ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ದಾಸ್ತಾನು ನಿಯಂತ್ರಣ: ಗಮ್ಮತ್ತಿನ ತಿದ್ದುಪಡಿ

ರೈತರು ಮತ್ತು ಗ್ರಾಹಕರ ಹಿತದೃಷ್ಟಿಗಿಂತ ಹೂಡಿಕೆಗಳೇ ಪ್ರಾಮುಖ್ಯ ಪಡೆಯಬೇಕೇ?
Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸದರಿ ಕಾನೂನಿನಲ್ಲಿ ತರಲು ಪ್ರಯತ್ನಿಸುವ ಈ ಬದಲಾವಣೆಯ ಅವಶ್ಯಕತೆ ನಮಗೆ ಕಾಣುತ್ತಿಲ್ಲ. ಈ ರೀತಿಯ ಬದಲಾವಣೆಯನ್ನು ಆಲೋಚಿಸಲು ತಕ್ಕ ಪರಿಸ್ಥಿತಿ ಉಂಟಾಗುವುದರಲ್ಲಿ ಒಂದು ದಶಕವೇ ಹಿಡಿಯಬಹುದು.

ಕೃಷಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಮೂರು ಕಾಯ್ದೆಗಳ ಪೈಕಿ ಒಂದುನಿಜಕ್ಕೂ ಹೊಸ ಕಾಯ್ದೆಯಲ್ಲ. ಬದಲಿಗೆ 1955ರಿಂದ ಇರುವ ಅತ್ಯವಶ್ಯಕ ವಸ್ತುಗಳ ಕಾಯ್ದೆಯ ತಿದ್ದುಪಡಿಯಷ್ಟೇ. ಸರ್ಕಾರ ಮಾಡಿರುವ ತಿದ್ದುಪಡಿ ಗಮ್ಮತ್ತಿನದ್ದು. ಸಂವಿಧಾನದ 370ನೇ ಕಲಮನ್ನೇ ಉಪಯೋಗಿಸಿ ಅದನ್ನೇ ನಿರ್ವೀರ್ಯಗೊಳಿಸಿದ ಸ್ವ-ವಿನಾಶಕಾರಿ ತಿದ್ದುಪಡಿಯಂತೆ, ಈ ತಿದ್ದುಪಡಿಯೂ ಅತ್ಯವಶ್ಯಕ ವಸ್ತುಗಳ ಕಾನೂನನ್ನು ನಿರ್ವೀರ್ಯಗೊಳಿಸುತ್ತದೆ.

ಮೂಲ ಕಾನೂನನ್ನೇ ರದ್ದುಪಡಿಸಬಹುದಾದ ಸಾಧ್ಯತೆಯನ್ನು ಸರ್ಕಾರ ಪರಿಗಣಿಸದೇ ಇರುವುದು ಆಶ್ಚರ್ಯದ ಮಾತು. ಆದರೆ ಈ ನಿರ್ವೀರ್ಯಗೊಳಿಸುವ ಪ್ರಕ್ರಿಯೆಯಲ್ಲೂ ಒಂದು ನ್ಯೂಕ್ಲಿಯರ್ ಬಟನ್– ಅತಿ ಅಸಾಮಾನ್ಯ ಪರಿಸ್ಥಿತಿಯಲ್ಲಿ ಅತ್ಯವಶ್ಯಕ ವಸ್ತುಗಳ ದಾಸ್ತಾನು- ಸಾಗಣೆಯನ್ನು ನಿಯಂತ್ರಿಸುವ ಸಾಧ್ಯತೆಯನ್ನು ಸರ್ಕಾರ ತನ್ನ ಕೈಯಲ್ಲಿಟ್ಟುಕೊಂಡಿದೆ. ಆದರೆ ಈ ಅತಿ ಅಸಾಮಾನ್ಯ ಸಂದರ್ಭದಲ್ಲೂ ಮಾರುಕಟ್ಟೆಯ ಸರಪಳಿಯಲ್ಲಿ ಭಾಗಿಗಳಾಗಿರುವ ವ್ಯಾಪಾರಿಗಳಲ್ಲದವರಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಈ ಬದಲಾವಣೆಯಿಂದ ರೈತರಿಗೆ ಮಾರಾಟ ಪ್ರಕ್ರಿಯೆಯಲ್ಲಿ ಅಥವಾ ಗ್ರಾಹಕರಿಗೆ ಅವರ ಖರೀದಿ ಮತ್ತು ಅದಕ್ಕೆ ಪಾವತಿಸುವ ಬೆಲೆಯ ವಿಷಯದಲ್ಲಿ ಒಂದು ಮುಕ್ತಿಯನ್ನು ಸರ್ಕಾರ ಕೊಟ್ಟಿದೆಯೇ?

ಮುಕ್ತ ಸಾಗಣೆಯಿಂದಾಗಿ ಅನಿಯಮಿತ ದಾಸ್ತಾನು ಮಾಡುವ ಸಾಧ್ಯತೆಯಿಂದಾಗಿ ಹೆಚ್ಚಿನ ದಾಸ್ತಾನು, ಶೀತಲೀಕರಣ ಕೇಂದ್ರಗಳ ನಿರ್ಮಾಣಕ್ಕೆ ಖಾಸಗಿ ಹೂಡಿಕೆಗಳು ಬರುವ ಒಟ್ಟಾರೆ ಸಂದರ್ಭ ನಿರ್ಮಾಣವಾಗಿದೆಯೇ? ಇವುಗಳು ಯಕ್ಷಪ್ರಶ್ನೆಗಳಾಗಿಯೇ ಉಳಿಯುತ್ತವೆ. ಒಟ್ಟಾರೆ ರೈತರು ಮತ್ತು ಗ್ರಾಹಕರ ಹಿತದೃಷ್ಟಿಗಿಂತ ಹೂಡಿಕೆಗಳೇ ಪ್ರಾಮುಖ್ಯವನ್ನು ಪಡೆಯಬೇಕೇ ಎನ್ನುವ ಪ್ರಶ್ನೆಯೂ ಇದೆ. ಮಾರುಕಟ್ಟೆಗಳ ಆಧುನೀಕರಣದತ್ತ ಸರ್ಕಾರ ಗಮನಹರಿಸಿದರೆ, ರೈತರು- ಗ್ರಾಹಕರ ಹಿತವನ್ನು ಕಾಪಾಡುವ ಜನಪರ ನಿಯಮಾ
ವಳಿಯನ್ನು ಕಾನೂನಿನಲ್ಲಿ ಸೇರಿಸಬೇಕಾಗಬಹುದು. ಈಗ ಮಾಡಿರುವ ಬದಲಾವಣೆಯಿಂದಾಗಿ ವ್ಯಾಪಾರಿಗಳಿಗೆ ಮಾತ್ರ ಲಾಭವಾಗುತ್ತದೆ.

ಎಂ.ಎಸ್.ಶ್ರೀರಾಮ್
ಎಂ.ಎಸ್.ಶ್ರೀರಾಮ್

ದೇಶದ ಅತ್ಯಧಿಕ ಜನರ ದೈನಂದಿನ ಆಹಾರಕ್ಕೆ ಬೇಕಾದ ಅತ್ಯವಶ್ಯಕ ವಸ್ತುಗಳನ್ನು ಈ ಕಾನೂನು ಗುರುತಿಸಿದೆ. ಅಕ್ಕಿ, ಬೇಳೆ, ಗೋಧಿ, ಎಣ್ಣೆ, ಸಕ್ಕರೆ, ಈರುಳ್ಳಿ, ಆಲೂಗಡ್ಡೆಯಂತಹ ವಸ್ತುಗಳ ದಾಸ್ತಾನು ಮತ್ತು ಸಾಗಣೆಯ ಮೇಲಿನ ನಿಯಂತ್ರಣವನ್ನು ಕಿತ್ತೊಗೆದಾಗ ವ್ಯಾಪಾರಿಗಳ ಕೈಯಲ್ಲಿ ಅನಿಯಮಿತ ದಾಸ್ತಾನನ್ನಿರಿಸಿ ಮಾರುಕಟ್ಟೆಯ ಬೆಲೆಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರ ಅನುವು ಮಾಡಿಕೊಡುತ್ತಿದೆ. ಹೀಗಾಗಿ ಕಟಾವಿನ ಕಾಲಕ್ಕೆ ದಾಸ್ತಾನನ್ನು ಮಾರುಕಟ್ಟೆಗೆ ಬಿಟ್ಟು ಖರೀದಿಯ ದರಗಳನ್ನೂ ಮಿಕ್ಕ ಸಮಯದಲ್ಲಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿರುವ ಉತ್ಪನ್ನಗಳ ಪ್ರಮಾಣವನ್ನು ನಿಯಂತ್ರಿಸಿ ಬೆಲೆಗಳನ್ನು ಹೆಚ್ಚಿಸಿ ಗ್ರಾಹಕರಿಂದಲೂ ಲಾಭ ಪಡೆಯುವ ಸಾಧ್ಯತೆ ವ್ಯಾಪಾರಿಗಳಿಗೆ ಇರುತ್ತದೆ.

ಸಾಮಾನ್ಯ ಪರಿಸ್ಥಿತಿಯಲ್ಲಿ ಅತ್ಯವಶ್ಯಕ ಅಲ್ಲದ ವಸ್ತುಗಳ ವಿಷಯದಲ್ಲಿ ಮಾರುಕಟ್ಟೆಯ ಬೇಡಿಕೆ- ಸರಬರಾಜಿನ ಸಮತೋಲನವು ಬೆಲೆಗಳಲ್ಲಿ ಕಾಣಿಸುತ್ತದೆ. ಆದರೆ ಈ ಉತ್ಪನ್ನಗಳು ಪ್ರತಿದಿನದ ಅತ್ಯವಶ್ಯಕ ವಸ್ತುಗಳಾದ್ದರಿಂದ ಮಾರುಕಟ್ಟೆಯೇ ಇದಕ್ಕೆ ಸಮತೋಲನ ಒದಗಿಸುತ್ತದೆ ಎಂದು ನಂಬುವುದು ಸರಿಯಲ್ಲ. ಹೀಗಾಗಿ ಒಂದು ಬಲವಾದ ನಿಯಂತ್ರಣಾ ಚೌಕಟ್ಟು ಅತ್ಯವಶ್ಯಕವಾಗಿದೆ.

ಸದರಿ ಕಾಯ್ದೆಯು ಮಾರುಕಟ್ಟೆಯ ಸ್ಥಿರತೆಯನ್ನು ಏರುಪೇರು ಮಾಡುತ್ತದೆ. ಸಾಂಪ್ರದಾಯಿಕವಾಗಿ ಈ ವ್ಯವಹಾರದ ಸರಣಿಯನ್ನು ಪರಿಶೀಲಿಸಿದರೆ, ದಾಸ್ತಾನು ಮಾಡುವ ಗೋದಾಮು ಮತ್ತು ಗೋದಾಮಿನಲ್ಲಿರುವ ಮಾಲಿನ ಮಾಲೀಕತ್ವ ಎರಡೂ ಒಬ್ಬರಲ್ಲೇ ಇರುತ್ತವೆ. ಸೈಲೋಗಳಂತಹ ಆಧುನಿಕ ದಾಸ್ತಾನು ಸವಲತ್ತುಗಳನ್ನು ಕಟ್ಟಲು ಹೆಚ್ಚಿನ ಹೂಡಿಕೆ ಬೇಕು. ಈ ಮೂಲಸೌಕರ್ಯದ ಹೂಡಿಕೆ ನಿಜಕ್ಕೂ ಸರ್ಕಾರಿ ಕ್ಷೇತ್ರದಲ್ಲಿ ಬರಬೇಕು. ಆದರೆ ಸರ್ಕಾರದ ಆರ್ಥಿಕತೆಯನ್ನು ಗಮನಿಸಿದಾಗ, ಅದಕ್ಕಾಗಿ ಕಾಯುತ್ತ ಕುಳಿತರೆ ನಮ್ಮ ಮೂಲಸೌಕರ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಖಾಸಗಿ ಕ್ಷೇತ್ರದಿಂದಲೂ ಹೂಡಿಕೆಗಳು ಬರಬಹುದು.

ದಾಸ್ತಾನು ಕೇಂದ್ರಗಳಲ್ಲಿ ಇಡಬಹುದಾದ ಮಾಲನ್ನು ಖರೀದಿಸಲೂ ಸಾಕಷ್ಟು ದುಡ್ಡಿರಬೇಕು. ಸೈಲೋ ಅಥವಾ ಆಧುನಿಕ ಗೋದಾಮು, ಅದರಲ್ಲಿನ ಮಾಲು ಎರಡರ ಮಾಲೀಕತ್ವವೂ ಒಂದೇ ಸಂಸ್ಥೆಯಲ್ಲಿರಬಹುದು ಅಥವಾ ಗೋದಾಮು ಮಾಲೀಕರಿಂದ ಈ ವ್ಯವಸ್ಥೆಯನ್ನು ಬಾಡಿಗೆಗಾಗಿ ವ್ಯಾಪಾರಿಗಳು ಪಡೆದಿರಬಹುದು. ಯಾವುದೇನೇ ಆದರೂ ಈ ವ್ಯವಸ್ಥೆಯಿಂದ ದಾಸ್ತಾನು ಮತ್ತು ಮಾಲಿನ ನಿರ್ವಹಣೆ ಹೂಡಿಕೆಯಿಟ್ಟವರಲ್ಲಿ ಕೇಂದ್ರೀಕೃತವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಂಡರೆ ಈ ಕಾನೂನಿನ ತಿದ್ದುಪಡಿಯ ಉದ್ದೇಶವು- ದಾಸ್ತಾನು ಮತ್ತು ನಿರ್ವಹಣೆಯನ್ನು ಸರ್ಕಾರದ ವ್ಯಾಪ್ತಿಯ ಹೊರಗಡೆಗೆ ವರ್ಗಾಯಿಸುವುದೇ ಆಗಿದೆ ಎನ್ನುವುದು ಮನವರಿಕೆಯಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಮಾಡುತ್ತಿರುವ ಈ ದಾಸ್ತಾನು ಆಪತ್ಕಾಲಕ್ಕಾಗಿ ಅಥವಾ ಸಾರ್ವಜನಿಕ ವಿತರಣೆಗಾಗಿ ಮಾಡುತ್ತಿರುವ ದಾಸ್ತಾನಲ್ಲ ಎನ್ನುವುದನ್ನು ಗಮನಿಸಬೇಕು.

ಕೇಂದ್ರೀಕೃತ ದಾಸ್ತಾನಿನ ಸವಲತ್ತಿನಲ್ಲಿರುವ ಉತ್ಪನ್ನವು ವಿಕೇಂದ್ರೀಕೃತ ಮಾಲೀಕತ್ವದೊಂದಿಗೆ ಇರುವುದು ಸಾಧ್ಯವೇ? ವೇರ್‌ಹೌಸ್ ರಸೀತಿ ಎನ್ನುವ ಕಾಗದದ ಪರಿಕರದ ಮೂಲಕ ಇದನ್ನು ಸಾಧಿಸಬಹುದು. ಎಲೆಕ್ಟ್ರಾನಿಕ್ ವಿನಿಮಯ ಕೇಂದ್ರಗಳಲ್ಲಿ ಇದನ್ನು ನಾವು ವ್ಯವಹಾರಕ್ಕೂ ಒಡ್ಡಬಹುದು. ಹೀಗಾದರೂ ಈ ಪತ್ರಗಳ ವಿಕೇಂದ್ರೀಕೃತ ಮಾಲೀಕತ್ವವು ರೈತರ ಬಳಿ ಇರುವ ಸಾಧ್ಯತೆ ತೀರಾ ಕಡಿಮೆ. ಇದಕ್ಕೆ ಕಾರಣ– ಮುಂದಿನ ಬೆಳೆಗಾಗಿ ರೈತರಿಗೆ ತಕ್ಷಣ ದುಡ್ಡಿನ ಅವಶ್ಯಕತೆಯಿರುತ್ತದೆ. ಹೀಗಾಗಿ ಈ ವಿಕೇಂದ್ರೀಕೃತ ಮಾಲೀಕತ್ವ ರೈತರಲ್ಲಿ ಉಳಿಯದೆ ಸಟ್ಟಾ ವ್ಯಾಪಾರಿಗಳು ಮತ್ತು ದೊಡ್ಡ ವರ್ತಕರ ಕೈಯಲ್ಲಿರಬಹುದಾದದ್ದು ಸಹಜ.

ವರ್ಗಾವಣೆ, ದಂಶಕಗಳಿಂದಾಗಿ ನಷ್ಟ, ತೇವಾಂಶ, ಕಳ್ಳತನ ಮತ್ತು ಕೊಳೆತು ಹಾಳಾಗುವುದರಿಂದ ದಾಸ್ತಾನು ಮಾಡಿದ ಮಾಲು ನಾಶವಾಗದಂತೆ ಕೇಂದ್ರಗಳಲ್ಲಿ ಉತ್ಪನ್ನಗಳನ್ನು ಕಾಪಿಡುವುದರಲ್ಲಿ ಒಂದು ಅರ್ಥವಿದೆ. ಈ ವಿಷಯದಲ್ಲಿ ಹೇಗೆ ಮಾರುಕಟ್ಟೆಯನ್ನು ನಿಭಾಯಿಸಬೇಕೆನ್ನುವುದಕ್ಕೆ ನಮಗೆ ಷೇರು ಮಾರುಕಟ್ಟೆಯಿಂದ ಒಳನೋಟಗಳು ಸಿಗುತ್ತವೆ. ಅಲ್ಲಿ ಎಷ್ಟರಮಟ್ಟಿಗಿನ ಕೇಂದ್ರೀಕರಣವಿರಬೇಕು, ಪಾರದರ್ಶಕತೆ ಹೇಗಿರಬೇಕು, ಮಾಲೀಕತ್ವದ ನಿಯಮಗಳೇನು ಎನ್ನುವುದರ ಬಗ್ಗೆ ಬಹಳಷ್ಟು ನೀತಿ ನಿಯಮಾವಳಿಗಳಿವೆ. ಆ ಸೂತ್ರಗಳನ್ನು ಉತ್ಪನ್ನದ ಮಾರುಕಟ್ಟೆಗಳಿಗೂ ಅಳವಡಿಸಬಹುದು. ದಾಸ್ತಾನಿನ ಸವಲತ್ತುಗಳನ್ನು ಡಿಪಾಸಿಟರಿಗಳ ಹಾಗೆ ನೋಡಬಹುದು. ವೇರ್‌ಹೌಸ್ ರಸೀತಿಗಳನ್ನು ಷೇರುಗಳ ರೀತಿಯಲ್ಲಿ ಕಾಣಬಹುದು. ಅವುಗಳ ದಾಸ್ತಾನಿನ ಮೇಲೆ, ಮಾಲೀಕತ್ವದ ಮೇಲೆ, ಭವಿಷ್ಯದ ಬೆಲೆಗಳನ್ನು ಊಹಿಸುವ ಮತ್ತು ಆ ಬಗ್ಗೆ ಮೊದಲೇ ಕರಾರು ಮಾಡಿಕೊಳ್ಳುವ ಬಗ್ಗೆ ನೀತಿ-ನಿಯಮಾವಳಿಯನ್ನು ರೂಪಿಸಬೇಕಾಗುತ್ತದೆ. ರೈತರು ಈ ಜೂಜಿನಲ್ಲಿ ತೊಡಗಬೇಕೋ ಬೇಡವೋ ಅನ್ನುವುದರ ಬಗ್ಗೆ ನಾವು ಯಾವ ನಿಲುವನ್ನೂ ತೆಗೆದುಕೊಳ್ಳದೆ ಆಯಾ ವ್ಯಕ್ತಿಗಳಿಗೆ ಬಿಟ್ಟುಬಿಡೋಣ.

ನೀತಿ ರೂಪಿಸುವ ಕಾಲಕ್ಕೆ ಮಾರುಕಟ್ಟೆಯ ಏರುಪೇರಿನ ಜೂಜು ಪ್ರಾರಂಭವಾಗುವುದಕ್ಕೆ ಮೊದಲೇ ರೈತರ ಮಾರಾಟದ ವ್ಯವಹಾರ ಮುಗಿದಿರುತ್ತದೆಂದು ಭಾವಿಸಬೇಕಾಗುತ್ತದೆ. ಅರ್ಥಾತ್– ರೈತರಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆಯ ಬೆಲೆಯೇರಿದರೆ ಅದರ ಲಾಭವಷ್ಟೇ ಉಂಟಾಗುತ್ತದೆಂದು ನಾವು ನಂಬಬೇಕು. ರೈತರ ಹಿತಾಸಕ್ತಿಯ ಪ್ರಾಥಮಿಕತೆಯನ್ನು ನಾವು ಗುರುತಿಸಿ ಅವರನ್ನು ಕಾಪಾಡಿದರೆ, ಮಿಕ್ಕ ಏರುಪೇರಿನಿಂದ ಪ್ರಭಾವಿತರಾಗುವವರು ವ್ಯಾಪಾರಿಗಳು ಮತ್ತು ಗ್ರಾಹಕರು. ಏನೇ ಆಗಲಿ ಈ ವಿಚಾರದಲ್ಲಿ ಸರ್ಕಾರ ಜಾಗರೂಕವಾಗಿ ಮುಂದುವರಿಯಬೇಕು. ಈ ಏರ್ಪಾಟು ಸ್ಥಿರವಾಗುವುದಕ್ಕೆ ಮುನ್ನ ಒಂದೆರಡು ಹಗರಣಗಳು ನಡೆಯಲಿಕ್ಕೂ ಸಾಕು. ಆ ನಂತರವೇ ನಮ್ಮ ಕಾನೂನು ಕಾಯ್ದೆ ಗಟ್ಟಿಯಾಗುತ್ತದೆ.

ಸರ್ಕಾರವು ಭೌತಿಕ ಮೂಲಸೌಕರ್ಯಗಳನ್ನು ಕಲ್ಪಿಸುವುದರತ್ತ ಗಮನವಿರಿಸಿ, ಅದರ ಸುತ್ತಲೂ ಕಾನೂನು ಕಾಯ್ದೆಗಳನ್ನು ರೂಪಿಸಬೇಕು. ದಾಸ್ತಾನು ಮತ್ತು ಸರಬರಾಜಿನ ಮಿತಿಗಳನ್ನು ತೆಗೆದೊಗೆಯುವುದರಿಂದ ಬಹುಜನ ಹಿತ ಸಾಧಿಸುವುದು ಕಷ್ಟವಾಗುತ್ತದೆ. ಏನೇ ಆದರೂ ಸರ್ಕಾರ ತನ್ನ ಹೆಜ್ಜೆಗಳನ್ನು ಅಳೆದೂ ಸುರಿದೂ ಇಡಬೇಕಾಗುತ್ತದೆ. ಸದರಿ ಕಾನೂನಿನಲ್ಲಿ ತರಲು ಪ್ರಯತ್ನಿಸುವ ಈ ಬದಲಾವಣೆಯ ಅವಶ್ಯಕತೆ ನಮಗೆ ಕಾಣುತ್ತಿಲ್ಲ. ಈ ರೀತಿಯ ಬದಲಾವಣೆಯನ್ನು ಆಲೋಚಿಸಲು ತಕ್ಕ ಪರಿಸ್ಥಿತಿ ಉಂಟಾಗುವುದರಲ್ಲಿ ಒಂದು ದಶಕವೇ ಹಿಡಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT