ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯ ಅಮೃತ ಹಾದಿ...

Last Updated 15 ಅಕ್ಟೋಬರ್ 2022, 9:36 IST
ಅಕ್ಷರ ಗಾತ್ರ

1948ರ ಅಕ್ಟೋಬರ್‌ 15ರಂದು ಆರಂಭವಾದ ‘ಪ್ರಜಾವಾಣಿ’ ಪತ್ರಿಕೆಗೆ ಈಗ 74 ವರ್ಷ ತುಂಬಿದೆ. ಇಂದಿನಿಂದ ಪತ್ರಿಕೆಗೆ ಅಮೃತೋತ್ಸವದ ಸಡಗರ. ಈ ಮಹತ್ತರ ಘಟ್ಟದಲ್ಲಿ, ಪತ್ರಿಕೆಯ ಆರಂಭ, ಪತ್ರಿಕೆ ನಡೆದು ಬಂದ ಹಾದಿ, ಪತ್ರಿಕಾ ಸಂಸ್ಥೆಯು ಕೈಗೊಂಡ ವಿವಿಧ ಕಾರ್ಯಚಟುವಟಿಕೆಗಳತ್ತ ಒಂದು ಹೊರಳು ನೋಟ ಇಲ್ಲಿದೆ...

1940ರ ದಶಕದಲ್ಲಿ ದಂಡಿನ ನಗರವಾಗಿದ್ದ ಬೆಂಗಳೂರು ಬ್ರಿಟಿಷರ ನೇರ ಆಳ್ವಿಕೆಯಲ್ಲಿತ್ತು. ಎರಡನೇ ಮಹಾಯುದ್ಧದ ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಸೈನಿಕರೇ ಕಾಣಿಸುತ್ತಿದ್ದರು. ಸೌತ್ ಪರೇಡ್ ಎಂದು ಕರೆಯಲಾಗುತ್ತಿದ್ದ ಈಗಿನ ಮಹಾತ್ಮ ಗಾಂಧಿ ರಸ್ತೆ ಬೆಂಗಳೂರಿನ ಚಟುವಟಿಕೆಯ ಕೇಂದ್ರವಾಗಿತ್ತು. ಫನೆಲ್ಸ್‌ ಎಂಬುದು ಆಗ ಅತ್ಯಂತ ಖ್ಯಾತವಾಗಿದ್ದ ಡಾನ್ಸ್‌ ಬಾರ್‌. ಐರ್ಲೆಂಡ್‌ನ ದಂಪತಿ ಈ ಡಾನ್ಸ್ ಬಾರ್‌ ನಡೆಸುತ್ತಿದ್ದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಈ ದಂಪತಿ ತಮ್ಮ ಊರಿಗೆ ಮರಳಲು ನಿರ್ಧರಿಸಿ, ಫನೆಲ್ಸ್‌ ಮಾರಾಟಕ್ಕೆ ಇಟ್ಟರು. ಇದನ್ನು ಖರೀದಿಸಿದ್ದು ಕೆ.ಎನ್‌. ಗುರುಸ್ವಾಮಿ. ಅದನ್ನು ಚಿತ್ರಮಂದಿರ ಮಾಡಬೇಕು ಎಂಬ ಇಚ್ಛೆ ಅವರಿಗೆ ಇತ್ತು. ಆದರೆ, ಅದು ಆಗಲಿಲ್ಲ. ಬದಲಿಗೆ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಬೆಳವಣಿಗೆ ನಡೆಯಿತು. ಗುರುಸ್ವಾಮಿ ಅವರು ಪತ್ರಿಕೆ ಆರಂಭಿಸುವ ನಿರ್ಧಾರಕ್ಕೆ ಬಂದರು. 1948ರ ಜೂನ್‌ 17ರಂದು‘ಡೆಕ್ಕನ್‌ ಹೆರಾಲ್ಡ್‌’ ಇಂಗ್ಲಿಷ್‌ ಪತ್ರಿಕೆ ಆರಂಭವಾದರೆ, 1948ರ ಅಕ್ಟೋಬರ್ 15ರಂದು ‘ಪ್ರಜಾವಾಣಿ’ ಜನ್ಮ ತಾಳಿತು. ಹಾಗಾಗಿ ಈ ಅಕ್ಟೋಬರ್ 15ರಿಂದ ‘ಪ್ರಜಾವಾಣಿ’ಗೆ ಅಮೃತ ಮಹೋತ್ಸವದ ಸಂಭ್ರಮ.

ಆಗ ಕನ್ನಡದಲ್ಲಿ ಸುಮಾರು 130 ಪತ್ರಿಕೆಗಳಿದ್ದವು. ಅವುಗಳ ಪೈಕಿ ಈಗಲೂ ಉಳಿದಿರುವುದುಎರಡೋ ಮೂರೋ ಮಾತ್ರ. ಪ್ರಜಾವಾಣಿ ಇಲ್ಲಿತನಕ ಸಾಗಿಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಆರಂಭದ ದಿನಗಳಲ್ಲಿ ಪತ್ರಿಕೆಯು ಲಾಭದ ಹಾದಿಯಲ್ಲಿ ಇರಲಿಲ್ಲ. 1950ರಲ್ಲಿ ಹಣಕಾಸಿನ ಭಾರಿ ಮುಗ್ಗಟ್ಟಿಗೆ ಒಳಗಾಗಿತ್ತು. ಆದರೆ, 1956ರಲ್ಲಿ ಪತ್ರಿಕೆಯು ನಷ್ಟವಿಲ್ಲದೆ ನಡೆಯುವ ಸ್ಥಿತಿಗೆ ಬಂದಿತ್ತು. ಪತ್ರಿಕೆ ಆರಂಭವಾಗಿ ಎಂಟು ವರ್ಷಗಳ ಬಳಿಕ ಲಾಭ ಗಳಿಸಲು ಆರಂಭಿಸಿತ್ತು.

ಲಾಭ ಅಥವಾ ನಷ್ಟದ ಬಗ್ಗೆ ಗುರುಸ್ವಾಮಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. 1965ರಲ್ಲಿ ‘ಸುಧಾ’ ವಾರಪತ್ರಿಕೆಯನ್ನು, 1968ರಲ್ಲಿ ‘ಮಯೂರ’ ಮಾಸಿಕವನ್ನು ಆರಂಭಿಸಲಾಯಿತು.

1969ರಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಕಚೇರಿಯಲ್ಲಿ ‘ಲೆಟರ್‌ ಪ್ರೆಸ್‌ ರೋಟರಿ ಪ್ರಿಂಟಿಂಗ್‌’ ಯಂತ್ರಗಳಲ್ಲಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು –ಚಿತ್ರಗಳು: ಪ್ರಜಾವಾಣಿ ಆರ್ಕೈವ್
1969ರಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಕಚೇರಿಯಲ್ಲಿ ‘ಲೆಟರ್‌ ಪ್ರೆಸ್‌ ರೋಟರಿ ಪ್ರಿಂಟಿಂಗ್‌’ ಯಂತ್ರಗಳಲ್ಲಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು –ಚಿತ್ರಗಳು: ಪ್ರಜಾವಾಣಿ ಆರ್ಕೈವ್

ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಆರಂಭಿಸುವಾಗ ವೃತ್ತಪತ್ರಿಕೆ ವ್ಯಾಪಾರದ ಬಗ್ಗೆ ಗುರುಸ್ವಾಮಿ ಅವರಿಗೆ ಯಾವ ಅನುಭವವೂ ಇರಲಿಲ್ಲ. ಆರಂಭದಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆ ಕಡಿಮೆ ಇತ್ತು ಮತ್ತು ಜಾಹೀರಾತು ವರಮಾನವೂ ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಆದರೆ, ನಂತರದ ದಿನಗಳಲ್ಲಿ, ಒಂದು ಲಕ್ಷ ಪ್ರಸರಣ ದಾಟಿದ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪ್ರಜಾವಾಣಿ ಪಾತ್ರವಾಯಿತು.

ಸ್ವಾತಂತ್ರ್ಯ ಸಿಕ್ಕ ಒಂದೇ ವರ್ಷದಲ್ಲಿ ಪತ್ರಿಕೆ ಆರಂಭವಾಗಿತ್ತು. ಪ್ರಜಾವಾಣಿಗೆ ಮೊದಲ ಬಹುದೊಡ್ಡ ಸವಾಲು ಎದುರಾದದ್ದು 1975–1977ರ ಅವಧಿಯಲ್ಲಿ. ಅದು ತುರ್ತು ಪರಿಸ್ಥಿತಿ ಕಾಲ. ಮಾಧ್ಯಮದ ಮೇಲೆ ಸವಾರಿ ಆರಂಭವಾಗಿತ್ತು. ಬಹುತೇಕ ಪತ್ರಿಕೆಗಳು ಬಗ್ಗಿ ಅಂದರೆ ತೆವಳಿದವು. ಅಂತಹ ಸಂಕಷ್ಟ ಕಾಲದಲ್ಲಿಯೂ ಪ್ರಜಾವಾಣಿಯು ಓದುಗರ ಕುರಿತು ಇದ್ದ ಬದ್ಧತೆಯನ್ನು ಸಡಿಲಿಸಲಿಲ್ಲ. ವಿಶ್ವಾಸಾರ್ಹತೆಗೆ ಧಕ್ಕೆ ತಂದುಕೊಳ್ಳಲಿಲ್ಲ. ರಾಜಕೀಯವಾಗಿ ತಟಸ್ಥ ಮತ್ತು ಯಾವುದೇ ಸಿದ್ಧಾಂತಕ್ಕೆ ಜೋತು ಬೀಳದ ನಿಲುವನ್ನು ಪತ್ರಿಕೆ ಹೊಂದಿತ್ತು. ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಿಲ್ಲ. ಈ ರೀತಿಯಲ್ಲಿ ನಿಕಷಕ್ಕೆ ಒಡ್ಡಿಕೊಂಡಿದ್ದರ ಪರಿಣಾಮಮೇ ವಸ್ತುನಿಷ್ಠೆ, ಬದ್ಧತೆ, ನಿಷ್ಪಕ್ಷಪಾತ ಮತ್ತು ಎಲ್ಲಕ್ಕೂ ಮಿಗಿಲಾಗಿ ಸತ್ಯದ ಪರ ನಿಲ್ಲುವ ಎದೆಗಾರಿಕೆ ಪ್ರಜಾವಾಣಿಯಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಪ್ರಜಾವಾಣಿ ಸದಾ ಮುಂದೆಯೇ ಇದೆ. ವಿನ್ಯಾಸದ ವಿಚಾರದಲ್ಲಿ ಮುದ್ರಣದ ವಿಚಾರದಲ್ಲಿ... ಎಲ್ಲದರಲ್ಲಿಯೂ ಇದು ನಿಜ. ಪತ್ರಿಕಾ ಕಚೇರಿಯು 1993ರಲ್ಲಿ ಕಂಪ್ಯೂಟರೀಕರಣಗೊಂಡಿತು.ಮಹಾತ್ಮ ಗಾಂಧಿ ರಸ್ತೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿದ್ದ ಮುದ್ರಣ ವಿಭಾಗವನ್ನು 1998ರಲ್ಲಿ ಕುಂಬಳಗೋಡಿನ ವಿಶಾಲ ಪ್ರದೇಶದಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಯಿತು. 1995ರಲ್ಲಿ ಪತ್ರಿಕೆಯು ವರ್ಣಮಯವಾಯಿತು. ದಕ್ಷಿಣ ಭಾರತದಲ್ಲಿ ಬಹುವರ್ಣ ಮುದ್ರಣ ಕಂಡ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು. 2013ರಲ್ಲಿ ಯೂನಿಕೋಡ್‌ ಫಾಂಟ್‌ಗಳನ್ನು ಅಳವಡಿಸಿಕೊಳ್ಳಲಾಯಿತು.

ಪ್ರಜಾವಾಣಿಗೆ ಸದಾ ಓದುಗರೇ ಕೇಂದ್ರ ಬಿಂದು. ಜನರನ್ನು ತಲುಪುವುದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನೂ ಪತ್ರಿಕೆ ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ. ನಾಡಿನ ಉದ್ದಗಲಕ್ಕೂ ಹೊಸ ಹೊಸ ಆವೃತ್ತಿಗಳ ಆರಂಭವೂ ಅಂತಹ ಪ್ರಯತ್ನಗಳಲ್ಲಿ ಒಂದು. 1989ರಲ್ಲಿ ಹುಬ್ಬಳ್ಳಿಯಿಂದಲೂ ಮುದ್ರಣ ಆರಂಭಿಸಲಾಯಿತು. ಈಗ, ಮಂಗಳೂರು, ಮೈಸೂರು, ಹೊಸಪೇಟೆ, ದಾವಣಗೆರೆ ಮತ್ತು ಕಲಬುರಗಿಗಳಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಪತ್ರಿಕೆಗೆ ಈಗ ಒಟ್ಟು 32 ಆವೃತ್ತಿಗಳಿವೆ.

ಸ್ಪಂದನೆ

ಮಹಾತ್ಮ ಗಾಂಧಿ ರಸ್ತೆಯಲ್ಲಿನ ಕಚೇರಿಯಲ್ಲಿ ಮೊಳೆ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದ ನೌಕರರು (ಎಡಚಿತ್ರ) 1969ರಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಕಚೇರಿಯಲ್ಲಿ ‘ಲೆಟರ್‌ ಪ್ರೆಸ್‌ ರೋಟರಿ ಪ್ರಿಂಟಿಂಗ್‌’ ಯಂತ್ರಗಳಲ್ಲಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು –ಚಿತ್ರಗಳು: ಪ್ರಜಾವಾಣಿ ಆರ್ಕೈವ್
ಮಹಾತ್ಮ ಗಾಂಧಿ ರಸ್ತೆಯಲ್ಲಿನ ಕಚೇರಿಯಲ್ಲಿ ಮೊಳೆ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದ ನೌಕರರು (ಎಡಚಿತ್ರ) 1969ರಲ್ಲಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ಕಚೇರಿಯಲ್ಲಿ ‘ಲೆಟರ್‌ ಪ್ರೆಸ್‌ ರೋಟರಿ ಪ್ರಿಂಟಿಂಗ್‌’ ಯಂತ್ರಗಳಲ್ಲಿ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು –ಚಿತ್ರಗಳು: ಪ್ರಜಾವಾಣಿ ಆರ್ಕೈವ್

ಕನ್ನಡ ನಾಡಿನ ಜನರ ಸಾಮಾಜಿಕ, ಸಾಂಸ್ಕೃತಿಕ, ಬೌದ್ಧಿಕ ಬದುಕಿನಲ್ಲಿ ಪ್ರಜಾವಾಣಿಯದ್ದು ಅಚ್ಚಳಿಯದ ಗುರುತು. ಕಾಲಕಾಲಕ್ಕೆ ಆದ ಎಲ್ಲ ಬೆಳವಣಿಗೆಗಳಿಗೂ ಪತ್ರಿಕೆಯು ಸಕ್ರಿಯವಾಗಿ ಸ್ಪಂದಿಸಿದೆ. ಜನ ಚಳವಳಿಗಳನ್ನು ಬೆಂಬಲಿಸಿದೆ. ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ, ವಿವಿಧ ಪುರವಣಿಗಳಲ್ಲಿ ಸಾರ್ವಜನಿಕ ಸಂವಾದವು ಸದಾ ಇದ್ದೇ ಇದೆ. ಅದರ ಜತೆಗೆ, ಸಮಾಜಕ್ಕೆ ಅಗತ್ಯ ಎಂದು ಕಂಡ ಸಾಮಾಜಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂವಾದಗಳನ್ನು ಪತ್ರಿಕೆಯೇ ಏರ್ಪಡಿಸಿದೆ. ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾದ ‘ದಲಿತ ಪ್ರಜ್ಞೆ’ಯ ಲೇಖನ ಸರಣಿ ಅವುಗಳಲ್ಲಿ ಒಂದು. 2012ರ ಏಪ್ರಿಲ್‌ 14ರ ಅಂಬೇಡ್ಕರ್ ಜಯಂತಿಯ ದಿನ ಬಂದ ಪತ್ರಿಕೆ ಎಂದಿನಂತಿರಲಿಲ್ಲ. ಕನ್ನಡದ ಹೆಸರಾಂತ ಕತೆಗಾರ ದೇವನೂರ ಮಹಾದೇವ ಅವರು ಆ ಸಂಚಿಕೆಯ ಅತಿಥಿ ಸಂಪಾದಕರಾಗಿದ್ದರು. ಮುಂದಿನ ಹಲವು ವಾರಗಳ ಕಾಲ ದಲಿತ ಪ್ರಜ್ಞೆಯ ಲೇಖನಗಳು ಪ್ರಕಟವಾದವು. ‘ಸಮಾನತೆಯ ಕನಸನ್ನು ಕಾಣುತ್ತ...’ ಎಂಬ ಹೆಸರಿನಲ್ಲಿ ಇದು ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿದೆ.

‘ಜಾತಿ ಸಂವಾದ’ ಎಂಬ ಸಾರ್ವಜನಿಕ ಚರ್ಚೆ ನಂತರ ನಡೆಯಿತು. 2012ರ ಡಿಸೆಂಬರ್‌ನಿಂದ 2013ರ ಮೇ 27ರವರೆಗೆ ಸತತ 26 ವಾರ ನಡೆದ ಈ ಚರ್ಚೆಗೆ ರಾಜ್ಯದ ಜನ ಸ್ಪಂದಿಸಿದ ರೀತಿ ಅಭೂತಪೂರ್ವವೇ ಆಗಿತ್ತು. ಈ ಸಂವಾದವೂ ‘ಜಾತಿ ಸಂವಾದ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. 2013ರ ಮೇ 24ರಿಂದ ನಡೆದದ್ದು ‘ವಚನ ಸಾಹಿತ್ಯ ಸಂವಾದ’. ಸುಮಾರು ಎರಡೂವರೆ ತಿಂಗಳ ಕಾಲ 27 ಲೇಖನಗಳು ಪ್ರಕಟವಾಗಿದ್ದವು. ಇದನ್ನೂ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಈ ಪುಸ್ತಕಗಳಲ್ಲದೆ ಇತರ ಹಲವು ಪುಸ್ತಕಗಳನ್ನೂ ಪ್ರಜಾವಾಣಿ ಪ್ರಕಾಶನವು ಪ್ರಕಟಿಸಿದೆ.‌

ಅತಿಥಿ ಸಂಪಾದಕತ್ವದ ಪರಂಪರೆ ಮುಂದುವರಿದಿದೆ. 2016ರ ಮಾರ್ಚ್‌ 8ರ ಮಹಿಳಾ ದಿನದ ಪತ್ರಿಕೆಯು ಖ್ಯಾತ ರಂಗಕರ್ಮಿ ಮತ್ತು ಗಾಯಕಿ ಬಿ. ಜಯಶ್ರೀ ಅವರ ಸಂಪಾದಕತ್ವದಲ್ಲಿ ಮೂಡಿಬಂದಿತ್ತು. ನೀರು ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ 2017ರ ಮಾರ್ಚ್‌ 22ರ ವಿಶ್ವ ಜಲದಿನದಂದು ವಿಶೇಷ ಸಂಚಿಕೆ ಹೊರ ತರಲಾಗಿತ್ತು. ಖ್ಯಾತ ಪರಿಸರ ಹೋರಾಟಗಾರ ಶ್ರೀಪಡ್ರೆ ಅವರ ಅತಿಥಿ ಸಂಪಾದಕತ್ವದಲ್ಲಿ ಈ ಸಂಚಿಕೆ ಸಿದ್ಧಪಡಿಸಲಾಗಿತ್ತು. ಮುಂದೆ ಒಂದಿಡೀ ವರ್ಷ ನೀರು ಸಂರಕ್ಷಣೆಯ ಮಹತ್ವವನ್ನು ಸಾರುವ ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾದವು. ‘ನೀರ ನೆಮ್ಮದಿಯ ನಾಳೆ’ ಎಂಬುದು ಈ ಲೇಖನ ಸರಣಿಯ ಶೀರ್ಷಿಕೆಯಾಗಿತ್ತು.

ಸಾಹಿತ್ಯ ಸೇತು

ಪ್ರಜಾವಾಣಿ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಬಿಡಲಾರದ ನಂಟಿದೆ. ಪ್ರತಿ ಭಾನುವಾರ ಪ್ರಕಟವಾಗುವ ‘ಸಾಪ‍್ತಾಹಿಕ ಪುರವಣಿ’ಯನ್ನು (ಈಗ ಅದು ಭಾನುವಾರದ ಪುರವಣಿ) ಕನ್ನಡ ಸಾಹಿತ್ಯ ಲೋಕವು ತೀರಾ ಗಂಭೀರವಾಗಿಯೇ ಪರಿಗಣಿಸುತ್ತದೆ. 1957ರಲ್ಲಿ ಆರಂಭವಾದ ದೀಪಾವಳಿ ವಿಶೇಷಾಂಕ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ದೀಪಾವಳಿ ಕಥಾಸ್ಪರ್ಧೆಯನ್ನು ಕನ್ನಡ ಸಾಹಿತ್ಯ ಜಗತ್ತು ಕಾಯ್ದು ನೋಡುತ್ತಿರುತ್ತದೆ. ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಕನ್ನಡ ಸಾಹಿತ್ಯ ಲೋಕದಲ್ಲಿ ಎತ್ತರದ ಸ್ಥಾನಕ್ಕೆ ಏರಿದ್ದಾರೆ. ಸಾಹಿತ್ಯಕ್ಕೇ ಮೀಸಲಾದ ‘ದೇಶಕಾಲಸಾಹಿತ್ಯ ಪುರವಣಿ’ಯು ಕೆಲಕಾಲವಷ್ಟೇ ಪ್ರಕಟವಾದರೂ ಅದು ಮೂಡಿಸಿದ ಛಾಪು ದೊಡ್ಡದೇ.

ಸಂಕಷ್ಟಗಳಿಗೆ ಸಹಾಯಹಸ್ತ

ಪ್ರಜಾವಾಣಿ
ಪ್ರಜಾವಾಣಿ

ದೇಶದ ಮತ್ತು ನಾಡಿನ ಜನರ ಕಷ್ಟಕೋಟಲೆಗಳಿಗೆ ಪ್ರಜಾವಾಣಿ ಸದಾ ಸ್ಪಂದಿಸುತ್ತಲೇ ಬಂದಿದೆ. ಯುದ್ಧದಂತಹ ಮಾನವಕೃತ ವಿಕೋಪಗಳು, ನೆರೆ–ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗಾಗಿ ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಪರಿಹಾರ ನಿಧಿ ಸ್ಪಂದಿಸಿದೆ. 1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಸೈನಿಕರ ಪರಿಹಾರ ನಿಧಿಗಾಗಿ ಪ್ರಜಾವಾಣಿ ದೇಣಿಗೆ ಸಂಗ್ರಹಿಸಿತ್ತು. ಓದುಗರಿಂದ ₹2,75,101 ಮೊತ್ತ ಮತ್ತು ಚಿನ್ನಾಭರಣಗಳನ್ನು ಸಂಗ್ರಹಿಸಿತ್ತು. ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಈ ದೇಣಿಗೆಯ ಚೆಕ್‌ ಅನ್ನು ನೀಡಲಾಗಿತ್ತು.

2001ರಲ್ಲಿ ಗುಜರಾತ್‌ ರಾಜ್ಯದ ಕಛ್‌ ಪ್ರದೇಶದ ಭುಜ್‌ ಭೂಕಂಪ, 2008ರಲ್ಲಿ ಬಿಹಾರದ ಕೋಸಿ ನದಿ ಪ್ರವಾಹ ಸಂತ್ರಸ್ತರ ನೆರವಿಗೆ ಪ್ರಜಾವಾಣಿ ದೇಣಿಗೆ ಸಂಗ್ರಹಿಸಿತ್ತು. ಆ ದೇಣಿಗೆಯನ್ನು ಸರ್ಕಾರದ ಪರಿಹಾರ ನಿಧಿಗೆ ನೀಡಲಾಗಿತ್ತು.ಭಾರತ ಮಾತ್ರವಲ್ಲ, ನೆರೆ ದೇಶಗಳ ಸಂಕಷ್ಟಗಳಿಗೂ ಪ್ರಜಾವಾಣಿ ಮಿಡಿದಿದೆ. 2017ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ, ಇಡೀ ದೇಶವೇ ನಲುಗಿ ಹೋಗಿತ್ತು. ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ತಮ್ಮ ಓದುಗರಿಂದ ನೇಪಾಳ ಪರಿಹಾರ ನಿಧಿಗಾಗಿ ₹ 1ಕೋಟಿಗೂ ಹೆಚ್ಚು ಮೊತ್ತದ ದೇಣಿಗೆ ಸಂಗ್ರಹಿಸಿದ್ದವು. ಅದನ್ನು ಸರ್ಕಾರದ ಮೂಲಕ ನೇಪಾಳಕ್ಕೆ ಕೊಡಲಾಗಿತ್ತು.

2018ರಲ್ಲಿ ರಾಜ್ಯದ ಕೊಡಗು ಮತ್ತು ಕೇರಳದಲ್ಲಿ ಸುರಿದ ವಿಪರೀತ ಮಳೆಯು, ಜನಜೀವನವನ್ನು ಅಸ್ತವ್ಯಸ್ತವಾಗಿಸಿತ್ತು. ಆ ಜನರ ನೆರವಿಗಾಗಿ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕೆಗಳು ತಮ್ಮ ಓದುಗರಿಂದ ಒಟ್ಟು ₹1.86 ಕೋಟಿಯಷ್ಟು ದೇಣಿಗೆ ಸಂಗ್ರಹಿಸಿ, ಕರ್ನಾಟಕ ಮತ್ತು ಕೇರಳ ಸರ್ಕಾರಕ್ಕೆ ನೀಡಲಾಗಿತ್ತು.

ಇಡೀ ಜಗತ್ತನ್ನೇ ಹೈರಾಣು ಮಾಡಿದ್ದ ಕೋವಿಡ್‌, ರಾಜ್ಯದ ಜನರಲ್ಲೂ ಹಲವರನ್ನು ಸಂಕಷ್ಟಕ್ಕೆ ದೂಡಿತ್ತು. ಅಂತಹ ಜನರಿಗೆ ನೆರವು ನೀಡುವ ಉದ್ದೇಶದಿಂದ ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ವತಿಯಿಂದ ಕೋವಿಡ್‌–19 ಪರಿಹಾರ ನಿಧಿ ಸ್ಥಾಪಿಸಲಾಗಿತ್ತು. ಓದುಗರಿಂದ ಈ ನಿಧಿಗೆ ದೇಣಿಗೆ ಸಂಗ್ರಹಿಸಲಾಗಿತ್ತು. ಕೋವಿಡ್ ಸಂತ್ರಸ್ತರ ನೆರವಿಗೆ ಶ್ರಮಿಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ದೇಣಿಗೆಯನ್ನು ನೀಡಲಾಗಿತ್ತು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಪತ್ರಿಕೆ ವತಿಯಿಂದ ಆರ್ಥಿಕ ನೆರವು ನೀಡಲು ಓದುಗರಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಅದನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕ್ವಿಜ್‌ ಕಾರ್ಯಕ್ರಮ ನಡೆಸುತ್ತಾ ಬರಲಾಗಿದೆ.

ಆಧಾರ: ಹೇಮದಳ ರಾಮದಾಸ್‌ ಸಂಪಾದಿಸಿರುವ ‘ಹೃದಯವಂತ’ ಕೃತಿ, ಡೆಕ್ಕನ್‌ ಹೆರಾಲ್ಡ್‌ನಲ್ಲಿ ಪ್ರಕಟವಾದ ಗೌತಮ್ ಮಾಚಯ್ಯ ಅವರ #70yearofDH: The Story

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT