ಶನಿವಾರ, ಮೇ 15, 2021
23 °C

ನಟರಾಜ್ ಹುಳಿಯಾರ್ ಲೇಖನ: ಕಾಗೋಡು ಸತ್ಯಾಗ್ರಹಕ್ಕೆ ಇಂದು 70 ವರ್ಷ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

70 ವರ್ಷಗಳ ಕೆಳಗೆ 18 ಏಪ್ರಿಲ್ 1951ರಂದು ಕರ್ನಾಟಕದ ಚರಿತ್ರೆಯ ಮೈಲಿಗಲ್ಲಾದ ಕಾಗೋಡು ಚಳುವಳಿ ನಡೆಯಿತು. ಆ ಚಾರಿತ್ರಿಕ ಚಳುವಳಿಯ ಒಂದು ಹಿನ್ನೋಟ

‘ನನ್ನ ಪ್ರಜ್ಞೆಯಲ್ಲಿ ಜಾಗೃತವಾಗಿರುವ ಒಂದು ಮಹಾಘಟನೆ ಕಾಗೋಡು ಹೋರಾಟ.

ನಾನು ಈಗ ಹೀಗೆ ಆಗಿದ್ದರೆ, ಹಾಗೆ ಆಗುವಲ್ಲಿ ಕಾಗೋಡಿನ ಕೈವಾಡ ಬಹಳವಿದೆ.’

-ಶಾಂತವೇರಿ ಗೋಪಾಲಗೌಡ

ಕಾಗೋಡು ಆಗಿನ ಮೈಸೂರು ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಒಂದು ಪುಟ್ಟ ಗ್ರಾಮ. ಅಲ್ಲಿನ ಬಹುತೇಕ ಹಿಂದುಳಿದ ಜಾತಿಯ ದೀವರ ಕುಟುಂಬಗಳ ರೈತರು ಮೇಲುಜಾತಿಗಳ ಜಮೀನುದಾರರ ಜಮೀನುಗಳನ್ನು ಉಳುವ ಗೇಣಿದಾರರಾಗಿದ್ದರು. ಅದಕ್ಕೆ ಪ್ರತಿಯಾಗಿ ಈ ಗೇಣಿದಾರರು ಜಮೀನಿನಲ್ಲಿ ಬೆಳೆದ ಬೆಳೆಯ ಒಂದು ನಿರ್ದಿಷ್ಟ ಭಾಗವನ್ನು ಜಮೀನುದಾರರಿಗೆ ಕೊಡುತ್ತಿದ್ದರು. ಹೀಗೆ ಗೇಣಿದಾರರಿಂದ ಧಾನ್ಯ ಪಡೆಯುವಾಗ ಜಮೀನುದಾರರು ಗೇಣಿದಾರರ ಶೋಷಣೆ ಮಾಡುತ್ತಿದ್ದರು. 1948ರ ಹೊತ್ತಿಗೆ ಸಾಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್. ಗಣಪತಿಯಪ್ಪನವರು ಆರಂಭಿಸಿದ `ಸಾಗರ ತಾಲೂಕು ರೈತ ಸಂಘ’ ಗೇಣಿದಾರ ಒಕ್ಕಲುಗಳಲ್ಲಿ ಅವರ ದೀನ ಸ್ಥಿತಿಯ ಬಗ್ಗೆ ಎಚ್ಚರ ಮೂಡಿಸಲೆತ್ನಿಸುತ್ತಿತ್ತು. ತಾಲೂಕಿನ ತೊಂಬತ್ತು ಭಾಗದಷ್ಟಿದ್ದ ಗೇಣಿದಾರರಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಲು ತಾಲೂಕು ರೈತ ಸಂಘ ಸಜ್ಜಾಗತೊಡಗಿತು.

ಇಂಥ ಹಿನ್ನೆಲೆಯಿದ್ದ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿ 18–4–1951ರ ಬುಧವಾರದ ದಿನ ಗೇಣಿದಾರ ದೀವರು ತಾವು ಆವರೆಗೆ ಉಳುತ್ತಿದ್ದ ಜಮೀನುದಾರರ ಜಮೀನುಗಳನ್ನು ಹೊಸ ಸಂಕಲ್ಪ ಹೊತ್ತು ಪ್ರವೇಶಿಸಿದರು. ಸ್ವಾತಂತ್ರ್ಯ ಚಳುವಳಿಯ ನೆನಪು ಇನ್ನೂ ಮಾಸದ ವರ್ಷಗಳಲ್ಲಿ ನಡೆದ ಈ ಚಳುವಳಿಯಲ್ಲಿ ರೈತರ ಈ ಜಮೀನು ಪ್ರವೇಶ ಗಾಂಧೀ ಮಾರ್ಗವನ್ನು ಅನುಸರಿಸಿದ ಅಹಿಂಸಾತ್ಮಕ ಪ್ರತಿಭಟನೆಯಾಗಿತ್ತು. ಆದರೆ ಜಮೀನುದಾರರ  ಪರವಾಗಿದ್ದ ಪೊಲೀಸರು ಜಮೀನನ್ನು ಪ್ರವೇಶಿಸಿದ ಐವತ್ತೊಂದು ಗೇಣಿದಾರ ರೈತರನ್ನು ಬಂಧಿಸಿ, ಅವರ ನೊಗ, ನೇಗಿಲುಗಳ ಸಮೇತ ಕೋರ್ಟಿಗೆ ಹಾಜರು ಮಾಡಿದರು.

ಓದಿ: ಸಾಗರ: ಕಾಗೋಡು ಸತ್ಯಾಗ್ರಹಕ್ಕೆ 70 ವರ್ಷ

ಈ ಘಟ್ಟದಲ್ಲಿ ಗೋಪಾಲಗೌಡರ ನಾಯಕತ್ವದಲ್ಲಿ ಸಮಾಜವಾದಿ ಪಕ್ಷ ಕಾಗೋಡು ಸತ್ಯಾಗ್ರಹಕ್ಕೆ ತನ್ನ ಬೆಂಬಲವನ್ನು ಘೋಷಿಸಿತು. ಆ ನಿರ್ಧಾರಕ್ಕೆ ಮುಖ್ಯವಾಗಿ ‘ಗೋಪಾಲಗೌಡರು ಹಾಗೂ ಸಿ.ಜಿ.ಕೆ. ರೆಡ್ಡಿಯವರು ಕಾರಣರಾಗಿದ್ದರು.’ ಆ ಘಟ್ಟದಲ್ಲಿ, ರೈತರ ಮೇಲೆ ನಡೆಯುತ್ತಿದ್ದ ಹಿಂಸೆಯನ್ನು ಖಂಡಿಸಿ 16–5–1951ನೇ ತಾರೀಕಿನ ‘ಪ್ರಜಾವಾಣಿ’ ದಿನಪತ್ರಿಕೆಯ ಸಂಪಾದಕೀಯದಲ್ಲಿ ಪ್ರಕಟವಾದ ಮಾತುಗಳು ಇವು: ‘ತಲೆತಲಾಂತರದಿಂದ ರೂಢಿಸಿಕೊಂಡು ಬಂದಿದ್ದ ರೈತರನ್ನು ತಮ್ಮ ಜಮೀನುಗಳಿಂದ ಉಚ್ಛಾಟನೆ ಮಾಡಲು ಹಿಡುವಳಿದಾರರು ಹೂಡಿರುವ ಸಂಚೇ ಇಂದಿನ ಪ್ರಕ್ಷುಬ್ದ ವಾತಾವರಣಕ್ಕೆ ಕಾರಣವೆಂಬುದು ನಿಸ್ಸಂಶಯ. ಕಾರಣವೇನೇ ಇರಲಿ, ಈ ಕ್ರಮ ತೀವ್ರ ಖಂಡನೀಯ. ಅದರಲ್ಲೂ ವಿರಾಮಜೀವಿ ಜಮೀನುದಾರರನ್ನು ಪೋಷಣೆ ಮಾಡಿಕೊಂಡು ಬಂದು ಹಸು ಮಕ್ಕಳಂತಹ ರೈತರನ್ನು ಪೊಲೀಸರು ಲಾಠಿ, ಬಂಧನ, ಹಿಂಸೆಗಳಿಗೆ ಗುರಿ ಮಾಡಿರುವುದನ್ನಂತೂ ಕ್ರೌರ್ಯ ಎಂದೇ ಕರೆಯಬೇಕಾಗಿದೆ.’ 

14 ಜೂನ್ 1951ರಂದು ಸಮಾಜವಾದಿ ಪಕ್ಷದ ನಾಯಕರೂ ಭಾರತೀಯ ಸಮಾಜವಾದದ ಶ್ರೇಷ್ಠ ಚಿಂತಕರೂ ಆದ ಡಾ. ರಾಮಮನೋಹರ ಲೋಹಿಯಾ ಕಾಗೋಡಿಗೆ ಬಂದರು. ಲೋಹಿಯಾ ಕಾಗೋಡು ಚಳುವಳಿಯಲ್ಲಿ ಪಾಲ್ಗೊಂಡ ಸಂದರ್ಭವನ್ನು ಸಿ.ಬಿ. ಚಂದ್ರಶೇಖರ್ ವರ್ಣಿಸುತ್ತಾರೆ: ‘ಸರ್ಕಾರ ವಿಶೇಷ ಪೊಲೀಸ್ ಪಡೆಯನ್ನು ಅಂದು ಅಲ್ಲಿಗೆ ಕರೆಸಿತ್ತು. ರಿಸರ್ವ್ ಪೊಲೀಸರು ಒಡೆಯನ ಹೊಲಕ್ಕೆ ಅಡ್ಡಗೋಡೆಯಂತೆ ಬಂದೂಕುಧಾರಿಗಳಾಗಿ ನಿಂತಿದ್ದರು. ಲೋಹಿಯಾ ಮಾತ್ರ ಆ ಪೊಲೀಸರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಪೊಲೀಸರು ವಿಧಿಸಿದ್ದ ಪ್ರತಿಬಂಧಕಾಜ್ಞೆಯನ್ನೂ ಲೆಕ್ಕಿಸಲಿಲ್ಲ. ರೈತಸಮುದಾಯವನ್ನು ಉದ್ದೇಶಿಸಿ ಲೋಹಿಯಾ ಹೇಳಿದರು:

‘ನಿಮ್ಮ ಹೋರಾಟ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ, ಕೇವಲ ನಿಮ್ಮ ಉಳುಮೆಯ ಹಕ್ಕನ್ನು ರಕ್ಷಿಸಿಕೊಳ್ಳಲು ನಡೆಯುತ್ತಿರುವ ಹೋರಾಟವಲ್ಲ, ಉಳುಮೆಯ ಹಕ್ಕನ್ನು ನಿಮಗೆ ನೀಡಿರುವ 1879ನೇ ಇಸ್ವಿಯ ಗೇಣಿ ಕಾನೂನನ್ನು ರಕ್ಷಿಸಲು ನಡೆಯುತ್ತಿರುವ ಹೋರಾಟ. ನಿಮ್ಮ ಹಕ್ಕು ಇರುವ ಜಮೀನಿಗೆ ನೀವು ಪ್ರವೇಶ ಮಾಡುವುದು ಹೇಗೆ ಕಾನೂನುಬಾಹಿರವಾಗುತ್ತದೆ? ಈ ಭೂಮಿಯನ್ನು ಉಳುಮೆ ಮಾಡುವುದು ಹೇಗೆ ಕಾನೂನುಬಾಹಿರವಾಗುತ್ತದೆ? ನಾನು ಇಲ್ಲಿ ಈಗ ಹೇಳುತ್ತಿದ್ದೇನೆ, ಕೇಳಿ! ಆ ಜಮೀನಿಗೆ ಪ್ರವೇಶಿಸಲು ಮತ್ತು ಅಲ್ಲಿ ಉಳುಮೆ ಮಾಡಲು ತಡೆ ಒಡ್ಡುತ್ತಿರುವ ಸರ್ಕಾರ ಕಾನೂನಿನ ಪ್ರಕಾರ ನಡೆಯುತ್ತಿಲ್ಲ. ಆದ್ದರಿಂದ ಸ್ವತಂತ್ರ ಭಾರತದ ಪ್ರಜೆಗಳಾಗಿ ಅಂಥ ಸರ್ಕಾರದ ಆಜ್ಞೆಗಳನ್ನು ಧಿಕ್ಕರಿಸುವುದು ನಮ್ಮ ಕರ್ತವ್ಯ. ಬನ್ನಿ! ...ನಮ್ಮ ಹಕ್ಕಿನ ಜಮೀನಿಗೆ ನಾವು ಪ್ರವೇಶ ಮಾಡಿ, ಭೂಮಾತೆಯ ಸೇವೆಯನ್ನು ಮಾಡೋಣ!’ ಎಂದು ರೈತರ ಉಳುಮೆ ಹಕ್ಕಿನ ಭೂಮಿಯ ಕಡೆಗೆ ಅಡಿಯಿರಿಸಿದರು. ರೈತ ಸಮುದಾಯ ಘೋಷಣೆ ಕೂಗತೊಡಗಿತು:

‘ಇಂಕ್ವಿಲಾಬ್ ಜಿಂದಾಬಾದ್’
‘ಮಹಾತ್ಮ ಗಾಂಧೀ ಜಿಂದಾಬಾದ್’
‘ಉಳುವವನೇ ನೆಲದೊಡೆಯ’

ಹೀಗೆ ರೈತ ಸಮುದಾಯ ವೀರಾವೇಶದಿಂದ ಘೋಷಣೆಗಳನ್ನು ಕೂಗುತ್ತಾ, ಲೋಹಿಯಾರನ್ನು ಹಿಂಬಾಲಿಸಿತು. ಜಮೀನಿನ ಸುತ್ತಲೂ ಬೇಲಿಯಂತೆ ನಿಂತಿದ್ದ ಬಂದೂಕುಧಾರಿ ರಿಸರ್ವ್ ಪೋಲೀಸ್ ಪಡೆ ದಿಗ್ಭ್ರಾಂತಿಯಿಂದ ನಿಂತಲ್ಲೇ ನಿಶ್ಚೇಷ್ಟಿತವಾಗಿ ನಿಂತಿತು.

ಲೋಹಿಯಾ ಅವರು ಜಮೀನಿಗೆ ಹಾಕಿದ್ದ ಬೇಲಿಯನ್ನು ಕಿತ್ತೊಗೆದರು. ರೈತರ ಉಳುಮೆಯ ಹಕ್ಕಿನ ಭೂಮಿಯಲ್ಲಿ ಕಾಲಿರಿಸಿದರು. ಸಿದ್ಧವಾಗಿ ನಿಲ್ಲಿಸಿದ್ದ ಎತ್ತುಗಳನ್ನು ಕಟ್ಟಿದ್ದ ನೇಗಿಲನ್ನು ಭೂಮಿಗೆ ಹೂಡಿದರು. ಜಮೀನನ್ನು ಉಳುಮೆ ಮಾಡಿದರು. ಜೊತೆಯಲ್ಲಿ ಅವರನ್ನು ಹಿಂಬಾಲಿಸಿದ್ದ ಸಹಸ್ರಾರು ರೈತರ ಜಯಘೋಷ ಮುಗಿಲು ಮುಟ್ಟಿತು. ಲೋಹಿಯಾ ಮಣ್ಣಿನ ಮಕ್ಕಳೊಡನೆ ಗೇಣಿದಾರರ ಭೂಮಿಯನ್ನು ನೇಗಿಲಿನಿಂದ ಉಳುಮೆ ಮಾಡಿದರು.’

ಗೇಣಿದಾರರ ಜೊತೆ ಉಳಲಾರಂಭಿಸಿದ್ದ ಲೋಹಿಯಾ ಹಾಗೂ ಅವರ ಸಂಗಾತಿಗಳನ್ನು ಬಂಧಿಸಿದ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದೊಯ್ದರು. ಎರಡು ದಿನಗಳ ನಂತರ ಲೋಹಿಯಾ ಅವರ ಬಿಡುಗಡೆಯಾಯಿತು. ಆಗ ‘ಲೋಹಿಯಾ ಬೆಂಗಳೂರಿನಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರ ಅದುವರೆಗೂ ಸುಳ್ಳಿನ ಕಂತೆಯನ್ನೇ ನಿರೂಪಿಸಿತ್ತು. ಜನರನ್ನು ತಪ್ಪು ದಾರಿಗೆ ಎಳೆದಿತ್ತು. ಈಗ ಆ ಕಟುಸತ್ಯವನ್ನು ಅವರು ಜಗತ್ತಿಗೆ ತಿಳಿಸಿದರು:

‘ರೈತರು ಎಂದೂ ತಾವು ಗೇಣಿ ಕೊಡುವುದಿಲ್ಲ ಎಂದು ಹೇಳಿರಲಿಲ್ಲ. ತಾವಾಗಿಯೇ ಜಮೀನಿನ ಸಾಗುವಳಿಯನ್ನು ನಿಲ್ಲಿಸಿರಲಿಲ್ಲ. ಅವರ ಸಾಗುವಳಿಯ ಮೇಲೆ, ಅವರ ದನಕರುಗಳ ಮೇಲೆ, ಅವರ ವ್ಯವಸಾಯ ಉಪಕರಣಗಳ ಮೇಲೆ ದಾಳಿಯಿಟ್ಟು ಪೈಶಾಚಿಕ ಹಿಂಸಾಚಾರ ನಡೆಸಿದವರೂ ಜಮೀನ್ದಾರರೇ; ಪೊಲೀಸರ ಬೆಂಬಲ ಅವರಿಗೆ ದೊರೆಯಿತು. ಇದೊಂದು ಘೋರ ಅನ್ಯಾಯ. ಇಂಥ ಅನ್ಯಾಯಗಳು ಸಣ್ಣವಿರಲಿ, ದೊಡ್ಡವಿರಲಿ, ಪ್ರಜೆಗಳು ಪ್ರತಿಭಟಿಸಬೇಕು, ಎದುರಿಸಿ ಹೋರಾಡಬೇಕು. ಆಗಲೇ ಪ್ರಜಾಪ್ರಭುತ್ವ ಈ ನೆಲದಲ್ಲಿ ಆಳವಾಗಿ ನೆಲೆ ನಿಲ್ಲುವುದು. ಅನ್ಯಾಯಕ್ಕೆ ತಲೆ ಬಾಗುವ ಜನರು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲಾರರು. ಈ ದೃಷ್ಟಿಯಿಂದ ಕಾಗೋಡಿನ ದೀವ ಗೇಣಿದಾರರು ಕೆಚ್ಚೆದೆಯ ಕಲಿಗಳು. ಇಡೀ ಸ್ವತಂತ್ರ ಭಾರತವೇ ಅವರನ್ನು ಅಭಿನಂದಿಸಬೇಕು. ಕಾಗೋಡಿನ ಮಾಸ್ತಿಯಂಥ ಮತ್ತು ಕೆಂಚಪ್ಪನಂಥ ಮುಗ್ಧ ಧೀರರ ಕೆಚ್ಚಿನ ಹೋರಾಟ ಚಿರಸ್ಮರಣೀಯ. ಪ್ರಜಾಪ್ರಭುತ್ವದ ಜೊತೆಗೆ ಅಂಬೆಗಾಲಿಡುತ್ತಿರುವ ಭಾರತೀಯರು ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ, ಬೆಳೆಸಬೇಕಾದರೆ, ಅವರು ಮೊಟ್ಟಮೊದಲು ಕಲಿಯಬೇಕಾದ ಪಾಠ ಅನ್ಯಾಯದ ವಿರುದ್ಧ ಹೋರಾಡುವುದು! ಈ ಕಾರ್ಯವನ್ನು ಖುದ್ದಾಗಿ ಮಾಡಲು ನನಗೆ ಕಾಗೋಡಿನ ಈ ವೀರರು ಅವಕಾಶ ಮಾಡಿಕೊಟ್ಟರು. ಅವರಿಗೂ ಈ ಸುಂದರ ಮೈಸೂರು ರಾಜ್ಯಕ್ಕೂ ನಾನು ಕೃತಜ್ಞ.’ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು