ಮಂಗಳವಾರ, ಜನವರಿ 18, 2022
27 °C
ಹೊಸ ಸಮತೋಲ ಜಲಾಶಯ ಕಟ್ಟುವ ಬದಲು ನಮ್ಮೊಳಗಿನ ಹೂಳನ್ನು ತೆಗೆಸಿದರೆ ಹೇಗೆ?

ವಿಶ್ಲೇಷಣೆ: ಮೇಕೆ ದಾಟುವಲ್ಲಿ ಕೊರಕಲು ಸಾರ್‌!

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರನ್ನು ಸಿಂಗಪುರವನ್ನಾಗಿ ಮಾಡುತ್ತೇನೆಂದು ಹಿಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದರು. ಸಿಂಗಪುರ ನಗರದೇಶ ತನ್ನವರಿಗೆ ನೀರಿನ ಕೊರತೆ ಆಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದೆ. ಹಾಗೆ ನೋಡಿದರೆ ಅಲ್ಲಿ ಊರಾಚೆಗೆ ನದಿ ಇಲ್ಲ. ನಗರದ ಸುತ್ತೆಲ್ಲ ಕೆರೆಗಳ ಬದಲು ಉಪ್ಪುನೀರಿನ ಸಮುದ್ರವಿದೆ. ಆದರೂ ಅಲ್ಲಿನವರು ನೀರಿಗಾಗಿ ಗಡಿಯಾಚಿನವರ ಜೊತೆ ಜಗಳ ಕಾಯಲಿಲ್ಲ. ಕೋರ್ಟು ಕಚೇರಿಗಳಿಗೆ ವಕೀಲರನ್ನು ಅಟ್ಟಿ ದಶಕಗಳ ಕಾಲ ಧನಧಾರೆ ಹರಿಸಲಿಲ್ಲ. ಸಾವಿರಾರು ಹೆಕ್ಟೇರ್‌ ಅರಣ್ಯವನ್ನು ಮುಳುಗಿಸಿಯಾದರೂ ನೀರನ್ನು ತರುತ್ತೇವೆಂದು ತೊಡೆ ತಟ್ಟಲಿಲ್ಲ. ನೀರನ್ನು ಅಧಿಕಾರದ ಮೆಟ್ಟಿಲನ್ನಾಗಿ ಬಳಸಲೆಂದು ಪಾದಯಾತ್ರೆ ಮಾಡಲಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ಕಾಳಗ ನಡೆಸಲಿಲ್ಲ. ಆದರೂ ಮುಂದಿನ ನೂರು ವರ್ಷಗಳವರೆಗೂ ಬೆಳೆಯಬಹುದಾದ ತಮ್ಮ ನಗರಕ್ಕೆ ನೀರಿನ ಅಭಾವ ಉಂಟಾಗದಂತೆ ವ್ಯವಸ್ಥೆ ಮಾಡಿದರು. ಈಗ ಆ ದ್ವೀಪದೇಶದಲ್ಲಿ ಎಲ್ಲಿ ನೋಡಿದಲ್ಲಿ ಪ್ರವಾಸಿಗರ ಕಣ್ಮನ ತಣಿಸುವ, ತಂಪುಣಿಸುವ ಉದ್ಯಾನ, ಕೆರೆ-ಕಾರಂಜಿ; ದೋಣಿಯಾನದ ಜಲೋಲ್ಲಾಸ. ಚಮತ್ಕಾರಿಕ ಪ್ರಾಣಿಪಕ್ಷಿಗಳ ಪ್ರದರ್ಶನ. ಅಲ್ಲೆಲ್ಲ ಸುತ್ತಾಡಿ ಸುಸ್ತಾದರೆ ಕುಡಿಯಲು ಅದೇ ನಗರದ ಚರಂಡಿಯಿಂದ ಸಂಸ್ಕರಿಸಿದ ಶುದ್ಧ ನ್ಯೂವಾಟರ್‌.

ಅವರು ಮಾಡಿದ್ದಿಷ್ಟೆ: ನೀರಿಗಾಗಿ ನಾಲ್ಕು ಜಲಮೂಲಗಳನ್ನು ಗುರುತಿಸಿದರು: ಮಳೆನೀರಿನದು ಒಂದು ಮೂಲ. ಬಳಸಿ ಚೆಲ್ಲಿದ ನೀರನ್ನು ಸಂಸ್ಕರಿಸುವುದು ಎರಡನೆಯ ಮೂಲ; ಪಕ್ಕದ ಮಲೇಷ್ಯಾದಿಂದ ಬಂದಿದ್ದು ಮೂರನೆಯ ಮೂಲ. ಕೊನೆಯದಾಗಿ, ಸಮುದ್ರದ ಉಪ್ಪುನೀರನ್ನು ಶುದ್ಧೀಕರಿಸುವುದು ನಾಲ್ಕನೆಯ ಮೂಲ. ವಿಜ್ಞಾನಿಗಳ ಸಲಹೆಯಂತೆ ಎಲ್ಲಕ್ಕೂ ಅತ್ಯಾಧುನಿಕ ತಂತ್ರಜ್ಞಾನ. ಜನಬಳಕೆಗೆ, ವಾಣಿಜ್ಯಕ್ಕೆ ಹಾಗೂ ಉದ್ಯಮಕ್ಕೆ ನೀರಿನ ಶಾಶ್ವತ ಸುಭದ್ರತೆ.

ಕರ್ನಾಟಕದ ಇನ್ನೊಬ್ಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಇಸ್ರೇಲಿನ ಹೈಫಾ ನಗರದ ಜಲಶಕ್ತಿಯನ್ನು ಖುದ್ದಾಗಿ ಹೋಗಿ ನೋಡಿ ಬಂದರು. ಬೆಂಗಳೂರು ಜಿಲ್ಲೆಯಲ್ಲಿ ಸುರಿಯುವ ಮಳೆ ನೀರಿನ ಅರ್ಧದಷ್ಟೂ ಅಲ್ಲಿ ಸುರಿಯುವುದಿಲ್ಲ. ಭೂಗತ ಜಲಾಶಯವನ್ನು ನಿರ್ಮಿಸಿ ಅವರು ಹಣ್ಣು, ತರಕಾರಿ, ಧಾನ್ಯಗಳ ರಫ್ತು ಮಾಡುತ್ತಾರೆ. ಬಳಸಿದ ನೀರನ್ನೇ ಶುದ್ಧೀಕರಿಸಿ, ಮೀನುಸಾಕಣೆ ಮಾಡುತ್ತಾರೆ. ಬದ್ಧ ವೈರಿಗಳೆನಿಸಿದ ಪ್ಯಾಲೆಸ್ಟೀನ್‌ ಮತ್ತು ಜೋರ್ಡಾನ್‌ ಜೊತೆ ಕೈಜೋಡಿಸಿ ಜಲರಕ್ಷಣೆಯ ಅಭಿಯಾನ ನಡೆಸುತ್ತಾರೆ.

ನಮ್ಮ ಇನ್ನೊಬ್ಬ ಮುಖ್ಯಮಂತ್ರಿ ಯಡಿಯೂರಪ್ಪನವರು ಒಮ್ಮೆ ಮಾರಿಶಸ್‌ ದೇಶಕ್ಕೆ, ಒಮ್ಮೆ ಮಾಲ್ಡೀವ್ಸ್‌ ದೇಶಕ್ಕೆ ಹೋಗಿದ್ದರು. ಅವೆರಡೂ ದೇಶಗಳು ಜಲಸಂಕಟಗಳನ್ನು ನಿಭಾಯಿಸಿದ ಪರಿ ಅಧ್ಯಯನಯೋಗ್ಯವಾಗಿದ್ದಾದರೂ ಬಿಎಸ್‌ವೈ ಎರಡೂ ಬಾರಿ ಅಧಿಕಾರವನ್ನು ಬಿಡಬೇಕಾದ ಹಂತದಲ್ಲೇ ಪ್ರವಾಸ ಕೈಗೊಂಡಿದ್ದರಿಂದ ಅವರ ಅನುಭವ ಇಲ್ಲಿ ಪ್ರಸ್ತುತವಲ್ಲ. ಆದರೆ ಎರಡನೆಯ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಬೆಂಗಳೂರಿಗೆ ತರುವ ಯೋಜನೆಯನ್ನು ಮುಂದಿಟ್ಟಿದ್ದರು. ಅದು ಅನಗತ್ಯವೆಂದೂ ಸ್ವಯಂಸೋಲಿನ ಹೆಜ್ಜೆಯೆಂದೂ ಜಲತಜ್ಞರು ಸ್ಪಷ್ಟವಾಗಿ ಬಿಂಬಿಸಿದ್ದರು. ಸಾಲದ್ದಕ್ಕೆ ಸ್ಥಳೀಯರಿಂದ ತೀವ್ರ ಪ್ರತಿರೋಧ ಬಂದಿದ್ದರಿಂದ ಯೋಜನೆಗೆ ಹಿನ್ನಡೆಯಾಯಿತು.

ಮೇಕೆದಾಟು ಯೋಜನೆ ಕೂಡ ಏಕೆ ಅನಗತ್ಯ ಎಂಬುದನ್ನು ವಿಜ್ಞಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿಂದ ತರಬಹುದಾದ ನೀರಿಗಿಂತ ಹೆಚ್ಚು ನೀರನ್ನು ನಾವು ಈಗ ಕೊಳೆ ಮಾಡಿ ಚೆಲ್ಲುತ್ತಿದ್ದೇವೆ; ಮಳೆಗಾಲದಲ್ಲಿ ಪೋಲು ಮಾಡುತ್ತಿದ್ದೇವೆ. ಅದರ ಬದಲು ಬೆಂಗಳೂರು ಸುತ್ತಲಿನ ಕೆರೆಗಳನ್ನು ಚೊಕ್ಕಟಗೊಳಿಸಿ ಇಲ್ಲಿ ಸುರಿಯುವ ಮಳೆನೀರಿನ ಶೇಖರಣೆಗೆ ಅನುಕೂಲ ಮಾಡಿಕೊಟ್ಟರೆ 15 ಟಿಎಮ್‌ಸಿ ಸಿಗುತ್ತದೆ. ಇನ್ನು, ಕೊಳೆನೀರನ್ನು ಸಂಸ್ಕರಿಸಿದರೆ 16 ಟಿಎಮ್‌ಸಿ ಸಿಗುತ್ತದೆ. ಇನ್ನು ಕಾವೇರಿಯ ಈಗಿನ ಸೋರಿಕೆಯನ್ನೂ ತಡೆಗಟ್ಟಿದರೆ ನಗರದ ಅಗತ್ಯಕ್ಕಿಂತ ಇಮ್ಮಡಿ ನೀರು (30 ಟಿಎಮ್‌ಸಿ) ಇಲ್ಲೇ ಲಭ್ಯವಿದೆ.

ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡರೆ ಏನೇನು ನಷ್ಟ ನೋಡೋಣ: ಅಲ್ಲಿನ ಕಾವೇರಿ ಅಭಯಾರಣ್ಯದ ನಾಲ್ಕೂವರೆ ಸಾವಿರ ಹೆಕ್ಟೇರ್‌ ಅಡವಿ ಮುಳುಗುತ್ತದೆ. ಅದರ ಆಚೀಚಿನ 7500 ಹೆಕ್ಟೇರ್‌ ಭೂಮಿಯೂ ಮುಳುಗುತ್ತದೆ. ಯೋಜನೆ ಜಾರಿಯಲ್ಲಿದ್ದಷ್ಟು ಕಾಲ, ಸುಮಾರು ಹತ್ತು ವರ್ಷಗಳಲ್ಲಿ ಕನಿಷ್ಠ 2000 ಟನ್‌ ಡೈನಮೈಟ್‌ ಸ್ಫೋಟವಾಗುತ್ತದೆ. ಅಷ್ಟೂ ವರ್ಷ ಅಲ್ಲಿನ ವನ್ಯಜೀವಿಗಳು ದಿಕ್ಕಾಪಾಲಾಗಿ ಹೊಲಗಳಿಗೆ ನುಗ್ಗುತ್ತವೆ. ಗುಂಡೇಟಿಗೊ, ವಿದ್ಯುತ್‌ ತಂತಿಗೋ ಹೆದ್ದಾರಿಗೋ ಬಲಿಯಾಗುತ್ತವೆ. ಮುಳುಗಡೆಗೆ ಮುನ್ನವೇ ಸಂಭವಿಸುವ ಈ ಪ್ರಳಯದ ಬಗ್ಗೆ ಆ ಜೀವಿಗಳು ಮಾತಾಡಲಾರವು. ಪೀಠಭದ್ರರ ವಿರುದ್ಧ ಮತ ಚಲಾಯಿಸಲಾರವು. ಇನ್ನು ಅಣೆಕಟ್ಟೆ ಪೂರ್ತಿಗೊಂಡರೆ ಅಷ್ಟರಮಟ್ಟಿಗೆ ಕಾರ್ಬನ್ನನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಆ ಭೂಭಾಗ ಕಳೆದುಕೊಳ್ಳುತ್ತದೆ. ಜೊತೆಗೆ ಪ್ರತೀ ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತ ಬಂದಹಾಗೆ ಆರೆಂಟು ಸಾವಿರ ಹೆಕ್ಟೇರ್‌ ಕೆಸರಿನಿಂದ ಶಾಖವರ್ಧಕ ಮೀಥೇನ್‌ ಅನಿಲ ಬಿಡುಗಡೆಯಾಗುತ್ತದೆ. ಒಟ್ಟಾರೆ ವಾತಾವರಣಕ್ಕೆ ಇನ್ನಷ್ಟು ಬಿಸಿಯೇರುತ್ತದೆ. ಇನ್ನು 60-80 ವರ್ಷಗಳಲ್ಲಿ ಇಡೀ ಜಲಾಶಯ ಹೂಳುತುಂಬಿ ಬರಡು ಮೈದಾನವಾಗುತ್ತದೆ.

ಮೇಕೆದಾಟು ಬೇಡವೆಂದು ನಿರ್ಧರಿಸಿದರೆ ಸಿಗುವ ಅನುಕೂಲಗಳನ್ನು ನೋಡಿ: ಮಳೆನೀರನ್ನು ಇಂಗಿಸಿದರೆ ಅಂತರ್ಜಲದ ಮಟ್ಟ ಏರುತ್ತದೆ. ಜೀವಲೋಕ ಸಮೃದ್ಧವಾಗುತ್ತದೆ. ಕಾರ್ಬನ್ನನ್ನು ಹೀರಿ ತೆಗೆಯುವ ನೆಲದ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಕಾಂಕ್ರೀಟ್‌ ಕಾಡು ತಂಪಾಗುತ್ತದೆ. ಕೆರೆಗಳ ಹೂಳೆತ್ತುವ ಹತ್ತು ವರ್ಷಗಳ ಅಭಿಯಾನ ಶುರುವಾದರೆ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತದೆ. ಹೂಳೆತ್ತಬಲ್ಲ ಸ್ಮಾರ್ಟ್‌ ಉಪಕರಣಗಳು ಪ್ರತೀ ಶ್ರಮಿಕನ ಕೈಗೂ ಬರುತ್ತವೆ. ಕೆರೆಗಳೆಲ್ಲ ನಳನಳಿಸುತ್ತವೆ. ಜಲಪಕ್ಷಿಗಳು ಹಿಂದಿರುಗುತ್ತವೆ. ಮೇಲೆತ್ತಿದ ಹೂಳಿನಿಂದ ನಗರದಂಚಿಗೆ ಹೊಸ ಉದ್ಯಾನಗಳು ನೂರಾರಾಗುತ್ತವೆ. ಉದ್ಯಾನ ನಗರಿಯ ಹೆಸರು ಸಾರ್ಥಕವಾಗುತ್ತದೆ, ವಿಸ್ತರಿಸುತ್ತದೆ. ರಾಜ್ಯದ ಎಲ್ಲ ಊರುಗಳಿಗೂ ಮಾದರಿಯಾಗುತ್ತದೆ. ತಮಿಳುನಾಡಿನತ್ತ ಹರಿದು ಹೋಗುವ ಮಳೆನೀರು ಮತ್ತು ಕೊಳೆನೀರು ಶುದ್ಧವಾಗಿ ನಮ್ಮದೇ ಆಸ್ತಿಯಾಗುತ್ತದೆ- ನೆರೆರಾಜ್ಯದ ಜೊತೆಯ ಸಂಬಂಧ ಸೌಹಾರ್ದಯುತವಾಗುತ್ತದೆ. ಕೇರಳ, ಪುದುಚೇರಿ ಕೂಡ ಅಡ್ಡಗಾಲು ಹಾಕುವುದಿಲ್ಲ.

ಚರಂಡಿನೀರಿನ ಶುದ್ಧೀಕರಣದ ತಂತ್ರಜ್ಞಾನಕ್ಕೆಂದು ಸಿಂಗಪೂರ್‌ಗೇ ಹೋಗಬೇಕಿಲ್ಲ. ನಮಗಿಂತ ತೀರ ಹಿಂದುಳಿದ ನಮೀಬಿಯಾ ದೇಶದ ವಿಂಡ್‌ಹೋಕ್‌ ಅಥವಾ ಸೆನೆಗಾಲ್‌ ದೇಶದ ಡಾಕಾರ್‌ ನಗರಗಳಲ್ಲಿ ಜಾರಿಯಲ್ಲಿರುವ ಜಲಶುದ್ಧೀಕರಣ ತಂತ್ರಜ್ಞಾನವನ್ನು ತಂದರೂ ಸಾಕು. ಆ ಯಾವ ನಗರದಲ್ಲೂ (ಬೆಂಗಳೂರಿನಂತೆ) ಚಂದ್ರನಲ್ಲಿ, ಮಂಗಳನಲ್ಲಿ ನೀರಿನಂಶವನ್ನು ಹುಡುಕಬಲ್ಲ ತಂತ್ರಜ್ಞರಿಲ್ಲ ನಿಜ. ಆದರೆ ನಗರದ ದಾಹವನ್ನು ತಣಿಸಬಲ್ಲವರಿದ್ದಾರೆ. ಇರಲಿ, ನಮಗೆ ಬಾಹ್ಯಾಕಾಶ ಟೆಕ್ನಾಲಜಿಯೇ ಬೇಕೆ? ಜರ್ಮನಿಯ ಮ್ಯೂನಿಕ್‌ ವಿಶ್ವವಿದ್ಯಾಲಯದ ತಜ್ಞರು ಕ್ರಯೊಸ್ಯಾಟ್‌-2 ಉಪಗ್ರಹವನ್ನು ಬಳಸಿ ಮೆಕಾಂಗ್‌ ಕಣಿವೆಯ ಆರೂ ದೇಶಗಳ ಎಲ್ಲ ಕೆರೆ ಜಲಾಶಯಗಳ ನೀರಿನ ಮಟ್ಟವನ್ನು ದಿನವೂ ಅಳೆಯುತ್ತಿದ್ದಾರೆ. ಸೆಕೆ ಹೆಚ್ಚಾದರೆ ನೀರು ಆವಿಯಾಗದಂತೆ ಕೆರೆಗಳ ಮೇಲೆ ಸೌರ ತೇಲುತೋಟ ನಿರ್ಮಿಸಿ ವಿದ್ಯುತ್‌ ಉತ್ಪಾದನೆ ಮಾಡುವ ತಂತ್ರಜ್ಞಾನ ಬಂದಿದೆ. ಅತಿವೃಷ್ಟಿ, ಅನಾವೃಷ್ಟಿ ಎರಡರಲ್ಲೂ ನೀರಿನ ಸಮತೋಲವನ್ನು ಕಾಯ್ದುಕೊಳ್ಳುವ ರೋಬಾಟಿಕ್‌ ಕವಾಟಗಳು ಬಂದಿವೆ. ಸಮತೋಲ ಜಲಾಶಯದ ಆ ಆಧುನಿಕ ತಂತ್ರಜ್ಞಾನ ನಮಗೆ ಬೇಕಿದೆ.


ನಾಗೇಶ ಹೆಗಡೆ

ನೀರಿನ ತೀವ್ರ ಅಭಾವವಿದ್ದಾಗ ಬೇಕಿದ್ದರೆ ನಾವೆಲ್ಲರೂ ತೊಡೆತಟ್ಟಿ, ಕಟ್ಟೆ-ಕಾಲುವೆಗಳ ನಿರ್ಮಾಣಕ್ಕೆ ಇಳಿಯೋಣ. ಆದರೆ ನಮ್ಮಲ್ಲಿ ನೀರಿನ ಅಭಾವ ಇಲ್ಲ. ಅವ್ಯವಸ್ಥೆ ಇದೆ, ನಿಷ್ಕಾಳಜಿ ಇದೆ, ದುರಾಡಳಿತ ಇದೆ. ಅವನ್ನೆಲ್ಲ ಸರಿಪಡಿಸುವ ಬದಲು ಅವನ್ನೇ ಬಂಡವಾಳ ಮಾಡಿಕೊಂಡ ಹೋರಾಟಕ್ಕೆ ಕೈಜೋಡಿಸಿದರೆ ನಾವು ಮುಳುಗಿಸುವುದು ಕೇವಲ ಅರಣ್ಯಗಳನ್ನಲ್ಲ; ಒಂದು ಜನಾಂಗದ ವಿವೇಕವನ್ನೇ ಸಮಾಧಿ ಮಾಡುತ್ತೇವೆ.

‘ಹೂಳು ಕೆರೆಗಳಲ್ಲಿ ತುಂಬಿಲ್ಲ, ನಮ್ಮ ತಲೆಯಲ್ಲಿ ತುಂಬಿದೆ’ ಎಂದು ಜಲತಜ್ಞ ಶಿವಾನಂದ ಕಳವೆ ಹಿಂದೊಮ್ಮೆ ಹೇಳಿದ್ದರು. ಮೇಕೆದಾಟು ಅಣೆಕಟ್ಟೆ ಯೋಜನೆಗಾಗಿ ಜಾಗತಿಕ ಟೆಂಡರ್‌ ಕರೆಯುವ ಬದಲು, ನಮ್ಮಲ್ಲಿ ತುಂಬಿದ ಆ ಹೂಳನ್ನು ತೆಗೆಯಬಲ್ಲ ವಿಧಾನಗಳನ್ನು ನಾವು ಹುಡಕಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು