ಸೋಮವಾರ, ಮೇ 23, 2022
21 °C

ಇದೋ ಭಾರತೀಯ ‘ಶೂದ್ರ’ ಪುರಾಣ

ಡಿ.ಎ. ಶಂಕರ್ Updated:

ಅಕ್ಷರ ಗಾತ್ರ : | |

Prajavani

ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತಃ|
ಊರೂ ತದಸ್ಯದ್ವೈಶಃ| ಪದ್ಭಾಗಂ ಶೂದ್ರೋ ಅಜಾಯತ||

ಅನೇಕ ಬಗೆಯ ತಾತ್ವಿಕ, ಸಾಹಿತ್ಯಕ ವಿವರಣೆಗಳಿಗೆ ಮೂಲ ಆಕರವಾದ ಈ ಋಕ್ ಯಾವಾಗ ಪುರುಷಸೂಕ್ತದ ಭಾಗವಾಗಿ ಬಂದಿತೋ ಆಗಿನಿಂದ ಇಂದಿನವರೆಗೆ ಜನರ ಮನಸ್ಸಿನಲ್ಲಿ ‘ಶೂದ್ರ’ ಎನ್ನುವ ಮಾತು ‘ಕೀಳು’, ‘ಕೆಳ ಮಟ್ಟದ್ದು’, ‘ಕೆಳ ವರ್ಗದ್ದು’, ‘ತುಚ್ಛವಾದದ್ದು’ ಎನ್ನುವ ಭಾವನೆ ಸಮಾಜದ ತಿಳಿವಳಿಕೆಯಲ್ಲಿ ಭದ್ರವಾಗಿ ನೆಲೆಯೂರಿ ನಿಂತಿದೆ. ಇದರ ಜತೆಗೆ ಎಲ್ಲ ಆರೋಗ್ಯಕರ ಸಮಾಜ ಜೀವಿಗಳ ಮನಸ್ಸಿನಲ್ಲಿ ಒಂದು ಬಗೆಯ ಸಿಟ್ಟನ್ನೂ ಆಕ್ರೋಶವನ್ನೂ ಆಳವಾದ ಅಸಮಾಧಾನವನ್ನೂ ಇದು ಹುಟ್ಟು ಹಾಕಿ, ಸಮಾಜ ಜೀವನಕ್ಕೆ, ಅದರ ಸಾಮರಸ್ಯಕ್ಕೆ ಧಕ್ಕೆ ತಂದಿದೆ.

ಇದು ಸಹಜವಾದ ಬೆಳವಣಿಗೆಯೇ. ಏಕೆಂದರೆ, ‘ಶೂದ್ರ’ ಶಬ್ದ ಕೇವಲ ಜಾತಿ, ವರ್ಣ ಸೂಚಕವಲ್ಲ, ಅದು ಅದರ ಅಂತರಾರ್ಥದಿಂದ ಬೈಗುಳದ ಶಬ್ದವಾಗಿಯೂ ಬಳಕೆಗೆ ಬಂದಿದೆ. ‘ಅಯ್ಯೋ, ಶೂದ್ರ ಮುಂಡೇದೇ’ ಎನ್ನುವ ಮಾತು ಯಾವುದೋ ಕಾಲದಿಂದಲೂ ರೂಢಿಯಲ್ಲಿದೆ.

ಸುಮಾರು ಅರ್ಧಶತಮಾನಕ್ಕೂ ಹಿಂದೆ ಪ್ರಕಟವಾದ ‘ಪುರುಷಸೂಕ್ತ’ ಎನ್ನುವ ಕಿರು ಹೊತ್ತಿಗೆಯಲ್ಲಿ ಡಿವಿಜಿ ಅವರು ಈ ವಿವಾದಿತ ಋಕ್‍ನ ಬಗ್ಗೆ ವಿವರವಾದ ತಾತ್ವಿಕ, ಸಾಹಿತ್ಯಿಕ ವ್ಯಾಖ್ಯಾನ ನೀಡಿದ್ದಾರೆ.  ಸಾಮಾನ್ಯವಾಗಿ ಅವರ ಎಲ್ಲ ಬರವಣಿಗೆಯಲ್ಲಿ ಕಾಣುವ ಚಿಂತನಶೀಲತೆ, ನಿರ್ದಿಷ್ಟ ಪದ ಬಳಕೆ, ಅಸಂದಿಗ್ಧ ನಿರೂಪಣೆ ಹಾಗೂ ಓದುಗರ ಮನಸ್ಸನ್ನು ವ್ಯಾಜ್ಯವಿಲ್ಲದೆ ನಿರಾಯಾಸವಾಗಿ ಎನ್ನುವಂತೆ ಒಳಗೊಳ್ಳುವ ಸುಸಂಸ್ಕೃತ ಧೋರಣೆ - ಈ ಎಲ್ಲವೂ ಏಕತ್ರವಾಗಿ ಇಲ್ಲೂ ಕಾಣಸಿಗುತ್ತವೆ.

ಅವರ ಪ್ರಕಾರ ‘ಪುರುಷಸೂಕ್ತ’ದಲ್ಲಿರುವ ‘ಬ್ರಾಹ್ಮಣೋಸ್ಯ ಮುಖಮಾಸೀತ್’ ಮೊದಲಾದ ಋಕ್‍ಗಳಲ್ಲಿರುವ ಅಂಗಾಂಗೋಪಮಾನವು ಆಲಂಕಾರಿಕ ಭಾಷೆ. ನಾವು ಅದರ ತಾತ್ಪರ್ಯಾರ್ಥವನ್ನು ಗ್ರಹಿಸಬೇಕೇ ಹೊರತು, ಅಕ್ಷರಾರ್ಥವನ್ನು ಗಣಿಸತಕ್ಕದ್ದಲ್ಲ’. ಇದಕ್ಕೆ ಉದಾಹರಣಾರ್ಥವಾಗಿ ‘ನಾಭ್ಯ ಅಸೀದಂತರಿಕ್ಷಂ’ ಎನ್ನುವ ಭಾಗವನ್ನು ತೆಗೆದುಕೊಂಡು, ‘ಅಂತರಿಕ್ಷವನ್ನು ಹೊಕ್ಕಳಿಗೆ ಸಂಬಂಧ ಮಾಡಿದೆ, ಮುಖ ಹೊಕ್ಕಳಿಗಿಂತ ಎಷ್ಟೋ ಮೇಲ್ಗಡೆ ಇರತಕ್ಕದ್ದು’, ಎಂದು ‘ಪುರುಷ ಸೂಕ್ತವನ್ನು ಶಬ್ದಶಃ ತೆಗೆದುಕೊಂಡರೆ ಹೀಗೆ ಅನನ್ವಯವೇ ತೋರುತ್ತದೆ’, ಎಂದು ‘ಶಬ್ದಾವಲಂಬಿಯಾದ ವ್ಯಾಖ್ಯಾನ ಇಂಥ ಅಪಾರ್ಥಕ್ಕೆ ದಾರಿಯಾಗುತ್ತದೆ’ ಎನ್ನುವ ನಿರ್ಣಯಕ್ಕೆ ಬರುತ್ತಾರೆ.

ಈ ಧೋರಣೆಗೆ ಪೂರಕವಾಗಿ ಡಿವಿಜಿಯವರು ಪ್ಲೇಟೊನ ‘ದಿ ರಿಪಬ್ಲಿಕ್’ನ ಕೆಲವು ಭಾಗಗಳ ಜೊತೆಗೆ ಸೇಂಟ್ ಥಾಮಸ್ ಅಕ್ವೈನಾಸ್, ಶೇಕ್ಸ್‌ಪಿಯರಿನ ಟ್ರಾಯಲಸ್ ಮತ್ತು ಕ್ರೆಸೀಡಗಳನ್ನು ಬಳಸಿಕೊಂಡು, ‘ಆದರ್ಶದಲ್ಲಿ ಜಾತಿ ವ್ಯವಸ್ಥೆ ದುಷ್ಟವಲ್ಲ: ಅದು ನೈಜವೇ ಮತ್ತು ಯುಕ್ತವೇ ಎನ್ನುವವರು ಯುರೋಪಿಯನ್ನರಲ್ಲೂ ಇದ್ದಾರೆ’, ಎಂದು ‘ಮಾನವ ವರ್ಗದಲ್ಲಿ ಗುಣಕರ್ಮ ಭೇದಗಳು ಸ್ವಾಭಾವಿಕವಾಗಿಯೇ ಬಂದಿರುತ್ತವೆ, ಆ ಭೇದಗಳನ್ನು ಉಂಟುಮಾಡಿದ್ದು ಪುರುಷಸೂಕ್ತವಲ್ಲ.  ಯಾವೊಬ್ಬ ಮನುಷ್ಯನೂ ಅಲ್ಲ. ಅದು ಪ್ರಕೃತಿ. ಪ್ರಕೃತಿ ಸಿದ್ಧವಾದ ಒಂದು ಮೂಲ ಲಕ್ಷಣವನ್ನು ಪುರುಷಸೂಕ್ತ ಗ್ರಹಿಸಿ ಘೋಷಿಸಿದೆ’ ಎಂದು ಹೇಳುತ್ತಾರೆ.

ಇದಕ್ಕೆ ಸಾಕ್ಷ್ಯಾಧಾರವಾಗಿ ಸಾಕ್ರಟೀಸ್‍ನನ್ನು ಬಳಸಿಕೊಂಡು ಹೀಗೆ ಬರೆಯುತ್ತಾರೆ:  ಒಬ್ಬ ಮನುಷ್ಯ, ಒಂದು ಕೆಲಸ; ಅದು ಅವನ ಸ್ವಭಾವ. ಅವನು ಇನ್ನೊಂದು ಕೆಲಸಕ್ಕೆ ಹೊರಳಬಾರದು. ಹೊರಳಿದರೆ ಪ್ರಜಾರಾಜ್ಯ ಕೆಡುತ್ತದೆ. ಚಮ್ಮಾರ, ಚಮ್ಮಾರನ ಕೆಲಸ ಮಾಡಬೇಕೇ ವಿನಾ ವೈದ್ಯನ ಕೆಲಸವಲ್ಲ;  ಚಮ್ಮಾರನ ಕೆಲಸ ಅವನಿಗೆ ಸ್ವಭಾವದಿಂದಲೇ ಬಂದಿದೆ. ಅದು ಅವನ ಜೀನ್ಸ್‌ನಲ್ಲಿದೆ ಎಂದು ವಿವರಿಸುತ್ತಾರೆ. ಇನ್ನೂ ಒಂದು ಸಂಗತಿಯನ್ನು ಅವರು ಪ್ರಸ್ತಾಪಿಸುತ್ತಾರೆ: ‘ನಾವೀಗ ಏನು ‘ಸ್ಪೆಷಲೈಸೇಷನ್’ ಅಥವಾ ವಿಶೇಷ ಪ್ರಾವೀಣ್ಯ ಎನ್ನುತ್ತೇವೋ ಅದನ್ನು ಪಡೆಯಲು ಜಾತಿ ವ್ಯವಸ್ಥೆ ಅನುಕೂಲ ಮಾಡಿಕೊಟ್ಟಿದೆ’  ಎಂದು ವಿರಮಿಸುತ್ತಾರೆ.    

ತಾತ್ವಿಕವಾಗಿ, ತಾರ್ಕಿಕವಾಗಿ ಕಾಣುವ ಈ ವಿವರಣೆ ಮೂಲ ಗ್ರಹಿಕೆಯಲ್ಲಿ ಎಲ್ಲೋ ಮೂಲಭೂತವಾಗಿ ದಾರಿ ತಪ್ಪಿದೆ. ಜಾತಿ ವ್ಯವಸ್ಥೆಯಲ್ಲಿ ಪ್ರಾವೀಣ್ಯ ಸಾಧ್ಯ ಎಂದು ಒಪ್ಪಿದರೂ ಯಾವ ಕಸುಬಿನಲ್ಲಿ ಪ್ರಾವೀಣ್ಯ ಎನ್ನುವುದೇ ಅಸಲೀ ಸಂಗತಿ. ಶಿಕ್ಷಕ, ಯೋಧ, ವ್ಯಾಪಾರಿ - ಇವುಗಳಲ್ಲಿ ಯಾವುದಾದರೂ ಆದೀತು. ಆದರೆ, ಒಂದು ವರ್ಗದ, ಒಂದು ಜಾತಿಯ ಸಮುದಾಯ ಸ್ವಚ್ಛತೆಗೆ, ಕಕ್ಕಸು ತೊಳೆಯುವುದಕ್ಕೆ, ಮಲ ಸಾಗಿಸುವಿಕೆಗೆ ತಳ್ಳಲ್ಪಟ್ಟಿದ್ದರೆ ಅದರಲ್ಲಿ ಅವರು ಪ್ರಾವೀಣ್ಯ ಸಾಧಿಸಬೇಕು ಎಂದು ಸಾಮಾಜಿಕವಾಗಿ ಅತ್ಯಂತ ರೋಗಗ್ರಸ್ತ ಮನಸ್ಸು ಮಾತ್ರ ಹೇಳಬಲ್ಲದು. ಇಲ್ಲಿ ಮೇಲೇಳುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅದಕ್ಕೆ ಪುರುಷಸೂಕ್ತ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಕೆಳಗೆ, ಅಧೋಭಾಗದಲ್ಲಿ ಉಳಿದಿರುವುದೊಂದೇ ಅದಕ್ಕೆ ಈ ವ್ಯವಸ್ಥೆ ನೀಡಿರುವ ಸ್ಥಾನ; ಇದನ್ನು ಸ್ಥಾನ ಎನ್ನಬಹುದಾದರೆ!

ಶೂದ್ರ ಶಬ್ದ, ಇದನ್ನು ಪ್ರತಿನಿಧಿಸುವ ವರ್ಗ ಈ ಎಲ್ಲವೂ ತುಚ್ಛ ಎನ್ನುವ ಅರ್ಥ ಜನರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿ ಕೂತಿದೆ ಎನ್ನುವುದನ್ನು ಸ್ವಾಮಿ ವಿವೇಕಾನಂದರ ಮಾತಿನಲ್ಲೇ ಕಾಣಬಹುದು: ‘ಸಮಾಜ ಸುಧಾರಕ ಮಾಧ್ಯಮಗಳು ನನ್ನನ್ನು ಶೂದ್ರ ಎಂದು ಕರೆದು, ‘ಶೂದ್ರನಾಗಿ ಸನ್ಯಾಸ ಸ್ವೀಕಾರ ಮಾಡುವ ಹಕ್ಕು ನಿನಗೆಲ್ಲಿಂದ ಬಂತು?’ ಎಂದು ಕೇಳುತ್ತವೆ. ಅವು ನನ್ನನ್ನು ‘ಶೂದ್ರ’ ಎಂದು ಕರೆದರೆ ನನಗೇನೂ ಬಾಧೆ ಇಲ್ಲ, ಏಕೆಂದರೆ, ಯಾವ ಬ್ರಾಹ್ಮಣರು ‘ಯಮಾಯ ನಮಃ ಧರ್ಮರಾಜಾಯಾ ನಮಃ ಚಿತ್ರಗುಪ್ತಾಯ ನಮಃ’ ಎಂದು ನಿತ್ಯ ಪುಷ್ಪಾರ್ಚನೆ ಮಾಡಿ ನಮಸ್ಕರಿಸುತ್ತಾರೋ ಅವನಿಂದ ಬಂದವನು ನಾನು’ ಎಂದು ಪುರುಷಸೂಕ್ತ ಪುರಾಣವನ್ನು ತಿರಸ್ಕರಿಸಿ ನಿಲ್ಲುತ್ತಾರೆ.

ಅಷ್ಟೇ ಅಲ್ಲ, ಇಲ್ಲಿಂದ ಮುಂದೆ ಹೋಗಿ: ‘ಒಂದು ಕಾಲ ಬರುತ್ತದೆ. ಆಗ ಅಲ್ಲಿ ಶೂದ್ರ ವರ್ಗ, ತನ್ನ ಶೂದ್ರತನದಿಂದ ಪುಟಿದೆದ್ದು ನಿಲ್ಲುತ್ತದೆ. ಎಲ್ಲ ದೇಶದ ಶೂದ್ರರೂ ಅವರ ಸ್ವಭಾವಸಿದ್ಧ ಪ್ರಾಕೃತಿಕ ಹಾಗೂ ಸ್ವಾಭಾವಿಕ ಗುಣಗಳಿಂದ ಸಮಾಜದ ಎಲ್ಲೆಲ್ಲೂ ಅಪ್ರತಿಹತರಾಗಿ ನಿಲ್ಲುತ್ತಾರೆ. (ಚಾತುರ್ವರ್ಣದ) ಮೊದಲ ಮೂರು ಜನ, ಅವರ ದಿನಗಳನ್ನು ನೋಡಿದ್ದಾಗಿದೆ. ಈಗ ಇವರ (ಶೂದ್ರರ) ಕಾಲ. ಅದನ್ನು ಯಾರೂ ತಡೆಯಲಾರರು’ ಎಂದು ಭವಿಷದ್ವಾಣಿಯಿಂದ ನುಡಿಯುತ್ತಾರೆ.

ವಿವೇಕಾನಂದರಿಂದ ಸ್ವಲ್ಪ ಹಿಂದೆ ಹೋಗಿ, ಮಹಾಭಾರತದತ್ತ ಒಂದು ದೃಷ್ಟಿ ಹಾಯಿಸಿ ನೋಡಬಹುದು. ಇಲ್ಲಿ ಗಮನಿಸಬೇಕಾದದ್ದು ಏಕತ್ರ ಇರುವ ಬ್ರಾಹ್ಮಣ ಶ್ಲಾಘನೆ ಹಾಗೂ ಶೂದ್ರ ನಿಂದನೆ. ‘ಶೂದ್ರನಾದವನು ವಂದನೆ ಮತ್ತು ಆಜ್ಞಾಪಾಲನೆಗಳ ಮೂಲಕವಾಗಿ ವೈತಸೀ ವೃತ್ತಿಯನ್ನಾಶ್ರಯಿಸಿ ಮೂರು ವರ್ಣದವರ ಶುಶ್ರೂಷೆಯಲ್ಲಿ ನಿರತನಾಗಿರಬೇಕು’. ವೈತಸೀ ಎಂದರೆ ಬೆತ್ತ ಅಥವಾ ಬಿದಿರಿನಂತೆ ಬಗ್ಗಿ ವಿನಮ್ರನಾಗಿರಬೇಕು.  ‘ಬ್ರಾಹಣ ವಂದನೆ ಮತ್ತು ಅವರ ಸೇವೆಗಳೇ ಶೂದ್ರನ ಮುಖ್ಯ ಧರ್ಮ. ಅವನು ವೇದಾಧ್ಯಯನ ಮಾಡಬಾರದು, ಯಜ್ಞ ಮಾಡುವುದು ಅವನಿಗೆ ಪ್ರತಿನಿಷೇಧಿಸಲ್ಪಟ್ಟಿದೆ’. ‘ಶೂದ್ರನು ಬ್ರಹ್ಮ-ಕ್ಷತ್ರಿಯ-ವೈಶ್ಯರನ್ನು ಅನುಕ್ರಮವಾಗಿ ವಿಧಿವಿಹಿತವಾದ ರೀತಿಯಲ್ಲಿ ಸೇವೆ ಮಾಡುತ್ತಲಿದ್ದು, ತನ್ನ ಸೇವೆಯಿಂದ ಅವರನ್ನು ತುಷ್ಟಿಪಡಿಸಿ, ಪಾಪದಿಂದ ವಿಮುಕ್ತನಾಗಿ ದೇಹತ್ಯಾಗ ನಂತರದಲ್ಲಿ ಸ್ವರ್ಗ ಸುಖಗಳನ್ನು ಅನುಭವಿಸುವುದು’.

ಜನಮಾನಸದಲ್ಲಿ ಶೂದ್ರರ ಬಗ್ಗೆ ತುಚ್ಛ ಭಾವನೆ ಇಂದೂ ಇದ್ದರೆ ನಮ್ಮ ಪೂರ್ವ ಪುರಾಣ, ಇತಿಹಾಸಗಳನ್ನು ತಪ್ಪಿತಸ್ಥವೆಂದು ಗುರುತಿಸುವುದರಲ್ಲಿ ತಪ್ಪೇನಿಲ್ಲ. ಇನ್ನೊಂದು ಸಣ್ಣ ಉದಾಹರಣೆ: ವಿದುರನ ಪತ್ನಿ ಶೂದ್ರ ಸ್ತ್ರೀಯಲ್ಲಿ ಬ್ರಾಹ್ಮಣನಿಂದ ಹುಟ್ಟಿದ ಕನ್ಯೆ. ಅವನು ವ್ಯಾಸ ಪುತ್ರನೇ ಆದರೂ ಅವನು ಮದುವೆಯಾಗಬೇಕಾದದ್ದು ಈ ವಿಲೋಮ, ಸಂಕರಜಾತಿಯ ಕನ್ಯೆಯನ್ನೇ! ದ್ರೌಪದಿ ಸ್ವಯಂವರದಲ್ಲಿ ‘ನಾಹಂ ವರಯಾಮಿ ಸೂತಮ್’, (ಸೂತ ಜಾತಿಯವನನ್ನು ನಾನು ವರಿಸುವುದಿಲ್ಲ) ಎನ್ನುವ ದ್ರೌಪದಿಯೂ ಜಾತಿ ವ್ಯವಸ್ಥೆಯಲ್ಲಿ ಬಂಧಿತಳಾಗಿರುವವಳೇ!

ಶೂದ್ರರ ಬಗ್ಗೆ, ಶೂದ್ರ ವರ್ಗದ ಬಗ್ಗೆ ಇಂಥ ಮನೋವೃತ್ತಿ, ಧೋರಣೆ ಇರುವುದರಿಂದಲೇ, ಅದು ಅನೂಚಾನವಾಗಿ ಇತರ ಜಾತಿ, ವರ್ಣಗಳಿಗೆ ಸಾರಾಸಗಟಾಗಿ ಬಂದಿರುವುದರಿಂದಲೇ, ಇಂದು ನಾಚಿಕೆಗೆಟ್ಟ ದಲಿತ ಹತ್ಯೆ, ದಲಿತ ಸ್ತ್ರೀಮಾನಭಂಗ ಮತ್ತು ಅತ್ಯಾಚಾರಗಳು ಅವ್ಯಾಹತವಾಗಿ ನಡೆದು ಬರುತ್ತಿವೆ ಎನ್ನಿಸುತ್ತಿದೆ. ನಮ್ಮ ಪೌರಾಣಿಕ ದೃಷ್ಟಿಯಲ್ಲಿ ಸ್ತ್ರೀಯರೂ ಶೂದ್ರರೇ ಆದುದರಿಂದ ಅವರು ಇಂತಹ ಹೇಯ ಶಿಕ್ಷೆ ಅನುಭವಿಸುತ್ತಿರುವಂತೆ ಕಾಣುತ್ತಿದೆ. ಶೂದ್ರರು ಹೇಗೆ ಮೂರು ವರ್ಗಗಳ ಶುಶ್ರೂಷಕರೋ, ಸ್ತ್ರೀಯೂ ಅಷ್ಟೆ. ಅವಳನ್ನು ಹೇಗೆ ನಡೆಸಿಕೊಂಡರೂ ಅವಮಾನಿಸಿದರೂ ಅಂತಹ ಬಾಧಕವಿಲ್ಲ ಎನ್ನುವುದು ಭಾರತೀಯರ ಮನಸ್ಸಿನಲ್ಲಿ ಕೂತು ಬಿಟ್ಟಿದೆ.

ನಮ್ಮ ಭಾರತೀಯ ಮನಸ್ಸು ಈ ಶೂದ್ರ ನಿಂದನೆಯ ಕಟ್ಟಳೆಯಿಂದ ಹೊರಬಂದರೆ, ದಲಿತ ಹತ್ಯೆ, ಅತ್ಯಾಚಾರ, ಸ್ತ್ರೀಮಾನಭಂಗ ಇಂಥವು ನಿಲ್ಲಬಹುದು.

ಅಪರೂಪಕ್ಕೆ ಸಿಗುವ ಒಂದು ಶೂದ್ರ ಶ್ಲಾಘನೆ!
ತಕ್ಷಣಕ್ಕೆ ಒಂದು ಸಣ್ಣ ಅಪವಾದ ನನಗೆ ನೆನಪಿಗೆ ಬಂದಿದೆ. ಹದಿನೇಳನೇ ಶತಮಾನದ ಚಿಕ್ಕುಪಾಧ್ಯಯನ ಶ್ರೀಶುಕಸಪ್ತತಿಯಲ್ಲಿ ‘ಶೂದ್ರ ಮಹಾತ್ಮ್ಯೆ’ ಎನ್ನುವ ಕಥೆಯೊಂದಿದೆ. ಅದರಲ್ಲಿ ವಿಷ್ಣುದಾಸ ಎನ್ನುವ ಶೂದ್ರ ಯುವಕ ಒಂದು ರಾತ್ರಿ ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡು ಸರೋವರದ ಒಂದು ದಡದಲ್ಲಿ ಮಲಗಿ ನಿದ್ರೆಗೆ ಜಾರುತ್ತಾನೆ. ಅದೇ ಸ್ಥಳಕ್ಕೆ ಕೆಲವು ಅಪ್ಸರೆ ಸ್ತ್ರೀಯರು ಬಂದು ಇವನ ಸುಂದರ ಆಕಾರವನ್ನು ಕಂಡು ನಾಟ್ಯವಾಡಿ, ‘ತಾವು ತೊಟ್ಟಿದ್ದ ರವಿಕೆಗಳನ್ನು ಸಡಿಲಿಸಿ ಅವನನ್ನು ಸಂತೋಷದಿಂದ ಆಲಿಂಗನ ಮಾಡಿಕೊಂಡರೂ’ ಅವನು ಜಿತೇಂದ್ರಿಯನಾಗಿದ್ದುದನ್ನು ಕಂಡು ಆ ಸ್ತ್ರೀಯರು ಇವನ ಮೇಲೆ ಬೇಸರಗೊಂಡು ಹೊರಟುಹೋಗುತ್ತಾರೆ. ಕಾಮನನ್ನು ಗೆದ್ದ ಈ ಮಗನ ಸಾಹಸವನ್ನು ಅವನ ತಾಯಿತಂದೆಯರು ಕೊಂಡಾಡುತ್ತಾರೆ. ಇದು ಅಪರೂಪಕ್ಕೆ ಸಿಗುವ ಒಂದು ಶೂದ್ರ ಶ್ಲಾಘನೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು