊರಕಿರುವ ಅವಕಾಶಗಳಲ್ಲಿ ಅದೆಷ್ಟು ಕೆಲಸ ಮಾಡಿದ್ದೇವೆ ಅಥವಾ ನಮ್ಮ ಸುತ್ತ ಅಂಥದ್ದೇನಾದರೂ ಕಾಯಕ ನಡೆಯುತ್ತಿದೆಯೇ ಎಂಬುದರತ್ತ ಗಮನ
ಹರಿಸುವುದು ಸೂಕ್ತ ಅನಿಸುತ್ತದೆ.

ಹೀಗೆ ಸರ್ಕಾರಿ ಸೇವೆಯಲ್ಲಿದ್ದು, ತನ್ನ ಕೈ ಅಳತೆಯಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಾಮಾಣಿಕವಾಗಿ ಯೋಚಿಸುವವನಿಗೆ ಎದುರಾಗಲೂಬಹುದಾದ ತೊಡರುಗಾಲು ಅಂದರೆ, ದೊಡ್ಡವರೆನಿಸಿಕೊಂಡವರು
ವೇದಿಕೆಯಲ್ಲಿ ಆಡುವ ಹುಸಿ ಭರವಸೆಯ ಮಾತು, ಆಮೇಲೆ ಕತ್ತಲ ಸಂದಿಯಲ್ಲಿ ನಡೆಸುವ ಭ್ರಷ್ಟಾಚಾರ!

ಈ ಮುಸುಕಿನ ವ್ಯವಹಾರವು ಇನ್ನೆತ್ತಲೋ ಹಸಿರ ಮರೆಯಲ್ಲಿ ಪ್ರಾಮಾಣಿಕವಾಗಿ ಸರ್ಕಾರಿ ದೇವರ ಕೆಲಸ ಮಾಡಬಯಸುವವನಿಗೆ ಅದೆಷ್ಟು ಕೈ ಕಟ್ಟಿ ಹಾಕುತ್ತದೆಂದರೆ, ಆತ ಅಮಾನತುಗೊಳ್ಳಲು ಸಿದ್ಧ ಆದರೆ ನಿಷ್ಠೆಯ ಕಾಯಕ ಬಿಡಲು ತಯಾರಿಲ್ಲ ಎಂದದ್ದಿದೆ. 

ಸದ್ಯಕ್ಕೆ ನಮ್ಮ ದೇಶ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳಲ್ಲಿ ಶಿಕ್ಷಣವೂ ಸೇರಿಕೊಂಡಿದೆ ಎಂಬುದು ಲಾಗಾಯ್ತಿನಿಂದ ಹೇಳಿಕೊಂಡು ಬಂದ ಮಾತು. ಯಾವುದೇ ಪ್ರಯೋಗವು ಸದುದ್ದೇಶದ ಹಿನ್ನೆಲೆಯಲ್ಲಿ ಜಾರಿಗೆ ಬಂದರೆ ತಾನೇ ಅದರ ಸಾರ್ಥಕ್ಯ. ಇದೀಗ ಪಟ್ಟಣದಲ್ಲಿ ಇರುವವರಿಗಿಂತ ಅಕ್ಷರ ಕಲಿಯಬೇಕಾಗಿರುವುದು ಗ್ರಾಮಾಂತರ ಪ್ರದೇಶದ ಮಕ್ಕಳೇ. ಹಳ್ಳಿಗಾಡಿನ ಮಕ್ಕಳ ಸಮೂಹಕ್ಕೆ ಖಾಸಗಿಯವರು ತಮ್ಮ ಶಾಲೆಗಳನ್ನು ಕೊಂಡೊಯ್ಯುವುದಿಲ್ಲ. ಅವರ ಶಿಕ್ಷಣ ವ್ಯವಹಾರ
ವೇನಿದ್ದರೂ ದೊಡ್ಡದೊಡ್ಡ ಪಟ್ಟಣಗಳಲ್ಲಿ. ಆದರೆ
ಸ್ವಾತಂತ್ರ್ಯಪೂರ್ವದಿಂದಲೂ ತದನಂತರವೂ ಕರ್ನಾಟಕದ ಬಹುತೇಕ ಸಣ್ಣಪುಟ್ಟ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಸ್ಥಾಪನೆಯಾಗಿ ಅವು ಬಹು ದೊಡ್ಡ ಸೇವೆಗೈದಿವೆ. ಆದರೆ ಅಲ್ಲಿರಬಹುದಾದ ಸಮಸ್ಯೆಗಳೂ ವರ್ಷಗಟ್ಟಲೆ
ಯಷ್ಟು ಹಳೆಯದಾದುವು. ಇನ್ನೇನು ಚಾವಣಿಯೂ ಗೋಡೆಯೂ ಕುಸಿಯುತ್ತಿದೆ ಎಂಬುದರಿಂದ ಹಿಡಿದು ಅಧ್ಯಾಪಕರಿಲ್ಲ, ಶೌಚಾಲಯವೇ ಇಲ್ಲ ಎಂಬುದರವರೆಗೆ ದೂರುಗಳು ಇದ್ದೇ ಇವೆ. ಇದಾದದ್ದು ಶಾಲೆಗೆ ಹೋಗುವ ಮಕ್ಕಳಿಗೆ ಅಲ್ಲಿರುವ ವೇಳೆ ನೀರು ಕುಡಿಯಲು ಎಚ್ಚರಿಸಿ ಮೂರು ಸರ್ತಿ ಬೆಲ್ ಹೊಡೆಯಬೇಕು ಎಂಬ ನಿಯಮ ಹೊರಟದ್ದರಿಂದ. ಇದು ಖಾಸಗಿ ಶಾಲೆಯ ಮಕ್ಕಳ ಸಮಸ್ಯೆಯೇನಲ್ಲ. ಗ್ರಾಮಾಂತರ ಮಕ್ಕಳ ಕಷ್ಟದ ವಿಚಾರ. ಮೂರು ಸಲ ಬೆಲ್ ಹೊಡೆದು ನೀರು ಕುಡಿದಲ್ಲಿ ಮುಂದಿನ ದೇಹಪ್ರಕೃತಿಯ ಕರೆಗೆ ಜಾಗ ಎಲ್ಲಿಯದು?

ಎಲ್ಲದಕ್ಕೂ ಸರ್ಕಾರದ ಸಹಾಯಕ್ಕೆ ಕಾಯದೆ ಇದ್ದುದರಲ್ಲೇ ಅಧ್ಯಾಪಕರು ಮನಸ್ಸು ಮಾಡಿದಲ್ಲಿ ಶಾಲೆಯನ್ನೇ ಸುಂದರ ತೋಟವನ್ನಾಗಿ ಪರಿವರ್ತಿಸಿಬಿಡಬಹುದು ಎಂಬುದಕ್ಕೆ ಕರ್ನಾಟಕದಲ್ಲಿ ಇರಬಹುದಾದ ಹಲ ಕೆಲವು ಉದಾಹರಣೆಗಳ ನಡುವೆ ಇಲ್ಲಿ ಪ್ರಸ್ತಾಪಿಸಬಹುದಾದ ಒಂದು ಶಾಲೆ ಇದೆ. ಅದು ಯಥಾವಿಧಿಯಾಗಿ, ಹಿಂದುಳಿದ ಗಡಿನಾಡ ಪ್ರದೇಶ ಎಂದು ಎಲ್ಲರೂ ರೂಢಿಗತ ಮಾತಿನಿಂದ ಕರೆಯುವ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಚೆ ಅರಣ್ಯ ಭಾಗದಲ್ಲಿರುವ ಹೊಂಗಳ್ಳಿ ಗ್ರಾಮದ ಒಂದು ಪುಟ್ಟ ಶಾಲೆ. ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವುದು ಒಂದೇ ಬಸ್ಸು ಹೋಗಿಬರುವ ಕಿರು ಅರಣ್ಯದ ಸರಹದ್ದಿನಲ್ಲಿ. ಶಾಲೆ ಗೋಡೆಯ ಮೇಲೆ ಎಲ್ಲ ಕಡೆ ಇರುವಂತೆ ನೀತಿ ಬರಹಗಳಿವೆ. ಶಾಲೆಗೆ ಎಪ್ಪತ್ತೈದು ವರ್ಷ ತುಂಬಿದೆ. ಆದರೂ ನೋಡಲು ಸ್ವಚ್ಛ, ಸುಂದರ. ಕಾಂಪೌಂಡ್ ಒಳಗಿರುವ ಗಿಡ ಮರಗಳಲ್ಲಿ ಅಕ್ಕಿ, ರಾಗಿಯುಳ್ಳ ತಟ್ಟೆ ತೂಗಾಡುತ್ತದೆ. ಪಕ್ಕದಲ್ಲೇ ನೀರು ತುಂಬಿದ ಮಡಕೆ. ಇದು ಹಕ್ಕಿ ಪಕ್ಷಿಗಳಿಗಾದರೆ ಇನ್ನೊಂದು ಮರದಲ್ಲಿ ದಾಸೋಹದ ಪುಟ್ಟಿ. ಬಿಸಿಯೂಟಕ್ಕಿಂತ ಮಿಗಿಲಾಗಿ ಮನಸ್ಸು ಇದ್ದವರು ಏನಾದರೂ ಕೊಡುವುದಿದ್ದರೆ ಇಲ್ಲಿ ದವಸಧಾನ್ಯ ಮತ್ತು ಮಕ್ಕಳ ಪುಸ್ತಕವನ್ನೂ ಹಾಕಬಹುದು. ಹೀಗಾಗಿ ಮಕ್ಕಳಿಗೆ ತಿಂಗಳಿಗೆ ಹತ್ತು ಸಲ ಸಿಹಿ ಮಾಡಿ ನೀಡಲಾಗುತ್ತದೆ, ಹಾಲನ್ನೂ ಕೊಡಲಾಗುತ್ತದೆ.

ಅಕ್ಕಿ, ರಾಗಿ, ನೀರು ಇದ್ದರೆ ಹಕ್ಕಿ ಪಕ್ಷಿ ಬರುವಂತೆ, ಅಕ್ಷರ ಕಲಿಸುತ್ತ ಸಿಹಿ ನೀಡುವುದಾದರೆ ಮಕ್ಕಳು ಯಾಕೆ ಬರುವುದಿಲ್ಲ ಎಂಬುದು ತಲೆಗೆ ಟೋಪಿ, ಖಾದಿ ಸಮವಸ್ತ್ರ ತೊಟ್ಟ ಮುಖ್ಯೋಪಾಧ್ಯಾಯರ ಪ್ರಶ್ನೆ. ಶಾಲಾ ಮಕ್ಕಳೂ ಚಿಟ್ಟೆಯಂತೆ, ದುಂಬಿಯಂತೆ, ಪಕ್ಷಿಗಳಂತೆ ನಗುಮುಖದಲ್ಲಿದ್ದವು. ಹುಟ್ಟಿದ ಹಬ್ಬಕ್ಕೆ ಚಾಕೊಲೇಟ್, ಕೇಕ್ ತರುವಂತಿಲ್ಲ. ಇದರ ಮೇಲೆ ಆ ಹಳ್ಳಿಯಲ್ಲಿ ಬೇಕರಿ ಇದ್ದಂತೆ ಕಾಣಲಿಲ್ಲ.

ಗಿಡ ಮರ ದಾಟಿ ಶಾಲೆಯ ಮುಂಭಾಗಕ್ಕೆ ಬಂದರೆ ಅಲ್ಲೇ ಕಿಟಕಿಯ ಬಳಿ ಒಂದು ಕಾಸಿನ ಡಬ್ಬಿ, ಅದರ ಪಕ್ಕದಲ್ಲೇ ಬಣ್ಣ ಬಣ್ಣದ ಪೆನ್ಸಿಲ್, ಪೆನ್ನಿನ ಪೆಟ್ಟಿಗೆ ಇದೆ. ಮಕ್ಕಳು ತಮಗೆ ಪೆನ್ ಬೇಕಾದಲ್ಲಿ ಡಬ್ಬಿಗೆ ಮೂರು ರೂಪಾಯಿ ಹಾಕಿ ತೆಗೆದುಕೊಳ್ಳಬಹುದು. ಇಲ್ಲಿ ನೆನಪಾದುದೆಂದರೆ, ಅಮೆರಿಕದ ಬಾಸ್ಟನ್ನಿನ ಬಳಿಯ ಅರಣ್ಯ ಪ್ರದೇಶದಲ್ಲಿರುವ ಸಂತ ಹೆನ್ರಿ ಡೇವಿಡ್ ಥೋರೊನ ಆಶ್ರಮದಿಂದ ಇನ್ನಷ್ಟು ಮುಂದಕ್ಕೆ ಮಸಾಚುಸೆಟ್ಸ್ ವಿಶ್ವವಿದ್ಯಾಲಯದ ದಾರಿಯಲ್ಲಿ ಒಂದು ಗುಡಿಸಲು ಅಂಗಡಿ ಇದೆ. ಅಲ್ಲಿ ಪೆಟ್ಟಿಗೆಯಲ್ಲಿ ಜೋಡಿಸಿಟ್ಟ ಬೇರೆ ಬೇರೆ ತರಕಾರಿ ರಾಶಿ. ಆದರೆ, ಮಾರಾಟಗಾರನೇ ಇಲ್ಲ! ನಿರ್ಜನ ಅರಣ್ಯ ಪ್ರದೇಶ. ಅಂಗಡಿಯ ಯಾವುದೋ ಮೂಲೆಯಲ್ಲಿ ‘You will pay for it’ ಎಂಬ ಫಲಕವಿದೆ. ಹೊಂಗಳ್ಳಿ ಶಾಲೆಯಲ್ಲೂ ಖರ್ಚಾದ ಪೆನ್ಸಿಲ್, ಪೆನ್ನು ಮತ್ತು ಡಬ್ಬಿಯ ಕಾಸು ಲೆಕ್ಕ ಹಾಕಿದರೆ ಒಂದೆರಡು ರೂಪಾಯಿ ಜಾಸ್ತಿ ಇರುತ್ತದೆಯೇ ವಿನಾ ಕಾಸು ಕಮ್ಮಿ ಇರುವುದಿಲ್ಲ.

ಪ್ರಾಮಾಣಿಕತೆಯ ರೂಪ ಒಂದೇ, ಭ್ರಷ್ಟಾಚಾರದ ಮಾರ್ಗಗಳು ನೂರೆಂಟು. ಮಕ್ಕಳ ಈ ಕ್ರಮ ಸಣ್ಣದೆನ್ನಬಹುದೇ? ಆನೆ ದೊಡ್ಡದೇ, ಆಡು ಚಿಕ್ಕದೆ. ಆಮೇಲೆ ಶಾಲೆಯಲ್ಲಿ ಯಾರು ಏನೇ ಕಳೆದುಕೊಂಡರೂ ಅದನ್ನು ಇನ್ನೊಂದು ಪ್ರಾಮಾಣಿಕ ಪೆಟ್ಟಿಗೆಯಲ್ಲಿ ಹಾಕಿ ಮರುದಿನ ಪ್ರಾರ್ಥನೆಯ ವೇಳೆ ಸಂಬಂಧಪಟ್ಟ ವಿದ್ಯಾರ್ಥಿಗೆ ತಲುಪಿಸಬೇಕು.

ಶಾಲೆ ಗೋಡೆಯ ಬಳಿ ಕುಡಿಯುವ ನೀರಿನ ಐದಾರು ಕ್ಯಾನುಗಳು. ಅದರ ಮುಂದೆ ತೊಳೆದಿಟ್ಟ ಲೋಟ. ಮಧ್ಯಾಹ್ನ ಬಿಸಿಯೂಟದ ನಂತರ ತಟ್ಟೆ ತೊಳೆದ ನೀರನ್ನು ಗಿಡದ ಪಾತಿಗೆ ಹಾಕಬೇಕು. ಮುಂದಿನ ಮುಖ್ಯ ಸಂಗತಿ, ಶಾಲೆಯ ಹಿಂದೆ ಶೌಚಾಲಯ ಶುದ್ಧವಾಗಿರುವುದು ಮಾತ್ರವಲ್ಲ ಅಲ್ಲಿ ಕನ್ನಡಿ, ಬಾಚಣಿಗೆ, ಟವೆಲ್ ಇವೆ. ಇದಕ್ಕೆ ಭಾರಿ ವೆಚ್ಚವೇನೂ ಆಗಿಲ್ಲ, ಮಾಡಬೇಕು ಎಂಬ ಮನವಿದೆ, ಅಷ್ಟೆ.

26 ವರ್ಷಗಳಿಂದ, ಹೋದ ಶಾಲೆಯಲ್ಲೆಲ್ಲ ಇದೇ ಕಾಯಕ ಮಾಡಿಕೊಂಡು ಬಂದ ಮುಖ್ಯೋಪಾಧ್ಯಾಯರು
ಅಧಿಕಾರಿಗಳ, ಮಿತ್ರರ ಅಪಹಾಸ್ಯಕ್ಕೆ, ಕಿರುಕುಳಕ್ಕೆ ಸಿಕ್ಕಲಿಲ್ಲವೇ ಅಂದರೆ, ಅಮಾನತಾದುದೂ ಉಂಟು.

ಅಧಿಕಾರದ ಮುಖ ದೊಡ್ಡಸ್ತಿಕೆಯದು. ಅದನ್ನು ಮೆಚ್ಚಿ ಹಿಂಬಾಲಿಸುವ ಅನುಯಾಯಿಗಳೂ ಅಸಂಖ್ಯ. ಅಲ್ಲಲ್ಲಿ ರಾಜಕಾರಣಿಗಳಿಗೆ ಹೊಯ್‌ಕೈ ಆಗಿ ಅಧಿಕಾರದಲ್ಲಿ ತುದಿ ಮುಟ್ಟಿದ ಕೆಲವರು, ನಿವೃತ್ತಿಯ ನಂತರ ಚುನಾವಣೆಗೆ ನಿಂತರೆ ಈಗಾಗಲೇ ಇರುವ ಜನಪ್ರಿಯತೆ ಅಥವಾ ತಮ್ಮ ಜಾತಿ ಸಮೂಹ ಗೆಲ್ಲಿಸಬಹುದೇ, ಕಳೆದ ಅಧಿಕಾರವನ್ನು ನವೀಕರಿಸಿ ಜನಸೇವೆಯನ್ನು ಮುಂದು
ವರಿಸಬಹುದೇ ಎಂಬ ಮೋಹದಲ್ಲಿರುವುದುಂಟು. ಆದರೆ ಸಮಾಜ ಉದ್ಧಾರದ ಕಾಯಕ ಈ ನಾಡಿನ ಯಾವ್ಯಾವುದೋ ಮೂಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇದೆಯಲ್ಲ!

ನಮ್ಮ ಸಂತೋಷ, ಕಾಯಕ ಮತ್ತು ಬದುಕು ಈ ಮಕ್ಕಳಿಂದಲೇ ವಿನಾ ಅಧಿಕಾರದಿಂದ ಅಲ್ಲ, ಅದು ಸರ್ಕಾರಿ ಚಕ್ರದ ನಿಮಿತ್ತವಷ್ಟೇ ಎಂಬುದು ಹೊಂಗಳ್ಳಿಯ ಶಾಲಾ ಉಪಾಧ್ಯಾಯರ ಮಾತು. ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಶಾಲೆಗೆ ಭೇಟಿ ಕೊಟ್ಟು, ತಮ್ಮ ನಾಲ್ಕು ಜನ ಉಪಾಧ್ಯಾಯರ, ಮಕ್ಕಳ ಬೆನ್ನು ತಟ್ಟಿ ಮೆಚ್ಚಿದ್ದನ್ನು ಮುಖ್ಯೋಪಾಧ್ಯಾಯ ಮಹದೇಶ್ವರ ಸ್ವಾಮಿ ನೆನೆಯುತ್ತಾರೆ. ಇದಕ್ಕೆ ಗ್ರಾಮದ ಶಾಲಾ ಮಂಡಳಿಯವರ ತುಂಬು ಪ್ರೋತ್ಸಾಹವೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು