ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹೆಣ್ಣೆಂದರೆ ಮುಗಿಲೆತ್ತರದ ಮನಸು

ಭೋಗೀಕರಣದ ಸ್ಥಳಕ್ಕೆ ಸುಖೀಕರಣದ ಆಶಯ ಬಂದು ಬಲಗೊಳ್ಳಬೇಕು
Last Updated 4 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಹಾಥರಸ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವು ಈಗ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಸುದ್ದಿ ಮಾತ್ರವಾಗದೆ ವಿವಾದದ ಸುಂಟರಗಾಳಿಗೂ ಕಾರಣವಾಗಿದೆ. ಈಗ ಬೀಸುತ್ತಿರುವ ಗಾಳಿಯು ಗೂಳಿಯಂತೆ ನುಗ್ಗುತ್ತಿದೆ. ನಡೆವ ಬೀದಿ ಬೆಂಕಿಯಾಗಿ ಸುಡುತ್ತಿದೆ. ಮಾತು ಮಲಿನಗೊಂಡಿದೆ. ಪಕ್ಷಪಾತದ ಶಸ್ತ್ರ ಹಿಡಿದವರಿಂದ ಸತ್ಯದ ಗರ್ಭಪಾತವಾಗುತ್ತಿದೆ. ಹೀಗಾಗಿ, ಅತ್ಯಾಚಾರದಂತಹ ಅಮಾನವೀಯ ಕೃತ್ಯಕ್ಕೂ ಸತ್ಯಾಸತ್ಯತೆಯ ಪರೀಕ್ಷೆ ಎದುರಾಗಿದೆ.

ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿ ಮರಣ ಹೊಂದಿದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಪೋಷಕರ ಗಮನಕ್ಕೂ ತರದೆ, ಪೊಲೀಸರೇ ರಾತ್ರೋರಾತ್ರಿ ಮಾಡಿದ್ದಲ್ಲದೆ, ಅತ್ಯಾಚಾರ ಆಗಿಯೇ ಇಲ್ಲವೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸಾರಿದ್ದೇ ವಿವಾದದ ಮುಖ್ಯ ಕೇಂದ್ರವಾಗಿದೆ. ಇನ್ನು ವಿವಿಧ ಪಕ್ಷದವರು ಮತ್ತು ಮಾಧ್ಯಮದವರನ್ನು ಯುವತಿಯ ಊರೊಳಗೆ ಪ್ರವೇಶಿಸಲು ಬಿಡದೆ ಪ್ರಜಾಪ್ರಭುತ್ವಕ್ಕೆ ಸವಾಲು ಹಾಕಿರುವುದು ಮತ್ತೊಂದು ವಿವಾದ.

ವರಿಷ್ಠಾಧಿಕಾರಿಯೊಬ್ಬರು ‘ನಿಮ್ಮ ಹೇಳಿಕೆ ಬದಲಾಯಿಸಿ’ ಎಂದು ಯುವತಿಯ ತಂದೆ ಮೇಲೆ ಒತ್ತಡ ತಂದದ್ದು ಮಗದೊಂದು ವಿವಾದ. ಈ ಮಧ್ಯೆ ಸುತ್ತಿ ಬಳಸಿ ಆಡಳಿತ ಪಕ್ಷವನ್ನು ಸಮರ್ಥಿಸಿಕೊಳ್ಳುವ ಬುದ್ಧಿವಂತಿಕೆಯ ವಕ್ತಾರಿಕೆ. ಒಟ್ಟಿನಲ್ಲಿ ವಾಕರಿಕೆ ತರಿಸುವ ವಾತಾವರಣವನ್ನು ನಿರ್ಮಾಣ ಮಾಡಿರುವ ಅಧಿಕಾರಸ್ಥರು, ಅತ್ಯಾಚಾರ
ಪ್ರಕರಣವನ್ನು ಅನುಮಾನದ ಹಗರಣ ಮಾಡುವ ‘ತಂತ್ರ’ ರೂಪಿಸಿರುವುದು ಸ್ಪಷ್ಟವಾಗುತ್ತಿದೆ.

ಒಬ್ಬ ಯುವತಿಯ ಮೇಲೆ ನಡೆದ ಅತ್ಯಾಚಾರಕ್ಕೆ ಹೀಗೆ ವಿವಾದದ ಸ್ವರೂಪ ಬರುವಂತೆ ಮಾಡಿರುವುದೇ ಒಂದು ಕ್ರೌರ್ಯದ ನಡೆ. ಸ್ವತಃ ಯುವತಿಯೇ ಸಾಮೂಹಿಕ ಅತ್ಯಾಚಾರ ನಡೆದಿದೆಯೆಂದು ತನ್ನ ಸಾವಿಗೆ ಮುಂಚೆ ಹೇಳಿದ್ದನ್ನು ಸುಳ್ಳೆಂದು ಹೇಳಲಾದೀತೆ? ಒಬ್ಬ ಯುವತಿ–ಅದರಲ್ಲೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ ಹೆಣ್ಣುಮಗಳು– ಅತ್ಯಾಚಾರ ಕುರಿತು ತಾನೇ ಸುಳ್ಳಿನ ಕತೆ ಕಟ್ಟಲು ಸಾಧ್ಯವೇ? ಅತ್ಯಾಚಾರ ನಡೆದಿಲ್ಲ ಎನ್ನುವುದಾದರೆ ರಾತ್ರೋ ರಾತ್ರಿ ಕದ್ದೂ ಮುಚ್ಚಿ ಕತ್ತಲಲ್ಲಿ ಅಂತ್ಯಕ್ರಿಯೆ ಮಾಡಿದ್ದು ಯಾಕೆ? ಸಂಬಂಧಿಕರ ಮೇಲೆ ಒತ್ತಡ ತರುತ್ತಿರುವುದು ಯಾಕೆ? ನಮ್ಮ ದೇಶದಲ್ಲಿ ಅತ್ಯಾಚಾರವೂ ಪರ- ವಿರೋಧದ ವಸ್ತುವಾಗಬೇಕೇ? ಖಂಡಿತ ಸಲ್ಲದು. ಜಾತಿ, ವರ್ಣ, ವರ್ಗ, ಲಿಂಗ, ಪಕ್ಷ- ಎಲ್ಲವನ್ನೂ ಮೀರಿ ಮನುಷ್ಯ ಮನಸ್ಸಿನವರೆಲ್ಲರೂ ಖಂಡಿಸಲೇಬೇಕು.

ಅಂದು ನಿರ್ಭಯಾ ಪ್ರಕರಣ ನಡೆದು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾದ ಮೇಲೂ ನಮ್ಮ ದೇಶದಲ್ಲಿ ಅತ್ಯಾಚಾರಿಗಳ ಸಂಖ್ಯೆ ಕಡಿಮೆಯಾಗಿಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್‌ ಬ್ಯೂರೊ ಪ್ರಕಟಿಸಿರುವ ಮಾಹಿತಿಯನ್ನು ಗಮನಿಸಿದರೆ ಆಘಾತವಾಗುತ್ತದೆ. ನಮ್ಮ ದೇಶದಲ್ಲಿ ಪ್ರತೀ 15 ನಿಮಿಷಕ್ಕೆ ಒಂದರಂತೆ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಂದರೆ ಪ್ರತೀ ಗಂಟೆಗೆ ನಾಲ್ಕರಂತೆ ದಿನವೊಂದರಲ್ಲಿ 90 ಅತ್ಯಾಚಾರಗಳು ನಡೆಯುತ್ತಿವೆ. ಪ್ರತೀ 39 ಗಂಟೆಗೆ ಒಂದರಂತೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಎರಡೂ ಸಂಭವಿಸುತ್ತಿವೆ. ಒಂದು ವರ್ಷದಲ್ಲಿ 33,658 ಅತ್ಯಾಚಾರಗಳು ನಡೆದಿದ್ದು, ಇತ್ತೀಚಿನ ಹತ್ತು ವರ್ಷಗಳಲ್ಲಿ 2,78,886 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರದ ಹತ್ಯೆಗಳ ಜೊತೆಗೆ ನಮ್ಮ ದೇಶದಲ್ಲಿ ಪ್ರತೀ ಒಂದು ಗಂಟೆಗೆ ಒಂದರಂತೆ ವರದಕ್ಷಿಣೆ ಸಾವುಗಳು ಸಂಭವಿಸುತ್ತಿವೆ.

ಕೇಂದ್ರ ಸರ್ಕಾರವು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರಣೆಗಾಗಿಯೇ 1,000 ತ್ವರಿತ ನ್ಯಾಯಾ
ಲಯಗಳನ್ನು ಸ್ಥಾಪಿಸುವುದಾಗಿ ಹೇಳಿತ್ತು. ಈಗ 664 ನ್ಯಾಯಾಲಯಗಳು ಮಾತ್ರ ಸ್ಥಾಪಿತವಾಗಿವೆ. ಒಂದು ಲಕ್ಷದ ಅರವತ್ತಾರು ಸಾವಿರದಷ್ಟು ಅತ್ಯಾಚಾರ ಪ್ರಕರಣಗಳು ಇತ್ಯರ್ಥವಾಗದೆ ಬಾಕಿಯಿವೆ. ಇಂಥ ‘ದಾಖಲೆ’ಯಿದ್ದರೂ
ಮಹಿಳೆಯರನ್ನು ‘ಭ್ರಮೆ’ಯಲ್ಲಿ ಬಂದಿಯಾಗಿಸುವ ಹೇಳಿಕೆ ಮತ್ತು ಘೋಷಣೆಗಳಿಗೇನೂ ನಮ್ಮ ದೇಶದಲ್ಲಿ ಕಡಿಮೆಯಿಲ್ಲ. ಒಟ್ಟು ಇತಿಹಾಸದಲ್ಲಿಯೇ ಇಂತಹ ಭ್ರಮೆ ನಿರ್ಮಿತಿ ಕೇಂದ್ರಗಳು ಸ್ಥಾಪನೆಯಾಗಿದ್ದು ಮಹಿಳೆಯನ್ನು ದೇವತೆ ಸ್ಥಾನದಲ್ಲಿ ಕೂಡಿಸುತ್ತಲೇ ವಾಸ್ತವದಲ್ಲಿ ಭಿನ್ನವಾಗಿ ನಡೆದುಕೊಳ್ಳಲಾಗಿದೆ. ‘ಎಲ್ಲಿ ಮಹಿಳೆಯರು ಪೂಜಿತರೊ ಅಲ್ಲಿಯೇ ದೇವತೆಗಳೂ ಪೂಜಾರ್ಹರು’ ಎಂಬರ್ಥದ ಹೇಳಿಕೆಯ ಜೊತೆ ಜೊತೆಗೆ ‘ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’ (ಮನುಸ್ಮೃತಿ) ಎಂದು ಸಾರಿದ ವೈರುಧ್ಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಧರ್ಮಗ್ರಂಥಗಳ ವಿಷಯ ಒಂದು ಕಡೆಯಾದರೆ, ನಮ್ಮ ಸಾಮಾಜಿಕ– ಆರ್ಥಿಕ ಸಂರಚನೆಯೇ ಮಹಿಳೆಯನ್ನು ವಂಚಿಸುತ್ತಾ ಬಂದಿದೆ. ಉತ್ಪಾದನಾ ಸಾಧನಗಳನ್ನು ಮೊದಲಿನಿಂದಲೂ ನಿಯಂತ್ರಿಸುತ್ತ ಬಂದ ಪುರುಷ ತಾನಾಗಿಯೇ ಪ್ರಭುತ್ವಸ್ಥಾನಕ್ಕೆ ಬಂದ; ಆಸ್ತಿ, ಅಂತಸ್ತು, ಅಧಿಕಾರಗಳನ್ನು ಪಡೆದುಕೊಂಡ. ಆರ್ಥಿಕ ಚಟುವಟಿಕೆಗಳಲ್ಲಿ ಪುರುಷರಿಗೆ ಸಹಾಯಕಳು ಮಾತ್ರವಾಗಿದ್ದ ಮಹಿಳೆಯು ಸಮಾನ ಸವಲತ್ತುಗಳಿಂದ ವಂಚಿತಳಾದಳು, ಪುರುಷ ಮೂಲ ಪ್ರಭುತ್ವದ ಕಣ್ಣಿಗೆ ಭೋಗವಸ್ತುವಾದಳು.

ಈಗ ಮಹಿಳೆಯರ ಸ್ಥಿತಿಗತಿಯು ಸುಧಾರಣೆ ಹೊಂದಿರುವುದು ನಿಜ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಉಲ್ಲೇಖನೀಯವಾಗಿದೆ, ಉದ್ಯೋಗಾವಕಾಶಗಳೂ ಹೆಚ್ಚಿವೆ. ಆದರೆ ‘ಭೋಗವಸ್ತು’ ಎಂಬ ದೃಷ್ಟಿಕೋನ ಮಾತ್ರ ದಟ್ಟವಾಗಿಯೇ ಇರುವುದು ವಾಸ್ತವ. ಹಿಂದಿನಿಂದಲೂ ಹೆಣ್ಣನ್ನು ‘ಮೈ’ ಎಂದುಕೊಂಡದ್ದೇ ಹೆಚ್ಚು. ಮನಸ್ಸು ಎಂದುಕೊಂಡದ್ದು ಕಡಿಮೆ. ಈ ದೃಷ್ಟಿದೋಷವು ಜಾಗತೀಕರಣದ ಕಾಲದಲ್ಲಿ ಮತ್ತಷ್ಟು ಹೆಚ್ಚಾಗಿದೆ. ಯಾಕೆಂದರೆ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯಲ್ಲಿ ‘ಮೌಲ್ಯಕಟ್ಟೆ’ಗಳು ಕುಸಿದಿವೆ. ಆರ್ಥಿಕತೆಯಷ್ಟೇ ಮುಕ್ತಮಾದರಿಯಾಗಿಲ್ಲ, ‘ಮೌಲ್ಯಮುಕ್ತ ಮಾದರಿಗಳೂ’ ಕಣ್ಣೆದುರಿಗಿವೆ. ಭೋಗದ ಮಾದರಿಗಳು ಕಣ್ಣು ಕುಕ್ಕುತ್ತಿವೆ. ಬಲ್ಲಿದ-ಬಡವ, ಪುರುಷ-ಮಹಿಳೆಯರ ನಡುವಿನ ಕಂದರ ಮೇಲ್ನೋಟಕ್ಕೆ ಕಡಿಮೆಯಾದಂತೆ ಕಂಡರೂ ಕಣ್ಣೋಟದಲ್ಲಿ ಮತ್ತಷ್ಟು ಬಲವಾಗಿಯೇ ಇದೆ.

ಅನ್ನ, ವಸತಿ, ವಿದ್ಯೆ ಇದ್ದರೆ ಸಮಾನತೆಯೆಂದು ಭಾವಿಸಿದ್ದ ದೃಷ್ಟಿಕೋನ ಹೋಗಿ ಲಕ್ಷ, ಕೋಟಿಗಳ ‘ಭೋಗ ಭಾರತ’ ಕಣ್ಣಿಗೆ ರಾಚತೊಡಗಿದೆ. ಈ ಭೋಗವು ಹಣಕ್ಕಷ್ಟೇ ಸೀಮಿತವಾಗದೆ ಮನಸ್ಸನ್ನು ಹಾಳು ಮಾಡಿದ ದೇಹಭೋಗವಾಗಿಯೂ ಬೆಳೆಯುತ್ತಿದೆ, ವಿಚಾರದ ಜಾಗಕ್ಕೆ ವಿಕಾರ ಬಂದಿದೆ. ಇದಕ್ಕೆ ಅಪವಾದಗಳಿದ್ದರೂ
ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಿಲ್ಲ. ಮೈಕ್ರೊಸಾಫ್ಟ್‌ ಸಿಇಒ ಆಗಿರುವ ಸತ್ಯ ನಾದೆಲ್ಲಾ ಅವರು ತಿಂಗಳಿಗೆ ₹ 1.4 ಕೋಟಿ ಸಂಬಳ ಪಡೆಯುತ್ತ ‘ಮಹಿಳಾ ಸಿಬ್ಬಂದಿಯು ವೇತನ ಹೆಚ್ಚಳಕ್ಕಾಗಿ ಒತ್ತಾಯಿಸ
ಬಾರದು’ ಎಂದು ಹೇಳಿದ್ದು ಜಾಗತೀಕರಣದ ಒಂದು ಉದಾಹರಣೆ! ಆದ್ದರಿಂದ ಜಾಗತೀಕರಣವು ‘ಭೋಗ ಭಾರತೀಕರಣ’ ಆಗಬಾರದು.

ಯಾಕೆಂದರೆ ಇಂದು ಬಂಡವಾಳಶಾಹಿ ಭೋಗ ಮಾದರಿಯ ಫಲವಾಗಿ ಮನುಷ್ಯ ಸಂಬಂಧಗಳು ಏರು
ಪೇರಾಗುತ್ತಿವೆ. ವರ್ಗಾತೀತವಾಗಿ ವಿಕ್ಷಿಪ್ತ ಆಕೃತಿಗಳು ಆವರಿಸಿಕೊಳ್ಳುತ್ತಿವೆ. ಮೇಲ್ವರ್ಗದ ಭೋಗ ಮಾದರಿ
ಗಳನ್ನು ಅನುಭವಿಸಲು ಅಸಾಧ್ಯವಾದ ವರ್ಗಗಳಲ್ಲೂ ವಿಕ್ಷಿಪ್ತ ವಿಕಾರಗಳು ಕೆಣಕುತ್ತಿವೆ. ಹತ್ಯೆ, ಆತ್ಮಹತ್ಯೆ, ಅತ್ಯಾಚಾರಗಳು ಹಿಂದೆಂದಿಗಿಂತ ಹೆಚ್ಚಾಗುತ್ತಿವೆ.

ಮಾರುಕಟ್ಟೆ ಮನೋಧರ್ಮಕ್ಕೆ ಮಹಿಳೆಯು ಹಿಂದೆಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಭೋಗವಸ್ತುವಾಗಿ ಕಾಣಿಸಲು ಜಾಗತೀಕರಣದಲ್ಲಿ ಬೆಳೆದ ಭೋಗೀಕರಣವೂ ಒಂದು ಕಾರಣವಾಗಿದೆ. ಇದು ಪುರುಷರ ಸಂವೇದನಾಶೀಲತೆಯ ಮೇಲೂ ದುಷ್ಪರಿಣಾಮ ಉಂಟುಮಾಡಿದೆ. ಇಂಥ ವಿಕೃತ ಸನ್ನಿವೇಶದಲ್ಲಿ ಪುರುಷ ಸಮಾಜದೊಳಗೆ ಸ್ತ್ರೀ ಸಂವೇದನೆ ಅಧಿಕವಾಗಬೇಕು. ಭೋಗೀಕರಣದ ಸ್ಥಳಕ್ಕೆ ಸುಖೀಕರಣದ ಆಶಯ ಬಂದು ಬಲಗೊಳ್ಳಬೇಕು. ಮಹಿಳೆ ಮತ್ತು ಪುರುಷರೊಂದಾದ ಸ್ತ್ರೀ ಸಂವೇದನೆಯು ಅತ್ಯಾಚಾರ ಮತ್ತು ಹತ್ಯೆಗಳಿಗೆ ಒಟ್ಟಾಗಿ ಎದುರಾಗುವಂತಾಗಬೇಕು. ನಾವು ಒಟ್ಟಾಗಿ ಹೇಳಬೇಕು: ‘ಹೆಣ್ಣೆಂದರೆ ಬರಿ ಮೈಯ್ಯಲ್ಲ, ಮುಗಿಲೆತ್ತರದ ಮನಸು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT